ಸೀರೆ – ಸಣ್ಣ ಕತೆ
ಸುಮ್ಮನಿರದೇ ಆ ಬೆಳದಿಂಗಳ ಚಂದಿರನು ಒಂದೇ ಸಮನೆ ಓಡುತ್ತಿದ್ದ. ಯಾರೊಂದಿಗೋ ಸ್ಪರ‍್ದೆಗಿಳದವನಂತೆ ಹಟ ಮಾಡಿ, ನೆಲಕ್ಕೊಮ್ಮೆ ಹಿಂದಿರುಗಿ ನೋಡಿ ಮುಂದೋಡುತ್ತಿದ್ದಂತೆ ; ಇತ್ತ ಹಾಲು ಚೆಲ್ಲಿದ ಹಾದಿಯಲ್ಲಿ ಬೆಳದಿಂಗಳ ತುಳಿಯುತ್ತಾ ಬಲು ಬಾರದಿಂದ ಹೆಜ್ಜೆ ಹೆಜ್ಜೆಹಾಕುತ್ತಾ.,….. ತಲೆಯ ಮೇಲೆ ಬತ್ತದ ಮೂಟೆಯನ್ನಿರಿಸಿ, ಚಂದಿರನ ಓಟವನ್ನು ಮೀರಿ ತಲೆ ಎತ್ತಿ ನೋಡಲಾಗದೆ ನಾಗಿಯು ಒಂಟಿಯಾಗಿ ಹಾದಿ ಸವೆಸುತ್ತಿದ್ದಳು. ಬಯ…. ಬಾರ….. ಆತಂಕಗಳ ಮಿಶ್ರ ಬಾವದೊಂದಿಗೆ ಜೊತೆಗೆ ತಡರಾತ್ರಿ…..ಗದ್ದೆ ಬಯಲಿನಿಂದ ಮನೆಗೆ ಬಂದವಳೆ ದುಪ್…. ಎಂದು ತಲೆಯ ಮೇಲಿದ್ದ ಚೀಲ ಇಳಿಸಿ ಗೋಡೆಗೆ ಹೊರಗಿಕುಳಿತಳು.
ಬೆವತು ನೀರಾಗಿದ್ದ ಮಯ್ಯಯ್ನೊಮ್ಮೆ ಸೀರೆ ಸೆರಗಿನಿಂದ ಸವರಿಕೊಳ್ಳುತ್ತಾ ಬಾಗಿಲಲ್ಲಿ ನಿಂತಿದ್ದ ಮಗನನ್ನು ಒಮ್ಮೆ ನೋಡಿ “ಕುಡಿಯೋಕೆ ರವಶ್ಟು ನೀರುಕೊಡಪ್ಪಾ….” ಎಂದಳು. ಕೇಳಿಸಿಕೊಂಡ ನಿಂಗನು ಕಿಲುಬಿಡದ ಹಂಡೆಯಿಂದ ನೀರು ಮೊಗೆದು ಚೆಂಬನ್ನು ಮುಂದೆ ಚಾಚಿದ ತಕ್ಶಣ ಗಟಗಟನೆ ನೀರನ್ನು ಗಂಟಲಿಗಿಳಿಸಿ
” ಉಸ್ ” ಎಂದು ಉಸುರಿದಳು. ನಿಂಗನ ಮುಕ ನೋಡಿ ” ಹಸಿವಾಗ್ತಾದ್ಯಾ ತಡ್ವಾಯ್ತು ; ಬರೋಕೆ, ಗವ್ಡ್ರ ಗದ್ದೆ ತೂರೋದಿತ್ತಲ್ವಾ ? ದೊಡ್ಡರಾಶಿಬತ್ತ, ತಾಳು ಅನ್ನ ಬೇಯಸ್ತಿನಿ” ಎನ್ನುತ್ತಾ ತೊಟ್ಟಿಲಲ್ಲಿ ಮಲಗಿದ್ದ ಕಂದನ ಕಡೆಗೆ ಕಣ್ಣಾಯಿಸಿದಳು. ತುಟಿಪಿಟಿಕೆನ್ನದೆ ಮಲಗಿ ನಿದ್ರಿಸುತ್ತಿದ್ದ ಮಗವನ್ನು ನೋಡಿ ” ಮಲಗ್ತಾ ಮಗಾ ? ಏನಾರು ತಿಂತಾ ? ” ಎಂದಳು. ’ ಹೂಂ ತಂಗಳ ತಿನ್ಸಿದ್ದೆ ’ ಎಂದ ನಿಂಗ. ಒಳಗೆ ಇಣಿಕಿ ನೋಡಿದ ನಾಗಿಯು ’ ನಿಮ್ಮಪ್ಪಾ… ?’ ಎನ್ನುತ್ತಿದ್ದಂತೆ. ಕಿನ್ನನಾದ ನಿಂಗ ಬಾಗಿಲ ಹೊರಗೆ ಬಗ್ಗಿ ನೋಡಿ. ” ಕುಡಿಯೋಕೆ ಹೊಗವ್ನೆ ಇನ್ನಾ ಬಂದಿಲ್ಲ” ಎಂದನು. ’ ಕಾಸೆಲ್ಲಿತು ? ’ ಎನ್ನುತ್ತಾ ಅಡುಗೆ ಮನೆ ಕಡೆ ನಡೆದು ಡಬ್ಬದಲ್ಲಿದ್ದ ಚಿಲ್ಲರೆಯನ್ನು ಎಣಿಸಿದಳು. ಚಿಲ್ಲರೆ ಅಲ್ಲೆಯಿತ್ತು ಮನಗ ಕಡೆ ಮುಕ ನೋಡಿದಳು.
ನಿಂಗ ಮೆಲ್ದನಿಯಿಂದ ’ ನೆನ್ನೆ ನೀ ತಂದ ಬತ್ತ ಮಾರವ್ನೆ ಅಪ್ಪ ’ ಎಂದು ತಲೆ ತಗ್ಗಿಸಿದ. “ನಾ ಕೂಲಿ ನಾಲಿ ಮಾಡಿ ಹೊಟ್ಟೆಗೆ ಜೋಡ್ಸುದ್ರೆ ಇವು ಇಂಗ್ ಹಾಳ್ಮಾಡ್ತಾನಲ್ಲಾ…”ಅಂತ ಕಣ್ಣೀರು ಸುರಿಸುತ್ತಾ ಒಲೆಗೆ ಸವ್ದೆ ತುರುಕಿ ಬೆಂಕಿ ಹಚ್ಚಿದಳು. ಬೆಂಕಿ ಬುಗ್ಗನೆ ಹತ್ತಿ ಪುಳ್ಳೆ ಸವ್ದೆದೆನೆಲ್ಲ ನುಂಗಿ ನಾಗಿಯು ಸೀರ‍್ದೆನೂ ಸುಟ್ಟಿತು. ಪಟಪಟನೆ ಸೀರೆವದರಿ ನೋಡ್ತಳೆ, ಸೆರಗಿನ ಸುಟ್ಟು ರಂದ್ರ ಬಿದ್ದು ಹೋಗಿತ್ತು. ಕುಡಿಯೋ ನೀರಿಗೆ ಅಕ್ಕಿ ಸುರ‍್ದು, ಒಳೆ ಉರಿಯುತ್ತಿರುವಾಗ ಬಂದೆ ಎಂದು ಪಕ್ಕದ ಮನೆಗೆ ಸೂಜಿ ಕೇಳ್ಹೋಕೆ ಹೋದಳು.
ಸೂಜಿ ಹಿಡಿದು ಒಳಬಂದ ನಾಗಿ ಹಳೆ ಹೂವಿನ ಮಾಲೆಯಿಂದ ಒಣ ಹೂವುಗಳ ದಾರ ತೆಗೆದು ಕೊಂಡು ಸೂಜಿಕಣ್ಣಿಗೆ ಪೋಣಿಸುತ್ತಾ
“ಇದ್ದುದ್ದು ಒಂದೇ ಸೀರೆ ಹಾಳಾದ ಬೆಂಕಿ ಅದ್ಕೂ ಬೇಳ್ಬೇಕಾ…?” ಅಂತ ಗೊಣಗುತ್ತಾ ಸೀರೆ ಹೊಲಿದುಕೊಂಡಳು. ನಿಂಗಾ ” ಅವ್ವೋ….ಅವ ತಂದ್ಕೊಡದಿದ್ರೇನಾ….ನಾ ತಂದ್ಕೊಡ್ತೀನವ್ವೋ…..ಈ….. ಜಾತ್ರೆಗಾರ ನೀ ಹೊಸ ಸೀರೆ ಉಟ್ಕೋ….. ಇಲ್ನೋಡು ಕಾಸು ಕೂಡಾಕ್ಕವ್ನಿ”. ಅಂತ ಡಬ್ಬ ಅಲುಗಿಸಿ ಚಿಲ್ಲರೆ ಕುಣಿಸಿದನು. ಡಬ್ಬದಲ್ಲಿದ್ದ ಚಿಲ್ಲರೆ ಕಾಸುಗಳು ನಿಂಗನ ಆಸೆ ನೋಡಿ ನಕ್ಕು ಮಲಗಿದವು.
ನಾಗಿಯು ನಿಂಗನ ಬಿಗದಪ್ಪಿಕೊಂಡು “ನಿಂಗೋಸ್ಕರ ಕನ್ಮಗ ಜೀವ ತೇಯ್ತಿವ್ನಿ …..ಇಲ್ಲಂದ್ರೆ ಈ ಬಡತನದ ಬೆಂಕೀಲಿ ಯಾವತ್ತೊ…..! ಮಣ್ಣಾಗ್ಬಿಡ್ತಿದ್ದೆ….!”, ಎಂದು ಕಣ್ಣೀರಿಟ್ಟಳು.. ಒಲೆ ಮೇಲಿದ್ದ ಅನ್ನದ ಪಾತ್ರೆ ಕೊತ ಕೊತ ಕುದಿದು ’ಬುಸ್’ ಎಂದು ನೀರು ಕಕ್ಕಿ ಒಲೆಗೆಲ್ಲಾ ಇಳಿಯುತ್ತಿತ್ತು. ನಾಗಿ ಓಡಿ ಹೋಗಿ ಅದೇ ಸೆರಗಿನಿಂದ ಹಿಡುಪು ಮಾಡಿ ಇಳಿಸಿದಳು. ನಿಮ್ಗ ತಟ್ಟೆ ತೆಗೆದುಕೊಂಡು ಕುಳಿತ. ಮಗನಿಗಿಶ್ಟು ಬಡಿಸಿ ತಾನು ತಟ್ಟೆಗಿಶ್ಟು ಹಾಕಿಕೊಂಡು ತಿನ್ನಲು ತುತ್ತನೆತ್ತುತ್ತಿದ್ದಂತೆ. ಏನೋ ಗಲಾಟೆ, ಜನ ಜಂಗುಳಿ ಕೂಗಾಟ ಶುರುವಾಯಿತು . ತಟ್ಟೆ ಕೆಳಗಿಟ್ಟು ನಾಗಿ ಅನ್ನದ ಕಯ್ ತೊಳೆಯದೆ ಬಾಗಿಲ ಹತ್ತಿರ ಬಂದು ನೋಡುತ್ತಿದ್ದಂತೆಯೇ ನಾಲ್ಕಾರು ಜನರು ’ನಾಗವ್ವ…ನಾಗವ್ವ’ ಎಂದು ಕೂಗಿದರು. ಬೆರಗುಗಣ್ಣಿನಿಂದ ನಾಗಿಯು ಹೊರ ಬರುತ್ತಿದ್ದಂತೆ…. ’ಬಸಯ್ಯ…. ಕುಡ್ದು ಮೋರಿಯೊಳಗೆ ಬಿದ್ದಿದ್ದ ಎತ್ಗೊ ಬಂದ್ವಿ…. ಒಳಕ್ಮಲಗ್ಸು” ಎನ್ನುತ್ತಾ ಸಣಕಲ ಮಯ್ಯ ಬಸಯ್ಯನ ಜಗಲಿ ಮೇಲೆ ಮಲಗಿಸಿ ಹೋದರು.
ಬಿಂದಿಗಿ ತುಂಬ ನೀರು ತಂದು ಅವನ ಮಯ್ ಮೇಲೆ ಸುರಿದು, ಕೊಚ್ಚೆನೆಲ್ಲಾ ತೊಳೆದು, ಒಳಗೆ ಕರೆದುಕೊಂಡು ಹೋಗಿ ಬಟ್ಟೆ ಬದಲಾಯಿಸೋವರೆಗೂ ಎಚ್ಚರವಾಗದ ಬಸಯ್ಯ ಈಗ ಎಚ್ಚರಾಗಿ “ಏಯ್ ನಾಗಿ, ಮುಂಡೆ…..ಯಾಕಮ್ಮಿ ನೀರ‍್ಹಾಕ್ದೆ ? ನಶೆಯೆಲ್ಲಾ..ಇಳ್ದೋಯ್ತು ! ಓಹೋ ಎಶ್ಟೋತ್ಗೆ ಮನೆಗ್ಬರೋದು ..ಗದ್ದೆ ಬಯಲಲಿ ನಿ ಮಿಂಡ ಸಿಕ್ಕಿದ್ನಾ… ಇಶ್ಟೊಂದು ಬತ್ತ ತಂದಿದೀಯಲ್ಲ… ಅವ್ನೆ ಹೊತ್ಗಂಡ್ ಬಂದ್ ಕೊಟ್ನಾ ?….” ಎನ್ನುತ ಮುಂದಲೆ ಹಿಡಿದು ರಪರಪನೆ ಕಪಾಳಕ್ಕೆರಡು ಕೊಟ್ಟು ನಿಲ್ಲಲಾಗದೆ ಕುಸಿದು ಬಿದ್ದನು. ಅವನನ್ನು ಮಲಗಿಸಿ ನಾಗಿ ಮಗನಿಗೂ ಮಲಗಲು ಹೇಳಿ ಉಟ್ಟಿದ್ದ ಸೀರೆಯನ್ನು ಬಿಚ್ಚಿ ಮಗನಿಗೆ ಹೊದಿಸಿ, ಮೂಲೆಯಲ್ಲಿ ಕುಳಿತಳು. ಕಣ್ಣೀರ ಮಡುವಿನಲ್ಲಿ ಇಳಿಯುತ್ತಿದ್ದಂತೆ ದೀಪ ಎಣ್ಣೆ ನುಂಗಿ ಆರಿಹೋಯಿತು.
ನಾಗಿಯು ಬಡತನದ ಕುಟುಂಬದಲ್ಲಿ ಹುಟ್ಟಿದರೂ ನಾಲ್ಕಾರು ಜನರ ಕಣ್ಣು ಕುಕ್ಕುವಶ್ಟು ಚೆಲುವುಳ್ಳ ಚೆಲುವೆ. ಬಸಯ್ಯನಿಗೆ ಮದುವೆಯಾಗಿ ಬಂದ ಮೇಲೆ ಮೂರ‍್ನಾಲ್ಕು ವರ್‍ಶ ಚೆನ್ನಾಗಿಯೇ ಸಂಸಾರ ಸಾಗುತ್ತಿತ್ತು. ತನಗಾದ ಮಗ ನಿಂಗನು ಬೆಳೆ ಬೆಳೆಯುತ್ತಾ ಊರ ಗವ್ಡನ ಹೋಲುತ್ತಾನೆ ಎಂದು ಜನ ಮಾತನಾಡಿಕೊಳ್ಳಲು ಶುರು ಮಾಡಿದ ಮೇಲೆ ಅನುಮಾನಕ್ಕೆ ಗಂಟು ಬಿದ್ದ ಬಸಯ್ಯ ಅನುಮಾನದ ಹುತ್ತದೊಳಗೂ ಇನ್ನೊಂದು ಮಗು ಹಡೆದುದು ಬಸಯ್ಯನ ಕುಡಿತದ ಅಮಲನ್ನು ಮತ್ತಶ್ಟು ಏರಿಸಿತು. ಯಾವುದಕ್ಕೂ ಕಿವಿಗೊಡದ ನಾಗಿಯು ಮಕ್ಕಳಿಗಾಗಿ ಜೀವ ತೆಯ್ಯುತ್ತ ಕೂಲಿ ಮಾಡಿಕೊಂಡು ಜನ ಮೆಚ್ಚುವಂತೆ ಬಾಳುತ್ತಿದ್ದಳು.
ಎಂದೋ ತೆಗೆದುಕೊಂಡಿದ್ದ ಒಂದೇ ಒಂದು ಸೀರೆಯನ್ನೇ ತನ್ನ ಮಾನ, ದೇಹ ರಕ್ಶಣೆಗಾಗಿ ಮಕ್ಕಳ ಪೋಶಣೆಗಾಗಿ ಬಳಸುತ್ತಿದ್ದಳು. ನಾಗಿಗೆ ನೂರಾರು ತೇಪೆಯ ಆ ಸೀರೆಯೇ ಅಕ್ಶಯ ಪಾತ್ರೆಯಾಗಿತ್ತು. ಹೊಸ ಸೀರೆ ತೆಗೆದುಕೊಳ್ಳುವ ಯೋಚನೆ ಮಾಡಿ ಕಾಸು ಕೂಡಿಟ್ಟಾಗೆಲ್ಲಾ ಬಸಯ್ಯ ಕುಡಿದು ಹಾಳು ಮಾಡುತ್ತಿದ್ದ.
“ಮಾನ ಮರ‍್ಯಾದೆ ಇಲ್ಲದ ನಿಂಗೆ ಸೀರೆ ಬೇರೆ ಕೇಡು” ಎಂದು ಚುಚ್ಚುವ ಬಸಯ್ಯನ ಕೊಂಕು ಮಾತನ್ನು ಸಯ್ರಿಸಿಕೊಂಡೇ ಬದುಕುತ್ತಿದ್ದಳು. ಇದನ್ನೆಲ್ಲ ಕಂಡ ನಿಂಗ ಅವ್ವನಿಗೆ ಸೀರೆ ತಂದೇ ತೀರುತ್ತೇನೆ ಎಂಬ ಆಸೆಯಿಂದ ಚಿಲ್ಲರೆ ಕಾಸು ಕೂಡಿಟ್ಟು ಹೊಸ ಸೀರೆಯಲ್ಲಿ ಅವ್ವನು ನಲಿವಂತೆ ಕನಸು ಕಾಣುತ್ತಿದ್ದನು.
***
ಊರನ್ನೆಲ್ಲ ತಬ್ಬಿ ಕುಳಿತಿದ್ದ ಇಬ್ಬನಿ ಮುಂಜಾನೆ ನೀರಹೊಗೆಯಂತೆ ನೆಲಮುಗಿಲಿಗಂಟಿಕೊಂಡಿತ್ತು. ಗೂಡಿಂದ ಹೊರಬಂದ ಕಾಗೆಗಳೆರಡು ಕಾ…..ಕಾ…..ಕಾ……ಕಾ ಎಂದು ಒಂದೇ ಸಮನೆ ಕರ್‍ಕಸಗಯ್ಯುತ್ತಾ ಜನರನ್ನು ಎಬ್ಬಿಸಲು ಅಣಿಯಾಗುತ್ತಿತ್ತು. ಕೊಟ್ಟಿಗೆಯಲ್ಲಿ ದನ, ಕರು, ಆಡುಗಳನ್ನು ಬೆಳಗಾಯಿತೆಂದು ತಿಳಿದ ಗೋಪಾಲ ಬಿಚ್ಚಿ ಹೊರಬಿಟ್ಟು, ಒಂದೊಂದಾಗಿ ಹಿಡಿದು ಅವುಗಳ ಗೊಂತಿಗೆ ಕಟ್ಟುತ್ತಿದ್ದಾಗ ದೂರದ ಸಾಕಿ ಮನೆ ಕಡೆಯಿಂದ ಯಾರೋ ಜೋರಾಗಿ ಅಳುವ ಸದ್ದು ಕೇಳಿಸಿತು. ತವಕದಿಂದ ಗೋಪಾಲ ದನಕಟ್ಟುವುದನ್ನು ನಿಲ್ಲಿಸಿ ಆ ಕಡೆಗೆ ಹೆಜ್ಜೆ ಹಾಕಿದನು. ಹತ್ತಿರ ಹತ್ತಿರ ಹೋದಂತೆಲ್ಲಾ ಚೀರಾಟ ಮುಗಿಲು ಮುಟ್ಟುತ್ತಿತ್ತು. ಗೋಪಾಲನ ಕಿವಿಗೂ ಗರಬಡಿದಂತೆ ಅಪ್ಪಳಿಸಿತು. ಎದೆ ನಡುಗಲಾರಂಬಿಸಿತು. ಮಯ್ ಕಂಪಿಸುತ್ತಿತ್ತು. ಸಾಕಿಯ ಮನೆಯೊಳಕ್ಕೆ ಇಣುಕಿದ. ಅಶ್ಟರಲ್ಲಾಗಲೆ ಜನಜಂಗುಳ್ಲಿ ನೆರೆದಿತ್ತು. ಶೋಕದ ಮಡುವಿನಲ್ಲಿ ಸಾಕಿಯ ಸಂಸಾರ ಆಕ್ರಂದಿಸುತ್ತಿತ್ತು. ಸಾಕಿಯ ಗಂಡ ಹನುಮಯ್ಯ ರಾತ್ರಿ ಮಲಗಿದ್ದವನು ಹಾಸಿಗೆಯಲ್ಲಿ ಹೆಣವಾಗಿದ್ದನು. ಸಾಕಿಯ ಮನೆಯಿಂದ ಹೊರಬಂದ ದುಕ್ಕದ ಕಟ್ಟೆ, ಬೆಳಕು ಹರಿಯುತ್ತಿದ್ದಂತೆ ಊರಿಗೆಲ್ಲ ಆವರಿಸಿತು. ಇಬ್ಬನಿಯ ಚಳಿ ಮಂಗಮಾಯವಾಯಿತು.
ಗೋಪಾಲನ ದುಕ್ಕ ಉಮ್ಮಳಿಸಿತು. ಹೆಗಲಲ್ಲಿದ್ದ ಟವಲು ಬಿಚ್ಚಿ, ಮುಕ ಮುಚ್ಚಿಕೊಂಡು ಬಿಕ್ಕಳಿಸುತ್ತಾ ಅಳುತ್ತಾ ನಿಂತನು. ಗೋಪಾಲ ಮತ್ತು ಹನುಮಯ್ಯ ಜೀವದ ಗೆಳೆಯರು. ತಿಟ್ಟಿನಿಂದ ಕಾಡಂಚಿನವರೆಗೂ ದನ ಕುರಿ ಮೇಯಿಸಿಕೊಂಡು ಒಂದೇ ಜೀವದಂತಿದ್ದವರು. ಇಂತಹ ಮಾಯದ ಸಾವಿಗೆ ಎಲ್ಲರೂ ಮರುಗಿದರು. ಸಾವಿನ ಸುದ್ದಿ ಊರಿಂದಾಚೆಗೆ ಹಬ್ಬಿ ನೆಂಟರು, ಬಂದುಗಳ ಕಿವಿ ತಲುಪಿ ದಾರಿಯುದ್ದಕ್ಕೂ ಜನ ಬರಲಾರಂಬಿಸಿದರು. ಹೆಣ ಹಿಡಿದು ಮನೆ ಮುಂದಣ ಜಗುಲಿಯ ಮೇಲೆ ಮಲಗಿಸಿ ನೆಂಟರಿಶ್ಟರು ತಂದ ಹೂವಿನ ಹಾರಗಳನ್ನು ಹೆಣದ ಮೇಲೆ ಹಾಕಿದರು. ಗೋಪಾಲ ಅಳುತ್ತಲೇ ಸವ್ದೆ ತುಂಡುಗಳನ್ನು ತಂದು ಬೆಂಕಿ ಹಾಕಿ ಇಬ್ಬರ ರುಣ ತೀರಿತೆಂದು ಹೆಣದ ಮೇಲೆ ಬಿದ್ದು ಹೊರಳಾಡಿದನು. ಹೆಣದ ಪಕ್ಕದಲ್ಲಿಯೇ ಹನುಮಯ್ಯನ ಹೆಂಡತಿ ಸಾಕಿ ಕುಳಿತು ಅಳುತ್ತಿದ್ದಳು. ನಾಗಿಯು ಕೂಲಿಗೆ ಮುಕ ಮಾಡದೆ ನಿಂಗನನ್ನು ಕರೆದುಕೊಂಡು ಬಂದು ಹೆಣದ ಮುಂದೆ ಕೂರಿಸಿಕೊಂಡು ನೆರಮನೆಯ ದುಕ್ಕವನ್ನು ತಮ್ಮ ದುಕ್ಕದಂತೆಯೇ ಅನುಬವಿಸುತ್ತಿದ್ದರು.
ದೂರದಿಂದ ಬಂದ ನೆಂಟರು ಅಳುತ್ತಾ ಹೆಣದ ಮುಂದೆ ನಿಂತರು . ಹನುಮಯ್ಯನಿಗೂ ಅವರಿಗೂ ಇದ್ದ ಒಡನಾಟವನ್ನು ಸಾಕಿ ಅಳುತ್ತಲೇ ವಿವರಿಸುತ್ತಿದ್ದಾಗ ಸಂಬಂದಿಕರು ತಂದಿದ್ದ ಹೂವು, ಬಳ, ಕುಂಕುಮ ಜೊತೆಗೆ ಸೀರೆಯನ್ನು ಸಾಕಿಗೆ ತೊಡಿಸಿದರು. ನಿಂಗನು ಹೆಣದ ಮುಂದೆಯೇ ಮೂಕನಾಗಿ ಇದೆಲ್ಲವನ್ನು ನೋಡುತ್ತಾ ಕುಳಿತಿದ್ದನು.
ಆ ಸೀರೆಯಲ್ಲಿ ಸಾಕಿಯು ಅಳುತ್ತಿರುವ ಅಪ್ಸರೆಯಂತೆ ಕಾಣುತ್ತಿದ್ದಳು. ನಿಂಗನು ತನ್ನ ತಾಯಿಯ ಸೀರೆಯ ಕಡೆಗೆ ತಿರುಗಿ ನೋಡಿದನು. ಕಯ್ಯಲ್ಲಿ ಹಿಡಿದು ಸೆರಗನ್ನು ಮೂಸಿದನು. ತುಂಬಾ ಕೊಳಕಾಗಿ ವಾಸನೆ ಬೀರುತ್ತಿತ್ತು. ಹಾರಗಳ ರಾಶಿಯೇ ಹನುಮಯ್ಯನ ಹೆಣದ ಮೇಲೆ ಬಿದ್ದಂತಿತ್ತು. ಸಾಕಿಯ ಮುಕ ತುಂಬಿ ಹೋಗುವಶ್ಟು ಕುಂಕುಮ, ತಲೆಯಲ್ಲಿ ಹೊರಲಾರದಶ್ಟು ಹೂವಿನ ಬಾರ, ಪಕ್ಕದಲ್ಲಿ ಬಂದ ಉಡುಗೊರೆಯ ತರಾವರಿ ಬಣ್ಣಬಣ್ಣದ ಸೀರೆಗಳು ಬಿದ್ದಿದ್ದವು.
***
ನಾಗಿಯೂ ಹನುಮಯ್ಯನ ಸಾವನ್ನೇ ನೆಪ ಮಾಡಿಕೊಂಡು ಹಲದಿನದಿಂದ ತೊಳೆದು ಕೊಳ್ಳಲಾಗ್ದೆ ಕೊಳಕು ಕೊಳಕಾಗಿದ್ದ ಮಯ್ಗೆ ಸ್ನಾನ ಮಾಡಿಸುವ ಸಲುವಾಗಿ ಹಳೆ ಒಲೆಗೆ ಬೆಂಕಿ ಹಚ್ಚಿದಳು. ನಿಂಗನಿಗೆ ಹಿತ್ತಲಿಂದ ಸವ್ದೆ ಪುಳ್ಳೆ ತಂದು ಒಲೆ ಉರಿಸಲು ಹೇಳಿ ಹಂದೆಗೆ ನೀರು ಸುರಿದು, ಕಾಲಿ ಬಿಂದಿಗೆ ಹಿಡಿದು ನೀರು ತರಲು ಕೊಳಾಯಿ ಕಡೆಗೆ ನಡೆದಳು. ಇತ್ತ ನಿಂಗನು ಹಳೆ ಒಲೆಯ ಮುಂದೆ ಕುಳಿತು ಉರಿವ ಬೆಂಕಿಯನ್ನೇ ನೋಡುತ್ತಾ. ಸಾಕಿಯ ರಂಗುರಂಗಿನ ಸೀರೆಗಳನ್ನು ನೆನೆಯುತ್ತಿದ್ದನು. ಮನಸ್ಸು ಕಾವೇರುತ್ತಿತ್ತು. ಹಳೆ ಒಲೆಯ ಹಂಡೆ ಕಾಯ್ದು ನೀರಿನ ಮೇಲೆ ಹೊಗೆ ಕಾರುತ್ತಿತ್ತು. ನಿಂಗನ ಕಣ್ಣು ಒಲೆಯೊಳಗಿನ ಕೆಂಡದಂತೆ ಕೆಂಪಾಗಿದ್ದವು. ಸ್ನಾನ ಮುಗಿಸಿ ಬಂದ ನಾಗಿಯ ಮತ್ತದೇ ಕೊಳಕು ಸೀರೆಯನ್ನೇ ಉಟ್ಟಿದ್ದಳು. ಅವ್ವನ ಪಾಡನ್ನು ನೋಡಿ ನಿಂಗ ಕಣ್ಣೀರಿಟ್ಟನು.
ನಾಗಿಯೂ ” ಬಿಡು ಮಗ ನಂಗೂ ಒಳ್ಳೆ ಕಾಲ ಬರುತ್ತೆ. ಬರೋ ಜಾತ್ರೆಗೆ ನೀನೆ ಸೀರೆ ಕೊಡುಸ್ತಿ…ಅಲ್ವಾ…!!” ಎಂದು ಮಗನ ಅಂಗಿಯ ಗುಂಡಿಗಳನ್ನು ಬಿಚ್ಚುತ್ತಾ ಬಚ್ಚಲಿಗೆ ಎಳೆದು ಕೂರಿಸಿ ಮಯ್ ತೊಳೆದಳು.
ಮಡಿಯಾದ ನಿಂಗನು ಕನ್ನಡಿ ಮುಂದೆ ನಿಂತು ತಲೆ ಬಾಚುತ್ತಿರುವಾಗ ದೀಪದ ಬೆಳಕಿನ ಹಿಂದೆ ಡಬ್ಬವೊಂದು ಕಾಲಿಗೆ ತಾಗಿತು. ಕಯ್ಗೆತ್ತುಕೊಂಡು ನೋಡಿದನು. ಯಾರಿಗೂ ಕಾಣದಂತೆ ಚಿಲ್ಲರೆ ಕೂಡಿಟ್ಟಿದ್ದ ಡಬ್ಬವದು..ಕೆಳಗೇಕೆ ಬಿತ್ತು? ಅಚ್ಚರಿಯಿಂದ ನೋಡಿದನು – ಡಬ್ಬ ಕಾಲಿ – ಕಾಸು ಮಂಗ ಮಾಯವಾಗಿತ್ತು.
ಕನಸೊಡೆದು ಎದ್ದವನಂತೆ ಚೀರಿದನು. “ಅವ್ವಾ .ನನ್ಕಾಸು” ಎನ್ನು ಕೆಳಗೆ ಕುಸಿದು ವಿಲವಿಲ ಒದ್ದಾಡಿದನು. ಏನಾಯಿತೋ ಎಂದು ಓಡೋಡೀ ಬಂದ ನಾಗಿಯು ಡಬ್ಬ ನೋಡಿ ಅರ್‍ತ ಮಾಡಿಕೊಂಡು ಮಗನನ್ನು ಅಪ್ಪಿಕೊಂಡು ತಲೆ ಚಚ್ಚಿಕೊಂಡಳು. ಬಾಗಿಲ ಬಳ್ಲಿ ಬಸಯ್ಯನ ತೂರಾಟದ ಮಾತು ಕಿವಿಗೆ ಬಿತ್ತು. “ಏಯ್ ನಾಗಿ .ಏನ್ ನಿನ್ನ ಗೋಳು. ಯಾವಾಗ್ಲೂ ಅಳ್ತಿರಲ್ಲಾ ನಿಮ್ಗೆ ಯಾನ್ ದೊಡ್ರೋಗ …ಉಸ್! ” ಎನ್ನುತ್ತಾ ಬೆರಳು ತೋರಿ ಚಾಪ್ ಮೆಲೇ ತುಸುಕ್ಕನೆ ಬಿದ್ದನು. ಹರಿದ ಚಾಪೆಯಂತೆ ಇರುಳು ಸರಿದು ಹೋಯಿತು.
***
ಮಾರನೆ ದಿನ ಸಂಜೆಯವರೆಗೂ ಅಲ್ಲಲ್ಲಿ ಸುತ್ತಾಡಿದ ನಿಂಗನ ಮನಸ್ಸು ರೋಸಿ ಹೋಗಿತ್ತು. ಮನೆಗೆ ಬಂದು ತಮ್ಮನೊಡನೆ ಆಡದರೂ ಸಮಾದಾನವಾಗಲಿಲ್ಲ. ಅವ್ವ ಕೂಲಿಯಿಂದ ಮನೆಗೆ ಬಂದಿರಲಿಲ್ಲ. ಅವ್ವನಿಗೆ ಏನಾದರೂ ಮಾಡಿ ಸೀರೆ ಕೊಡಿಸಲೇ ಬೇಕು. ತರಾವರಿ ಸೀರೆಗಳು ತಲೆಯೊಳಗೆ ಸುಳಿ ಸುಳಿಯಾಗಿ ಬರುತ್ತಿದ್ದವು. ಕಾಸಿನ ಕಾಲಿ ಡಬ್ಬವು ಅಲ್ಲೆ ಬೊಳಬೊಳನೆ ಉರುಳಾಡುತ್ತಿತ್ತು. ಅಶ್ಟರಲ್ಲಿ ಸಾಕಿಯು ತಲೆಯ ಮೇಲೆ ಸೆರಗು ಹೊದ್ದುಕೊಂಡು ಮನೆ ಮುಂದ್ ಬಂದು “ನಾಗವ್ವ…ನಾಗವ್ವ..ಓ… ಇನ್ನು ಬಂದಿಲ್ವಪ್ಪಾ? ನಾಳೆ ಜಾತ್ರೆ ದಿನ ನನ್ನ ಗಂಡನಿಗೆ ಎಡೆಯಿಡ್ತಿವಿ ಎಲ್ರೂ ಬನ್ರಿ…ಕರ‍್ದೆ ಅಂತೇಳು” ಎನ್ನುತ್ತಾ ನಡೆದಳು.
ಸಾಕಿಯು ತೊಟ್ಟಿದ್ದ ರಂಗಿನ ಸೀರೆ ನಿಂಗನ ಮನಸ್ಸಿಗೆ ಚುಚ್ಚಿತು. ಅದು ಸಾವಿನಿಂದ ಬಂದ ಸೀರೆ ಎಂಬುದನ್ನು ತಿಳಿದನು. ಹನುಮಯ್ಯ ಸತ್ತ ಮೇಲೆ ಅಶ್ಟೊಂದು ಪುಕ್ಸಟ್ಟೆ ಸೀರೆಗಳು ಸಾಕಿಗೆ ನಂಟರಿಂದ ಬಂದವೆಂದು ನಿಂಗನಿಗೆ ಗೊತ್ತಿತ್ತು.
” ಲೇ …ಗವ್ಡಂಗೆ ಹುಟ್ದೋನೆ…ಎಲ್ಲಲೆ ನಿಮ್ಮವ್ವ…ಇನ್ನೂ…ಬಂದಿಲ್ವ..?” ಗವ್ಡನ ಹತ್ರ ಜಾತ್ರೆಗೆ ದುಡ್ಡೂ ಕೇಳೋಕೆ ಓಗಿರ್‍ಬೇಕು…..ಬರ‍್ಲಿ…ಇವತ್ತು …ಮಾಡ್ತಿನಿ” ಎಂದು ಅಬ್ಬರಿಸುತ್ತಾ ಬಂದವನೇ ಪಾತ್ರೆ ಪಗಡೆ ಚೆಲ್ಲಿ ಹಾಸಿಗೆ ಮೇಲೆ ಬಿದ್ದನು ಬಸಯ್ಯ.
ಅವ್ವ ಇನ್ನೂ ಬರಲಿಲ್ಲ ? ಬಂದರೆ ನಾಳೆ ಜಾತ್ರೆಗೆ ಸೀರೆ …..? ಪಕ್ಕದಲ್ಲಿ ತಿರುಗಿ ನೋಡಿದ. ಬಸಯ್ಯ ಕುಡಿದು ಪ್ರಗ್ನೆ ಇಲ್ಲದೆ ಮಲಗಿದ್ದಾನೆ. ನಿಂಗ ಮೆಲ್ಲಮೆಲ್ಲನೆ ಅಪ್ಪನ ಕಡೆಗೆ ದಾವಿಸಿದನು. ಏನೋ ಯೋಚಿಸಿದನು.
ನಾಗಿ ಬಂದ ಮೇಲೆ ಉಂಡೂ ಮಲಗುವಾಗ
” ಅವ್ವಾ….ನಾಳೆ ಜಾತ್ರೆಗೆ ಹೊಸ ಸೀರೆ ಉಟ್ಗೊಂಡು…ಹೂ ಮುಡ್ಕೋತಿ….ಅಲ್ವಾ?” ಎಂದನು ನಿಂಗ.
“ಸೀರೆ ತಂದ್ಯ ಮಗಾ? ಕಾಸೆಲ್ಲಿತ್ತು” ನಾಗಿ ಕೇಳಿದಳು
“ಒಂದೇನವ್ವಾ…. ಸಾಕವ್ವನ ತರ ನೂರು ಸೀರೆ ಬರ್‍ತವೆ ನಾಳೆ” ಎಂದನು ನಿಂಗ
“ಯಾಕ್ಮಗ ಇಂಗಂತಿಯಾ” ಎಂದಳು ನಾಗಿ
“ಅಪ್ಪನ್ನ ಸಾಯಿಸ್ಬಿಟ್ಟೆ ಕನವ್ವ”
“ಏನ್ ಹೇಳ್ತಿದಿಯಾ ಮಗನೇ”
“ಅವ್ದು. ನಂಟ್ರು ಬರ‍್ತಾರೆ….ನಾಳೆ ಸೀರೆ ತರ‍್ತಾರೆ ಅಲ್ವಾ. ದಿನಕ್ಕೊಂದು ಬಣ್ಣ ಬಣ್ಣದ ಸೀರೆ ಉಟ್ಕೋಬೋದು” ಒಂದೇ ಸಮನೆ ಬಡಬಡಿಸ್ತಾ ಇದ್ದ ನಿಂಗ.
* * * ಮುಗಿಯಿತು * * *
(ಚಿತ್ರ: http://www.arunshanbhag.com)
ಇತ್ತೀಚಿನ ಅನಿಸಿಕೆಗಳು