ಯಾರಿಗೆ ಕಾದ?

girl-looking-clouds

ಮೋಡದ ಮೇಲೆ ದೇವರ ಹೂತ,
ಮಣ್ಣಿನ ಒಳಗೆ ತನ್ನನೇ ಹೂತ,
ಎರಡರ ನಡುವೆ ಕಾಯುತ ಕೂತ.

ಬೇಸರವೆನ್ನುತ ಮಾತಿಗೆ ಇಳಿದ,
ನುಡಿಯುತ ಸುತ್ತಲ ಗೆಳೆತನ ಪಡೆದ,
ಒಳಗಿನ ಹೊರಗಿನ ಮವ್ನವ ಒಡೆದ.

ಮಳೆ-ಬಿಸಿಲೆನ್ನುತ ಕಟ್ಟಿದ ಮನೆಯ,
ನಾಲಿಗೆ ಹಸಿವಿಗೆ ಹಚ್ಚಿದ ಒಲೆಯ,
ಚಿಂತನೆ ಕಯ್ಯೊಳಗಿಟ್ಟನು ತಲೆಯ.

ಗಿರ ಗಿರ ಬೂಮಿಯು ತಿರುಗುತಲಿತ್ತು,
ಪ್ರತಿ ಸುತ್ತಲು ಹೊಸದಾಗುತಲಿತ್ತು,
ಸ್ರುಶ್ಟಿಯೇ ನಿಬ್ಬೆರಗಾಗುತಲಿತ್ತು!

ದೂರದ ದಾರಿಗೆ ಬಂಡಿಯನೇರಿ,
ಕಾಳಗವಾಡಿದ ಗುಂಪನು ಸೇರಿ,
ನಡೆದನು ಮನೆಯಾ ಹೊಸ್ತಿಲ ಮೀರಿ..

ವನಗಳ ಕಡಿಯುತ ನೇಗಿಲ ಹಿಡಿದ,
ಬಗ್ಗದ ವಯ್ರಿಯ ಬಾಗಿಲ ಒಡೆದ,
ಎಲ್ಲರ ಗೆಲ್ಲುವೆನೆನ್ನುತ ನಡೆದ..

ಹ್ರುದಯದ ಚುಂಬಿತ ಬಾಶೆಯ ಬರೆದ,
ಬಂಡೆಯ ಬಾಲೆಯನಾಗಿಸಿ ಮೆರೆದ,
ರಾಗದ ಅಚ್ಚಿಗೆ ಬಾಶೆಯ ಸುರಿದ.

ಕಾಣದ ಊರನು ಹುಡುಕುತ ನಡೆದ,
ಸುತ್ತುತ ತನ್ನದೇ ಊರಿಗೆ ನೆರೆದ,
ಬೂಮಿಯು ಗುಂಡಗೆ ಇರುವುದ ತಿಳಿದ.

ನಿದಿಗಳ ವಾಸನೆ ಹಿಡಿಯುತ ಹೊರಟ,
ಯುದ್ದದ ಬದಲಿಗೆ ಮಾಡಿದ ಕಪಟ,
ಕಾಯಿನ ಆಸೆಗೆ ಕೊಂಡನು ಕರಟ.

ಸಾಗರದಾಚೆಗೆ ಹಾರಲು ಕಲಿತ,
ನೆನ್ನೆಯ-ನಾಳೆಯ ಓದುತ ಬಲಿತ,
ನಗರಗಳೋಟಡಿ ಕಂಡನು ತುಳಿತ..

ಮೋಡದ ಮೇಲೆ ದೇವರ ಹೂತು,
ಮಣ್ಣಿನ ಒಳಗೆ ತನ್ನನೇ ಹೂತು,
ಯಾರಿಗೆ ಕಾದನು ಎಂಬುದ ಮರೆತ..

ವಲ್ಲೀಶ್ ಕುಮಾರ್

(ಚಿತ್ರ: tanzania.um.dk)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ವಲ್ಲೀಶ್, ನಿಮ್ಮ ಕವನ ಮನುಜನ ಹಿನ್ನಡವಳಿಯನ್ನು ಫಿಲಾಸಫಿಕಲ್ ದಾಟಿಯಲ್ಲಿ ಚೆನ್ನಾಗಿ ಹಿಡಿದಿಟ್ಟಿದೆ. ಹೀಗೆಯೇ ಬರೆಯುತ್ತಿರಿ. ಈ ಕವನ ಓದುವಾಗ ನನಗೆ ಶಿವರಾಜಕುಮಾರರ ಅಸುರ ಚಿತ್ರದ ಎಸ್ಪಿಬಿ ಒಂದೇ ಉಸಿರಿನಲ್ಲಿ ಹಾಡುವ ಒಂದು ಹಾಡು ನೆನಪಿಗೆ ಬಂತು. ಅದಿರಲಿ, “ಕಾಯಿನ ಆಸೆಗೆ ಕೊಂಡನು ಕರಟ” ಎನ್ನುವ ಸಾಲಿನಲ್ಲಿ ಕಾಯಿನ ಅನ್ನುವುದು ‘ಕಾಯಿಯ’ ಎಂದಾಗಬೇಕು ಎಂದೆನ್ನಿಸುತ್ತೆ. ನೋಡಿ. ಎಲ್ಲ ಒಳ್ಳೆಯದಾಗಲಿ. 🙂

  2. @shashimysooru nanni

  3. ವಲ್ಲಿಶ್, ನಿಮ್ಮ ಈ ಕಟ್ಟೊರೆಯನ್ನು ನೋಡೇ ಇರಲಿಲ್ಲ. ತುಂಬಾ ಸರಳವಾದ ಪದಗಳನ್ನು ಬಳಸಿದ್ದೀರ. ಮಕ್ಕಳಿಗೂ ಅರ್ತವಾಗುವಶ್ಟು ಸುಲಬವಾಗಿದೆ.

Shashikumar (@shashimysooru) ಗೆ ಅನಿಸಿಕೆ ನೀಡಿ Cancel reply