ಉಕ್ಕಿನ ಹಕ್ಕಿಗಳ ಅರಿಮೆಯ ಬೆಳವಣಿಗೆ -1

– ಕಾರ‍್ತಿಕ್ ಪ್ರಬಾಕರ್

06_Ukkina_hakkigaLu_Generations

ಯುದ್ದ ನೀತಿ ಮತ್ತು ತಂತ್ರಗಾರಿಕೆಯ ಮಯ್ಲಿಗಲ್ಲುಗಳ ಬೆಳವಣಿಗೆಯು ಹಂತ ಹಂತವಾಗಿ ಬೆಳೆಯುತ್ತಿರುವಂತೆ, ಯುದ್ದ ವಿಮಾನಗಳ ಬೇಕು-ಬೇಡಗಳು ಬೆಳೆಯತೊಡಗಿವೆ. ಕೊಟ್ಯಾಂತರ ರುಪಾಯಿಗಳು ಬೇಕಾಗುವ ಉಕ್ಕಿನ ಹಕ್ಕಿಗಳ ತಯಾರಿಕೆಯಲ್ಲಿ ತಮ್ಮ ಅರಿಮೆಯ ಉದ್ದ – ಅಗಲಗಳನ್ನು ತೋರುವುದು ಜಗತ್ತಿನ ಮುಂಚೂಣಿ ದೇಶಗಳ ನಡೆಗಳಲ್ಲೊಂದಾಗಿದೆ.

ಯುದ್ಧ ವಿಮಾನವು ಮೊದಲೆಲ್ಲಾ ಕಾದಾಟಕ್ಕೆ ಬಳಸದೇ ವಯ್ರಿಗಳ ನಡೆಗಳನ್ನು ಮೇಲಿಂದ ನೋಡಲು ಬಳಸಲಾಗುತ್ತಿತ್ತು. ಯುದ್ದ ನೀತಿ ಮತ್ತು ತಂತ್ರಗಳನ್ನು ರೂಪಿಸುವಲ್ಲಿ ನೆರವಾಗುವಂತೆ ವಯ್ರಿಯ ಸುತ್ತ ಮುತ್ತಲಿನ ಮಾಹಿತಿ ಕಲೆಹಾಕುವಲ್ಲಿ ಬಳಸಲಾಗುತ್ತಿತ್ತೇ ಹೊರತು ವಯ್ರಿಯ ಪಾಳೆಯಗಳ ಮೇಲೆ ದಾಳಿ ನೆಡೆಸಲು ಅವುಗಳು ಅಶ್ಟೇನೂ ಅಣಿಗೊಂಡಿರಲಿಲ್ಲ. ಹಲವು ಕೊರತೆಗಳಿದ್ದರೂ ಉಕ್ಕಿನ ಹಕ್ಕಿನಗಳನ್ನು ಬಾನ ಕಾಳಗಕ್ಕೆ ಮೊದಲಿಗೆ ಬಳಸಿದ್ದು ಮೊದಲ ಮಹಾಯುದ್ದದಲ್ಲಿಯೇ ಅನ್ನಬಹುದು.

ಹಳೆ ತಲೆಮಾರಿನ ವಿಮಾನದಲ್ಲಿ ಮರದಿಂದ ಮಾಡಿದ ವಿಮಾನದ ಬಾಗಗಳು ಮತ್ತು ಅದಕ್ಕೆ ಕಾವಲಿನಂತೆ ಮೇಲೆ ತೊಡಿಸಿದ ಬಟ್ಟೆಯ ಹೊದಿಕೆ, ವಿಮಾನದ ಸ್ತಿರತೆಯನ್ನು ತಕ್ಕ ಮಟ್ಟಿಗೆ ಕಂಡುಕೊಟ್ಟಿತ್ತೆ ಹೊರತು, ವಿಮಾನದ ವೇಗದಲ್ಲಿ ಮತ್ತು ಹೊತ್ತೊಯ್ಯುವ ತೂಕದಲ್ಲಿ ಬಾನ ಕಾದಾಟಕ್ಕೆ ಬೇಕಾದಂತೆ ತಯಾರಾಗಿರಲಿಲ್ಲ. ಹೆಚ್ಚೆಂದರೆ ಗಂಟೆಗೆ 100 ಮಯ್ಲಿ ವೇಗದಲ್ಲಿ ಹಾರುತ್ತಿದ್ದ ಈ ವಿಮಾನಗಳು, ಹಲವು ಉರುಳೆಗಳುಳ್ಳ (multi cylinder) ಆಡುಬೆಣೆಯ (piston) ಬಿಣಿಗೆಯನ್ನು (engine) ಹೊಂದಿರುತ್ತಿದವು. ಇಬ್ಬರು ಕೂರುವಶ್ಟು ಜಾಗವನ್ನು ಹೊಂದಿರುತ್ತಿದ್ದ ಈ ವಿಮಾನಗಳಲ್ಲಿ ತುಂಬಾ ಕಡಿಮೆ ಪ್ರಮಾಣದ ಮದ್ದು ಗುಂಡುಗಳನ್ನು ಹೊತ್ತೊಯ್ಯುಬಹುದಾಗಿತ್ತು. ಒಬ್ಬರು ವಿಮಾನ ಓಡಿಸಿದರೆ ಇನ್ನೊಬ್ಬರು ವಿಮಾನದಲ್ಲಿ ಏರ‍್ಪಡಿಸಲಾಗಿರುತ್ತಿದ್ದ ಮದ್ದುಗುಂಡಗಳನ್ನು ಹಾರಿಸುತ್ತಿದ್ದರು. ಹಲವು ಅಡೆತಡೆಗಳುಳ್ಳ ಇಂತಹ ವಿಮಾನಗಳು, ಯುದ್ದದಲ್ಲಿ ಪಾಲ್ಗೊಂಡರೂ ಸುಲಬವಾಗಿ ವಿಮಾನ ಉರುಳಿಸುವ ತೋಪುಗಳ ಗುಂಡಿಗೆ ತುತ್ತಾಗುತ್ತಿದ್ದವು. (ಚಿತ್ರದಲ್ಲಿ: ವಿಕರ‍್ಸ್ ಎಪ್ವಬಿ 5 ಗನ್-ಬಸ್).

ಮೊದಲನೆ ಮಹಾ ಯುದ್ಧದ ನಂತರ ವಿಮಾನ ದಾಳಿಯ ಪ್ರಯೋಜನಗಳನ್ನು ಮನಗಂಡ ಹಲವು ದೇಶಗಳು ಹೆಚ್ಚು ಹೆಚ್ಚು ಅರಸುವಿಕೆ ಮತ್ತು ಪ್ರಯೋಗಗಳನ್ನು ನಡೆಸಿ ತಮ್ಮದೇ ಆದ ಯುದ್ದ ವಿಮಾನಗಳನ್ನು ತಯಾರಿಸ ತೊಡಗಿದವು. ಮೊದಲನೆ ಮಹಾ ಯುದ್ದದಲ್ಲಿನ ತಪ್ಪು ಒಪ್ಪುಗಳನ್ನು ಒರೆಗೆ ಹಚ್ಚಿ ವಿಮಾನಗಳಲ್ಲಿನ ಕೊರತೆಗಳನ್ನು ಕಡಿಮೆ ಮಾಡುವಲ್ಲಿ ಗೆಲುವಿನ ಹೆಜ್ಜೆ ಇಟ್ಟರು.

ತುಂಬಾ ಮುಕ್ಯವಾಗಿ ವೇಗವನ್ನು ಹೆಚ್ಚಿಸುವುದು, ತೂಕವನ್ನು ಹೊತ್ತೊಯ್ಯುವ ಕಸುವನ್ನು ಹೆಚ್ಚಿಸುವಂತ ಮಾರ‍್ಪಾಡುಗಳಾದವು. ವೇಗ ಹೆಚ್ಚಿಸುವುದು ಅದಕ್ಕೆ ತಕ್ಕಂತೆ ವಿಮಾನದ ಸ್ತಿರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮರದ ಬಾಗಗಳನ್ನು ತೆಗೆದು ಲೋಹದ ಬಾಗಗಳನ್ನು ತಯಾರಿಸಿದರೆ, ರೆಕ್ಕೆಗಳನ್ನು ಗಟ್ಟಿಗೊಳಿಸಲು ಲೋಹದ ಹೊದಿಕೆಯನ್ನು ಬಳಸ ತೊಡಗಿದರು. ಆಡುಬೆಣೆ ಬಿಣಿಗೆಯ (piston engines) ಬದಲಿಗೆ ಗಾಳಿದೂಡುಕ ಬಿಣಿಗೆಗಳನ್ನು (turbo engine) ಬಳಸಿ, ಅವುಗಳಿಗೆ ತಳ್ಳುಕವನ್ನು (propeller) ಹೊಂದಿಸಲಾಯಿತು. ವಿಮಾನದಲ್ಲಿ ಒಬ್ಬರೇ ಕೂರುವಂತೆ ವ್ಯವಸ್ತೆ ಮಾಡಿ, ಒಬ್ಬರೇ ವಿಮಾನವನ್ನು ಓಡಿಸುತ್ತಾ ದಾಳಿಯನ್ನು ಕೂಡಾ ಮಾಡಬಲ್ಲಂತಹ ಹೊಸ ಚಳಕಗಳು ಹೊಮ್ಮಿದವು. ವಿಮಾನ ಓಡಿಸುವವರೇ ಹಾರಿಸಬಹುದಾದ ಬಂದೂಕು, ಸಣ್ಣ ಪ್ರಮಾಣದ ತೋಪು ಹಾಗು ಸಿಡಿಮದ್ದುಗಳನ್ನು ಹೊಂದಿಸಲಾಯಿತು. ಕರಾರುವಕ್ಕಾದ ಕಯ್ವಾರ (compass) ಮತ್ತು ಅಲೆಗಾವಲು (radar) ವಯ್ರಿರಿಯ ನೆಲೆಗಳನ್ನು ಕಂಡುಹಿಡಿಯಲು ನೆರವಾಗ ತೊಡಗಿದವು. ವೇಗದ ಮಿತಿ ಗಂಟೆಗೆ 100 ರಿಂದ 400 ಮಯ್ಲಿಗಳವರೆಗೆ ಹೆಚ್ಚಾದುದರಿಂದ ಉಕ್ಕಿನ ಹಕ್ಕಿಗಳು ಗರಿ ಬಿಚ್ಚಿ ಹಾರತೊಡಗಿದವು. (ಚಿತ್ರದಲ್ಲಿ: ಸೂಪರ್-ಮರಯ್ನ್ ಸ್ಪಿಟ್-ಪಯ್ಕರ್ ).

ಎರಡನೆ ಮಹಾ ಯುದ್ದದ ಹೊತ್ತಿಗೆ ಉಕ್ಕಿನ ಹಕ್ಕಿಗಳು ಕಾಳಗದ ಬಲು ದೊಡ್ಡ ಸಲಕರಣೆಗಳಾದವು. ಎರಡನೆ ಮಹಾಯುದ್ದ ಕೊನೆಗೊಂಡ ಮೇಲೆ ವಿಮಾನಗಳ ಬೆಳವಣಿಗೆಯಲ್ಲಿ ಮತ್ತಶ್ಟು ಹೊಸ ಹೊಸ ಚಳಕಗಳು ಹೊಮ್ಮ ತೊಡಗಿದವು ಇದರಲ್ಲಿ ತುಂಬಾ ಮುಕ್ಯವಾದ ಬೆಳವಣಿಗೆ ಎಂದರೆ ಚಿಮ್ಮು ಬಿಣಿಗೆ (jet engine) ಅಳವಡಿಸಿದ್ದು.

ನಿಮಗೆ ಹಿಡಿಸಬಹುದಾದ ಬರಹಗಳು

5 Responses

 1. Mahesh Bhat says:

  ಆಡುಬೆಣೆಯಿಂದ ಚಿಮ್ಮು ಬಿಣಿಗೆಯವರೆಗಿನ ಉಕ್ಕಿನ ಹಕ್ಕಿಗಳ ಇತಿಹಾಸ ಆಸಕ್ತಿಕರವಾಗಿದೆ. ನೀವು ತೋರಿಸಿದ ಚಿತ್ರದಲ್ಲಿ ಚಿಮ್ಮು ಬಿಣಿಗೆಯ ಉಕ್ಕಿನ ಹಕ್ಕಿಗಳು ಯಾವವು?

 2. RADAR ಗೆ ತುಬ್ಬಲೆ/ ತುಬ್ಬಲೆಯ ಏರ್ಪಾಟು ಎಂಬುದು ಸರಿಯೆನಿಸುತ್ತದೆ

 3. vivekshankar153 says:

  ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಲವರಿಕೆಗಳು

 4. ಮ್ಮಹೇಶ್ ಅವರೆ: ಮಿಗ್ ೧೫ ಉಟಿಐ (೧೯೪೭) ರಿಂದ ಆಚೆಗೆ ಹುಟ್ಟಿರುವ ಎಲ್ಲಾ ಯುದ್ದ ವಿಮಾನಗಳು ಚಿಮ್ಮು ಬಿಣಿಗೆ ಹೊಂದಿವೆ.. ಮುಂದಿನ ಬರಹಗಳಲ್ಲಿ ಚಿಮ್ಮು ಬಿಣಿಗೆಗಳ ಕುರಿತಾಗಿ ಇನ್ನಶ್ಟು ವಿಶಯಗಳನ್ನ ಹಂಚಿಕೊಳ್ಳುತ್ತೇನೆ.. 🙂

 1. 26/04/2013

  […] ಹಿಂದಿನ ಬರಹದಲ್ಲಿ ತಿಳಿಸಿದಂತೆ, ಎರಡನೇ ಮಹಾ ಯುದ್ದದ ನಂತರದ ಬೆಳವಣಿಗೆಯಲ್ಲಿ ಕಾಣಬಹುದಾದ ಬಹು ಮುಕ್ಯವಾದ ವಿಶಯವೆಂದರೆ ವಿಮಾನದ ವೇಗವನ್ನು ಮುಂಚಿಗಿಂತ ದುಪ್ಪಟ್ಟು ಹೆಚ್ಚಿಸಿದ್ದು ಮತ್ತು ಇದಕ್ಕೆ ನೆರವಾದದ್ದು ಚಿತ್ರ 3 ರಲ್ಲಿ ತೋರಿಸಿರುವ ಚಿಮ್ಮು ಬಿಣಿಗೆ (jet engine). ಆಡುಬೆಣೆ ಬಿಣಿಗೆ (ಚಿತ್ರ -1) ಮತ್ತು ಗಾಳಿದೂಡುಕ ಬಿಣಿಗೆ (ಚಿತ್ರ-2) ತೆಗೆದುಹಾಕಿ ಚಿಮ್ಮು ಬಿಣಿಗೆಯನ್ನು ಅಳವಡಿಸಿದುರ ಜೊತೆಗೆ ಹೊಸ ಹೊಸ ಏರ್‍ಪಾಡಿನ ರೆಕ್ಕೆಗಳನ್ನು ಕಂಡುಹಿಡಿಯಲಾಯಿತು. […]

ಅನಿಸಿಕೆ ಬರೆಯಿರಿ:

%d bloggers like this: