ಇಸ್ರೋದಿಂದ ಚಂದ್ರಯಾನ-1 ಚಿತ್ರಗಳ ಬಿಡುಗಡೆ
ನೆಲದಿಂದ ಸರಿಸುಮಾರು 3,80,000 ಕಿ.ಮೀ. ದೂರವಿರುವ ತಂಪು ಕದಿರುಗಳನ್ನು ಸೂಸುವ ತಂಗದಿರನ (ಚಂದ್ರ) ಕುರಿತು ಹಲವಾರು ಅರಸುವಿಕೆಗಳು ಹಿಂದಿನಿಂದಲೂ ನಡೆದು ಬಂದಿವೆ. 1609 ರಲ್ಲಿ ಗೆಲಿಲಿಯೋ ಕಂಡುಹಿಡಿದ ದೂರಕಾಣ್ಕೆಯಿಂದ (telescope) ಮೊದಲ್ಗೊಂಡ ಚಂದ್ರನತ್ತ ಬೀರಿದ ನೋಟ ಮುಂದುವರೆದು 1959 ರಲ್ಲಿ ರಶ್ಯಾದ ಲುನಾರ-2 ಪುಟಾಣಿ ಸುತ್ತುಗ (satellite) ಚಂದ್ರನ ಮೇಲ್ಮಯ್ ಮೇಲೆ ಮೊದಲ ಬಾರಿಗೆ ಇಳಿಯಿತು. 1969 ರಲ್ಲಿ ನೀಲ್ ಆರ್‍ಮ ಸ್ಟ್ರಾಂಗ್ ಮತ್ತು ಬಜ್ ಆಲಡ್ರೀನ್ ಅವರನ್ನು ಹೊತ್ತ ಅಮೇರಿಕಾದ ಅಪೋಲೋ-11 ಮಾನವ ಮೊಟ್ಟಮೊದಲ ಬಾರಿಗೆ ತಂಗದಿರನ (ಚಂದ್ರ) ಮೇಲೆ ಕಾಲಿರಿಸುವಂತೆ ಮಾಡಿತು. ಆಮೇಲೆ ಹಲವು ನಾಡುಗಳು ಸುತ್ತುಗಳನ್ನು ಕಳಸಿ ಚಂದ್ರನ ಕುರಿತು ತಿಳಿದುಕೊಳ್ಳುತ್ತಾ ಬಂದಿವೆ.
ಬಾರತವೂ ಕೂಡ ಬಾನರಿಮೆಯಲ್ಲಿ ಹಲವು ಬೆಳವಣಿಗೆಯನ್ನು ಕಂಡು 2008 ರಲ್ಲಿ ಚಂದ್ರಯಾನ-1 ರ ಮೂಲಕ ಚಂದ್ರನ ಕುರಿತು ತಿಳಿದುಕೊಳ್ಳಲು ಮಾನವನಿಲ್ಲದ ಸುತ್ತುಗವೊಂದನ್ನು (unmanned satellite) ಕಳುಹಿಸಿ ಕೊಟ್ಟಿತ್ತು. ಚಂದ್ರಯಾನ ಸುಮಾರು 312 ದಿನಗಳ ಸುತ್ತಾಟವನ್ನು ಮುಗಿಸಿ ಅಗಸ್ಟ್ 2009 ಕ್ಕೆ ತನ್ನ ಪಯಣಕ್ಕೆ ಕೊನೆ ಹಾಡಿತ್ತು. ಈ ಹಿಂದೆ ಅಮೇರಿಕಾ, ರಶ್ಯಾ, ಚೀನಾದಂತಹ ದೇಶಗಳ ಸುತ್ತುಗಗಳು ಕಂಡುಕೊಳ್ಳದ ಹಲವು ವಿಶಯಗಳನ್ನು ಬಾರತದ ಚಂದ್ರಯಾನ-1 ಹೊರಗೆಡವಿತ್ತು. ಅದರಲ್ಲಿ ಎಲ್ಲಕ್ಕಿಂತ ಮುಕ್ಯವಾದುದೆಂದರೆ ಚಂದ್ರನಲ್ಲಿ ನೀರಿನ ಅಂಶಗಳಿವೆ ಎನ್ನುವುದು. ಇದರ ಜೊತೆಗೆ ಚಂದ್ರನ ಮೇಲ್ಮಯ್ ಗುಣಗಳ, ಅಲ್ಲಿರುವ ಅದಿರುಗಳ ಕುರಿತು ಹಲವಾರು ವಿಶಯಗಳನ್ನು ತಿಳಿಸಿಕೊಟ್ಟಿತ್ತು. ಈಗ ಇಸ್ರೋ ಇವೆಲ್ಲದರ ಕುರಿತು ತನ್ನ ಮಿಂಬಲೆ ತಾಣದಲ್ಲಿ ಚಿತ್ರಗಳ ಮತ್ತು ತಿಳಿಹಗಳ ಕಲೆತವೊಂದನ್ನು (data archive) ಬಿಡುಗಡೆ ಮಾಡಿದೆ.
ಮಾಹಿತಿ ಸೆಲೆಗಳು:
- http://www.issdc.gov.in/CHBrowse/index.jsp
- http://www.isro.org/chandrayaan1/index.aspx
- http://en.wikipedia.org/wiki/Chandrayaan-1
ಪ್ರಶಾಂತ್ ಅವರೆ, ನನ್ನ ಆಸಕ್ತಿಯ ವಿಷಯವಾದ್ದರಿಂದ ಟಿಪ್ಪಣಿ ಮಾಡಬೇಕೆನ್ನಿಸಿತು.
ಇಲ್ಲಿ ಚಂದ್ರನಿಗೆ ತಂಗದಿರ ಅನ್ನುವ ಹೆಸರನ್ನು ಬಳಸಿದ್ದೀರಿ. ಇದು ಕವಿಸಮಯವಾಗಿ ಸರಿಯೇ ಹೊರತು ಇಂತಹ ಬರಹಕ್ಕೆ ಸರಿಯಲ್ಲ. ಏಕೆನ್ನುವಿರೋ? ತಂಗದಿರ ಅನ್ನುವುದಕ್ಕಿಂತ ಚಂದ್ರ, ಚಂದಿರ ಅಂತ ಹೇಳಿದರೇ “ಎಲ್ಲರಿಗೂ” ಅರ್ಥವಾಗುವುದು ಸುಲಭ ಅನ್ನುವ ಮಾತನ್ನು ಲೆಕ್ಕದಿಂದ ಬಿಟ್ಟಿದ್ದರೂ, “ತಂಪಾದ ಕದಿರುಗಳನ್ನು ಸೂಸುವವ” ಅನ್ನುವುದು ವೈಜ್ಞಾನಿಕವಾಗಿ ಕೂಡ ಸರಿಯಲ್ಲ – ಏಕೆಂದರೆ ಚಂದಿರ ಯಾವುದೇ ಕಿರಣಗಳನ್ನೂ ಸೂಸಲಾರ. ಇಂತಹ ವಿಷಯಗಳ ಬಗ್ಗೆ ಬರೆಯುವಾಗ. ಕವಿಸಮಯಕ್ಕಿಂತ ಕರಾರುವಾಕ್ಕಾಗಿರುವುದು ಮುಖ್ಯವಾಗುತ್ತದೆ.
ಇಂತಹ ಪದಗಳ ಬಳಕೆಯನ್ನೂ, ಈ ರೀತಿಯ ಬರಹಗಳಲ್ಲಿ “ಅಕರಣಿಕಾರಕ”ದಂತಹ ಪದಗಳನ್ನು ದೂರವಿಟ್ಟಷ್ಟೇ ದೂರವಿಡಬೇಕು!
ಇಲ್ಲಿ ಹೆಚ್ಚು ಹೆಚ್ಚು ಅಚ್ಚಗನ್ನಡದ ಪದಗಳನ್ನು ಬಳಸುವ ಒಂದು ಪ್ರಯೋಗ ನಡೆಯುತ್ತಿದೆ. ’ಹೆಚ್ಚು ಹೆಚ್ಚು’ ಎಂಬುದರ ಹುರುಳು ಎಲ್ಲರಿಗೂ ಒಂದೇ ಇರಬೇಕಿಲ್ಲ, ಇರುವುದೂ ಇಲ್ಲ. ನೀವು ಚಂದ್ರ / ಚಂದಿರ ಎಂದೇ ಬಳಸಿ, ಬೇಡವೆಂದವರು ಯಾರು? ಇಲ್ಲಿ ಒಬ್ಬ ಬರಹಗಾರ ಒಂದು ಹೊಸ ಪದ ಬಳಸಿಬಿಟ್ಟರೆ ಇಶ್ಟೆಲ್ಲ ಆತಂಕವೇಕೆ?
@ ಪ್ರಶಾಂತ ಸೊರಟೂರ
“ತಂಪಾದ ಕದಿರುಗಳನ್ನು ಸೂಸುವವ” ಅನ್ನುವುದು ವೈಜ್ಞಾನಿಕವಾಗಿ ಕೂಡ ಸರಿಯಲ್ಲ – ಏಕೆಂದರೆ ಚಂದಿರ ಯಾವುದೇ ಕಿರಣಗಳನ್ನೂ ಸೂಸಲಾರ.”
ಇದು ಸರಿಯಾಗಿದೆ.
ಚಂದ್ರ ಸೂರ್ಯರಶ್ಮಿಯನ್ನು reflect-ಇಸುವನು. ಇನ್ನು ಅದು ತಣ್ಣಗಿರಲು ಕಾರಣ, ರಶ್ಮಿಯ density.
ತುಸು ವ್ಯಾಕರಣದ ಕಡೆಗೂ ಗಮನವಹಿಸಿ.
ನೀಲಂಜನ ಅವರೆ ನಿಮ್ಮ ಅನಿಸಿಕೆಗಳಿಗೆ ನನ್ನಿ/ದನ್ಯವಾದಗಳು. ೧) ಇದು ಅರಿಮೆಯ (science) ವಿಶಯವಾದ್ದರಿಂದ ನೀವು ಹೇಳುವ ವಿಶಯ ಒಂದು ಹಂತಕ್ಕೆ ಸರಿ ಅದಕ್ಕೆ ತಂಗದಿರ ಅಂತಾ ಬಳಸಿದ ಎರಡೂ ಕಡೆ ಆವರಣದಲ್ಲಿ ಚಂದ್ರ ಅಂತಾನೂ ಕೊಟ್ಟಿರುವೆ ೨) ಪದಗಳ ಹುಟ್ಟು ಮತ್ತು ಆಮೇಲೆ ಅವುಗಳ ದಿಟವಾದ ಹುರುಳು ಬೇರೆ ಬೇರೆಯಾಗಿರುವುದು ಹಲವಾರು ಕಡೆ ಕಂಡು ಬರುತ್ತದೆ. ಕನ್ನಡದ ಪದ ತಂಗದಿರ ಹುಟ್ಟಿದಾಗ ಅದರ ಬಗ್ಗೆ ಕನ್ನಡಿಗರಿಗೆ (ಜಗತ್ತಿನ ಇತರೆಡೆಯೂ) ಅಶ್ಟೇನೂ ಗೊತ್ತಿರಲಿಲ್ಲ ಈಗ ಗೊತ್ತಾಗಿದೆ. ಆದರೆ ಹಾಗಾಂತ ಆ ಪದ ಹುರುಳಿನ ಹಿನ್ನೆಲೆ ತಿಳಿಸುವುದರಲ್ಲಿ, ಬರಹದಲ್ಲಿ ಬಳಸುವುದರಲ್ಲಿ ಅಂತದೇನೋ ತೊಡಕು ಅನಿಸುವುದಿಲ್ಲ. ಮೇಲಾಗಿ Popular Science ಬರೆಯುವಾಗ ಬರಹಗಾರನಿಗೆ ಈ ಈಳಿಗೆ (ಸ್ವಾತಂತ್ರ್ಯ) ಇರುತ್ತೆ ಅಂತಾ ನನ್ನನಿಸಿಕೆ. (formal science ಬರೆಯುವಾಗ ತಂಗದಿರ/ಚಂದ್ರ/ಚಂದಿರ ಪದ ಬಳಸಿ ಅವುಗಳ ಹುರುಳಿನಲ್ಲ್ಲಿತೊಡಕಿದ್ದರೆ ಬಿಡಿಸಿ ಬರೆಯುವುದನ್ನು ಕಯ್ ಬಿಡಬಹುದು)
ನೀಲಾಂಜನ,
‘ತಂಗದಿರ’ ಎಂಬ ಬಳಕೆ – ಇದನ್ನು ನಾನು ಕಣ್ಣಿನಿಂದ ನೋಡಿದಾಗ
ಇದು ವಯ್-ಗ್ನಾನಿಕವಾಗಿ ಸರಿಯೆನಿಸಿತು. ಯಾಕಂದರೆ ತಣ್ಣಗಿನ ಕದಿರನ್ನು ಸೂಸುವ ಚಂದಿರನನ್ನು ‘ತಂಗದಿರ’ ಎಂದು ಕರೆಯುವುದು ಅರಿಮೆಯ ಬರಹಗಳಿಗೆ ಚೆನ್ನಾಗಿ ಹೊಂದುತ್ತೆ
@ ಮಾಯ್ಸಾ ಮತ್ತು ನೀಲಂಜನ್
ಕನ್ನಡದ ‘ತಂಗದಿರ’ Scientific ಅಲ್ಲ ಅಂತಾದರೆ ಸಂಸ್ಕ್ರತ ಮತ್ತು ಇಂಗ್ಲಿಶ ಪದಗಳು ಎಶ್ಟು scientific ಅಂತಾ ನೋಡೋಣ..
1) ಚಂದ್ರ : ಇದರ ನೇರ ಹುರುಳು ‘Shining’ ಅಂದರೆ ನೆಲದಲ್ಲಿರುವವರಿಗೆ ಇದು ಹೊಳೆಯಬಹುದು ಆದ್ರೆ ಇದು Scientific ಆಗಿ ಏನು ಹೇಳುತ್ತೆ ?
2) moon : ಇದು ಬಂದಿದ್ದು ಪ್ರೋಟೋ ಇಂಡೋ ಯುರೋಪಿನ ‘me >> measure’ನಿಂದ ಇಲ್ಲವೇ ಲ್ಯಾಟಿನ್ನಿನ ‘mensis >> month’ ನಿಂದ. month ಎಂಬ ಹುರುಳು moon ಗೆ Scientific ಕ್ಕಾಗಿ ಎಶ್ಟು ಹೊಂದುತ್ತೆ ?
ಏ, ಮೊದಲೆಲ್ಲಾ ಮಂದಿ ಚಂದ್ರನ ನೋಡಿಯೇ ತಿಂಗಳು ಎಣಿಸ್ತಾ ಇದ್ದರೂ ಅದಕ್ಕೆ ಅದು month ಆಗಿದೆ ಅಂತಾ ಅಂದುಬಿಡಬಹುದು ಆದ್ರೆ ಇಲ್ಲಿ ಮಾತಾಡುತ್ತಿರುವ scientific ಹುರುಳಿಗೆ ಸಮಾನವಾಗಲಾರದು… ಅದಕ್ಕೆ ನಾನು ಮೇಲೆ ಅಂದಿದ್ದು ಪದಗಳ ಹುರುಳು ಮುಂದೆ ಹೋದಂತೆಲ್ಲಾ ಬೇರೆಯಾಗಬಹುದು ಆದ್ರೆ ಅವುಗಳ ಬಳಕೆ ತಪ್ಪು ಅನ್ನಲಿಕ್ಕೆ ಆಗದು. ಇದು ಎಲ್ಲ ನುಡಿಗೂ ಹೊಂದುತ್ತೆ ಬರೀ ಕನ್ನಡ ಪದಗಳಿಗಲ್ಲ.
ಹಾ, ತಂಗದಿರ ಇದು ನಾನು ಹುಟ್ಟುಹಾಕಿದ ಪದವಲ್ಲ, ಕನ್ನಡದಲ್ಲಿ ಮೊದಲೇ ಬಳಕೆಯಲ್ಲಿರುವಂತದು (ಇದಕ್ಕಾಗಿ ಬರಹ ಮಿಂಬಲೆಯಲ್ಲಿನ ಜಿ.ವಿ. ನಿಗಂಟು ನೋಡಿ)
@ಪ್ರಶಾಂತ ಸೊರಟೂರ |
ನೋಡಿ . ‘ಸೂಸು’ ಅನ್ನೋ ಪದದ ಬಳಕೆಗೆ ಇಲ್ಲಿ ತಕರಾರು.
ಇನ್ನೂ ಪದದ ಹುಟ್ಟು ಏನೇ ಇದ್ದಾರು ಅದಕ್ಕೆ ವಾಡಿಕೆಯ ಅರ್ಥವೇ ಮುಖ್ಯ.
ಕನ್ನಡದಲ್ಲಿ ಕರಾರುವಕ್ಕಾಗಿ ವಿಜ್ಞಾನದ ಬರಹಬರಬೇಕು, ಎಂಬ ಆಶಯದಿಂದಲೇ ನಿಮಗೆ ನಾನಂತೂ ಸಲಹೆ-ಕೊಟ್ಟಿದ್ದು .
‘ಮರುಕದಿರಿಸು’ ಎಂಬ ಹೊಸಪದ ಮಾಡಬಹುದೇ?
@ಮಾಯ್ಸಾ, ’ಮರುಕದಿರಿಸು’ ಬಳಸಬಹುದು. ನನ್ನಿ.
ಪ್ರಶಾಂತ್ ಅವರೇ, “ತಂಗದಿರ” ಬಳಕೆ ತುಂಬಾ ಚೆನ್ನಾಗಿದೆ. ಬರಹ ಕೂಡ ತುಂಬ ಚೆನ್ನಾಗಿದೆ.
ಪ್ರಶಾಂತ್ ಅವರೆ,
ತಂಗದಿರ ನೀವು ಹುಟ್ಟುಹಾಕಿದ ಪದವಲ್ಲ ಅಂತ ಗೊತ್ತಿದೆ – ಆದರೆ ಬಳಕೆಯಲ್ಲಿರುವ ಪದದ ಬದಲಾಗಿ ಹೊಸ ಪದವನ್ನು ಬಳಸುವಾಗ, ಅದು ಹಳೆಯ ಪದಕ್ಕಿಂತ ಇನ್ನೂ ಹೆಚ್ಚು ಕರಾರುವಾಕ್ಕಾಗಿದೆಯೇ ಅನ್ನುವುದನ್ನು ಮನಸ್ಸಿನಲ್ಲಿಡಬೇಕು ಅಂತ ಹೇಳಿದ್ದಷ್ಟೆ.
ನೀಲಂಜನ ಅವರೆ, ತಂಗದಿರ, ಚಂದ್ರ, moon ಇವ್ಯಾವು ಕರಾರುವಕ್ಕಾದ ಹುರುಳು ಕೊಡುವುದಿಲ್ಲ. ಬಳಕೆಯಲ್ಲಿರುವ ಪದವೆಂದು ’ಚಂದ್ರ’ ಪದವನ್ನು ಆವರಣದಲ್ಲಿ ಆಗಲೇ ಕೊಟ್ಟಿರುವೆ. ತಂಗದಿರ ಪದ ಬಳಸಿದ್ದಕ್ಕೆ ನನಗೆನೂ ಕೊರತೆ ಕಾಣುತ್ತಿಲ್ಲ. ನಿಮ್ಮ ಅನಿಸಿಕೆಗಳಿಗೆ ನನ್ನಿ.