’ಟಾಟಾ ನ್ಯಾನೋ’ಗಿಂತ ಅಗ್ಗ ಈ ಬಜಾಜ್ ಕಾರು!

ಪ್ರಶಾಂತ ಸೊರಟೂರ.

ಟಾಟಾ ನ್ಯಾನೋ ಹೊರಬಂದ ಮೇಲೆ, ಬಾರತದಲ್ಲಿ ಅಗ್ಗದ ಕಾರಿನ ಮತ್ತೊಂದು ಕಾಳಗ ಶುರುವಾಗಿದೆ. ಇಗ್ಗಾಲಿ ಮತ್ತು ಮೂರ‍್ಗಾಲಿ ಗಾಡಿಗಳನ್ನು ಮಾಡುವ ದೇಶದ ಮುಂಚೂಣಿ ಅಟೋಮೋಬಾಯಲ್ ಕೂಟ ಬಜಾಜ್ RE60 ಎಂಬ ಹೊಸ ಕಿರು ಕಾರನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಮಂದಿಯನ್ನು ಸಾಗಿಸುವ ಅಟೋ ರಿಕ್ಶಾ ಇಲ್ಲವೇ ಸರಕು ಸಾಗಿಸಲು ಬಳಸುವ ಮೂರ‍್ಗಾಲಿ ಗಾಡಿಗಳನ್ನು ತೆಗೆದುಹಾಕಲಿದೆ ಎಂಬ ಹೇಳಿಕೆಯೊಂದಿಗೆ ನಾಲ್ಕು ಗಾಲಿಗಳ RE60 ಕಾರನ್ನು 2012 ರ ದಿಲ್ಲಿ ಅಟೋ ಶೋನಲ್ಲಿ ಬಜಾಜ್ ತೋರಿಸಿತ್ತು. ಆದರೆ ಈ ಕಾರನ್ನು ರಸ್ತೆಗೆ ಇಳಿಸುವ ಮುನ್ನ ಬಜಾಜನಿಂದ ಕೆಲವು ಬೇಡಿಕೆಗಳು ಮತ್ತು ಟಾಟಾ, ಮಹೀಂದ್ರಾ, ಸುಜುಕಿ ಮುಂತಾದ ಕಾರು ಮಾಡುವ  ಬೇರೆ ಕೂಟಗಳಿಂದ ಆ ಬೇಡಿಕೆಗಳಿಗೆ ಎದುರಾಗಿ ಕೂಗುಗಳು ಎದ್ದಿದ್ದವು.

Bajaj_RE60

ಯಾವುದೇ ಕಾರನ್ನು ಮಾರಾಟ ಮಾಡಲು, ರಸ್ತೆಗೆ ಇಳಿಸಲು ಮುಕ್ಯವಾಗಿ ಎರಡು ಮಟ್ಟವನ್ನು ದಾಟಬೇಕು. ಮೊದಲನೇಯದು ಗಾಡಿಯು ಉಗುಳುವ ಕೆಡುಗಾಳಿಯು ಒಂದು ಮಟ್ಟವನ್ನು ದಾಟಿರಬಾರದು ಮತ್ತು ಎರಡನೇಯದು ಗಾಡಿ ಓಡಿಸುವವರ ಕಾಪುವನ್ನು (safety) ಅದು ಕಾಯ್ದುಕೊಳ್ಳಬೇಕು. ಗಾಡಿ ಉಗುಳುವ ಕೆಡುಗಾಳಿ (pollutant) ಮಟ್ಟವನ್ನು ಅಂಕೆಯಲ್ಲಿಡಲು ಬಾರತ ಸ್ಟೇಜ್  ಹೆಸರಿನ ಗುಣಮಟ್ಟವನ್ನು ಕೇಂದ್ರ ಸರಕಾರದ ಅಡಿಯಲ್ಲಿರುವ ದಾರಿ ಮತ್ತು ಹೆದ್ದಾರಿ ಸಾಗಾಣಿಕೆ ಕವಲು (ministry of road transport and highways) ಮಾಡುತ್ತದೆ. ಕೆಡುಗಾಳಿಯ ಈ ಮಟ್ಟವು ಗಾಡಿಯ ತೂಕ, ಗಾಲಿಗಳ ಎಣಿಕೆ (ಇಗ್ಗಾಲಿ, ಮೂರ‍್ಗಾಲಿ, ನಾಲ್ಗಾಲಿ) ಮತ್ತು ಅವುಗಳ ಬಳಕೆಯಂತೆ (ಮಂದಿ ಇಲ್ಲವೇ ಸರಕು ಸಾಗಿಸಲು) ಬೇರೆ-ಬೇರೆಯಾಗಿರುತ್ತದೆ. ಕಾರು, ಟ್ರಕ್ಕು, ಬಸ್ಸಿನ ಹಿಂದೆ BSIII / BSIV ಅಂತಾ ಬರೆದಿರುವುದನ್ನು ನೀವು ನೋಡಿರಬಹುದು, ಅದೇ ಈ ಬಾರತ ಸ್ಟೇಜ್ (BS) ಕೆಡುಗಾಳಿ ಮಿತಿಯ ಮಟ್ಟ.

ಎರಡನೇಯದಾಗಿ ಗಾಡಿ ಓಡಿಸುವವರ ಕಾಪುವನ್ನು (safety) ಕಾಯ್ದುಕೊಳ್ಳುವಂತೆ ಗಾಡಿಯನ್ನು ಮಾಡಲಾಗಿದೆಯೇ ಎಂದು ತಿಳಿಯಲು, ಅದನ್ನು ಕುಸಿತ ಒರೆಗೆ (crash test) ಒಳಪಡಿಸಲಾಗುತ್ತದೆ. ಇದರಲ್ಲಿ ಕಾರನ್ನು ವೇಗವಾಗಿ ಓಡಿಸಿ ಬೇಕಂತಲೇ ಗೋಡೆಗೆ ಗುದ್ದಿಸಲಾಗುತ್ತದೆ. ಹೀಗೆ ಗುದ್ದಿಸಿ ಕುಸಿತಗೊಂಡ ಕಾರನ್ನು ಒರೆಗೆಹಚ್ಚಿ ಅದರಲ್ಲಿ ಓಡಿಸುಗರಿದ್ದರೆ ಅವರಿಗೆ ಎಶ್ಟು ತೊಂದರೆಯಾಗುತ್ತಿತ್ತು ಅಂತಾ ಎಣಿಕೆಹಾಕಲಾಗುತ್ತದೆ. ಮೇಲೆ ತಿಳಿಸಿದಂತೆ ರಸ್ತೆಗೆ ಇಳಿಯುವ ಮುನ್ನ ಪ್ರತಿಯೊಂದು ಕಾರು-ಬಗೆಯು (car model) ಕಡಿಮೆ ಎಂದರೂ ಈ ಎರಡು ಮಟ್ಟಗಳನ್ನು ದಾಟಬೇಕು.

RE60 ಕಾರನ್ನು ಹೊರತರಲು ಹಾತೊರೆಯುತ್ತಿದ್ದ ಬಜಾಜ್, ಸರಕಾರದ ಮುಂದಿಟ್ಟಿದ್ದ ಬೇಡಿಕೆಯೆಂದರೆ RE60 ಅಂತಹ ಚಿಕ್ಕದಾದ ನಾಲ್ಕು ಗಾಲಿ ಗಾಡಿಗಳನ್ನು ಈಗಿರುವ ಗುಣಮಟ್ಟದಲ್ಲಿ ಅಳೆಯುವುದಕ್ಕಿಂತ, ಯುರೋಪಿನಲ್ಲಿ ಚಿಕ್ಕ ಗಾಡಿಗಳಿಗೆ ಜಾರಿಯಲ್ಲಿರುವ ಕ್ವಾಡ್ರಿಸಯಕಲ್ (quadricycle) ಗುಣಮಟ್ಟದ ಅಡಿಯಲ್ಲಿ ಅಳೆಯಬೇಕೆನ್ನುವುದು. ಯುರೋಪಿನಲ್ಲಿ  4-15 kW ಅಶ್ಟೇ ಕಸುವು ಹೊಮ್ಮಿಸುವ ಚಿಕ್ಕ ಗಾಡಿಗಳನ್ನು ಕ್ವಾಡ್ರಿಸಯಕಲ್ ಅಂತಾ ಕರೆಯಲಾಗುತ್ತಿದ್ದು ಬೇರೆ ಕಾರುಗಳಿಗೆ ಹೋಲಿಸಿದರೆ ಅವುಗಳಿಗೆ ಒಂಚೂರು ಸಡಿಲವಾದ ಕಟ್ಟಲೆಗಳಿವೆ.

ಬಜಾಜ್ ಕೂಟದ ಮುಂದಾಳು ರಾಜೀವ್ ಬಜಾಜ್ ಈ ನಿಟ್ಟಿನಲ್ಲಿ ಹಲವು ಅಟೋಮೊಬಾಯಲ್ ಕೂಟಗಳ ಎದುರಾಗಿ ಸರಕಾರದ ಮುಂದೆ ತಮ್ಮ  ನಿಲುವನ್ನು ಮುಂದಿಟ್ಟಿದ್ದರು. ಅಟೋದಂತಹ ಈಗಿನ ಮೂರ‍್ಗಾಲಿ ಗಾಡಿಗಳಿಗಿಂತ ನಾಲ್ಕು ಗಾಲಿ ಗಾಡಿಯಾದ RE60 ಹೆಚ್ಚು ಕಾಪು (safe) ಹೊಂದಿರುವುದರಿಂದ ಓಡಿಸುಗರಿಗೆ ಹೆಚ್ಚಿನ ನೆರವು, ಕಾವಲು ನೀಡುತ್ತದೆ ಜೊತೆಗೆ ಇದು ಈಗಿರುವ ಗಾಡಿಗಳಿಗಿಂತ ಕಡಿಮೆ ಕೆಡುಗಾಳಿ ಹೊಮ್ಮಿಸುತ್ತದೆ, ಕಡಿಮೆ ಉರುವಲು ಬಳಸುತ್ತದೆ ಹಾಗಾಗಿ ಈ ನೆರವುಗಳು ಮಂದಿಗೆ ಎಟುಕಲು ಕ್ವಾಡ್ರಿಸಯಕಲ್ ಅಳತೆಯ ಮಟ್ಟವನ್ನು ಜಾರಿಗೆ ತರಬೇಕು ಅನ್ನುವುದು ಅವರ ನಿಲುವಾಗಿತ್ತು. ಅದೇ ಟಾಟಾ, ಸುಜುಕಿ, ಮಹೀಂದ್ರಾದಂತಹ ಕೂಟಗಳು ಇದಕ್ಕೆ ಎದುರಾಗಿ ದನಿ ಎತ್ತಿದವು. ಕ್ವಾಡ್ರಿಸಯಕಲ್ ಗುಣಮಟ್ಟವನ್ನು ತಂದರೆ ಓಡಿಸುಗರನ್ನು ತೊಂದರೆಗೆ ಈಡು ಮಾಡಿದಂತಾಗುತ್ತದೆ ಹಾಗಾಗಿ ಕಡಿಮೆ ಗುಣಮಟ್ಟವನ್ನು ತರುವುದಕ್ಕಿಂತ ಈಗಿರುವ ಮಟ್ಟವನ್ನೇ ಕಾಯ್ದುಕೊಳ್ಳುವಂತೆ ಆ ಕೂಟಗಳು ಬೇಡಿಕೆ ಇಟ್ಟವು.

ಬಜಾಜ್  ಇಲ್ಲವೇ ಅದರ ಎದುರಾಗಿ ಟಾಟಾದಂತಹ ಕೂಟಗಳ ನಿಲುವುಗಳಿಗೆ ಗಾಡಿ ಓಡಿಸುಗರ ಕಾಳಜಿಗಿಂತ, ಅವುಗಳ ಹಿಂದೆ ಅಡಗಿರುವ ಹಣಕಾಸಿನ ಹಿನ್ನೆಲೆ, ಪಯ್ಪೋಟಿಯ ಅಂಜಿಕೆಯೇ ಹೆಚ್ಚು ಕಾರಣವಾಗಿದೆ. ಕ್ವಾಡ್ರಿಸಯಕಲ್ ಗುಣಮಟ್ಟ ಈಗಿನ ಒರೆಗೆಹಚ್ಚುವ ಮಟ್ಟಕ್ಕಿಂತ ಕಡಿಮೆಯಾಗಿದ್ದು, ಆ ಮಟ್ಟವನ್ನು ಸರಳವಾಗಿ ದಾಟಬಹುದು. ಕಡಿಮೆ ಮಟ್ಟವನ್ನು ದಾಟಬೇಕಾದಾಗ ಕಡಿಮೆ ಬೆಲೆಯ ಸರಕುಗಳನ್ನು ಬಳಸಿ ಕಾರನ್ನು ಮಾಡಬಹುದು ಅಂದರೆ ಅಗ್ಗದ ಕಾರನ್ನು ಇನ್ನೂ ಅಗ್ಗವಾಗಿಸುವುದು ಬಜಾಜ್ ಬೇಡಿಕೆಯ ಹಿನ್ನೆಲೆ ಎನ್ನಬಹುದು. ಅದೇ ಕ್ವಾಡ್ರಿಸಯಕಲ್ ಗುಣಮಟ್ಟ ಜಾರಿಗೆ ಬಂದು ಬಜಾಜನಂತಹ ಕೂಟ ಅಗ್ಗದ ಕಾರು ಮಾಡಿದರೆ ಈಗಾಗಲೇ ಮಾರಾಟದಲ್ಲಿ ಹೇಳಿಕೊಳ್ಳುವಂತಹ ಸಾದನೆ ಮಾಡಿರದ ನ್ಯಾನೋ ಕಾರಿನ ಮಾರಾಟಕ್ಕೆ ಇನ್ನಶ್ಟು ಪೆಟ್ಟು ಬೀಳಲಿದೆ ಎನ್ನುವುದು ಟಾಟಾ ನಿಲುವಿನ ಹಿನ್ನೆಲೆಯಾಗಿದೆ.

ಈ ನಡುವೆ ಸರಕಾರ ಒಂದು ತೀರ‍್ಮಾನಕ್ಕೆ ಬಂದಿದೆ. ಕಡಿಮೆ ತೂಕದ ನಾಲ್ಕು ಗಾಲಿಯ ಗಾಡಿಗಳಿಗೆ ಕ್ವಾಡ್ರಿಸಯಕಲ್ ಅಳತೆಮಟ್ಟವನ್ನು ಕೆಲವು ಕಟ್ಟಲೆಗಳೊಂದಿಗೆ ಒಪ್ಪಿಗೆ ನೀಡಲು ಮುಂದಾಗಿದೆ. ಅದರಂತೆ ಕ್ವಾಡ್ರಿಸಯಕಲ್ ಗಾಡಿಗಳನ್ನು ಬರೀ ನುರಿತ ಓಡಿಸುಗರು, ಊರ ಒಳಗಿನ ಓಡಾಟಕ್ಕಶ್ಟೇ ಬಳಸಬಹುದು. ಜೊತೆಗೆ ಈ ಗಾಡಿಗಳ ಮೇಲೆ Q (quadricycle) ಅನ್ನುವ ತೋರ‍್ಪಟ್ಟಿ ಹಾಕಿ, ಬರೀ ಬಾಡಿಗೆ, ವ್ಯಾಪಾರದ (commercial) ಉದ್ದೇಶಕ್ಕಾಗಿ ಬಳಸಬಹುದು. ಈ ತೀರ‍್ಮಾನದಿಂದಾಗಿ ಬಜಾಜ್ ಕಿರುನಗೆ ಬೀರಿದರೆ, ಟಾಟಾ ತನ್ನ ನ್ಯಾನೋಕ್ಕೆ ಮುಂದೆ ಎದುರಾಗುವ ಹೆಚ್ಚಿನ ಪಯ್ಪೋಟಿಯನ್ನು ಎದುರಿಸಲು ಸಜ್ಜಾಗುತ್ತಿದೆ. ಉಳಿದ ಕಾರು ಕೂಟಗಳು ಈ ಹೊಸ ಅವಕಾಶವನ್ನು ಹೇಗೆ ಬಳಸಬಹುದೆಂದು ಯೋಚಿಸುತ್ತಿವೆ.

ಬಜಾಜ್ ಹೊರತರಲಿರುವ RE60 ಗಾಡಿಯು 200cc ಪೆಟ್ರೋಲ್ ಇಲ್ಲವೇ ಸಿ.ಎನ್.ಜಿ. ಬಿಣಿಗೆಯನ್ನು (engine) ಹೊಂದಿದ್ದು, ಒಂದು ಲೀಟರಗೆ 35 ಕೀ.ಮೀ. ದೂರ ಸಾಗಬಲ್ಲದು. ಗಾಡಿಯ ತೂಕ ಸುಮಾರು 400 kg ಇರಲ್ಲಿದ್ದು, ಬೆಲೆ 1.5 ಲಕ್ಶ ರೂಪಾಯಿಗಳಿಗಿಂತ ಕಡಿಮೆ ಇರಲಿದೆ ಎಂದು ಎಣಿಸಲಾಗಿದೆ. ಕೆಲವು ವರುಶಗಳಲ್ಲಿ ಮೂರ‍್ಗಾಲಿ ಅಟೋಗಳು ಕಾಣಿಯಾಗಿ ನಾಲ್ಗಾಲಿ RE6೦ ಗಳು ಎಲ್ಲೆಡೆ ಕಾಣಲಿವೆಯೇ ಎನ್ನುವುದನ್ನು ಬರುವ ಹೊತ್ತೇ ಹೇಳಬಲ್ಲದು. ಒಟ್ಟಿನಲ್ಲಿ ನ್ಯಾನೋಗೆ ಅದಕ್ಕಿಂತ ಪುಟಾಣಿ ನ್ಯಾನೋವೊಂದು ಗಟ್ಟಿಯಾದ ಸವಾಲೇ ಒಡ್ಡಿದೆ.

(ಚಿತ್ರ: http://www.rushlane.com)

ಪ್ರಶಾಂತ ಸೊರಟೂರCategories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , ,

4 replies

  1. ನಾನು ಈ ತರಹದ ಗಾಡಿಯನ್ನು ಸ್ವಾಗತಿಸುತ್ತೇನೆ.

Trackbacks

  1. ಡಾಟ್ಸನ್: ಕಿರು ಕಾರುಗಳಲ್ಲಿ ಮತ್ತೊಂದು ಪಯ್ಪೋಟಿ! | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s