ಪರಂಪರೆಯ ನೆಪವೊಡ್ಡಿ ಅರಿಮೆಗೇಡಿನ ತೋರಣ
ತಮ್ಮ ಇತ್ತೀಚಿನ ಬರಹವೊಂದರಲ್ಲಿ ಡಾ. ಮಾದವ ಪೆರಾಜೆ ಎಂಬುವರು ಮೇಲುಮೇಲಕ್ಕೆ ಅರಿಮೆಯ ಬರಹದಂತೆ ಕಾಣುವ ಟೀಕೆಯೊಂದನ್ನು ‘ಎಲ್ಲರಕನ್ನಡ’ವನ್ನು ಬೆಂಬಲಿಸುವವರ ಮೇಲೆ ಬಿಟ್ಟಿದ್ದಾರೆ. ‘ಕನ್ನಡದಲ್ಲಿ ಹೊಸ ಬರವಣಿಗೆಯ ಕ್ರಮದಲ್ಲಿ ಬರೆಯುವ ಕ್ರಮವೊಂದು ಈಗ ಮೆಲ್ಲನೆ ತಲೆದೋರುತ್ತಿದೆ’ ಎಂದು ಒಪ್ಪಿಕೊಳ್ಳುವ ಪೆರಾಜೆಯವರು, ಡಾ. ಡಿ. ಎನ್. ಶಂಕರಬಟ್ಟರ ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎನ್ನುವ ಅವರ ಪುಸ್ತಕದಲ್ಲಿ ಇದರ ಮೊದಲ ಪ್ರಯತ್ನ ಕಂಡುಬರುತ್ತದೆ’ ಎನ್ನುತ್ತಾರೆ. ಇದನ್ನು ಓದಿ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಏಕೆಂದರೆ, ಆ ಹೊತ್ತಗೆ ‘ಹೊಸಬರಹ’ದಲ್ಲಿ ಇಲ್ಲವೂ ಇಲ್ಲ, ಅದರಲ್ಲಿ ಹೊಸಬರಹವನ್ನು ಬಳಸಬೇಕೆಂಬ ಸಲಹೆಯೂ ಇಲ್ಲ!
ಯಾವುದಾದರೂ ಹೊತ್ತಗೆಯ ಬಗ್ಗೆ ತಮ್ಮ ಟೀಕೆಯನ್ನು ಬರೆಯುವ ಮುನ್ನ ಅದನ್ನು ತೆಗೆದು ಒಮ್ಮೆ ಒಳಗೆ ಇಣುಕಿ ನೋಡುವುದು ಒಳ್ಳೆಯದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ನುಡಿ ವಿಬಾಗದ ಮುಕ್ಯಸ್ತರಿಗೇ (ಹವುದು, ಪೆರಾಜೆಯವರ ಹುದ್ದೆ ಇದು) ಹೇಳಿಕೊಡಬೇಕಾದ ಸ್ತಿತಿಯಿರುವುದು ಕನ್ನಡನಾಡಿನ ಇಂದಿನ ಪಾಡು. ಇದು ಸೋಜಿಗದ ಸಂಗತಿಯೇನಲ್ಲ, ಏಕೆಂದರೆ ಮೊದಲಿನಿಂದಲೂ ನಾವು ಕನ್ನಡಿಗರು ನುಡಿಯರಿಮೆಯನ್ನು ಕಡೆಗಣಿಸಿಕೊಂಡೇ ಬಂದಿದ್ದೇವೆ. ನಮಗೆ ನಮ್ಮ ನುಡಿಯ ಬಗೆಗಿನ ಅರಕೆ ಸರಿಯಾಗಿ ನಡೆಯಬೇಕೆಂಬ ಕಾಳಜಿ ಇಲ್ಲದೆ ಹೋಗಿರುವುದೇ ಇದಕ್ಕೆ ಕಾರಣ.
ಪೆರಾಜೆಯವರು ‘ಕೇಶಿರಾಜನೇ ಮೊದಲಾದ ವಯ್ಯಾಕರಣಿಗಳು ಪ್ರಾಚೀನ ಕವಿಗಳ ಕಾವ್ಯದಲ್ಲಿ ಬಳಕೆಯಾದ ಬರೆಹದ ಕನ್ನಡಕ್ಕೆ ವ್ಯಾಕರಣವನ್ನು ಬರೆದಿದ್ದರು’ ಎನ್ನುತ್ತಾರೆ. ಆದರೆ ಕೇಶಿರಾಜನ ಮುಂತಾದವರ ವ್ಯಾಕರಣಗಳೆಲ್ಲವೂ ಹೇಗೆ ಸಂಸ್ಕ್ರುತದ ವ್ಯಾಕರಣವನ್ನೇ ಕನ್ನಡಕ್ಕೆ ಅಳವಡಿಸುವ ಕೆಲಸವನ್ನು ಮಾಡಿವೆ ಎಂದು ಡಿ. ಎನ್. ಶಂಕರಬಟ್ಟರು ತೋರಿಸಿ ಕೊಟ್ಟಿದ್ದಾರೆ. ಆ ವಯ್ಯಾಕರಣಿಗಳಿಗೆ ‘ಪ್ರಾಚೀನ ಕವಿಗಳ ಕಾವ್ಯದಲ್ಲಿ ಬಳಕೆಯಾದ ಬರೆಹದ ಕನ್ನಡಕ್ಕೆ ವ್ಯಾಕರಣವನ್ನು’ ಬರೆಯುವ ಗುರಿಯಿದ್ದದ್ದು ನಿಜ, ಆದರೆ ಆ ಗುರಿಯನ್ನು ಅವರು ಮುಟ್ಟಲು ಆಗಲಿಲ್ಲ ಎಂದು ಬಟ್ಟರು ತೋರಿಸಿಕೊಟ್ಟಿದ್ದಾರೆ – ಅವರು ಸಂಸ್ಕ್ರುತ ವ್ಯಾಕರಣವನ್ನು ಒಂದು ರೀತಿಯಲ್ಲಿ ಎಲ್ಲ ನುಡಿಗಳಿಗೂ ಒಪ್ಪುವ ವ್ಯಾಕರಣವೆಂದು ತಿಳಿದು ಮುಂದುವರೆದಿದ್ದರಿಂದ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ‘ನಿಜಕ್ಕೂ ಹಳಗನ್ನಡ ವ್ಯಾಕರಣ ಎಂತಹದು?’ ಎಂಬ ಹೊತ್ತಗೆಯಲ್ಲಿ ಓದಬಹುದು.
ಮತ್ತೆ, ಒಂದು ಅದ್ಬುತ ಪೆರಾಜೆಯವರ ಬರಹದಲ್ಲಿ ಕಾಣಸಿಗುತ್ತದೆ. ಅದೇನೆಂದರೆ, ಹಲ್ಮಿಡಿ ಶಾಸನದಲ್ಲಿ ‘ಪೆತ್ತಜಯನ್’ ಎಂಬ ‘ಅಸಹಜ ಪ್ರಯೋಗ’ವಿತ್ತಂತೆ, ಅದು ಕವಿರಾಜಮಾರ‍್ಗದಲ್ಲಿ ‘ರಾವಣನಂ ಕೊಂದು ಜಯಶೀ ವಧುವಂತಾಳ್ದಿ’ ಎಂದು ಬದಲಾಗುತ್ತದೆಯಂತೆ, ಆಮೇಲೆ ಅದನ್ನು ಪಂಪನು ‘ ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದು’ ಎಂದು ಸರಿಗೊಳಿಸುತ್ತಾನಂತೆ ಎಂದು ತಮ್ಮ ವಾದಕ್ಕೆ ಸಂಬಂದವಿಲ್ಲದ ವಿಶಯವನ್ನು ಎತ್ತಿರುವುದು. ‘ಅಸಹಜ’ದಿಂದ ‘ಸರಿ’ ಪ್ರಯೋಗಕ್ಕೆ ಕೇಶಿರಾಜ ಮುಂತಾದವರ ಸೊಲ್ಲರಿಮೆಗಳು ಕನ್ನಡದ ಬರಹಗಾರರನ್ನು ಕೊಂಡೊಯ್ಯುತ್ತವೆ ಎಂಬುದು ಪೆರಾಜೆಯವರ ಅಂಬೋಣ. ಅಲ್ಲ, ‘ಪೆತ್ತಜಯನ್’ ಎಂಬುದು ಒಂದು ಪದ. ಅದನ್ನು ಮಿಕ್ಕೆರಡು ಪದಕಂತೆಗಳಿಗೆ ಹೋಲಿಸುವುದು ಎಂತಹ ಜಾಣತನ? ಕುದುರೆಗೂ ಕತ್ತೆಗೂ ಹೋಲಿಕೆ ಮಾಡುವ ಪರಂಪರೆ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ತಕ್ಕುದಲ್ಲವಶ್ಟೇ? ನಾಲ್ಕು ಹಳೆಗನ್ನಡದ ಪದಗಳನ್ನು ಓದುಗರ ಮೇಲೆ ಎರಚಿದ ಕೂಡಲೆ ಅವರು ದೂರ ಹೊರಟುಹೋಗುತ್ತಾರೆ, ಆಗ ಹಾಳೂರಿಗೆ ನಾನೇ ಗವ್ಡನಾಗಬಹುದು ಎಂದು ನಮ್ಮ ನಾಡಿನ ಅತಿ ಮುಕ್ಯವಾದ ವಿಶ್ವವಿದ್ಯಾಲಯದಲ್ಲಿ ಸಾಕಶ್ಟು ದೊಡ್ಡ ಹುದ್ದೆಯಲ್ಲಿರುವವರೇ ಅಂದುಕೊಂಡರೆ ಇನ್ನು ಅವರನ್ನು ನಂಬಿಕೊಂಡ ಕಲಿಗರ ಗತಿ ಏನು?
ಪೆರಾಜೆಯವರ ಮತ್ತೊಂದು ಅರಿಮೆಯ ನುಡಿಮುತ್ತು ಹೀಗಿದೆ: ‘ಆಡು ಮಾತಿನಲ್ಲಿ ಶುದ್ದಿಯನ್ನು ಹೇಗೆ ಕಾಪಾಡಬೇಕೆಂಬುದನ್ನು ವಿವರಿಸುವುದು ಸಂಸ್ಕ್ರುತ ವಯ್ಯಾಕರಣಿಗಳ ಉದ್ದೇಶವಾಗಿತ್ತು’. ಏನು? ಸಂಸ್ಕ್ರುತ ಆಡುಮಾತಿನಲ್ಲಿತ್ತು ಎಂದು ಈ ಪ್ರೊಪೆಸರಿಗೆ ಹೇಳಿಕೊಟ್ಟವರಾರು? ನಿಜಕ್ಕೂ ಆಡುಮಾತಿನಲ್ಲಿದ್ದದ್ದು ಪ್ರಾಕ್ರುತವೇ ಹೊರತು ಸಂಸ್ಕ್ರುತವಲ್ಲ; ಪಾಣಿನಿಯೇ ಮೊದಲಾದವರು ಆಡುಮಾತಿನ ಸೊಲ್ಲರಿಮೆಯನ್ನು ಬರೆಯಲಿಲ್ಲ, ಬರಹದ ಸಂಸ್ಕ್ರುತದ ಸೊಲ್ಲರಿಮೆಯನ್ನು ಬರೆದಿದ್ದು. ಸಂಸ್ಕ್ರುತವನ್ನು ‘ಆಡು’ವವರು ಬರೆದಂತೆಯೇ ‘ಆಡಬೇಕು’, ಏಕೆಂದರೆ ಅದು ’ಆಡು’ನುಡಿಯೇ ಅಲ್ಲ.
ಕೇಶಿರಾಜನು ಸೋಮಾರಿತನವನ್ನು ತೋರಿಸಿದ್ದಾನೆಂದು ಶಂಕರಬಟ್ಟರು ಒಂದು ಕಡೆ ಹೇಳಿರುವುದು ನಿಜ. ಆದರೆ ಹಾಗೆ ಅಂದುಬಿಟ್ಟರು, ಹಿಂದಿನವರಿಗೆ ಕಣ್ಮುಚ್ಚಿಕೊಂಡು ಸಲಾಮು ಹೊಡೆಯುಯುವ ಪರಂಪರೆಗೆ ದಕ್ಕೆ ತಂದುಬಿಟ್ಟರು ಎಂದ ಮಾತ್ರಕ್ಕೆ ಶಂಕರಬಟ್ಟರು ಹೇಳಿದ ಮಾತಿನ ಅರಿಮೆತನ ಹೊರಟುಹೋಗುವುದಿಲ್ಲ. ದಿನಬೆಳಗಾದರೆ ಪರಂಪರೆಯ ಹಿಂದಿನವರ ‘ಪ್ರಾತಸ್ಮರಣೆ’ ಮಾಡುವುದನ್ನೇ ಅರಿಮೆ ಎಂದು ತಿಳಿದು ಕುಳಿತಿರುವ ‘ಬಾಶಾವಿಗ್ನಾನಿ’ಗಳಿಗೆ ಏನು ಹೇಳುವುದು? ಎರಡಕ್ಕೆ ಎರಡನ್ನು ಕೂಡಿದರೆ ನಾಲ್ಕು ಎಂದು ಇಪ್ಪತ್ತೊಂದನೆಯ ಶತಮಾನದ ಚಿಕ್ಕ ಮಗು ಹೇಳಿದರೂ ಅದು ಸರಿ, ಎಶ್ಟೇ ಹಿಂದಿನ ‘ಪ್ರಾತಸ್ಮರಣೀಯ’ರು ’ನಾಲ್ಕಲ್ಲ ಮೂರು’ ಎಂದು ಹೇಳಿದ್ದರೂ ತಪ್ಪೇ. ಇರಲಿ.
ಬಟ್ಟರು ಕೇಶಿರಾಜನ ಸೋಮಾರಿತನದ ಬಗ್ಗೆ ಮಾತನಾಡಿರುವ ಒಂದು ಎತ್ತುಗೆಯನ್ನು ತೆಗೆದುಕೊಳ್ಳೋಣ. ಕನ್ನಡದ ಸೇರಿಕೆಯ ಕಟ್ಟಳೆಗಳ ಬಗ್ಗೆ ಹೇಳುವಾಗ (ಎತ್ತುಗೆಗೆ) ‘ಕಾಡು + ಇಗೆ = ಕಾಡಿಗೆ’ ಎನ್ನುವ ಕಡೆ ಏಕೆ ಉಕಾರ ಬಿದ್ದುಹೋಗುತ್ತದೆ ಮತ್ತು (ಎತ್ತುಗೆಗೆ) ‘ಗುರು + ಇಗೆ = ಗುರುವಿಗೆ’ ಎನ್ನುವ ಕಡೆ ಏಕೆ ಬೀಳದೆ ವಕಾರದ ಆಗಮವಾಗುತ್ತದೆ ಎಂದು ವಿವರಿಸಲು ಕೇಶಿರಾಜನಿಗೆ ಸಾದ್ಯವಾಗದೆ, ಎರಡನೆಯದರಲ್ಲಿ ಅರ‍್ತ ಬದಲಾಗಿ ಹೋಗುವುದರಿಂದ ಆಗಮವಾಗುತ್ತದೆ, ಇಲ್ಲದಿದ್ದರೆ ಲೋಪವಾಗುತ್ತಿತ್ತು ಎಂದಿದ್ದಾನೆ. ಆದರೆ ಇದು ನಿಜಕ್ಕೂ ಸೊಲ್ಲರಿಮೆಯ ಮಟ್ಟಿಗೆ ಸೋಮಾರಿತನವೇ. ಸೊಲ್ಲರಿಗನು ಎರಡೂ ಬಗೆಯ ಸೇರಿಕೆಗಳ ದೊಡ್ಡ ಪಟ್ಟಿಗಳನ್ನು ಮಾಡಿ ಅವುಗಳಲ್ಲಿ ಎಂತಹ ಕಟ್ಟಲೆಗಳನ್ನು ಕಾಣಬಹುದು ಎಂದು ಕಂಡುಹಿಡಿಯುವ ಬದಲು ಕಯ್ಬೀಸಿ ಅರ‍್ತ ಹಾಳಾಗಿಹೋಗಬಾರದು, ‘ನಾಮರೂಡಿ’ ಇಲ್ಲವೇ ‘ನಾಮಬಾಗ’ ಅಳಿಯದೆ ಇರುವಾಗ ಮಾತ್ರ ಲೋಪ ಮಾಡಬೇಕು, ಇಲ್ಲದಿದ್ದರೆ ಆಗಮ ಮಾಡಬೇಕು ಎನ್ನುವಂತಿಲ್ಲ.
ಪೆರಾಜೆಯವರ ಪ್ರಕಾರ ‘ಯಾವುದೇ ವರ್ಣವನ್ನು ಹೇಗೆ ಉಚ್ಚರಿಸುವುದು ಎನ್ನುವುದಕ್ಕೆ ಗುರು ಪರಂಪರೆ ಎನ್ನುವುದನ್ನು ಬಿಟ್ಟರೆ ಬೇರೆ ದಾರಿಗಳಿಲ್ಲ’. ಇವರು ಹೇಳುತ್ತಿರುವುದೇನೆಂದರೆ, ಕನ್ನಡದ ಬರಿಗೆಗಳನ್ನು ಹೇಗೆ ಉಲಿಯಬೇಕು ಎಂಬುದನ್ನು ಗುರು ಪರಂಪರೆ ತೀರ‍್ಮಾನಿಸುತ್ತದೆಯಂತೆ. ಯಾವ ಗುರುಗಳು? ಯಾವ ಪರಂಪರೆ? ಮಹಾಪ್ರಾಣದ ಗುರುಗಳು, ಮಹಾಪ್ರಾಣದ ಪರಂಪರೆ. ಇದನ್ನು ಗುರುಗಳು ಶಿಶ್ಯರಿಗೆ ಏತಕ್ಕೆ ಹೇಳಿಕೊಡಬೇಕು? ಏಕೆಂದರೆ ಶಿಶ್ಯರಿಗೆ ಅದು ತಮ್ಮ ತಾಯಂದಿರಿಂದ, ತಮ್ಮ ವಾತಾವರಣದಿಂದ ಬಂದಿರುವುದಿಲ್ಲವಲ್ಲ, ಅದಕ್ಕೇ! ಅದನ್ನೇ ಅಲ್ಲವೇ ನಾವೂ ಹೇಳುತ್ತಿರುವುದು? ಕನ್ನಡದ ಬರಿಗೆಗಳನ್ನು ಉಲಿಯಲು – ಬರೀ ಉಲಿಯಲು – ಒಂದು ಗುರು ಪರಂಪರೆ ಬೇಕು ಎನ್ನುವ ಪರಿಸ್ತಿತಿ ಇರುವುದಂತೂ ನಿಜ. ಆದರೆ ಆ ಪರಿಸ್ತಿತಿ ಸರಿಯಿಲ್ಲ. ಅದರ ಬದಲಾಗಿ, ಕನ್ನಡಿಗರು ಸಹಜವಾಗಿ ಉಲಿಯುತ್ತಿರುವುದನ್ನೇ ಸರಿಯೆಂದು ಸಾರುವ ಹೊಸದೊಂದು ಪರಂಪರೆ ಬೇಕು. ಆ ಪರಂಪರೆಯನ್ನು ಕಟ್ಟಲೆಂದೇ ‘ಎಲ್ಲರಕನ್ನಡ’ ಚಳುವಳಿ ಹೊರಟಿರುವುದು. ತಾಯಂದಿರ ಪರಂಪರೆಗಿರುವ ಬೆಲೆ ಮಹಾಪ್ರಾಣದ ಗುರುಗಳ ಪರಂಪರೆಗಿಲ್ಲ ಎಂಬುದನ್ನು ಎರಡು ಸಾವಿರ ವರುಶಗಳ ಇತಿಹಾಸ ತೋರಿಸಿಕೊಟ್ಟಿದೆ. ಅದನ್ನು ಅಲ್ಲಗಳೆಯುವುದು ಪೆದ್ದತನವಾದೀತು.
ಶಂಕರಬಟ್ಟರು ನಾಮಪದವನ್ನು ‘ಕೆಲಸಪದ’ ಎಂದು ಕರೆದಿದ್ದಾರೆ ಎಂದು ಕರೆದಿರುವ ಪೆರಾಜೆಯವರು ಬಟ್ಟರ ಹೊತ್ತಗೆಗಳನ್ನು ಎಶ್ಟು ಓದಿರಬಹುದು ಎಂಬುದು ಜಗಜ್ಜಾಹೀರು. ಹಾಗೆಯೇ, ’ಬರವಣಿಗೆಯು ಆಡುಮಾತಿಗನುಗುಣವಾಗಿರಬೇಕು ಎನ್ನುವುದು ಶುದ್ದ ತಲೆಹರಟೆ ಹೊರತು ತರ‍್ಕಬದ್ಧವಾದುದ್ದಲ್ಲ’ ಎಂಬ ಅವರ ತೀರ‍್ಪು ಕೂಡ ಅದನ್ನೇ ತೋರಿಸುತ್ತದೆ. ಏಕೆಂದರೆ, ಬರವಣಿಗೆ ಆಡುಮಾತಿಗೆ ಅನುಗುಣವಾಗಿರಬೇಕು ಎಂದು ಬಟ್ಟರಾಗಲಿ ಎಲ್ಲರಕನ್ನಡ ಚಳುವಳಿಯ ಬೇರೆ ಯಾರೇ ಆಗಲಿ ಹೇಳುತ್ತಿಲ್ಲ. ನಾವು ಹೇಳುತ್ತಿರುವುದೇನೆಂದರೆ, ಬರವಣಿಗೆಯ ಕನ್ನಡವೆಂಬುದು ಬೇರೆಯೇ ಒಂದಿದೆ, ಅದರಲ್ಲಿ ಬಳಸುವ ಬರಿಗೆಗಳು ಕನ್ನಡಿಗರು ನಾಲಿಗೆಯಲ್ಲಿ ಹೊರಳುವಂತವು ಮಾತ್ರ ಆಗಿರಬೇಕು ಎಂದು, ಮತ್ತು ಕನ್ನಡದ ಬರವಣಿಗೆಯಲ್ಲಿ ಆದಶ್ಟೂ ಕನ್ನಡದ ಪದಗಳೇ ಇರಬೇಕು ಎಂದು. ಇದು ಶುದ್ದ ತಲೆಹರಟೆಯಾದರೆ ಇದರಿಂದಲೇ ಕನ್ನಡಿಗರಿಗೆ ಏಳಿಗೆ, ಇದನ್ನೇ ಕನ್ನಡಿಗರು ಮಾಡಬೇಕು.
ಮುಂದುವರೆಯುತ್ತ, ಪೆರಾಜೆಯವರು ಕನ್ನಡದಲ್ಲಿ ‘ಘನತೆ’ ಎಂಬ ಪದಕ್ಕೆ ಸಮಾನವಾದ ಪದವೇ ಇಲ್ಲ, ಮತ್ತದನ್ನು ‘ಗನತೆ ಎಂದು ಉಚ್ಚರಿಸಿದರೆ ಅದಕ್ಕೆ ಆ ತೂಕ ಬರುವುದಿಲ್ಲ’ ಎನ್ನುತ್ತಾರೆ. ಇವರಿಗೆ ಎಶ್ಟು ಸಾರಿ ಹೇಳುವುದು? ಆರೂವರೆ ಕೋಟಿ ಕನ್ನಡಿಗರು ಉಲಿಯುವುದೇ ‘ಗನತೆ’ ಎಂದು! ಈ ರೀತಿಯಲ್ಲಿ ಇಡೀ ಕನ್ನಡಜನಾಂಗವನ್ನು ‘ತೂಕವಿಲ್ಲದ್ದು’ ಎಂದು ಮೂದಲಿಸುವವರ ಪರಂಪರೆಯಲ್ಲಿ ಮಹಾಪ್ರಾಣಗಳನ್ನು ಇಟ್ಟುಕೊಳ್ಳಬೇಕು ಎಂಬ ವಾದ ಬರುವುದು ವಿಶೇಶವೇನಲ್ಲ. ಅಂದಹಾಗೆ, ‘ಗನತೆ’ ಎಂಬುದಕ್ಕೆ ‘ಹಿರಿಮೆ’, ‘ಹೆಗ್ಗಳಿಕೆ’ ಮುಂತಾದ ಪದಗಳನ್ನು ಬಳಸಬಹುದು – ಇವುಗಳು ಕಾಣಿಸುವ ಕಣ್ಣುಗಳು, ಹೇಳುವ ನಾಲಿಗೆಗಳು, ಕೇಳುವ ಕಿವಿಗಳೆಲ್ಲ ಸರಿಯಾಗಿ ಕೆಲಸ ಮಾಡುತ್ತಿದ್ದರೆ. ಈಗ ನೋಡಿ, ಸಂಸ್ಕ್ರುತದಲ್ಲಿ (ನಿಜಕ್ಕೂ ಅದನ್ನು ಬರೆಯಲು ಬಳಸುವ ದೇವನಾಗರಿ ಲಿಪಿಯಲ್ಲಿ) Kirchbühl ಎಂಬ ಜರ್ಮನ್ ಪದದಲ್ಲಿರುವ ü-ಕಾರವನ್ನು ಗುರುತಿಸಲು ಆಗುವುದಿಲ್ಲ, ಸಂಸ್ಕ್ರುತದ ಪಂಡಿತರಿಗೆಲ್ಲ ಅದನು ಉಲಿಯಲೂ ಆಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಸಂಸ್ಕ್ರುತ ‘ತೂಕವಿಲ್ಲದ್ದು’ ಎನ್ನಲಾಗುತ್ತದೆಯೇ? ಈ ‘ತೂಕ’ ಗೀಕಗಳ ಮಾತು ಹುಟ್ಟುವುದೇ ಮೇಲರಿಮೆ-ಕೀಳರಿಮೆಗಳಿಂದ. ಇವುಗಳನ್ನು ಬಿಟ್ಟು ನೇರವಾಗಿ ವಿಶಯಕ್ಕೆ ಬರಲಾಗದೆ ಇರುವವರು ಎಂತಹ ಅರಿಗರು? ಬರೀ ಈ ಅಡ್ಡದಾರಿಯನ್ನೇ ಹಿಡಿದುಕೊಂಡಿರುವವರ ‘ಬಾಶಾವಿಗ್ನಾನ’ ನಿಜಕ್ಕೂ ಎಂತಹ ‘ವಿಗ್ನಾನ’?
‘ಜನಗಳು ಸಂಸ್ಕ್ರುತ ಪದಗಳನ್ನು ಕನ್ನಡದಲ್ಲಿ ಬಳಸಬೇಕೇ ಬೇಡವೇ ಎನ್ನುವುದು ವಯ್ಯಾಕರಣಿಗಳ ವ್ಯಾಪ್ತಿಯಿಂದಾಚೆಗಿನ ಮಾತು’ ಎಂದು ಪೆರಾಜೆಯವರು ಹೇಳಿರುವುದು ಸರಿ. ಆದರೆ ಒಬ್ಬ ಮನುಶ್ಯ ವಯ್ಯಾಕರಣಿ ಮಾತ್ರ ಆಗಬೇಕಿಲ್ಲ; ಎಂದರೆ, ಸೊಲ್ಲರಿಗ ಮಾತ್ರ ಆಗಬೇಕಿಲ್ಲ. ಅವನು ನುಡಿಹಮ್ಮುಗೆಗಾರನೂ ಆಗಬಹುದು. ಶಂಕರಬಟ್ಟರು ಎಲ್ಲಿಯವರೆಗೆ ಕನ್ನಡದ ಸೊಲ್ಲರಿಮೆ ಹೀಗಿದೆ ಎಂದು ಹೇಳುತ್ತಿದ್ದರೋ ಅಲ್ಲಿಯವರೆಗೆ ಅವರು ಸೊಲ್ಲರಿಗರು ಮಾತ್ರ ಆಗಿದ್ದರು. ಆದರೆ ಅವರು ‘ಹೊಸಬರಹ’ವನ್ನು ತಾವೇ ಬಳಸಲು ಶುರು ಮಾಡಿದ ದಿನವೇ ಅವರು ನುಡಿಹಮ್ಮುಗೆಗಾರರೂ ಆದರು.
ಕಡೆಗೆ, ಪೆರಾಜೆಯವರು ದ್ರಾವಿಡ ನುಡಿ ವಿಬಾಗದಲ್ಲಿ ಕುಳಿತಿದ್ದರೂ ದ್ರಾವಿಡ ನುಡಿಗಳಿಗೆಲ್ಲ ಮೂಲಬೂತವಾದ ‘ನ್ಯೂನತೆಗಳಿವೆ’ ಎಂದು ಹೇಳುತ್ತಿರುವುದನ್ನು ನೋಡಿದರೆ ಅದರ ಬರಹಗಾರ ನಿಜಕ್ಕೂ ಅವರಲ್ಲಿರುವ ನುಡಿಯರಿಗನಲ್ಲ, ‘ಬಡವಾ ನೀ ಮಡಗಿದಂತಿರು’ ಎಂದು ಶತಮಾನಗಟ್ಟಲೆ ಕೇಳಿಸಿಕೊಂಡು ಅದನ್ನೇ ಪಾಲಿಸಿಕೊಂಡು ಬಂದಿರುವ, ಮತ್ತು ಸಾಂಸ್ಕ್ರುತಿಕ ತುಳಿತಕ್ಕೆ ಒಳಪಟ್ಟಿರುವ ಒಬ್ಬ ದ್ರಾವಿಡ ಜನಾಂಗದ ವ್ಯಕ್ತಿ. ಈ ತುಳಿತದಿಂದ ಮೇಲೆದ್ದು ನಿಜವಾದ ನುಡಿಯರಿಮೆಯನ್ನು ಕಲಿತರೆ ಮತ್ತು ಕಲಿಸಲು ಹೊರಟರೆ ಮಾತ್ರ ಕನ್ನಡಿಗರಿಗೆ ಉಳಿವು. ಇಲ್ಲದಿದ್ದರೆ ವಲಸೆ, ಆರ‍್ತಿಕ, ರಾಜಕೀಯ ಮತ್ತು ಸಾಮಾಜಿಕ ತುಳಿತ – ಇವೆಲ್ಲವುಗಳಿಂದ ಕಡೆಗೆ ಸಾವು; ನುಡಿಯರಿಮೆ ಮಕ್ಕಳಾಟವಲ್ಲ.
– ಕಿರಣ್ ಬಾಟ್ನಿ.
(ಚಿತ್ರ: https://www.as.uky.edu)
ಶಾಲೆಗೆ ಹೋಗಿ ಕೂಡೋದು, ಕಳೆಯೋದು ಕಲಿತ ಹಾಗೇ ನುಡಿಯ ವಿಚಾರವೂ ಎಂದುಕೊಂಡಿದ್ದಾರೆ ಕೆಲವರು. ಶಾಲೆಯಲ್ಲಿ ಮಹಾಪ್ರಾಣವಿರುವ ಕನ್ನಡ ಹೇಳಿಕೊಡುತ್ತಾರೆ, ಕಲಿತುಕೊಳ್ಳಬೇಕು. ಅದು ಬಿಟ್ಟು ಅದು ನಾಲಿಗೆಯ ಮೇಲೆ ಹೊರಳಲ್ಲ ಅಂದ್ರೆ ಅದು ಕಲಿಯುವವನ ತಪ್ಪೇ ಹೊರತು ಕಲಿಸುವನದ್ದಲ್ಲ ಅನ್ನುವ ರಿಸನಿಂಗ್ ಅವರಲ್ಲಿದೆ. ನೀವೀಗ ಜರ್ಮನ್ ನುಡಿಯ ಎತ್ತುಗೆ ಕೊಟ್ಟಿದ್ದೀರಾ, ಅದನ್ನು ಶಾಲೆಯಲ್ಲಿ ಹೇಳಿಕೊಟ್ಟರೆ ಮಕ್ಕಳು ಉಲಿಯಬಲ್ಲರು ಅಂತಲೇ ಅವರು ವಾದಿಸುತ್ತಾರೆ ಹೊರತು ಶಾಲೆಯಲ್ಲಲ್ಲ ಎಲ್ಲೇ ಹೇಳಿಕೊಟ್ಟರು ಉಲಿಯಲಾಗದ್ದು ಎಂದು ಅವರು ಒಪ್ಪುವುದಿಲ್ಲ. ಇದಕ್ಕೊಂದು ಟೆಕ್ನಾಲಜಿಯ ಪರಿಹಾರ ಕಂಡುಕೊಳ್ಳಬೇಕು ಅನ್ನುವುದು ನನ್ನ ಅನಿಸಿಕೆ. ಈ ಪಂಡೀತರು ಕೆನ್ನೆ ಹತ್ರ ಒಂದು ಮಶಿನ್ ಕೂರಿಸಬೇಕು, ಅದು ಅವರು ದಿನವೂ ಮಾತಾಡುವ ಮಾತನ್ನು ಕೇಳಿ, ಸ್ಪೀಚ್ ಅನಾಲೈಸ್ ಮಾಡಿ, ಅಕಸ್ಮಾತ್ ಮಹಾಪ್ರಾಣದ ಜಾಗದಲ್ಲಿ ಅಲ್ಪ ಪ್ರಾಣ ಹಾಕಿದರೆ ಚಟೀರ್ ಅಂತ ಒಂದು ಕೆನ್ನೆಗೆ ಬಿಡುವ ಹಾಗಿರಬೇಕು. ಆಗ ಮಾತ್ರ ಈ ಸಮಸ್ಯೆ ಕಲಿಕೆಯದ್ದಲ್ಲ, ಒಂದಿಡಿ ಜನಾಂಗದ ನಾಲಿಗೆಯದ್ದು ಎಂದು ಒಪ್ಪಬಹುದೆನೋ..
ವಸಂತ್ – ಮಹಾಪ್ರಾಣದ ಬಗ್ಗೆ ಇದೇ ರೀತಿ ವಾದ ಮಾಡಿದವರೊಬ್ಬರ ಕೆಲವು ವೀಡಿಯೋಗಳನ್ನು ನಾನು ನೋಡಿದ್ದೆ ಅವರ ಮಾತಿನಲ್ಲಿ ಮಹಾಪ್ರಾಣವಿರಲಿಲ್ಲ. ಕೆಲವು ಕಡೆ ಕ್ರುತಕವಾಗಿ ಮಹಾಪ್ರಾಣ ಉಲಿಯಲು ಪ್ರಯತ್ನ ಮಾಡುತ್ತಿದ್ದರು ಈ ದೆಸೆಯಿಂದ ಕೆಲವೆಡೆ ಅಲ್ಪಪ್ರಾಣದ ಬದಲಿಗೆ ಮಹಾಪ್ರಾಣ ಹೊಮ್ಮುತ್ತಿತ್ತು.
ಗೆಳೆಯರೇ, ಸರಿಯಾಗಿಯೇ ಇದೆ ನಿಮ್ಮ ವಾದ. ಈ ಬರೆಹದಲ್ಲಿ “ಶಂಕರಬಟ್ಟರು ನಾಮಪದವನ್ನು ‘ಕೆಲಸಪದ’ ಎಂದು ಕರೆದಿದ್ದಾರೆ ಎಂದು ಕರೆದಿರುವ ಪೆರಾಜೆಯವರು ಬಟ್ಟರ ಹೊತ್ತಗೆಗಳನ್ನು ಎಶ್ಟು ಓದಿರಬಹುದು ಎಂಬುದು ಜಗಜ್ಜಾಹೀರು.” ಈ ಸಾಲಿನಲ್ಲಿ ಬರುವ “ನಾಮಪದ” ಮತ್ತು “ಕೆಲಸ ಪದ” ಎರಡು ಬೇರೆಬೇರೆ ಪದಗಳನ್ನು ತಿಳಿಸುತ್ತದೆ. ಅದು ನಾಮಪದ ಮತ್ತು ಹೆಸರು ಪದ ಯಾ ಕ್ರಿಯಾ ಪದ ಮತ್ತು ಕೆಲಸ ಪದವಾಗಬೇಕು. ಗಮನಿಸಿ.
“ಪೆರಾಜೆಯವರು ಕನ್ನಡದಲ್ಲಿ ‘ಘನತೆ’ ಎಂಬ ಪದಕ್ಕೆ ಸಮಾನವಾದ ಪದವೇ ಇಲ್ಲ, ”
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
ತಕ್ಕು ನಾಮಪದ
(<ದೇ. ತಗು) ೧ ಹಿರಿಮೆ, ಘನತೆ
ತಕ್ಕು ಮತ್ತು ಹಿರಿಮೆ ಕನ್ನಡದ್ದೇ !
ವೆಂಕಟಸುಬ್ಬಯ್ಯರ ಪದನೆರಿಕೆಯನ್ನೂ ನೋಡಿಲ್ಲ ಈ ಪಂಡಿತರು.