ಮುಕ ಸಿಂಡರಿಸಿಕೊಂಡ ಬೆಕ್ಕಿಗೆ ಎಶ್ಟು ’ಮೆಚ್ಚುಗೆ’?

218054_426240394078393_1593712049_n

ನಡುಬಲೆಯಲ್ಲಿ, ಅದರಲ್ಲೂ ಟ್ವಿಟ್ಟರ್, ಪೇಸ್‍ಬುಕ್ಕಿನಂತಹ ಕೂಡುನೆಲೆಗಳಲ್ಲಿ (social sites), ನಗೆಚಿತ್ರಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ. ಅವುಗಳಲ್ಲಿ, ಮೇಲಿರುವ ಚಿತ್ರದಂತೆ, ಬೆಕ್ಕುಗಳಿರುವ ನಗೆಚಿತ್ರಗಳು ವಿಶೇಶವಾಗಿ ನಿಮ್ಮ ಗಮನ ಸೆಳೆದಿರಬಹುದು. ಈ ತೆರನಾದ ವಿಚಿತ್ರ ನಿಲುವಿನಲ್ಲಿರುವ ಬೆಕ್ಕಿನೊಂದಿಗೆ, ನಿಮ್ಮ ಮೊಗದ ಮೇಲೆ ನಗೆ ತರುವಂತಹ ತಮಾಶೆಯ ಕಿರು’ಬರಹವುಳ್ಳ ಚಿತ್ರಗಳಿಗೆ ಲಾಲ್‍ಕ್ಯಾಟ್ಸ್ (lolcats) ಎನ್ನುತ್ತಾರೆ. ಇದನ್ನು ಕನ್ನಡದಲ್ಲಿ ‘ನಗೆಬೆಕ್ಕುಗಳು’ ಎನ್ನಬಹುದು.

LOL ಎಂಬುದು ಇಂಗ್ಲೀಶಿನ laugh out loud (ಗಟ್ಟಿಯಾಗಿ ನಗು) ಎಂಬುದರ ಕಿರುರೂಪ. ಇದನ್ನು cats ಪದದೊಂದಿಗೆ ಜೋಡಿಸಿ lolcats ಮಾಡಲಾಗಿದೆ. ವಿಕಿಪೀಡಿಯಾದ ಪ್ರಕಾರ ಸುಮಾರು 2006ರಲ್ಲೇ ಈ ಪದ ಬಳಕೆಗೆ ಬಂದಿತ್ತು. ಹೆಸರಿಲಿ ಚಿತ್ರಮಣೆ (anonymous imageboard) 4chan.org ಅಲ್ಲಿ ಮೊದಲು ಕಾಣಿಸಿಕೊಂಡ ಈ ಪದ, ಬಳಿಕ ಹಲವು ಮಿನ್ನೆಲೆಗಳಲ್ಲಿ ಬಳಕೆಯಾಗಿ icanhascheezburger.com (ಚೀಜ್‍ಬರ್ಗರ್ ನೆಟ್‍ವರ್‍ಕ್) ಎಂಬ ಮಿನ್ನೆಲೆಯ ಮೂಲಕ ಮಂದಿ ಮೆಚ್ಚುಗೆಯನ್ನು ಪಡೆಯಿತು. ಚೀಜ್‍ಬರ್ಗರ್ ಇಂದ lolcat ಪದವಶ್ಟೆ ಅಲ್ಲ, ಇದರ ಪರಿಕಲ್ಪನೆಯೂ ಜನಪ್ರಿಯಗೊಂಡಿತು.

ಸಾಮಾನ್ಯವಾಗಿ ಮೇಲಿನ ಚಿತ್ರದ ಹಾಗೆ ಕಣ್ಣು ಹೊಡೆಯುತ್ತಲೋ ಇಲ್ಲವೇ ಅಗಲಿಸುತ್ತಲೋ, ಮುಕ ಸಿಂಡರಿಸಿಕೊಂಡೋ, ತೂಕಡಿಸುತ್ತಲೋ, ನಗುತ್ತಲೋ, ಆಕಳಿಸುತ್ತಲೋ ನಗೆಬೆಕ್ಕುಗಳು ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವು ಚಿತ್ರಗಳಲ್ಲಿ ಬಟ್ಟೆ ತೊಟ್ಟೋ, ಮೂಗಿನ ಮೇಲೆ ಕನ್ನಡಕ ಇಟ್ಟುಕೊಂಡೋ, ಹೊತ್ತಗೆ ಓದುತ್ತಲೋ, ಇಲ್ಲವೇ ಕಂಪ್ಯೂಟರ್ ಬಳಸುತ್ತಲೋ ನಗೆಬೆಕ್ಕುಗಳು, ಮನುಶ್ಯರು ಮಾಡುವ ಕೆಲಸಗಳನ್ನು ಮಾಡುತ್ತ, ನಗೆ ಪಸರಿಸುತ್ತವೆ.

ಕೆಲವೊಮ್ಮೆ ನಗೆಯ ಪರಿಣಾಮ ಹೆಚ್ಚಿಸಲು, ಚಿತ್ರದಲ್ಲಿರುವ ಬರಹದಲ್ಲಿ ಬೇಕೆಂತಲೇ ತಪ್ಪು ವ್ಯಾಕರಣವನ್ನು ಬಳಸಲಾಗುತ್ತದೆ. ಅಂತಹ ಕೆಲವು ಬರಹಗಳ ಉದಾಹರಣೆಗಳು ಇಲ್ಲಿವೆ:

  • We do not hab a drikin problum until we RUNS OUT
  • I haz let go
  • I kno we is in reseshon

ಚೀಜ್‍ಬರ್ಗರ್ ಇದನ್ನು ಕೂಡ ಚೆನ್ನಾಗಿ ಬಳಸಿಕೊಂಡಿದ್ದಾರೆ. ನಗೆಚಿತ್ರಗಳಲ್ಲದೇ ತಮ್ಮ ಬರೆಗುರುತುಗಳಲ್ಲೂ (documentation) ಬೇಕೆಂದೇ ಈ ತೆರನಾದ ತಪ್ಪು ವ್ಯಾಕರಣವನ್ನು ಬಳಸುತ್ತಾರೆ. ತಮ್ಮ ಬ್ರ್ಯಾಂಡ್ ಕಟ್ಟಿಕೊಳ್ಳುವಲ್ಲಿ ಈ ತಂತ್ರ ಅವರಿಗೆ ಒಳ್ಳೆಯ ನೆರವು ಕೂಡ ನೀಡಿದೆ. ಈಗೀಗ ಬೆಕ್ಕುಗಳಲ್ಲದೇ ನಾಯಿ, ಮೀನು, ಕರಡಿ, ಹಂದಿ ಹೀಗೆ ಎಲ್ಲ ಪ್ರಾಣಿಗಳ ನಗೆಚಿತ್ರಗಳೂ ನಡುಬಲೆಯಲ್ಲಿ ಅಡ್ಡಾಡಲು ತೊಡಗಿವೆ.

ನಿಮಗೂ ನಗೆಬೆಕ್ಕುಗಳನ್ನು ಉಂಟುಮಾಡಬೇಕೆಂಬ ಆಸೆಯೇ? ಕಶ್ಟವೇನೂ ಇಲ್ಲ. ನಿಮ್ಮ ಮನೆಯಲ್ಲಿ ಇಲ್ಲವೇ ಹೊರಗೆ ಬೀದಿಯಲ್ಲಿ ಬೆಕ್ಕಿದ್ದರೆ ಅದರ ಪೋಟೋ ಒಂದನ್ನು ತೆಗೆಯಿರಿ, ಆ ಪೋಟೋಗೆ  ತಮಾಶೆಯ ಕೆಲವು ಸಾಲುಗಳನ್ನು ಸೇರಿಸಿ ಗೆಳೆಯರೊಂದಿಗೆ ಹಂಚಿಕೊಳ್ಳಿ, ಆಶ್ಟೆ!

ಸಂದೀಪ್ ಕಂಬಿ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಚೆನ್ನಾಗಿದೆ ಬರಹ.ಇದಕ್ಕೂ ಮುಂಚೆ ಅಮೇರಿಕದಲ್ಲಿ ಬೆಕ್ಕುಗಳ್ಳನ ಆದರಿಸಿ ಬಹಳಷ್ಟು ಕಾರ್ಟೂನ್ ಗಳು ಬಂದಿವೆ . ಗಾರ್‌ಫೀಲ್ಡ್ ಹಾಗೂ ಟಾಪ್‌ಕಾಟ್ ಅಂತೂ ಎಷ್ಟು ಸಕತ್ ಆಗಿವೆ ಅಂದ್ರೆ ಹೆಳಕ್ಕೆ ಆಗಲ್ಲ.ಬೆಕ್ಕು ಅಂದ್ರೆ ಮನುಷ್ಯನಿಗೆ ಬಹಳ ಇಷ್ಟ ಹಾಗೂ ಅತಿ ಪ್ರಿಯವಾದ ಪ್ರಾಣಿ ಅಂತ ಇದರಿಂದಲೇ ಗೊತ್ತಾಗುತ್ತೆ

ಅನಿಸಿಕೆ ಬರೆಯಿರಿ: