ಮಿಂಬಲೆಯ ಚುನಾವಣೆ ಪ್ರಚಾರ ಕನ್ನಡದಲ್ಲಿರಲಿ

facebook-voting-header

IRIS Knowledge Foundation and Internet and Mobile Association of India ಅನ್ನುವ ಸಂಸ್ತೆ ಇತ್ತಿಚೆಗೆ ಒಂದು ಅದ್ಯಯನ ಮಾಡಿ ಮಿಂಬಲೆಯಲ್ಲಿ ಕೂಡಣ ತಾಣಗಳು ದೊಡ್ಡ ಮಟ್ಟದಲ್ಲಿ ಬಾರತದಲ್ಲಿ ಬೀಡು ಬಿಡುತ್ತಿದ್ದು, 2014ರ ಚುನಾವಣೆಯಲ್ಲಿ ಸಂಸತ್ತಿನ 543 ಸೀಟುಗಳಲ್ಲಿ ಕಡಿಮೆಯೆಂದರೂ 160 ಸೀಟುಗಳಲ್ಲಿ ಚುನಾವಣೆಯಲ್ಲಿ ಏನಾಗಬಹುದು ಅನ್ನುವುದರ ಮೇಲೆ ಹೆಚ್ಚೆನ ಪ್ರಬಾವ ಬೀರಲಿದೆ ಅನ್ನುವ ಮಾಹಿತಿ ಹೊರ ಹಾಕಿದ್ದಾರೆ.

ಈ ಸಂಸ್ತೆ ಸುಮಾರು 160 ಸೀಟುಗಳಲ್ಲಿ facebook ನ ಪ್ರಬಾವ ಹೆಚ್ಚಿದ್ದು, ಚುನಾವಣೆಯಲ್ಲಿ ಅದು ತನ್ನ ಪ್ರಬಾವ ಬೀರಲಿದೆ ಎಂದಿದೆ. ಯಾವ ಸೀಟಿನಲ್ಲಿ ಕಳೆದ ಬಾರಿಯ ಲೋಕಸಬೆಯ ಚುನಾವಣೆಯಲ್ಲಿ ಇದ್ದ ಗೆಲುವಿನ ಅಂತರಕ್ಕಿಂತ facebook ಬಳಕೆದಾರರ ಸಂಕ್ಯೆ ಹೆಚ್ಚಿದೆಯೋ ಇಲ್ಲವೇ ಯಾವ ಸೀಟಿನ ಒಟ್ಟು ಮತದಾರರಲ್ಲಿ 10% ಜನ facebook ಕಾತೆ ಹೊಂದಿದ್ದಾರೋ ಅಂತಹ ಕ್ಶೇತ್ರಗಳನ್ನು ಹೆಚ್ಚಿನ ಪ್ರಬಾವ ಬೀರುವ ಕ್ಶೇತ್ರ ಎಂದು ಈ ಅದ್ಯಯನ ಗುರುತಿಸಿದೆ. ಹಾಗೆಯೇ, ಸುಮಾರು 67 ಸೀಟುಗಳನ್ನು ಮದ್ಯಮ ಮಟ್ಟದ ಪ್ರಬಾವ ಹೊಂದಿರುವವು ಎಂದು ಗುರುತಿಸಿದೆ. ಕರ‍್ನಾಟಕದ 12 ಲೋಕಸಬಾ ಸೀಟುಗಳನ್ನು ಈ ಅದ್ಯಯನ ಕೂಡಣ ತಾಣಗಳ ಹೆಚ್ಚು ಪ್ರಬಾವ ಇರುವ ಸೀಟುಗಳೆಂದು ಗುರುತಿಸಿದೆ.

ಇದೆಲ್ಲ ದಿಟವೇ? ಅಶ್ಟೊಂದು ಪ್ರಬಾವ ಈ ಕೂಡಣ ತಾಣಗಳಿಗಿವಿಯೇ? ಅನ್ನುವ ಕೇಳ್ವಿಗಳು ಒಂದೆಡೆಯಾದರೆ, ಚುನಾವಣೆಗೆ ಒಂದು ವರ‍್ಶ ಮುಂಚೆಯೇ ಇಂತಹದೊಂದು ಅದ್ಯಯನ ಹೊರ ಬರುವುದರ ಹಿಂದೆ ಬೇರೆ ಕಾರಣಗಳಿವೆಯೇ ಎಂದು ನೋಡಬೇಕಿದೆ.

ಕರ‍್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಈ ಹೊತ್ತಲ್ಲಿ ಕಡಿಮೆಯೆಂದರೂ ನೂರಕ್ಕೂ ಹೆಚ್ಚು ಎಮ್.ಎಲ್.ಎ. ಸೀಟುಗಳಲ್ಲಿ ಬೇರೆ ಬೇರೆ ಪಕ್ಶಗಳ ಹುರಿಯಾಳುಗಳು ಕೂಡಣ ತಾಣಗಳಲ್ಲಿ ತಮ್ಮ ಕಾತೆ ತೆರೆದು ಪ್ರಚಾರ ಮಾಡುತ್ತಿದ್ದಾರೆ. ಅದು ಬರೀ ಬೆಂಗಳೂರಿನಂತಹ ಊರಿಗೆ ಸೀಮಿತವಾಗದೇ ತಿಪಟೂರು, ತುಮಕೂರು, ದಾರವಾಡ, ಬಳ್ಳಾರಿ, ಹಾವೇರಿಯಂತಹ ಚಿಕ್ಕ ಪುಟ್ಟ ಊರಿನ ಹುರಿಯಾಳುಗಳು ಈ ತಾಣಗಳನ್ನು ಬಳಸುತ್ತಿದ್ದಾರೆ ಮತ್ತು ಪ್ರಚಾರಕ್ಕೆ ಸಾಕಶ್ಟು ದೊಡ್ಡ ಮೊತ್ತದ ಹಣವನ್ನು ತೆರುತ್ತಿದ್ದಾರೆ. ಕೂಡಣ ತಾಣಗಳಾದ facebook, twitter ನಲ್ಲಿ ಹುರಿಯಾಳುಗಳಿಗೆ ಈ ಸೇವೆಯನ್ನು ಕೊಡಲೆಂದೇ ಹತ್ತಾರು ಸಂಸ್ತೆಗಳು ಹುಟ್ಟಿಕೊಂಡಿವೆ. ಹೀಗಿರುವಾಗ ಮುಂದ ಲೋಕಸಬೆ ಚುನಾವಣೆ ಹೊತ್ತಿಗೆ ಇದನ್ನು ಇನ್ನಶ್ಟು ದೊಡ್ಡದಾಗಿ ಎಲ್ಲೆಡೆ ಹರಡಲು, ಇನ್ನಶ್ಟು ಹಣ ಸಂಪಾದಿಸಲು ಈ ತಾಣಗಳೇ ಇಂತಹದೊಂದು ಅದ್ಯಯನವನ್ನು ಮಾಡಿಸಿರಬಹುದು ಅನ್ನುವ ಗುಮಾನಿಯೂ ಇದೆ. ಯಾಕೆಂದರೆ ನಮ್ಮ ಆಳ್ವಿಗರು ಚುನಾವಣೆ ಗೆಲ್ಲುವ ವಿಚಾರದಲ್ಲಿ ಎಲ್ಲ ಸಾದ್ಯವಾದ ಮಾದ್ಯಮಗಳನ್ನು ಬಳಸುತ್ತಾರೆ ಮತ್ತು ಯಾವುದನ್ನು ಕಡೆಗಣಿಸರು. ಅವರ ಅಂಜಿಕೆ, ಅಳುಕು ಕೂಡಣ ತಾಣಗಳಿಗೆ ಕೊಬ್ಬರಿ ಬೆಲ್ಲ ಕೊಡುವುದು ಕಂಡಿತ.

ಏನಿರಲಿ, ಈ ರೀತಿ ಕೂಡಣ ತಾಣಗಳಲ್ಲಿ ನಮ್ಮ ಜನನಾಯಕರು ಬಂದರೆ ಅವರನ್ನು ತಲುಪುವುದು ಮತ ಕೊಡುವ ನಮಗೆ ಇನ್ನಶ್ಟು ಸುಲಬ. ಈ ಹುರಿಯಾಳುಗಳು ತಂತ್ರಜ್ನಾನದ ಬಳಕೆಯ ವಿಶಯ ಬಂದಾಗ ಅದು ಕೇವಲ ಇಂಗ್ಲಿಶಿನಲ್ಲಶ್ಟೇ ಸಾದ್ಯ ಅನ್ನುವ ನಿಲುವು ಹೊಂದಿದ್ದಾರೆ. ಬೀದಿ ಬದಿಯ ಪ್ರಚಾರಕ್ಕಶ್ಟೇ ಕನ್ನಡ ಸಾಕು, ಮಿಂಬಲೆಯ ಪ್ರಚಾರಕ್ಕೆ ಇಂಗ್ಲಿಶೇ ಬೇಕು ಅನ್ನುವ ತಪ್ಪು ನಿಲುವು ಹೊಂದಿರುವ ಅವರಿಗೆ ಈ ನಿಟ್ಟಿನಲ್ಲಿ ಮತ ಕೊಡುವ ನಾವೇ ತಿಳಿ ಹೇಳಬೇಕು ಮತ್ತು ಅಲ್ಲೆಲ್ಲ ಕನ್ನಡ ನೆಲೆ ನಿಲ್ಲುವಂತೆ ಮಾಡಬೇಕು. ಕನ್ನಡದ ಸಾದ್ಯತೆ ಹೆಚ್ಚಿಸುವುದರಲ್ಲಿ ಇಂತಹ ಕೆಲಸಗಳು ಬಹಳ ಮುಕ್ಯ.

ವಸಂತ ಶೆಟ್ಟಿ

(ಚಿತ್ರ:  http://www.digitaltrends.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: