ಮಲೇಶ್ಯಾದಲ್ಲಿ ಲಿಪಿ ಬದಲಾವಣೆ

ಪ್ರಿಯಾಂಕ್ ಕತ್ತಲಗಿರಿ.

tikahthetinker-blogspot

ಮಲಾಯ್ ನುಡಿಯನ್ನಾಡುವ ಮಂದಿ ಹೆಚ್ಚಿರುವ ನಾಡೇ ಇವತ್ತಿನ ಮಲೇಶ್ಯಾ. ತಮಿಳಿನ ಲಿಪಿ ಪ್ರಬಾವ ಮಲಾಯ್ ನುಡಿಯನ್ನು ಬರೆಯಲು ಬಳಸುತ್ತಿದ್ದ ಲಿಪಿಯ ಮೇಲೂ ಆಗಿತ್ತೆಂದು ಹೇಳಲಾಗುತ್ತದೆ.  ಹಳೆಯ ಮಲಾಯ್ ನುಡಿಯನ್ನು ಬರೆಯಲು ಪಲ್ಲವ, ಕಾವಿ ಮತ್ತು ರೆಂಕಾಂಗ್ ಎಂಬ ಲಿಪಿಗಳನ್ನು ಬಳಸಲಾಗುತ್ತಿತ್ತು. ತಮಿಳುನಾಡನ್ನು 6ನೇ ಶತಮಾನದ ಹೊತ್ತಿನಲ್ಲಿ ಪಲ್ಲವ ಮನೆತನದವರು ಆಳುತ್ತಿದ್ದರು. ಅವರ ಆಳ್ವಿಕೆಯಡಿಯಲ್ಲಿ ತಮಿಳು ನುಡಿಯನ್ನು ಬರೆಯಲು ಮೂಡಿದ ಲಿಪಿಯೇ ಪಲ್ಲವ ಲಿಪಿ. ಇದನ್ನೇ ಬಳಸಿ ಮಲಾಯ್ ನುಡಿಯನ್ನೂ ಬರೆಯಲಾಗುತ್ತಿತ್ತು.

ಕಾವಿ ಮತ್ತು ರೆಂಕಾಂಗ್ ಲಿಪಿ

ಜಾವಾ ಎಂಬ ಹೆಸರುಳ್ಳ ನಾಡುಬಾಗದಲ್ಲಿ ಕಾವಿ ಲಿಪಿಯು ರೂಪುಗೊಂಡಿತ್ತು. ಕಾವಿ ಲಿಪಿಯೂ ತಮಿಳಿನ ಪಲ್ಲವ ಲಿಪಿಯಿಂದ ಮೂಡಿರುವುದು ಎಂದು ಹೇಳಲಾಗುತ್ತದೆ. ನಡು ಸುಮಾತ್ರಾ ಮತ್ತು ತೆಂಕಣ ಸುಮಾತ್ರಾ ನಾಡುಬಾಗದಲ್ಲಿ ಬಳಸಲಾಗುತ್ತಿದ್ದ ಲಿಪಿಯನ್ನು ರೆಂಕಾಂಗ್ ಲಿಪಿ ಎಂದು ಕರೆಯಲಾಗುತ್ತದೆ. ರೆಂಕಾಂಗ್ ಲಿಪಿಯು ಕಾಂಬೋಡಿಯಾದಲ್ಲಿ ಕಂಡುಬರುವ ಹಳೆಯ ಬರಿಗೆಗಳಿಗೆ ಹತ್ತಿರವಿದ್ದಂತೆ ಕಂಡುಬರುತ್ತದೆ. ಸುಮಾರು 18ನೇ ಶತಮಾನದವರೆಗೂ ರೆಂಕಾಂಗ್ ಲಿಪಿಯು ಸುಮಾತ್ರಾ ನಾಡುಬಾಗದಲ್ಲಿ ಬಳಕೆಯಲ್ಲಿದ್ದಿತ್ತು.

ಜಾವಿ ಲಿಪಿ

ಬೇರೆ ಬೇರೆ ನಾಡುಬಾಗಗಳಲ್ಲಿ ಮಲಾಯ್ ನುಡಿಯಾಡುತ್ತಿದ್ದ ಜನರು ಬೇರೆ ಬೇರೆ ಲಿಪಿಗಳನ್ನು ಬಳಸುತ್ತಿದ್ದರು. ಮಲೇಶ್ಯಾದಲ್ಲಿ ಇಸ್ಲಾಮ್ ದರ‍್ಮ ಹಬ್ಬುತ್ತಾ ಬಂದಂತೆ, ಅರೇಬಿಕ್ ಲಿಪಿಗೆ ಹತ್ತಿರವಿರುವ ಜಾವಿ ಲಿಪಿ ಹೆಸರುವಾಸಿಯಾಯಿತು. ಪಲ್ಲವ, ಕಾವಿ ಮತ್ತು ರೆಂಕಾಂಗ್ ಲಿಪಿಗಳು ಜನಬಳಕೆಯಿಂದ ಮರೆಯಾಗತೊಡಗಿ ಮಲಾಯ್ ನುಡಿಯನ್ನು ಬರೆಯಲು ಜಾವಿ ಲಿಪಿ ಬಳಕೆ ಮುನ್ನೆಲೆಗೆ ಬಂದಿತು. ಅರೇಬಿಕ್ ಲಿಪಿಯಲ್ಲಿರುವ ಹಲವಾರು ಬರಿಗೆಗಳನ್ನು ಜಾವಿ ಲಿಪಿ ಕಯ್ ಬಿಟ್ಟು, ಅರೇಬಿಕ್ ಲಿಪಿಯಲ್ಲಿಲ್ಲದ ಕೆಲವು ಬರಿಗೆಗಳನ್ನು ಸೇರಿಸಿಕೊಂಡಿತು. ಮಲಾಯ್ ನುಡಿಯಲ್ಲಿನ ಕೆಲ ಉಲಿಗಳನ್ನು ಬರೆಯಲು ಬೇಕಂತಲೇ ಈ ಕೆಲವು ಬರಿಗೆಗಳನ್ನು ಸೇರಿಸಿಕೊಳ್ಳಲಾಯಿತು.

ಡಚ್ಚರು ಮತ್ತು ಬ್ರಿಟಿಶರ ಆಳ್ವಿಕೆಯಡಿ ಲಿಪಿ ಬದಲಾವಣೆ

ಮಲಾಯ್ ಜನರು ನೆಲೆಸಿದ್ದ ನಾಡುಬಾಗಗಳು ಕೆಲ ವರುಶಗಳ ಕಾಲ ಡಚ್ಚರು ಮತ್ತು ಬ್ರಿಟಿಶರ ಆಳ್ವಿಕೆಯಡಿ ಹಂಚಿಹೋಗಿತ್ತು. ಆ ಹೊತ್ತಿನಲ್ಲಿ ಜಾವಿ ಲಿಪಿಯ ಬಳಕೆ ಕಡಿಮೆಯಾಗುತ್ತಾ ಸಾಗಿ, ರೋಮನ್ ಲಿಪಿಗೆ ಹತ್ತಿರವಿರುವ ಲಿಪಿಗಳು ಈ ನಾಡುಗಳಲ್ಲಿ ಬಳಕೆಗೆ ಬಂದವು. ಡಚ್ಚರ ಮತ್ತು ಬ್ರಿಟಿಶರ ಆಳ್ವಿಕೆಯಡಿ ಡಚ್ ಮತ್ತು ಇಂಗ್ಲೀಶ್ ಕಲಿಕೆಯೇರ‍್ಪಾಡು ಕಟ್ಟಿದ್ದೂ ಬೇರೆ ಲಿಪಿಗಳು ಮುನ್ನೆಲೆಗೆ ಬರಲು ಕಾರಣವಾಯಿತು. ಡಚ್ಚರು ಮತ್ತು ಬ್ರಿಟಿಶರ ಆಳ್ವಿಕೆ ಕೊನೆಗೊಂಡ ಮೇಲೂ, ಮಲಾಯ್ ನುಡಿಗೆ ಬೇರೆ ಬೇರೆ ಲಿಪಿಗಳಿದ್ದವು.

1972ರಲ್ಲಿ ಅಳವಡಿಸಲಾದ ಲಿಪಿ

ಬೇರೆ ಬೇರೆ ಆಳ್ವಿಕೆಯಡಿ ಹಂಚಿ ಹೋಗಿದ್ದ ಮಲೇಶ್ಯಾ ಒಂದೇ ಆಳ್ವಿಕೆಯಡಿ ಬಂದಮೇಲೆ, ಒಂದೇ ಲಿಪಿಯನ್ನು ಮಲಾಯ್ ನುಡಿಗೆ ಅಳವಡಿಸುವ ಕೆಲಸ ಚುರುಕುಗೊಂಡಿತು. ಮಲಾಯ್ ನುಡಿಗೆ ಬಹಳ ಹತ್ತಿರವಿರುವ ನುಡಿಯನ್ನಾಡುವ ಇಂಡೋನೇಶ್ಯಾದ ಜನರೂ ಈ ಲಿಪಿ ಕಟ್ಟಣೆಯ ಕೆಲಸಕ್ಕೆ ಮಲೇಶ್ಯಾದ ಜೊತೆ ಕಯ್ ಜೋಡಿಸಿದರು. ಈ ಕೆಲಸದಿಂದ 1972ರಲ್ಲಿ ರುಮಿ ಲಿಪಿ ಬಳಕೆಗೆ ಬಂತು. ರೋಮನ್ ಲಿಪಿಯನ್ನು ಬಳಸಿಕೊಂಡೇ ರುಮಿ ಲಿಪಿಯನ್ನು ಕಟ್ಟಲಾಗಿದ್ದು, ಇದರಲ್ಲಿ 26 ಬರಿಗೆಗಳಿವೆ. ಇವತ್ತಿನ ದಿನದ ಮಲೇಶ್ಯಾದಲ್ಲಿ ಕಲಿಕೆಯಿಂದಾ ಹಿಡಿದು, ಸರಕಾರದ ವಹಿವಾಟುಗಳವರೆಗೆ ಎಲ್ಲದರಲ್ಲೂ ರುಮಿ ಲಿಪಿಯನ್ನೇ ಬಳಸಲಾಗುತ್ತಿದೆ. ನುಡಿಗೆ ಹತ್ತಿರವಾದ ಲಿಪಿ ಇದಾಗಿದ್ದು, ಇಂಡೋನೇಶ್ಯಾದಲ್ಲಿ ಈ ಲಿಪಿಯನ್ನು ಅಳವಡಿಸಿಕೊಂಡ ಬಳಿಕ ಸಾಕ್ಶರತೆ ಹೆಚ್ಚಿದೆ ಎಂದು ಹೇಳಲಾಗುತ್ತದೆ.

(ಚಿತ್ರ: tikahthetinker.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: