ಇದೇ ತಿಂಗಳು. 3,500 ರೂ. 9 ದಿನ. 13,800 ಅಡಿ.

ಗಿರೇಶ್ ಕಾರ‍್ಗದ್ದೆ

waterfalls

ಹಿಮಾಚಲ ಪ್ರದೇಶವನ್ನು ದೇವ, ದೇವತೆಯರ ನಾಡು ಎಂದು ಕರೆಯುತ್ತಾರೆ. ಹಿಮಾಲಯದ ತಪ್ಪಲ್ಲಲ್ಲಿ ಇರುವ ಈ ನಾಡಿನ ಹಿಮ ಗುಡ್ಡಗಳ, ಹಿಮ ಕಣಿವೆಗಳ ಚೆಲುವನ್ನು ಸವಿಯಬೇಕೆಂದರೆ ಇಲ್ಲಿ ಕಾಲ್ನಡಿಗೆಯಲ್ಲಿಯೇ ತಿರುಗಾಡಿ ನೋಡಬೇಕು, ಅದೊಂದು ಅತಿ ಸುಂದರ ಅನುಬವ. ಇಲ್ಲಿರುವ ನೂರಾರು ಟ್ರೆಕ್ಕಿಂಗ್ ಹಾದಿಗಳಲ್ಲಿ ‘ಸರ್‍ ಪಾಸ್’ ಸಹ ಒಂದು, ಕಶ್ಟದ ಆದರೆ ಅಶ್ಟೇ ಒಳ್ಳೆಯ ಟ್ರೆಕ್. ಪಾರ್‍ವತಿ ನದಿ ಕಣಿವೆಯ ಈ ಟ್ರೆಕ್ಕಿಂಗ್ ಅನ್ನು ಯೂತ್ ಹಾಸ್ಟೆಲ್ ಅಸೋಸಿಯೇಶನ್ ಆಪ್ ಇಂಡಿಯಾದವರು ಪ್ರತಿ ವರ್‍ಶ ಮೇ ತಿಂಗಳಲ್ಲಿ ನಡೆಸುತ್ತಾರೆ. ಇದು ಮೇ ತಿಂಗಳ ಮೊದಲಿನಲ್ಲಿ ಶುರುವಾಗಿ ದಿನಕ್ಕೊಂದು ಗುಂಪಿನಂತೆ ಟ್ರೆಕ್ಕಿಂಗ್ ಹೊರಡುತ್ತಾರೆ. ಮನಾಲಿಯಿಂದ ಅಯ್ವತ್ತು ಕಿಲೋಮೀಟರ್‍ ದೂರದಲ್ಲಿರುವ ಪಟ್ಟಣ ಕಸೊಲ್ ಈ ಟ್ರೆಕ್ಕಿಂಗಿಗೆ ಬೇಸ್ ಕ್ಯಾಂಪು.

ನಾವು ಅಲ್ಲಿಗೆ ತಲುಪಿದ್ದು ಹೇಗೆ:

ಕಸೋಲ್ ಇಲ್ಲಿನ ಬೇಸ್ ಕ್ಯಾಂಪು. ಇದು ಮನಾಲಿಯಿಂದ ಸುಮಾರು ಅಯ್ವತ್ತು ಕಿಲೋಮೀಟರ್‍ ದೂರದಲ್ಲಿದೆ. ನಾವು ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ, ದೆಹಲಿಯಿಂದ ಚಂಡಿಗಡಕ್ಕೆ ರಯ್ಲಿನಲ್ಲಿ, ಚಂಡಿಗಡದಿಂದ ಮನಾಲಿಗೆ ಹೋಗುವ ಬಸ್ಸಿನಲ್ಲಿ ಪ್ರಯಾಣ ಮಾಡಿ ಬುಂತಾರ್‍ ಎಂಬ ಪಟ್ಟಣದಲ್ಲಿ ಇಳಿದುಕೊಂಡೆವು. ಇಲ್ಲಿಂದ ಮತ್ತೆ ಬಾಡಿಗೆ ಕಾರಿನಲ್ಲಿ ಕಸೋಲಿನ ಬೇಸ್ಕ್ಯಾಂ ಪ್ ತಲುಪಿದೆವು.

ಬೋರ್‍ಗರೆಯುವ ಪಾರ್‍ವತಿ ನದಿ ಪಕ್ಕದಲ್ಲಿ ಬಿಡಾರಗಳನ್ನು ಹಾಕಲಾಗಿದೆ, ಸುತ್ತಲೂ ಪಯ್ನ್ ಮರಗಳಿದ್ದು ತುಂಬಾ ಸುಂದರವಾಗಿದೆ. ಎಲ್ಲರೂ ಎತ್ತರದ ಪರಿಸರದ ಹವಾಮಾನಕ್ಕೆ ಹೊಂದುಕೊಳ್ಳುವಂತಾಗಲು ಮೊದಲ ಎರಡು ದಿನಗಳನ್ನು ಬೇಸಕ್ಯಾಂಪಿನಲ್ಲಿ ಕಳೆಯಬೇಕು. ಈ ಎರಡು ದಿನಗಳಲ್ಲಿ ಕಲ್ಲು ಬಂಡೆ ಹತ್ತುವುದು, ಇಳಿಯುವುದು, ಎತ್ತರದ ಗುಡ್ಡಕ್ಕೊಂದು ಅರ್‍ದ ದಿನದ ನಡಿಗೆ ಮೊದಲಾದ ಕಸರತ್ತುಗಳನ್ನು ಮಾಡಲಾಗುತ್ತದೆ. ಗುಂಪಿನವರನ್ನು ಪರಿಚಯಿಸಿಕೊಳ್ಳುವುದಕ್ಕೆ ಮತ್ತು ಹಿಮಾಲಯದ ಪರಿಸರಕ್ಕೆ ಹೊಂದಿಕೊಳ್ಳಲು ಇಂದು ಸಹಾಯ ಮಾಡುತ್ತದೆ. ಇದಾದ ನಂತರವೇ ನಮ್ಮ ನಿಜವಾದ ಟ್ರೆಕ್ ಶುರುವಾಗಿದ್ದು.

ದಿವಸ 1: ಬೆಳಿಗ್ಗೆ ತಿಂಡಿ ಮುಗಿಸಿ ನಮ್ಮ ಬ್ಯಾಗುಗಳನ್ನು ರೆಡಿಮಾಡಿಟ್ಟುಕೊಂಡೆವು. ಪ್ರತಿಯೊಬ್ಬರ ಶೂಗಳು ಹಿಮದ ನಡಿಗೆಗೆ ಸೂಕ್ತವಾಗಿವೆಯೇ ಎಂದು ನೋಡಲಾಯಿತು. ಬ್ಯಾಗುಗಳ ತೂಕವನ್ನು ನೋಡಿ ಹೆಚ್ಚಿನ ತೂಕದ ಬ್ಯಾಗುಗಳಲ್ಲಿನ ಬೇಡದ ವಸ್ತುಗಳನ್ನು ತೆಗೆದು ತೂಕ ಕಡಿಮೆ ಮಾಡಲಾಯಿತು. ನಡಿಗೆಯಲ್ಲಿ ಆಯಾಸಗೊಂಡಾಗ ಸ್ವಲ್ಪ ತೂಕ ಹೆಚ್ಚಾದರೂ ನಮಗೆ ತೊಂದರೆಯೇ. ಇದು ನಂತರದ ದಿನಗಳಲ್ಲಿ ನಮಗೆ ಚೆನ್ನಾಗಿಯೇ ಅನುಬವಕ್ಕೆ ಬಂತು. ಬೇಸಕ್ಯಾಂಪಿನಿಂದ ಬಸ್ಸಿನಲ್ಲಿ ಸುಮಾರು ಹತ್ತು ಕಿಲೋಮೀಟರಿನಶ್ಟು ದೂರ ಊಂಚ್ ದಾರ್‍ ಎಂಬಲ್ಲಿಗೆ ತಲುಪಬೇಕು ಅಲ್ಲಿಂದ ನಮ್ಮ ನಡಿಗೆ ಶುರು. ಈ ದೂರವನ್ನು ನಾವು ಬಸ್ಸಿನ ಟಾಪಿನಲ್ಲಿ ಕುಳಿತು ಪಯಣಿಸಿದೆವು. ಒಂದು ಕಡೆ ಗುಡ್ಡ, ಇನ್ನೊಂದುಕಡೆ ಆಳದ ಪ್ರಪಾತ, ಅಲ್ಲಲ್ಲಿ ರಸ್ತೆತಡೆ ನಡೆಸುವ ಕುರಿಮಂದೆಗಳು. ಇಲ್ಲಿಯ ಡ್ರಯ್ವರುಗಳ ದಯ್ರ್‍ಯವನ್ನು ಮೆಚ್ಚಲೇ ಬೇಕು. ಮೊದಲ ದಿನದ ನಡಿಗೆ ಸ್ವಲ್ಪ ಸುಲಬವಾದದ್ದು. ಸುಂದರವಾದ ಹಸಿರು ಪರಿಸರದಲ್ಲಿ ಸುಮಾರು ಅಯ್ದು ಕಿಲೋಮೀಟರಿನಶ್ಟು ನಡೆದರೆ ನಮ್ಮ ಮೊದಲ ಕ್ಯಾಂಪ್ ಗುನಾಪಾನಿ ಸಿಗುತ್ತದೆ. ಮದ್ಯಾನದ ಹೊತ್ತಿಗೇ ನಾವು ಅಲ್ಲಿ ತಲುಪಿದೆವು.

ದಿವಸ 2: ಗುನಾಪಾನಿಯಿಂದ ನಾವು ಪುಯಾಲ್ಪಾನನಿಯ ಕಡೆಗೆ ನಡೆಯಲು ಶುರುಮಾಡಿದೆವು. ಇದು ಸಮುದ್ರ ಮಟ್ಟದಿಂದ ಸುಮಾರು ೯೫೦೦ ಅಡಿಗಳಶ್ಟು ಎತ್ತರದಲ್ಲಿದ್ದು ಸುತ್ತಲೂ ದಟ್ಟ ಕಾಡಿನಿಂದ ಸುತ್ತುವರೆದಿದೆ. ಸೂರ್‍ಯನ ಬೆಳಕು ಒಳಗೆ ನುಸುಳಲೇ ಆಗುವುದಿಲ್ಲವೇನೋ ಎಂಬಂತಿದೆ. ಇಲ್ಲಿ ಹಿಂದಿನ ದಿನ ಮಳೆಯಾಗಿದ್ದರಿಂದ ನಾವು ಕಾಲಿಟ್ಟಲ್ಲೆಲ್ಲ ಜಾರುತ್ತಿತ್ತು. ನಮ್ಮ ಗುಂಪಿನ ಹೆಚ್ಚಿನವರು ಕಡೇಪಕ್ಶ ಒಮ್ಮೆಯಾದರೂ ಜಾರಿ ಬಿದ್ದಿದ್ದರು. ನಮ್ಮ ಬಿಡಾರದ ಹತ್ತಿರದಲ್ಲೇ ಒಂದು ಚಿಕ್ಕ ಜಲಪಾತವಿದ್ದು, ಅಡಿಗೆಗಾಗಿ ಮತ್ತು ಕುಡಿಯಲು ಅಲ್ಲಿನ ನೀರನ್ನೇ ಬಳಸುತ್ತಿದ್ದರು.

ದಿವಸ 3: ಪುಯಾಲ್ಪಾದನಿಯಿಂದ ಜಿರ್‍ಮಿತಾ‍ಚ್ನಿತ್ತ ನಮ್ಮ ನಡಿಗೆ ಸಾಗಿತು, ನಾವು ಮೇಲಕ್ಕೆ ಹೋದಂತೆಲ್ಲಾ ನಮ್ಮ ನಡಿಗೆ ಕಶ್ಟವಾಗುತ್ತಾ ಹೋಯ್ತು. ಬೆಟ್ಟಗಳು ಕಡಿದಾಗಿರುವುದರಿಂದ, ಕೆಲವು ಹೆಚ್ಚೆ ಹಾಕುವುಶ್ಟರಲ್ಲೇ ಸುಸ್ತಾಗಿ ಏದುಸಿರು ಬಿಡಬೇಕಿತ್ತು. ಆದರೆ ಇಲ್ಲಿಯ ಪರಿಸದಲ್ಲೇ ಇರುವ ಜನರು ಸರಾಗವಾಗಿ ಗುಡ್ಡಗಳನ್ನು ಹತ್ತಿಳಿಯುತ್ತಾರೆ. ಜಿರ್‍ಮಿತಾಚ್ ಸಮುದ್ರ ಮಟ್ಟದಿಂದ 11000 ಅಡಿಗಳಶ್ಟು ಎತ್ತರದಲ್ಲಿದ್ದು ತುಂಬಾ ರಮಣೀಯವಾಗಿದೆ, ಇಲ್ಲಿಂದ ಕಂಡುಬರುವ ಚೆಲುವು ನಿಮ್ಮನ್ನು ನೀವೇ ಮರೆಯುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ನಿಮ್ಮ ಆಯಾಸವೆಲ್ಲಾ ಅರೆಗಳಿಗೆಯಲ್ಲಿ ಮಾಯವಾಗುತ್ತದೆ. ಇಲ್ಲಿ ನಿಂತು ಹಿಮಾಲಯದ ಹಲವು ಶಿಕರಗಳ ತುದಿಗಳನ್ನು ನೋಡಬಹುದು.

ದಿವಸ 4: ಜಿರ್‍ಮಿಯಿಂದ ಹೊರಟು ತಿಲಾಲೋಟನಿ ಕಡೆಗೆ ಹತ್ತುವುದು. ಇಲ್ಲಿಯ ಹೆಚ್ಚಿನ ಹಾದಿಯು ಹಿಮದ ಮೇಲೆಯೇ ಸಾಗುತ್ತದೆ. ತಿಲಾಲೋಟನಿಯು ನಮ್ಮ ಕ್ಯಾಂಪುಗಳಲ್ಲೆಲ್ಲಾ ಅತಿ ಎತ್ತರದ ಜಾಗದಲ್ಲಿದೆ. (ಸಮುದ್ರ ಮಟ್ಟದಿಂದ ಸುಮಾರು 12500 ಅಡಿಗಳು) ಸುತ್ತಲೂ ಇರುವ ಹಿಮಗಿರಿಗಳು ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಇಲ್ಲಿ ಬೇಗನೆ ಬೆಳಗಾಗುತ್ತದೆ ಮತ್ತು ಬೇಗನೆ ಕತ್ತಲಾಗುತ್ತದೆ.ಸಂಜೆ ಆರು ಗಂಟೆಗೇನೆ ನಮ್ಮ ರಾತ್ರಿಯ ಊಟ ಮುಗಿಸಿಬಿಡುತ್ತಿದ್ದೆವು. ಆರೂವರೆ ಗಂಟೆಗೆ ಮಲಗುತ್ತಿದ್ದೆವು.

ದಿವಸ 5: ತಿಲಾಲೋಟನಿಯಿಂದ ಬಿಸ್ಕೆರಿಗೆ ಹೋಗುವ ಈ ಚೆಲುವನ್ನು ಬರಹದಲ್ಲಿ ಹಿಡಿದಿಡಲಾಗುವುದಿಲ್ಲ. ಕಣ್ಣು ಹಾಯಿಸಿದಲ್ಲೆಲ್ಲಾ ಬಿಳಿಯ ಹತ್ತಿಯಂತೆ ಕಾಣುವ ಹಿಮ, ಆಳದ ಹಿಮಕಣಿವೆಗಳು, ಹಿಮಗಿರಿಗಳು. ಅಲ್ಲಲ್ಲಿ ಸಿಗುವ ಸಣ್ಣ ಕೊಳಗಳು. ಕೆಲವು ಕಡೆ ನಾವು ನಡೆಯುವುದಕ್ಕಿಂತ ಹಿಮದ ಮೇಲೆ ಜಾರಿಕೊಂಡೆ ಸಾಗಿದೆವು. ನಮ್ಮ ಗಯ್ಡುಗಳು ನಮದ ಹಿಮದ ಮೇಲೆ ಜಾರುವುದನ್ನು ಹೇಳಿಕೊಟ್ಟಿದ್ದರು. ಸಮುದ್ರ ಮಟ್ಟದಿಂದ ಸುಮಾರು 13800 ಅಡಿಗಳಶ್ಟು ಎತ್ತರದಲ್ಲಿರುವ ಸರ್‍ ಪಾಸ್ ಮೂಲಕ ಹಾದು ಹೋಗುವ ಈ ಹಾದಿಯ ಚೆಲುವಿಗೆ ಕೆಳಗಿನ ಚಿತ್ರಗಳೇ ಸಾಕ್ಶಿ.

landscape1

landscape2

ದಿವಸ 6: ಬಿಸ್ಕೆರಿ ತಾಚ್ನಿಂ ದ ಬಂಡಕ್ ತಾಚ್ ಇಲ್ಲಿಂದ ಹತ್ತುವುದಕ್ಕಿಂತ ಇಳಿಯುವುದೇ ಜಾಸ್ತಿ ಹಾಗಾಗಿ ನಮಗೆಲ್ಲ ತುಂಬಾ ನಲಿವಾಗಿತ್ತು. ಇಲ್ಲಿ ಸುಮಾರು ಹತ್ತು ಕಿಲೋಮೀಟರಿನಶ್ಟು ನಡೆಯಬೇಕಿದ್ದರೂ ಇಳಿಯುವುದರಿಂದ ಅಂತಹ ಆಯಾಸವಾಗುವುದಿಲ್ಲ. ಪಯ್ನ್ ಮರಗಳ ಕಾಡುಗಳು, ಹಸಿರು ಹುಲ್ಲುಗಾವಲುಗಳು ಎದುರಾಗುತ್ತಿದ್ದವು. ಬಂಡಕ್ ತಾಚ್ನಾ ಬಿಡಾರವು ಸಹ ಸುಂದರವಾದ ಇಂತಹ ಹುಲ್ಲುಗಾವಲಿನ ನಡುಯೇ ಇದ್ದು ಸುಂದರವಾಗಿದೆ.

green_hill

ದಿವಸ 7: ಸುಂದರವಾದ ಬಂಡಕ್ ತಾಚ್‍ ಕ್ಯಾಂಪಿನಿಂದ ಬರ್‍ಶೇನಿ ಎಂಬಲ್ಲಿಗೆ ನಡೆಯುವುದು, ಇದು ಟ್ರೆಕ್ಕಿಂಗ್ನಕ ಕೊನೆಯದಿನ, ಮದ್ಯದಲ್ಲಿ ಚಿಕ್ಕ ಚಿಕ್ಕ ಹಳ್ಳಿಗಳು ಸಿಗುತ್ತವೆ. ಬರ್‍ಶೆನಿಯಿಂದ ಬಸ್ಸಿನಲ್ಲಿ ಮಣಿಕರಣ್ ತಲುಪಿದೆವು. ಮಣಿಕರಣ್ನ೦ಲ್ಲಿ ಬಿಸಿನೀರಿನ ಬುಗ್ಗೆಯಿದೆ ಅಲ್ಲಿ ಸ್ನಾನ ಮಾಡಿ ನಮ್ಮ ದಣಿವನ್ನೆಲ್ಲಾ ನೀಗಿಸಿಕೊಂಡೆವು.

ಪ್ರತಿವರ್‍ಶ ಮೇ ತಿಂಗಳಲ್ಲಿ ಯೂತ್ ಹಾಸ್ಟೆಲ್ನೆವರು ಈ ಟ್ರೆಕ್ಕಿಂಗನ್ನು ನಡೆಸುತ್ತಾರೆ. ಇಡೀ ತಿಂಗಳ ಯಾವುದೇ ದಿನದಲ್ಲಾದರೂ ಇಲ್ಲಿ ಸೇರಿಕೊಳ್ಳಬಹುದಾಗಿರುತ್ತದೆ. ಇದರಲ್ಲಿ ಸೇರಿಕೊಳ್ಳಲು ಮುಂಚಿತವಾಗಿಯೇ ಬುಕ್ ಮಾಡಿಕೊಳ್ಳಬೇಕು. ಇದರ ಬೆಲೆಯು ಇನ್ನೂ ಕಯ್ಗೆಟಕುವಂತಿದೆ (ಸುಮಾರು ಮೂರೂವರೆ ಸಾವಿರ ರೂಪಾಯಿಗಳು – ಒಂಬತ್ತು ದಿನಗಳ ಊಟ, ತಿಂಡಿ, ವಸತಿ ಎಲ್ಲವೂ ಸೇರಿ) ಕರ್‍ನಾಟಕದಿಂದ ಹೋಗುವವರಿಗೆ ಬೇಸ್‍ಕ್ಯಾಂಪ್ ಕಸೋಲ್ ತಲುಪುವುದು ಸ್ವಲ್ಪ ದುಬಾರಿಯಾಗುತ್ತೆ, ಆದರೆ ಹೆಚ್ಚಿನ ರಜೆಗಳು ಸಿಗುವಂತಿದ್ದರೆ ರಯ್ಲಿನಲ್ಲಿ ಪ್ರಯಾಣ ಮಾಡಿ ವೆಚ್ಚವನ್ನು ತಗ್ಗಿಸಬಹುದು. ಒಳ್ಳೆಯ ಶೂ, ಜತೆಗೆ ಒಳ್ಳೆಯ ಸಂಗಡಿಗರು ಇದ್ದರೆ ನಲಿವಿನ ಪಯಣ ನಿಮ್ಮದಾಗಲಿದೆ. ಹವಾಮಾನ ಮತ್ತಿತರ ಪರಿಸ್ತಿತಿಗಳನ್ನು ನೋಡಿ ಇದರ ಆಯೋಜಕರು ಹಾದಿಗಳನ್ನು ನಿರ್‍ದರಿಸುತ್ತಾರೆ. ಇದೇ ತಿಂಗಳಲ್ಲಿ ನಡೆಯುವ ಈ ಟ್ರೆಕ್ಕಿಂಗ್‍ ಮಾಡಲು ನಿಮಗೆ ಆಸೆಯಿದ್ದರೆ ಯೂತ್ ಹಾಸ್ಟೆಲನ್ನು ಸಂಪರ್‍ಕಿಸಿ.

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Sandeep Kn says:

    ಗಿರೀಶ್, ತುಂಬಾ ಒಳ್ಳೇ ಬರಹ. ನಾನು ಹೋದ ವರುಶ ಹೋಗಿದ್ದೆ, ಇದೇ ಟ್ರೆಕಿಂಗಿಗೆ. ನೀವು ಈ ಸಲ ಹೋಗಿ ಬಂದಿದ್ದೀರಿ.

    ಹಾಗೇ, ಒಂದು ವಿಶೇಶ ಅಂದರೆ ಇಲ್ಲಿ ಬರುವ ಹೆಚ್ಚು ಕಡಿಮೆ ೫೦%ಗೂ ಹೆಚ್ಚಿನ ಮಂದಿ ಕನ್ನಡಿಗರೇ ಆಗಿರುತ್ತಾರೆ. ನಾನು ಹೋದಾಗಲೂ ಹೆಚ್ಚಾಗಿ ಕನ್ನಡಿಗರೇ ಬಂದಿದ್ದರು. ನಿಮ್ಮ ಅನುಬವ ಏನು?

    • ಹೌದು ಕನ್ನಡಿಗರು ಹೆಚ್ಚಿನ ಸಂಕ್ಯೆಯಲ್ಲಿ ಸಿಗುತ್ತಾರೆ. ನಾನು ಈ ವರ್ಶ ಹೋಗಿದ್ದಲ್ಲ ನಾಲ್ಕುವರ್ಶಗಳ ಹಿಂದೆ ಹೋಗಿದ್ದು. ಈ ವರ್ಶ ಮತ್ತೆ ಮೇ ತಿಂಗಳಲ್ಲಿ ಇದು ನಡೆಯುತ್ತಿರುವುದರಿಂದ ಹೋಗುವವರಿಗೆ ಅನುವಾಗಲಿ ಎಂದು ಅನುಬವವನ್ನು ಹಂಚಿಕೊಂಡಿದ್ದೇನೆ.

ಅನಿಸಿಕೆ ಬರೆಯಿರಿ: