ಇನ್ನಶ್ಟು ಮಾವಿನ ಹಣ್ಣಿನ ತಿನಿಸುಗಳು

maavina hannu

ಈಗ ಮಾವಿನಹಣ್ಣಿನ ಕಾಲ. ಇದರಿಂದ ರಸಾಯನ, ಪೂರಿ, ಚಪಾತಿ, ಸಾಸಿವೆ, ನೀರುಗೊಜ್ಜು ಮುಂತಾದ ಎಶ್ಟೊಂದು ತಿನಿಸು, ಪದಾರ್‍ತ ತಯಾರಿಸಬಹುದು.

ಮಾವಿನ ಹಣ್ಣಿನ ರಸಾಯನ

ಬೇಕಾಗುವ ಪದಾರ್‍ತಗಳು: ಮಾವಿನ ಹಣ್ಣು 4, ಸಕ್ಕರೆ 2 ಕಪ್, ತೆಂಗಿನತುರಿ ಒಂದೂವರೆ ಕಪ್, ಏಲಕ್ಕಿ ಪುಡಿ, ಚಿಟಿಕೆ ಉಪ್ಪು ರುಚಿಗೆ ತಕ್ಕಶ್ಟು.

ಮಾಡುವ ಬಗೆ: ಮಾವಿನಹಣ್ಣಿನ ಸಿಪ್ಪೆ ತೆಗೆದು ಸಣ್ಣ ಹೋಳುಗಳಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಸಕ್ಕರೆ, ಚಿಟಿಕೆ ಉಪ್ಪು, ಹಾಗೂ ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಕದಡಿದರೆ ರುಚಿಯಾದ ಮಾವಿನಹಣ್ಣಿನ ರಸಾಯನ. ಇದನ್ನು ದೋಸೆ,ಚಪಾತಿ ಅತವಾ ಪೂರಿಯೊಂದಿಗೆ ಸೇವಿಸಲು ಬಲು ಸೊಗಸಾಗಿರುತ್ತದೆ.

ಮಾವಿನಹಣ್ಣಿನ ಚಪಾತಿ

ಬೇಕಾಗುವ ಪದಾರ್‍ತಗಳು: ಮಾವಿನ ಹಣ್ಣು ದೊಡ್ಡದು 1, ಗೋದಿಹಿಟ್ಟು, ಸಕ್ಕರೆ 4 ಚಮಚ, ತುಪ್ಪ 2 ಚಮಚ, ಉಪ್ಪು ರುಚಿಗೆ ತಕ್ಕಶ್ಟು.

ಮಾಡುವ ಬಗೆ: ಮಾವಿನಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಹಿಸುಕಿಕೊಳ್ಳಿ. ರಸಕ್ಕೆ ಉಪ್ಪು, ತುಪ್ಪ ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಕದಡಿರಿ. ಈ ಮಿಶ್ರಣಕ್ಕೆ ಗೋದಿಹಿಟ್ಟನ್ನು ಸೇರಿಸಿ ಚೆನ್ನಾಗಿ ನಾದಿರಿ. ಅರ್‍ದ ಗಂಟೆಯ ನಂತರ ಈ ಹಿಟ್ಟನ್ನು ಉಂಡೆ ಮಾಡಿಕೊಂಡು ಚಪಾತಿಯಾಕಾರದಲ್ಲಿ ಲಟ್ಟಿಸಿ. ಬಿಸಿ ತವದ ಮೇಲೆ ಚಪಾತಿಯನ್ನು ಎಣ್ಣೆ ಅತವಾ ತುಪ್ಪ ಹಾಕಿ ಬೇಯಿಸಿ. ಈ ಹೊಸ ಬಗೆಯ ಚಪಾತಿ ತಿನ್ನಲು ಸೊಗಸಾಗಿರುತ್ತದೆ.

maavinakaayi poori

ಮಾವಿನಹಣ್ಣಿನ ಪೂರಿ

ಬೇಕಾಗುವ ಪದಾರ್‍ತಗಳು: ಮಾವಿನಹಣ್ಣು ದೊಡ್ಡದು 1, ಗೋದಿಹಿಟ್ಟು, ಮೊಸರು 4 ಚಮಚ, ಸಕ್ಕರೆ 4 ಚಮಚ, ತುಪ್ಪ 2 ಚಮಚ, ಉಪ್ಪು ರುಚಿಗೆ ತಕ್ಕಶ್ಟು, ಎಣ್ಣೆ ಕರಿಯಲು.

ಮಾಡುವ ಬಗೆ: ಮಾವಿನಹಣ್ಣಿನ ಸಿಪ್ಪೆ ತೆಗೆದು ಅದರ ತಿರುಳನ್ನು ಚೆನ್ನಾಗಿ ಹಿಸುಕಿ ನಂತರ ಆ ರಸಕ್ಕೆ ಮೊಸರು, ಉಪ್ಪು, ತುಪ್ಪ ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಕದಡಿರಿ. ಈ ಮಿಶ್ರಣಕ್ಕೆ ಗೋದಿಹಿಟ್ಟನ್ನು ಹಾಕಿ ಪೂರಿ ಹದಕ್ಕೆ ಕಲಸಿಟ್ಟುಕೊಳ್ಳಿ.  ಒಂದು ಗಂಟೆಯ ನಂತರ ಈ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಆ ಮೇಲೆ ಪೂರಿಯನ್ನು ಲಟ್ಟಿಸಿಕೊಳ್ಳಿ. ಇದನ್ನು ಕಾದ ಎಣ್ಣೆಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಕರಿಯಬೇಕು. ಈ ಪೂರಿಯು ನೋಡಲು ಚೆಂದ ಹಾಗೂ ಸವಿಯಲು ರುಚಿಯಾಗಿರುತ್ತದೆ.

ಮಾವಿನಹಣ್ಣಿನ ಸಾಸಿವೆ

ಬೇಕಾಗುವ ಪದಾರ್‍ತಗಳು: ಮಾವಿನಹಣ್ಣು 4 ಚಿಕ್ಕದು (ಬೆಲ್ಲದ ಹಣ್ಣು), ಬೆಲ್ಲ 4 ಚಮಚ, ಮೊಸರು ಒಂದು ಕಪ್, ತೆಂಗಿನತುರಿ 1 ಕಪ್, ಸಾಸಿವೆ ಕಾಲು ಚಮಚ, ಒಣಮೆಣಸಿನಕಾಯಿ ಎರಡು,ಉಪ್ಪು ರುಚಿಗೆ ತಕ್ಕಶ್ಟು.

ಮಾಡುವ ಬಗೆ: ಮಾವಿನಹಣ್ಣನ್ನು ಸಿಪ್ಪೆ ತೆಗೆದು ಚೆನ್ನಾಗಿ ಹಿಸುಕಿಕೊಳ್ಳಿ.  ತೆಂಗಿನತುರಿ ಹಾಗೂ ಸಾಸಿವೆಯನ್ನು ಹಸಿಮೆಣಸಿನಕಾಯಿಯೊಂದಿಗೆ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ.  ನಂತರ ಇದನ್ನು ಮಾವಿನಹಣ್ಣಿನ ರಸಕ್ಕೆ ಸೇರಿಸಿ ಜೊತೆಗೆ ಉಪ್ಪು, ಬೆಲ್ಲ ಹಾಗೂ ಮೊಸರು ಸೇರಿಸಿ ಕದಡಿರಿ. ನಂತರ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಒಗ್ಗರಣೆ ಹಾಕಿರಿ. ಇದು ಅನ್ನದೊಂದಿಗೆ ತಿನ್ನಲು ಬಲು ಸೊಗಸಾಗಿರುತ್ತದೆ.

ಮಾವಿನಹಣ್ಣಿನ ನೀರುಗೊಜ್ಜು (ಬೆಲ್ಲದ ಹಣ್ಣು ಚಿಕ್ಕದು)

ಬೇಕಾಗುವ ಪದಾರ್‍ತಗಳು: ಮಾವಿನ ಹಣ್ಣು ಚಿಕ್ಕದು 5, 5 ಚಮಚ ಬೆಲ್ಲ ಅತವಾ ಸಕ್ಕರೆ, ನೀರು, ಉಪ್ಪು ರುಚಿಗೆ ತಕ್ಕಶ್ಟು.

ಮಾಡುವ ಬಗೆ: ಒಂದು ಪಾತ್ರೆಯಲ್ಲಿ ಮಾವಿನಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಹಿಸುಕಿ. ರಸಕ್ಕೆ ನೀರು, ಉಪ್ಪು, ಬೆಲ್ಲ ಅತವಾ ಸಕ್ಕರೆ ಹಾಕಿ ಚೆನ್ನಾಗಿ ಕದಡಿರಿ. ನಂತರ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ 2 ಹಾಕಿ ಒಗ್ಗರಣೆ ಹಾಕಿ. ಇದನ್ನು ಅನ್ನದೊಂದಿಗೆ ತಿನ್ನಲು ಹಾಗೂ ಕುಡಿಯಲು ಹಿತವಾಗಿರುತ್ತದೆ.

ಕಲ್ಪನಾ ಹೆಗಡೆ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: