ಮಿದುಳಿನ ಏಡಿಹುಣ್ಣು: ಗ್ಲಿಯೊಬ್ಲಾಸ್ಟೊಮಾ

ಯಶವನ್ತ ಬಾಣಸವಾಡಿ.

ನಾನು ಕಳೆದ 7 ತಿಂಗಳುಗಳಿಂದ ಅಮೇರಿಕಾದಲ್ಲಿ ಅರಕೆ (research) ಮಾಡುತ್ತಿರುವ ಮಿದುಳು ಏಡಿಹುಣ್ಣಿನ (brain cancer) ಬಗೆಗಳಲ್ಲೊಂದಾದ ಗ್ಲಿಯೊಬ್ಲಾಸ್ಟೊಮಾ ಕುರಿತು ಈ ಬರಹದಲ್ಲಿ ಬರೆಯುತ್ತಿರುವೆ.

Glioblastoma_honalu

ಗ್ಲಿಯೊಬ್ಲಾಸ್ಟೊಮಾ ಎಂದರೇನು?

ಸೂಲುಗೂಡುಗಳ (cells) ಅಳತೆ ತಪ್ಪಿದ ಬೆಳವಣಿಗೆಯಿಂದ ಉಂಟಾಗುವ ಬೇನೆಯನ್ನು ಏಡಿಹುಣ್ಣು (cancer) ಎಂದು ಗುರುತಿಸಲಾಗುತ್ತದೆ.  ಈ ಬೇನೆಯನ್ನು ‘ಗಡ್ಡೆ’ (tumor) ಎಂದೂ ಕರೆಯಬಹುದು. ಗಡ್ಡೆ ಬಾದಿಸುವ ಸೂಲುಗೂಡಿನ ಬಗೆ ಹಾಗು ಒಡಲಿನ ಬಾಗಗಳ ಅನುಗುಣವಾಗಿ  ಏಡಿಹುಣ್ಣುಗಳನ್ನು  ವಿಂಗಡಿಸಲಾಗಿದೆ. ಮಿದುಳಿನಲ್ಲಿ ಉಂಟಾಗುವ ಗಡ್ಡೆಗಳನ್ನು ‘ಮಿದುಳಿನ ಏಡಿಹುಣ್ಣು’ , ಮಿದುಳಿನ ಗಡ್ಡೆ (brain tumor)  ಎಂದು ಹೇಳಬಹುದು. ಮಿದುಳಿನ ಸೂಲುಗೂಡುಗಳ ಬಗೆಗಳಲ್ಲೊಂದಾದ ಅರಿಲ್ಬಗೆಯ (star-shaped astrocytes)  ಸೂಲುಗೂಡುಗಳಿಂದ ಹುಟ್ಟುವ  ಗಡ್ಡೆಯನ್ನು ’ಗ್ಲಿಯೊಬ್ಲಾಸ್ಟೊಮಾ’ ಎಂದು ಹೆಸರಿಸಲಾಗಿದೆ.

ಗ್ಲಿಯೊಬ್ಲಾಸ್ಟೊಮಾ  ಸ್ತಿತಿಗತಿ

ಇದುವರೆಗೆ 120 ಕ್ಕೂ  ಹೆಚ್ಚಿನ  ಬಗೆಯ ಮಿದುಳಿನ ಏಡಿಹುಣ್ಣುಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಗ್ಲಿಯೊಬ್ಲಾಸ್ಟೊಮಾ ಬಹಳ ಮುಕ್ಯವಾದದ್ದು. ಗ್ಲಿಯೊಬ್ಲಾಸ್ಟೊಮಾ  ಹೆಚ್ಚಾಗಿ  ಮಿದುಳಿನ  ನಿಮ್ಮಿದುಳಿನಲ್ಲಿ  (cerebrum)  ಕಾಣಸಿಗುತ್ತದೆ.  ಒಮ್ಮೊಮ್ಮೆ  ಇದು ಮಿದುಳುಬಳ್ಳಿ  (spinal cord) ಹಾಗು  ಇತರ ಮಿದುಳಿನ ಬಾಗಗಳಲ್ಲೂ ಕಾಣಿಸಬಹುದು.

ಇತರ ಏಡಿಹುಣ್ಣುಗಳಿಗೆ ಹೊಲಿದರೆ, ಗ್ಲಿಯೊಬ್ಲಾಸ್ಟೊಮಾದಿಂದ ಬಳಲುತ್ತಿರುವವರ ಸಂಕ್ಯೆ ತುಂಬಾ ಕಡಿಮೆ. ಪ್ರತಿ 1,00,000 ಮಂದಿಯಲ್ಲಿ ಸುಮಾರು ಇಬ್ಬರು ಇಲ್ಲವೇ ಮೂವರಿಗೆ ಈ ಬೇನೆಯು ಕಾಡುತ್ತದೆ. ಮಕ್ಕಳಿಗೆ ಹೋಲಿಸಿದರೆ,ವಯಸ್ಕರರಲ್ಲಿ, ಅದರಲ್ಲೂ ಗಂಡಸರಲ್ಲಿ  ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಬೇನೆ ತಗುಲಿದವರು ಈ ಹೊತ್ತಿಗೆ ಎಟಕುವ ಆರಯ್ಕೆಯಿಂದ  ಹೆಚ್ಚೆಂದರೆ  ಒಂದು ವರುಶ ಬದುಕಬಹುದು. ಬಳಲುವವರ ಸಂಕ್ಯೆಯಿಂದ ಅಲ್ಲದಿದ್ದರೂ, ಕಾಡುವ ತೀವ್ರತೆ ಹಾಗು ಸರಿಯಾದ ಆರಯ್ಕೆ ಇಲ್ಲದಿರುವುದರಿಂದಾಗಿ, ಈ ಬೇನೆಯು ಮದ್ದರಿಮೆಯಲ್ಲಿ ಎಲ್ಲರ ಗಮನ ಸೆಳೆದಿದೆ.

ಏಡಿಹುಣ್ಣುಗಳನ್ನು ಅವುಗಳು ಬೆಳೆಯುವ, ಹಬ್ಬುವ ಹಾಗು ಹಾನಿಯನ್ನು ಉಂಟುಮಾಡುವ ಬಿರುಸಿಗನುಸಾರವಾಗಿ, 1) ನವಿರು (benign) ಇಲ್ಲವೇ 2) ಕೇಡುಂಟುಮಾಡುವ (malignant) ಏಡಿಹುಣ್ಣುಗಳೆಂದು ಎರಡು ಗುಂಪುಗಳಾಗಿ ವಿಂಗಡಿಸಬಹುದಾಗಿದೆ.

ಗ್ಲಿಯೊಬ್ಲಾಸ್ಟೊಮಾ  ಕೇಡುಂಟುಮಾಡುವ  ಏಡಿಹುಣ್ಣುಗಳ ಗುಂಪಿಗೆ ಸೇರಿದ್ದು,  ಕಡಿಮೆ ಹೊತ್ತಿನಲ್ಲಿ ಹೆಚ್ಚಿನ ಸಂಕ್ಯೆಯಲ್ಲಿ ಹೆರುವ  ಅಳವುಳ್ಳದ್ದಾಗಿದೆ. ಗ್ಲಿಯೊಬ್ಲಾಸ್ಟೊಮಾ  ಮಿದುಳಿನ ಸೂಲುಗೂಡುಗಳ ಬಗೆಗಳಲ್ಲೊಂದಾದ ಅರಿಲ್ಬಗೆಯ (star-shaped astrocytes)  ಸೂಲುಗೂಡಿನಿಂದ ಹುಟ್ಟುತ್ತದೆ. ಆದುದರಿಂದ  ಹದುಳದ (healthy) ಮಿದುಳಿನ ಸೂಲುಗೂಡುಕಟ್ಟಿನ (tissue)  ಒಳಗೆ ನುಸುಳಲು ಹಾಗು ಅವುಗಳ ಜೊತೆಯಲ್ಲೇ  ಬೆಳೆಯಲು  ಈ ಅಂಶವು ಸಹಕಾರಿಯಾಗಿದೆ. ಇದು  ಕೇಡುಂಟುಮಾಡುವ ಏಡಿಹುಣ್ಣುಗಳ ಗುಂಪಿಗೆ ಸೇರಿದ್ದರೂ,  ಇತರ ಕೇಡುಂಟುಮಾಡುವ ಏಡಿಹುಣ್ಣುಗಳಂತೆ ದೇಹದ ಬೇರೆ ಅಂಗಗಳಿಗೆ ಹರಡುವುದು ತುಂಬಾ ಕಡಿಮೆ.

ಕಾಡುವ ಬಗೆ

ಗ್ಲಿಯೊಬ್ಲಾಸ್ಟೊಮಾ ತುಂಬಾ ಬೇಗ ಬೆಳೆಯುವ ಗಡ್ಡೆಯಾದ್ದರಿಂದ, ಹಲವಾರು ರೋಗದ ಕುರುಹುಗಳು, ಗಡ್ಡೆಯು ಮಿದುಳಿನ  ಸೂಲುಗೂಡುಕಟ್ಟಿನ ಮೇಲೆ ಬೀರುವ  ಒತ್ತಡದಿಂದ ಉಂಟಾಗುತ್ತದೆ. ಮುಕ್ಯವಾದ ಕುರುಹುಗಳೆಂದರೆ ತಲೆ ನೋವು, ಓಕರಿಕೆ, ವಾಂತಿ ಹಾಗು ತೂಕಡಿಕೆ.  ಮಿದುಳಿನ ಒಳಗೆ ಗಡ್ಡೆ ಇರುವ/ಬೆಳೆಯುವ ತಾಣದನುಸಾರ, ಬೇನೆಬಿದ್ದವರ  ಮಯ್ಯಲ್ಲಿ  ಒಕ್ಕೆಲದ ನಲುಗುವಿಕೆ (one-sided weakness), ನೆನಪಿನ, ಮಾತುಗಾರಿಕೆಯ, ಹಾಗು ನೋಟದ ಏರುಪೇರುಗಳನ್ನೂ ಕಾಣಬಹುದು.  

ಆರಯ್ಕೆ/ಮಂಜುಗೆ

ಈ ಬಾದೆಯನ್ನುಂಟು ಮಾಡುವ  ಕಾರಣಗಳನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಈ ಬೇನೆಯನ್ನು ಕೊನೆಗಾಣಿಸುವ ಮದ್ದಿಲ್ಲದಿದ್ದರೂ, ರೋಗಿಯ ಆಯುಸ್ಸನ್ನು  ಹೆಚ್ಚಿಸುವ ಹಾಗು ಬೇನೆಯ ಕುರುಹುಗಳನ್ನು ಹೋಗಲಾಡಿಸುವ  ನಿಟ್ಟಿನಲ್ಲಿ,  ಕೆಳಗಿನ  ಹಲಮಾದರಿಯ ಮಾಂಜುಗೆಯನ್ನು  ಅನುಸರಿಸಲಾಗುತ್ತಿದೆ.

1)  ಮಿದುಳಿನ ಒತ್ತಡವನ್ನು ಕಡಿಮೆಮಾಡುವುದು

2)  ಕೊಯ್ಯಾರಯ್ಕೆ (surgery) ಮೂಲಕ ಗಡ್ಡೆಯನ್ನು ಹೊರತೆಗೆಯುವುದು: ಈ ಗಡ್ಡೆಯಲ್ಲಿ ಬೆರಳಿನಾಕಾರದ ಇಟ್ಟಳ/ರಚನೆಯು ಸುತ್ತಲಿನ ಹದುಳದ (healthy) ಮಿದುಳಿನೊಳಕ್ಕೆ ಚಾಚಿಕೊಳ್ಳುವುದರಿಂದ, ಗಡ್ಡೆಯ ಎಲ್ಲಾ ಬಾಗಗಳನ್ನು ತೆಗೆಯಲು ಬರುವುದಿಲ್ಲ.  ಮಾತು ಹಾಗು  ಒಡಲಿನ ಹೊಂದಾಣಿಕೆಯನ್ನು ಸರಿದೂಗಿಸುವ ಕೆಲಸವನ್ನು ಮಾಡುವ ಮಿದುಳಿನ ಅಕ್ಕ-ಪಕ್ಕದಲ್ಲಿ  ಗಡ್ಡೆಯು  ಬೆಳೆದರೆ, ಅದರ ಕೊಯ್ಯಾರಯ್ಕೆ ಇನ್ನೂ ಕಶ್ಟವಾಗುತ್ತದೆ.

3) ಕೊಯ್ಯಾರಯ್ಕೆಯ ಜೊತೆಗೆ ತೋರ‍್ಕದಿರುಮಾಂಜುಗೆ (radiotherapy) ಹಾಗು ಇರ‍್ಪುಮಾಂಜುಗೆ (chemotherapy) ಬಳಕೆಯಲ್ಲಿವೆ.

ಈ  ಮಾದರಿಯ ಮಾಂಜುಗೆಯಿಂದ ರೋಗಿಯ ಆಯುಸ್ಸನ್ನು  ಹೆಚ್ಚೆಂದರ  ಹನ್ನೆರಡರಿಂದ  ಹದಿನಾಲ್ಕು-ಹದಿನಯ್ದು ತಿಂಗಳವರಗೆ  ಏರಿಸಬಹುದಾಗಿದೆ. ಈ ಬೇನೆಯನ್ನು ಗುಣಪಡಿಸಲು ಇರುವ ಬಹು ಮುಕ್ಯ ತೊಡಕುಗಳೆಂದರೆ:

1) ಈ ಗಡ್ಡೆಗಳು ಒಂದಕ್ಕಿಂತ ಹೆಚ್ಚಿನ ಬಗೆಯ ಸೂಲುಗೂಡಿನಿಂದ ಮಾಡಲ್ಪಟ್ಟಿರುವುದು.

2) ನೆತ್ತರು-ಮಿದುಳು ಬೇರ‍್ಪಿನಿಂದಾಗಿ (blood brain barrier) ಮದ್ದು ಗಡ್ಡೆಯನ್ನು ತಲುಪದೇ ಇರುವುದು.

3) ಗಡ್ಡೆಯಲ್ಲಿರುವ ಕೆಲವು ಬಗೆಯ ಸೂಲುಗೂಡುಗಳು ಮಾತ್ರ ಈಗಿನ ಮಾಂಜುಗೆಗೆ  ಮಣಿಯುವುದು.

4) ಗಡ್ಡೆಯ ಮರುಕಳಿಸುವಿಕೆ: ಮರುಕಳಿಸಿದ ಗಡ್ಡೆಯು ಮೂಲ ಗಡ್ಡೆಗೆ ಹೋಲಿಸಿದರೆ, ಬಹಳ ರಬಸವಾಗಿ ಬೆಳೆಯುತ್ತದೆ.

ಬಳಕೆಯಲ್ಲಿರುವ ಆರಯ್ಕೆಯ ಪದ್ದತಿಯಲ್ಲಿರುವ ಕೊರತೆಯನ್ನು  ಹೋಗಲಾಡಿಸಲು, ಅಮೇರಿಕಾದ ನಮ್ಮ ಅರಕೆಮನೆಯಲ್ಲಿ ನಡೆಯುತ್ತಿರುವಂತೆ ಜಗತ್ತಿನ ಹಲವೆಡೆ ಹಲವಾರು ಮದ್ದರಿಮೆಯ ಕೆಲಸಗಳು ನಡೆಯುತ್ತಿವೆ.

1. ಏಡಿಹುಣ್ಣಿನ ಸೂಲುಗೂಡುಗಳನ್ನು ಸಾಯಿಸುವ ನಂಜುಳಗಳನ್ನು (oncolytic virus) ಬಳಸುವುದು. ನಮ್ಮ ಅರಕೆ ಮನೆಯಲ್ಲಿ ಹೆಚ್ಚಿನ ಗೆಯ್ಮೆಯು, ಈ ವಿಶಯವಾಗಿ ನಡೆಯುತ್ತಿದೆ.

2. ಮುನ್ನುಮುದಿಪುದೊಳೆ ತಡೆಯುಗವನ್ನು (proteasome inhibitor) ಬಳಸಿ, ಬೆಳೆಯಲು, ಹಬ್ಬಲು ಹಾಗು ಹಾನಿಯನ್ನುಂಟು ಮಾಡಲು ಏಡಿಹುಣ್ಣಿನ  ಸೂಲುಗೂಡುಗಳಿಗೆ  ಬೇಕಾದ ಮುನ್ನನ್ನು (protein) ಕಡಿಮೆಮಾಡುವ ಇಲ್ಲವೇ ಇಲ್ಲವಾಗಿಸುವುದು.

3. ಏಡಿಹುಣ್ಣು  ಉಂಟುಮಾಡುವು ಸೂಲುಗೂಡುಗಳಲ್ಲಿ ಕೆಲವೊಂದು ಪೀಳಿಗಳ ಚಟುವಟಿಕೆ ತುಂಬಾ ಹೆಚ್ಚಿರುತ್ತದೆ. ಇಂತ ಪೀಳಿಗಳ ಲವಲವಿಕೆಯನ್ನು ಇಳಿಮುಕವಾಗಿಸುವುದೂ,  ಅರಕೆ ನಡೆಯುತ್ತಿರುವ ಪಟ್ಟಿಗಳಲ್ಲೊಂದು.

ಈ ಮದ್ದರಿಮೆಯ ಗುರಿ, ಸದ್ಯದ ಮಾಂಜುಗೆಯ ಮಾದರಿಯ ಜೊತಗೆ ಸರಿಹೊಂದಿಸುವುದು (combination therapy), ಹಾಗು  ಹದುಳದ ಸೂಲುಗೂಡುಗಳಿಗೆ ತೊಂದರೆಯಾಗದಂತೆ, ಏಡಿ ಹುಣ್ಣಿನ ಸೂಲುಗೂಡುಗಳನ್ನು ನಾಟುವ ಮದ್ದಾರಯ್ಕೆಯನ್ನು ಉಂಟುಮಾಡುವುದಾಗಿದೆ. ಈ ನಿಟ್ಟಿನಲ್ಲಿ ಬಹಳಶ್ಟು ಅರಿಮೆಗಳು ಮದ್ದಿನ ಒರೆತದ  (clinical trial) ಮಟ್ಟವನ್ನು ಮುಟ್ಟಿವೆ.

ಈ ಅರಕೆಗಳಲ್ಲಿ ಕೆಲವೊಂದಶ್ಟಾದರು ಗೆಲುವನ್ನು ಕಂಡರೆ, ಮುಂದಿನ ದಿನಗಳಲ್ಲಿ ಗ್ಲಿಯೊಬ್ಲಾಸ್ಟೊಮಾಗೆ ತುತ್ತಾಗುವವರ ಬಾಳು ಹಸನಾಗಲಿದೆ.

ನೆರವು: ABTA, radiologyteacher

ಈ ಕುರಿತ ಓಡುತಿಟ್ಟ: youtube

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. Mahesh Bhat says:

    ಗ್ಲಿಯೋಬ್ಲಾಸ್ಟೋಮಾಗೆ ಗುರಿಯಾದವರ ಸಾವು ಹೆಚ್ಚು ಕಡಿಮೆ ಖಚಿತ ಎಂದು ನಿಮ್ಮ ಲೇಖನ ತಿಳಿಯಪಡಿಸುತ್ತದೆ. ವೈರಸ್ ಗಳನ್ನು ಬಳಸಿ ಏಡಿ ಹುಣ್ಣುಗಳನ್ನು ನಿವಾರಿಸುವ ಪ್ರಯತ್ನ ನಡೆದಿರುವುದು ಆಶ್ಚರ್ಯಕರವಾಗಿದೆ. ಗಹನವಾದ ವಿಷಯವನ್ನು ಸರಳವಾಗಿ ತಿಳಿಸಿದ ಯಶವಂತ ಬಾಣಸವಾಡಿಯವರಿಗೆ ಧನ್ಯವಾದಗಳು

  2. Mahesh Bhat… ನಿಮ್ಮ ನಲ್ಮೆಯ ಮಾತುಗಳಿಗೆ ನನ್ನಿ.
    ನಿಮಗೆ ತಿಳಿದಿರಬಹುದು..ಸಾಮಾನ್ಯವಾಗಿ ನಂಜುಳಗಳು (ವಯ್ರಸ್), ಸೂಲುಗೂಡುಗಳನ್ನು ಹೊಕ್ಕು, ತಮ್ಮ ಸಂಕೆಯನ್ನು ಹೆಚ್ಚಿಸಿಕೊಂಡು, ಸೂಲುಗೂಡುಗಳನ್ನು ಹೊಡೆದು ಹೊರಬರುತ್ತವೆ. ಹೊರಬಂದ ನಂಜುಳಗಳು ಮತ್ತೆ ಸುತ್ತಮುತ್ತಲಿನ ಸೂಲುಗೂಡುಗಳನ್ನು ಹೊಕ್ಕುತ್ತವೆ. ಈ ರೀತಿಯಾಗಿ ಉಸಿರುಗಗಳಲ್ಲಿ (organism) ಬೇನೆಯನ್ನುಂಟು ಮಾಡುತ್ತವೆ.

    ಇಲ್ಲಿ ಮುಕ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ ೧) ನಂಜುಳಗಳು, ಬಹು ಬೇಗನೆ ಬೆಳೆಯುವ/ಹೆರುವ ಸೂಲುಗೂಡುಗಳನ್ನು ಗುರಿಯಾಗಿಸಿಕೊಳ್ಳುತ್ತವೆ. ೨) ನಂಜುಳಗಳು ಸೂಲುಗೂಡನ್ನು, ಹೊಕ್ಕಲು, ತಮ್ಮ ಸಂಕೆಯನ್ನು ಹೆಚ್ಚಿಸಿಕೊಳ್ಳಲು ಹಾಗು ಸೂಲುಗೂಡನ್ನು ಬಾದಿಸಲು/ಹೊಡೆಯಲು…ಹೀಗೆ ಪ್ರತಿಯೊಂದು ಗೆಯ್ಮೆಗೂ ಬಗೆ-ಬಗೆಯ ಪೀಳಿಗಳನ್ನು (genes) ಹೊಂದಿರುತ್ತವೆ.
    ೧) ಹದುಲದ ಸೂಲುಗೂಡಿಗೆ ಹೋಲಿಸಿದರೆ, ತುಂಬಾ ಬೇಗನೆ ಬೆಳೆಯುವ ಏಡಿಹುಣ್ಣಿನ ಸೂಲುಗೂಡುಗಳೆ ನಂಜುಳಗಳ ಗುರಿ. ೨) ಉಸಿರು ಚಳಕಿನರಿಮೆಯ (biotechnology) ನೆರವಿನಿಂದ ಹದುಳದ (healthy) ಸೂಲುಗೂಡನ್ನು ಬಾದಿಸದ, ಏಡಿಹುಣ್ಣಿನ ಸೂಲುಗೂಡಿನಲಶ್ಟೆ ಬೆಳೆಯುವ ಹಾಗು ಹಾನಿಯನ್ನುಂಟು ಮಾಡುವ ನಂಜುಳಗಳನ್ನು ತಯಾರಿಸಬಹುದಾಗಿದೆ. ಜೊತೆಗೆ ಏಡಿಹುಣ್ಣುಗಳನ್ನು ಕೊಲ್ಲಲು ನೆರವಾಗುವ ಪೀಳಿಗಳನ್ನೂ ಈ ನಂಜುಳಗಳಲ್ಲಿ ಸೇರಿಸಿ, ಏಡಿಹುಣ್ಣಿನ ಸೂಲುಗೂಡುಗಳಿಗೆ ರವಾನಿಸಬಹುದಾಗಿದೆ. ಹೆಚ್ಚಿನ ನಂಜುಳಗಳನ್ನು ಈ ಬಗೆಯಾಗಿ ಏಡಿಹುಣ್ಣಿನ ಆರಯ್ಕೆಯಲ್ಲಿ ಬಳಸುವ ನಿಟ್ಟಿನಲ್ಲಿ ಮದ್ದರಿಮೆ ಸಾಗಿದೆ.

  1. 05/09/2013

    […] ಅರಕೆ ಮಾಡುತ್ತಿರುವ ಮಿದುಳಿನ ಏಡಿಹುಣ್ಣು ಗ್ಲಿಯೊಬ್ಲಾಸ್ಟಾಮಾ ಕುರಿತು ಬರೆದಿದ್ದೆ. ಮದ್ದರಿಮೆಯಲ್ಲಿ […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *