ಸಿದ್ದರಾಮಯ್ಯನವರ ಮುಂದಿರುವ ಸವಾಲುಗಳು
ಇತ್ತೀಚಿಗೆ ಕರ್‍ನಾಟಕದಲ್ಲಿ ನಡೆದ ವಿದಾನಸಬೆ ಚುನಾವಣೆಗಳಲ್ಲಿ ಈ ಹಿಂದೆ ಅದಿಕಾರದಲ್ಲಿದ್ದ ಬಿಜೆಪಿ ಪಕ್ಶವನ್ನ ಸೋಲಿಸಿ ಮತ್ತೊಂದು ರಾಶ್ಟ್ರೀಯ ಪಕ್ಶವಾಗಿರುವ ಕಾಂಗ್ರೆಸ್ ಪಕ್ಶವನ್ನು ಜನರು ಅದಿಕಾರಕ್ಕೆ ತಂದಿದ್ದಾರೆ. ಇದಕ್ಕೆ ಕಾರಣ ಹಲವಾರು ಇರಬಹುದು. ಪಕ್ಶ ಯಾವುದಿದ್ದರೂ ಜನರು ಬಯಸುವುದು ಆ ಪಕ್ಶದಿಂದ ತಮ್ಮ ಜೀವನ ಮಟ್ಟ ಸುದಾರಿಸಲು ಸಹಕಾರಿಯಾಗಿರಬೇಕು ಎನ್ನುವುದು. ಮತ್ತೊಂದು ವಿಶೇಶವೆಂದರೆ ಮೂಲ ಕಾಂಗ್ರೆಸ್ಸಿಗರಲ್ಲದ ಶ್ರೀ ಸಿದ್ದರಾಮಯ್ಯ ಅವರನ್ನು ರಾಜ್ಯದ ಮುಕ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಪಕ್ಶ ಆರಿಸಿದ್ದು. ತಮ್ಮ ನೇರ ನಡೆಯಿಂದ ಹೆಸರಾಗಿರುವ ಸಿದ್ದರಾಮಯ್ಯನವರ ಮೇಲೆ ರಾಜ್ಯವನ್ನು ಸಮರ್‍ತವಾಗಿ ನಡೆಸುವ ಜವಾಬ್ದಾರಿ ಬಿದ್ದಿದೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಶದ ಪ್ರಬಾವಳಿಯ ಹೊರತಾಗಿಯೂ ತಮ್ಮದೇ ಆದ ವ್ಯಕ್ತಿತ್ವವನ್ನು ಕಟ್ಟಿಕೊಂಡಿದ್ದಾರೆ ಹಾಗೂ ಅದನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ. ಹಯ್ಕಮಾಂಡ್ ಗುಲಾಮಗಿರಿಗೆ ಅವರು ಕೊನೆ ಹಾಡಲಿ ಅನ್ನೋದು ನಮ್ಮ ಆಶಯ. ಸಿದ್ದರಾಮಯ್ಯನವರು ಮುಕ್ಯಮಂತ್ರಿ ಆಗಿರುವುದು ರಾಜ್ಯದ ಬಹುತೇಕ ಜನರಿಗೆ ತಮ್ಮ ನೋವುಗಳಿಗೆ ಅವರು ಸ್ಪಂದಿಸುತ್ತಾರೆ ಅನ್ನೋ ಆಸೆ ಚಿಗುರೊಡೆದಿದೆ.
ರಾಜ್ಯದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಶದ ದೆಹಲಿ ಸರ್‍ಕಾರ ನಮ್ಮ ನಾಡಿಗೆ ಅನೇಕ ಅನ್ಯಾಯಗಳನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಅಯ್ದು ವರ್‍ಶಗಳಲ್ಲಿ ನಮ್ಮ ನಾಡಿನಲ್ಲಿ ಆಗಬೇಕಾಗಿರುವ ಕೆಲಸಗಳು ಅನೇಕ. ಹಯ್ಕಮಾಂಡ್ ಗುಲಾಮಗಿರಿಯಿಂದ ನರಳುತ್ತಿರುವ ಕಾಂಗ್ರೆಸ್ ಪಕ್ಶದಿಂದ ರಾಜ್ಯದಲ್ಲಿ ಅಬಿವ್ರುದ್ದಿ ಕಾಣೋಕೆ ಸಾದ್ಯವಾ? ಜನರಿಗೆ ನಿರೀಕ್ಶೆ ಇರೋದು ಸಿದ್ದರಾಮಯ್ಯನವರ ಮೇಲೆ ಅಂದರೆ ತಪ್ಪಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಅಗಬೇಕಾಗಿರುವ ಮುಕ್ಯ ಕೆಲಸಗಳ ಬಗ್ಗೆ ಒಮ್ಮೆ ಕಣ್ಣು ಹಾಯಿಸೋಣ.
ಉದ್ಯೋಗ: ಒಂದು ನಾಡಿನ ಬೆಳವಣಿಗೆಯಲ್ಲಿ ಪ್ರಮುಕ ಪಾತ್ರ ಆ ನಾಡಿನ ದುಡಿಮೆಯದ್ದಾಗಿರುತ್ತದೆ. ಹೆಚ್ಚು ದುಡಿಯುವ ನಾಡು ಅಬಿವ್ರುದ್ದಿಯಲ್ಲಿ ಮುಂದಿರುವ ಉದಾಹರಣೆಗಳು ನಮ್ಮ ಮುಂದೆ ಹಲವಾರಿವೆ. ಇಂತಹ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮ ನಾಡಿಗೆ ಬಂಡವಾಳ ಹರಿದು ಬರುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಆದರೆ ಈ ಬಂಡವಾಳದಿಂದ ಸ್ರುಶ್ಟಿಯಾಗುತ್ತಿರುವ ಕೆಲಸಗಳು ನಮ್ಮ ನಾಡಿಗರಿಗೆ ದೊರಕುತ್ತಿವೆಯಾ? ಅನಿಯಂತ್ರಿತ ವಲಸಿಯಿಂದಾಗಿ ಹೊರಗಿನಿಂದ ಬರುತ್ತಿರುವ ಜನರಿಂದಾಗಿ ನಮ್ಮ ನಾಡಿಗರಿಗೆ ಕೆಲಸಗಳು ಕಯ್ತಪ್ಪುತ್ತಿವೆ. ಇದಕ್ಕೆ ಪರಿಹಾರ ಸರ್‍ಕಾರ ಹುಡುಕಬೇಕಾಗಿದೆ. ಕಾಂಗ್ರೆಸ್ ಪಕ್ಶದ ಜಯ್ಪುರ ಸಮ್ಮೇಳನದ ನಿರ್‍ಣಯವೊಂದು ವಲಸಿಗರಿಗೆ ನೆಲೆ ನಿಲ್ಲಲು ಸವಲತ್ತುಗಳನ್ನು ಮಾಡಿಕೊಡಬೇಕು ಎಂದು ಇದೆ. ಇದರ ಹಿನ್ನೆಲೆಯಲ್ಲಿ ಸರೋಜಿನಿ ಮಹಿಶಿ ವರದಿ ಪ್ರಾಮುಕ್ಯತೆ ಪಡೆದುಕೊಳ್ಳುತ್ತದೆ. ಇವತ್ತಿಗೆ ಹೊಂದಿಕೆಯಾಗುವ ರೀತಿ ಆ ವರದಿಯನ್ನು ಬದಲಾಯಿಸಿ ನಮ್ಮ ರಾಜ್ಯದಲ್ಲಿ ಸ್ರುಶ್ಟಿಯಾಗುವ ಕೆಲಸಗಳಲ್ಲಿ ಮೊದಲಿಗೆ ನಮ್ಮ ಜನರಿಗೆ ಆದ್ಯತೆ ಕೊಡಬೇಕು ಎಂದು ಕಾನೂನು ಜಾರಿ ಮಾಡಬೇಕು. ಹಾಗೆಯೇ ಇನ್ನು ಮುಂದೆ ರಾಜ್ಯದಲ್ಲಿ ಜಾರಿಯಾಗುವ ಹೊಸ ಕಯ್ಗಾರಿಕೆಗಳಲ್ಲಿ ಸ್ತಳಿಯರಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ ದೊರಕುವಂತೆ ಆಯಾ ಸಂಸ್ತೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಬೇಕು. ಇದನ್ನು ಈಗಾಗಲೇ ಹಲವು ರಾಜ್ಯಗಳೂ ಮಾಡುತ್ತಿವೆ.
ಕಲಿಕೆ: ಕಲಿಕೆ ನಾಡಿನ ಬೆಳವಣೆಗೆಯಲ್ಲಿ ಮತ್ತೊಂದು ಅಡಿಗಲ್ಲು. ಕಲಿಕೆ ಮೂಲಕವೇ ಜನರ ಅರಿವಿನ ಮಟ್ಟ ಹೆಚ್ಚಿಸಲು ಸಾದ್ಯ. ಹಾಗಾಗಿ ಹೊಸ ಸರ್‍ಕಾರ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಈಗಾಗಲೇ ತಮ್ಮ ಪ್ರಣಾಳಿಕೆಯಲ್ಲಿ ಬರೆದುಕೊಂಡಿರುವಂತೆ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಲಿಕೆ ಕಡ್ಡಾಯ ಮಾಡುವುದಾಗಿ ಹೇಳಿಕೊಂಡಿರುವ ಕಾಂಗ್ರೆಸ್ ಇಶ್ಟಕ್ಕೆ ನಿಲ್ಲದೇ ಕನ್ನಡದಲ್ಲೇ ಎಲ್ಲಾ ಹಂತದ ಕಲಿಕೆ ಸಿಗುವಂತೆ ಮಾಡಲು ಬೇಕಿರುವ ವ್ಯವಸ್ತೆಯನ್ನು ಹುಟ್ಟು ಹಾಕಬೇಕಾಗಿದೆ. ನಾಯಿಕೊಡೆಯಂತೆ ತಲೆ ಎತ್ತುತ್ತಿರುವ ಕಾಸಗಿ, ಸಿ.ಬಿ.ಎಸ್.ಇ ಮತ್ತು ಅಯ್.ಸಿ.ಎಸ್.ಇ ಶಾಲೆಗಳಿಗೆ ಅನುಮತಿ ಕೊಡಬಾರದು. ಮಕ್ಕಳಿಗೆ ತಿಳಿಯದ ಕನ್ನಡ ಬಾಶೆಯನ್ನು ತಗೆದು ಹಾಕಿ ಎಲ್ಲರಿಗೂ ಅರ್‍ತ ಆಗುವ ಕನ್ನಡದ ಬಳೆಕೆಯನ್ನು ಮಕ್ಕಳ ಕಲಿಕೆಯಲ್ಲಿ ತರಬೇಕಾಗಿದೆ. ಇದರ ಮೂಲಕ ಕಲಿಕೆ ಕಬ್ಬಿಣದ ಕಡಲೆಯಲ್ಲ ಬದಲಿಗೆ ಅರಿವಿನ ಮಟ್ಟ ಹೆಚ್ಚಿಸುವ ಸಾದನ ಅನ್ನೋದನ್ನ ತೋರಿಸಬೇಕಾಗಿದೆ. ಕೆಲಿಕೆಯ ಪಟ್ಯದಲ್ಲಿ ನಾಡಿನ ಮಹನೀಯರ ಬಗ್ಗೆ ಹೆಚ್ಚಿನ ವಿಶಯಗಳನ್ನು ಸೇರಿಸಿ, ಮಕ್ಕಳಿಗೆ ನಾಡಿನ ಹಿರಿಮೆ, ಇತಿಹಾಸ ಹಾಗೂ ಇಂದಿನ ವಸ್ತವದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಸರ್‍ಕಾರಿ ಶಾಲೆಗಳ ಮೂಲಬೂತ ಸವ್ಕರ್‍ಯವನ್ನ ಸರಿಯಾಗಿ ನಿರ್‍ವಹಣೆ ಮಾಡಬೇಕಾಗಿದೆ.
ನದಿ ಹಾಗೂ ಗಡಿ: ಈಗಾಗಲೇ ನಾಡಿನ ನದಿ ಹಾಗೂ ಗಡಿ ವಿಶಯದಲ್ಲಿ ದೆಹಲಿಯ ಎಲ್ಲಾ ಸರ್‍ಕಾರಗಳು ರಾಜ್ಯದ ಪಾಲಿಗೆ ಅನ್ಯಾಯವನ್ನೇ ಮಾಡುತ್ತಾ ಬಂದಿವೆ. ಮೊನ್ನೆಯ ಕಾವೇರಿ ಅಯ್ತೀರ್‍ಪು ನಾಡಿನ ಜನರಿಗೆ ಶಾಪವಾಗಿದೆ, ಇದನ್ನು ಜಾರಿಗೆ ತಂದದ್ದು ಕಾಂಗ್ರೆಸ್ ಪಕ್ಶವೇ. ಈಗ ರಾಜ್ಯದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಶ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸಕ್ಕೆ ಕಯ್ ಹಾಕಬೇಕು. ಕ್ರುಶ್ಣಾ ನದಿ ನೀರು ಹಂಚಿಕೆಯಲ್ಲಿ 100 ಟಿ.ಎಂ.ಸಿ ನೀರು ಕಡಿಮೆ ದೊರಕಿದೆ, ಅಲ್ಲಿ ಆಗಿರುವ ಅನ್ಯಾಯವನ್ನು ಸರಿ ಪಡಿಸಬೇಕಾಗಿದೆ ಹಾಗೆಯೇ ಈ ಮೂಲಕ ನಾಡಿನಲ್ಲಿ ಆಗಬೇಕಿರುವ ನೀರಾವರಿ ಯೋಜನೆಗಳನ್ನು ಪೂರ್‍ಣಗೊಳಿಸಬೇಕು. ಅನೇಕ ವರ್‍ಶಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ-ಬಂಡೂರ ಕುಡಿಯುವ ನೀರಿನ ಯೋಜನೆಯನ್ನು ಪೂರ್‍ತಿಗೊಳಿಸಬೇಕು. ಹಾಗೂ ರಾಜ್ಯದ ಇನ್ನಿತರ ಕಡೆಯಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು. ಹಾಗೆಯೇ ಗಡಿ ಬಾಗದಲ್ಲಿ ಅಬಿವ್ರುದ್ದಿ ಆಗೋಲ್ಲ ಅನ್ನೋ ಆಪಾದನೆಯನ್ನ ಸುಳ್ಳು ಮಾಡಬೇಕು. ಗಡಿ ಬಾಗದಲ್ಲಿ ನಾಡೊಡೆಯುವ ಕೆಲಸಕ್ಕೆ ಕಯ್ ಹಾಕುವ ಶಕ್ತಿಗಳನ್ನು ಬಗ್ಗು ಬಡಿಯಬೇಕು.
ಆಡಳಿತ ಹಾಗೂ ಬಾಶೆ: ಕಾಂಗ್ರೆಸ್ ಬ್ರಶ್ಟಾಚಾರದ ಮತ್ತೊಂದು ಮುಕ ಅನ್ನೋ ಆಪಾದನೆ ಆ ಪಕ್ಶದ ಮೇಲಿದೆ. ಈ ಹಿಂದೆ ಇದ್ದ ರಾಜ್ಯ ಸರ್‍ಕಾರದ ಮೇಲೂ ಇದೇ ಆಪಾದನೆಗಳಿದ್ದವೂ ಅದೇ ಕಾರಣಕ್ಕೆ ಸೋಲಾಯಿತು ಅನ್ನೋ ವಾದವೂ ಇದೆ. ಈ ನಿಟ್ಟಿನಲ್ಲಿ ಪ್ರಸ್ತುತ ಸರ್‍ಕಾರ ಹಿಂದಿನ ಸೋಲಿನಿಂದ ಪಾಟ ಕಲಿತು ಆಡಳಿತ ಜನ ಸಾಮಾನ್ಯರಿಗೆ ಮುಟ್ಟುವಂತೆ ಮಾಡಬೇಕು. ಕಡಿಮೆ ಬ್ರಶ್ಟಾಚಾರ ಹಾಗೂ ಜನಪರ ನಿಲುವು ಆಡಳಿತ ಜನರ ಮನೆ ಮುಟ್ಟುವಂತೆ ಮಾಡಬೇಕು. ಹಾಗೂ ಆ ಆಡಳಿತ ಪರಿಣಾಮಕಾರಿಯಾಗಿ ಜಾರಿಯಾಗಲು ಕನ್ನಡದಲ್ಲಿ ಎಲ್ಲಾ ಸೇವೆಗಳು ಜನರಿಗೆ ಸಿಗುವಂತಾಗಬೇಕು.
ಇದರ ಜೊತೆಗೆ ಕರ್‍ನಾಟಕವೆಂದರೆ ಕೇವಲ ಬೆಂಗಳೂರು ಒಂದೇ ಅಲ್ಲ ಅನ್ನೋದು ಸರ್‍ಕಾರಕ್ಕೆ ಅರಿವಾಗಬೇಕು. ಅಬಿವ್ರುದ್ದಿ ಸಮಾನವಾಗಿ ಎಲ್ಲಾ ಪ್ರದೇಶದಲ್ಲೂ ಆಗಬೇಕು. ಡಾ. ಡಿ. ಎಂ. ನಂಜುಂಡಪ್ಪ ವರದಿಯನ್ನು ಹಿಂದುಳಿದ ಪ್ರದೇಶಗಳನ್ನು ಅಬಿವ್ರುದ್ದಿಯಲ್ಲಿ ಮುಂದೆ ತರಲು ಜಾರಿ ಮಾಡಬೇಕಾಗಿದೆ. ಹಾಗೆಯೇ ಇನ್ನೂ ಹಲವಾರು ಕ್ಶೇತ್ರಗಳಲ್ಲಿ ಕೆಲಸಗಳು ಆಗಬೇಕಾಗಿವೆ. ಈಗಿರುವ ಸರ್‍ಕಾರ ಈ ಕೆಲಸಗಳನ್ನು ಆದ್ಯತೆಯ ಮೇಲೆ ಮಾಡಲಿ. ಈ ಎಲ್ಲವನ್ನೂ ನಾವು ಈಗಿರುವ ಸರ್‍ಕಾರದಿಂದ ನಿರಿಕ್ಶೆ ಮಾಡಲು ಸಾದ್ಯವಾ? ಗೊತ್ತಿಲ್ಲ. ಈ ಸರ್‍ಕಾರ ಮೊದಲು ಹಯ್ಕಮಾಂಡ್ ಗುಲಾಮಗಿರಿಯಿಂದ ಹೊರಬರಲಿ. ಹಾಗೆಯೇ ಜನರು ಈ ಪಕ್ಶವನ್ನು ಆರಿಸಿರುವುದು ತಮ್ಮ ಏಳಿಗೆಗೆ ಸಹಕಾರಿ ಆಗಲೆಂದು ಅನ್ನೋದನ್ನ ಸಿದ್ದರಾಮಯ್ಯನವರು ಮರೆಯದಿದ್ದರೆ ಒಳಿತು. ಜನರು ಅವರ ಮೇಲಿಟ್ಟಿರುವ ನಂಬಿಕೆಯನ್ನು ಅವರು ಉಳಿಸಿಕೊಳ್ಳಲಿ ಎಂದು ಹಾರಯ್ಸೋಣ. ಹೊಸ ಮುಕ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಮ್ಮ ಸವಿ ಹಾರಯ್ಕೆಗಳು
(ಚಿತ್ರ: http://hindi.oneindia.in)
ಇತ್ತೀಚಿನ ಅನಿಸಿಕೆಗಳು