ಕಯ್ದೋಟದ ಕಿವಿಮಾತು
ಕಯ್ದೋಟವನ್ನು ಬೆಳೆಸುತ್ತಿದ್ದೀರಾ? ಬೆಳೆಸಲು ಹೊರಟಿದ್ದೀರಾ? ಈ ಅಂಶಗಳನ್ನು ಗಮನಿಸಿ:
- ಗಿಡಗಳನ್ನು ನೆಡಲು, ಅವುಗಳ ಪೋಶಣೆ ಮಾಡಲು ತುಂಬಾ ತಾಳ್ಮೆ ಬೇಕು.
- ಮೆಣಸಿನಕಾಯಿ ಗಿಡಕ್ಕೆ ಬರುವಶ್ಟು ಹುಳದ ಕಾಟ ಬೇರೆ ಯಾವ ಗಿಡಕ್ಕೂ ಬಾರದು.
- ನಂದಿಬಟ್ಟಲು ಗಿಡಕ್ಕೆ ಒಂದು ರೀತಿ ವಿಶೇಶ ಕೀಟ ಬರುತ್ತೆ. ಡ್ರಾಗನ್ ಮಾತ್ ಇರಬೇಕು. ಅದು ಬಂದರೆ, ಗಿಡದ ಎಲ್ಲ ಎಲೆಗಳೂ ಮಾಯವಾಗುತ್ತದೆ.
- ಶ್ಯಾಮಂತಿಗೆ ಗಿಡದಲ್ಲಿ ಮೊಗ್ಗುಗಳು ಬೇಗ ಬಂದುಬಿಡುತ್ತವೆ. ಆದರೆ ಅವು ಹೂವಾಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ.
- ಕರಣಕುಂಡಲ ಗಿಡ ಒಮ್ಮೆ ನೆಟ್ಟರೆ, ಅದು ಹೂವು ಬಿಟ್ಟು, ಬೀಜಗಳು ಸಿಡಿದು ತುಂಬಾ ಹರಡುತ್ತವೆ. ಸಸಿಗಳು ಎಲ್ಲೆಲ್ಲೂ ಬೆಳೆದಿರುತ್ತವೆ. ಅವುಗಳನ್ನು ಸರಿಯಾಗಿ ಕ್ರಮದಲ್ಲಿ ನೆಟ್ಟರೆ ನೋಡಲು ಅಂದವಾಗಿರುತ್ತದೆ.
- ಗಿಡಗಳನ್ನು ಕುರಿಗಳಿಂದ ಕಾಪಾಡುವುದು ತುಂಬಾನೇ ಕಶ್ಟದ ಕೆಲಸ. ಈ ಕುರಿಗಳಿಗೆ ಬೇವಿನ ಗಿಡವು ಅತ್ಯಂತ ಪ್ರಿಯ.
- ಆಡು ಮುಟ್ಟದ ಸೊಪ್ಪೆಂದರೆ, ಕಣಗಲೆ ಮತ್ತು ಹೊಂಗೆ.
- ಜಾಜಿಗಿಡ ಸ್ವಲ್ಪ ದೊಡ್ಡದಾದ ಮೇಲೆ ಮನೆಯೆಲ್ಲ ಸುವಾಸನೆ ಬೀರುತ್ತದೆ.
- ಪಾರಿಜಾತ ಹೂವುಗಳು ಬೇಕೆಂದರೆ, ಬೆಳಗ್ಗೆ ಬೇಗನೇ ಎದ್ದು ಆರಿಸಿಕೊಳ್ಳಬೇಕು. ಇಲ್ಲವಾದರೆ ಎಲ್ಲವೂ ಉದುರಿ ಹೋಗುವುದು. ಅಶ್ಟೇ ಅಲ್ಲ, ತುಂಬಾ ಬೇಗ ಒಣಗಿಹೋಗುವುದು.
- ಲೋಳೆಸರ, ವರ್‍ಶಕ್ಕೋ ಏನೋ ಒಮ್ಮೆ, ಒಂದು ರೀತಿಯ ವಿಶೇಶವಾದ ಹೂವನ್ನು ಬಿಡುತ್ತದೆ.
- ಕೆಲವು ಅಲಂಕಾರಿಕ ಗಿಡಗಳನ್ನು ಬಿಸಿಲಿನಲ್ಲಿ ಇಡಬಾರದು.
- ಸ್ಪಟಿಕ ಗಿಡವೂ ಕೂಡ ಕರಣಕುಂಡಲದಂತೆ ಸಿಕ್ಕಾಪಟ್ಟೆ ಬೀಜ ಸಿಡಿಯುವುದು.
- ತುಂಬೆ ಗಿಡ ತುಂಬಾ ಸೂಕ್ಶ್ಮ.
- ಕಯ್ದೋಟದಲ್ಲಿ ಹುಳಗಳು ಹೆಚ್ಚಾದರೆ, ಹಕ್ಕಿಗಳ ಚಿಲಿಪಿಲಿಯೂ ಹೆಚ್ಚಾಗುತ್ತದೆ.
- ಒಂದು ವೇಳೆ, ನೆಲದಲ್ಲಿ ಹಾಕಿರುವ ಗಿಡಗಳಿಗೆ ಮೂರು ದಿನ ನೀರು ಹಾಕದಿದ್ದರೂ ಪರವಾಗಿಲ್ಲ, ಆದರೆ ಪಾಟುಗಳಲ್ಲಿರುವ ಗಿಡಗಳಿಗೆ ಪ್ರತಿದಿನವೂ ನೀರು ಹಾಕಲೇಬೇಕು.
- ವೀಳ್ಯದ ಎಲೆ ಗಿಡ ಹೇಗೆ ಬೆಳೆಸಬೇಕು ಎಂಬುದು ತಿಳಿಯುತ್ತಲೇ ಇಲ್ಲ.
- ಎಕ್ಕದ ಗಿಡದಲ್ಲಿಯೂ ಕಾಯಿ ಬಿಡುತ್ತದೆ.
- ಕ್ಯಾರೆಟ್ ಬೀಜಗಳನ್ನು ಹಾಕಿದರೆ, ಅವುಗಳ ನಡುವೆ ಸರಿಯಾದ ಅಂತರವಿರಬೇಕು.
- ಯಾವುದಾದರು ಹೂವಿನ ಸಸಿಯನ್ನೋ, ಅತವಾ ಗೆಡ್ಡೆಯನ್ನೋ ನೆಟ್ಟರೆ, ಮಣ್ಣಿನಲ್ಲಿ ಸಸಿಯ ಸುತ್ತ, ಅತವಾ ಗೆಡ್ಡೆಯ ಸುತ್ತ ತೆಂಗಿನ ನಾರನ್ನು ಹಾಕಬೇಕು.
- ಕರಿಬೇವಿನ ಗಿಡಕ್ಕೆ ಬೇರುಗಳಿಗೆ ಹುಳಿ ಮೊಸರನ್ನು ಹಾಕಿದರೆ ಒಳ್ಳೆಯದಂತೆ.
ಇವೆಲ್ಲವೂ ಸುಮ್ಮನೆ ಹಾಗೆ ಅವರಿವರಿಂದ ಕೇಳಿದ್ದು ಹಾಗು ಬರಿಗಣ್ಣಿಗೆ ಕಂಡುಬಂದಿದ್ದು.
ನಿಮ್ಮ ಬರಹ ಚೆನ್ನಾಗಿ ಮೂಡಿ ಬಂದಿದೆ. ನನ್ನಿ 🙂