ಶಬ್ದಮಣಿದರ್ಪಣದಲ್ಲಿ ತಳಮಟ್ಟದ ತಪ್ಪುಗಳು – 2
{ಇಲ್ಲಿಯವರೆಗೆ: ಶಬ್ದಮಣಿದರ್ಪಣದಲ್ಲಿ ತಳಮಟ್ಟದ ತಪ್ಪುಗಳು – 1: …ಹಳೆಗನ್ನಡ ವ್ಯಾಕರಣಕ್ಕೂ ಸಂಸ್ಕ್ರುತ ವ್ಯಾಕರಣಕ್ಕೂ ನಡುವೆ ಇರುವ ಇಂತಹ ತಳಮಟ್ಟದ ವ್ಯತ್ಯಾಸಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಪರಿಶೀಲಿಸಲಾಗಿದೆ, ಮತ್ತು ಇವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ್ಪಣ ಹೇಗೆ ಸೋತುಹೋಗಿದೆ, ಮತ್ತು ಆ ರೀತಿ ಸೋತುಹೋದುದರಿಂದಾಗಿ ಅದು ಹೇಗೆ ಒಂದು ಒಳ್ಳೆಯ ಹಳೆಗನ್ನಡ ವ್ಯಾಕರಣವಾಗಲಾರದು ಎಂಬುದನ್ನು ಕೆಳಗೆ ವಿವರಿಸಲಾಗಿದೆ…(1) ಪದಗಳ ಬಗೆಗಳು…}
(2) ಎರಡು ಪದಗಳನ್ನು ಒಟ್ಟು ಸೇರಿಸಿ ಒಂದು ಹೊಸ ಪದವನ್ನು ಉಂಟುಮಾಡುವ ಬಗೆ:
ಹಳೆಗನ್ನಡದಲ್ಲಿ ಮೂರು ಬಗೆಯ ಪದಗಳನ್ನು ಹೆಸರು(ನಾಮ)ಪದಗಳೊಂದಿಗೆ ಸೇರಿಸಿ ಜೋಡುಪದ (ಸಮಾಸ) ಎಂಬ ಹೆಸರಿನ ಹೊಸ ಪದಗಳನ್ನು ಉಂಟುಮಾಡಲು ಬರುತ್ತದೆ:
(ಕ) ಹೆಸರುಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಬಹುದು (ಕಣ್+ನೀರ್ – ಕಣ್ಣೀರ್, ನಾಡು+ನುಡಿ – ನಾಣ್ಣುಡಿ, ಬಿಸಿಲ್+ಕುದುರೆ – ಬಿಸಿಲ್ಗುದುರೆ),
(ಚ) ಎಸಕಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಬಹುದು (ಸುಡು+ಕಾಡು – ಸುಡುಗಾಡು, ಬಿಡು+ಮುಡಿ – ಬಿಡುಮುಡಿ, ಅಡು+ಕಬ್ಬು – ಅಡುಗಬ್ಬು), ಮತ್ತು
(ಟ) ಪರಿಚೆಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಬಹುದು (ಬೆಳ್+ಉಳ್ಳಿ – ಬೆಳ್ಳುಳ್ಳಿ, ಕರ್+ಪೊನ್ – ಕರ್ಬೊನ್, ಕಿರು+ಕುಣಿಕೆ – ಕಿರುಕುಣಿಕೆ).
ಈ ಮೂರು ಬಗೆಯ ಜೋಡುಪದಗಳಲ್ಲೂ ಎರಡನೆಯ ಹೆಸರುಪದವೇ ಮುಕ್ಯ ಪದವಾಗಿರುತ್ತದೆ. ಹಾಗಾಗಿ, ಹಳೆಗನ್ನಡದ ಜೋಡುಪದಗಳನ್ನು ಅವುಗಳ ಮೊದಲನೆಯ ಪದ ಹೆಸರುಪದವಾಗಿದೆಯೇ, ಎಸಕಪದವಾಗಿದೆಯೇ, ಇಲ್ಲವೇ ಪರಿಚೆಪದವಾಗಿದೆಯೇ ಎಂಬ ವಿಶಯದ ಮೇಲೆ ಗುಂಪಿಸುವುದೇ ಸರಿಯಾದ ದಾರಿ.
ಮೊದಲನೆಯ ಪದ ಪರಿಚೆಪದವಾಗಿರುವ ಕೆಲವು ಜೋಡುಪದಗಳಲ್ಲಿ ಎರಡನೆಯ ಹೆಸರುಪದ ಮುಕ್ಯ ಪದವಾಗಿರುವ ಬದಲು, ಅದರಲ್ಲಿ ಬಂದಿರುವ ಎರಡು ಪದಗಳಿಗಿಂತಲೂ ಬೇರಾಗಿರುವ ಪದವೊಂದು ಮುಕ್ಯ ಪದವಾಗಿರಬಲ್ಲುದು; ಎತ್ತುಗೆಗಾಗಿ, ಕಿೞ್ಪೊಡೆ ಎಂಬ ಜೋಡುಪದದಲ್ಲಿ ಪೊಡೆ ಎಂಬುದು ಮುಕ್ಯ ಪದವಲ್ಲ; ಯಾಕೆಂದರೆ, ಅದು ಕೆಳಗಿನ ಪೊಡೆಯನ್ನು ತಿಳಿಸುವುದಿಲ್ಲ; ಇದಕ್ಕೆ ಬದಲು, ಅದು ಪೊಡೆಯ ಕೆಳಬಾಗವನ್ನು ತಿಳಿಸುತ್ತದೆ; ಹಾಗಾಗಿ, ಇಲ್ಲಿ ಜೋಡುಪದಗಳ ಎರಡು ಅಂಗಗಳಿಂದ ಬೇರಾಗಿರುವ ಬಾಗ ಎಂಬ ಪದವೇ ಮುಕ್ಯ ಪದ ಎನ್ನಲು ಬರುತ್ತದೆ. ಅಂಗಯ್, ಅಂಗಾಲ್, ಮುಂಗಯ್ ಮೊದಲಾದ ಬೇರೆ ಕೆಲವು ಜೋಡುಪದಗಳಿಗೂ ಇಂತಹದೇ ಹುರುಳು ಇರುವ ಹಾಗೆ ಕಾಣಿಸುತ್ತದೆ. ಆದರೆ, ಬೇರೆಲ್ಲಾ ಪರಿಚೆ+ಹೆಸರು ಪದಗಳಿರುವ ಜೋಡುಪದಗಳಲ್ಲಿ ಎರಡನೆಯ ಪದವೇ ಮುಕ್ಯ ಪದವಾಗಿರುತ್ತದೆ.
ಮೊದಲನೆಯ ಪದ ಹೆಸರುಪದವಾಗಿರುವ ಕಲ್ಲೆರ್ದೆ, ಕಿತ್ತಡಿ ಎಂಬಂತಹ ಬೇರೆ ಕೆಲವು ಜೋಡುಪದಗಳಲ್ಲೂ ಮುಕ್ಯಪದ ಅವುಗಳ ಎರಡು ಅಂಗಗಳಿಂತ ಬೇರಾದುದಾಗಿರುತ್ತದೆ. ಇಂತಹ ಕೆಲವು ಹೊರಪಡಿಕೆಗಳನ್ನು ಬದಿಗಿರಿಸಿದಲ್ಲಿ, ಹಳೆಗನ್ನಡದ ಎಲ್ಲಾ ಜೋಡುಪದಗಳನ್ನೂ ಮೇಲಿನ ಮೂರು ಮುಕ್ಯ ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ.
ಸಂಸ್ಕ್ರುತದಲ್ಲಿ ಜೋಡುಪದಗಳನ್ನು ಸಮಸ್ತಪದ ಇಲ್ಲವೇ ಸಮಾಸ ಎಂಬುದಾಗಿ ಕರೆಯಲಾಗುತ್ತದೆ, ಮತ್ತು ಇವೆಲ್ಲವನ್ನೂ ಒಂದು ಹೆಸರುಪದದೊಂದಿಗೆ ಇನ್ನೊಂದು ಹೆಸರುಪದವನ್ನು ಜೋಡಿಸುವ ಮೂಲಕ ಉಂಟುಮಾಡಲಾಗುತ್ತದೆ; ಹಳೆಗನ್ನಡದ ಹಾಗೆ ಎಸಕಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಿ ಜೋಡುಪದಗಳನ್ನು ಉಂಟುಮಾಡಲು ಬರುವುದಿಲ್ಲ, ಮತ್ತು ಪರಿಚೆಪದಗಳೆಂಬ ಹೆಸರುಪದಗಳಿಗಿಂತ ಬೇರಾಗಿರುವ ಪದಗಳು ಸಂಸ್ಕ್ರುತದಲ್ಲಿಲ್ಲ. ಹಾಗಾಗಿ, ಸಂಸ್ಕ್ರುತದ ಸಮಾಸಗಳನ್ನು ಗುಂಪಿಸಲು ಹಳೆಗನ್ನಡಕ್ಕಿಂತ ತೀರ ಬೇರಾಗಿರುವ ಹೊಲಬನ್ನು ಬಳಸಬೇಕಾಗುತ್ತದೆ. ಎರಡು ಹೆಸರುಪದಗಳನ್ನು ಜೋಡಿಸಿರುವಲ್ಲಿ
(ಕ) ಮೊದಲನೆಯ ಪದ ಮುಕ್ಯ ಪದವಾಗಿರಬಲ್ಲುದು (ಯಥಾಶಕ್ತಿ, ಪ್ರತಿದಿನ, ಉಪರಾಜ),
(ಚ) ಎರಡನೆಯ ಪದ ಮುಕ್ಯವಾಗಿರಬಲ್ಲುದು (ಕೃಷ್ಣಸರ್ಪ, ರಾಜರ್ಷಿ, ರಾಜೇಂದ್ರ),
(ಟ) ಎರಡು ಪದಗಳೂ ಮುಕ್ಯವಾಗಿರಬಲ್ಲುವು (ರಾಮಲಕ್ಷ್ಮಣೌ, ಮಾತಾಪಿತರೌ), ಮತ್ತು
(ತ) ಎರಡೂ ಮುಕ್ಯವಾಗಿಲ್ಲದೆ ಹೊರಗಿನದೊಂದು ಪದ ಮುಕ್ಯವಾಗಿರಬಲ್ಲುದು (ಚಕ್ರಪಾಣಿ, ದತ್ತಧನ, ಪೀತಾಂಬರ).
ಈ ವ್ಯತ್ಯಾಸದ ಮೇಲೆ, ಅದರಲ್ಲಿ ಬಳಕೆಯಾಗುವ ಜೋಡುಪದಗಳನ್ನು ಅವ್ಯಯೀಬಾವ, ತತ್ಪುರುಶ, ದ್ವಂದ್ವ, ಮತ್ತು ಬಹುವ್ರೀಹಿಗಳೆಂಬ ನಾಲ್ಕು ಗುಂಪುಗಳಲ್ಲಿ ಗುಂಪಿಸಲಾಗುತ್ತದೆ. (ಅವ್ಯಯೀಬಾವ ಸಮಾಸದಲ್ಲಿ ಮೊದಲಿಗೆ ಬರುವ ಯಥಾ, ಪ್ರತಿ, ಉಪ ಮೊದಲಾದವುಗಳನ್ನು ಅವ್ಯಯಗಳೆಂದು ಕರೆಯಲಾಗುವುದಾದರೂ, ಅವನ್ನು ಹೆಸರುಪದಗಳ ಒಂದು ಬಗೆಯೆಂದು ತಿಳಿಯಲಾಗುತ್ತದೆ).
ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವೆ ಜೋಡುಪದಗಳನ್ನು ಉಂಟುಮಾಡುವಲ್ಲಿ ಈ ರೀತಿ ತಳಮಟ್ಟದ ವ್ಯತ್ಯಾಸವಿದೆ; ಇದನ್ನು ಗಮನಿಸಲಾಗದ ಶಬ್ದಮಣಿದರ್ಪಣ ಸಂಸ್ಕ್ರುತದಲ್ಲಿರುವಂತಹ ಸಮಾಸಗಳನ್ನೇ ಹಳೆಗನ್ನಡದಲ್ಲೂ ಕಾಣಲು ಪ್ರಯತ್ನಿಸಿ, ತುಂಬಾ ಗೊಂದಲಗಳಿಗೊಳಗಾಗಿದೆ:
(ಕ) ಹಳೆಗನ್ನಡದ ಹೆಚ್ಚಿನ ಜೋಡುಪದಗಳಲ್ಲೂ ಎರಡನೆಯ ಪದ ಮುಕ್ಯವಾಗಿರುವುದರಿಂದ, ಅವೆಲ್ಲವನ್ನೂ ತತ್ಪುರುಶ ಎಂಬುದಾಗಿ ಕರೆಯಬೇಕಾದೀತು; ಆದರೆ, ಅಂತಹ ಹಲವು ಜೋಡುಪದಗಳಲ್ಲಿ ಮೊದಲನೆಯ ಪದ ಹೆಸರುಪದವಾಗಿರದೆ ಎಸಕಪದ ಇಲ್ಲವೇ ಪರಿಚೆಪದವಾದುದರಿಂದ, ಅವನ್ನು ತತ್ಪುರುಶ ಎನ್ನುವುದು ಹೇಗೆ? (ತತ್ಪುರುಶದಲ್ಲಿ ಎರಡು ಪದಗಳೂ ಹೆಸರುಪದಗಳಾಗಿರಬೇಕು).
(ಚ) ಎಣಿಕೆಪದಗಳೊಂದಿಗೆ ಹೆಸರುಪದಗಳನ್ನು ಬಳಸಿರುವ ಜೋಡುಪದಗಳು ಸಂಸ್ಕ್ರುತದಲ್ಲಿ ತತ್ಪುರುಶದ ಒಂದು ಅಂಗವಾಗಿದ್ದು ಅದನ್ನು ದ್ವಿಗು ಎಂದು ಕರೆಯಲಾಗಿದೆ; ಹಳೆಗನ್ನಡದಲ್ಲೂ ಇಂತಹದೇ ಜೋಡುಪದ ಬರುವುದೆಂದು ಶಬ್ದಮಣಿದರ್ಪಣ ಹೇಳುತ್ತದೆ; ಆದರೆ, ಹಳೆಗನ್ನಡದ ಎಣಿಕೆಪದಗಳು ಪರಿಚೆಪದಗಳ ಹಾಗೆ ಬಳಕೆಯಾಗುತ್ತವಲ್ಲದೆ ಹೆಸರುಪದಗಳ ಹಾಗೆ ಬಳಕೆಯಾಗುವುದಿಲ್ಲ.
(ಟ) ಕಿೞ್ಕೆರೆ ಎಂಬಂತಹ ಪದಗಳನ್ನು ಅವ್ಯಯೀಬಾವಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ; ಆದರೆ, ಹಳೆಗನ್ನಡದಲ್ಲಿ ಕಿೞ್ ಎಂಬುದು ಅವ್ಯಯವಲ್ಲ, ಪರಿಚೆಪದ; ಈ ಕಾರಣಕ್ಕಾಗಿ, ಬಟ್ಟಾಕಳಂಕನು ಇದನ್ನು ಅಂಶ-ಅಂಶಿ ಸಂಬಂದವಿರುವ ಅಂಶಿ ಸಮಾಸ ಎಂದು ಕರೆದಿದ್ದಾನೆ; ಕಿೞ್ಕೆರೆ ಎಂಬುದಕ್ಕೆ ‘ಕೆರೆಯ ಕೆಳ ಬಾಗ’ ಎಂಬ ಹುರುಳಿದೆಯಾದರೆ ಇದು ಸರಿ; ಆದರೆ, ಇಲ್ಲಿ ಕಿೞ್ ಮತ್ತು ಕೆರೆ ಎಂಬವೆರಡೂ ಮುಕ್ಯವಾಗಿಲ್ಲ, ಬಾಗ ಎಂಬ ಬೇರೊಂದು ಪದ ಮುಕ್ಯವಾಗಿದೆ, ಮತ್ತು ಈ ಕಾರಣಕ್ಕಾಗಿ, ಅದು ಅವ್ಯಯೀಬಾವವಾಗಲಾರದು, ಬಹುವ್ರೀಹಿಯಾಗಬೇಕು. ಇದಲ್ಲದೆ, ಕಿೞ್ಕೆರೆ ಎಂಬುದಕ್ಕೆ ‘ಕೆಳಗಿನ ಕೆರೆ’ ಎಂಬ ಹುರುಳೂ ಇದೆ, ಮತ್ತು ಈ ಹುರುಳಿನಲ್ಲಿ ಅದು ಅಂಶಿಯೂ ಆಗಲಾರದು.
(ತ) ಹಳೆಗನ್ನಡದ ಕರ್ಬುವಿಲ್ಲಂ, ಕಡುಚಾಗಿ, ಚಲವಾದಿ ಮೊದಲಾದ ಪದಗಳನ್ನು ಬಹುವ್ರೀಹಿಗೆ ಉದಾಹರಣೆಗಳನ್ನಾಗಿ ಕೊಡಲಾಗುತ್ತದೆ; ಆದರೆ, ಇಂತಹ ಪದಗಳಲ್ಲಿ ಎರಡು ಹೆಸರುಪದಗಳು ಮಾತ್ರವಲ್ಲದೆ ಒಂದು ಗುರ್ತ(ಲಿಂಗ)ದ ಒಟ್ಟೂ ಸೇರಿಕೊಂಡಿರುತ್ತದೆ (ಕರ್ಬು+ವಿಲ್+ಅಂ), ಮತ್ತು ಇವುಗಳಲ್ಲಿ ಬರುವ ಗುರ್ತದ ಒಟ್ಟು ಪತ್ತುಗೆ (ವಿಬಕ್ತಿ) ಒಟ್ಟಿನಿಂದ ಬೇರಾಗಿರುತ್ತದೆ; ಹಾಗಾಗಿ, ಸಂಸ್ಕ್ರುತದ ಪೀತಾಂಬರ (ಪೀತ+ಅಂಬರ) ಪದದ ಹಾಗೆ ಇಂತಹ ಪದಗಳಲ್ಲಿ ಹೊರಗಿನ ಒಂದು ಪದ ಮುಕ್ಯ ಎಂಬುದಾಗಿ ತೋರಿಸಿಕೊಡಲು ಬರುವುದಿಲ್ಲ.
ಬೇರೆಯೂ ಹಲವು ಬಗೆಯ ಗೊಂದಲಗಳು ಶಬ್ದಮಣಿದರ್ಪಣ ಕೊಡುವ ಹಳೆಗನ್ನಡ ಜೋಡುಪದಗಳ ವಿವರಣೆಯಲ್ಲಿದೆ ಎಂಬುದನ್ನು ಮುಂದೆ ನೋಡಲಿರುವೆವು.
(ಮುಂದಿನ ವಾರ ಮುಂದುವರೆಯಲಿದೆ…)
ನಾನು ಹತ್ತನೇ ತರಗತಿಯ ವರೆಗೆ ಮಾತ್ರ ಕನ್ನಡ ಓದಿದ್ದೇನೆ. ಆದರೂ, ನನಗೆ ಬಿಡಿಸಲು ಹೇಳಿದ್ದರೆ ‘ಸುಡುವ ಕಾಡು’ ‘ಬಿಟ್ಟ ಮುಡಿ’, ‘ಆಡುವ ಕಬ್ಬು’ ಅಂತಲೇ ಬಿಡಿಸುತ್ತಿದ್ದೆ. ಇದು ಸರಿಯಾದರೆ ‘ಪರಿಚೆ ಪದ’ ಮತ್ತು ‘ಹೆಸರು ಪದ’ ಸೇರಿದಂತಾಯಿತು ಅಲ್ಲವೇ? ಕನ್ನಡದಲ್ಲಿ ಎಸಕ ಮತ್ತು ಹೆಸರು ಪದ ಸೇರುತ್ತವೆ ಅಂತ ನನಗನ್ನಿಸುತ್ತಿಲ್ಲ. ತಪ್ಪೇ?
ಸುಡುಗಾಡು ಮತ್ತು ಬಿಡುಮುಡಿ ಎಂಬ ಜೋಡುಪದಗಳ ಹುರುಳನ್ನು ಹರವಿ ತಿಳಿಸಲು ಅವುಗಳಲ್ಲಿ ಮೊದಲಿಗೆ ಬಂದಿರುವ ಎಸಕ ಪದವನ್ನು ಅದರ ಮುಂಬೊತ್ತಿನ (ಸುಡುವ) ಇಲ್ಲವೇ ಹಿಂಬೊತ್ತಿನ (ಬಿಟ್ಟ) ಪರಿಚೆರೂಪಕ್ಕೆ ಮಾರ್ಪಡಿಸಲಾಗುತ್ತದೆ; ಇದೇ ರೀತಿಯಲ್ಲಿ ಜೋಡುಪದಗಳ ಮೊದಲಿಗೆ ಬಂದಿರುವ ಹೆಸರುಪದಗಳನ್ನೂ ಅವುಗಳ ಪರಿಚೆರೂಪಕ್ಕೆ ಮಾರ್ಪಡಿಸಲು ಬರುತ್ತದೆ (ಕಣ್ಣೀರ್ – ಕಣ್ಣಿನ ನೀರ್, ನಾಣ್ಣುಡಿ – ನಾಡಿನ ನುಡಿ). ಈ ‘ಹುರುಳನ್ನು ಹರವಿದ’ ಪದಕಂತೆಗಳು ಮೇಲಿನ ಜೋಡುಪದಗಳಲ್ಲಿ ಮೊದಲನೆಯ ಪದವಾಗಿ ಎಸಕಪದ ಮತ್ತು ಹೆಸರುಪದಗಳು ಬಂದಿರುವುದನ್ನು ಒತ್ತಿ ಹೇಳುತ್ತವೆಯಲ್ಲದೆ ಪರಿಚೆಪದಗಳು ಬಂದಿವೆಯೆಂದೇನೂ ಹೇಳುವುದಿಲ್ಲವಲ್ಲ?
“ಬೇರೆಯೂ ಹಲವು ಬಗೆಯ ಗೊಂದಲಗಳು ಶಬ್ದಮಣಿದರ್ಪಣ ಕೊಡುವ ಹಳೆಗನ್ನಡ ಜೋಡುಪದಗಳ ವಿವರಣೆಯಲ್ಲಿದೆ ಎಂಬುದನ್ನು ಮುಂದೆ ನೋಡಲಿರುವೆವು.”
ಈ ಸಾಲು ನನಗೆ ಅರ್ಥವಾಗಲಿಲ್ಲ ..
“ಬೇರೆಯೂ ಹಲವು ಬಗೆಯ” ಸರಿಯೋ, ” ಹಲವು ಬೇರೆ ಬಗೆಯ” ಸರಿಯೋ .. ದಯವಿಟ್ಟು ಉತ್ತರಿಸಿ. !
ಶಂಕರ ಬಟ್ ಅವರೇ,
ಹಿನ್ನುಣಿಕೆಗೆ ನನ್ನಿ. ತಿಳಿಯಿತು! ನಾನೇಕೆ ಎಸಕ ಪದಗಳನ್ನು ಮಾತ್ರ ಪರಿಚೆಯಾಗಿ ಮಾರ್ಪಡಿಸಿಕೊಂಡೆನೋ ನನಗೇ ಗೊತ್ತಿಲ್ಲ! ಜೋಡುಪದಗಳನ್ನು ನೀವು ಗುಂಪಿಸಿರುವ ಬಗೆಯು ಕನ್ನಡವನ್ನು ಅರಿತುಕೊಳ್ಳಲು ಸರಾಗವಾಗಿಸಿದೆ. ತರಗತಿಯಲ್ಲಿ ನಾನು ಸಮಾಸಗಳನ್ನು ಕಲಿಯುತ್ತಿದ್ದ ದಿನಗಳು ಇನ್ನೂ ನೆನಪಿವೆ. ನಾನು ವಾರಗೆಯವರಿಗಿಂತ ಚೆನ್ನಾಗೇ ಕನ್ನಡ ವ್ಯಾಕರಣವನ್ನ ಕಲಿತುಕೊಂಡಿರುತ್ತಿದ್ದೆ. ಆದರೆ, ಸಮಾಸಗಳನ್ನ ಬಿಡಿಸುವಾಗ ಸರಿಯಾಗಿ ಬಿಡಿಸಿದರೂ ಅದು ಯಾವ ಸಮಾಸ ಎಂದು ಹೇಳುವಾಗ ಗೊಂದಲವಾಗುತ್ತಿತ್ತು. ಎಶ್ಟು ಯೋಚಿಸಿದರೂ, ಓದಿಕೊಂಡರೂ ನೆನಪಿರುತ್ತಿರಲಿಲ್ಲ. ಅದು ಏಕೆಂದು ಇವತ್ತು ತಿಳಿಯಿತು!
ಎರಡೂ ಸರಿ; ಆದರೆ, ಅವುಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸ ಇದೆ: ‘ಬೇರೆಯೂ ಹಲವು ಬಗೆಯ ಗೊಂದಲಗಳು’ ಎಂಬಲ್ಲಿ ‘ಬೇರೆ’ ಎಂಬುದರ ಮೇಲೆ ಒತ್ತು ಕೊಡಲಾಗಿದೆ, ಮತ್ತು ಅದರೊಂದಿಗೆ ‘ಊ’ ಒಟ್ಟನ್ನು ಬಳಸಿರುವುದರಿಂದ ಇಲ್ಲಿ ‘ಮತ್ತು’ ಎಂಬ ಹುರುಳಿನ ಮೇಲೂ ಒತ್ತು ಬಿದ್ದಿದೆ. ಸಾಮಾನ್ಯವಾಗಿ, ‘ಬೇರೆ’ ಎಂಬುದು ‘ಬಗೆ’ ಎಂಬುದರ ಹತ್ತಿರ ಇರಬೇಕು; ಆದರೆ, ಅದರೊಂದಿಗೆ ‘ಊ’ ಒಟ್ಟನ್ನು ಬಳಸಿರುವಲ್ಲ್ಲಿ ಅದನ್ನು ದೂರ ಇರಿಸಲು ಬರುತ್ತದೆ.
ಥ್ಯಾಂಕ್ಸ್!
.. ಇಂಗ್ಲೀಷಿನ Additionally/Moreover ಎಂದು ಹುರುಳೇನು ‘ಬೇರೆಯೂ ‘ ಎಂಬ ಬಳಕೆಗೆ ?