ಬದುಕು ನಮ್ಮನ್ನು ಪ್ರೀತಿಸುವುದಿಲ್ಲ, ಆದರೆ ನಾವು ಬದುಕನ್ನು ಪ್ರೀತಿಸಬೇಕು

ಬದುಕು ಯಾರಿಗೂ ಪುಕ್ಕಟೆ ಏನೂ ಕೊಡುವುದಿಲ್ಲ. ಪ್ರೀತಿ, ಗೌರವ, ಕ್ಯಾತಿ, ಸಹಾಯ, ಕರುಣೆ, ಸ್ನೇಹ, ವಿಶ್ವಾಸ ಇದು ಯಾವುದೂ ನಮ್ಮ ಕೈಗೆ ಉಚಿತವಾಗಿ ಬರುವುದಿಲ್ಲ. ಇವೆಲ್ಲವೂ ನಾವು ಕಶ್ಟಪಟ್ಟಾಗ ಮಾತ್ರ ಸಿಗುತ್ತವೆ. ಇದಕ್ಕಾಗಿಯೇ ಜೀವನ ಕಟಿಣ, ಆದರೆ ಅದಕ್ಕಿಂತ ದೊಡ್ಡ ನಿಜ ಏನೆಂದರೆ ಈ ಎಲ್ಲವನ್ನೂ ಪಡೆಯಲು ಬದುಕಿರುವ ತನಕ ನಾವು ಬದುಕನ್ನು ಪ್ರೀತಿಸಲು ಕಲಿಯಬೇಕು.
ಜೀವನದ ನಿಜವಾದ ಮುಕ
ಒಂದು ಕ್ಶಣ ಯೋಚಿಸಿ, ನಾಳೆ ನಾನು ಸತ್ತು ಹೋದೆ ಎಂದುಕೊಳ್ಳಿ. ಅಂದು ಬಹಳ ಜನರು ಅಳುತ್ತಾರೆ. ನನ್ನನ್ನು ಇಶ್ಟಪಡದವರೂ ಕೂಡ, “ಅವನು ಒಳ್ಳೆಯವನೇ” ಎಂದೂ ಹೇಳಬಹುದು. ಆದರೆ ಅದು ತಾತ್ಕಾಲಿಕ. ನನ್ನ ಶರೀರ ಮನೆಯೊಳಗೆ ಚಿರಕಾಲ ಇಡುವವರಿಲ್ಲ. ಕೊನೆಗೆ ಮಣ್ಣಿನಡಿ ಹೂಳುತ್ತಾರೆ. ಇಶ್ಟೇ ಕತೆಯ ಅಂತ್ಯ. ಪರಿಚಯದವರು ಎರಡು ದಿನ, ಸಂಬಂದಿಕರು ಕೆಲವು ತಿಂಗಳು, ನನ್ನವರು ಕೆಲವು ವರ್ಶ ನೆನಪು ಮಾಡಿಕೊಳ್ಳಬಹುದು. ಆಮೇಲೆ ನನ್ನ ನೆನಪನ್ನೂ ಮರೆತು ಬಿಡುತ್ತಾರೆ. ಇಶ್ಟೇ, ಬದುಕು ನಮ್ಮನ್ನು ಮರೆತೇಬಿಡುತ್ತದೆ. ಬದುಕು ನಮ್ಮನ್ನು ಪ್ರೀತಿಸುವುದಿಲ್ಲ. ನಾವು ಗಳಿಸಿದ ಹಣ, ಆಸ್ತಿ, ಗೌರವ, ವಿಶ್ವಾಸ ಇದಾವುದೂ ನಮ್ಮ ಸಾವಿನೊಂದಿಗೆ ನಮ್ಮನ್ನು ಹಿಂಬಾಲಿಸುವುದಿಲ್ಲ. ಕಡೆಗೆ ನಮ್ಮ ನೆನಪು ಕೂಡ ಅಮರ ಎಂದು ಹೇಳಲಾಗದು.
ಗೌರವವೂ ಕ್ಶಣಿಕ, ನೆನಪೂ ಶಾಶ್ವತವಲ್ಲ
ಇದರ ಬಗ್ಗೆ ಒಂದು ಉದಾಹರಣೆ ನೋಡುವ: ಶಾಲೆಯ ದಿನಗಳಿಂದಲೂ ಎಂ. ಕೆ. ಗಾಂದಿ ಅವರ ನೆನಪು ಅಮರ ಎಂದು ಕೇಳಿದ್ದೇವೆ. ಆದರೆ ಇಂದಿನ ಪೀಳಿಗೆಯಲ್ಲಿ ಎಶ್ಟು ಜನ ಗಾಂದಿಯವರ ಬಗ್ಗೆ ಮಾತನಾಡುತ್ತಾರೆ?ಗೌರವಿಸುವವರಿಗಿಂತ, ಅವಮಾನಿಸುವವರೇ ಹೆಚ್ಚಾಗಿದ್ದಾರೆ. ಅಶ್ಟೊಂದು ಒಳ್ಳೆಯತನ, ಅಶ್ಟೊಂದು ತ್ಯಾಗ, ಅಶ್ಟೊಂದು ಸೇವೆ ಎಲ್ಲವೂ ಕಾಲದ ಓಟದಲ್ಲಿ ಮರೆಯಾಗುತ್ತದೆ. ಹಾಗಿದ್ದರೆ ನಮ್ಮಂತಹ ಸಾಮಾನ್ಯರ ನೆನಪು ಎಶ್ಟು ದಿನ ಉಳಿಯಲಿದೆ? ಒಳ್ಳೆಯತನಕ್ಕೂ ಮರೆವು ಇದೆ. ಇದು ಕಟಿಣ ಸತ್ಯ
ಸಮಾಜ ಇಂದು ಆಕಾಶಕ್ಕೆ ಏರಿಸಬಹುದು, ನಾಳೆ ಪಾತಾಳಕ್ಕೆ ಎಸೆದುಬಿಡುತ್ತದೆ
ಜನ ನಮ್ಮ ಒಳ್ಳೆತನವನ್ನು ಕೂಡ ಬಹು ಬೇಗ ಮರೆತು ಬಿಡುತ್ತಾರೆ. ನಾವು ಬಹಳ ಒಳ್ಳೆಯವರು ಎಂದು ಸಮಾಜ ಹೇಳುತ್ತದೆಯಾದರೂ, ಅದೇ ಸಮಾಜದೊಳಗೆ ನಮ್ಮನ್ನು ಇಶ್ಟಪಡದವರು ಕೂಡ ಇರುತ್ತಾರೆ. ಇಂದು ಸಮಾಜ ನನ್ನನ್ನು ಆಕಾಶಕ್ಕೆ ಏರಿಸಿಬಿಡುತ್ತದೆ, ನಾಳೆ ನನ್ನಿಂದ ಒಂದು ಚಿಕ್ಕ ತಪ್ಪು ನಡೆದು ಬಿಟ್ಟರೆ ಅದೇ ಸಮಾಜ ನನ್ನನ್ನು ಪಾತಾಳಕ್ಕೆ ನೂಕಿ ಬಿಡುತ್ತದೆ. ಬದುಕು ಎಂದರೆ ಸಮಾಜ, ಬದುಕು ಎಂದರೆ ನಮ್ಮವರು, ಬದುಕು ಎಂದರೆ ನಮ್ಮ ಜೀವನದಲ್ಲಿ ಬರುವ ಪಾತ್ರದಾರಿಗಳು. ಇವರೆಲ್ಲರ ಪ್ರೀತಿ ಶಾಶ್ವತ ಅಲ್ಲ. ಎಲ್ಲರಲ್ಲೂ ಅವರವರ ಸ್ವಾರ್ತ ಅಡಗಿರುತ್ತದೆ. ನಾವು ಯಾರು ಇದಕ್ಕೆ ಹೊರತರಾಗಿಲ್ಲ. ನಮ್ಮ ಸಾಮರ್ತ್ಯದ ಮೇಲೆ ಇವರ ಪ್ರೀತಿ ಹೊಂದಿಕೊಂಡಿದೆ. ಒಂದು ದಿನ ಒಬ್ಬ ಬಿಕ್ಶುಕ ಅನಾತ ಶವವಾಗಿಬಿಡುತ್ತಾನೆ. ಅವನಿಗೆ ಗೌರವದ ವಿದಾಯ ದೊರಕುತ್ತದೆಯೇ ಈ ಸಮಾಜದಿಂದ ?
ಕೋವಿಡ್ ನಮಗೆ ಕಲಿಸಿದ ಕಟಿಣ ಪಾಟ
ಕೋವಿಡ್ ನೆನಪಿದೆ ತಾನೇ ? ಮನುಶ್ಯನನ್ನು ರಾಕ್ಶಸನನ್ನಾಗಿ ಪರಿವರ್ತಿಸಿದ ಹೆಮ್ಮಾರಿ ಅದು. ಸಾವಿನ ಬಯ ನಮ್ಮವರನ್ನೇ ಅಪರಚಿತರನ್ನಾಗಿಸಿ ಬಿಟ್ಟಿತು. ಪರಸ್ಪರ ಮನಸಿನೊಳಗೆ ಅಡಗಿದ್ದ ಅಪನಂಬಿಕೆಯನ್ನು ಬೆತ್ತಲೆಗೊಳಿಸಿದ್ದೆ ಈ ಕೋವಿಡ್. ಅದು ಅಂದು ಮಾಡಿದ ಗಾಯ ಇಂದು ಕೂಡ ಮಾಸಿಲ್ಲ. ಸುಲಬವಾಗಿ ಮಾಸೋದು ಇಲ್ಲ. ಈ ಇಡೀ ಪ್ರಪಂಚದೊಳಗೆ ನಾವು ಒಬ್ಬಂಟಿಗರು ! ಬಾಯಿ ಮಾತಿಗೂ ಕೂಡ ನೀನು ಸಾಯುವಾಗ ನಿನ್ನೊಂದಿಗೆ ನಾನು ಕೂಡ ಸಾಯ ಬಯಸುತೇನೆ ಅಂತ ಯಾರು ಕೂಡ ಹೇಳಲು ಇಶ್ಟಪಡುವುದಿಲ್ಲ. ಈ ಪ್ರಪಂಚದಲ್ಲಿ ನಾವು ಬಂದಿದ್ದು ಒಬ್ಬಂಟಿಗ, ಹೋಗುವುದೂ ಕೂಡ ಒಬ್ಬಂಟಿಗನಾಗಿಯೇ.
ನಮ್ಮವರೇ ಕೆಲವೊಮ್ಮೆ ನಮ್ಮ ನೋವಿಗೆ ಕಾರಣ
ಇವತ್ತು ನನ್ನ ಮಗುವಿನ ಮುಗ್ದ ನಗು ನೋಡಿ ನನ್ನನ್ನು ನಾನೆ ಮರೆತು ಬಿಡುತ್ತೇನೆ. ನಾಳೆ ಅದೇ ಮಗು ಬೆಳೆದು ದೊಡ್ಡವನಾಗಿ ನನ್ನ ಮೇಲೆ ರೇಗಿದಾಗ ನಾನು ಅಳುತ್ತೇನೆ. ನನ್ನ ಗಂಡನನ್ನು ಹುಚ್ಚಿಯಂತೆ ನಾನು ಪ್ರೀತಿಸುತ್ತೇನೆ. ಅದೇ ಗಂಡ ಇತರರ ಎದುರು ನನ್ನನ್ನು ಅವಮಾನಿಸಿದಾಗ ನನ್ನ ಹ್ರುದಯ ಚೂರಾಗಿ ಬಿಡುತ್ತದೆ. ಆದರೆ ಇದೇ ಬದುಕು. ಪ್ರತೀ ಪ್ರೀತಿಯ ಹಿಂದೆ ನಾವೆಶ್ಟೇ ಅಲ್ಲಗಳೆದರೂ ಸ್ವಾರ್ತ ಅಡಗಿರುತ್ತದೆ. ಹಾಗಾದರೆ ಬದುಕು ಒಂದು ಪ್ರೀತಿಯ ಕಪಟ ನಾಟಕವಾಗಿದ್ದರೆ ನಾನು ಯಾಕೆ ಈ ಬದುಕನ್ನು ಪ್ರೀತಿಸಬೇಕು. ಪ್ರೀತಿಸಲೇಬೇಕು ಯಾಕೆಂದರೆ ಇದು ನನ್ನ ಬದುಕು. ನಾನು ಸಾಯುವಾಗ ಬದುಕಿನ ಸವಿಯನ್ನು ಸಂಪೂರ್ಣವಾಗಿ ಅನುಬವಿಸಿದ ಸಂತ್ರುಪ್ತಿಯೊಂದಿಗೆ ಸಾಯಬೇಕು. ಬದುಕು ನನ್ನನ್ನು ಪ್ರೀತಿಸಿದಿದ್ದರೆ ಏನಂತೆ, ನಾನು ನನ್ನ ಬದುಕನ್ನು ಪ್ರೀತಿಸಬೇಕು. ನನ್ನ ಮಡದಿ ಕಶ್ಟ ಸುಕ, ಸಂತೋಶ, ದುಕ್ಕ ಪ್ರತಿಯೊಂದರಲ್ಲೂ ಸಮ ಪಾಲು ಸಮ ಬಾಳು ಎಂದು ಎಲ್ಲರನ್ನೂ ಬಿಟ್ಟು ನನ್ನನ್ನು ನಂಬಿ ನನ್ನ ಹಿಂದೆ ಬಂದಿದ್ದಾಳೆ. ಬಗವಂತ ನನಗೆ ಕೊಟ್ಟ ಬದುಕಿನ ದೊಡ್ಡ ಕೊಡುಗೆ ಅವಳು. ಅವಳು ನನಗೆ ಅಗೌರವ ತೋರಲಿ, ನನ್ನನ್ನು ಹೀಯಾಳಿಸಲಿ, ಏನೇ ಮಾಡಲಿ ಅವಳು ನನ್ನ ಹೆಂಡತಿ. ನಾನು ಅವಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು. ನನ್ನ ಬದುಕನ್ನು ನಾನು ಸುಂದರಗೊಳಿಸಿಕೊಳ್ಳಬೇಕು. ಇದೆ ಮಾತು ಹೆಂಗಸರಿಗೂ ಅನ್ವಯ. ಅವರ ಜೀವನದ ದೊಡ್ಡ ಗೆಳೆಯ ಆಕೆಯ ಗಂಡ. ಅವನ ಗುಣ ಅವಳಿಗೆ ಇಶ್ಟವಾಗದೇ ಇರಬಹುದು. ಆದರೆ ಆಕೆಗೆ ತನ್ನ ಅಪ್ಪ ಅಪ್ಪನೊಡನೆ ಹಂಚಿಕೊಳ್ಳಲಾಗದ ಹಲವಾರು ವಿಚಾರಗಳಿರುತ್ತವೆ. ಆದರೆ ಗಂಡನಲ್ಲಿ ಆಕೆ ತನ್ನ ಅಪ್ಪ ಅಮ್ಮ ಸಹೋದರ, ಸಹೋದರಿ ಎಲ್ಲರನ್ನು ಕಾಣಲು ಸಾದ್ಯ. ತನ್ನ ಬದುಕನ್ನು ಸುಂದರಗೊಳಿಸಿಕೊಳ್ಳಲು, ಆಕೆ ಆತನನ್ನು ಪ್ರೀತಿಸಬೇಕು. ಮಕ್ಕಳು ನಮ್ಮ ಪ್ರೀತಿಯ ಸಂಕೇತ. ಆ ಮಕ್ಕಳ ಮುಗ್ದ ನಗು ನಮ್ಮನ್ನು ಪ್ರಪಂಚ ಮರೆಯುವಂತೆ ಮಾಡಿ ಬಿಡುತ್ತದೆ. ಮುಂದೆ ಅದೇ ಮಕ್ಕಳಿಗೆ ನಾವು ಬೇಡದವರಾಗಿಬಿಡುತ್ತೇವೆ. ಆದರೂ ನಾವು ಅವರನ್ನು ಪ್ರೀತಿಸಬೇಕು. ಪ್ರೀತಿ ನಮ್ಮ ದುಕ್ಕವನ್ನು ಮರೆಸಿ ಬಿಡುತ್ತದೆ. ಮಕ್ಕಳು ನಮಗೆ ಎಶ್ಟೇ ತೊಂದರೆ ಕೊಟ್ಟರೂ ನಮ್ಮ ಪ್ರೀತಿ ಪ್ರಬಲವಾಗಿದ್ದರೆ, ದುಕ್ಕ, ಕೋಪ, ತಾಪ ನಮ್ಮನ್ನು ಕಾಡುವುದಿಲ್ಲ. ಬದುಕು ಸ್ವಾರ್ತಿ. ನಾವ್ಯಾರು ಇದಕ್ಕೆ ಹೊರತಲ್ಲ. ಹಲವು ಬಾರಿ ನಮ್ಮವರೇ ನಮಗೆ ದುಕ್ಕ ಕೊಡುತ್ತಾರೆ. ನೋವು ಕೊಡುತ್ತಾರೆ. ನಮ್ಮ ಹ್ರುದಯ ಹೊಡೆದು ಹೋಗುತ್ತದೆ. ಹಲವಾರು ಕನಸುಗಳನ್ನುಕಾಣುತ್ತೇವೆ. ಆದರೆ ನಮ್ಮವರೇ ಅದಕ್ಕೆ ಅಡ್ಡಲಾಗಿಬಿಡುತ್ತಾರೆ. ಇದೇ ಬದುಕು! ಇವುಗಳಿಂದಲೇ ಬದುಕು.
ನಮ್ಮ ಬದುಕನ್ನು ನಾವು ಸುಂದರಗೊಳಿಸಿಕೊಳ್ಳಬೇಕು
ನಮ್ಮ ಸೋಲಿಗೆ , ನಮ್ಮ ಗೆಲುವಿಗೆ, ನಮ್ಮ ಕೋಪಕ್ಕೆ, ಜಗಳಕ್ಕೆ, ನಗುವಿಗೆ , ಅಳುವಿಗೆ ಪ್ರತಿಯೊಂದಕ್ಕೂ ನಾವೇ ಹೊಣೆ. ನಮ್ಮ ಮನಸ್ತಿತಿಯನ್ನು ನಾವು ಹೇಗೆ ನಿಬಾಯಿಸಬಲ್ಲೆವೋ ಅದರ ಮೇಲೆ ಈ ಎಲ್ಲಾ ಅಂಶಗಳು ಹೊಂದಿಕೊಂಡಿವೆ. ನಮ್ಮನ್ನು ಹೀಯಾಳಿಸುವವರು, ನಮ್ಮ ಸೋಲಿಗೆ ಕೇಕೆ ಹಾಕಿ ನಗುವವರು, ನಮ್ಮೊಂದಿಗೆ ಜಗಳವಾಡುವವರು, ನಮ್ಮ ಮಾತನ್ನು ಕೇಳದವರು, ನಮ್ಮೊಂದಿಗೆ ಸಬ್ಯತೆಯಿಂದ ವರ್ತಿಸದವರು, ನಮ್ಮ ಕಾಲು ಎಳೆಯುವವರು , ನಮ್ಮ ಕನಸಿಗೆ ತಣ್ಣೀರೆರಚುವವರು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತಾರೆ. ಆದರೆ ನಮ್ಮ ಮನಸ್ತಿತಿ ಪ್ರಬಲವಾಗಿದ್ದರೆ, ನಮ್ಮ ಬದುಕನ್ನು ಹೇಗೆ ಪ್ರೀತಿಯಿಂದ ಕಟ್ಟಿಕೊಳ್ಳಬೇಕು ಅನ್ನುವುದು ನಮಗೆ ತಿಳಿದಿದ್ದರೆ, ಇವೆಲ್ಲ ಎಡರು ತೊಡರುಗಳು ನಮ್ಮ ಮನಸ್ತಿತಿಯ ಎದುರು ಗೌಣವಾಗಿ ಬಿಡುತ್ತವೆ. ನಮ್ಮ ಬದುಕು, ನಮ್ಮ ಕನಸು, ನಮ್ಮ ಕಶ್ಟ, ನಮ್ಮ ಸುಕ ಎಲ್ಲವೂ ನಮ್ಮದೇ. ನಮ್ಮ ಜೀವನದ ಪ್ರಯಾಣದಲ್ಲಿ ನಮ್ಮೊಡನೆ ಇರುವ ಎಲ್ಲರೂ ನಮ್ಮ ಸಹ ಪ್ರಯಾಣಿಗರು. ಪ್ರತಿಯೊಬ್ಬರಿಗೂ ಅವರದ್ದೇ ಆದ ಕನಸುಗಳಿರುತ್ತವೆ. ಹಾಗಾಗಿ ಯಾರ ಬಗ್ಗೆಯೂ ಹೆಚ್ಚಿನ ನಿರೀಕ್ಶೆ ಇಟ್ಟುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಜೀವನದ ಪ್ರಯಾಣ ಯಾವಾಗ ಕೊನೆ ಗೊಳ್ಳುವುದೋ ಗೊತ್ತಿಲ್ಲ. ಆದರೆ ಇಂದು ರಾತ್ರಿ ನಾವು ಮಲಗಿದಾಗ, ಒಂದು ವಿಚಾರ ಮಾತ್ರ ಮನಸ್ಸಿಗೆ ಶಾಂತಿ ತರುತ್ತದೆ, ನಾನು ನೆಮ್ಮದಿಯ ನಿದ್ರೆಗೆ ಜಾರಿಹೋಗುವ ಮೊದಲು, ಇವತ್ತು ನಾನು ಯಾರನ್ನೂ ನೋಯಿಸಿಲ್ಲ. ಇವತ್ತಿನ ದಿನ ತುಂಬಾ ಚೇನ್ನಾಗಿ ಕಳೆದೆ. ಇಂದು ನಾನು ನನ್ನ ಕನಸಿಗಾಗಿ ಶ್ರಮ ಪಟ್ಟೆ ಎನ್ನುವ ತ್ರುಪ್ತಿ ನಮ್ಮಲ್ಲಿರಬೇಕು. ನಮ್ಮ ಬದುಕನ್ನು ನಾವು ಪ್ರೀತಿಸಬೇಕು. ಇಶ್ಟು ಸಾಕು. ”ಪ್ರೀತಿಸಿದಶ್ಟೂ ಬದುಕು ಸುಂದರ”.
(ಚಿತ್ರ ಸೆಲೆ: pixabay.com)

ಇತ್ತೀಚಿನ ಅನಿಸಿಕೆಗಳು