ಗೆಳತಿ, ನೀ ಇಲ್ಲದ ಹೊತ್ತು

missing

ನೀ ದೂರ ಹೋದಾಗ ಹಾಕಲೆಂದೇ ಮೆಲುಕು
ಬಿಟ್ಟು ಹೋಗಿರುವೆಯಾ ಇಲ್ಲಿ ನಿನ್ನೆನಪ ಗುಟುಕು?
ಅಗಲಿಕೆಯ ಚಿಂತೆಗೆ ಒಳ ಹರುಕು ಮುರುಕು
ನನ್ನೊಡತಿ, ಸಾಕು ನೀ ಹೋಗಿದ್ದು ಹಿಂತಿರುಗಿ ಬಾ ಚುರುಕು|

ಹೊತ್ತಿಲ್ಲ ಗೊತ್ತಿಲ್ಲ ಬರುತಿರುವೆ ಕನಸಿನಲಿ
ಮುತ್ತಿಟ್ಟು ಮರೆಯಾದೆ ಸಿಗದಂತೆ ನಸುಕಿನಲಿ
ಮೋರೆಯ ಬಳಿ ಬಾಯಿ ತರುತಿರುವೆ ಮಬ್ಬಿನಲಿ
ಹೆಣ್ಣೇ, ಮಿಡುಕೆದ್ದೆ ನೀ ಕೆನ್ನೆ ಕಚ್ಚುವ ಮುನ್ನದಲಿ |

ತಿರುಗುವುದ ಮರೆತಿದೆಯ ಈ ನೆಲವು ಅನಿಸುತಿದೆ
ನೊಗ ಹೊತ್ತ ಎತ್ತಂತೆ ಈ ಹೊತ್ತು ಸಾಗುತಿದೆ
ದೂರವನು ಜರಿಯುತ್ತ ನಲಿವಿದೋ ಕೊರಗುತಿದೆ
ಹುಡುಗಿ, ಈ ಪಾಡು ನನ ಬಿಟ್ಟು ಇನ್ನಾರಿಗು ತಿಳಿಯದೆ |

ಮಂಜಿರುವ ಮುಂಜಾವು ಉಲ್ಲಾಸ ಎನಿಸದು
ಕೆಮ್ಮುಗಿಲ ನೋಡುತಿರೆ ಕರಿಮೋಡ ಕಂಡಿಹುದು
ಎಳೆ ಬಿಸಿಲ ತಿಳಿ ಹಗಲು ಮಬ್ಬಾಗಿ ಹೋಗಿಹುದು
ನನ್ನುಸಿರೆ, ಕೇಳಿಸುವ ಕಿವಿಗಳಿಗೆ ಈಗ ಕಿರುಚಿದರು ಕೇಳಿಸದು|

ಕಣ್ತುಂಬ ನೋಡುವ ತವಕವನು ತಾಳೆನು
ಹತ್ತಿ ಬರಲೇನು ಕಯ್ಗೆ ಸಿಕ್ಕಂತ ಗಾಡಿಯನು
ನಡುವಿರುಳ ಮುನ್ನವೇ ನಿನ ಮನೆಯ ಸೇರುವೆನು
ಒಲವೆ, ಕಣ್ತುಂಬಿಸಿ ಕೊಂಡು ಕೂಡಲೇ ಹೊರಡುವೆನು|

ಯಾರಾರು ಕೂಗಿದರೆ, ಅಲೆಯುಲಿಯು ಅಲುಗಿದರೆ
ನೀ ಕರೆದೆ ಎಂದೆನಿಸಿ ಚಡಪಡಿಸಿ ನೋಡುತಿರೆ
ತಂಗಾಳಿ ನಸುನಕ್ಕು ಎನಗೆ ನಿನ ಹಿತವ ತಿಳಿಸುತಿರೆ
ಗೆಳತಿ, ತಲ್ಲಣವು ತುಸುಮಾಸಿ ಚಿಂತೆಯಾಗಿದೆ ಮರೆ |

ನಾ, ಬೀಳ್ಕೊಟ್ಟು ಬಂದಲ್ಲೇ ನಿನ್ನೆದುರು ನೋಡುವವ
ನೀ ಬಳಿಯಲಿರದಾಗ ನಿನ್ನನ್ನೆ ನೆನೆಯುವವ
ನಿನಗೆಂದೆ ಒಲವಿನ ಓಲೆಯನು ಬರೆಯುವವ
ಇಂತಿ ನಿನ್ನ, ನಿನಗಾಗಿ ಸಾಯುವ ನಿನಗೆಂದೆ ಬದುಕಿರುವವ |

– ರತೀಶ ರತ್ನಾಕರ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: