ಅಮೇರಿಕನ್ ಪುಟ್ಬಾಲೂ, ಕ್ಯಾಪಿಟಲಿಸಮ್ಮೂ…

ಪ್ರಿಯಾಂಕ್ ಕತ್ತಲಗಿರಿ.

?????????????????

ಕೆನಡಾದ ಟೊರಂಟೊ ವಿಶ್ವವಿದ್ಯಾಲಯಕ್ಕೆ ಸೇರಿದ ರಾಟ್ಮನ್ ಮ್ಯಾನೇಜ್ಮೆಂಟ್ ಶಾಲೆಯ ಮುಂದಾಳು ರಾಜರ್‍ ಮಾರ್‍ಟಿನ್ ಅವರು. ಇವತ್ತಿನ ದಿನ ಅಮೇರಿಕಾದಲ್ಲಿ ಪಾಲಿಸಲಾಗುತ್ತಿರುವ ಕ್ಯಾಪಿಟಲಿಸಮ್ಮಿನ ಕೆಲವು ತೊಂದರೆಗಳ ಬಗ್ಗೆ ಆಳವಾಗಿ ತಿಳಿದುಕೊಂಡಿರುವ ಇವರು, ಈ ತೊಂದರೆಗಳು ಬಾರದಂತೆ ನೋಡಿಕೊಳ್ಳಲು “ಅಮೇರಿಕನ್ ಪುಟ್ಬಾಲಿನ” ರೀತಿಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ.

ಏನಿದು “ಅಮೇರಿಕನ್ ಪುಟ್ಬಾಲ್”?

ದಡೂತಿ ಮಯ್ಯ ಆಳುಗಳು ಹೆಲ್ಮೆಟ್ಟು ಹಾಕಿಕೊಂಡು ಒಬ್ಬರಿಗೊಬ್ಬರು ಗುದ್ದಾಡಿಕೊಳ್ಳುತ್ತಾ ಚೆಂಡನ್ನು ಎದುರಾಳಿಗಳ ಕಡೆ ಕೊಂಡೊಯ್ದು ಗೋಲು ಸಂಪಾದಿಸುವ ಆಟವೇ “ಅಮೇರಿಕನ್ ಪುಟ್ಬಾಲ್”. ಅಮೇರಿಕಾ ದೇಶದಲ್ಲಿ ಬಹಳ ಹೆಸರುವಾಸಿಯಾಗಿರುವ ಈ ಆಟದಲ್ಲಿ ಪಾಲ್ಗೊಳ್ಳುವ ಆಟಗಾರರೂ ತುಂಬಾ ಹೆಸರುವಾಸಿ. ಹಲವಾರು ತಂಡಗಳು ಸೆಣಸುವ ಪಂದ್ಯಾವಳಿಯ ಸುತ್ತ ಜೂಜಿನಾಟ ಕೂಡಾ ನಡೆಯುತ್ತದೆ. ಈ ತಂಡ ಗೆಲ್ಲಬಹುದು, ಆ ತಂಡ ಗೆಲ್ಲಬಹುದು ಎನ್ನುತ್ತಾ ಬಾಜಿ ಕಟ್ಟಿ ಹಣ ಮಾಡುವ/ಕಳೆದುಕೊಳ್ಳುವ ಜೂಜಿನಾಟವೂ ಹೆಸರುವಾಸಿ.

“ಅಮೇರಿಕನ್ ಪುಟ್ಬಾಲ್” ರೀತಿ ಎಂದರೇನು?

ಆಟದಲ್ಲಿ ನಿಜವಾಗಿ ಸೋಲು/ಗೆಲುವು ನಿಂತಿರುವುದು ಗುದ್ದಾಡಿ ಆಟವಾಡುವ ಆಟಗಾರರ ಮೇಲೆ. ಈ ಆಟಗಾರರ ಮೇಲೆ “ಜೂಜಿನಾಟ” ಯಾವುದೇ ರೀತಿಯ ಪ್ರಬಾವ ಬೀರಬಾರದು ಎಂಬ ಕಾರಣಕ್ಕಾಗಿ, ಪುಟ್ಬಾಲ್ ಆಟಗಾರರು ಜೂಜಿನಾಟದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ಶರತ್ತು ಹಾಕಲಾಗಿದೆ. ಆಟಗಾರರು ಜೂಜಿನಾಟದ ಬಗ್ಗೆ ಯಾವುದೇ ರೀತಿ ತಲೆಕೆಡಿಸಿಕೊಳ್ಳದೇ ಆಡುವುದನ್ನು ಈ ಮೂಲಕ ಆಗುಮಾಡಲಾಗಿದೆ. ಮ್ಯಾಚ್ ಪಿಕ್ಸಿಂಗ್ ಮಾಡಲು ಅವಕಾಶಗಳು ತೀರಾ ಕಮ್ಮಿ ಎನಿಸುವಶ್ಟು ಮಾಡಿರುವುದರಿಂದ ಜೂಜಾಟ ಆಡುವವರಿಗೂ ಪುಟ್ಬಾಲ್ ಆಟದ ಮೇಲೆ ನಂಬಿಕೆ ಹೆಚ್ಚಿದೆ.

ಈ ರೀತಿಯಿಂದ ಕ್ಯಾಪಿಟಲಿಸಮ್ಮು ಕಲಿಯಬೇಕಾದುದೇನು?

ಇವತ್ತಿನ ದಿನ ಅಮೇರಿಕಾದಲ್ಲಿರುವ ಕ್ಯಾಪಿಟಲಿಸಮ್ಮಿನಲ್ಲಿ ಕಂಪನಿಗಳು ತಮ್ಮ ಶೇರನ್ನು ಮಾರುಕಟ್ಟೆಯಲ್ಲಿ ಹರಿಯಬಿಡಬಹುದು. ಕಂಪನಿಗಳ ಮುಂದಾಳುಗಳೂ ಶೇರಿನಲ್ಲಿ ಪಾಲು ಹೊಂದಬಹುದಾಗಿದ್ದು, ಶೇರು ಮಾರುಕಟ್ಟೆಯ ಆಟದಲ್ಲಿ ಇವರುಗಳೂ ಆಟಗಾರರಾಗಿಬಿಟ್ಟಿದ್ದಾರೆ. ರಾಜರ್‍ ಮಾರ್‍ಟಿನ್ ಅವರು ಹೇಳುವಂತೆ, ಈ ಏರ್‍ಪಾಡಿನಿಂದಲೇ ಹಲವಾರು ತೊಂದರೆಗಳು ಎದುರಾಗುತ್ತಿರುವುದು. ಕಂಪನಿಯ ಮುಂದಾಳುಗಳು ಶೇರು ಮಾರುಕಟ್ಟೆಯ ಆಟದಲ್ಲೂ ಅವಶ್ಯಕತೆಗಿಂತ ಹೆಚ್ಚಾಗಿ ಪಾಲ್ಗೊಳ್ಳಲು ತೊಡಗಿದಾಗ ಅಲ್ಲಿ ಆಟದಲ್ಲಿರಬೇಕಾದ ನೇರ-ನಡತೆ ಹೊರನಡೆದುಬಿಡುತ್ತದೆ ಎಂಬುದು ಮಾರ್‍ಟಿನ್ ಅವರ ಅನಿಸಿಕೆ. ಎನ್ರಾನ್ ಕಂಪನಿಯ ಉದಾಹರಣೆಯನ್ನು ಬೊಟ್ಟುಮಾಡಿ ತೋರಿಸುತ್ತಾ, ತಮ್ಮ ಅನಿಸಿಕೆಯ ಗಟ್ಟಿತನವನ್ನು ಮುಂದಿಡುತ್ತಾರೆ ಮಾರ್‍ಟಿನ್ ಅವರು.

ಹಾಗಾಗಿ, ಕಂಪನಿಯ ಉತ್ಪನ್ನಗಳನ್ನು ಕಟ್ಟುವ ಮತ್ತು ಮಾರಾಟ ಮಾಡುವ ಕೆಲಸದಲ್ಲಿ ನೇರವಾಗಿ ಪಾಲ್ಗೊಳ್ಳುವವರು, ಮಯ್ದಾನದಲ್ಲಿ ಪುಟ್ಬಾಲ್ ಆಡುವವರಂತೆಯೇ. ತಂಡದ ಸೋಲು/ಗೆಲುವು ಮಯ್ದಾನದಲ್ಲಿ ಗುದ್ದಾಡುವ ಆಟಗಾರರ ಮೇಲೆ ನಿಂತಿರುವಂತೆಯೇ, ಕಂಪನಿಯೊಂದರ ಏಳು/ಬೀಳು ಅಲ್ಲಿಯ ಕೆಲಸಗಾರರ ಮೇಲೆ ನಿಂತಿರುತ್ತದೆ. ಪುಟ್ಬಾಲಿನ ಆಟಗಾರರು ಜೂಜಾಟದಲ್ಲಿ ಪಾಲ್ಗೊಳ್ಳಬಾರದು ಎಂಬ ನಿಯಮವಿರುವಂತೆಯೇ, ಕಂಪನಿಯ ಕೆಲಸಗಾರರು (ಮುಂದಾಳುಗಳನ್ನೂ ಸೇರಿಸಿ) ಶೇರು ಮಾರುಕಟ್ಟೆಯ ಆಟದಲ್ಲಿ ಪಾಲ್ಗೊಳ್ಳಬಾರದು ಎಂಬ ನಿಯಮ ತಂದರೆ, ಇವತ್ತಿನ ದಿನ ಕ್ಯಾಪಿಟಲಿಸಮ್ಮು ತಂದಿಡುತ್ತಿರುವ ತೊಂದರೆಗಳು ಮಾಯವಾಗುತ್ತವೆ ಎಂಬುದು ಮಾರ್‍ಟಿನ್ ಅವರ ನಂಬಿಕೆ.

ಆಪಲ್ ಕಂಪನಿಯ ಮುಂದಾಳಾಗಿದ್ದ ಸ್ಟೀವ್ ಜಾಬ್ಸ್ ಅವರು ಶೇರು ಮಾರುಕಟ್ಟೆಯನ್ನು ಜಾಸ್ತಿ ನೆಚ್ಚಿಕೊಳ್ಳದೇ, ಉತ್ಪನ್ನಗಳನ್ನು ಕಟ್ಟುವ ತಮ್ಮ ಕೆಲಸದ ಮೇಲೆ ಮನಸಿಟ್ಟು ದುಡಿದುದರಿಂದಲೇ ಆಪಲ್ ಕಂಪನಿಯನ್ನು ಜಗತ್ತಿನ ಮುಂಚೂಣಿ ಕಂಪನಿಗಳಲ್ಲೊಂದಾಗಿ ಮಾಡಲು ಸಾದ್ಯವಾಯಿತು ಎಂಬುದು ಮಾರ್‍ಟಿನ್ ಅವರು ಮುಂದಿಡುವ ಇನ್ನೊಂದು ಉದಾಹರಣೆ.

ಮಾಹಿತಿ ಸೆಲೆ: ಸಿ.ಎನ್.ಎನ್.
ಚಿತ್ರಗಳು: www.howstuffworks.com, www.westhavenmanagement.com

ಪ್ರಿಯಾಂಕ್ ಕತ್ತಲಗಿರಿ

2 ಅನಿಸಿಕೆಗಳು

  1. ಶೇರು ಮಾರುಕಟ್ಟೆಯೆಂಬುದು ಕಂಪನಿಗಳನ್ನು ಮತ್ತು ಕಂಪನಿಗಳಲ್ಲಿ ತಮ್ಮ ಪಾಲುಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ವೇದಿಕೆಯಾದ್ದರಿಂದ, ಕಂಪನಿಯ ಆಸ್ತಿಯಲ್ಲಿ ಪಾಲು ಹೊಂದಿದವರು ಮಾತ್ರ ಅಲ್ಲಿ ಪಾಲ್ಗೊಳ್ಳಬಹುದು. ಮಾರ್ಟಿನ್ ಅವರ ನೀತಿ ಕಾರ್ಯಸಾಧುವಾದುದಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.