ಪ್ರಣಾಳಿಕೆಗಳನ್ನು ತೂಗಿನೋಡುವುದು ಹೇಗೆ?

Magnifying glass

ಚುನಾವಣೆಯ ಕಾಲ ಬಂತೆಂದರೆ ಸಾಕು ರಾಜಕೀಯ ಬದಿಗಳು ಸಮಾಜದ ಕಡೆ ಮತ್ತೊಮ್ಮೆ ಮುಕ ಮಾಡುವುದು ಸಹಜ. ಇದರೊಡನೆಯೇ ತಮ್ಮ ಬದಿಯ ಜನ ಗೆದ್ದರೆ ಯಾವ್ಯಾವ ಯೋಜನೆಗಳನ್ನು ನೆರವೇರಿಸಲಾಗುವುದು ಎಂಬುದನ್ನೂ ತಮ್ಮ ಪ್ರಣಾಳಿಕೆಗಳ ಮೂಲಕ ಹೇಳುವುದು ಸಹಜ, ಹಾಗೇ ಈ ಪ್ರಣಾಳಿಕೆಯನ್ನು ಉಪಯೋಗಿಸಿಕೊಂಡು ಜನರ ಮತ/ಬೆಂಬಲ ಬೇಡುವುದೂ ಸಹಜ.

ಈ 2013ರ ಮೇ ತಿಂಗಳಲ್ಲಿ ಕರ‍್ನಾಟಕದ ಅಸ್ಸೆಂಬ್ಲಿ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಿರುವ ಕೆಲವು ಹೆಸರಾಂತ ಬದಿಗಳ ಪ್ರಾಣಾಳಿಕೆಗಳನ್ನು ಗಮನಿಸಿ ಅವುಗಳ ಮೂಲಕ ಆಯಾ ಬದಿಯ ರಾಜಕೀಯ ತೂಕವನ್ನು ಅಳೆಯುವ ಕೆಲಸ ಮಾಡಲಾಯಿತು. ಇದೇ ರೀತಿ ಎಲ್ಲಾ ಮಂದಿಯೂ ಅವರವರ ಕ್ಶೇತ್ರದಲ್ಲಿ ಕಾಣುವ ಬದಿಗಳ ರಾಜಕೀಯ ತೂಕ ಅಳೆಯುವ ಕೆಲಸ ಮಾಡುವುದು ಮಂದಿಯಾಳ್ವಿಕೆಗೆ ಅಗತ್ಯವಾದ ಜವಾಬ್ದಾರಿಯೇ ಹವ್ದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಕ್ಶೇತ್ರದಲ್ಲಿನ ರಾಜಕೀಯ ಬದಿಗಳ ಪ್ರಣಾಳಿಕೆಗಳು ತಮಗೆ ಹಿಡಿಸುವುದಾ ಎಂದು ಕಂಡುಕೊಳ್ಳಲು ಬೇಕಾದ ಕೆಲ ಸರಳ ಕಟ್ಟಲೆಗಳು ಇಲ್ಲಿವೆ:

  1. ಆ ಪ್ರಣಾಳಿಕೆ ಜನರಾಡುವ ನುಡಿಯಲ್ಲೇ ಇಲ್ಲದಿದ್ದರೆ ಆ ಪ್ರಣಾಳಿಕೆ ಸೇರಿದಂತೆ ಆ ಬದಿಯನ್ನೂ ಕಿತ್ತೊಗೆಯಬೇಕು. ಇದು ಬೇರೊಂದು ನುಡಿಯಲ್ಲಿ ಬರೆದು ಅದನ್ನು Google Translate ಮಾಡಿದ್ದರೂ ಅನ್ವಯಿಸುತ್ತದೆ!
  2. ಕೋಟಿಗಟ್ಟಲೆ ಜನರಿರುವ ಈ ನಾಡಿನ ಜನರ ಬಗ್ಗೆ ಮಾತಾಡುವ ಬದಲು ಕೋಟಿಗಟ್ಟಲೆ ರೂಪಾಯಿಗಳ ಬಗ್ಗೆಯೇ ಮಾತನಾಡಿದರೆ, ಆ ಪ್ರಣಾಳಿಕೆ ಒಂದು ಸುಳ್ಳಿನ ಕಂತೆಯೇ ಸರಿ. ಸುಳ್ಳಿನ ಕಂತೆಗೆ ಎಶ್ಟು ಬೆಲೆಯೋ ಅಶ್ಟೇ ಈ ಪ್ರಣಾಳಿಕೆಗೂ.
  3. ಆ ಪ್ರಣಾಳಿಕೆ ನಾಡಿನಲ್ಲಿ ಈಗಾಗಲೇ ನಡೆಯುತ್ತಿರುವ ಅತವಾ ನೆರವೇರಿರುವ ಯೋಜನೆಗಳನ್ನು ಆ ಬದಿಯ ಹೆಗ್ಗಳಿಕೆಗೆ ಬಳಸಿಕೊಳ್ಳುತ್ತಿದ್ದರೆ ಆ ಬದಿಯವರು ರಾಜಕೀಯದಲ್ಲಿ ಜನರಿಗೆ ಹೊಸತನ್ನೇನೂ ಮಾಡಲಾರರೆಂದೇ ಹೇಳಬಹುದು. ಇಂತಹ ಪ್ರಣಾಳಿಕೆಗಳನ್ನುಳ್ಳ ಬದಿಗಳು ಜವಾಬ್ದಾರಿಯಿಂದ ಜಾರಿಕೊಳ್ಳುವಂತವು.
  4. ಸಿಕ್ಕಾಪಟ್ಟೆ ಹೊಸ-ಹೊಸತನ್ನು ತೋರುವ, ಮೇಲ್ಪದರದ ಸೇವೆಗಳನ್ನೆಲ್ಲಾ ಸಿಗುವ ಹಾಗೆ ಮಾಡುವ ಬರವಸೆ ನೀಡುವ, ಆದರೆ ತುಂಬಾ ಮುಕ್ಯವಾದ ಕೆಳಪದರದ ಸೇವೆಗಳಾದ ನೀರಾವರಿ, ಕುಡಿಯುವ ನೀರು, ಪಟ್ಟಣದ ತಿಪ್ಪೆ ಕಡಿಮೆಯಾಗಿಸುವಿಕೆಗಳತ್ತವೇ ಗಮನ ಹರಿಸದಂತಹ ಪ್ರಣಾಳಿಕೆಗಳು ಜನರಲ್ಲಿ ಮೇಲು-ಕೀಳು ಎಂಬಂತೆ ಬೇರೆ ಕಾಣುವ ಬದಿಗಳು ಎನ್ನಬಹುದು. ಜನರನ್ನು ಬೇರೆ ಮಾಡುವ ಇಂತಹ ಬದಿಗಳನ್ನು ತಿಪ್ಪೆಯಲ್ಲೇ ಇರಿಸುವುದು ಲೇಸು.
  5. ಇನ್ನು ಜನರ ಇಶ್ಟ-ಕಶ್ಟಗಳನ್ನು ಅರಿತು ಅವುಗಳಿಗೆ ಸ್ಪಂದಿಸುವ ಪ್ರಣಾಳಿಕೆಯು ಆ ಇಶ್ಟಗಳನ್ನು ಕಾಪಾಡುವ ದಾರಿಯನ್ನಾಗಲಿ, ಕಶ್ಟಗಳನ್ನು ನಿವಾರಿಸುವ ದಾರಿಯನ್ನಾಗಲಿ ಆಳವಾಗಿ ವಿವರಿಸುತ್ತವೆ. ಇಡೀ ಸಮುದಾಯದ ತೊಂದರೆಗಳನ್ನು ಕೂಲಂಕಶವಾಗಿ ಅರ‍್ತ ಮಾಡಿಕೊಂಡಿರುವ ಬದಿಯೇ ಇಂತಹ ಪ್ರಣಾಳಿಕೆಯನ್ನು ತಯಾರಿಸಬಲ್ಲುದು.

ಮಂದಿಯಿಂದಲೇ ಆಳ್ಮೆ, ಮಂದಿಗಾಗಿಯೇ ಆಳ್ಮೆ ಎಂಬುದರ ಮೂಲಕವೇ ಮಂದಿಯಾಳ್ವಿಕೆ ಗಿಟ್ಟಿಸಿಕೊಳ್ಳಲಾಗುವುದು. ಈ ಮಾತು ನಿಜವಾದಲ್ಲಿ ಆ ಸಮಾಜ ಬೆಳಕು-ಕತ್ತಲೆಗಳಾಚೆ ಹೊಮ್ಮುವುದು ಕಚಿತವಾದೀತು. ಆ ಗುರಿಯತ್ತ ನಡೆಯಲು ಈಗಿನ ಮಂದಿಯಾಳ್ವಿಕೆಯಲ್ಲಿನ ಮಂದಿ ಚುನಾವಣೆಯ ಕಾಲದಲ್ಲಿ ಅತಿ ಎಚ್ಚರದಿಂದ ಇರುವುದು ಅಗತ್ಯ. ಎಚ್ಚರದೊಡನೆ ಸರಿಯಾದ ಆಯ್ಕೆ ಮಾಡುವುದೂ ದೊಡ್ಡ ಕೆಲಸ. ಆ ಆಯ್ಕೆಯನ್ನು ಸರಿಯಾಗಿ ಮಾಡಲು ಜನರು ಒಗ್ಗೂಡಿ ಪ್ರಣಾಳಿಕೆಗಳನ್ನು ಹೀಗೆ ಪರಿಶೀಲಿಸುವುದು ಅತಿ ಮುಕ್ಯ ಕೆಲಸ. ಅದು ನೆರವೇರಲಿ.

ರೋಹಿತ್ ರಾವ್

(ಚಿತ್ರ: www.nitinjain.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: