ರವೀಂದ್ರನಾತ ಟ್ಯಾಗೋರರ ಕವನಗಳು ಓದು – 14 ನೆಯ ಕಂತು

– ಸಿ.ಪಿ.ನಾಗರಾಜ.

ಜಗಕೆ ಸತತವು
ಒಳಿತು ಮಾಡುವೆ ಎನುತ
ದಬ್ಬಾಳಿಕೆಯಲಿ ಆಳುತಿಹ ದೊರೆಯಿಂದ
ಕ್ಷೋಭೆಯು ಹೆಚ್ಚುವುದು ಈ ಜಗದಲಿ.

“ತನ್ನ ಪ್ರಜೆಗಳಿಗೆ ಒಳಿತನ್ನು ಮಾಡುತ್ತೇನೆ” ಎಂದು ನುಡಿಯುತ್ತ, ದಬ್ಬಾಳಿಕೆಯಿಂದ ಆಡಳಿತವನ್ನು ನಡೆಸುತ್ತಿರುವ ದೊರೆಯಿಂದ ನಾಡಿಗೆ ಕೇಡಾಗುತ್ತದೆ ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

‘ದಬ್ಬಾಳಿಕೆಯ ಆಡಳಿತ’ ಎಂದರೆ ದೊರೆಯ ಆಡಳಿತದ ರೀತಿನೀತಿಗಳನ್ನು ಯಾವೊಬ್ಬ ಪ್ರಜೆಯೂ ಪ್ರಶ್ನಿಸಬಾರದು; ದೊರೆಯ ಎದುರಾಗಿ ಸೊಲ್ಲೆತ್ತಿದವರನ್ನು ಕ್ರೂರವಾದ ರೀತಿಯಲ್ಲಿ ಸದೆಬಡಿಯಲಾಗುತ್ತದೆ; ದೊರೆಯು ಮಾಡುವ ಕಾನೂನು ಕಟ್ಟಲೆಗಳನ್ನು ಒಪ್ಪದಿರುವವರನ್ನು ‘ದೇಶದ್ರೋಹಿ/ರಾಜದ್ರೋಹಿ’ ಎಂದು ಹೆಸರಿಸಿ, ಅವರನ್ನು ಸೆರೆಮನೆಗೆ ತಳ್ಳಿ, ಚಿತ್ರಹಿಂಸೆಯನ್ನು ನೀಡಿ, ಜೀವಂತವಾಗಿ ನರಳಿಸುವುದು ಇಲ್ಲವೇ ಕೊಲ್ಲುವುದು;

ಜಗ=ಲೋಕ/ಪ್ರಪಂಚ/ಜನಸಮುದಾಯ; ಸತತ=ಯಾವಾಗಲೂ/ನಿರಂತರವಾಗಿ/ಸದಾಕಾಲ; ಒಳಿತು=ಒಳ್ಳೆಯದನ್ನು; ಎನುತ=ಎಂದು ಹೇಳುತ್ತ;

ಜಗಕೆ ಸತತವು ಒಳಿತು ಮಾಡುವೆ ಎನುತ=ಜನರ ಬದುಕಿಗೆ ಅಗತ್ಯವಾದ ಅನ್ನ,ಬಟ್ಟೆ,ವಸತಿ,ವಿದ್ಯೆ,ಉದ್ಯೋಗ,ಆರೋಗ್ಯವು ಎಲ್ಲರಿಗೂ ದೊರಕುವಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು, ಪ್ರಜೆಗಳೆಲ್ಲರೂ ಒಲವು ನಲಿವು ನೆಮ್ಮದಿಯಿಂದ ಬಾಳುವಂತೆ ಮಾಡುತ್ತೇನೆ ಎಂದು ಮಾತಿನಲ್ಲಿ ಜನರನ್ನು ಮರುಳುಮಾಡುತ್ತ;

ದಬ್ಬಾಳಿಕೆ=ಇತರರನ್ನು ಅಡಿಯಾಳುಗಳನ್ನಾಗಿ ಮಾಡಿಕೊಂಡು ಸುಲಿಗೆ ಮಾಡುವುದು/ಕಿರುಕುಳ ಕೊಡುವುದು/ಹಿಂಸಿಸುವುದು/ಕೊಲ್ಲುವುದು; ಆಳುತ+ಇಹ; ಆಳು=ಆಡಳಿತವನ್ನು ನಡೆಸು; ಇಹ=ಇರುವ; ದೊರೆ+ಇಂದ; ದೊರೆ=ರಾಜ/ಅರಸ; ಕ್ಷೋಭೆ=ಸಂಕಟ/ತಳಮಳ/ಗೊಂದಲ/ಕೇಡು/ಕಾಟ/ಪೀಡನೆ;

ದಬ್ಬಾಳಿಕೆಯಲಿ ಆಳುತಿಹ ದೊರೆಯಿಂದ ಕ್ಷೋಭೆಯು ಹೆಚ್ಚುವುದು=ದಬ್ಬಾಳಿಕೆಯಿಂದ ಆಡಳಿತವನ್ನು ನಡೆಸುತ್ತಿರುವ ದೊರೆಯ ರಾಜ್ಯದಲ್ಲಿ ಕೇಡಿಗಳು, ವಂಚಕರು ಮತ್ತು ಕ್ರೂರಿಗಳಾದ ಜನರು ದೊರೆಗೆ ಆಪ್ತರಾಗುತ್ತಾರೆ. ಇದರಿಂದಾಗಿ ನಾಡಿನಲ್ಲಿ ಆಚರಣೆಯಲ್ಲಿದ್ದ ನ್ಯಾಯಯುತವಾದ ಕಾನೂನು ಕಟ್ಟಲೆಗಳು ಕುಸಿಯುತ್ತವೆ.

ಕ್ರೂರಿಯಾದ ದೊರೆಯ ಎಡಬಲದಲ್ಲಿರುವ ಮೇಲು ಜಾತಿಯ ಮತ್ತು ಮೇಲುವರ್‍ಗದ ಜನರು ನೂರೆಂಟು ಬಗೆಯ ಜಾತಿ ಮತ್ತು ಹಲವಾರು ಮತಗಳಿಂದ ರಚನೆಗೊಂಡಿರುವ ಸಮಾಜದ ಜನರ ಮನದಲ್ಲಿ ಪರಸ್ಪರ ಅಪನಂಬಿಕೆಯ ಮತ್ತು ಹಗೆತನದ ಒಳಮಿಡಿತಗಳನ್ನು ಮೂಡಿಸಿ, ಬೇರೆ ಬೇರೆ ಜಾತಿ ಮತಗಳಿಗೆ ಸೇರಿದ ಜನರು ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡುತ್ತಾರೆ.

ಜಾತಿಮತದ ಬಲವುಳ್ಳ, ತೋಳ್ ಬಲವುಳ್ಳ, ಹಣಬಲವುಳ್ಳ ವ್ಯಕ್ತಿಗಳು ದುಡಿಯುವ ವರ್‍ಗದ ಬಡಜನರನ್ನು ಮತ್ತು ಯಾವುದೇ ಬಲವಿಲ್ಲದ ಜನಸಮುದಾಯವನ್ನು ಸಾವುನೋವಿಗೆ ಗುರಿಮಾಡುತ್ತಾರೆ.

ದೊರೆಯ ಕ್ರೂರತನ ಮತ್ತು ವಂಚಕತನದಿಂದ ಕೂಡಿದ ದಬ್ಬಾಳಿಕೆಯ ಆಡಳಿತದಲ್ಲಿ ನಾಡಿನ ಸಂಪತ್ತು ದೊಡ್ಡ ಪ್ರಮಾಣದಲ್ಲಿ ಮೇಲುಜಾತಿಯವರ ಮತ್ತು ಮೇಲುವರ್‍ಗದ ಜನರ ಪಾಲಾಗುತ್ತದೆ. ಬಡವರ ಬಡತನ ಹೆಚ್ಚಾಗುತ್ತದೆ; ಸಿರಿವಂತರ ಸಂಪತ್ತು ಇಮ್ಮಡಿಗೊಳ್ಳುತ್ತದೆ. ಬಡವರು ಮತ್ತು ಬಲ್ಲಿದರ ನಡುವಣ ಅಂತರ ದಿನೇ ದಿನೇ ಹೆಚ್ಚಾಗುತ್ತದೆ.

ಇಂತಹ ಅಸಮಾನತೆಯಿಂದಾಗಿ ಕೆಳಜಾತಿ ಮತ್ತು ಕೆಳವರ್‍ಗಕ್ಕೆ ಸೇರಿದ ದುಡಿಯುವ ವರ್‍ಗದ ಬಡಜನತೆಯು ಹೆಚ್ಚಿನ ವಿದ್ಯೆಯನ್ನು ಪಡೆಯಲಾಗದೆ, ಉನ್ನತವಾದ ಹುದ್ದೆಗಳನ್ನು ಏರಲಾರದೆ, ದಿನನಿತ್ಯದ ಹಸಿವನ್ನು ನೀಗಿಸಿಕೊಳ್ಳುವುದರಲ್ಲಿಯೇ ಮಗ್ನರಾಗುತ್ತಾರೆ.

ದಬ್ಬಾಳಿಕೆಯ ಆಡಳಿತದಲ್ಲಿ ಬಹಿರಂಗದಲ್ಲಿ ನಾಡು ಸಿರಿವಂತಿಕೆಯಿಂದ ಕೂಡಿರುವಂತೆ ಕಂಡುಬಂದರೂ, ಅಂತರಂಗದಲ್ಲಿ ಕೋಟಿಗಟ್ಟಲೆ ಜನರು ಜೀವನದ ಉದ್ದಕ್ಕೂ ಬಡತನ ಮತ್ತು ಅಪಮಾನದಲ್ಲಿಯೇ ನರಳುತ್ತ, ಒಂದಲ್ಲ ಒಂದು ಬಗೆಯ ಹೆದರಿಕೆ, ಆತಂಕ ಹಾಗೂ ಸಂಕಟದಿಂದ ಪರಿತಪಿಸುತ್ತಿರುತ್ತಾರೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks