ಗುಟ್ಕಾ ತಿಂದು ಗೊಟಕ್ ಅನ್ನಬೇಡಿ!

ಆನಂದ್ ಜಿ.

Photo1-Gutka

ಗುಟ್ಕಾ ಅನ್ನೋದನ್ನು ಮುಸುಕಿನಲ್ಲಿನ ಸಾವು ಎಂದು ಕರೆಯುತ್ತಾರೆ. ಬಾಯಿಯ ಸುವಾಸನೆಗೆ ಎಂದು ಅಡಿಕೆ ಮತ್ತು ತಂಬಾಕಿನ ಹದಬೆರೆಕೆಯಾಗಿ ತಯಾರಾಗುವ ಗುಟ್ಕಾ ಕೆಲವೇ ದಿನಗಳಲ್ಲಿ ತಿನ್ನುವವರನ್ನು ತನ್ನ ದಾಸನನ್ನಾಗಿಸಿಕೊಳ್ಳುತ್ತದೆ. ಇದು ಎಶ್ಟೇ ಸುಂದರವಾದ, ಬಣ್ಣದ ಹೊಳೆಯುವ ಪೊಟ್ಟಣದಲ್ಲಿಟ್ಟು ನಿಮ್ಮ ಕಯ್ಸೇರಿದ್ದರೂ ದೇಹ ಸೇರುವಾಗ ಕಡು ನಂಜಾಗೇ ಸೇರುತ್ತದೆ ಎನ್ನುವುದೇ ದಿಟವಾಗಿದೆ. ಬನ್ನಿ, ಈ ಗುಟ್ಕಾ ಹುಟ್ಟುಹಾಕುವ ನರಕದೊಳಗೊಂದು ಸುತ್ತು ನೋಡಿ ಬರೋಣ!

ಗುಟ್ಕಾ ಹುಟ್ಟುಹಾಕುವ ಈ ನರಕಕ್ಕೆ ಪರಿಣಿತರು “ಗುಟ್ಕಾ ಸಿಂಡ್ರೋಮ್” ಎಂಬ ಚೆಂದದ ಹೆಸರು ಕೊಟ್ಟಿದ್ದಾರೆ. ಈ ಸಿಂಡ್ರೋಮಿಗೆ ಒಳಗಾದವರ ಲಕ್ಶಣಗಳು ಹೀಗಿವೆ:

  • ಇದು ಸಾಮಾನ್ಯವಾಗಿ ಗುಟ್ಕಾ ತಿನ್ನುವ ಚಟ 5 ವರ್‍ಶಗಳ ಕಾಲದಲ್ಲಿ ಕಾಣಿಸಿಕೊಳ್ಳುತ್ತದೆ.
  • ಈ ಲಕ್ಶಣಗಳು ಹತ್ತು ವರುಶಗಳ ಒಳಗಾಗಿ ಬಹುಪಾಲು ಚಟದಾಸರಲ್ಲಿ ಕಾಣಿಸುತ್ತದೆ.
  • ಯುವಕರು ಮತ್ತು ನಡುವಯಸ್ಸಿನವರು ಹೆಚ್ಚಾಗಿ ಇದರ ಬಲಿಪಶುಗಳು
  • ಇದಕ್ಕೆ ಹೆಣ್ಣು ಗಂಡಿನ ಬೇದವಿಲ್ಲದೆ ಇದ್ದರೂ, ಹೆಚ್ಚಾಗಿ ಗುಟ್ಕಾ ಬಳಸುವವರು ಗಂಡಸರೇ ಆದ್ದರಿಂದ ಇವರಲ್ಲಿ ಕಾಣಿಸುವುದು ಸಾಮಾನ್ಯ.
  • ಇಂತಹ ವ್ಯಕ್ತಿಗಳಲ್ಲೇ ಬಾಯಿ ಗಂಟಲಿಗೆ ಸಂಬಂದಿಸಿದ ಏಡಿಹುಣ್ಣು (ಕ್ಯಾನ್ಸರ್‍)  ಅತಿಹೆಚ್ಚು.

ಗುಟ್ಕಾ ತಿನ್ನುವವರ ಮುಕದಲ್ಲಾಗುವ ಬದಲಾವಣೆಗಳು

ಗುಳಿಬೀಳುವ ಕೆನ್ನೆ ಮತ್ತು ಗಲ್ಲ

  • ಮುಕದ ಕೊಬ್ಬಿನಂಶ ಮತ್ತು ಮೆದುಬಾಗಗಳು ಸರಿಯಾದ ಸತ್ವಗಳ ಕೊರತೆಯಿಂದಾಗಿ ಒಣಗಿ ಗಡುಸಾಗುತ್ತವೆ.
  • ಮುಕದ ಮಾಂಸಕಂಡಗಳ, ಮೆದುವಾದ ಬಾಗಗಳಲ್ಲಿ ಬಿರುಸುಂಟಾಗುತ್ತದೆ.

ಗಡುಸಾಗುವ ಕೆನ್ನೆ ಮತ್ತು ಗಲ್ಲ

  • ಗುಟ್ಕಾ ಸಿಂಡ್ರೋಮ್ ತೀವ್ರಗೊಂಡ ವ್ಯಕ್ತಿಗಳಲ್ಲಿ ಕೆನ್ನೆ ಮತ್ತು ಗಲ್ಲಗಳು ಮೂಳೆಗಳಂತೆ ಗಡುಸಾಗಿಬಿಡುತ್ತವೆ. ಇದು ಮುಕದ ಕೊಬ್ಬಿನಂಶ ಪೂರ‍್ತಿ ಹಾಳಾಗಿ, ಸ್ನಾಯುಗಳು ಗಡುಸಾಗುವುದರಿಂದ ಆಗುತ್ತದೆ. ದವಡೆಗಳು ಉಬ್ಬಿದಂತೆ ಕಾಣುತ್ತವೆ.

ಉಬ್ಬಿದ ಕಣ್ಣುಗಳು

  • ಸುತ್ತಲಿನ ಮಾಂಸಕಂಡಗಳ ಬಿಗಿತದಿಂದಲೂ, ಕೊಬ್ಬಿನಂಶದ ಕೊರತೆಯಿಂದಲೂ ಕಣ್ಣುಗಳು ಉಬ್ಬಿದಂತಾಗುತ್ತದೆ.

ಸುಕ್ಕುಗಟ್ಟಿದ ಚರ್‍ಮದ ಮಡಿಕೆಗಳು

  • ಕೊಬ್ಬಿನಂಶದ ಕೊರತೆಯಿಂದಾಗಿ ಮಡಿಕೆಗಟ್ಟಿದ ಚರ್‍ಮವನ್ನು ಗುಟ್ಕಾ ಚಟವಿರುವವರು ಬಾಯಗಲಿಸಿ ನಕ್ಕರೆ ಎದ್ದು ಕಾಣುವುದನ್ನು ಗಮನಿಸಬಹುದು. ಬಾಯಿಯ ಸ್ವಾಟೆ ಹರಿದಂತೆ ಕಾಣುವುದು.

ಗುಟ್ಕಾ ತಿನ್ನುವವರ ಬಾಯಿ

  • ಬಾಯೊಳಗಿನ ಸಹಜವಾಗಿ ಗುಲಾಬಿ ಬಣ್ಣದಲ್ಲಿರುವ ಮೆದು ಮಾಂಸಕಂಡದ ಒಳಗೋಡೆಗಳು ಬೆಳ್ಳಗೆ, ರಕ್ತವಿಲ್ಲದಂತೆ ಸೊರಗಿರುತ್ತದೆ.
  • ಬಾಯಿ, ದವಡೆಗಳ ಮಾಂಸಕಂಡಗಳು ಬಿರುಸಾಗುವುದರಿಂದ ಪೂರ್‍ತಿಯಾಗಿ ಬಾಯಿ ತೆರೆಯಲು ಇವರಿಗೆ ಆಗುವುದಿಲ್ಲ.
  • ಒಟ್ಟಾರೆ ಆಹಾರ ಒಳಹೋಗಲು ತೊಡಕಾಗುವಶ್ಟರ ಮಟ್ಟಿಗೆ ಬಾಯಿ, ಅನ್ನನಾಳದ ಬಾಗಿಲುಗಳು ಚಿಕ್ಕವಾಗುತ್ತವೆ.
  • ಪದೇಪದೇ ಗುಣವಾಗದ ಬಾಯಿಹುಣ್ಣು ಕಾಡುತ್ತದೆ.
  • ಪದೇಪದೇ ತುಟಿ ಒಡೆಯುವುದು ಹೆಚ್ಚಿರುತ್ತದೆ.  ನೆತ್ತರ ಸೋರಿಕೆಯೂ ಆಗಬಹುದು.
  • ಬಾಯಿ ಕಾರ, ಬಿಸಿ ಮತ್ತು ತಣ್ಣನೆಯ ತಿನಿಸುಗಳಿಗೆ ಅತಿಯಾಗಿ ಸ್ಪಂದಿಸತೊಡಗುತ್ತಾ ಇದಾದುವುದನ್ನೂ ಸಹಿಸಲು ಆಗದೆ ತೊಂದರೆಪಡುವುದು ಹೆಚ್ಚುತ್ತದೆ.
  • ಕಿರುನಾಲಿಗೆ ಸಹಜವಾಗಿ ಕೆಳಚಾಚಿಕೊಂಡಿರದೆ ಸೆಟೆದುಕೊಂಡಂತಿರುತ್ತದೆ.
  • ಬಾಯಿಯ ಮೇಲ್ಬಾಗದ ಅಂಗಳ ಸೊರಗಿ ಬಿರುಸಾಗಿ ಬಿಡುತ್ತದೆ
  • ಹಲ್ಲುಗಳ ಆಕಾರ ಬದಲಾವಣೆ, ಹರಿತವಾಗುವ ಹಲ್ಲಿನ ತುದಿ, ಹಲ್ಲುಸಂದಿಗಳ ಹೆಚ್ಚಳ ಮೊದಲಾದ ತೊಂದರೆಗಳಾಗಬಹುದು.
  • ಕಡೆಯ ದವಡೆ ಹಲ್ಲು ಇಂತಹವರಲ್ಲಿ ವಸಡಿನಲ್ಲಿ ಅರೆ ಹುದುಗಿದಂತಾಗಬಹುದು.

ಮಾತಿನ ಮೇಲೆ ಮತ್ತು ಕೇಳುವುದರ ಮೇಲೆ ಗುಟ್ಕಾ ತಿನ್ನುವುದರ ಪರಿಣಾಮ
ಗುಟ್ಕಾ ತಿನ್ನುವವರಲ್ಲಿ ಸಾಮಾನ್ಯವಾಗಿ ನಾಲಿಗೆಯನ್ನು ಹೊರಳಿಸಿ/ ತುಟಿಗಳನ್ನು ಬಾಗಿಸಿ, ಮಡಚಿ ಉಲಿಯುವ ಶಬ್ದಗಳನ್ನಾಡುವಾಗ ಬೇರೆಯಾದ ಉಚ್ಚರಣೆ ಕೇಳಿಬರುತ್ತದೆ. ದವಡೆಗಳನ್ನು ಸಹಜವಾಗಿ ಪೂರ‍್ತಿಯಾಗಿ ಚಲಿಸಲಾಗದ ಕಾರಣದಿಂದಲೂ ಮಾತಿನ ತೊಂದರೆಯುಂಟಾಗುತ್ತದೆ.  ಮಾತುಗಳನ್ನಾಡುವಾಗ ಬಿರುಸಾದ ಅಂಗಳವನ್ನು ತಾಕಲು ಸೆಟೆದ ನಾಲಿಗೆ ತಾಕುವಾಗ ಉಂಟಾಗುವ ತೊಂದರೆಯಿಂದಲೂ ಇಂತವರ ಮಾತಿನ  ಶಯ್ಲಿ ಬೇರೆಯಾಗುತ್ತದೆ. ಒಂದೆರಡು ಸೊಲ್ಲುಗಳ ನಂತರ ನಿಲ್ಲಿಸಿ ನಿಲ್ಲಿಸಿ ಬಲವಂತವಾಗಿ ಉಗುಳುನುಂಗುವುದನ್ನು ಇವರಲ್ಲಿ ಕಾಣಬಹುದು. ಸಹಜವಾಗಿ ಉಗುಳು ನುಂಗುವುದನ್ನು ಗುಟ್ಕಾ ಸೇವನೆ ತೊಡಕಾಗಿಸುತ್ತದೆ. ಇದು ಉಗುಳು ನುಂಗಲು ಬೇಕಾದ ಮಾಂಸಕಂಡಗಳ ಗಡಸಾಗುವಿಕೆಯಿಂದ ಉಂಟಾಗುತ್ತದೆ. ಇದಲ್ಲದೆ ಕಿವಿಯ ಸುತ್ತಮುತ್ತಲಿರುವ ಮುಕದ ಮಾಂಸಕಂಡಗಳಿಗೆ ಹಾನಿಯಾಗಿ ಕಿವುಡುತನವೂ ಉಂಟಾಗಬಲ್ಲುದು.

ಗುಟ್ಕಾದ ಪರಿಣಾಮಗಳು

  • ಬಾಯೊಳಗಿನ ಮೆತ್ತನೆಯ ನವಿರಾದ ಅಂಗಾಂಶಗಳ ಮೇಲೆ ಮೊದಲ ಪರಿಣಾಮ ಬೀರುವ ಗುಟ್ಕಾ ‘sub mucous fibrosis’ ಎನ್ನುವ ಕ್ಯಾನ್ಸರಿನ ಮೊದಲ ಹಂತಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಬಾಯಿ, ಗಂಟಲು ಮತ್ತು ಅನ್ನನಾಳಗಳ ಕ್ಯಾನ್ಸರ್‍ ಹುಟ್ಟುತ್ತದೆ.
  • ತುಟಿಗಳು, ನಾಲಿಗೆ, ಬಾಯಿ ಮತ್ತು ವಸಡುಗಳ ಕ್ಯಾನ್ಸರ್‍ ಹುಟ್ಟಿಗೆ ಗುಟ್ಕಾ ತಿನ್ನುವುದು ದೊಡ್ಡ ಕಾರಣವಾಗಿದೆ.
  • ಹಸಿವೆ ಇಲ್ಲವಾಗುತ್ತದೆ/ ಕಡಿಮೆಯಾಗುತ್ತದೆ.
  • ನಿದ್ದೆ ಏರುಪೇರಾಗುತ್ತದೆ.
  • ಒಮ್ಮನಸು ಇಲ್ಲವಾಗುತ್ತದೆ.
  • ಬಾರತದಲ್ಲಿ ನಡೆಸಲಾದ ಒಂದು ಅದ್ಯಯನದಲ್ಲಿ ಬಸುರಿ ಹೆಂಗಸರಲ್ಲಿ ಗುಟ್ಕಾ ತಿನ್ನುವ ಚಟವಿದ್ದಲ್ಲಿ ಹುಟ್ಟುವ ಮಕ್ಕಳ ತೂಕ ಕಡಿಮೆಯಿರುವುದನ್ನು ಕಂಡುಕೊಳ್ಳಲಾಗಿದೆ.

ಗುಟ್ಕಾ ತಯಾರಕರ ಜಾಹೀರಾತುಗಳು ಮತ್ತು ಮಾರುಕಟ್ಟೆ ಗೆಲ್ಲುವ ತಂತ್ರಗಳು ಇತ್ತೀಚಿನ ದಿನಗಳಲ್ಲಿ ಶಾಲಾಮಕ್ಕಳಲ್ಲೂ ಗುಟ್ಕಾ ತಿನ್ನುವ ಚಟ ಹುಟ್ಟಲು ಕಾರಣವಾಗಿದೆ. ಬಾರತದಲ್ಲಿ ಇದರ ತಯಾರಿಕೆ ಮತ್ತು ಬಳಕೆಯ ಮೇಲೆ ಕಟಿಣವಾದ ಕಾಯ್ದೆಗಳು ಇಲ್ಲದೇ ಇರುವುದು ಅಚ್ಚರಿಯ ವಿಶಯವಾಗಿದೆ. ದುರಂತವೆಂದರೆ, ಇದನ್ನು ತಿನ್ನುವ ಬಹಳಶ್ಟು ಜನರಿಗೆ ಇದು ಚಟಕ್ಕೆ ದಾಸನನ್ನಾಗಿಸುತ್ತದೆ ಎಂಬುದಾಗಲೀ, ಇದರಲ್ಲಿ ಜೀವ ತೆಗೆಯುವ ರಸಾಯನಿಕಗಳಿವೆಯೆಂಬುದಾಗಲೀ ಅರಿವಿಲ್ಲ.

ಗೆಳೆಯರೇ, ಗುಟ್ಕಾ ಸೇವಿಸುವ ಹವ್ಯಾಸ ಬಿಡುವುದು ನಿಮ್ಮನ್ನೇ ಅವಲಂಬಿಸಿದೆ. ಇದು ನಂಜು, ಇದರಿಂದ ಸಾವು ಕಚಿತ ಎಂಬುದನ್ನು ತಿಳಿದೂ ಕೆಲವರು ‘ಎಲ್ಲರೂ ಸಾಯಲೇ ಬೇಕು, ಅದರಲ್ಲೇನಿದೆ? ಗುಟ್ಕಾ ತಿನ್ನದವರು ಸಾಯುವುದಿಲ್ಲವೇ?” ಎಂದು ಕೇಳುವುದುಂಟು. ಗುಟ್ಕಾ ಬರೀ ಸಾವನ್ನು ತರುವುದಿಲ್ಲ. ಪ್ರತಿಕ್ಶಣ ಅನುಬವಿಸಲು ತುಂಬಾ ಕಶ್ಟಕರವಾದ, ನೋವಿನ, ಕಣ್ಣೀರಿನ ನರಕವನ್ನು ಮೊದಲು ತಂದುಕೊಟ್ಟು ನಂತರ ರೋಗಿಗಳು  ‘ದೇವರೇ, ಈ ನೋವು ತಾಳಲಾರೆ, ಸಾವು ಬೇಗ ಬರಲಿ’ ಎಂದು ಹಂಬಲಿಸಿ ಹಂಬಲಿಸಿ ಕೊರಗಿ ಕರಗಿ ಕಣ್ಣೀರಾದ ಮೇಲೆ ಸಾವನ್ನು ತರುತ್ತದೆ. ನಮ್ಮ ಆರೋಗ್ಯ, ನಮ್ಮ ನೆಮ್ಮದಿ, ನಮ್ಮನ್ನು ನಂಬಿದವರ ನೆಮ್ಮದಿ, ಬದುಕು, ಬವಿಶ್ಯಗಳನ್ನು ಮಣ್ಣುಪಾಲು ಮಾಡಿ ಹಂತಹಂತವಾಗಿ ವಿನಾಶದೆಡೆಗೆ ಒಯ್ಯುವ ಗುಟ್ಕಾ ಸಹವಾಸ ನಮಗೆ ಬೇಕೇ? ಎಂದೊಮ್ಮೆ ಯೋಚಿಸಿ.

ಗುಟ್ಕಾ ಬಿಡಲು ಮನಸ್ಸು ಮಾಡಿದ್ದೀರಾ? ಹಾಗಾದರೆ…

  • ಗುಟ್ಕಾ ಸೇವನೆ ಬಿಡಿಸುವ ಅನೇಕ ಚಟ ಬಿಡಿಸುವ ಅನೇಕ ಸಂಸ್ತೆಗಳು ಇವೆ. ಇವುಗಳ ಸಹಾಯ ತೆಗೆದುಕೊಳ್ಳಿ.
  • ಈಗಾಗಲೇ ಚಟ ಬಿಟ್ಟವರ ಸಲಹೆ, ಮಾರ‍್ಗದರ‍್ಶನ ಪಡೆಯಿರಿ. ಅನುಬವಗಳನ್ನು ಅರಿಯಿರಿ.
  • ನಿಮ್ಮಿಂದ ಇದು ಸಾದ್ಯ. ಇದಕ್ಕೆ ಬೇಕಿರುವುದು ಆತ್ಮವಿಶ್ವಾಸ ಮಾತ್ರಾ.
  • ಚಟ ಬಿಟ್ಟ ಹೊಸದರಲ್ಲಿ ಮತ್ತೆ ಮತ್ತೆ ಬೇಕೆನಿಸಿದರೆ ಚೆನ್ನಾಗಿ ನೀರು ಕುಡಿಯುವ ಹವ್ಯಾಸ ಬೆಳೆಸಿಕೊಳ್ಳಿ
  • ಚಟಗಾರ ಗೆಳೆಯರ ಸಹವಾಸದಿಂದ ಆದಶ್ಟೂ ದೂರವಿರಿ.
  • ಚಟ ಬಿಡಲಾಗದ ಗೆಳೆಯರ ಅವಹೇಳನ, ಆಮಿಶ, ನಿಂದೆ, ಹಗುರ ಮಾತುಗಳಿಗೆ ಕಿವಿಗೊಡದಿರಿ. ಅಂತಹ ಹೊತ್ತಿನಲ್ಲಿ ಆ ಗೆಳೆಯರ ಗೆಳೆತನಕ್ಕೂ ಮೀರಿದ್ದು ನಿಮ್ಮ ಆರೋಗ್ಯ ಎಂಬುದನ್ನು ನೆನಪಿಡಿ.
  • ಚಟವನ್ನು ಯಾರಿಗಾಗೋ ಬಿಡಬೇಡಿ. ನಿಮಗಾಗಿ, ನಿಮ್ಮ ಆರೋಗ್ಯಕ್ಕಾಗಿಯೇ ನಿಮ್ಮ ನೆಮ್ಮದಿಗಾಗಿಯೇ ಬಿಡುತ್ತಿದ್ದೇನೆ ಎನ್ನುವುದನ್ನು ಮನನ ಮಾಡಿಕೊಳ್ಳಿರಿ.


ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: