ನನ್ನವರದೊಂದೇ ತೊಂದರೆ

Ganesh (1)

ನನ್ನವರದೊಂದೇ ತೊಂದರೆ ಅದು ನಾನೆಂದಿಗು ನಗುತಿರಬೇಕೆಂದು
ಏನಾದರು ಆಗಲಿ ಏನಾದರು ಹೋಗಲಿ ಈ ಮೋರೆ ಮಾತ್ರ ನಗಬೇಕು
ಆದರದು ಅಂದೂ ನಗುತ್ತಿತ್ತು ಇಂದೂ ನಗುತಿದೆ ಆದರೆ ಕಾರಣಗಳು ಬೇರೆ|

ಅಂದು ನಕ್ಕಿತ್ತು ನಲಿವ ಮೂಟೆಗಳ ಹೊತ್ತು
ತನ್ನವರ, ತನ್ನೊಳಗಿನ ಚಿಕ್ಕ ಪುಟ್ಟ ನೆಪಗಳ ಹುಡುಕಿ,
ಕೆಲವೊಮ್ಮೆ ಕಾರಣವೇ ಬೇಡಿತ್ತು ನೆಮ್ಮದಿಯೇ ಸಾಕಿತ್ತು.
ಎದೆಯೊಳಗೆ ನಗುವಿತ್ತು, ಹೊರ ಕೆನ್ನೆ ಬಿರಿದಿತ್ತು
ಬಿಡಲಾಗದೆ ಹಿಡಿದು ಅದುಮಿಟ್ಟರು ಕೂಡ
ಕಣ್ಣರಳಿ ಚಿಮ್ಮಿತ್ತು ಆ ನಗು ಚಿಲುಮೆ ಮೋರೆಯಲಿ|

ಇಂದೂ ನಗುತಿದೆ ನೋವು ಕಾಟಗಳ ಹೊತ್ತು
ಮುಪ್ಪನಪ್ಪದೆ ಸಾವನಪ್ಪಿದ ಎದೆಯೊಳಗಿನ ಎಳೆಯೊಲವ ಕಂಡು,
ಬದುಕ ತಿರುವುಗಳ ಕಂಡು, ಮರೆತ ನಲಿವುಗಳ ಕಂಡು.
ಯಾರೋ ಎದೆಯೊಳಗೆ ನೆನಪ ಒನಕೆಯ ಹಿಡಿದು,
ಚಿಂತೆ ಬತ್ತವ ಕುಟ್ಟಿ ನೋವಿನಕ್ಕಿಯ ಚೆಲ್ಲುತಿಹರು
ಅದೋ ನೋಡು, ಈ ಮೋರೆ ನಗುತಿದೆ ನನ್ನ ಹೀಯಾಳಿಸಿ|

ಬಾಳ ಕಾಳಗವ ಸೋತಿರುವೆ ತಲೆಬಾಗಿ ಕುಳಿತಿರುವೆ
ಕಯ್ಯಲ್ಲಿನ ಕತ್ತಿಯನು ಹೊತ್ತಿಗೆ ಕೊಟ್ಟಿರುವೆ
ಹಳೆ ನೆನಪ ನೆತ್ತರನು ತೊಳೆದು ತಿರುಗಿ ಕತ್ತಿಯನು ಕೊಟ್ಟಲ್ಲಿ
ಹೊಸ ಹೆಜ್ಜೆಯನ್ನಿಕ್ಕಿ ಮಟ್ಟ ಹಾಕುವೆನು ನೋವುಗಳ
ಆದರೆ ಈ ಹೊತ್ತಿಗೆ ನನ್ನ ಕಾಲನ್ನೆ ಕಡಿಯುವ ಹುನ್ನಾರವಿದೆ!
ಮತ್ತೊಮ್ಮೆ ನೋಡು, ಈ ಮೋರೆ ನಗುತಿದೆ ಕಯ್ಲಾಗದವನೆಂದೆನಿಸಿ|

ರತೀಶ ರತ್ನಾಕರ

(ಚಿತ್ರ: nagarajsaforum.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: