ಹಾವು ಕಚ್ಚಿದರೆ ಕಯ್ಗೊಳ್ಳಬೇಕಾದ ಮೊದಲಾರಯ್ಕೆ

ಆನಂದ್ ಜಿ.

king-cobra_592_600x450

ಹಾವು ಕಚ್ಚಿದಾಗ ಮಾಡಬೇಕಾದ್ದು:

 • ಹಾವಿನ ಕಡಿತಕ್ಕೊಳಗಾದವರು ಗಾಬರಿ ಮತ್ತು ಒತ್ತಡಕ್ಕೆ ಈಡಾಗದ ಹಾಗಿರುವಂತೆ ನೋಡಿಕೊಳ್ಳತಕ್ಕದ್ದು. ಕಡಿತಕ್ಕೊಳಗಾದವರಿಗೆ ಮಾನಸಿಕ ಒತ್ತಡವು ಹೆಚ್ಚಾಗಿ ಮಯ್ಯಲ್ಲಿ ನೆತ್ತರಿನ ಹರಿವು ಮತ್ತು ಒತ್ತಡಗಳು ಹೆಚ್ಚಾಗುತ್ತವೆ. ಇದರಿಂದಾಗಿ ಬಲುಬೇಗ ನಂಜು ಏರುತ್ತದೆ ಮತ್ತು ಕಡಿತಕ್ಕೆ ಒಳಗಾದವರು ಅಪಾಯದೆಡೆಗೆ ಜಾರುತ್ತಾರೆ. ಹಾಗಾಗಿ ಗಾಬರಿಗೆ ಒಳಗಾಗದಂತೆ ನೋಡಿಕೊಳ್ಳಲು ಕಡಿತಕ್ಕೊಳಗಾದವರಿಗೆ ಆದಶ್ಟೂ ತಾಳ್ಮೆ ಹೇಳಿ ಶಾಂತವಾಗಿರಿಸತಕ್ಕದ್ದು.
 • ಹಾವಿನ ಕಡಿತಕ್ಕೊಳಗಾದವರ ಮಯ್ಯಲ್ಲಿ ನೆತ್ತರಿನ ಹರಿವು ಸಹಜವಾಗಿ ನಡೆಯಲು ಅಡ್ಡಿಯುಂಟು ಮಾಡುವ ಸಾಮಾನುಗಳನ್ನು ಕಳಚಿಡಬೇಕು. ಕಡಿತಕ್ಕೊಳಗಾದ ಬಾಗ ಕಯ್ ಆಗಿದ್ದರೆ ಉಂಗುರ, ಕಯ್ ಗಡಿಯಾರ, ಬಿಗಿಯಂಗಿ, ಕಯ್ಗೆ ಮತ್ತು ತೋಳಿಗೆ ಕಟ್ಟಿರುವ ದಾರ/ ಕಂಕಣ ಮೊದಲಾದವುಗಳನ್ನೂ, ಕಾಲಿಗೆ ಕಚ್ಚಿದ್ದರೆ ಕಾಲ್ಗಡಗ, ಕಾಲುಂಗುರ, ಕಾಲ್ಗೆಜ್ಜೆ ಮೊದಲಾದವುಗಳನ್ನೂ ಕಳಚಬೇಕು. ಒಟ್ಟಿನಲ್ಲಿ ಹಾವಿನ ಕಡಿತಕ್ಕೊಳಗಾದವರಿಗೆ ಮಯ್ಯೊಳಗೆ ಸರಾಗವಾಗಿ ನೆತ್ತರು ಹರಿಯಲು ಅವಕಾಶ ಮಾಡಿಕೊಡತಕ್ಕದ್ದು.
 • ಹಾವಿನ ಕಡಿತಕ್ಕೊಳಗಾದವರು ಎಚ್ಚರವಾಗಿರುವಂತೆ ನೋಡಿಕೊಳ್ಳುವುದು. ಹಾವಿನ ಕಡಿತಕ್ಕೊಳಗಾದವರಿಗೆ ಬೇಕಾದ ಅವ್ಶದಿಯ ನೆರವು ದೊರೆಯುವವರೆಗೂ ಎಚ್ಚರವಾಗಿರುವಂತೆ ನೋಡಿಕೊಳ್ಳತಕ್ಕದ್ದು. ಏಕೆಂದರೆ ಆರಯ್ಕೆ ನೀಡುವವರಿಗೆ ಕಡಿತಕ್ಕೊಳಗಾದವರು ಎಚ್ಚರವಾಗಿದ್ದಾರೆಯೇ ಇಲ್ಲವೇ ಎಂದು ತಿಳಿಯಬೇಕು. ಇಲ್ಲದಿದ್ದರೆ ಕಡಿತಕ್ಕೊಳಗಾದವರು ಕೋಮಾಗೆ ಜಾರುವ ಅಪಾಯವಿರುತ್ತದೆ.
 • ಆದಶ್ಟು ಬೇಗನೆ ಹತ್ತಿರದ ಸರ‍್ಕಾರಿ ಆಸ್ಪತ್ರೆಗೆ ಕರೆದೊಯ್ಯತಕ್ಕದ್ದು. ಸಾಮಾನ್ಯವಾಗಿ ಸರ‍್ಕಾರಿ ಆಸ್ಪತ್ರೆಗಳಲ್ಲಿ ಹಾವಿನ ಕಡಿತಕ್ಕೆ ನೀಡಬೇಕಾದ ಚುಚ್ಚುಮದ್ದನ್ನು ಇಡಲಾಗಿರುತ್ತದೆ. ಆದ್ದರಿಂದ ಕಚ್ಚಿದ ಹಾವನ್ನು ಕೊಲ್ಲಲೋ, ಗುರುತಿಸಲೋ ಸಮಯ ಹಾಳುಮಾಡದೆ ಆದಶ್ಟು ಬೇಗ ಆಸ್ಪತ್ರೆಗೆ ಒಯ್ದು ಆರಯ್ಕೆಯನ್ನು ದೊರಕಿಸಿಕೊಡಬೇಕು. ಆದ್ದರಿಂದ ಸಾದ್ಯವಾದಶ್ಟು ಬೇಗನೆ ಹತ್ತಿರದ ಸರ‍್ಕಾರಿ ಆಸ್ಪತ್ರೆಗೆ ಹಾವಿನ ಕಡಿತಕ್ಕೊಳಗಾದವರನ್ನು ಕರೆದೊಯ್ಯತಕ್ಕದ್ದು.

ಹಾವು ಕಚ್ಚಿದಾಗ ಮಾಡಬಾರದ್ದು:

 • ಕಚ್ಚಿದ ಜಾಗದಲ್ಲಿ ಯಾವುದೇ ಗಾಯ/ ಕೊಯ್ಯುವುದನ್ನು ಮಾಡಬಾರದು. ಕಚ್ಚಿರುವ ಹಾವು ನಂಜಿನ ಹಾವೋ ಅಲ್ಲವೋ ಎನ್ನುವುದನ್ನು ತೀರ್‍ಮಾನಿಸುವಲ್ಲಿ ಹಾವಿನ ಹಲ್ಲುಗಳ ಊರಿರುವಿಕೆಯ ಗುರುತು ಸಹಾಯ ಮಾಡುತ್ತದೆ. ಇದು ಯಾವ ರೀತಿಯ ಆರಯ್ಕೆಯನ್ನು ನೀಡಬೇಕೆನ್ನುವುದನ್ನು ತೀರ್‍ಮಾನಿಸಲು ಸಹಕಾರಿ. ಹಾವು ಕಚ್ಚಿದ ಬಾಗದಲ್ಲಿ ನೆತ್ತರು ಸೋರಿ ಹೋಗಲಿ ಎನ್ನುವ ಉದ್ದೇಶದಿಂದ ಕೊಯ್ಯುವುದನ್ನು ಮಾಡುವುದು ಉಪಕಾರಕ್ಕಿಂತ ಹಾನಿಯನ್ನೇ ಹೆಚ್ಚಾಗಿ ಮಾಡುತ್ತದೆ. ಹಾಗಾಗಿ ಹಾವು ಕಚ್ಚಿದ ಜಾಗದಲ್ಲಿ ಯಾವುದೇ ಗಾಯ/ ಕೊಯ್ಯುವುದನ್ನು ಮಾಡಬಾರದು.
 • ಹಾವು ಕಚ್ಚಲ್ಪಟ್ಟವರಿಗೆ ತಿನ್ನಲು/ ಕುಡಿಯಲು ಏನನ್ನೂ ಕೊಡಬಾರದು. ಹಾವು ಕಚ್ಚಿದ ವ್ಯಕ್ತಿಗೆ ಕುಡಿಯಲು/ ತಿನ್ನಲು ಏನನ್ನೂ ಕೊಡದಿರುವುದು ಒಳಿತು. ಅದರಲ್ಲೂ ಮತ್ತು ತರುವ ಆಲ್ಕೋಹಾಲ್/ ತಂಬಾಕು ಇರುವ ಪದಾರ‍್ತಗಳನ್ನಂತೂ ಕೊಡಲೇಬಾರದು. ಆಲ್ಕೋಹಾಲ್ ಮತ್ತು ತಂಬಾಕುಗಳು ನೆತ್ತರ ಹರಿವಿನ ವೇಗವನ್ನು ಹೆಚ್ಚಿಸುತ್ತವೆಯಾದ್ದರಿಂದ ನಂಜು ಏರುವಿಕೆ ವೇಗ ಪಡೆದುಕೊಂಡು ಕಡಿತಕ್ಕೆ ಒಳಗಾದವರು ಅಪಾಯದೆಡೆಗೆ ವೇಗವಾಗಿ ಜಾರುತ್ತಾರೆ.
 • ಹಾವು ಕಚ್ಚಿದವರಲ್ಲಿ ಗಾಬರಿ ಉಂಟು ಮಾಡಬಾರದು. ಹಾವಿನ ಕಡಿತಕ್ಕೊಳಗಾದವರು ಮೊದಲೇ ಹೆದರಿರುತ್ತಾರೆ. ಅಂತಹವರು ಆದಶ್ಟೂ ಶಾಂತವಾಗಿರಬೇಕು. ಜೊತೆಯಲ್ಲಿದ್ದವರೇ ಗಾಬರಿಗೊಳಗಾಗಿಬಿಟ್ಟರೆ ಕಡಿತಕ್ಕೊಳಗಾದವರು ಮತ್ತಶ್ಟು ಬೆದರಿ ಪರಿಸ್ತಿತಿ ಮತ್ತಶ್ಟು ಹದಗೆಡುತ್ತದೆ. ಇದು ನತ್ತರಿನ ಹರಿವು/ ನೆತ್ತರ ಒತ್ತಡ ಹೆಚ್ಚಿಸಿ ನಂಜು ಬೇಗ ಬೇಗ ಏರಲು ಕಾರಣವಾಗುತ್ತದೆ. ಹಾಗಾಗಿ ಜೊತೆಯಲ್ಲಿರುವವರು ಕಡಿತಕ್ಕೊಳಗಾದವರಿಗೆ ಗಾಬರಿಯುಂಟು ಮಾಡುವಂತೆ ನಡೆದುಕೊಳ್ಳಬಾರದು.
 • ನುರಿತಿಲ್ಲದವರು ಚುಚ್ಚುಮದ್ದು ಕೊಡಬಾರದು. ನಮ್ಮ ನಾಡಲ್ಲಿ ನಾಲ್ಕು ಬಗೆಯ ನಂಜಿನ ಹಾವುಗಳಿದ್ದು ಇವು ಕಚ್ಚಿದಾಗ ಮಾತ್ರವೇ ಸಾಯಬಹುದಾದ ಅಪಾಯವಿದೆ. ಈ ನಾಲ್ಕು ಯಾವುವೆಂದರೆ ನಾಗರಹಾವು, ಕೊಳಕುಮಂಡಲ, ಕಟ್ಟುಹಾವು ಮತ್ತು  ಕಲ್ಲುಹಾವು. ಹಾವಿನ ಕಡಿತಕ್ಕೆ ನೀಡುವ ಚುಚ್ಚುಮದ್ದು ಈ ಎಲ್ಲಾ ಹಾವುಗಳ ನಂಜಿಗೂ ಒಂದೇ ಆಗಿದ್ದು ಇದನ್ನು ನೇರವಾಗಿ ನೆತ್ತರನಾಳಕ್ಕೆ ಕೊಡಲಾಗುತ್ತದೆ. ಹೀಗೆ ಚುಚ್ಚುಮದ್ದು ಕೊಡುವವರು ನುರಿತವರೇ ಆಗಿರಬೇಕಿದ್ದು ಇಂತಿಶ್ಟೇ ವೇಗವಾಗಿ ಮದ್ದು ಮಯ್ಯನ್ನು ಸೇರಬೇಕಾಗಿರುತ್ತದೆ. ಹಾಗಾಗಿ ನಾವೂ ನೀವೂ ಕಡಿತಕ್ಕೊಳಗಾದವರನ್ನು ಆಸ್ಪತ್ರೆಗೆ ಕರೆದೊಯ್ಯುವುದನ್ನು ಬಿಟ್ಟು ನಾವಾಗೇ ಚುಚ್ಚುಮದ್ದು ನೀಡಲು ಹೋಗಬಾರದು. ಹಾಗೆ ಮಾಡಿದ್ದೇ ಆದಲ್ಲಿ ಕಡಿತಕ್ಕೊಳಗಾದವರಿಗೆ ಇನ್ನಶ್ಟು ತೊಡಕೇ ಆಗುತ್ತದೆ.

(ಚಿತ್ರ: www.nationalgeographic.com)

5 ಅನಿಸಿಕೆಗಳು

 1. @ಆನಂದ್ ಅವರೇ,

  ಚೆನ್ನಾಗಿ ಹಾಗು ಚೊಕ್ಕವಾಗಿದೆ.

  ಇದೊಂದು ಮಾದರಿ ‘ಅರಿಮೆ’ಬರಹ. ಹೇಳಬೇಕಾದ ವಿಷಯವನ್ನು ನೇರ ಹಾಗು ಕರಾರುವಕ್ಕಾಗಿ ಬರೆದಿದ್ದೀರಿ.

  ‘ಆದಶ್ಟು ಬೇಗನೆ ಹತ್ತಿರದ ಸರ‍್ಕಾರಿ ಆಸ್ಪತ್ರೆಗೆ ಕರೆದೊಯ್ಯತಕ್ಕದ್ದು’
  – ಯಾಕೆ ಖಾಸಗಿ ಆಸ್ಪತ್ರೆಯಲ್ಲಿ ಏನು ತೊಂದರೆ? ಹತ್ತಿರದ ಯಾವುದೇ ಆಸ್ಪತ್ರೆ ಆಗಬಹುದಲ್ಲವೇ?

 2. ಮಾಯ್ಸ ಅವರೇ,
  ಸರಕಾರಿ ಆಸ್ಪತ್ರೆಗಳಲ್ಲಿ ‘ನಂಜುಮುರಿ’ ಚುಚ್ಚುಮದ್ದನ್ನ ಇಟ್ಟಿರಬೇಕಾದ್ದು ಪಾಲಿಸಿ. ಕಾಸಗಿ ಆಸ್ಪತ್ರೆಯಲ್ಲಿ ಇರುತ್ತೆ ಅನ್ನೋಹಾಗಿಲ್ಲ. ತುಂಬ ವಿರಳವಾದ ಬೇನೆಗಳಿಗೆ ಚುಚ್ಚುಮದ್ದು ಇಟ್ಟುಕೊಳ್ಳುವುದು ಕಾಸಗಿಯವರಿಗೆ ಲಾಸು!

 3. ಒಂದು ಪ್ರಶ್ನೆ ಹಾವಿನ ವಿಷದಲ್ಲಿ ಎರಡು ರೀತಿಯದ್ದಾಗಿರುತ್ತದೆ ಅದು haemotoxic ಮತ್ತು neurotoxic.. ಈ ಎರಡು ರೀತಿಯ ವಿಷ ಕಾರುವ ಹಾವು ಕಚ್ಚಿದಾಗಲು ಒಂದೇ ರೀತಿಯ ಚುಚ್ಚು ಮದ್ದು(antivenom) ಕೊಡುತ್ತಾರ?

 4. ಸುನಿಲ್ ಕುಮಾರ್ ಸಾರ್,
  ಹಾವಿನ ನಂಜಿನಲ್ಲಿ ಎರಡು ಬಗೆಯಿರುವುದು ದಿಟ. ಆದರೆ ನಮ್ಮ ನಾಡಲ್ಲಿರುವ ಹಾವುಗಳಲ್ಲಿ ನಾಲ್ಕು ಬಗೆಯವು ಮಾತ್ರವೇ ಸಾವನ್ನು ತರಬಲ್ಲವು. ಈ ನಾಲ್ಕು ಹಾವುಗಳ ಕಡಿತಕ್ಕೆ ಒಂದೇ ಚುಚ್ಚುಮದ್ದು!
  http://en.wikipedia.org/wiki/Big_Four_(Indian_snakes) ಮತ್ತು http://en.wikipedia.org/wiki/Snake_antivenom ನೋಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.