ಪ್ರಾದೇಶಿಕ ಪಕ್ಶಗಳ ಗಮನಾರ್‍ಹ ಸಾದನೆ

1599284

ಈಗಶ್ಟೇ ಬಂದ ಚುನಾವಣೆಯ ಪಲಿತಾಂಶ ನಾಡಿನಲ್ಲಿ ಪ್ರಾದೇಶಿಕ ಪಕ್ಶಗಳ ಬಗೆಗೆ ನಾಡಿಗರಿಗೆ ಇರುವ ಒಲವನ್ನು ತೋರುತ್ತಿದೆ. ರಾಶ್ಟ್ರೀಯ ಪಕ್ಶವೆಂದು ಕರೆದುಕೊಳ್ಳುವ ಬಿಜೆಪಿ 2008 ರಿಂದ ಇದುವರೆಗೂ ನಡೆಸಿದ ಆಡಳಿತದಲ್ಲಿ ನಾಡು-ನುಡಿ-ನಾಡಿಗರ ಹಿತಕಾಯುವಲ್ಲಿ ಪೂರ್‍ತಿಯಾಗಿ ಸೋತಿದ್ದರ ಪರಿಣಾಮವಾಗಿ 2013ರ ಆಯ್ಕೆಯಲ್ಲಿ ಕಾಂಗ್ರೆಸ್ ನಾಡಿಗರ ಮುಂದಿರುವ ಆಯ್ಕೆಯೆಂದೇ ಬಿಂಬಿಸಲಾಗುತ್ತಿದ್ದ ಹೊತ್ತಿನಲ್ಲಿ ನಾಡಿನಲ್ಲಿ ಪ್ರಾದೇಶಿಕ ಪಕ್ಶಗಳ ಹೊಸ ಅಲೆಯೊಂದು ಎದ್ದಿತು. ಯಡಿಯೂರಪ್ಪನವರ ಮುಂದಾಳ್ತನದ ಕೆಜೆಪಿ, ಕುಮಾರಸ್ವಾಮಿ ಅವರ ಮುಂದಾಳ್ತನದ ಜೆಡಿಎಸ್ ಹಾಗೂ ಶ್ರೀರಾಮುಲು ಅವರ ಬಿಎಸ್ ಆರ್‍ ಕಾಂಗ್ರೆಸ್ ಪಕ್ಶಗಳು ಪ್ರಮುಕ ಪ್ರಾದೇಶಿಕ ಪಕ್ಶಗಳಾಗಿ ಕಣಕ್ಕಿಳಿದಿದ್ದವು.

ಬರಿ 4 ತಿಂಗಳ ಹಿಂದಶ್ಟೇ ಯಡಿಯೂರಪ್ಪನವರು ಹುಟ್ಟು ಹಾಕಿದ ಪ್ರಾದೇಶಿಕ ಪಕ್ಶವಾದ ಕೆಜಿಪಿಯ ಅಬ್ಬರಕ್ಕೆ ಬಿಜೆಪಿ ಮೂಲೆಸೇರುವಂತಾಯಿತು. ತನ್ನ ಮೊದಲನೇ ಆಯ್ಕೆಯಲ್ಲಿಯೇ ದಶಕಗಳಿಂದ ಬೀಡು ಬಿಟ್ಟಿದ್ದ, ನಾಡಿಗೆ ಅನೇಕ ವಿಶಯಗಳಲ್ಲಿ ದ್ರೋಹವೆಸಗಿದ್ದ ಬಿಜೆಪಿ ಪಕ್ಶವನ್ನು ಹೀನಾಯವಾಗಿ ಸೋಲಿಸಿದ ಹೆಗ್ಗಳಿಕೆಗೆ ಕೆಜೆಪಿ ಪಾತ್ರವಾಯಿತು ಎಂದರೆ ತಪ್ಪಾಗಲಾರದು. ಮೊದಲನೇ ಪ್ರಯತ್ನದಲ್ಲಿಯೇ 6 ಸ್ತಾನಗಳನ್ನು ಗೆದ್ದುಕೊಂಡಿದ್ದಲ್ಲದೇ ಇತರೆ 35 ಕ್ಶೇತ್ರಗಳಲ್ಲಿ ಹೆಚ್ಚು ಮತ ಪಡೆದ ಎರಡನೇ ಪಕ್ಶವಾಗಿ ಹೊರಹೊಮ್ಮಿತು. ತನ್ನ ಮೊದಲನೇ ಹೆಜ್ಜೆಯಲ್ಲಿಯೇ ಕೆಜೆಪಿ ಈ ಪರಿ ಅಬ್ಬರಿಸಿದ್ದು ಪ್ರಾದೇಶಿಕ ಪಕ್ಶಗಳಿಗೆ ನಾಡಿನಲ್ಲಿ ಬವಿಶ್ಯವಿಲ್ಲವೆಂದು ಯಡಿಯೂರಪ್ಪನವರನ್ನು ಗುರಿಯಾಗಿಸಿಕೊಂಡು ಅಲ್ಲಗೆಳೆಯುತ್ತಿದ್ದವರಿಗೆ ಸರಿಯಾದ ಉತ್ತರ ಕೊಟ್ಟಿತು.

ಮತ್ತೊಂದು ಪ್ರಾದೇಶಿಕ ಪಕ್ಶವೆನಿಸಿಕೊಂಡ ಜೆಡಿಎಸ್ ಕಾವೇರಿ ವಿಶಯದಲ್ಲಿ ನಾಡಿಗಾದ ಅನ್ಯಾಯವನ್ನು ಪ್ರಶ್ನಿಸಿ ನಾಡಿನ ಜನರ ಗಮನ ಸೆಳೆಯಿತು. ಜೆಡಿಎಸ್ ಒಟ್ಟು 40 ಸ್ತಾನಗಳನ್ನು ಗೆದ್ದುಕೊಂಡು, ಬಿಜೆಪಿ ಗೆ ಸವಾಲೊಡ್ಡಿ, ಕಾಂಗ್ರೆಸ್ಸಿಗೆ ಒಳ್ಳೆಯ ಪಯ್ಪೋಟಿಯನ್ನೇ ನೀಡಿತು. ಆ ಮೂಲಕ ಅದಿಕ್ರುತ ವಿರೋದ ಪಕ್ಶದ ಸ್ತಾನ ಪಡೆಯಿತು. 40 ಸ್ತಾನಗಳ ಜಯದೊಂದಿಗೆ, 49 ಕ್ಶೇತ್ರಗಳಲ್ಲಿ ಎರಡನೆಯ ಅತಿ ಹೆಚ್ಚು ಮತ ಗಳಿಸಿದ ಪಕ್ಶವಾಗಿ ಹೊರಹೊಮ್ಮಿ ಒಳ್ಳೆಯ ಸಾದನೆಯನ್ನೇ ತೋರಿತು.

ಚೊಚ್ಚಲ ಆಯ್ಕೆ ಎದುರಿಸಿದ ಮತ್ತೊಂದು ಪ್ರಾದೇಶಿಕ ಪಕ್ಶ ಬಿ ಎಸ್ ಆರ್‍ ಕಾಂಗ್ರೆಸ್. ನಾಡು-ನುಡಿ-ನಾಡಿಗರ ಬಗ್ಗೆ ಸ್ಪಶ್ಟ ನಿಲುವನ್ನು ಹೊಂದಿರದ, ಬಹುತೇಕ ಶ್ರೀರಾಮುಲು ಒಬ್ಬರನ್ನೇ ನೆಚ್ಚಿಕೊಂಡ ಹೊರತಾಗಿಯೂ ಈ ಪಕ್ಶ 4 ಸ್ತಾನಗಳಲ್ಲಿ ಗೆದ್ದು, 3 ಕ್ಶೇತ್ರಗಳಲ್ಲಿ 2 ನೇ ಅತಿ ಹೆಚ್ಚು ಮತ ಪಡೆದ ಪಕ್ಶವೆನಿಸಿ ಗಮನ ಸೆಳೆಯಿತು.

ಒಟ್ಟಾರೆಯಾಗಿ ಪ್ರಾದೇಶಿಕ ಪಕ್ಶಗಳು 50 ಸ್ತಾನಗಳನ್ನು ಗೆದ್ದು, 87 ಕ್ಶೇತ್ರಗಳಲ್ಲಿ ಎರಡನೇ ಅತಿ ಹೆಚ್ಚು ಮತ ಪಡೆದ ಪಕ್ಶವಾಗಿ ಹೊರಹೊಮ್ಮಿದ್ದು ನಾಡಿಗರಿಗೆ ಪ್ರಾದೇಶಿಕ ಪಕ್ಶಗಳ ಬಗೆಗಿರುವ ಒಲವನ್ನು ತೋರುತ್ತಿದೆ. ಇದರ ಹೊರತಾಗಿ 8 ಕ್ಶೇತ್ರಗಳಲ್ಲಿ ಪಕ್ಶೇತರರು ಗೆದ್ದಿರುವುದು ಮತ್ತು 12 ಕ್ಶೇತ್ರಗಳಲ್ಲಿ ಪಕ್ಶೇತರರು ಎರಡನೆ ಅತಿ ಹೆಚ್ಚು ಮತ ಪಡೆದ ಹುರಿಯಾಳುಗಳಾಗಿ ಹೊರಹೊಮ್ಮಿರುವುದು ಕೂಡ ರಾಶ್ಟ್ರೀಯ ಪಕ್ಶಗಳ ಬಗೆಗೆ ಮತದಾರನ ಒಲವು ಸವೆದು ಹೋಗುತ್ತಿರುವಂತೆ ಕಾಣುತ್ತಿದೆ.

ಮುಂದಿನ ದಿನಗಳಲ್ಲಿ ಈ ಪ್ರಾದೇಶಿಕ ಪಕ್ಶಗಳು ನಾಡು-ನುಡಿ-ನಾಡಿಗರ ಹಿತಕಾಯುವ ಕೆಲಸಗಳತ್ತ ಹೆಚ್ಚು ಗಮನಹರಿಸಿ ಪಕ್ಶವನ್ನು ಕಟ್ಟುವ ಕೆಲಸದಲ್ಲಿ ತೊಡಗಿದರೆ ಮುಂದಿನ ಆಯ್ಕೆಯಲ್ಲಿ ಪ್ರಾದೇಶಿಕ ಪಕ್ಶಗಳು ಬಲಗೊಳ್ಳುವುದರಲ್ಲಿ ಆ ಮೂಲಕ ರಾಶ್ಟ್ರೀಯ ಪಕ್ಶಗಳು ಮೂಲೆಗುಂಪಾಗುವುದರಲ್ಲಿ ಅನುಮಾನವೇ ಇಲ್ಲ. ಈ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಶಗಳು ಇನ್ನಶ್ಟು ಬಲಗೊಳ್ಳಲಿ, ಹಯ್ಕಮಾಂಡ್ ಎನ್ನುವ ಗುಲಾಮಗಿರಿಯ ಪಕ್ಶಗಳಿಂದ ನಾಡಿಗರಿಗೆ ಮುಕ್ತಿ ಸಿಗಲಿ ಎಂದು ಹಾರಯ್ಸುವ.

ಮಲ್ಲೇಶ್ ಬೆಳವಾಡಿ ಗವಿಯಪ್ಪ

(ಚಿತ್ರ: www.dnaindia.com)

ನಿಮಗೆ ಹಿಡಿಸಬಹುದಾದ ಬರಹಗಳು

6 Responses

  1. ನಾಡಿನ ಒಳಿತಿಗಾಗಿ ಪ್ರಾದೇಶಿಕ ಪಕ್ಶಗಳು ಗೆಲ್ಲಬೇಕು ಎನ್ನುವುದು ಸರಿಯಾದರೂ, ರಾಶ್ಟ್ರೀಯ ಪಕ್ಶಗಳ ಹಾಗೆ ಅವು ಒಂದು ರೀತಿಯ ಶಿಸ್ತನ್ನು ಕಾಪಾಡಿಕೊಂಡು ಬಂದಿಲ್ಲ. ಅದಿಕಾರಕ್ಕಾಗಿ ಗುದ್ದಾಟ ನಡೆಸಿಕೊಂಡು, ಕೆಸರೆರಚಾಟ ನಡೆಸಿಕೊಂಡು full of sound and fury, signifying nothing ಎನ್ನುವ ಹಾಗೆ ಹಾಗಿವೆ. ಬಿಜೆಪಿಯ ಅವಾಂತರಗಳಿಗೆಲ್ಲ ನೇರವಾಗಿ ಯಡಿಯೂರಪ್ಪ (ಅಂದರೆ ಬಿಜೆಪಿ) ಕಾರಣವಾದರೂ, ಮೂಲ ಕಾರಣ ಕುಮಾರ ಸ್ವಾಮಿ(ಜೆಡಿಎಸ್)ಯವರೇ. ಎಲ್ಲರೂ “ಹೊಟ್ಟೆ ಪಕ್ಶ” ಗಳನ್ನ ಹುಟ್ಟುಹಾಕುತ್ತಾ ಹೊರಟರೆ ಕನ್ನಡಿಗರ ಹೊಟ್ಟೆ ಮೇಲೆ ಹೊಡೆದಂತೆಯೇ! ನಾಡಿನ ಒಳಿತಿಗಾಗಿ ಎರಡು ಮೂರು ಬೇರೆ ಬೇರೆ ಪ್ರಾದೇಶಿಕ ಪಕ್ಶಗಳು ಒಟ್ಟಗೂಡಿ ಒಂದು ಪ್ರಾದೇಶಿಕ ಪಕ್ಶ ಹುಟ್ಟಿಹಾಕಿ ಯಾವ ಕಾರಣಕ್ಕೂ ಅದು ಒಡೆಯದಂತೆ ನೋಡಿಕೊಳ್ಳಬೇಕು. ಆಗಶ್ಟೆ ಏನಾದರೂ ಆಗಲು ಸಾದ್ಯ. ಆದರದು ಆಗುವ ಮಾತೇ?

  2. kspriyank says:

    ಶಶಿ ಅವರೇ,
    ರಾಶ್ಟ್ರೀಯ ಪಕ್ಶಗಳು ಶಿಸ್ತು ಕಾಪಾಡಿಕೊಂಡು ಬಂದಿವೆ ಎಂಬುದು ಹುಸಿನಂಬಿಕೆ.
    ಬಿಜೆಪಿಯು ಕರ‍್ನಾಟಕದಲ್ಲಿ ಆಡಳಿತದಲ್ಲಿದ್ದಾಗ ಅಶಿಸ್ತಿನ ನಡವಳಿಕೆಗಳೇ ಕಂಡುಬರುತ್ತಿತ್ತು.
    ಕಾಂಗ್ರೆಸ್ಸಿನ ಹಲವಾರು ನಾಯಕರು ಲಂಚ ತೆಗೆದುಕೊಳ್ಳುವಾಗ ಸಿಕ್ಕಿಹಾಕಿಕೊಂಡು, ಜನರ ಮೇಲೇ ಮುಗಿಬೀಳುವುದನ್ನೂ ನೋಡಿದ್ದೇವೆ.
    ಪ್ರಾದೇಶಿಕ ಪಕ್ಶಗಳು ಮಾತ್ರಾ ಅದಿಕಾರಕ್ಕಾಗಿ ಗುದ್ದಾಟ ನಡೆಸುತ್ತವೆ ಎಂಬುದೂ ಹುಸಿನಂಬಿಕೆಯೇ. ರಾಶ್ಟ್ರೀಯ ಪಕ್ಶಗಳಲ್ಲೂ ಅದಿಕಾರಕ್ಕಾಗಿ ನಡೆದ ಗುದ್ದಾಟದ ಹಿನ್ನೆಲೆಯಿದೆ. ಬ್ರಶ್ಟಾಚಾರ, ಅಶಿಸ್ತು ಎಲ್ಲ ಪಕ್ಶಗಳಲ್ಲಿಯೂ ಕಂಡುಬರುತ್ತದೆ.
    ಇವೆಲ್ಲದರ ನಡುವೆ, ನಾಡಪರ ವಿಶಯಗಳನ್ನು ಕಯ್ಗೆತ್ತಿಕೊಳ್ಳುವ ಪಕ್ಶಗಳನ್ನು ಬೆಂಬಲಿಸಬೇಕೋ, ಇಲ್ಲಾ, ಲಂಚಗೋರತನ ಅಶಿಸ್ತು ಹೊಂದಿರುವ ಮತ್ತು ನಾಡಪರ ವಿಶಯಗಳನ್ನು ಕಯ್ಗೆತ್ತಿಕೊಳ್ಳದ ಪಕ್ಶಗಳನ್ನು ಬೆಂಬಲಿಸಬೇಕೋ ಎಂಬ ಕೇಳ್ವಿ ನಮ್ಮ ಮುಂದೆಯಿದೆ.

  3. Sandeep Kn says:

    ಇಲ್ಲಿ ನಿಜವಾಗಲೂ ಇರುವುದು ‘ಒಳ್ಳೆಯ’ ಮತ್ತು ‘ಕೆಟ್ಟದಾದ’ಗಳ ನಡುವೆಯ ಆಯ್ಕೆಯಲ್ಲ. ‘ಕೆಟ್ಟದಾದ’, ‘ತೀರಾ ಕೆಟ್ಟದಾದ’, ‘ಎಲ್ಲಕ್ಕೂ ಕೆಟ್ಟದಾದ’ ಇಂತಹವುಗಳ ನಡುವೆಯ ಆಯ್ಕೆ. ನಾವು ತೀರಾ ಕಡಿಮೆ ಕೆಟ್ಟದಾದುದನ್ನ ಆರಿಸಿಕೊಳ್ಳಬೇಕು.

    ನಾಡಿನ ವಿಶಯದ ಬಗ್ಗೆ ಮಾತಾಡುವುದಾದರೆ ಪ್ರಾದೇಶಿಕ ಪಕ್ಶಗಳಿಗೆ ನಾಡಿನ ಹೊರಗೆ ಯಾವುದೇ ಹೆಚ್ಚಿನ ಆಸಕ್ತಿಗಳಿರುವುದಿಲ್ಲ. ಹಾಗಾಗಿ ಇರುವದರಲ್ಲಿ ತೀರಾ ಕಡಿಮೆ ಕೆಡಕಿನವು ಅವೇ.

  4. ಪ್ರಿಯಾಂಕ್, “ರಾಶ್ಟ್ರೀಯ ಪಕ್ಶಗಳು ಶಿಸ್ತು ಕಾಪಾಡಿಕೊಂಡು ಬಂದಿವೆ ಎಂಬುದು ಹುಸಿನಂಬಿಕೆ” ನೀವು ಹೇಳುವುದನ್ನು ಒಪ್ಪುತ್ತೇನೆ. “ಇವೆಲ್ಲದರ ನಡುವೆ, ನಾಡಪರ ವಿಶಯಗಳನ್ನು ಕಯ್ಗೆತ್ತಿಕೊಳ್ಳುವ ಪಕ್ಶಗಳನ್ನು ಬೆಂಬಲಿಸಬೇಕೋ, ಇಲ್ಲಾ, ಲಂಚಗೋರತನ ಅಶಿಸ್ತು ಹೊಂದಿರುವ ಮತ್ತು ನಾಡಪರ ವಿಶಯಗಳನ್ನು ಕಯ್ಗೆತ್ತಿಕೊಳ್ಳದ ಪಕ್ಶಗಳನ್ನು ಬೆಂಬಲಿಸಬೇಕೋ ಎಂಬ ಕೇಳ್ವಿ ನಮ್ಮ ಮುಂದೆಯಿದೆ” ಎಂಬ ವಿಶಯ ಬಂದಾಗ, ಕೇವಲ ಪ್ರಾದೇಶಿಕ ಪಕ್ಶಗಳು ಮಾತ್ರ ನಾಡಪರ ವಿಶಯಗಳ ಬಗ್ಗೆ ಕಾಳಜಿ ವಹಿಸುತ್ತವೆ ಎಂಬುದು ಅಂತಹದೇ ಹುಸಿನಂಬಿಕೆ. ನಾವು ಈಗಾಗಲೇ ನೋಡಿದ್ದೇವೆ. ಯಾವುದೇ ಪಕ್ಶವಾಗಿರಲಿ, ತಾನಾಳುವ ನಾಡಿನ ಪರ ಕಾಳಜಿ ವಹಿಸಿದರೆ ಸಾಕು. ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆ ಎರಡೇ ಪಕ್ಶಗಳು ಬಹುಕಾಲದಿಂದಲೂ ಆಡಳಿತ ನಡೆಸಿಕೊಂಡು ಬಂದಿವೆ. ಆದರೆ, ಎಶ್ಟರ ಮಟ್ಟಿಗೆ ಪ್ರಗತಿ ಸಾದಿಸಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಶಯವೇ! ಕುಮಾರಸ್ವಾಮಿ ಆಡಳಿತದಲ್ಲಿ ಸರಕಾರ ಚೆನ್ನಾಗಿಯೇ ನಡೆಯುತ್ತಿದೆಯೆಂಬ ಬಾವನೆ ಜನರಲ್ಲಿತ್ತು. ಅವರು ಬಿಜೆಪಿ ಜೊತೆ ಸೇರಿ ಆಡಳಿತ ನಡೆಸಲು ಶುರು ಮಾಡಿದ ನಂತರ ಏನೆಲ್ಲ ನಡೆಯಿತು ನಮ್ಮ ನಾಡಿನಲ್ಲಿ. ಕುಮಾರಸ್ವಾಮಿಯವರಂತಹ ನಾಯಕರಿಗೆ ಸ್ವಲ್ಪವಾದರೂ ನಾಡಪರ ಕಾಳಜಿ ಇದ್ದಿದ್ದಲ್ಲಿ ಅವರು ಬಿಜೆಪಿಯಂತ ಕೋಮುವಾದಿ ಪಕ್ಶದೊಂದಿಗೆ ಆಡಳಿತ ನಡೆಸಲು ಹೋಗುತ್ತಿರಲಿಲ್ಲ. ಇಂತಹ ನೂರಾರು ಸಮಸ್ಯೆಗಳು ನಮ್ಮ ಮುಂದಿವೆ. ಯಾವ ಪಕ್ಶ, ಯಾವ ನಾಯಕ ಎಶ್ಟು ಸಮರ್ತವಾಗಿ ಇವನ್ನೆಲ್ಲ ಎದುರಿಸಿ ನಮಗೆ ಒಳ್ಳೆಯ ಆಡಳಿತ ನೀಡುತ್ತಾನೆ ಎಂಬುದಶ್ಟೆ ನಮಗೆ ಮುಕ್ಯವಾಗಬೇಕು. ಅದಿಕಾರವಶ್ಟೆ ಮುಕ್ಯವೆನ್ನುವ ಪಕ್ಶಗಳಿಂದ ಏನನ್ನೂ ನಿರೀಕ್ಶಿಸಲಾಗುವುದಿಲ್ಲ!

  5. kspriyank says:

    ಶಶಿಯವರೇ,
    ತಮಿಳುನಾಡನ್ನು ತಮಿಳುನಾಡಿನಷ್ಟೇ ಮಂದಿಯೆಣಿಕೆ ಹೊಂದಿರುವ ಜಗತ್ತಿನ ಮುಂದುವರೆದ ನಾಡುಗಳ ಜೊತೆ ಹೋಲಿಸಿದಾಗ, ತಮಿಳುನಾಡು ಗಳಿಸಿರುವುದು ತುಂಬಾ ಕಡಿಮೆ ಎಂಬುದು ಕಂಡುಬರುತ್ತದೆ.
    ಆದರೆ, ಕರ‍್ನಾಟಕದೊಡನೆ ಹೋಲಿಸಿದಾಗ ತಮಿಳುನಾಡು ಹಲವಾರು ಕ್ಶೇತ್ರಗಳಲ್ಲಿ ಪಡೆದುಕೊಂಡಿರುವುದು ತುಂಬಾ ಎಂಬುದೂ ಕಾಣುತ್ತದೆ. ನ್ಯಾಶನಲ್ ಹಯ್ವೇ ಆಗಿರಬಹುದು, ರಯ್ಲಾಗಿರಬಹುದು, ಇವಲ್ಲೆಲ್ಲಾ ತಮಿಳುನಾಡಿನ ಪ್ರಾದೇಶಿಕ ಪಕ್ಶಗಳು ತಮ್ಮ ನಾಡಿಗೆ ಸಾಕಶ್ಟು ಸಂಪಾದಿಸಿ ಕೊಟ್ಟಿವೆ. ಕಾವೇರಿ ವಿಶಯದಲ್ಲೂ ತಮಿಳುನಾಡಿಗೆ ದಕ್ಕಿರುವುದು ಹೆಚ್ಚು, ಕರ‍್ನಾಟಕಕ್ಕೆ ದಕ್ಕಿರುವುದು ಕಡಿಮೆ. ತಮಿಳುನಾಡಿಗೆ ಇದೆಲ್ಲಾ ಸಾದ್ಯವಾಗಿರುವುದು ಅಲ್ಲಿನ ಪ್ರಾದೇಶಿಕ ಪಕ್ಶಗಳಿಂದಲೇ.
    ಇನ್ನು ರಾಜಕೀಯದಲ್ಲಿ ಅವಕಾಶವಾದಿತನ ಒಂದು ಪಾಲಾಗಿ ಇದ್ದೇ ಇರುತ್ತದೆ. ರಾಶ್ಟ್ರೀಯ ಪಕ್ಶಗಳೇ ಕರ‍್ನಾಟಕದೆಲ್ಲೆಡೆ ತುಂಬಿಕೊಂಡರೆ, ನೀವು ಹೇಳಿದಂತಹ ಪ್ರಾದೇಶಿಕ ಪಕ್ಶಗಳು ಬೆಳೆಯಲು ಸಾದ್ಯವೇ ಇಲ್ಲದಂತಾಗುತ್ತದೆ.
    ರಾಜಕೀಯ ಮತ್ತು ವ್ಯಾಪಾರ ಇವೆರಡರಲ್ಲೂ ಅವಕಾಶವಾದಿತನ ಇದ್ದೇ ಇರುತ್ತದೆ ಎಂಬುದನ್ನು ನಾವರಿಯಬೇಕು.

  6. ಈಗಿನ ವ್ಯವಸ್ತೆಯಲ್ಲಿ ದೆಹಲಿ ಗುಲಾಮಗಿರಿಯ ಆಳ್ವಿಕೆಯಿಂದ ಹೊರಗಿರುವ ಪ್ರಾದೇಶಿಕ ಚಿಂತನೆಯುಳ್ಳ ಪಕ್ಶಗಳಿಂದ ಮಾತ್ರ ನಾಡಿನ ಹಿತ ಕಾಯಲು ಸಾದ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ನಾಡಿನ ಹಿತ ಕಾಯಲು ಕೇಂದ್ರವನ್ನು ಎದುರು ಹಾಕಿಕೊಳ್ಳುವ ಹೊತ್ತು ಬಂದಾಗ ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾಯ ದಕ್ಕಿಸಿಕೊಳ್ಳುವಂತಿರಬೇಕು. ಅದು ಪ್ರಬಲ ಪ್ರಾದೇಶಿಕ ಚಿಂತನೆಯುಳ್ಳ ಪಕ್ಶಗಳಿಂದ ಮಾತ್ರ ಸಾದ್ಯ. ಪ್ರಿಯಾಂಕ್ ಹೇಳಿದಂತೆ ರಾಜಕೀಯದಲ್ಲಿ ಅವಕಾಶವಾದಿತನ ಒಂದು ಪಾಲಾಗಿ ಇದ್ದೇ ಇರುತ್ತದೆ. ಕಾವೇರಿ ಅಂತಹ ವಿಶಯದಲ್ಲಿ ಏನೂ ಆಗಿಲ್ಲವೆಂಬಂತೆ ನಡೆದುಕೊಂಡ ರಾಶ್ಟ್ರೀಯ ಪಕ್ಶಗಳಿಗಿಂತ ಅನ್ಯಾಯವನ್ನು ಪ್ರಶ್ನಿಸಿ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವ ಬರವಸೆ ನೀಡುವ ಜೆಡಿಎಸ್, ಕೆಜಿಪಿ ತರಹದ ಪ್ರಾದೇಶಿಕ ಪಕ್ಶಗಳು ಎಂದಿಗೂ ಮೇಲು ಅಲ್ಲವೇ ?

ಅನಿಸಿಕೆ ಬರೆಯಿರಿ: