ಏನಿದು ಕಾನ್ಪೆಡರೇಶನ್ ಕಪ್?

ಅನಂತ್ ಮಹಾಜನ್

Cup-with-FIFA-tag

ಇದೊಂದು ಜಗತ್ತಿನೆಲ್ಲೆಡೆ ಹೆಸರುವಾಸಿಯಾದ ಪಂದ್ಯಾವಳಿಯಾಗಿದ್ದು, ಸದ್ಯಕ್ಕೆ ಪ್ರತೀ ನಾಲ್ಕು ವರುಶಗಳಿಗೊಮ್ಮೆ ಆಡಲಾಗುತ್ತದೆ. ಈ ರೋಚಕ ಪಂದ್ಯಾವಳಿಯಲ್ಲಿ ಆರು ಬೇರೆ ಬೇರೆ ಕಾನ್ಪೆಡರೇಶನ್ ಪಯ್ಪೋಟಿಗಳನ್ನು (championship) ಗೆದ್ದವರು ಪಾಲ್ಗೊಳ್ಳುತ್ತಾರೆ. ಈ ಪಂದ್ಯಾವಳಿಗೆ ಏಳನೆಯ ತಂಡವಾಗಿ ಪೀಪಾ (FIFA) ವಿಶ್ವ ಕಪ್ ಗೆದ್ದ ತಂಡವೂ ಮತ್ತು ಎಂಟನೆಯ ತಂಡವಾಗಿ ಆತಿತೇಯ ನಾಡು ಪಾಲ್ಗೊಳ್ಳುತ್ತದೆ. ಈ ಮಾದರಿಯ ಪಂದ್ಯಾವಳಿ ಸಾಮಾನ್ಯವಾಗಿ ಪೀಪಾ (FIFA) ವರ್‍ಲ್ಡ್ ಕಪ್ ನಡೆಯುವ ಒಂದು ವರುಶದ ಮುಂಚೆ ಆಡಲಾಗುತ್ತಿದ್ದು , ವಿಶ್ವಕಪ್ ಎಂಬ ಮಹಾಕಾಳಗದ ತಯಾರಿ ಪಂದ್ಯಗಳು ಎಂದೇ ನೋಡಲಾಗುತ್ತದೆ .

ಆರು ಬೇರೆ ಬೇರೆ ಕಾನ್ಪೆಡರೇಶನ್ ಪಯ್ಪೋಟಿಗಳು

  1. ಯುಎಪಾ (UEFA) – ಯುರೋಪಿನಲ್ಲಿ ಪ್ರತಿ 4 ವರುಶಗಳಿಗೊಮ್ಮೆ ನಡೆಯುವ ಯುಎಪಾ ಯುರೋ (UEFA EURO) ಪಂದ್ಯಾವಳಿಯನ್ನು ಗೆದ್ದವರು .
  2. ಕಾನ್ಮೆಬೊಲ್ (CONMEBOL) – ತೆಂಕಣ ಅಮೇರಿಕ ಕಾಲ್ಚೆಂಡು ಒಕ್ಕೂಟ (South American Football Association) ನಡೆಸುವ ಪಂದ್ಯಾವಳಿಯನ್ನು ಗೆದ್ದವರು . ಇದು ಕೊಪಾ ಅಮೇರಿಕಾ (Copa America) ಎಂದು ಕೂಡ ಹೆಸರುವಾಸಿಯಾಗಿದೆ .
  3. ಕಾಂಕಾಕ್ಯಾಪ್ (CONCACAF) – ಬಡಗಣ ಮತ್ತು ನಡುವಣ ಅಮೇರಿಕ ಹಾಗೂ ಕೆರೀಬಿಯನ್ ಕಾಲ್ಚೆಂಡು ಒಕ್ಕೂಟ (Confederation of North, Central American and Caribbean Association Football) ನಡೆಸುವ ಪಂದ್ಯಾವಳಿಯನ್ನು ಗೆದ್ದವರು
  4. ಕ್ಯಾಪ್ (CAF) – ಆಪ್ರಿಕಾ ಕಾಲ್ಚೆಂಡು ಒಕ್ಕೂಟ (Confederation of African Football) ನಡೆಸುವ ಪಂದ್ಯಾವಳಿಯನ್ನು ಗೆದ್ದವರು
  5. ಆಪಕ್ (AFC) – ಏಶಿಯನ್ ಕಾಲ್ಚೆಂಡು ಒಕ್ಕೂಟ (Asian Football Confederation) ನಡೆಸುವ ಪಂದ್ಯಾವಳಿಯನ್ನು ಗೆದ್ದವರು
  6. ಒಪಕ್ (OFC) – ಒಶ್ಯಾನಿಯ ಕಾಲ್ಚೆಂಡು ಒಕ್ಕೂಟ (Oceania Football Confederation) ನಡೆಸುವ ಪಂದ್ಯಾವಳಿಯನ್ನು ಗೆದ್ದವರು

ಹೀಗೆ ಆರು ಬೇರೆ ಬೇರೆ ಕಂಡಗಳಲ್ಲಿ ನಡೆವ ಆಟಗಳಲ್ಲಿ ಗೆದ್ದವರೂ, ಪೀಪಾ (FIFA) ವಿಶ್ವ ಕಪ್ ಗೆದ್ದವರೂ ಹಾಗೂ ಆತಿತೇಯ ನಾಡು ಸೇರಿ ಸೆಣೆಸುವ ಪಂದ್ಯಾವಳಿಯೇ ಪೀಪಾ ಕಾನ್ಪೆಡರೇಶನ್ ಕಪ್ (FIFA Confederation Cup). ಈ ಬಾರಿಯ ಪಂದ್ಯಾವಳಿಯನ್ನು ಬ್ರೆಜಿಲ್ಲಿನಲ್ಲಿ ನಡೆಸಲಾಗುತ್ತಿದ್ದು , ಇದೆ ಜೂನ್ 15 ರಿಂದ್ 30 ರವರೆಗೆ ನಡೆಸಲಾಗುತ್ತದೆ.

ಹಿನ್ನೆಲೆ

1992 ರಲ್ಲಿ ಶುರುವಾದ ಈ ಪಂದ್ಯಾವಳಿಯನ್ನು ಸವ್ದಿ ಅರೇಬಿಯಾ (Saudi Arabia) ದೇಶವು ಕಿಂಗ್ ಪಾಹದ್ ಕಪ್ (King Fahd Cup) ಅನ್ನುವ ಹೆಸರಿನಿಂದ ಶುರು ಮಾಡಿತ್ತು. 1992 ಹಾಗು 1995ರ ಪಂದ್ಯಾವಳಿಯ ನಂತರ ಪೀಪಾ ಈ ಪಂದ್ಯಾವಳಿಯ ಜವಾಬ್ದಾರಿಯನ್ನುವಹಿಸಿಕೊಂಡಿತು . 2005 ರಿಂದ ಪ್ರತಿ 4 ವರುಶಗಳಿಗೊಮ್ಮೆ ಈ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ .
ಸಾಮಾನ್ಯವಾಗಿ, ಈ ಪಂದ್ಯಾವಳಿಯನ್ನು ಪೀಪಾ ವಿಶ್ವ ಕಪ್ ನಡೆಸುವ ಆತಿತೇಯ ನಾಡಿನ ನೆಲದಲ್ಲಿಯೇ ಒಂದು ವರುಶ ಮುಂಚೆ ನಡೆಸಲಾಗುತ್ತದೆ.

ಇದುವರೆಗೂ ಕಾನ್ಪೆಡರೇಶನ್ ಕಪ್ ಗೆದ್ದಿರುವವರು

1992 – ಅರ್‍ಜೆಂಟೀನಾ
1995 – ಡೆನ್ಮಾರ್‍ಕ್
1997 – ಬ್ರೆಜಿಲ್
1999 – ಮೆಕ್ಸಿಕೋ
2001 – ಪ್ರಾನ್ಸ್
2003 – ಪ್ರಾನ್ಸ್
2005 – ಬ್ರೆಜಿಲ್
2009 – ಬ್ರೆಜಿಲ್

ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲ್ (9) ಗಳಿಸಿದ ಕೀರ್‍ತಿಯನ್ನು ಸದ್ಯಕ್ಕೆ ಮೆಕ್ಸಿಕೋ ತಂಡದ ಬ್ಲಾನ್ಕೋ ಮತ್ತು ಬ್ರೆಜಿಲ್ ತಂಡದ ರೋನಲ್ದಿನ್ಯೋ ಹಂಚಿಕೊಂಡಿದ್ದಾರೆ.

ಚಿನ್ನದ ಚೆಂಡು (Golden Ball) ಗೆದ್ದವರು – ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರು

1992 – ಗೇಬ್ರಿಯಲ್ ಬತಿಸ್ತುಟ (Gabriel Batistuta) – ಅರ್‍ಜೆಂಟೀನಾ – 2 ಗೋಲ್
1995 – ಲೂಯಿಸ್ ಗಾರ್‍ಸಿಯಾ (Luis Garcia ) – ಮೆಕ್ಸಿಕೋ – 3 ಗೋಲ್
1997 – ರೊಮಾರಿಯೋ (Romario) – ಬ್ರೆಜಿಲ್ – 7 ಗೋಲ್
1999 – ರೋನಲ್ದಿನ್ಯೋ (Ronaldinho)ಮೆಕ್ಸಿಕೋ – ಬ್ರೆಜಿಲ್ – 6 ಗೋಲ್
2001 – ರಾಬರ್‍ಟ್ ಪಿರೆಸ್ (Robert Pires) – ಪ್ರಾನ್ಸ್ – 2 ಗೋಲ್
2003 – ತಿಯೆರಿ ಆನ್ರಿ (Thierry Henry) – ಪ್ರಾನ್ಸ್ – 4 ಗೋಲ್
2005 – ಆಡ್ರಿಯಾನೊ (Adriano) – ಬ್ರೆಜಿಲ್ – 5 ಗೋಲ್
2009 – ಲೂಯಿಸ್ ಪಾಬಿಯಾನೋ (Luis Fabiano) – ಬ್ರೆಜಿಲ್ – 5 ಗೋಲ್

2013 ಪೀಪಾ ಕಾನ್ಪೆಡರೇಶನ್ ಕಪ್ ಪ್ರತಿಬಟನೆ

brazil-protests

ಈ ಬಾರಿ ನಡೆಯುತ್ತಿರುವ ಪಂದ್ಯಾವಳಿಯ ಹೊತ್ತಿನಲ್ಲಿಯೇ ಬ್ರೆಜಿಲ್ಲಿನಲ್ಲಿ ಬಾರೀ ಪ್ರತಿಬಟನೆ ನಡೆಯುತ್ತಿದ್ದು, ಸರಿಸುಮಾರು 10 ಲಕ್ಶ ಜನರು ಪ್ರತಿಬಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದರ ಮೂಲ ಕಾರಣ, ಸರ್‍ಕಾರದ ಲಂಚಗುಳಿತನ (corruption), ಹೆಚ್ಚಿನ ಬೆಲೆ (inflation) ಮತ್ತು ಸಾರ್‍ವಜನಿಕ ಸೇವೆಗಳಲ್ಲಿ (Public Services) ಹೂಡಿಕೆಯ ಕೊರತೆ ಎಂದು ಹೇಳಲಾಗುತ್ತಿದೆ. ಈ ಪಾಟಿ ಜೋರಾದ ಪ್ರತಿಬಟನೆಯ ನಡುವೆಯೂ, ಈ ಪಂದ್ಯಾವಳಿಯನ್ನು ಯಾವದೇ ಹಂತದಲ್ಲೂ ರದ್ದುಪಡಿಸದೇ ಇರಲು ಪೀಪಾ ನಿರ್‍ದರಿಸಿದೆ.

(ಚಿತ್ರ: espn.go.com, www.cbc.ca)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: