ನೆನಪುಳ್ಳ ಕಸಿಪೊನ್ನುಗಳು

rolled%20foil

ಶಕುಂತಲೆಯು ಕಣ್ವ ಕುಟೀರದಿಂದ ಹೊರುಡುವಾಗ ಅವಳು ನಿತ್ಯ ನೀರೆರೆಯುತ್ತಿದ್ದ ಮಲ್ಲಿಗೆಬಳ್ಳಿಯು ಅವಳನ್ನು ಅಗಲಲಾರದೆ ಸೆರಗನ್ನು ಹಿಡಿಯಿತೆಂದು ಕಾಳಿದಾಸ ಬಣ್ಣಿಸಿದ್ದಾನೆ. ಅದು ಕಬ್ಬಿಗನ ಕಸರತ್ತೆಂದು ಅನ್ನಿಸಿದರೂ ಅರಿಮೆಯ ಕಾಣ್ಕೆಯಲ್ಲಿ ಕಂಡಾಗ ಉಸಿರಾಡುವ ಎಲ್ಲವುಗಳಲ್ಲೂ ನೆನಪೆನ್ನುವುದು ಇದೆ ಎಂಬುದು ಅರಿವಾಗುತ್ತದೆ. ಯಾವುದೇ ಪೊನ್ನು (metal) ಗಳ ಮೇಲೆ ಹೊರಗಿನ ಬಲ ಬಿದ್ದಾಗ ಅವುಗಳ ಆಕಾರ ಬದಲಾವಣೆಯಾಗುವುದು ದಿಟವೇ ಸರಿ. ಚಿನ್ನವನ್ನು ಕಬ್ಬಿಣವನ್ನು ಕಾಯಿಸಿ ಬೇಕಾದ ರೂಪಕ್ಕೆ ತಟ್ಟಿಕೊಳ್ಳುವುದು ಗೊತ್ತಿರುವುದೇ. ಆದರೆ ಕೆಲವು ಪೊನ್ನುಗಳು ಬಿಸಿ ಮತ್ತು ತಣಿವಿಗೆ ರೂಹು ಬದಲಾಯಿಸಿಕೊಂಡರೂ ತಿರುಗಿ ತಂತಮ್ಮ ರೂಹುಗಳನ್ನು ಮರಳಿ ಪಡೆದುಕೊಳ್ಳವುದನ್ನು ಗಮನಿಸಿದ ಚಾಂಗ್ ಮತ್ತು ರೀಡ್ ಎಂಬ ಅರಿಮೆಗಾರರು ಎಲ್ಲ ರೀತಿಯಲ್ಲೂ ಒರೆಗೆ ಹಚ್ಚಿ ಚಿನ್ನ ಮತ್ತು ಕ್ಯಾಡ್ಮಿಯಂಗಳನ್ನು ಬೆರೆಸಿ ಮಾಡಿದ ಬೇರೆಯೇ ಪೊನ್ನನ್ನು 1932ರಲ್ಲಿ ಬೆಳಕಿಗೆ ತಂದರು. ಅಂದರೆ ಹೊರಗಿನ ಬಲ ಕಡಿಮೆಯಾದಾಗ ಆ ಕಸಿಪೊನ್ನು ತನ್ನ ನಿಜ ಆಕಾರ ತಳೆಯುವುದನ್ನು ಚಿನ್ನಕ್ಯಾಡ್ಮಿಯಂ ಬೆರಕೆಯಲ್ಲಿ ಕಾಣಲಾಯಿತು.  1961 ರಲ್ಲಿ ವಿಲಿಯಂ ಜಿ ಬಹ್ಲರ್ ಅವರು ನಿಕ್ಕಲ್ ಮತ್ತು ಸತುವಿನ ಕಸಿಯಲ್ಲೂ ಇದೇ ಗುಣ ಇರುವುದನ್ನು ಕಂಡರು.

ಮೊದಲಿಗೆ ಅಮೆರಿಕದ ನಾಸಾ(NASA) ತಂಡದ ಅರಿಮೆಗಾರರು ಆಗಸಯಾತ್ರೆಯ ಚಿಮ್ಮುಬಂಡಿಗಳಲ್ಲಿ ಈ ಪದಾರ್‍ತಗಳನ್ನು ಬಳಕೆ ಮಾಡಿಕೊಂಡರು. ಆಮೇಲೆ ಲೋಹವಕ್ಕಿಯ ರೆಕ್ಕೆಗಳಲ್ಲೂ ಇದು ಬಳಕೆಯಾಯಿತು. ವಿಶಗಾಳಿ ಮತ್ತು ಉರಿಗಾಳಿ (combustible gas) ಗಳನ್ನು ಸಾಗಿಸುವ ಕೊಳಾಯಿಗಳು, ಉಬ್ಬೆ (boiler) ಗಳು, ಒತ್ತುಕ (compressor) ಗಳು, ಕುಲುಮೆಗಳು, ಮದ್ದಿನಗುಡಾಣಗಳು ಬಿರಿಯುವುದನ್ನು ಮೊದಲೇ ಅರಿತುಕೊಂಡು ತಕ್ಕ ಉಪಾಯ ಕಯ್ಗೊಳ್ಳಲೂ ಈ ಕಸಿಪೊನ್ನುಗಳು ನೆರವಾಗುತ್ತವೆ. ನೀರು ಕಾಯಿಸುವ ಗೀಸರುಗಳು ಹೆಚ್ಚು ಕಾಯದಂತೆ ತಡೆಯುವ thermostat ಗಳ ಮೇಲೆ ಕಿಟ್ಟ ಕಟ್ಟಿ ಅವು ಸರಿಯಾಗಿ ಕೆಲಸ ಮಾಡದೇ ಹೋಗುತ್ತವೆ. ಆ ತಾಣಗಳಲ್ಲಿ ಈ ಕಸಿಪೊನ್ನುಗಳು ನೆರವಿಗೆ ಬರುತ್ತವೆ. ಇವೊತ್ತು ಈ ಕಸಿಪೊನ್ನುಗಳು ನಮ್ಮ ಒಡಲಿನ ಮೂಳೆಯಾಗಿಯೂ ಬಳಕೆಯಾಗುತ್ತಿದೆ, ಮುರಿದ ಎಲುಬಿಗೆ ಆಸರೆಯಾಗಿಯೂ, ಹಲ್ಲುಗಳನ್ನು ನೇರ್‍ಪುಗೊಳಿಸುವ ಪೊನ್ ದಾರವಾಗಿಯೂ, ಕಟ್ಟಿಕೊಂಡ ನೆತ್ತರ ಕೊಳವೆಗಳನ್ನು ಅಗಲಿಸಲೂ ಇವು ಬಳಕೆಯಾಗುತ್ತಿವೆ. ಒಡಲಿನ ಬಿಸಿಗೆ ಬಾಗಿ ಬಳುಕಿ ಮತ್ತೆ ಮುನ್ನಿನ ರೂಹು ತಳೆಯುವ ಈ ಕಸಿಪೊನ್ನುಗಳು ನಮಗೆ ದಿಟವಾಗಿಯೂ ಒಳ್ಳೆಯದು ಮಾಡುತ್ತಿವೆ.

ಸಿ. ಮರಿಜೋಸೆಪ್

(ಚಿತ್ರ: http://jmmedical.com/images/)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: