ಮುದಿಹದ್ದು – ಮರಿಗುಬ್ಬಿ

ಆನಂದ್. ಜಿ.

291773799_b00268d990

ಅಗೋ ಕುಳಿತಿವೆ ನೋಡು ಮುದಿಗೂಬೆಗಳು

ಹಾರಲಾಗದೆ ಹೊಂಚುಹಾಕುವ ರಣಹದ್ದುಗಳು

ಹಾರುವುದು ಹೇಗೆಂದು ಹೇಳಿಕೊಡುವ

ನೆಪದಲ್ಲಿ ಹಾರದ ಗುಬ್ಬಿಗಳ ಹಿಡಿದು ತಿಂದಿಹವು ||

ಗುಬ್ಬಿಗಳ ಕುಕ್ಕುವುದು ಹೇಗೆಂದು ಅರಿತು

ಕಾಗೆಗಳ ಉಗೇ ಉಗೇಯಲ್ಲಿ ಮಯ್ಯ್ಯ ಮರೆತು

ಹಸಿ ಮಾಂಸ ಹರಿದ್ಹರಿದು ಮುಕ್ಕುತಿವೆ ನೋಡು

ಪಾಪಾ! ಗುಬ್ಬಿಗಳ ನರಳಾಟ! ನಾಯಿಪಾಡು ||

ಕುಂತರೆ ತಪ್ಪು! ಹಾರಿದರೆ ತಪ್ಪು! ಹಾಡಿದರೆ ತಪ್ಪು!

ಸದ್ದಿಲ್ಲದೆ ಇಹುದು ತಪ್ಪು! ಕಾಳ ಹೆಕ್ಕಲು ತಪ್ಪು!

ಹಿಕ್ಕೆ ಹಾಕಲು ತಪ್ಪು! ಚಂದವಿರುವುದು ತಪ್ಪು!

ತಪ್ಪು ಹುಡುಕುವುದೊಂದೆ ಇವಕ್ಕೆ ಒಪ್ಪು ||

ಮರಿಗುಬ್ಬಿಗಳಿಗೆ ನುಡಿದಿವೆ ಇವು

ಹಾಗಿರಬೇಕು – ಹೀಗಿರಬೇಕು ನೀವು

ಹಿಂದೆಲ್ಲ ಹಾಗಿದ್ದೆವು ನಾವು

ಕೇಳದಿದ್ದರೆ ಕಾದಿಹುದು ನಮ್ಮಿಂದ ಸಾವು ||

ನೋಡು! ನಮ್ಮಂತೆ ನಿನಗಿರಲಿ ಕೊಕ್ಕು

ರೆಕ್ಕೆ ಇರಬೇಕು ಇಶ್ಟೂ ಅಗಲಕ್ಕು

ಇಲ್ಲವೆಂದರೆ ಮತ್ತೆ ಮತ್ತೆ ಕುಕ್ಕು

ಬದುಕಬೇಕೆಂದರೆ ನಮ್ಮ ಕಾಲ ನೆಕ್ಕು ||

ಮರಿಗುಬ್ಬಿ, ನಿನಗೆ ಹದ್ದಾಗೋ ಆಸೆ ಬೇಡ

ಜೀವ ಉಳಿಯಲು ಇರುವ ದಾರಿ ನೋಡ

ಉಗೇ ಎನ್ನುವ ಕಾಗೆಯಾಗು

ಹದ್ದುಳಿಸಿದ ಹೆಣತಿಂದು ಬದುಕು ಹೋಗು ||

(ಯಾವುದೇ ಕಚೇರಿಯಲ್ಲಿ ನಡೆಯೋ ಮೀಟಿಂಗುಗಳಲ್ಲಿ ಇಂತಾ ಹಿರಿ-ಮುದಿ ಹದ್ದುಗಳು ಸಾಮಾನ್ಯ!)

(ಚಿತ್ರ: http://static.flickr.com/103/291773799_b00268d990.jpg)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: