ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 23ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – 23 : ಸಮಬಲರ ಗದಾಯುದ್ಧ *** 

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಗದಾಯುದ್ಧಂ’ ಎಂಬ ಹೆಸರಿನ 8 ನೆಯ ಅದ್ಯಾಯದ 1 ನೆಯ ಗದ್ಯದಿಂದ 15 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು:

ಭೀಮಸೇನ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ರಾಜ ದಂಪತಿಯ ಹಿರಿಯ ಮಗ. ಹಸ್ತಿನಾವತಿಯ ರಾಜ.

*** ಪ್ರಸಂಗ – 23: ಸಮಬಲರ ಗದಾಯುದ್ಧ ***

ಅಂತು ಸಮರ ಉತ್ಸುಕಚಿತ್ತನಾಗಿ ಸಾಹಸಭೀಮನ್ ದ್ರೋಣಾಚಾರ್ಯಂಗೆ ಮನದೊಳ್ ನಮಸ್ಕಾರಮ್ ಮಾಡಿ… ದುರ್ಯೋಧನನ್ ಬಲದೇವಂಗೆ ನಮಸ್ಕಾರಮ್ ಮಾಡಿ… ಕನಕ ರಜತ ವಿಚಿತ್ರ ಅಲಂಕೃತ ಸ್ವರೂಪ ಸಮನ್ವಿತಂಗಳಪ್ಪ ಗದೆಗಳನ್ ಇರ್ವರುಮ್ ಆಯ್ದುಕೊಂಡು ವೈಶಾಖಸ್ಥಾನದೊಳ್ ನಿಂದು… ಸ್ಥಿರಬದ್ಧ ಮತ್ಸರರ್… ಭೀಕರಬದ್ಧ ಭ್ರುಕುಟಿಘಟಿತರ್… ಅದ್ಭುತರ್… ಅಟ್ಟಾಸುರರ್… ಅಧಿಕ ಕೋಪ ಪಾಟಲ ಪರುಷೇಕ್ಷಣರ್ ಎನಿಸಿ ದೃಷ್ಟಿಯುದ್ಧಮ್ ಗೆಯ್ದರ್.

ಭೀಮದುರ್ಯೋಧನರಾ ಕಡೆಗಣ್ಣೊಳ್ ಪಸರಿಸೆ ಕಡುಗೆಂಪು ದೆಸೆದೇವತೆಗಳ್ಗೆ ಜಪಾಪ್ರಸೂನಮಮ್… ರಕ್ತಬಲಿಯುಮಮ್ ತಾಮ್ ಕುಡುವಂತೆ ಎಸೆದಿರ್ದರ್. … ಉರಿಯನ್ ಉಗುಳ್ವಂತೆ… ಬಿಸುನೆತ್ತರನ್ ಎತ್ತಮ್ ಸೂಸುವಂತೆ… ಬಿಚ್ಚನೆ ಬಿಟ್ಟಿರ್ದ ಎರಡುಮ್ ಕಣ್ಗಳೊಳ್… ಅವರ್ ಒರ್ಬರನ್ ಒರ್ಬರ್ ನುಂಗುವಂತೆ ಎನಸುಮ್ ನೋಡಿದರ್.

ಉದಯಾದ್ರಿಯುಮ್ ಅಸ್ತಾದ್ರಿಯುಮ್ ಉದಗ್ರ ಕೋಪ ಉತ್ಕರಂಗಳ್ ಇರ್ಪಂತಿರೆ ಉನ್ನತಮೂರ್ತಿಗಳ್ ಭೀಮ ಭುಜಗಧ್ವಜರುಮ್ ಗದಾಯುಧದೆ ಒದವಿ ನೀಳ್ದು ಒದವಿದರ್. ಮುಂದಮ್ ಕಿರಿಕಿರಿದೆ ಮೆಟ್ಟಿ… ಕಿರಿಕಿರಿದನೆ ಸಾರ್ಚಿ… ತಮ್ಮ ಗದೆಗಳನ್ ಆಗಳ್ ಕಿರಿಕಿರಿದೆ ತಿರಿಪಿ… ಮಾಣದೆ ಕಿರಿಕಿರಿದನೆ ತೂಂಕಿ ತೂಂಕಿ… ಎನಸುಮ್ ನೂಂಕಿದರ್. ಎಡದ ಅಡಿಯಮ್ ಪುಗಿಸುವ… ಬಲದ ಅಡಿಯಮ್ ಪೊರಗಿಡುವ… ದಂಡೆಯಮ್ ನಿಳ್ಕುವ… ಕಯ್ ನಡುಗದೆ ಗದೆಯನ್ ಬೀಸುವ ಭೀಮ ದುರ್ಯೋಧನರಾ ಬೆಡಂಗು ರಂಜಿಸಿತು.

ಧಪ್ಪರಿ ಧಟ್ಟುಮ್ ಪೊಟ್ಟೆನೆ… ಧೊಪ್ಪ ಧೊಗಪ್ಪೆನೆ… ದಿಧಿಲ್ ಬುಧಿಲ್ಲೆನೆ… ಮೆಯ್ಗಳ್ ಸೊಪ್ಪುಸೊವಡಪ್ಪಿನಮ್… ಸೂಳ್ ತಪ್ಪದೆ… ಕಡುಕೆಯ್ದು ಒರ್ವರನ್ ಒರ್ವರ್ ಪೊಯ್ದರ್. ಪಗಲ್ ಉಳ್ಕಮ್ ಉಳ್ಕುವಂದದಿನ್ ಒಗೆವ ಗದಾಶಲ್ಕಮ್ ಉಳ್ಕೆ… ದಿವಿಜರ್ ಕಣ್ಣಮ್ ಮುಚ್ಚಲ್ ಬಗೆಯೆ… ಕುರುಪಾಂಡವರ ಆ ಗದಾ ಆಹವಮ್ ಅಗುರ್ವುಮ್ ಅದ್ಭುತಮುಮ್ ಆಯ್ತು. ಗದೆ ಗದೆಯನ್ ಘಟ್ಟಿಸೆ… ಪುಟ್ಟಿದ ಕೆಂಡದ ಕಿಡಿಯ ತಂಡ… ಎಣ್ಟುಮ್ ದೆಸೆಯಮ್ ಪುದಿಯೆ… ಪದಧೂಳಿ ಗಗನದೊಳ್ ಒದವೆ… ಸುರರ್ ಬೆದರೆ… ಕಡುಗಲಿಗಳ್ ಕಾದಿದರ್ … ವಾರಣ ರಕ್ತಸಿಕ್ತ ಮೃಗರಾಜಯುಗಕ್ಕೆ… ನವಪ್ರಸೂನ ರಾಗ ಅರುಣ ಕಿಂಶುಕ ದ್ರುಮಯುಗಕ್ಕೆ… ಸಧಾತು ಕುಭೃತ್ ಯುಗಕ್ಕೆ… ಸಿಂದೂರಿತ ಗಂಧ ಸಿಂಧುರಯುಗಕ್ಕೆ ಎಣೆ ಎಂಬಿನಮ್… ರುಧಿರಾಕ್ತಮೂರ್ತಿಗಳ್ ಕೌರವರಾಜನುಮ್ ಕುರುಕುಲಾಂತಕನುಮ್ ಅಣ್ಮಿ ಕಾದಿದರ್…

ದುರ್ಯೋಧನ: ಕರಿಯಮ್ ನುಂಗಿ ಕಳಿಂಗನನ್ ನೊಣೆದ ದರ್ಪಕ್ಕೆ ಒಂದುಗೊಳ್… ಮತ್ ಸಹೋದರರಮ್ ಕೋಪದೆ ತಿಂದುದರ್ಕೆ ಎರಡುಗೊಳ್… ದುಶ್ಶಾಸನ ಉರಸ್ಸ್ಥಳ ಕ್ಷರತ್ ಅಸ್ರಾಂಬುವನ್ ಆರ್ದು ಪೀರ್ದ ಮುಳಿಸಿಂಗಮ್ ಮೂರುಗೊಳ್ಳ್…

( ಎಂದು ಮಚ್ಚರದಿಂದೆ ಓವದೆ ದುರ್ಯೋಧನನ್ ಗದೆಯಮ್ ಎತ್ತಿ ಭೀಮನನ್ ಪೊಯ್ದನ್ ಎಂದು ಮುಟ್ಟಿ ಮೂದಲಿಸೆ… )

ಭೀಮ: ಇದು ಲಾಕ್ಷಾಗೇಹದಾಹಕ್ಕೆ… ಇದು ವಿಷಮವಿಷಾನ್ನಕ್ಕೆ… ಇದು ಆ ನಾಡ ಜೂದಿಂಗೆ… ಇದು ಪಾಂಚಾಲೀ ಪ್ರಪಂಚಕ್ಕೆ… ಇದು ಕೃತಕ ಸಭಾಲೋಕನ ಭ್ರಾಂತಿಗೆ…

( ಎಂದು ಕಾಲ್ಗಳಮ್… ತೋಳ್ಗಳಮ್… ಅಗಲುರಮಮ್… ಕೆನ್ನೆಯಮ್… ನೆತ್ತಿಯಮ್ ಅಯ್ದುಮ್ ದುರ್ನಯಕ್ಕೆ ಅಯ್ದು ಎಡೆಯಮ್ ಭೀಮಸೇನನ್ ಕೋಪದಿನ್ ಉರು

ಗದಾದಂಡದಿಮ್ ಓವದೆ ಪೊಯ್ದನ್… ಚರಣಾಕ್ರಾಂತಮ್ ಮಹೀಮಂಡಲಮ್ ಅದಿರೆ… ಭುಜಾಕ್ರಾಂತಮ್ ಆಶಾಗಜೇಂದ್ರ ಉತ್ಕರಮ್ ಆಶಾಭಿತ್ತಿಯಿಂದಮ್ ಪೆರದೆಗೆಯೆ… ಗದಾಕ್ರಾಂತಮ್ ಉದ್ಭ್ರಾಂತ ವಿದ್ಯಾಧರಚಕ್ರಮ್ ನಿಜವಿಮಾನಂಗಳಮ್ ಗೆಂಟುಗೆಂಟಾಗಿರಿಸೆ… ಆ ಕಲ್ಪಾಂತಕಾಲಮ್ ಭೈರವ ಆಡಂಬರಮ್ ಭೀಮ ದುರ್ಯೋಧನೀಯಮ್ ಸಮರಮ್ ನೆಗಳ್ದುದು. ನೆಲಸಿದ ಬಿನ್ನಣಮ್ ಸೆಣಸಿ ಬಿನ್ನಣಮಮ್ ಗೆಲೆ… ಕಾಣ್ಕೆ ಕಾಣ್ಕೆಯಮ್ ಗೆಲೆ… ಜವಮಮ್ ಜವಮ್ ಗೆಲೆ… ಬಲಮ್ ಬಲಮಮ್ ಗೆಲೆ… ದಂಡೆ ದಂಡೆಯಮ್ ಗೆಲೆ… ಮುಳಿಸು ಉಣ್ಮಿ ಪೊಣ್ಮಿ ಮುಳಿಸಮ್ ಗೆಲೆ… ಸತ್ತ್ವದ ಅಳುರ್ಕೆ ಸತ್ತ್ವಮಮ್ ಗೆಲೆ… ಕುರು ಪಾಂಡುತನೂಭವರ್ ಒರ್ವರ್ ಒರ್ವರಮ್ ಗೆಲಲ್ ಆರ್ತರಿಲ್ಲ.)

ಪದ ವಿಂಗಡಣೆ ಮತ್ತು ತಿರುಳು: ಸಮಬಲರ ಗದಾಯುದ್ದ

ಸಮರ=ಕಾಳೆಗ/ಯುದ್ದ; ಉತ್ಸುಕ=ಚಟುವಟಿಕೆಯುಳ್ಳವನು/ವೇಗಶಾಲಿ; ಚಿತ್ತ=ಮನಸ್ಸು;

ಅಂತು ಸಮರ ಉತ್ಸುಕಚಿತ್ತನಾಗಿ ಸಾಹಸಭೀಮನು=ಆ ರೀತಿ ದುರ‍್ಯೋದನನೊಡನೆ ಯುದ್ದವನ್ನು ಮಾಡುವ ಉತ್ಸಾಹದ ಮನದ ಪರಾಕ್ರಮಶಾಲಿ ಬೀಮನು;

ದ್ರೋಣಾಚಾರ್ಯಂಗೆ ಮನದೊಳ್ ನಮಸ್ಕಾರಮ್ ಮಾಡಿ=ವಿದ್ಯಾಗುರು ದ್ರೋಣಾಚಾರ್‍ಯನಿಗೆ ಮನದಲ್ಲಿಯೇ ನಮಸ್ಕಾರವನ್ನು ಮಾಡಿ;

ಬಲದೇವ=ಕ್ರಿಶ್ಣನ ಅಣ್ಣನಾದ ಬಲರಾಮನು ಬೀಮ ಮತ್ತು ದುರ್ಯೋದನ ಇಬ್ಬರಿಗೂ ಕೆಲಕಾಲ ಗದಾವಿದ್ಯೆಯ ಕುಶಲತೆಯ ಕೆಲಸಂಗತಿಗಳನ್ನು ಹೇಳಿಕೊಟ್ಟಿದ್ದ ಗುರುವಾಗಿದ್ದನು;

ದುರ್ಯೋಧನನ್ ಬಲದೇವಂಗೆ ನಮಸ್ಕಾರಮ್ ಮಾಡಿ=ದುರ‍್ಯೋದನನು ಬಲರಾಮನಿಗೆ ನಮಸ್ಕಾರವನ್ನು ಮಾಡಿ;

ಕನಕ=ಚಿನ್ನ; ರಜತ=ಬೆಳ್ಳಿ; ವಿಚಿತ್ರ=ಅನೇಕ ಬಣ್ಣಗಳಿಂದ ಕೂಡಿದ; ಅಲಂಕೃತ=ಸಿಂಗಾರಗೊಂಡ; ಸಮನ್ವಿತಂಗಳ್+ಅಪ್ಪ; ಸಮನ್ವಿತ=ಕೂಡಿದ;

ಕನಕ ರಜತ ವಿಚಿತ್ರ ಅಲಂಕೃತ ಸ್ವರೂಪ ಸಮನ್ವಿತಂಗಳಪ್ಪ ಗದೆಗಳನ್ ಇರ್ವರುಮ್ ಆಯ್ದುಕೊಂಡು=ಚಿನ್ನ ಬೆಳ್ಳಿಯ ಬಣ್ಣಬಣ್ಣದ ರೇಕುಗಳಿಂದ ಕೂಡಿ ಸಿಂಗಾರಗೊಂಡು ಸುಂದರವಾಗಿ ರೂಪುಗೊಂಡಿರುವ ಗದೆಗಳನ್ನು ಇಬ್ಬರೂ ಆಯ್ಕೆಮಾಡಿಕೊಂಡು;

ವೈಶಾಖಸ್ಥಾನದ+ಒಳ್; ವೈಶಾಖಸ್ಥಾನ=ದ್ವಂದ್ವಯುದ್ದದಲ್ಲಿ ಬಾಗವಹಿಸುವ ವ್ಯಕ್ತಿಗಳು ನಿಲ್ಲುವ ಆರು ಬಗೆಯ ನಿಲುವುಗಳಲ್ಲಿ/ಬಂಗಿಗಳಲ್ಲಿ ಇದು ಒಂದು ಬಗೆಯದು;

ವೈಶಾಖಸ್ಥಾನದೊಳ್ ನಿಂದು=ಗದಾಯುದ್ದದಲ್ಲಿ ತೊಡಗುವ ಮುನ್ನ ಬೀಮ ದುರ‍್ಯೋದನರು ತಾವು ನಿಲ್ಲಬೇಕಾದ ಜಾಗಗಳಲ್ಲಿ ಗದೆಯನ್ನು ಹಿಡಿದು ಯುದ್ದದ ಬಂಗಿಯಲ್ಲಿ ನಿಂತುಕೊಂಡು;

ಸ್ಥಿರ=ಶಾಶ್ವತವಾದ; ಬದ್ಧ=ಬಲವಾದ; ಮತ್ಸರ=ಹಗೆ/ಕೋಪ;

ಸ್ಥಿರಬದ್ಧ ಮತ್ಸರರ್=ಶಾಶ್ವತವಾದ ಮತ್ತು ಪ್ರಬಲವಾದ ಹಗೆತನವುಳ್ಳವರು;

ಭೀಕರಬದ್ಧ=ಬಯಂಕರವಾದ ರೀತಿಯಲ್ಲಿ; ಭ್ರುಕುಟಿ=ಗಂಟಿಕ್ಕಿದ ಹುಬ್ಬು; ಘಟಿತ=ಕೂಡಿದ/ಉಂಟಾದ;

ಭೀಕರಬದ್ಧ ಭ್ರುಕುಟಿಘಟಿತರ್=ಬಯಂಕರವಾಗಿ ಹುಬ್ಬುಗಂಟಿಕ್ಕಿದವರು;

ಅದ್ಭುತರ್=ದೇಹ ಬಲ, ಪರಾಕ್ರಮ ಮತ್ತು ಹಗೆತನದಲ್ಲಿ ಅಚ್ಚರಿಯನ್ನುಂಟುಮಾಡುವವರು;

ಅಟ್ಟಾಸುರರ್=ಅತಿ ಬಯಂಕರವಾದ ವ್ಯಕ್ತಿಗಳು;

ಪಾಟಲ=ತಿಳಿ ಕೆಂಪು ಬಣ್ಣ; ಪರುಷ+ಈಕ್ಷಣರ್; ಪರುಷ=ಗಡುಸಾದುದು/ಬಿರುಸಾದುದು;ಈಕ್ಷಣ=ಕಣ್ಣು; ದೃಷ್ಟಿಯುದ್ಧ=ರೆಪ್ಪೆಯನ್ನು ಮಿಟುಕಿಸಿದೆ ಒಂದೇ ಸಮನೆ ಎದುರಾಳಿಯನ್ನು ನೋಡುತ್ತಿರುವುದು. ಯಾರು ಕಣ್ಣು ರೆಪ್ಪೆಯನ್ನು ಮೊದಲು ಮಿಟುಕಿಸುತ್ತಾರೆಯೋ ಅವರು ಸೋಲನ್ನಪ್ಪುತ್ತಾರೆ;

ಅಧಿಕ ಕೋಪ ಪಾಟಲ ಪರುಷೇಕ್ಷಣರ್ ಎನಿಸಿ ದೃಷ್ಟಿಯುದ್ಧಮ್ ಗೆಯ್ದರ್=ಹೆಚ್ಚಿನ ಕೋಪೋದ್ರೇಕದಿಂದ ಇಬ್ಬರ ಕಣ್ಣುಗಳು ಕೆಂಪಗಾಗಿದ್ದವು. ಗದಾಯುದ್ದಕ್ಕೆ ಮೊದಲು ಒಬ್ಬರನ್ನೊಬ್ಬರು ದುರುಗುಟ್ಟಿಕೊಂಡು ನೋಡುತ್ತ ದ್ರುಶ್ಟಿಯುದ್ದದಲ್ಲಿ ತೊಡಗಿದರು;

ಕಡೆ+ಕಣ್ಣ್+ಒಳ್; ಕಡೆಗಣ್ಣು=ಕಣ್ಣಿನ ಅಂಚು/ತುದಿ; ಒಳ್=ಅಲ್ಲಿ; ಪಸರಿಸು=ಹರಡು; ಕಡುಗೆಂಪು=ದಟ್ಟವಾದ ಕೆಂಪುಬಣ್ಣ; ದೆಸೆ=ದಿಕ್ಕು; ಪ್ರಸೂನ=ಹೂವು; ಜಪಾಪ್ರಸೂನ=ಕೆಂಪನೆಯ ದಾಸವಾಳದ ಹೂವು; ಎಸೆ=ಕಂಗೊಳಿಸು;

ಭೀಮದುರ್ಯೋಧನರಾ ಕಡೆಗಣ್ಣೊಳ್ ಪಸರಿಸೆ ಕಡುಗೆಂಪು ದೆಸೆದೇವತೆಗಳ್ಗೆ ಜಪಾಪ್ರಸೂನಮಮ್… ರಕ್ತಬಲಿಯುಮಮ್ ತಾಮ್ ಕುಡುವಂತೆ ಎಸೆದಿರ್ದರ್=ಕೋಪೋದ್ರೇಕದಿಂದ ದ್ರುಶ್ಟಿಯುದ್ದದಲ್ಲಿ ತೊಡಗಿದ ಬೀಮ ದುರ‍್ಯೋದನರ ಕಣ್ಣಂಚಿನಲ್ಲಿ ಕೆಂಪನೆಯ ಬಣ್ಣವು ಹರಡಲು, ಅವರಿಬ್ಬರೂ ಕೆಂಗಣ್ಣುಗಳಿಂದಲೇ ದಿಕ್ಕಿನ ದೇವತೆಗಳಿಗೆ ದಾಸವಾಳದ ಹೂವನ್ನು ಅರ್ಪಿಸುತ್ತಿರುವಂತೆಯೂ… ರಕ್ತಬಲಿಯನ್ನು ಕೊಡುತ್ತಿರುವಂತೆಯೂ ಕಂಗೊಳಿಸುತ್ತಿದ್ದರು;

ಬಿಚ್ಚನೆ=ಅಗಲವಾಗಿ; ಬಿಟ್ಟಿರ್ದ=ತೆರೆದಿದ್ದ; ಉರಿ=ಬೆಂಕಿ; ಉಗುಳ್=ಹೊರಸೂಸು; ಬಿಸುನೆತ್ತರ್=ಬಿಸಿಯಾದ ರಕ್ತ; ಎತ್ತಮ್=ಎಲ್ಲೆಡೆಯಲ್ಲಿಯೂ; ಸೂಸು=ಎರಚು/ಚಿಮ್ಮು; ಎನಸುಮ್=ಬಹಳವಾಗಿ;

ಬಿಚ್ಚನೆ ಬಿಟ್ಟಿರ್ದ ಎರಡುಮ್ ಕಣ್ಗಳೊಳ್… ಅವರ್ ಒರ್ಬರನ್ ಒರ್ಬರ್ ನುಂಗುವಂತೆ… ಉರಿಯನ್ ಉಗುಳ್ವಂತೆ… ಬಿಸುನೆತ್ತರನ್ ಎತ್ತಮ್ ಸೂಸುವಂತೆ… ಎನಸುಮ್ ನೋಡಿದರ್=ಅಗಲವಾಗಿ ತೆರೆದಿದ್ದ ಎರಡು ಕಣ್ಣುಗಳಿಂದ ಅವರು ಒಬ್ಬರನ್ನು ಒಬ್ಬರು ನುಂಗುವಂತೆ ನೋಡುತ್ತ… ಬೆಂಕಿಯನ್ನು ಹೊರಸೂಸುವಂತೆ… ಬಿಸಿರಕ್ತವನ್ನು ಎಲ್ಲೆಡೆಯಲ್ಲಿಯೂ ಎರಚುವಂತೆ ದುರುಗುಟ್ಟಿಕೊಂಡು ನೋಡಿದರು;

ಉದಯ+ಅದ್ರಿ+ಉಮ್; ಉದಯ=ಹುಟ್ಟು; ಅದ್ರಿ=ಬೆಟ್ಟ/ಪರ್‍ವತ; ಉದಯಾದ್ರಿ=ಸೂರ್‍ಯನು ಮೂಡುವ ಮೂಡಲ ದಿಕ್ಕಿನಲ್ಲಿರುವ ಬೆಟ್ಟ; ಅಸ್ತ+ಅದ್ರಿ+ಉಮ್; ಅಸ್ತ=ಮರೆಯಾದ; ಅಸ್ತಾದ್ರಿ= ಸೂರ್‍ಯನು ಮರೆಯಾಗುವ ಪಡುವಣ ದಿಕ್ಕಿನಲ್ಲಿರುವ ಬೆಟ್ಟ; ಉದಗ್ರ=ಹೆಚ್ಚಾದ/ಎತ್ತರವಾದ; ಉತ್ಕರ=ರಾಶಿ/ಗುಂಪು;

ಉದಯಾದ್ರಿಯುಮ್ ಅಸ್ತಾದ್ರಿಯುಮ್ ಉದಗ್ರ ಕೋಪ ಉತ್ಕರಂಗಳ್ ಇರ್ಪಂತಿರೆ=ಮೂಡಣ ದಿಕ್ಕಿನ ಬೆಟ್ಟ ಮತ್ತು ಪಡುವಣ ದಿಕ್ಕಿನ ಬೆಟ್ಟಗಳು ಕೋಪೋದ್ರೇಕದಿಂದ ಕೂಡಿ ಪರಸ್ಪರ ಹೋರಾಡಲು ಅಣಿಯಾಗಿರುವಂತೆ;

ಉನ್ನತಮೂರ್ತಿ=ಎತ್ತರವಾದ ದೇಹ; ಭುಜಗ=ಹಾವು; ಭುಜಗಧ್ವಜ=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜ ಲಾಂಛನವಾಗುಳ್ಳವನು/ದುರ‍್ಯೋದನ; ಒದವು=ಅಣಿಯಾಗು; ನೀಳ್=ಉದ್ದವಾಗು/ಮುನ್ನುಗ್ಗು;

ಉನ್ನತಮೂರ್ತಿಗಳ್ ಭೀಮ ಭುಜಗಧ್ವಜರುಮ್ ಗದಾಯುಧದೆ ಒದವಿ ನೀಳ್ದು ಒದವಿದರ್=ಎತ್ತರದ ಮಯ್ ಕಟ್ಟಿನ ಬೀಮ ದುರ‍್ಯೋದನರು ಗದೆಗಳನ್ನು ಹಿಡಿದುಕೊಂಡು ಪರಸ್ಪರ ಎದುರುಬದುರಾಗಿ ಗದಾಯುದ್ದಕ್ಕೆ ಮುನ್ನುಗ್ಗಿದರು;

ಕಿರಿದು=ಚಿಕ್ಕದು/ ಸಣ್ಣದು; ಮೆಟ್ಟು=ಹೆಜ್ಜೆ ಇಡು;

ಮುಂದಮ್ ಕಿರಿಕಿರಿದೆ ಮೆಟ್ಟಿ=ಮುಂದಕ್ಕೆ ಚಿಕ್ಕ ಚಿಕ್ಕದಾಗಿ ಹೆಜ್ಜೆಯಿಟ್ಟು; ಸಾರ್=ಹತ್ತಿರಕ್ಕೆ ಬರು;

ಕಿರಿಕಿರಿದನೆ ಸಾರ್ಚಿ=ತುಸು ತುಸು ಹತ್ತಿರಕ್ಕೆ ಬಂದು;

ಆಗಳ್ ತಮ್ಮ ಗದೆಗಳನ್ ಕಿರಿಕಿರಿದೆ ತಿರಿಪಿ=ಆಗ ತಮ್ಮ ಗದೆಗಳನ್ನು ಸ್ವಲ್ಪ ಸ್ವಲ್ಪವೇ ತಿರುಗಿಸುತ್ತ;

ಮಾಣದೆ= ಬಿಡದೆ/ಸುಮ್ಮನಾಗದೆ; ತೂಂಕು=ಅತ್ತಿತ್ತ ಆಡಿಸು/ಹೊರಳಿಸು; ಎನಸುಮ್=ಬಹಳವಾಗಿ/ಹೆಚ್ಚಾಗಿ; ನೂಂಕು=ತಳ್ಳು/ದೂಡು/ದಬ್ಬು;

ಮಾಣದೆ… ಕಿರಿಕಿರಿದನೆ ತೂಂಕಿ ತೂಂಕಿ… ಎನಸುಮ್ ನೂಂಕಿದರ್=ಗದೆಯನ್ನು ತಿರುಗಿಸುತ್ತಲೇ ಸುಮ್ಮನೆ ನಿಲ್ಲದೆ… ಸ್ವಲ್ಪ ಸ್ವಲ್ಪ ಗದೆಯನ್ನು ಅತ್ತಿತ್ತ ಹೊರಳಿಸುತ್ತ… ಜೋರಾಗಿ ಮುಂದಕ್ಕೆ ತಳ್ಳಿದರು;

ಅಡಿ=ಹೆಜ್ಜೆ; ಪುಗಿಸು=ಒಳಗಿಡು; ಪೊರಗೆ+ಇಡುವ; ದಂಡೆ=ಗದೆ; ನಿಳ್ಕು=ತಾಗು/ಮುಟ್ಟು/ತಾಡಿಸು/ಹೊಡೆ; ಬೆಡಂಗು=ಗತ್ತು/ನಿಪುಣತೆ; ರಂಜಿಸು= ಮನೋಹರವಾಗು/ಶೋಬಿಸು;

ಎಡದ ಅಡಿಯಮ್ ಪುಗಿಸುವ… ಬಲದ ಅಡಿಯಮ್ ಪೊರಗಿಡುವ… ದಂಡೆಯಮ್ ನಿಳ್ಕುವ… ಕಯ್ ನಡುಗದೆ ಗದೆಯನ್ ಬೀಸುವ ಭೀಮ ದುರ್ಯೋಧನರಾ ಬೆಡಂಗು ರಂಜಿಸಿತು=ಎಡದ ಹೆಜ್ಜೆಯನ್ನು ಹಿಂದಕ್ಕಿಟ್ಟು… ಬಲದ ಹೆಜ್ಜೆಯನ್ನು ಮುಂದಕ್ಕೆ ಇಟ್ಟು… ಗದೆಯಿಂದ ಹೊಡೆಯುತ್ತ… ಕಯ್ ನಡುಗದೆ ಗದೆಯನ್ನು ಬೀಸುತ್ತಿರುವ ಬೀಮ ದುರ‍್ಯೋದನರ ಗದಾಯುದ್ದದ ನಿಪುಣತೆಯು ಮನೋಹರವಾಗಿ ಕಂಡುಬಂದಿತು;

ದಪ್ಪರಿದಟ್ಟು/ ಪೊಟ್ಟು/ದೊಪ್ಪಧೊಗಪ್ಪು/ದಿಧಿಲ್/ಬುಧಿಲ್=ಇವೆಲ್ಲವೂ ಅನುಕರಣ ಪದಗಳು. ದೊಡ್ಡದಾಗಿ ಕೇಳಿಬರುವ ಶಬ್ದವನ್ನು ಸೂಚಿಸುವ ಪದಗಳಿಗೆ ಅನುಕರಣ ಪದಗಳೆಂದು ಹೆಸರು; ಉಕ್ಕು ಚಿನ್ನ ಬೆಳ್ಳಿ ಮುಂತಾದ ಲೋಹಗಳಿಂದ ಮಾಡಿರುವ ಗದೆಗಳಿಂದ ಯುದ್ದ ಮಾಡುತ್ತಿರುವಾಗ, ಗದೆಗಳ ಬಡಿಯುವಿಕೆಯಿಂದ ಮತ್ತು ಗದೆಯಿಂದ ದೇಹದ ಮೇಲೆ ಹೊಡೆದಾಗ ಮತ್ತು ಕಾದಾಡುವವರು ತೊಟ್ಟಿರುವ ಉಕ್ಕಿನ ಕವಚದ ಮೇಲೆ ಗದೆಯ ಹೊಡೆತ ಬಿದ್ದಾಗ ಉಂಟಾಗುತ್ತಿರುವ ಶಬ್ದವನ್ನು ಈ ಪದಗಳು ಸೂಚಿಸುತ್ತಿವೆ; ಪೊಟ್ಟ+ಎನೆ; ಎನೆ=ಎನ್ನುವಂತೆ; ಸೊಪ್ಪುಸೊವಡು+ಅಪ್ಪಿನಮ್; ಸೊಪ್ಪುಸೊವಡು=ನಜ್ಜುಗುಜ್ಜಾಗು/ ನುಗ್ಗುನುರಿಯಾಗು; ಸೂಳ್=ಸರದಿ; ಸೂಳ್ ತಪ್ಪದೆ=ತಮ್ಮ ಸರದಿಯನ್ನು ಬಿಡದೆ/ಒಬ್ಬರಿಗೊಬ್ಬರು ಹೊಡೆಯುವ ಅವಕಾಶವನ್ನು ಬಿಡದೆ; ಕಡುಕೆಯ್=ತೀವ್ರವಾಗು/ಶೂರತನವನ್ನು ತೋರು;

ದಪ್ಪರಿದಟ್ಟುಮ್ ಪೊಟ್ಟೆನೆ… ದೊಪ್ಪಧೊಗಪ್ಪೆನೆ… ದಿಧಿಲ್ ಬುಧಿಲ್ಲೆನೆ ಮೆಯ್ಗಳ್ ಸೊಪ್ಪುಸೊವಡಪ್ಪಿನಮ್… ಸೂಳ್ ತಪ್ಪದೆ… ಕಡುಕೆಯ್ದು ಒರ್ವರನ್ ಒರ್ವರ್ ಪೊಯ್ದರ್=ಬೀಮ ಮತ್ತು ದುರ‍್ಯೋದನರು ಗದೆಗಳನ್ನು ಕುಶಲತೆಯಿಂದ ಬೀಸುತ್ತ, ಪರಸ್ಪರ ಬಡಿದಾಡುತ್ತಿರುವಾಗ ಗದೆಗಳ ತಿಕ್ಕಾಟದಿಂದ ಮತ್ತು ಮಯ್ ಮೇಲೆ ಬೀಳುತ್ತಿರುವ ಗದೆಗಳ ಪೆಟ್ಟಿನಿಂದ ‘ ದಪ್ಪರಿದಟ್ಟುಮ್… ಪೊಟ್ಟ್… ದೊಪ್ಪದೊಗಪ್… ದಿದಿಲ್ ಬುದಿಲ್’ ಎಂಬ ಶಬ್ದ ಹೊರಹೊಮ್ಮುತ್ತಿರಲು, ಮಯ್ ಮೇಲೆ ಬಿದ್ದ ಗದೆಯ ಪೆಟ್ಟಿನಿಂದ ಇಬ್ಬರ ದೇಹದ ಮಾಂಸಕಂಡಗಳು ನಜ್ಜುಗುಜ್ಜಾಗುತ್ತಿರಲು… ಹೊಡೆಯುವ ಅವಕಾಶವನ್ನು ಬಿಡದೆ, ತೀವ್ರತರವಾಗಿ ಒಬ್ಬರನ್ನೊಬ್ಬರು ಹೊಡೆಯತೊಡಗಿದರು;

ಪಗಲ್=ಹಗಲು; ಉಳ್ಕ/ಉಳ್ಕೆ=ಆಕಾಶದಿಂದ ಕೆಳಕ್ಕೆ ಬೀಳುವ ತೇಜಸ್ಸಿನಿಂದ ಕೂಡಿದ ವಸ್ತು; ಉಳ್ಕುವ+ಅಂದದಿನ್; ಉಳ್ಕು=ಅತಿ ಪ್ರಕಾಶಮಾನವಾಗು/ಪ್ರವಾಹವಾಗಿ ಹರಿ; ಒಗೆ=ಹುಟ್ಟು/ಕಾಣಿಸಿಕೊಳ್ಳು; ಶಲ್ಕ=ತುಂಡು/ಚೂರು;

ಪಗಲ್ ಉಳ್ಕಮ್ ಉಳ್ಕುವಂದದಿನ್ ಒಗೆವ ಗದಾಶಲ್ಕಮ್ ಉಳ್ಕೆ=ಹಗಲಿನಲ್ಲಿಯೇ ಗಗನದಿಂದ ಪ್ರಕಾಶಮಾನವಾದ ಆಕಾಶಕಾಯಗಳು ಕೆಳಕ್ಕೆ ಉರುಳುವಂತೆ ಗದೆಗಳ ಬಡಿತದಿಂದ ಪ್ರಕಾಶಮಾನವಾದ ಚಿನ್ನ ಬೆಳ್ಳಿ ಉಕ್ಕಿನ ಲೋಹದ ಚಕ್ಕೆಗಳು ಹಾರಿ ಹಾರಿ ಬೀಳುತ್ತಿರಲು;

ದಿವಿಜ=ದೇವತೆ;

ದಿವಿಜರ್ ಕಣ್ಣಮ್ ಮುಚ್ಚಲ್ ಬಗೆಯೆ=ಕೋರಯಿಸುತ್ತ ಎಲ್ಲೆಡೆ ಹಾರಿ ಬೀಳುತ್ತಿರುವ ಲೋಹದ ಚಕ್ಕೆಗಳನ್ನು ನೋಡಲಾರದೆ ದೇವತೆಗಳು ಕಣ್ಣುಗಳನ್ನು ಮುಚ್ಚಿಕೊಳ್ಳಲು ಚಿಂತಿಸುತ್ತಿರಲು;

ಆಹವ=ಯುದ್ದ/ಕಾಳೆಗ; ಅಗುರ್ವು=ಉಗ್ರತೆ/ಬಯಂಕರತೆ;

ಕುರುಪಾಂಡವರ ಆ ಗದಾ ಆಹವಮ್ ಅಗುರ್ವುಮ್ ಅದ್ಭುತಮುಮ್ ಆಯ್ತು=ದುರ‍್ಯೋದನ ಮತ್ತು ಬೀಮನ ಗದಾಯುದ್ದವು ಬಯಂಕರವಾಗಿತ್ತು ಹಾಗೂ ಅತಿ ಅಚ್ಚರಿಯನ್ನುಂಟು ಮಾಡುತ್ತಿತ್ತು;

ಘಟ್ಟಿಸು=ಹೊಡೆ/ಬಡಿ/ಅಪ್ಪಳಿಸು; ತಂಡ=ಸಮೂಹ; ಪುದಿ=ಆವರಿಸು/ತುಂಬಿಸು; ಪದಧೂಳಿ=ಕಾಲಿನ ದೂಳು; ಒದವು=ಉಂಟಾಗು; ಸುರ=ದೇವತೆ;

ಗದೆ ಗದೆಯನ್ ಘಟ್ಟಿಸೆ… ಪುಟ್ಟಿದ ಕೆಂಡದ ಕಿಡಿಯ ತಂಡ… ಎಣ್ಟುಮ್ ದೆಸೆಯಮ್ ಪುದಿಯೆ… ಪದಧೂಳಿ ಗಗನದೊಳ್ ಒದವೆ… ಸುರರ್ ಬೆದರೆ… ಕಡುಗಲಿಗಳ್ ಕಾದಿದರ್=ಬೀಮ ದುರ‍್ಯೋದನರ ಗದೆಗಳ ಪರಸ್ಪರ ತಾಡನದಿಂದ ಹುಟ್ಟಿದ ಕೆಂಡದ ಕಿಡಿಗಳು ಎಂಟು ದಿಕ್ಕಿನಲ್ಲಿಯೂ ತುಂಬಿಕೊಳ್ಳಲು… ಬೀಮ ದುರ‍್ಯೋದನರು ಯುದ್ದ ಮಾಡುತ್ತ ಅತ್ತಿತ್ತ ಅಡಿಗಳನ್ನಿಡುತ್ತಿರುವಾಗ, ಅವರ ಪಾದಗಳ ತುಳಿತದಿಂದ ದೂಳು ಮೇಲೇರುತ್ತಿರಲು… ಬಯಾನಕವಾದ ಈ ಗದಾಯುದ್ದವನ್ನು ನೋಡನೋಡುತ್ತ ದೇವತೆಗಳು ಹೆದರಿಕೆಯಿಂದ ನಡುಗುತ್ತಿರಲು… ಕಡುಗಲಿಗಳಾದ ಬೀಮ ದುರ‍್ಯೋದನರು ಪರಾಕ್ರಮದಿಂದ ಕಾದಾಡುತ್ತಿದ್ದರು; ಗದಾಯುದ್ದದಲ್ಲಿ ತೊಡಗಿರುವ ಬೀಮ ಮತ್ತು ದುರ‍್ಯೋದನರ ಮಯ್ ಮೇಲೆ ಬೀಳುತ್ತಿರುವ ಗದೆಯ ಹೊಡೆತದಿಂದ ಉಂಟಾದ ಗಾಯಗಳಿಂದ ನೆತ್ತರು ಹರಿಯುತ್ತಿರುವುದನ್ನು ರೂಪಕದ ನುಡಿಗಳ ಮೂಲಕ ಕವಿಯು ಚಿತ್ರಿಸಿದ್ದಾನೆ;

ವಾರಣ=ಆನೆ; ಸಿಕ್ತ= ತೊಯ್ದ/ ನೆನೆದ/ ಒದ್ದೆಯಾದ; ಮೃಗರಾಜ=ಸಿಂಹ; ಯುಗ=ಜೋಡಿ/ಎರಡು; ಎಣೆ=ಸಾಟಿ/ಸಮ;

ವಾರಣ ರಕ್ತಸಿಕ್ತ ಮೃಗರಾಜಯುಗಕ್ಕೆ ಎಣೆ=ಆನೆಯೊಂದನ್ನು ಬೇಟೆಯಾಡುತ್ತಿರುವಾಗ ಆನೆಯ ನೆತ್ತರಿನಲ್ಲಿ ತೊಯ್ದಿರುವ ಎರಡು ಸಿಂಹಗಳಿಗೆ ಸಾಟಿ ಎನ್ನುವಂತೆ;

ನವ=ಹೊಸ; ಪ್ರಸೂನ=ಹೂವು; ನವಸೂನ=ಆಗ ತಾನೆ ಅರಳಿದ ಹೂವು; ರಾಗ=ಬಣ್ಣ; ಅರುಣ=ಕೆಂಪುಬಣ್ಣ; ಕಿಂಶುಕ=ಮುತ್ತುಗದ ಮರ; ದ್ರುಮ=ಮರ;

ನವಪ್ರಸೂನ ರಾಗ ಅರುಣ ಕಿಂಶುಕ ದ್ರುಮಯುಗಕ್ಕೆ ಎಣೆ=ಆಗ ತಾನೇ ಅರಳಿರುವ ಕೆಂಪನೆಯ ಬಣ್ಣದ ಹೂಗಳಿಂದ ಕಂಗೊಳಿಸುತ್ತಿರುವ ಎರಡು ಮುತ್ತುಗದ ಮರಗಳಿಗೆ ಸಾಟಿ ಎನ್ನುವಂತೆ;

ಧಾತು=ಕೆಂಪುಬಣ್ಣದ ಕಲ್ಲು; ಸಧಾತು=ಕೆಂಪುಬಣ್ಣದಿಂದ ಕೂಡಿರುವ ಕಲ್ಲು; ಕುಭೃತ್=ಬೆಟ್ಟ;

ಸಧಾತು ಕುಭೃತ್ ಯುಗಕ್ಕೆ ಎಣೆ=ಕೆಂಪು ಬಣ್ಣದ ಕಲ್ಲು ಬಂಡೆಗಳಿಂದ ಕೂಡಿರುವ ಎರಡು ಬೆಟ್ಟಗಳಿಗೆ ಸಮ ಎನ್ನುವಂತೆ;

ಸಿಂದೂರಿತ=ಕೇಸರಿ ಬಣ್ಣದಿಂದ ಕೂಡಿದ; ಗಂಧ=ಶ್ರೀಗಂದದ ಮರದ ಕೊರಡನ್ನು ನೀರಿನಲ್ಲಿ ತೇದಾಗ, ನಸುಗೆಂಪುಬಣ್ಣದ ಹಸಿಯಾದ ಗಂದ ದೊರೆಯುತ್ತದೆ. ಅದನ್ನು ಹಣೆಗೆ ಮತ್ತು ತೋಳುಗಳಿಗೆ ಬೊಟ್ಟನ್ನಾಗಿ ಇಟ್ಟುಕೊಳ್ಳಲಾಗುತ್ತದೆ; ಸಿಂಧುರ=ಆನೆ; ಸಿಂಧುರಯುಗ=ಎರಡು ಆನೆಗಳು;

ಸಿಂದೂರಿತ ಗಂಧ ಸಿಂಧುರಯುಗಕ್ಕೆ ಎಣೆ ಎಂಬಿನಮ್=ಕೇಸರಿಬಣ್ಣದಿಂದ ಕೂಡಿ ಸಿರಿಗಂದದ ಲೇಪನವನ್ನು ಬಳಿದುಕೊಂಡಿರುವ ಎರಡು ಆನೆಗಳಿಗೆ ಸಾಟಿ ಎನ್ನುವಂತೆ;

ರುದಿರ+ಅಕ್ತ+ಮೂರ್ತಿಗಳ್; ರುದಿರ=ರಕ್ತ/ನೆತ್ತರು; ಅಕ್ತ=ಬಳಿದ/ಲೇಪಿಸಿದ; ಮೂರ್ತಿ=ದೇಹ/ಶರೀರ; ಅಣ್ಮು=ಪರಾಕ್ರಮ;

ರುಧಿರಾಕ್ತಮೂರ್ತಿಗಳ್ ಕೌರವರಾಜನುಮ್ ಕುರುಕುಲಾಂತಕನುಮ್ ಅಣ್ಮಿ ಕಾದಿದರ್=ನೆತ್ತರು ಮೆತ್ತಿಕೊಂಡಿರುವ ದುರ‍್ಯೋದನನು ಮತ್ತು ಬೀಮಸೇನನು ಪರಾಕ್ರಮದಿಂದ ಹೋರಾಡುತ್ತಿದ್ದಾರೆ; ಇದುವರೆಗೆ ಯಾವ ಮಾತನ್ನು ಆಡದೆ ಗದಾಯುದ್ದದಲ್ಲಿ ತೊಡಗಿದ್ದ ದುರ‍್ಯೋದನ ಮತ್ತು ಬೀಮಸೇನರು ಗದೆಯಿಂದ ಅಪ್ಪಳಿಸುವುದಕ್ಕೆ ಮುನ್ನ ಒಬ್ಬ ಮತ್ತೊಬ್ಬನನ್ನು ಹಂಗಿಸುತ್ತ ಹೊಡೆಯತೊಡಗುತ್ತಾರೆ; ಮೊದಲು ದುರ‍್ಯೋದನನು ಬೀಮಸೇನನನ್ನು ಹಂಗಿಸುತ್ತ ಹೊಡೆಯುತ್ತಾನೆ;

ಕರಿ=ಆನೆ; ನುಂಗು=ಕೊಲ್ಲು; ಕಳಿಂಗ=ಕಳಿಂಗ ದೇಶದ ರಾಜ ಬಗದತ್ತ; ನೊಣೆ=ನುಂಗು/ಕಬಳಿಸು/ನಾಶಮಾಡು;

ಕರಿಯಮ್ ನುಂಗಿ ಕಳಿಂಗನನ್ ನೊಣೆದ ದರ್ಪಕ್ಕೆ ಒಂದುಗೊಳ್=ಕುರುಕ್ಶೇತ್ರ ರಣರಂಗದಲ್ಲಿ ಆನೆಯನ್ನು ಕೊಂದು ಕಳಿಂಗ ದೇಶದ ರಾಜ ಬಗದತ್ತನನ್ನು ಬಲಿತೆಗೆದುಕೊಂಡ ಸೊಕ್ಕಿಗೆ ಈ ಒಂದು ಹೊಡೆತವನ್ನು ತಿನ್ನು;

ಮತ್=ನನ್ನ;

ಮತ್ ಸಹೋದರರಮ್ ಕೋಪದೆ ತಿಂದುದರ್ಕೆ ಎರಡುಗೊಳ್=ನನ್ನ ತಮ್ಮಂದಿರನ್ನು ಕೋಪದಿಂದ ಕೊಂದುದಕ್ಕೆ ಎರಡು ಹೊಡೆತವನ್ನು ತಿನ್ನು;

ಉರಸ್ಸ್ಥಳ=ಎದೆಯ ಬಾಗ; ಕ್ಷರತ್=ಚಿಮ್ಮುತ್ತಿರುವ; ಅಸ್ರ+ಅಂಬು+ಅನ್; ಅಸ್ರ=ರಕ್ತ; ಅಂಬು=ನೀರು; ಅಸ್ರಾಂಬು=ನೆತ್ತರಿನ ಕೋಡಿ; ಆರ್=ತಣಿ; ಮುಳಿಸು=ಕೋಪ/ಆಕ್ರೋಶ; ಮಚ್ಚರ=ಹೊಟ್ಟೆಕಿಚ್ಚು; ಓವು=ದಯೆ/ಕರುಣೆ; ಓವದೆ=ಕರುಣೆಯಿಲ್ಲದೆ;

ದುಶ್ಶಾಸನ ಉರಸ್ಸ್ಥಳ ಕ್ಷರತ್ ಅಸ್ರಾಂಬುವನ್ ಆರ್ದು ಪೀರ್ದ ಮುಳಿಸಿಂಗಮ್ ಮೂರುಗೊಳ್ಳ್ ಎಂದು ಮಚ್ಚರದಿಂದೆ ಓವದೆ ದುರ್ಯೋಧನನ್ ಗದೆಯಮ್ ಎತ್ತಿ ಭೀಮನನ್ ಪೊಯ್ದನ್=ನನ್ನ ತಮ್ಮನಾದ ದುಶ್ಶಾಸನನ ಎದೆಯನ್ನು ಸೀಳಿದಾಗ ಚಿಮ್ಮಿದ ನೆತ್ತರಿನ ಕೋಡಿಯನ್ನು ಮನ ತಣಿಯುವ ತನಕ ಕುಡಿದ ನಿನ್ನ ಆಕ್ರೋಶಕ್ಕೆ ಮೂರು ಹೊಡೆತವನ್ನು ತಿನ್ನು ಎನ್ನುತ್ತ ದುರ‍್ಯೋದನನು ಹೊಟ್ಟೆಕಿಚ್ಚಿನಿಂದ ಆಕ್ರೋಶಗೊಂಡು ಗದೆಯನ್ನು ಎತ್ತಿ ಬೀಸುತ್ತ ಬೀಮನನ್ನು ಹೊಡೆದನು;

ಎಂದು ಮುಟ್ಟಿ ಮೂದಲಿಸೆ=ಈ ರೀತಿ ದುರ‍್ಯೋದನನು ಬೀಮಸೇನನ ಮನಸ್ಸು ಗಾಸಿಗೊಳ್ಳುವಂತೆ ಹಂಗಿಸುತ್ತ ಹೊಡೆಯಲು, ಅದಕ್ಕೆ ಪ್ರತಿಯಾಗಿ ಬೀಮಸೇನನು ದುರ‍್ಯೋದನನು ಇದುವರೆಗೂ ಪಾಂಡವರಾದ ತಮಗೆ ಮಾಡಿದ್ದ ಕಪಟತನದ, ಅಪಮಾನದ ಮತ್ತು ಕೇಡಿನ ಕೆಲಸಗಳೆಲ್ಲವನ್ನೂ ಎತ್ತಿ ಆಡುತ್ತ ಗದೆಯಿಂದ ಅಪ್ಪಳಿಸತೊಡಗುತ್ತಾನೆ;

ಲಾಕ್ಷಾಗೇಹ=ಅರಗಿನ ಮನೆ; ದಾಹ=ಕಿಚ್ಚು/ಬೆಂಕಿ;

ಇದು ಲಾಕ್ಷಾಗೇಹದಾಹಕ್ಕೆ=ಈ ನನ್ನ ಗದೆಯ ಹೊಡೆತವು ಅಂದು ನೀನು ನಮ್ಮನ್ನು ಅರಗಿನ ಮನೆಯಲ್ಲಿ ಸುಡಲು ಮಾಡಿದ್ದ ಸಂಚಿಗೆ;

ಇದು ವಿಷಮ ವಿಷಾನ್ನಕ್ಕೆ=ಈ ಹೊಡೆತವು ಅಂದು ಚಿಕ್ಕಂದಿನಲ್ಲಿ ನನಗೆ ವಿಶದ ಲಡ್ಡುಗೆಗಳನ್ನು ತಿನ್ನಿಸಿ ಸಾಯಿಸಲು ಪ್ರಯತ್ನಿಸಿದ್ದಕ್ಕೆ;

ನಾಡಿ=ಸಂಚು/ಮೋಸ; ಜೂದು= ಜೂಜು/ಪಣವನ್ನಿಟ್ಟು ಆಡುವ ಪಂದ್ಯ;

ಇದು ಆ ನಾಡ ಜೂದಿಂಗೆ=ಈ ಹೊಡೆತವು ಅಂದು ಹಸ್ತಿನಾವತಿಗೆ ನಮ್ಮನ್ನು ಕರೆಸಿಕೊಂಡು ಶಕುನಿಯೊಡನೆ ಕೂಡಿಕೊಂಡು ಅಣ್ಣ ದರ್‍ಮರಾಯನನ್ನು ಜೂಜಿಗೆ ಕರೆದು, ನಮ್ಮೆಲ್ಲ ಸಂಪತ್ತನ್ನು ಅಪಹರಿಸಿದ ಮೋಸದ ಪಗಡೆಯಾಟಕ್ಕೆ;

ಪಾಂಚಾಲೀ=ಪಾಂಚಾಲ ದೇಶದ ರಾಜ ದ್ರುಪದನ ಮಗಳು/ದ್ರೌಪದಿ; ಪ್ರಪಂಚ=ಸಂಗತಿ;

ಇದು ಪಾಂಚಾಲೀ ಪ್ರಪಂಚಕ್ಕೆ=ಈ ಹೊಡೆತವು ಅಂದು ಜೂಜಿನ ಸನ್ನಿವೇಶದಲ್ಲಿ ದರ್‍ಮರಾಯನು ದ್ರೌಪದಿಯನ್ನು ಪಣವಾಗಿ ಒಡ್ಡಿ ಸೋತ ನಂತರ, ನಿನ್ನ ಆಜ್ನೆಯಂತೆ ದುಶ್ಶಾಸನನು ರಾಣಿವಾಸದ ಕೊಟಡಿಯಲ್ಲಿದ್ದ ದ್ರೌಪದಿಯ ಮುಡಿ ಹಿಡಿದು ರಾಜಸಬೆಗೆ ಎಳೆ ತಂದು, ದ್ರೌಪದಿಯ ಸೀರೆಯನ್ನು ಸುಲಿದು ಅಪಮಾನ ಮಾಡಿದ್ದಕ್ಕಾಗಿ;

ಕೃತಕ=ನಿರ್‍ಮಾಣ/ರಚನೆ; ಸಭಾ+ಆಲೋಕನ; ಆಲೋಕನ=ನೋಡುವುದು; ಭ್ರಾಂತಿ=ಹುಚ್ಚು/ಉನ್ಮಾದ;

ಇದು ಕೃತಕ ಸಭಾಲೋಕನ ಭ್ರಾಂತಿಗೆ ಎಂದು=ಪಾಂಡವರು ಇಂದ್ರಪ್ರಸ್ತದಲ್ಲಿ ಮಯನಿಂದ ನಿರ್‍ಮಿತವಾದ ಸುಂದರ ಅರಮನೆಯಂತೆಯೇ ದುರ‍್ಯೋದನನು ತಾನು ಕೂಡ ಒಂದು ಅರಮನೆಯನ್ನು ನಿರ್‍ಮಿಸಿ, ಪಾಂಡವರನ್ನು ಅದನ್ನು ನೋಡಲು ಬನ್ನಿರೆಂದು ಕರೆಸಿ, ಜೂಜಿಗೆ ಎಳೆದು ವಂಚನೆಯನ್ನು ಮಾಡಿದ ತಪ್ಪು ನಡೆಗೆ… ಎಂದು ಹಂಗಿಸಿ ನುಡಿಯುತ್ತ;

ಅಗಲ್+ಉರಮ್+ಅಮ್; ಉರ=ಎದೆ; ಅಗಲುರ=ಅಗಲವಾದ ಎದೆ; ನೆತ್ತಿ=ತಲೆ; ದುರ್ನಯ=ಕೆಟ್ಟ ನಡೆನುಡಿ; ಉರು=ದೊಡ್ಡ/ಉತ್ತಮವಾದ;

ಕಾಲ್ಗಳಮ್… ತೋಳ್ಗಳಮ್… ಅಗಲುರಮಮ್… ಕೆನ್ನೆಯಮ್… ನೆತ್ತಿಯಮ್ ಅಯ್ದುಮ್ ದುರ್ನಯಕ್ಕೆ ಅಯ್ದು ಎಡೆಯನ್ ಭೀಮಸೇನನ್ ಕೋಪದಿನ್ ಉರು ಗದಾದಂಡದಿಮ್ ಓವದೆ ಪೊಯ್ದನ್= ಬೀಮಸೇನನು ದುರ‍್ಯೋದನನ ಅಯ್ದು ಬಗೆಯ ಕೆಟ್ಟ ನಡೆನುಡಿಗಳಿಗೆ ಒಂದೊಂದರಂತೆ ಅವನ ಕಾಲುಗಳನ್ನು… ತೋಳುಗಳನ್ನು… ಅಗಲವಾದ ಎದೆಯನ್ನು… ಕೆನ್ನೆಯನ್ನು… ತಲೆಯ ನೆತ್ತಿಯನ್ನು… ಈ ಆಯ್ದು ಎಡೆಗಳನ್ನು ಗುರಿಮಾಡಿಕೊಂಡು ಕೋಪದಿಂದ ತನ್ನ ದೊಡ್ಡ ಗದಾದಂಡದಿಂದ ಕರುಣೆಯನ್ನು ತೋರಿಸದೆ ದುರ‍್ಯೋದನನಿಗೆ ಹೊಡೆದನು;

ಚರಣ+ಆಕ್ರಾಂತಮ್; ಚರಣ=ಪಾದ; ಆಕ್ರಾಂತ= ದಾಳಿಗೆ ಗುರಿಯಾದುದ್ದು/ಆಕ್ರಮಿಸಲ್ಪಟ್ಟ; ಮಹೀಮಂಡಲ=ಬೂಮಂಡಲ; ಅದಿರ್=ನಡುಗು/ಕಂಪಿಸು;

ಚರಣಾಕ್ರಾಂತಮ್ ಮಹೀಮಂಡಲಮ್ ಅದಿರೆ=ಗದಾಯುದ್ದದಲ್ಲಿ ತೊಡಗಿರುವ ಬೀಮ ದುರ‍್ಯೋದನರ ಪಾದಗಳ ತುಳಿತಕ್ಕೆ ಬೂಮಂಡಲವು ನಡುಗಲು;

ಭುಜ+ಆಕ್ರಾಂತಮ್; ಆಶಾಗಜೇಂದ್ರ=ದಿಕ್ಕನ್ನು ಹೊತ್ತಿರುವ ಗಂಡಾನೆ; ಉತ್ಕರ=ಗುಂಪು/ಸಮೂಹ; ಆಶಾಭಿತ್ತಿ+ಇಂದಮ್; ಆಶಾಭಿತ್ತಿ=ದಿಕ್ಕಿನ ಗೋಡೆ; ಪೆರದೆಗೆ=ಹಿಂಜರಿ/ಹಿಮ್ಮೆಟ್ಟು;

ಭುಜಾಕ್ರಾಂತಮ್ ಆಶಾಗಜೇಂದ್ರ ಉತ್ಕರಮ್ ಆಶಾಭಿತ್ತಿಯಿಂದಮ್ ಪೆರದೆಗೆಯೆ=ಬೀಮ ದುರ‍್ಯೋದನರ ಬುಜಬಲದ ಆಕ್ರಮಣಕ್ಕೆ ಎಂಟು ದಿಕ್ಕುಗಳನ್ನು ಹೊತ್ತಿರುವ ಸಲಗಗಳ ಗುಂಪು ಹೊರೆಯನ್ನು ಕಳಚಿಕೊಂಡು ದಿಕ್ಕುಗಳ ಗೋಡೆಗಳ ಅಂಚಿನಿಂದ ಹಿಮ್ಮೆಟ್ಟಲು; ಬೂಮಂಡಲದ ಎಂಟು ದಿಕ್ಕುಗಳನ್ನು ಎಂಟು ಗಂಡಾನೆಗಳು ಹೊತ್ತುಕೊಂಡಿವೆ ಎಂಬ ಕಲ್ಪನೆಯು ಜನಮನದಲ್ಲಿದೆ;

ಗದಾ+ಆಕ್ರಾಂತಮ್; ಗದಾಕ್ರಾಂತಮ್= ಗದೆಗಳ ಡಿಕ್ಕಿಯಿಂದ; ಉದ್ಭ್ರಾಂತ=ಗಾಬರಿಗೊಂಡ; ಚಕ್ರ=ಸಮೂಹ/ಗುಂಪು; ವಿದ್ಯಾಧರ= ದೇವತೆಗಳಲ್ಲಿ ಒಂದು ಪಂಗಡದವರನ್ನು ಈ ಹೆಸರನಿಂದ ಗುರುತಿಸಲಾಗುತ್ತದೆ; ನಿಜ=ತಮ್ಮ; ಗೆಂಟುಗೆಂಟಾಗಿ+ಇರಿಸೆ; ಗೆಂಟು=ದೂರ/ಅಂತರ; ಗೆಂಟುಗೆಂಟಾಗಿರಿಸೆ=ದೂರದೂರದಲ್ಲಿ ನಿಲ್ಲಿಸಿಕೊಳ್ಳಲು;

ಗದಾಕ್ರಾಂತಮ್ ಉದ್ಭ್ರಾಂತ ವಿದ್ಯಾಧರಚಕ್ರಮ್ ನಿಜವಿಮಾನಂಗಳಮ್ ಗೆಂಟುಗೆಂಟಾಗಿರಿಸೆ=ಬೀಮ ದುರ‍್ಯೋದನರು ಗದೆಗಳನ್ನು ಕುಶಲತೆಯಿಂದ ಬೀಸುತ್ತ ಹೊಡೆದಾಡುತ್ತಿರುವಾಗ ಕೇಳಿಬರುತ್ತಿರುವ ಶಬ್ದ ಮತ್ತು ಹಾರಿಬರುತ್ತಿರುವ ಕಿಡಿಗಳಿಂದ ಗಾಬರಿಗೊಂಡ ವಿದ್ಯಾದರರೆಂಬ ದೇವತೆಗಳ ಗುಂಪು ಗಗನ ಮಂಡಲದಲ್ಲಿದ್ದ ತಮ್ಮ ವಿಮಾನಗಳನ್ನು ಕಿಡಿಗಳು ತಾಕದಂತೆ ದೂರದಲ್ಲಿ ನಿಲ್ಲಿಸಿಕೊಂಡರು;

ಕಲ್ಪಾಂತಕಾಲ=ಪ್ರಳಯ ಕಾಲ; ಭೈರವ=ಶಿವನು ರುದ್ರವಾದ ರೂಪವನ್ನು ತಳೆದಾಗ ಈ ಹೆಸರಿನಿಂದ ಕರೆಯುತ್ತಾರೆ; ಆಡಂಬರ=ಮೆರೆತ; ನೆಗಳ್=ಉಂಟಾಗು/ಹೆಸರುವಾಸಿಯಾಗು;

ಆ ಕಲ್ಪಾಂತಕಾಲಮ್ ಭೈರವ ಆಡಂಬರಮ್ ಭೀಮ ದುರ್ಯೋಧನೀಯಮ್ ಸಮರಮ್ ನೆಗಳ್ದುದು=ಪ್ರಳಯಕಾಲದಲ್ಲಿ ಇಡೀ ಜಗತ್ತನ್ನು ನಾಶಮಾಡಲೆಂದು ಶಿವನು ರುದ್ರರೂಪವನ್ನು ತಳೆದು ಅಬ್ಬರಿಸುತ್ತ ಮೆರೆಯುವಂತೆ ಬೀಮ ದುರ‍್ಯೋದನರ ಗದಾಯುದ್ದ ನಡೆಯತೊಡಗಿತು;

ನೆಲಸು=ಸ್ತಿರವಾಗಿರುವ/ನೆಲೆಗೊಂಡಿರುವ ; ಬಿನ್ನಣ=ನಿಪುಣತೆ/ಕುಶಲತೆ ; ಸೆಣಸು=ಕಾದಾಡು/ಹೋರಾಡು;

ನೆಲಸಿದ ಬಿನ್ನಣಮ್ ಸೆಣಸಿ ಬಿನ್ನಣಮಮ್ ಗೆಲೆ=ಬೀಮ ದುರ‍್ಯೋದನರ ಕಾದಾಟದಲ್ಲಿ ಗದಾವಿದ್ಯೆಯು ನಿಪುಣತೆಯು ನಿಪುಣತೆಯನ್ನು ಗೆಲ್ಲಲು;

ಕಾಣ್ಕೆ=ನೋಟ;

ಕಾಣ್ಕೆ ಕಾಣ್ಕೆಯಮ್ ಗೆಲೆ=ಗದಾವಿದ್ಯೆಯಲ್ಲಿ ಪಡೆದಿರುವ ಪರಿಣತಿಯು ಪರಿಣತಿಯನ್ನು ಗೆಲ್ಲಲು;

ಜವ=ವೇಗ;

ಜವಮಮ್ ಜವಮ್ ಗೆಲೆ=ಗದೆಗಳನ್ನು ಬೀಸುತ್ತಿರುವ ವೇಗವು ವೇಗವನ್ನು ಗೆಲ್ಲಲು;

ಬಲಮ್ ಬಲಮಮ್ ಗೆಲೆ=ಗದೆಗಳನ್ನು ಬೀಸುತ್ತಿರುವ ಶಕ್ತಿಯು ಶಕ್ತಿಯನ್ನು ಗೆಲ್ಲಲು;

ದಂಡೆ=ದ್ವಂದ್ವ ಯುದ್ದದಲ್ಲಿ ತೊಡಗಿದ ಕಲಿಗಳು ತೋರಿಸುವ ಹೋರಾಟದ ಒಂದು ವರಸೆ;

ದಂಡೆ ದಂಡೆಯಮ್ ಗೆಲೆ=ಗದೆಗಳನ್ನು ತಿರುಗಿಸುತ್ತ ತೋರಿಸುತ್ತಿರುವ ವರಸೆಯು ವರಸೆಯನ್ನು ಗೆಲ್ಲಲು;

ಮುಳಿಸು=ಕೋಪ; ಉಣ್ಮು=ಉಕ್ಕಿಬರು; ಪೊಣ್ಮು=ಹೊರಹೊಮ್ಮು;

ಮುಳಿಸು ಉಣ್ಮಿ ಪೊಣ್ಮಿ ಮುಳಿಸಮ್ ಗೆಲೆ=ಉಕ್ಕಿಬಂದು ಹೊರಹೊಮ್ಮಿದ ಕೋಪವು ಕೋಪವನ್ನು ಗೆಲ್ಲಲು;

ಸತ್ತ್ವ=ಕೆಚ್ಚು/ಮನೋಬಲ; ಅಳುರ್ಕೆ=ಹೆಚ್ಚಳ/ಅತಿಶಯ;

ಸತ್ತ್ವದ ಅಳುರ್ಕೆ ಸತ್ತ್ವಮಮ್ ಗೆಲೆ=ಇಬ್ಬರಲ್ಲಿಯೂ ಇರುವ ಕೆಚ್ಚಿನ ಅತಿಶಯತೆಯು ಕೆಚ್ಚನ್ನು ಗೆಲ್ಲಲು;

ಆರ್=ಶಕ್ತವಾಗು; ಆರ್ತರ್=ಶಕ್ತರು;

ಕುರು ಪಾಂಡುತನೂಭವರ್ ಒರ್ವರ್ ಒರ್ವರಮ್ ಗೆಲಲ್ ಆರ್ತರಿಲ್ಲ= ಕುರುಕುಲದ ದುರ‍್ಯೋದನ ಮತ್ತು ಪಾಂಡುರಾಜನ ಮಗ ಬೀಮಸೇನ-ಇಬ್ಬರೂ ಗದಾವಿದ್ಯೆಯ ನಿಪುಣತೆಯಲ್ಲಿ ಸಮಬಲರಾದ್ದರಿಂದ , ಒಬ್ಬರು ಮತ್ತೊಬ್ಬರ ಮೇಲೆ ಗೆಲುವನ್ನು ಪಡೆಯಲು ಶಕ್ತರಾಗಲಿಲ್ಲ;

(ಚಿತ್ರ ಸೆಲೆ: jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *