ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 3

– ಸಿ.ಪಿ.ನಾಗರಾಜ.

*** ಕೀಚಕನ ಪ್ರಸಂಗ: ನೋಟ – 3 ***

ಹೂಣೆ ಹೊಕ್ಕುದು. ಆಕೆಯ ಮಾತಿನಲಿ ವಿರಹದ ಆಸೆಯ ಕಾಣೆನು. ಮುಂಗಾಣಿಕೆಯಲೇ ಮನದ ಸರ್ವಸ್ವ ಸೂರೆ ಹೋದುದು. ತ್ರಾಣ ಸಡಿಲಿತು. ಬುದ್ಧಿ ಕದಡಿ ಕೃಪಾಣಪಾಣಿ ವಿರಾಟರಾಯನ ರಾಣಿಯ ಅರಮನೆಗೆ ಐದಿದನು. ನಿಜಾಗ್ರಜೆಯ ಕಂಡನು. ಹಣೆಯನು ಅಂಘ್ರಿಗೆ ಚಾಚಲು, ಎತ್ತಿದಳು. ಅಣಕಿಗನ ತೆಗೆದು ಅಪ್ಪಿ…

ಸುದೇಷ್ಣೆ: ಮದವಾರಣನೆ ಕುಳ್ಳಿರು. (ಎನುತ್ತ ಆ ಸಹೋದರನ ನೋಡಿದಳು. ಹೆಣ ಮುಸುಡು ಬಿದ್ದಿದೆ. ತನ್ನಲ್ಲಿಯೇ…) ಕಡುಪಾಪಿ, ಲತಾಂಗಿಯ ಕೆಣಕಿದನೊ…ವಂಶವ ಹಣಿದವಾಡದೆ ಮಾಣನು… ಏಗುವೆನು. (ಎನುತ ಮರುಗಿದಳು.)

ಸುದೇಷ್ಣೆ: ನಿಜಾಕಾರ ಕುಲಶಿರೋಮಣಿ, ಅಗ್ಗದ ಮಹಿಮೆ ಅಳುಕಿತು. ಮುಸುಡಿನ ಬೆಳಕು ಕಂದಿತು. ಬಹಳ
ಚಿಂತಾಜಲಧಿಯೊಳಗೆ ಅದ್ದಂತೆ ಸೊಂಪು ಅಡಗಿತು. ಹೇಳು ಚಿತ್ತದ ನೆಲೆಯನು.

ಕೀಚಕ: (ನಸುನಾಚಿ) ಮದನನ ಹಿಳುಕು ಸುಮತಿಯ ಸೀಳೆ ಬಳಿಕ ಇಂತು.

(ಎಂದನು ಅವ ನಗುತ)

ಬೇರೆ ಬಿನ್ನಹವೇನು. ನಿನ್ನ ಓಲಗದ ಸತಿಯರಲಿ ಅವಳು, ಸತಿಯರ ನೂರು ಮಡಿ ಚೆಲುವಿನಲಿ ಚಿತ್ತವ ಸೂರೆಗೊಂಡಿಹಳು. ಮದನಂಗೆ ಮಾರಿದಳು. ಜೀವಸಲಾರೆನು. ಆಕೆಯನು ಒಳಗುಮಾಡಿಸಿ ತೋರಿದಡೆ, ತನ್ನ ಒಡಲೊಳು ಅಸುವಿಂಗೆ ನಿರ್ವಾಹ ಅಹುದು.

ಸುದೇಷ್ಣೆ: ಕೀರ್ತಿಲತೆ ಕುಡಿಯೊಣಗಿತೈ. ಮದನಾರ್ತನಾದೈ. ಕುಲಕೆ ಕಾಲನ ಮೂರ್ತಿ ನೀನು ಅವತರಿಸಿದೈ. ಕುಲವ ಸಂಹರಿಸಿದೈ.
ಸ್ಫೂರ್ತಿಗೆಡೆ ಮನುಜರಿಗೆ ರಾವಣನ ಅರ್ತಿಯಪ್ಪುದನು ಅರಿಯಲಾ. ಕಡುಧೂರ್ತತನಕೆ ಅಂಜುವೆನು.

(ಎನುತ ನಳಿನಾಕ್ಷಿ ನಡುಗಿದಳು.)

ಪರವಧುವಿನಲಿ ಬೇಟವೇ… ಪರವಿತ್ತದಲಿ ಕೈಮಾಟವೇ… ರಾಜಪುತ್ರರಿಗೆ ಕದನದಲಿ ತೆಗೆದೋಟವೇ… ಆಟವಿಕರ ಒಡನಾಡಿ ಕಲಿತು ವಿರಾಟನನು ಕೊಲಲು ಎಣಿಸಿದೈ. ಗುಣವೇ, ನಿನ್ನ ಆಟಕೆ ಅಂಜುವೆನು. (ಎನುತ ತರಳಾಕ್ಷಿ ಮುಖದಿರುಹಿದಳು.) ಅವಳ ಗಂಡರು ಸುರರು. ಸುರರಿಗೆ ನವಗೆ ಅದು ಆವ ಅಂತರವು. ಮುಳಿದೊಡೆ ದಿವಿಜ ದಳಕೆ ಇದಿರಾರು. ನಮ್ಮನು ಅದಾರು ಕಾವವರು. ಅವಳ ತೊಡಕೇ ಬೇಡ. ಸತಿಯರ ನಿವಹದಲಿ ನೀನು ಆರ ಬಯಸಿದಡೆ ಅವಳ ನಾ ಮುಂದಿಟ್ಟು ಮದುವೆಯನು ಒಲಿದು ಮಾಡುವೆನು.

ಕೀಚಕ: ಮರುಳೌ ಅಕ್ಕ, ಚಿತ್ತವು ಅವಳಲಿ ಸಿಕ್ಕಿ ಬೇರ್ವರಿಯಿತ್ತು. ಮನವ ಬೇರೆ ಇರಿಸಿ ಬರಿದೇ ಮಿಕ್ಕ ಡಿಂಬಕೆ ಮದುವೆಯುಂಟೇ. ಮಕ್ಕಳಾಟಿಕೆಯಾದಡೆ ಆಗಲಿ. ತಕ್ಕರು ಅಲ್ಲ ಎಂದು ಎನಲಿ. ಸಲಹುವಡೆ ಅಕ್ಕ, ತನಗೆ ಸೈರಂಧ್ರಿಯನು ಸೇರಿಸಬೇಕು. ಇತರರ ಮಾತು ಸೊಗಸದು. ಮಿಕ್ಕವರ ರೂಹನು ಕಣ್ಣುಗಳು ಒಗಡುವವು. ಉಳಿದವರ ನಾಮಗಳು ನಾಲಿಗೆಗೆ ಹಗೆಗಳು ಆಗಿಹವು. ಸೆಗಳಿಕೆಯ ಸಸಿಯಾದೆನು. ಎನ್ನಯ ಬಗೆಯ ಸಲಿಸೌ. ಹರಿದ ಕರುಳಿನ ಮೃಗದ ಮರಿಯನು ಸಲಹಬೇಕು.

(ಎಂದು ಪದಕೆ ಎರಗಿದನು. ಆಲಿ ನೀರೇರಿದವು. ತಮ್ಮನ ಮೇಲೆ ಮೋಹ ತಳಿತುದು. ಅಂಗನೆ ಕಾಲನ ಪಾಳಯಕೆ ಕೈಗೊಟ್ಟಳು. ಖಳನ ನೆಗಹಿದಳು.)

ಸುದೇಷ್ಣೆ: ಏಳು ಭವನಕೆ ಹೋಗು. ತರುಣಿಯ ನಾಳೆ ನಾ ಕಳುಹುವೆನು. ಪರಸತಿ ಮೇಳ ಲೇಸಲ್ಲ.

(ಎನುತ ನಿಜಾನುಜನ ಬೀಳ್ಕೊಟ್ಟಳು.)

ಪದವಿಂಗಡಣೆ ಮತ್ತು ತಿರುಳು

ಹೂಣು=ಪಡೆ/ಹೊಂದು; ಹೊಗು=ಒಳ ಸೇರು;

ಹೂಣೆ ಹೊಕ್ಕುದು=ಸೈರಂದ್ರಿಯೊಡನೆ ಕಾಮದ ನಂಟನ್ನು ಪಡೆಯಲೇಬೇಕೆಂಬ ಬಯಕೆಯು ಕೀಚಕನ ಮನದಲ್ಲಿ ನಾಟಿಕೊಂಡಿತು;

ವಿರಹ=ಅಗಲಿಕೆ; ಆಸೆ=ನಂಬಿಕೆ; ವಿರಹದ ಆಸೆ=ಅಗಲಿಕೆಯನ್ನು ನಿವಾರಿಸಿ ಜತೆಗೂಡುವ ನಂಬಿಕೆ;

ಆಕೆಯ ಮಾತಿನಲಿ ವಿರಹದ ಆಸೆಯ ಕಾಣೆನು=ಸೈರಂದ್ರಿಯಾಡಿದ ಮಾತಿನಲ್ಲಿ ಅವಳು ನನ್ನ ಜತೆಗೂಡುವ ಯಾವ ಆಸೆಯೂ ಕಂಡುಬರುತ್ತಿಲ್ಲ;

ಸರ್ವಸ್ವ=ಎಲ್ಲವೂ; ಮುಂಗಾಣಿಕೆ=ಮೊದಲ ನೋಟ; ಸೂರೆ=ಲೂಟಿ/ಕೊಳ್ಳೆ;

ಮುಂಗಾಣಿಕೆಯಲೇ ಮನದ ಸರ್ವಸ್ವ ಸೂರೆ ಹೋದುದು=ಮೊದಲ ನೋಟದಲ್ಲಿಯೇ ಅವಳ ಮಯ್ ಮಾಟಕ್ಕೆ ನನ್ನ ಮನಸ್ಸೆಲ್ಲವೂ ಸೂರೆಗೊಂಡಿದೆ;

ತ್ರಾಣ=ಕಸುವು/ಶಕ್ತಿ;

ತ್ರಾಣ ಸಡಿಲಿತು=ಕಸುವು ಕುಗ್ಗಿತು/ಕಾಮದ ಒಳಮಿಡಿತಗಳಿಂದ ಕೀಚಕನು ತನ್ನ ಮಯ್ ಮನದ ಮೇಲಣ ಹತೋಟಿಯನ್ನು ಕಳೆದುಕೊಂಡನು;

ಕದಡು=ಕಳವಳ/ಗೊಂದಲ; ಬುದ್ಧಿ=ಅರಿವು/ಮನಸ್ಸು;

ಬುದ್ಧಿ ಕದಡಿ=ಏನನ್ನು ಮಾಡಬೇಕೆಂದು ತಿಳಿಯದೆ ಮನಸ್ಸು ಗೊಂದಲಕ್ಕೆ ಒಳಗಾಗಿ;

ಕೃಪಾಣ=ಕತ್ತಿ; ಪಾಣಿ=ಹಸ್ತ/ಕಯ್; ಕೃಪಾಣಪಾಣಿ=ಕಯ್ಯಲ್ಲಿ ಕತ್ತಿಯನ್ನು ಹಿಡಿದವನು; ವಿರಾಟರಾಯನ ರಾಣಿ=ವಿರಾಟರಾಯನ ಹೆಂಡತಿ ಸುದೇಶ್ಣೆ; ಐದು=ಆಗಮಿಸು/ಬರು;

ಕೃಪಾಣಪಾಣಿ ವಿರಾಟರಾಯನ ರಾಣಿಯ ಅರಮನೆಗೆ ಐದಿದನು=ಕಯ್ಯಲ್ಲಿ ಕತ್ತಿಯನ್ನು ಹಿಡಿದುಕೊಂಡೇ ಕೀಚಕನು ಸುದೇಶ್ಣೆಯ ರಾಣಿವಾಸಕ್ಕೆ ಬಂದನು;

ನಿಜ+ಅಗ್ರಜೆ; ನಿಜ=ತನ್ನ; ಅಗ್ರಜೆ=ಅಕ್ಕ;

ನಿಜಾಗ್ರಜೆಯ ಕಂಡನು=ತನ್ನ ಅಕ್ಕನಾದ ಸುದೇಶ್ಣೆಯನ್ನು ಕಂಡನು;

ಅಂಘ್ರಿ=ಪಾದ; ಚಾಚು=ಒಡ್ಡು/ಇಡು;

ಹಣೆಯನು ಅಂಘ್ರಿಗೆ ಚಾಚಲು=ಹಣೆಯನ್ನು ಅಕ್ಕನ ಪಾದಗಳ ಮೇಲಿಟ್ಟು ನಮಸ್ಕರಿಸಲು;

ಅಣಕಿಗ=ಪರಾಕ್ರಮಿ;

ಎತ್ತಿದಳು ಅಣಕಿಗನ ತೆಗೆದು ಅಪ್ಪಿ=ತನ್ನ ಪಾದಗಳಿಗೆ ನಮಸ್ಕರಿಸಿದ ಪರಾಕ್ರಮಿಯಾದ ತಮ್ಮನನ್ನು ಮೇಲಕ್ಕೆತ್ತಿ, ಪ್ರೀತಿಯಿಂದ ತಬ್ಬಿಕೊಂಡು;

ಮದ=ಸೊಕ್ಕು; ವಾರಣ=ಆನೆ; ಮದವಾರಣ=ಮಹಾಬಲಶಾಲಿ/ಮಹಾಪರಾಕ್ರಮಿ ಎಂಬ ರೂಪಕದ ತಿರುಳಿನಲ್ಲಿ ಬಳಕೆಗೊಂಡಿದೆ;

ಮದವಾರಣನೆ ಕುಳ್ಳಿರು ಎನುತ್ತ ಆ ಸಹೋದರನ ನೋಡಿದಳು=ಮಹಾಬಲಶಾಲಿಯೇ, ಕುಳಿತುಕೊ ಎಂದು ಸ್ವಾಗತಿಸುತ್ತ, ತನ್ನ ತಮ್ಮನ ಮೊಗವನ್ನು ನೋಡಿದಳು;

ಮುಸುಡು=ಮೋರೆ/ಮೊಗ/ಮುಕ; ಹೆಣ ಮುಸುಡು ಬೀಳು=ಇದೊಂದು ನುಡಿಗಟ್ಟು. ಹೆಣದ ಮೊಗ ಹೇಗೆ ಜೀವಬಾವವಿಲ್ಲದೆ ಕಳಾಹೀನವಾಗಿರುತ್ತದೆಯೋ ಅಂತೆಯೇ ವ್ಯಕ್ತಿಯು ತೀವ್ರವಾದ ಹೆದರಿಕೆ/ತಲ್ಲಣ/ಆತಂಕಕ್ಕೆ ಗುರಿಯಾದಾಗ ಮೊಗವು ಕಳಾಹೀನವಾಗುತ್ತದೆ;

ಹೆಣ ಮುಸುಡು ಬಿದ್ದಿದೆ=ಕೀಚಕನ ಮೊಗದಲ್ಲಿ ತುಸುವಾದರೂ ಜೀವಕಳೆಯಿಲ್ಲವಾಗಿದೆ; ತನ್ನಲ್ಲಿಯೇ=ಕೀಚಕನ ಕಳೆಗುಂದಿದ ಮೊಗವನ್ನು ನೋಡನೋಡುತ್ತಿದ್ದಂತೆಯೇ, ಅದಕ್ಕೆ ಕಾರಣವೇನೆಂಬುದನ್ನು ಅಕ್ಕ ಸುದೇಶ್ಣೆಯು ತನ್ನ ಮನದಲ್ಲಿಯೇ ಊಹಿಸಿಕೊಳ್ಳತೊಡಗುತ್ತಾಳೆ;

ಕಡು=ಬಹಳ/ಹೆಚ್ಚಿನ; ಪಾಪಿ=ಕೆಟ್ಟ ಕೆಲಸವನ್ನು ಮಾಡಿದವನು; ಲತಾಂಗಿ=ಬಳುಕುವ ಬಳ್ಳಿಯಂತಹ ದೇಹವನ್ನು ಉಳ್ಳವಳು/ಸುಂದರಿ; ಕೆಣಕು=ರೇಗಿಸು/ಕಾಮಕ್ಕಾಗಿ ಪೀಡಿಸು/ಕೆಟ್ಟ ರೀತಿಯಲ್ಲಿ ನಡೆದುಕೊಂಡು ಮತ್ತೊಬ್ಬರ ಮಯ್ ಮನವನ್ನು ಗಾಸಿಗೊಳಿಸುವುದು;

ಕಡುಪಾಪಿ, ಲತಾಂಗಿಯ ಕೆಣಕಿದನೊ=ತುಂಬಾ ಕೆಟ್ಟ ವ್ಯಕ್ತಿಯಾದ ಇವನು , ಆ ಸೈರಂದ್ರಿಗೆ ಕಾಮದ ಕಿರುಕುಳವನ್ನು ಕೊಟ್ಟು, ಆಕೆಯನ್ನು ಗಾಸಿಗೊಳಿಸಿದ್ದಾನೆಯೋ;

ಹಣಿದ+ಆಡದೆ; ಹಣಿದ=ಸಂಹರಿಸುವಿಕೆ/ಕತ್ತರಿಸುವಿಕೆ; ಹಣಿದವಾಡು=ಸಂಹರಿಸು/ಕತ್ತರಿಸು; ಮಾಡು=ಬಿಡು;

ವಂಶವ ಹಣಿದವಾಡದೆ ಮಾಣನು=ವಿರಾಟರಾಯನ ರಾಜವಂಶವನ್ನು ಸಂಹರಿಸಿದೇ ಬಿಡನು. ಅಂದರೆ ನಮ್ಮ ರಾಜವಂಶದ ನಾಶಕ್ಕೆ ಕೀಚಕನೇ ಮೂಲಕಾರಣನಾಗುತ್ತಾನೆ;

ಏಗು=ಏನನ್ನು ಮಾಡು;

ಏಗುವೆನು ಎನುತ ಮರುಗಿದಳು=ಈಗ ನಾನೇನು ಮಾಡಲಿ/ಈಗ ಬಂದಿರುವ ಆಪತ್ತಿನಿಂದ ಇವನನ್ನು ಹೇಗೆ ಪಾರುಮಾಡಲಿ ಎಂದು ತನ್ನಲ್ಲಿಯೇ ಹೇಳಿಕೊಳ್ಳುತ್ತ ಸಂಕಟಪಟ್ಟಳು;

ನಿಜ+ಆಕಾರ; ನಿಜ=ಸಹಜವಾದ; ಆಕಾರ=ರೂಪ; ನಿಜಾಕಾರ=ಸಹಜವಾಗಿಯೇ ಮನೋಹರವಾದ ರೂಪುಳ್ಳವನು; ಶಿರೋಮಣಿ=ಹೆಂಗಸರು ತಮ್ಮ ಮುಡಿಯಲ್ಲಿ ತೊಡುವ ಒಂದು ಬಗೆಯ ರತ್ನದ ಒಡವೆ/ಅತ್ಯುತ್ತಮ ವ್ಯಕ್ತಿ ;

ನಿಜಾಕಾರ ಕುಲಶಿರೋಮಣಿ=ಮನೋಹರವಾದ ರೂಪವನ್ನು ಹೊಂದಿ ಕುಲಕ್ಕೆ ಅಲಂಕಾರಪ್ರಾಯನಾಗಿರುವ ತಮ್ಮನೇ;

ಅಗ್ಗ=ಒಳ್ಳೆಯ/ಉತ್ತಮವಾದ; ಮಹಿಮೆ=ದೊಡ್ಡಸ್ತಿಕೆ/ಉನ್ನತಿಕೆ; ಅಳುಕು=ನಡುಗು/ಕಡೆಗಣಿಸು;

ಅಗ್ಗದ ಮಹಿಮೆ ಅಳುಕಿತು=ಮಹಾಶೂರನೆಂಬ ಒಳ್ಳೆಯ ಹೆಸರಿಗೆ ಈಗ ಹಾನಿ ತಟ್ಟಿತು;

ಕಂದು=ಕಳೆಗುಂದು/ಬಣ್ಣಗೆಡು/ಕಪ್ಪಾಗು;

ಮುಸುಡಿನ ಬೆಳಕು ಕಂದಿತು=ನಿನ್ನ ಮೊಗ ಕಪ್ಪಿಟ್ಟಿತು;

ಚಿಂತಾ+ಜಲಧಿ+ಒಳಗೆ; ಜಲಧಿ=ಕಡಲು/ಸಮುದ್ರ; ಚಿಂತಾಜಲಧಿ=ಚಿಂತೆಯ ಕಡಲು; ಅಳ್ದು>ಅದ್ದು; ಅದ್ದು=ಮುಳುಗು; ಸೊಂಪು=ಕಾಂತಿ/ಹೊಳಪು/ಸೊಗಸು; ಅಡಗು=ಮರೆಯಾಗು;

ಬಹಳ ಚಿಂತಾಜಲಧಿಯೊಳಗೆ ಅದ್ದಂತೆ ಸೊಂಪು ಅಡಗಿತು=ಚಿಂತೆಯ ಕಡಲಿನಲ್ಲಿ ಮುಳುಗಿದವನಂತೆ ನಿನ್ನ ತೇಜಸ್ಸು ಕುಗ್ಗಿದೆ;

ಹೇಳು ಚಿತ್ತದ ನೆಲೆಯನು=ನಿನ್ನ ಮನದಲ್ಲಿ ಏನಿದೆಯೆಂಬುದನ್ನು ನನ್ನೊಡನೆ ಹೇಳು; ನಸುನಾಚಿ=ಅಕ್ಕನ ಮಾತುಗಳನ್ನು ಕೇಳಿ ಕೀಚಕನು ತುಸು ನಾಚಿಕೆಯಿಂದ;

ಮದನ=ಕಾಮದೇವ; ಹಿಳುಕು=ಬಾಣ; ಸುಮತಿ=ವಿವೇಕದಿಂದ ಕೂಡಿದ ಅರಿವು/ಒಳ್ಳೆಯ ಮನಸ್ಸು; ಸೀಳು=ತುಂಡುಮಾಡು/ಕತ್ತರಿಸು; ಬಳಿಕ=ಅನಂತರ; ಇಂತು=ಈ ರೀತಿ;

ಮದನನ ಹಿಳುಕು ಸುಮತಿಯ ಸೀಳೆ, ಬಳಿಕ ಇಂತು ಎಂದನು ಅವ ನಗುತ=ಮದನನ ಹೂಬಾಣವು ನನ್ನ ಒಳ್ಳೆಯ ಮನಸ್ಸನ್ನು ಕತ್ತರಿಸಿದ್ದರಿಂದ ಈ ರೀತಿ ನಾನು ಕಾಮಿಯಾಗಿದ್ದೇನೆ/ಈಗ ನನ್ನ ಮಯ್ ಮನದಲ್ಲಿ ಕಾಮದ ಒಳಮಿಡಿತಗಳು ತುಡಿಯುತ್ತಿರುವುದರಿಂದ ಯಾವುದು ಸರಿ–ಯಾವುದು ತಪ್ಪು ಎಂಬ ಅರಿವನ್ನು ಕಳೆದುಕೊಂಡು ಈ ರೀತಿಯಾಗಿದ್ದೇನೆ ಎಂದು ನಗುತ್ತ ನುಡಿದನು; ಕಾಮಿಯಾದವನಿಗೆ ತನ್ನಿಂದ ಆಗುತ್ತಿರುವ ತಪ್ಪು ಎಶ್ಟು ತೀವ್ರತರವಾದುದು ಎಂಬ ಅರಿವು ಇರುವುದಿಲ್ಲ ಹಾಗೂ ನಾಲ್ಕು ಜನ ನನ್ನ ಬಗ್ಗೆ ಏನಂದಾರು ಎಂಬ ಲಜ್ಜೆಯಾಗಲಿ/ಹೆದರಿಕೆಯಾಗಲಿ ಇರುವುದಿಲ್ಲ; ಆದ್ದರಿಂದಲೇ ನಗುತ್ತ ಮಾತನಾಡುತ್ತಿದ್ದಾನೆ;

ಬಿನ್ನಹ=ವಿನಂತಿ/ಅರಿಕೆ;

ಬೇರೆ ಬಿನ್ನಹವೇನು=ನಿನ್ನಲ್ಲಿ ನಾನು ಮತ್ತೇನನ್ನು ಕೇಳುತ್ತಿಲ್ಲ;

ಓಲಗ=ಊಳಿಗ/ಕೆಲಸ/ಸೇವೆ; ಓಲಗದ ಸತಿಯರು=ರಾಣಿವಾಸದಲ್ಲಿರುವ ದಾಸಿಯರು;

ನಿನ್ನ ಓಲಗದ ಸತಿಯರಲಿ=ನಿನ್ನ ಬಳಿಯಿರುವ ದಾಸಿಯರಲ್ಲಿ;

ಅವಳು=ಆ ಸೈರಂದ್ರಿ; ಮಡಿ=ಪಟ್ಟು; ಚಿತ್ತ=ಮನಸ್ಸು;

ಅವಳು ಸತಿಯರ ನೂರು ಮಡಿ ಚೆಲುವಿನಲಿ ಚಿತ್ತವ ಸೂರೆಗೊಂಡಿಹಳು=ದಾಸಿಯರ ಗುಂಪಿನಲ್ಲಿ ಎಲ್ಲರಿಗಿಂತ ನೂರುಪಟ್ಟು ಹೆಚ್ಚಿನ ಚೆಲುವೆಯಾಗಿರುವ ಆ ಸೈರಂದ್ರಿಯು ನನ್ನ ಮನಸ್ಸನ್ನು ಸೆಳೆದುಕೊಂಡಿದ್ದಾಳೆ;

ಮದನಂಗೆ ಮಾರಿದಳು=ಮದನನಿಗೆ ನನ್ನನ್ನು ಮಾರಿದ್ದಾಳೆ/ಕಾಮಕ್ಕೆ ನಾನು ವಶನಾಗಿದ್ದೇನೆ;

ಜೀವಸಲಾರೆನು=ಅವಳನ್ನು ಕೂಡಿದಲ್ಲದೆ ನಾನು ಬದುಕಲಾರೆನು;

ಒಳಗುಮಾಡು=ವಶಕ್ಕೆ ಒಪ್ಪಿಸು;

ಆಕೆಯನು ಒಳಗುಮಾಡಿಸಿ ತೋರಿದಡೆ=ಆಕೆಯನ್ನು ನನ್ನ ವಶಕ್ಕೆ ಒಪ್ಪಿಸಿಕೊಡುವ ಅನುಗ್ರಹವನ್ನು ನೀನು ತೋರಿದರೆ;

ಒಡಲು=ದೇಹ/ಶರೀರ; ಅಸು=ಜೀವ/ಪ್ರಾಣ; ನಿರ್ವಾಹ=ಇರಲು ಅವಕಾಶ; ಅಹುದು=ಆಗುವುದು;

ತನ್ನ ಒಡಲೊಳು ಅಸುವಿಂಗೆ ನಿರ್ವಾಹ ಅಹುದು=ನನ್ನ ದೇಹದಲ್ಲಿ ಜೀವವು ಉಳಿಯಲು ಅವಕಾಶವಾಗುತ್ತದೆ; ಕೀಚಕನ ನುಡಿಗಳನ್ನು ಕೇಳಿ ಆತಂಕಗೊಂಡ ಸುದೇಶ್ಣೆಯು ಅವನ ಕಾಮುಕತನದಿಂದ ಉಂಟಾಗಲಿರುವ ದುರಂತವನ್ನು ಕುರಿತು ಅಂಜಿಕೆಯಿಂದ ತತ್ತರಿಸುತ್ತ ನುಡಿಯತೊಡಗುತ್ತಾಳೆ;

ಕೀರ್ತಿ=ಹೆಸರುವಾಸಿ/ಯಶಸ್ಸು; ಲತೆ=ಬಳ್ಳಿ; ಕುಡಿ+ಒಣಗಿತೈ; ಕುಡಿ=ಚಿಗುರು;

ಕೀರ್ತಿಲತೆ ಕುಡಿಯೊಣಗಿತೈ=ಕೀರ್‍ತಿ ಎಂಬ ಬಳ್ಳಿಯ ಚಿಗುರು ಒಣಗಿಹೋಯಿತು/ವಿರಾಟರಾಜಮನೆತನಕ್ಕೆ ಮತ್ತು ನಿನಗೆ ಇದ್ದ ದೊಡ್ಡ ಹೆಸರು ಇಂದಿಗೆ ನಾಶವಾಯಿತು;

ಮದನ+ಆರ್ತನ್+ಆದೈ; ಆರ್ತನ್=ಬಯಕೆಯುಳ್ಳವನು;

ಮದನಾರ್ತನಾದೈ=ಕಾಮಪರವಶನಾಗಿ ಮಯ್ ಮನದ ಮೇಲಣ ಅರಿವು ಮತ್ತು ಎಚ್ಚರವನ್ನು ಕಳೆದುಕೊಂಡೆ;

ಕುಲ=ವಂಶ/ಮನೆತನ/ ಕಾಲ=ಯಮ; ಕಾಲನ ಮೂರ್ತಿ=ಯಮದೂತ; ಅವತರಿಸು=ಹುಟ್ಟಿಬರುವುದು;

ಕುಲಕೆ ಕಾಲನ ಮೂರ್ತಿ ನೀನು ಅವತರಿಸಿದೈ=ನಮ್ಮ ರಾಜವಂಶಕ್ಕೆ ನೀನು ಯಮದೂತನಾಗಿ ಹುಟ್ಟಿಬಂದೆ;

ಕುಲವ ಸಂಹರಿಸಿದೈ=ಕುಲವನ್ನು ನಾಶಪಡಿಸಿದೆ; ಸ್ಫೂರ್ತಿಗೆಡು=ಇದೊಂದು ನುಡಿಗಟ್ಟು. ಅರಿವನ್ನು ಕಳೆದುಕೊಳ್ಳುವುದು/ಒಳಿತು ಕೆಡುಕಿನ ಎಚ್ಚರವನ್ನು ಕಳೆದುಕೊಳ್ಳುವುದು; ಅರ್ತಿ+ಅಪ್ಪುದನು; ಅರ್ತಿ=ನೋವು/ಸಂಕಟ/ದುರಂತ; ಅಪ್ಪುದನು=ಆಗುವುದನ್ನು;

ಸ್ಫೂರ್ತಿಗೆಡೆ ಮನುಜರಿಗೆ ರಾವಣನ ಅರ್ತಿಯಪ್ಪುದನು ಅರಿಯಲಾ=ಗಂಡಸರು ಅನ್ಯ ಹೆಂಗಸರ ವಿಚಾರದಲ್ಲಿ ಅರಿವು ಮತ್ತು ಎಚ್ಚರವನ್ನು ಕಳೆದುಕೊಂಡರೆ, ಕಾಮಿಯಾದ ರಾವಣನಂತೆ ದುರಂತ ಮರಣವನ್ನು ಹೊಂದುತ್ತಾರೆ ಎಂಬುದನ್ನು ನೀನು ತಿಳಿದಿಲ್ಲವೇನು;

ಕಡು=ಹೆಚ್ಚಾಗಿ/ಬಹಳವಾಗಿ; ಧೂರ್ತತನ=ದುರುಳತನ/ಕೆಟ್ಟತನ/ಕಾಮುಕತನ; ಅಂಜು=ಹೆದರು; ನಳಿನ+ಅಕ್ಷಿ; ನಳಿನ=ತಾವರೆ; ಅಕ್ಷಿ=ಕಣ್ಣು; ನಳಿನಾಕ್ಷಿ=ತಾವರೆ ಹೂವಿನಂತಹ ಕಣ್ಣುಳ್ಳವಳು/ಸುಂದರಿ;

ಕಡುಧೂರ್ತತನಕೆ ಅಂಜುವೆನು ಎನುತ ನಳಿನಾಕ್ಷಿ ನಡುಗಿದಳು=ನಿನ್ನ ಅತಿಯಾದ ಕಾಮುಕತನದ ನಡೆನುಡಿಯನ್ನು ಕಂಡು ನನಗೆ ಹೆದರಿಕೆಯಾಗುತ್ತಿದೆ ಎಂದು ಹೇಳುತ್ತ ಸುದೇಶ್ಣೆಯು ನಡುಗತೊಡಗಿದಳು; ಕಾಮಿಯಾದ ಕೀಚಕನಿಗೆ ಎಚ್ಚರಿಕೆಯನ್ನು ಮತ್ತೆ ಮತ್ತೆ ನೀಡುತ್ತ, ಅವನನ್ನು ಸರಿದಾರಿಗೆ ತರಲು ಅಕ್ಕನಾದ ಸುದೇಶ್ಣೆ ತನ್ನ ಪ್ರಯತ್ನವನ್ನು ಮುಂದುವರಿಸುತ್ತಿದ್ದಾಳೆ;

ಪರ=ಬೇರೆಯ/ಇತರ/ಅನ್ಯ; ವಧು=ಹೆಂಗಸು; ಬೇಟ=ಬಯಕೆ/ಆಸೆ/ಕಾಮ;

ಪರವಧುವಿನಲಿ ಬೇಟವೇ=ಅನ್ಯ ಹೆಂಗಸಿನಲ್ಲಿ ಕಾಮದ ಬಯಕೆಯೇ. ಇಂತಹ ಬಯಕೆಯಿಂದ ಕೇಡು ತಪ್ಪದು;

ವಿತ್ತ=ಹಣ/ಚಿನ್ನ; ಕೈಮಾಟ=ಅಪಹರಣ/ಬಲಾತ್ಕಾರದಿಂದ ಕಿತ್ತುಕೊಳ್ಳುವುದು;

ಪರವಿತ್ತದಲಿ ಕೈಮಾಟವೇ=ಬೇರೆಯವರ ಸಂಪತ್ತನ್ನು ಅಪಹರಿಸುವುದೇ. ಇಂತಹ ಕೆಲಸದಿಂದ ಮಾನ ಪ್ರಾಣಗಳಿಗೆ ಆಪತ್ತು ಬರುತ್ತದೆ;

ಕದನ=ರಣರಂಗ; ತೆಗೆದೋಟ=ಪಲಾಯನ;

ರಾಜಪುತ್ರರಿಗೆ ಕದನದಲಿ ತೆಗೆದೋಟವೇ=ರಾಜಪುತ್ರರು ರಣರಂಗದಲ್ಲಿ ಹೇಡಿಗಳಂತೆ ಪಲಾಯನ ಮಾಡುವುದು ಸರಿಯೇ. ಇಂತಹ ಹೀನಕಾರ್‍ಯವನ್ನು ಮಾಡುವವನು ವೀರನಲ್ಲ;

ಆಟವಿಕ=ನೀಚ/ಕೇಡಿ/ದುರುಳ; ಎಣಿಸು=ಬಯಸು/ಯೋಚಿಸು;

ಆಟವಿಕರ ಒಡನಾಡಿ ಕಲಿತು ವಿರಾಟನನು ಕೊಲಲು ಎಣಿಸಿದೈ=ನೀಚರ ಜತೆಯಲ್ಲಿ ವ್ಯವಹರಿಸಿ ಕೆಟ್ಟದ್ದನ್ನು ಕಲಿತು ವಿರಾಟರಾಜನನ್ನು ಕೊಲ್ಲಲು ಬಯಸಿರುವೆ; ಗುಣವೇ=ಇಂತಹ ನಡವಳಿಕೆಯು ನಿನಗೆ ಸರಿಯೇ; ತರಳ+ಅಕ್ಷಿ; ಅಕ್ಷಿ=ಕಣ್ಣು; ತರಳ=ಹೊಳೆಯುವ/ಪ್ರಕಾಶಮಾನವಾಗಿ ಮಿನುಗುವ;

ತರಳಾಕ್ಷಿ=ಸುಂದರವಾದ ಕಣ್ಣುಳ್ಳವಳು; ಮುಖ+ತಿರುಹು; ಮುಖ ತಿರುಹು=ಇದೊಂದು ನುಡಿಗಟ್ಟು. ವ್ಯಕ್ತಿಯ ನಡೆನುಡಿಯನ್ನು ಕಂಡು ಅಸಹ್ಯಪಟ್ಟುಕೊಂಡು, ಮತ್ತೊಂದು ಕಡೆ ಮೊಗ ಮಾಡುವುದು;

ನಿನ್ನ ಆಟಕೆ ಅಂಜುವೆನು ಎನುತ ತರಳಾಕ್ಷಿ ಮುಖದಿರುಹಿದಳು=ನಿನ್ನ ಕೆಟ್ಟ ನಡೆನುಡಿಯನ್ನು ಕಂಡು ನನಗೆ ಹೆದರಿಕೆಯಾಗುತ್ತಿದೆ ಎಂದು ಹೇಳುತ್ತ, ತಮ್ಮನ ಬಗ್ಗೆ ಉಂಟಾದ ಬೇಸರ, ಅಸಹ್ಯ ಹಾಗೂ ಸಂಕಟದಿಂದ ಬೇರೊಂದು ಕಡೆಗೆ ಮೊಗವನ್ನು ತಿರುಗಿಸಿದಳು; ಆದರೆ ತಮ್ಮನ ಮೇಲಣ ಮಮತೆಯಿಂದ ಮತ್ತೆ ಅವನಿಗೆ ಹಿತನುಡಿಗಳನ್ನಾಡುತ್ತ, ಅವನನ್ನು ದುರಂತದಿಂದ ಪಾರು ಮಾಡಲು ತನ್ನ ಪ್ರಯತ್ನವನ್ನು ಮುಂದುವರಿಸುತ್ತಾಳೆ;

ಸುರ=ದೇವತೆ; ಅವಳ ಗಂಡರು ಸುರರು=ಅವಳ ಗಂಡಂದಿರು ದೇವತೆಗಳು; ನವಗೆ=ನಮಗೆ; ಆವ=ಯಾವ; ಅಂತರ=ಹೋಲಿಕೆ;

ಸುರರಿಗೆ ನವಗೆ ಅದು ಆವ ಅಂತರವು=ದೇವತೆಗಳಿಗೂ ಮಾನವರಾದ ನಮಗೂ ಎಲ್ಲಿಯ ಹೋಲಿಕೆ. ದೇವತೆಗಳು ಸಾವಿಲ್ಲದವರು-ನಾವು ಸಾಯುವವರು; ದೇವತೆಗಳು ಅಪಾರವಾದ ಶಕ್ತಿಸಂಪನ್ನರು-ನಮ್ಮ ಶಕ್ತಿಸಂಪತ್ತಿಗೆ ಮಿತಿಯಿದೆ;

ಮುಳಿ=ಕೆರಳು/ಕೋಪ; ದಿವಿಜ=ದೇವತೆ; ದಳ=ಸೇನೆ/ಪಡೆ; ಇದಿರು+ಆರು; ಇದಿರು=ಎದುರಾಗಿ ನಿಲ್ಲುವವರು; ಆರು=ಯಾರು;

ಮುಳಿದೊಡೆ ದಿವಿಜ ದಳಕೆ ಇದಿರಾರು=ದೇವತೆಗಳು ಕೆರಳಿ ಕೋಪಗೊಂಡು ಆಕ್ರಮಣ ಮಾಡಿದರೆ, ಅವರ ಸೇನೆಯನ್ನು ಎದುರಿಸುವಂತಹವರು ನಮ್ಮಲ್ಲಿ ಯಾರಿದ್ದಾರೆ;

ಅದು+ಆರು;

ನಮ್ಮನು ಅದಾರು ಕಾವವರು=ನಮ್ಮನ್ನು ಕಾಪಾಡುವವರು ಯಾರು;

ತೊಡಕು=ತಂಟೆ/ಗೊಡವೆ;

ಅವಳ ತೊಡಕೇ ಬೇಡ=ಅವಳ ತಂಟೆಯೇ ನಮಗೆ ಬೇಡ;

ನಿವಹ=ಗುಂಪು/ಸಮೂಹ;

ಸತಿಯರ ನಿವಹದಲಿ=ನನ್ನ ರಾಣಿವಾಸದ ದಾಸಿಯರ ಗುಂಪಿನಲ್ಲಿ;

ಆರ=ಯಾರನ್ನು/ಯಾವುದೇ ದಾಸಿಯನ್ನು;

ನೀನು ಆರ ಬಯಸಿದಡೆ=ನೀನು ಯಾವುದೇ ತರುಣಿಯನ್ನು ಬಯಸಿದರೆ;

ಅವಳ ನಾ ಮುಂದಿಟ್ಟು ಮದುವೆಯನು ಒಲಿದು ಮಾಡುವೆನು=ಅವಳನ್ನು ನಾನೇ ಮುಂದೆ ನಿಂತು ಪ್ರೀತಿಯಿಂದ ನಿನಗೆ ಮದುವೆ ಮಾಡುವೆನು; ಅಕ್ಕ ಸುದೇಶ್ಣೆಯ ಯಾವುದೇ ಹಿತನುಡಿಗೆ ಇಲ್ಲವೇ ಸಮಸ್ಯೆಯ ಪರಿಹಾರದ ಆಯ್ಕೆಗೆ ಕಾಮಿಯಾದ ಕೀಚಕನು ಮನಗೊಡದೆ, ತನ್ನ ಕಾಮುಕತನದ ಮಾತುಗಳನ್ನೇ ಮುಂದೊಡ್ಡುತ್ತಾನೆ;

ಮರುಳು=ತಿಳಿಗೇಡಿತನ/ಹುಚ್ಚು;

ಮರುಳೌ ಅಕ್ಕ=ಅಕ್ಕ, ನಿನಗೆಲ್ಲೊ ಹುಚ್ಚು. ನನ್ನ ಮಯ್ ಮನವನ್ನು ಆವರಿಸಿಕೊಂಡು ಉರಿಯುತ್ತಿರುವ ಕಾಮದ ಬೇಗೆಯು ಎಂತಹುದೆಂಬುದನ್ನು ನೀನು ಅರಿಯೆ;

ಚಿತ್ತ=ಮನಸ್ಸು; ಬೇರ್+ಪರಿಯಿತ್ತು; ಪರಿ=ಹಬ್ಬು/ಹರಡು; ಬೇರ್ವರಿಯಿತ್ತು=ಆಳವಾಗಿ ಬೇರುಬಿಟ್ಟಿದೆ;

ಚಿತ್ತವು ಅವಳಲಿ ಸಿಕ್ಕಿ ಬೇರ್ವರಿಯಿತ್ತು=ನನ್ನ ಮನಸ್ಸು ಅವಳ ಅಂದಚೆಂದ ಮಯ್ ಮಾಟಕ್ಕೆ ಸಂಪೂರ‍್ಣವಾಗಿ ಪರವಶವಾಗಿದೆ; ಆಕೆಯನ್ನು ಕೂಡಬೇಕೆಂಬ ಕಾಮದ ತ್ರುಶೆ ನನ್ನ ಮನದಲ್ಲಿ ಆಳವಾಗಿ ನೆಲೆಗೊಂಡಿದೆ;

ಬರಿದೇ=ಕೇವಲ; ಮಿಕ್ಕ=ಉಳಿದ; ಡಿಂಬ=ದೇಹ/ಶರೀರ;

ಮನವ ಬೇರೆ ಇರಿಸಿ ಬರಿದೇ ಮಿಕ್ಕ ಡಿಂಬಕೆ ಮದುವೆಯುಂಟೇ=ಮನದಲ್ಲಿ ಒಬ್ಬಳನ್ನು ಒಲಿದು ಮೆಚ್ಚಿಕೊಂಡು, ಮತ್ತೊಬ್ಬಳೊಡನೆ ಕೇವಲ ದೇಹಕ್ಕೆ ಮದುವೆ ಮಾಡುವುದುಂಟೇ/ಮನಸ್ಸನ್ನು ಒಬ್ಬಳಿಗೆ ಕೊಟ್ಟು; ದೇಹವನ್ನು ಮದುವೆಯ ಹೆಸರಿನಲ್ಲಿ ಮತ್ತೊಬ್ಬಳಿಗೆ ಕೊಡುವುದು ಸರಿಯೇ;

ಮಕ್ಕಳು+ಆಟಿಕೆ+ಆದಡೆ; ಆಟಿಕೆ=ಆಟ; ಮಕ್ಕಳಾಟ=ಇದೊಂದು ನುಡಿಗಟ್ಟು. ವಿವೇಚನೆಯಿಲ್ಲದ ಕಾರ್‍ಯ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;

ಮಕ್ಕಳಾಟಿಕೆಯಾದಡೆ ಆಗಲಿ=ನಾನು ಸೈರಂದ್ರಿಯನ್ನು ಬಯಸಿ ಕೂಡುವುದನ್ನು ವಿವೇಚನೆಯಿಲ್ಲದ/ಅರಿವಿಲ್ಲದ ಕಾರ್‍ಯವೆಂದು ಜನ ಆಡಿಕೊಳ್ಳಲಿ;

ತಕ್ಕರು=ಗುರುಹಿರಿಯರು/ಸಮಾಜದಲ್ಲಿ ಉನ್ನತವಾದ ನೆಲೆಯಲ್ಲಿರುವ ಒಳ್ಳೆಯ ವ್ಯಕ್ತಿಗಳು;

ತಕ್ಕರು ಅಲ್ಲ ಎಂದು ಎನಲಿ=ಗುರುಹಿರಿಯರು ಈ ರೀತಿ ವೀರಸೇನಾನಿಯಾದ ಕೀಚಕನು ದಾಸಿಯೊಬ್ಬಳನ್ನು ಕಾಮಿಸಿ ಕೂಡುತ್ತಿರುವುದು ಸರಿಯಲ್ಲವೆಂದು ಹೇಳಲಿ;

ಸಲಹು=ಕಾಪಾಡು; ಸಲಹುವಡೆ=ಕಾಪಾಡಬೇಕಾದರೆ;

ಸಲಹುವಡೆ ಅಕ್ಕ, ತನಗೆ ಸೈರಂಧ್ರಿಯನು ಸೇರಿಸಬೇಕು=ಅಕ್ಕ, ನಿನಗೆ ನನ್ನನ್ನು ಜೀವಂತವಾಗಿ ಉಳಿಸಿಕೊಳ್ಳಬೇಕು ಎಂಬ ಮನಸ್ಸಿದ್ದರೆ, ಸೈರಂದ್ರಿಯನ್ನು ನನ್ನ ಜತೆಗೂಡಿಸಬೇಕು;

ಸೊಗಸು=ಚೆನ್ನಾಗಿ ಕಾಣು/ಸರಿ ಕಾಣು;

ಇತರರ ಮಾತು ಸೊಗಸದು=ಬೇರೆಯವರ ಮಾತು ನನಗೆ ಸರಿಕಾಣುವುದಿಲ್ಲ; ಸೈರಂದ್ರಿಯನ್ನು ಕೂಡುವ ಮಾತಲ್ಲದೆ ಇನ್ನಾವ ಮಾತು ನನಗೆ ಮೆಚ್ಚುಗೆಯಾಗುವುದಿಲ್ಲ;

ರೂಹು=ರೂಪ/ಆಕಾರ; ಒಗಡು=ಜುಗುಪ್ಸೆಯಾಗು/ಹೇಸಿಕೆಯಾಗು;

ಮಿಕ್ಕವರ ರೂಹನು ಕಣ್ಣುಗಳು ಒಗಡುವವು=ರಾಣಿವಾಸದಲ್ಲಿ ಇನ್ನುಳಿದ ದಾಸಿಯರ ರೂಪನ್ನು ನೋಡಲು ನನ್ನ ಕಣ್ಣುಗಳು ಹೇಸುತ್ತವೆ; ಅಂದರೆ ನನ್ನ ಕಣ್ಣುಗಳು ಸೈರಂದ್ರಿಯನ್ನು ಹೊರತುಪಡಿಸಿ ಉಳಿದವರನ್ನು ನೋಡಲು ಇಚ್ಚಿಸುವುದಿಲ್ಲ;

ನಾಮ=ಹೆಸರು;

ಉಳಿದವರ ನಾಮಗಳು ನಾಲಿಗೆಗೆ ಹಗೆಗಳು ಆಗಿಹವು=ಸೈರಂದ್ರಿಯಲ್ಲದೆ ಇನ್ನುಳಿದವರ ಹೆಸರುಗಳು ನಾಲಿಗೆಗೆ ಹಗೆಯಾಗಿವೆ. ಅಂದರೆ ಅವರ ಹೆಸರನ್ನು ಉಚ್ಚರಿಸಲಾರೆ;

ಸೆಗಳಿಕೆ=ಬೇಸಗೆ; ಸಸಿ=ಎಳೆಯ ಗಿಡ;

ಸೆಗಳಿಕೆಯ ಸಸಿಯಾದೆನು=ಇದೊಂದು ರೂಪಕ. ಬುಡದಲ್ಲಿರುವ ಬೇರುಗಳಿಗೆ ನೀರಿಲ್ಲದೆ, ಬಿಸಿಲಿನ ತಾಪದಿಂದ ಬಾಡಿ ನಿಂತಿರುವ ಗಿಡವಾಗಿದ್ದೇನೆ. ಇತ್ತ ನಾನು ಬಯಸಿದ ಸೈರಂದ್ರಿಯು ದೊರಕದೆ, ಅವಳನ್ನು ಪಡೆಯಲು ಅತ್ತ ನಿನ್ನ ಅನುಗ್ರಹ ದೊರೆಯದೆ ಕಾಮದ ತಾಪದಲ್ಲಿ ಬೆಂದು ಬಸವಳಿದಿದ್ದೇನೆ;

ಬಗೆ=ಆಸೆ/ಬಯಕೆ; ಸಲಿಸು=ಈಡೇರಿಸು/ನೆರವೇರಿಸು;

ಎನ್ನಯ ಬಗೆಯ ಸಲಿಸೌ=ನನ್ನ ಆಸೆಯನ್ನು ಈಡೇರಿಸಿಕೊಡು;

ಹರಿ=ಕಡಿ/ಕತ್ತರಿಸು/ತುಂಡಾಗು; ಮೃಗ=ಜಿಂಕೆ; ಪದ=ಪಾದ; ಎರಗು=ನಮಸ್ಕರಿಸು/ಅಡ್ಡಬೀಳು;

ಹರಿದ ಕರುಳಿನ ಮೃಗದ ಮರಿಯನು ಸಲಹಬೇಕು ಎಂದು ಪದಕೆ ಎರಗಿದನು=ಇದೊಂದು ರೂಪಕ. ಬೇಡನ ಬಾಣದ ಪೆಟ್ಟಿಗೆ ಸಿಲುಕಿ ಕರುಳು ತುಂಡಾಗಿ ಸಾಯುತ್ತಿರುವ ಜಿಂಕೆಯ ಮರಿಯ ಜೀವವನ್ನು ಉಳಿಸಿ ಕಾಪಾಡಬೇಕು ಎಂದು ಹೇಳುತ್ತ ಅಕ್ಕನ ಪಾದಗಳ ಮುಂದೆ ಅಡ್ಡಬಿದ್ದನು; /ಮದನನ ಹೂಬಾಣದ ಪೆಟ್ಟಿಗೆ ಸಿಲುಕಿ ಮಯ್ ಮನದಲ್ಲಿ ಕಾಮದ ಪರಿತಾಪಕ್ಕೆ ಗುರಿಯಾಗಿ ಸಾಯುವಂತಾಗಿರುವ ತನ್ನನ್ನು ಸೈರಂದ್ರಿಯ ಜತೆಗೂಡಿಸಿ ಉಳಿಸಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತಿದ್ದಾನೆ; ಕಾಮದ ಪರಿತಾಪದಲ್ಲಿ ತಿಳಿಗೇಡಿಯಾಗಿ ಮತ್ತು ಅತಿ ದುರ‍್ಬಲ ವ್ಯಕ್ತಿಯಾಗಿ ಪರಿತಪಿಸುತ್ತಿರುವ ತಮ್ಮನನ್ನು ನೋಡಿ ಅಕ್ಕನು ಸಂಕಟದ ಜತೆಜತೆಗೆ ತಮ್ಮನ ಬಗ್ಗೆ ಅನುಕಂಪಗೊಳ್ಳುತ್ತಾಳೆ. ತಮ್ಮನ ಮೇಲಣ ವ್ಯಾಮೋಹ ಈಗ ಸುದೇಶ್ಣೆಯ ವಿವೇಕವನ್ನು ಮಸುಳಿಸುತ್ತದೆ;

ಆಲಿ=ಕಣ್ಣು; ನೀರ್+ಏರಿದವು;

ಆಲಿ ನೀರೇರಿದವು=ಕಣ್ಣುಗಳು ತುಂಬಿಬಂದವು. ಸಂಕಟ ಮತ್ತು ವ್ಯಾಮೋಹದ ಒತ್ತಡದಿಂದ ಹಾಗೂ ಮುಂದೆ ತಮ್ಮನಿಗೆ ಉಂಟಾಗಲಿರುವ ದುರಂತವನ್ನು ನೆನೆಸಿಕೊಂಡು ಸುದೇಶ್ಣೆಯ ಕಣ್ಣುಗಳಲ್ಲಿ ನೀರು ತುಂಬಿ ಬಂದವು;

ಮೋಹ=ಅಕ್ಕರೆ/ಪ್ರೀತಿ; ತಳಿ=ಊರು/ಒಡಗೂಡು/ನಾಟು;

ತಮ್ಮನ ಮೇಲೆ ಮೋಹ ತಳಿತುದು=ತಮ್ಮನ ಮೇಲೆ ಅಕ್ಕರೆ ಒಡಗೂಡಿತು;

ಅಂಗನೆ=ಹೆಂಗಸು; ಕಾಲ=ಯಮ; ಪಾಳಯ=ಪಡೆ/ಸೇನೆ; ಕೈಗೊಟ್ಟಳು=ನೆರವಾದಳು/ಕಯ್ ಜೋಡಿಸಿದಳು;

ಅಂಗನೆ ಕಾಲನ ಪಾಳಯಕೆ ಕೈಗೊಟ್ಟಳು= ಸುದೇಶ್ಣೆಯು ಯಮದೂತರಿಗೆ ನೆರವಾದಳು/ಕೀಚಕನ ಸಾವಿಗೆ ನೆರವಾದಳು/ಆಕೆಯ ತಮ್ಮನ ಬಗ್ಗೆ ತೆಗೆದುಕೊಂಡ ತೀರ್ಮಾನ ಅವನನ್ನು ಬದುಕಿಸಲು ನೆರವಾಗದೆ, ಸಾವಿನತ್ತ ತಳ್ಳಿತು;

ನೆಗಹು=ಮೇಲಕ್ಕೆ ಎತ್ತು;

ಖಳನ ನೆಗಹಿದಳು=ತನ್ನ ಪಾದಗಳ ಮೇಲೆ ದಿಂಡುರುಳಿದ್ದ ಕೀಚಕನನ್ನು ಹಿಡಿದು ಮೇಲಕ್ಕೆತ್ತಿದಳು:

ಏಳು ಭವನಕೆ ಹೋಗು=ಮೇಲೇಳು… ನಿನ್ನ ಮನೆಗೆ ಹೋಗು;

ತರುಣಿಯ ನಾಳೆ ನಾ ಕಳುಹುವೆನು=ಸೈರಂದ್ರಿಯನ್ನು ನಾಳೆ ನಾನು ನಿನ್ನ ಮನೆಗೆ ಕಳುಹಿಸುತ್ತೇನೆ;

ಮೇಳ=ನಂಟು/ಸಂಬಂದ; ಲೇಸು+ಅಲ್ಲ; ಲೇಸು=ಒಳ್ಳೆಯದು; ನಿಜ+ಅನುಜ; ನಿಜ=ತನ್ನ; ಅನುಜ=ತಮ್ಮ;

ಪರಸತಿ ಮೇಳ ಲೇಸಲ್ಲ ಎನುತ ನಿಜಾನುಜನ ಬೀಳ್ಕೊಟ್ಟಳು=ಅನ್ಯಹೆಂಗಸಿನ ಜತೆ ಪಡೆಯುವ ಕಾಮದ ನಂಟು ಎಂದಿಗೂ ಒಳ್ಳೆಯದಲ್ಲ ಎಂಬ ಎಚ್ಚರಿಕೆಯ ನುಡಿಯೊಡನೆ ತನ್ನ ತಮ್ಮನನ್ನು ಕಳುಹಿಸಿದಳು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks