ವಿಯೆಟ್ನಾಮಿನಲ್ಲಿ ನಡೆದ ಲಿಪಿ ಬದಲಾವಣೆ

ಪ್ರಿಯಾಂಕ್ ಕತ್ತಲಗಿರಿ.

The_main_Museum_of_Ethnology_buliding_Hanoi

1970ರ ದಶಕದಲ್ಲಿ ಕಾಳಗದ ಕಾರಣದಿಂದಲೇ ಹೆಸರುವಾಸಿಯಾಗಿದ್ದ ವಿಯೆಟ್ನಾಮ್ ದೇಶದ ನುಡಿಯೇ ವಿಯೆಟ್ನಮೀಸ್. ಆಸ್ಟ್ರೋಏಶ್ಯಾಟಿಕ್ (Austoasiatic) ನುಡಿಕುಟುಂಬಕ್ಕೆ (language family) ಸೇರಿದ ನುಡಿಯಿದು. ಇವತ್ತಿನ ಚೀನಾ ದೇಶದೊಂದಿಗೆ ಗಡಿ ಹಂಚಿಕೊಂಡಿರುವ ವಿಯೆಟ್ನಾಮಿನ ಜನರ ಬದುಕಿನ ಮೇಲೆ ಚೀನಾ ಸಂಸ್ಕ್ರುತಿಯ ನೆರಳು ಇದೆ. ಹಲ ವರುಶಗಳಿಂದಲೂ ಚೀನಾದ ರಾಜರುಗಳು ವಿಯೆಟ್ನಾಮಿನ ಮೇಲೆ ದಂಡೆತ್ತಿ ಬರುವುದು, ಕಾಳಗದಲ್ಲಿ ಗೆದ್ದು ಆಡಳಿತ ನಡೆಸುವುದು ನಡೆದೇ ಇತ್ತು. ರಾಜಕೀಯವಾಗಿ ಚೀನೀಯರ ಮೇಲುಗಯ್ ಪಡೆದುಕೊಂಡಿದ್ದರ ನೆರಳು ಇಲ್ಲಿನ ಸಂಸ್ಕ್ರುತಿ ಮತ್ತು ನುಡಿಯ ಮೇಲೂ ಬಿದ್ದಿದೆ.

ಬರವಣಿಗೆಯೆಂದರೆ ಚಯ್ನೀಸ್ ನುಡಿಯಲ್ಲಿ ಎಂಬಂತಿತ್ತು

ವಿಯೆಟ್ನಾಮಿನ ಮೇಲೆ ಚಯ್ನೀಸ್ ರಾಜರುಗಳ ಹಿಡಿತ ಹೆಚ್ಚಾದಂತೇ, “ಬರವಣಿಗೆಯೆಂದರೆ ಚಯ್ನೀಸ್ ನುಡಿಯಲ್ಲಿ ಮಾತ್ರ” ಎಂಬಂತಹ ಸ್ತಿತಿ ವಿಯೆಟ್ನಾಮಿನಲ್ಲಿ ಏರ‍್ಪಟ್ಟಿತ್ತು. ಆಡಳಿತದ ಎಲ್ಲ ದಾಕಲೆಗಳು ಚಯ್ನೀಸ್ ನುಡಿಯಲ್ಲಿಯೇ ಬರೆಯಲ್ಪಡುತ್ತಿದ್ದವು. ಕಲಿಕೆಯೆಂಬುದು ಕೆಲವೇ ಕೆಲವರಿಗೆ ಮಾತ್ರ ದೊರಕುತ್ತಿದ್ದು, ಕಲಿಕೆಯೆಲ್ಲವೂ ಚಯ್ನೀಸ್ ನುಡಿಯಲ್ಲಿಯೇ ನಡೆಯುತ್ತಿತ್ತು.ದಿನಗಳೆದಂತೆ, ಚಯ್ನೀಸ್ ಲಿಪಿಯನ್ನು ಬಳಸಿಕೊಂಡು ವಿಯೆಟ್ನಮೀಸ್ ನುಡಿಯನ್ನು ಬರೆಯುವ ಬಗೆಯೂ ಮೂಡಿತು. ಹೆಚ್ಚು ಹೆಚ್ಚು ಮಂದಿ ಚಯ್ನೀಸ್ ಲಿಪಿಯನ್ನು ಬಳಸಿಕೊಂಡು ವಿಯೆಟ್ನಮೀಸ್ ನುಡಿಯನ್ನು ಬರೆಯತೊಡಗಿದರು.

ಲಿಪಿ ಎಂದರೆ ಚಯ್ನೀಸ್ ಲಿಪಿ ಎಂಬಂತಿತ್ತು

“ಚು ನೋಮ್” (chu nom) ಎಂದು ಕರೆಯಲಾಗುವ ಲಿಪಿಯನ್ನು ಬಳಸಿ ವಿಯೆಟ್ನಮೀಸ್ ನುಡಿಯನ್ನು ಬರೆಯುವ ಬಗೆ 13ನೇ ಶತಮಾನದಲ್ಲಿ ಮೊದಲ್ಗೊಂಡಿತು ಎಂದು ಹೇಳಲಾಗುತ್ತದೆ. ಈ ಲಿಪಿಯು ಚಯ್ನೀಸ್ ನುಡಿಯನ್ನು ಬರೆಯಲು ಬಳಸಲಾಗುತ್ತಿದ್ದ ಲಿಪಿಯಂತೆಯೇ ಇದ್ದಿತ್ತು. ವಿಯೆಟ್ನಮೀಸ್ ನುಡಿಯ ಕೆಲ ಪದಗಳನ್ನು ಗುರುತಿಸಿಕೊಳ್ಳಲು ಒಂದೆರಡು ಬರಿಗೆಗಳನ್ನು ಸೇರಿಸಿಕೊಳ್ಳಲಾಗಿತ್ತೆಂದು ಹೇಳಲಾಗುತ್ತದೆ. ಮತ್ತು ಈ ಲಿಪಿಯಲ್ಲಿ ಒಂದು ಬರಿಗೆಯು ಇಡೀ ಪದವನ್ನೇ ಸೂಚಿಸುತ್ತಿತ್ತು. ಒಂದೊಂದು ಉಲಿಕೆಗೆ ಒಂದು ಬರಿಗೆಯ ಬದಲು, ಒಂದೊಂದು ಪದಕ್ಕೇ ಒಂದೊಂದು ಬರಿಗೆಯನ್ನು ಬಳಸುತ್ತಿದ್ದುದು, ಬರಿಗೆಗಳ ಗುಂಪನ್ನು ದೊಡ್ಡದಾಗಿಸಿಬಿಟ್ಟಿತ್ತು.

Temple-of-literature-Hanoi

ರೋಮನ್ ಲಿಪಿಯ ಅಳವಡಿಕೆ

ವಿಯೆಟ್ನಾಮಿಗೆ ಪ್ರೆಂಚರು ಬಂದಿಳಿದು ಆಡಳಿತ ನಡೆಸಲು ತೊಡಗಿದಾಗ, ಕ್ರಿಶ್ಚಿಯನ್ ಮಿಶನರಿಗಳು ವಿಯೆಟ್ನಮೀಸ್ ನುಡಿಗೆ ರೋಮನ್ ಲಿಪಿಯನ್ನು ಅಳವಡಿಸಿದರು. ಅಲೆಗ್ಸಾಂಡ್ರೆ ಡೆ ರೋಡ್ಸ್ ಎಂಬುವರು ವಿಯೆಟ್ನಮೀಸ್ ನುಡಿಗೆ ರೋಪನ್ ಲಿಪಿಯನ್ನು ಅಳವಡಿಸಿದವರು ಎಂದು ಹೇಳಲಾಗುತ್ತದೆ. ರೋಮನ್ ಲಿಪಿಗೆ ತಕ್ಕ ಬದಲಾವಣೆಗಳನ್ನು ಮಾಡಿಕೊಂಡು ವಿಯೆಟ್ನಮೀಸ್ ನುಡಿಯ ಉಲಿಕೆಗಳನ್ನು ಗುರುತಿಸಲು ಸುಳುವಾಗುವಂತೆ ಮಾಡಲಾಯಿತು. 1651ರಲ್ಲಿ ಅಲೆಗ್ಸಾಂಡ್ರೆ ಅವರು ಬರೆದಿರುವ ವಿಯೆಟ್ನಮೀಸ್-ಪೋರ್‍ಚುಗೀಸ್-ಲ್ಯಾಟಿನ್ ಡಿಕ್ಶನರಿಯಲ್ಲಿ ರೋಮನ್ ಲಿಪಿಯನ್ನು ಬಳಸಲಾಗಿದೆ. ಅಲೆಗ್ಸಾಂಡ್ರೆ ಅವರು ಪ್ರೆಂಚರಾಗಿದ್ದರೂ, ಅವರು ಕಟ್ಟಿದ್ದ ಪದನೆರಕೆಯು ವಿಯೆಟ್ನಮೀಸ್-ಲ್ಯಾಟಿನ್-ಪೋರ‍್ಚುಗೀಸ್ ನುಡಿಗಳದ್ದು.

ಲಿಪಿ ಬದಲಾವಣೆ

ಹಲವಾರು ವರುಶಗಳಿಂದ ಚಯ್ನೀಸ್ ಲಿಪಿಯನ್ನೇ ಬಳಸಲಾಗುತ್ತಿದ್ದರೂ, ವಿಯೆಟ್ನಮೀಸ್ ನುಡಿಯನ್ನು ಬಣ್ಣಿಸುವಲ್ಲಿ ಅದು ಅಲ್ಲಲ್ಲಿ ಎಡವುತ್ತಿತ್ತು. ಮೇಲಾಗಿ, ಒಂದೊಂದು ಪದಕ್ಕೂ ಒಂದೊಂದು ಬರಿಗೆಯಿದ್ದುದರಿಂದ, ಅದನ್ನೆಲ್ಲಾ ಕಲಿಯುವುದಕ್ಕೆ ವರುಶಗಳೇ ಬೇಕಾಗುತ್ತಿತ್ತು. ಆದರೆ, ವಿಯೆಟ್ನಮೀಸ್ ನುಡಿಗೆಂದೇ ಮಾರ‍್ಪಡಿಸಲಾದ ರೋಮನ್ ಲಿಪಿಯು ಈ ಕೊರತೆಗಳನ್ನು ನೀಗಿಸುತ್ತಿರುವುದು ಕಂಡುಬಂದಿತ್ತು. 1910ರಲ್ಲಿ ಹಲವು ಶಾಲೆಗಳಲ್ಲಿ ಚಯ್ನೀಸ್ ಲಿಪಿಗೆ ಬದಲಾಗಿ ರೋಮನ್ ಲಿಪಿಯನ್ನು ಕಲಿಸುವ ಏರ‍್ಪಾಡು ಮಾಡಲಾಯಿತು. 1918ರಲ್ಲಿ ವಿಯೆಟ್ನಾಮಿನ ರಾಜನಾಗಿದ್ದ ಕಾಯ್ ಡಿನ್ಹ್ ಅವರು ಚಯ್ನೀಸ್ ಲಿಪಿಯನ್ನು ಬಳಕೆಯಿಂದ ತೆಗೆದುಹಾಕಿದರು, ಮತ್ತು, ವಿಯೆಟ್ನಮೀಸ್ ನುಡಿಗೆ ಅಳವಡಿಸಲಾದ ರೋಮನ್ ಲಿಪಿಯನ್ನೇ ಅದಿಕ್ರುತವೆಂದು ಸಾರಿದರು. ಸುಮಾರು 1930ರ ಹೊತ್ತಿಗೆ, ರೋಮನ್ ಲಿಪಿಯು ವಿಯೆಟ್ನಾಮಿನ ಎಲ್ಲೆಡೆಗಳಲ್ಲಿ ಬಳಸಲ್ಪಡುತ್ತಿತ್ತು.

ಲಿಪಿ ಬದಲಾವಣೆಯಿಂದಾದ ಅನುಕೂಲಗಳು

ಮುಂಚಿನ ಚಯ್ನೀಸ್ ಲಿಪಿಯನ್ನು ಕಲಿಯುವುದಕ್ಕೆ ಹಲವಾರು ವರುಶಗಳೇ ಬೇಕಾಗುತ್ತಿತ್ತು. ಹಾಗಾಗಿ, ವಿಯೆಟ್ನಾಮಿನ ಹಲವರು ಕಲಿಕೆಯಿಂದ ದೂರವೇ ಉಳಿದುಬಿಡುತ್ತಿದ್ದರು. ಈಗಿನ ರೋಮನ್ ಲಿಪಿಯನ್ನು ಕಲಿತುಕೊಳ್ಳುವುದಕ್ಕೆ ಒಂದೆರಡು ವರುಶಗಳು ಸಾಕಾಗುವುದರಿಂದ, ವಿಯೆಟ್ನಾಮಿನ ಸಾಕ್ಶರತೆ ಹೆಚ್ಚಿಸಲು ಸಾದ್ಯವಾಗಿದೆ. 20ನೇ ಶತಮಾನದ ಶುರುವಿನಲ್ಲಿ ಅಕ್ಶರ ಅರಿಯದವರೇ ತುಂಬಿದ್ದ ವಿಯೆಟ್ನಾಮಿನಲ್ಲಿ ಇವತ್ತು ಸಂಪೂರ‍್ಣ ಸಾಕ್ಶರತೆ ಸಾದಿಸಲಾಗಿದೆ.

(ಮಾಹಿತಿ ಸೆಲೆ: wikipedia.org)
(ಚಿತ್ರ: 1. Museum of Ethnology: members.virtualtourist.com
          2. Temple of literature, Hanoi: www.gogobot.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Maaysa says:

    ಹಿಂಗೆ ಕನ್ನಡಕ್ಕೆ ಇಂಗ್ಲೀಶಿನ ಲಿಪಿಯನ್ನು ಬರೆಯಲು ಬಳಸಿದರೆ ನಾವು ಎರಡೆರಡು ಲಿಪಿ ಕಲಿಯೋದು ತಪ್ಪುತ್ತದೆ.

    ಮೊದಲು ಈ ಕೆಲಸ ಆಗಲಿ .

ಅನಿಸಿಕೆ ಬರೆಯಿರಿ: