ಶೇರ್… ಶೇರ್… ಶೇರ್… ಎಲ್ನೋಡಿ ಶೇರ್!

– ಅನಂತ್ ಮಹಾಜನ್

Indian-Share-Market-Tips

ಕೆಲವರು ಕೇವಲ ಇದರ ಬಗ್ಗೆಯೇ ಮಾತಾಡುತ್ತಾರೆ, ಕೆಲವರು ದಿನವಿಡೀ ಇದರಲ್ಲಿಯೇ ಕಳೆಯುತ್ತಾರೆ, ಕೆಲವರಿಗೆ ಇದು ಏನು ಅಂತಾ ಗೊತ್ತಿದೆ, ಆದರೆ ಏನು ಮಾಡಬೇಕೆಂದು ಗೊತ್ತಿಲ್ಲ! ಕೆಲವರು ಇದನ್ನೇ ನಂಬಿ ಬದುಕುತ್ತಾರೆ.  ಕೆಲವು ಚಾನೆಲ್ಗಳು ಇದರ ಬಗ್ಗೆಯೇ ಯಾವಾಗಲೂ ಮಾಹಿತಿ ನೀಡುತ್ತಿರುತ್ತವೆ. ಕೆಲವು ಸುದ್ದಿಹಾಳೆಗಳ ಮೊದಲನೇ ಮತ್ತು ಕೊನೆಯ ಸುದ್ದಿ ಇದೇ ಆಗಿರುತ್ತದೆ. ಚಿನ್ನದ ಬೆಲೆ, ಕಚ್ಚಾ ಎಣ್ಣೆಯ ಬೆಲೆ, ಡಾಲರ್‍ ಬೆಲೆ, ಉಕ್ಕಿನ ಬೆಲೆ ಏರಿಕೆ ಇಳಿಕೆ ಇದೆಲ್ಲ ಆಗುವುದು ಇಲ್ಲೆಯೇ! ಇದೇ ಶೇರು ಮಾರುಕಟ್ಟೆ. ಬನ್ನಿ ಹಾಗಾದರೆ ಶೇರು ಮಾರುಕಟ್ಟೆಯತ್ತ ಕಿರುನೋಟ ಬೀರೋಣ.

ಶೇರು ಮಾರುಕಟ್ಟೆ ಅಂದರೇನು?

ಶೇರು ಮಾರುಕಟ್ಟೆ ಒಂದು ಸಾರ್‍ವಜನಿಕ ನೆಲೆಯಾಗಿದ್ದು ಇದರಲ್ಲಿ ಕಂಪನಿಗಳ ಶೇರುಗಳು ಮತ್ತು ಒಪ್ಪಿದ ಬೆಲೆಯಲ್ಲಿ ಉತ್ಪನ್ನಗಳನ್ನು (derivatives) ಮಾರಾಟ ಮಾಡಲಾಗುತ್ತದೆ. ಇವೆಲ್ಲದರ ವ್ಯವಹಾರ ಶೇರು ಸರಕು ಕೊಡುಕೊಳೆಯಲ್ಲಿ (stock exchange) ನಡೆಸಲಾಗುತ್ತದೆ.

ಶೇರು ಸರಕು ಕೊಡುಕೊಳೆ

ಮುಂದುವರೆಯುತ್ತಿರುವ ಎಲ್ಲ ದೇಶಗಳಲ್ಲಿ ಈ ನೆಲೆಗಳಿದ್ದು ಇದರ ಪ್ರಮುಕ ಗುರಿ ಕೊಳ್ಳುಗರು ಮತ್ತು  ಮತ್ತು ಮಾರಾಟಗಾರರ ನಡುವಿನ ಒಡನಾಟವನ್ನು ಹೆಚ್ಚಿಸುವುದು ಮತ್ತು ಅವರಿಬ್ಬರ ಒಳಿತು ಕಾಪಾಡುವುದಾಗಿದೆ. ಈ ನೆಲೆಗಳಲ್ಲಿ ಸರಕಿಗೆ ಆ ಹೊತ್ತಿನ (real time) ವ್ಯಾಪಾರದ ಮಾಹಿತಿ ಇಲ್ಲವೇ ಬೆಲೆ ನೀಡಲಾಗುತ್ತದೆ.

ಯಾರು ಪಾಲ್ಗೊಳ್ಳಬಹುದು?

ಸಣ್ಣ ವಯ್ಯಕ್ತಿಕ ಹೂಡಿಕೆದಾರರಿಂದ ಹಿಡಿದು ಜಗತ್ತಿನ ಅತಿ ದೊಡ್ಡ ಕಂಪನಿಗಳು ಇದರಲ್ಲಿ ಪಾಲ್ಗೊಳ್ಳಬಹುದು. ಈ ನಿಟ್ಟಿನಲ್ಲಿ ಪಾಲ್ಗೊಳ್ಳುವವರಿಗೆ ನೆರವಾಗಲೂ ಶೇರು ಮಾರುಕಟ್ಟೆಯಲ್ಲಿ ನುರಿತ ಸದಸ್ಯರಿರುತ್ತಾರೆ.

ಮಹತ್ವ

ಶೇರು ಮಾರುಕಟ್ಟೆ ಕಂಪನಿಗಳಿಗೆ ಹಣ ಸಂಗ್ರಹಿಸುವ ಒಂದು ಮಹತ್ವದ ಸೆಲೆಯಾಗಿದೆ. ಇದರಿಂದ ಕಂಪನಿಗಳಿಗೆ ಸಾರ್‍ವಜನಿಕವಾಗಿ ವ್ಯವಹರಿಸುವ ಅವಕಾಶ ನೀಡಲಾಗುತ್ತದೆ ಹಾಗೂ ಕಂಪನಿಗಳಿಗೆ ತಮ್ಮ ಕೆಲಸವನ್ನು ಹಬ್ಬಿಸುವ ಅಗತ್ಯವಿದ್ದಲ್ಲಿ ಹೆಚ್ಚುವರಿ ಹಣಕಾಸಿಗಾಗಿ ತಮ್ಮ ಒಡೆತನದ ಶೇರುಗಳನ್ನು ಮಾರಾಟ ಮಾಡುವ ಅವಕಾಶವನ್ನು ಕೂಡ ಇಲ್ಲಿ ಒದಗಿಸಲಾಗುತ್ತದೆ. ಶೇರಿನ ತೋರು ಬೆಲೆ (index) ದೇಶದ ಹಣಕಾಸಿನ ಚಟುವಟಿಕೆಗಳ ಕನ್ನಡಿ ಎಂದೇ ಸಾರಲಾಗುತ್ತದೆ. ಸಾಮಾನ್ಯವಾಗಿ ಶೇರು ಮಾರುಕಟ್ಟೆಯನ್ನು ಒಂದು ದೇಶದ ಹಣಕಾಸಿನ ಶಕ್ತಿ ಮತ್ತು ಏಳಿಗೆಯ ಮೊದಲ ತೋರುಕ ಎಂದು ಪರಿಗಣಿಸಲಾಗುತ್ತದೆ. ಶೇರು ಮಾರುಕಟ್ಟೆ ಹಣಕಾಸು ಏರ‍್ಪಾಟಿನ ಸಾಮಾಜಿಕ ಅನಿಸಿಕೆಯ (social mood) ತೋರುಕ ಎಂದು ಕೂಡ ತಿಳಿಯಲಾಗುತ್ತದೆ.

ನಡವಳಿಕೆ

ಸಾಮಾನ್ಯವಾಗಿ ದೇಶದ ಹಣಕಾಸಿನ ಏರ‍್ಪಾಟಿನ ಜೊತೆಗೆ ಮಾರುಕಟ್ಟೆ ನಡೆದರೂ ಹಲವು ಬಾರಿ ಅತಿಯಾದ ಆಶಾಬಾವನೆ ಮಾರುಕಟ್ಟೆಯನ್ನು ಅಳತೆತಪ್ಪಿದ ಹೆಚ್ಚಿನ ಮಟ್ಟಕ್ಕೆ ಮತ್ತು ಅತಿಯಾದ ನಿರಾಶಾ ಬಾವನೆ ಮಾರುಕಟ್ಟೆಯನ್ನು ಅಳತೆತಪ್ಪಿದ ಕಡಿಮೆ ಮಟ್ಟಕ್ಕೆ ಕರೆದೊಯ್ಯುವ ನಿದರ್‍ಶನಗಳಿವೆ. ಮಾರುಕಟ್ಟೆಯಲ್ಲಿ  ಗೆಲುವಿನ ವಾಲಿಕೆ (positive trend) ಕಂಡು ಬಂದಲ್ಲಿ ಅದನ್ನ ಗೂಳಿ ಓಟ (bulls run) ಹಾಗು ಸೋಲಿನ ವಾಲಿಕೆ (negative trend) ಕಂಡು ಬಂದಲ್ಲಿ ಅದನ್ನು ಕರಡಿ ಓಟ (bears run) ಅಂತ ಕರೆಯಲಾಗುತ್ತದೆ.

ಹಣಕಾಸು ಏರ‍್ಪಾಟಿನ ನಂಟು

ಉಳಿತಾಯ ಹಾಗು ಹಣನೆರವು (financials) ಹೊಂದಿರುವ ಇಡುಗಂಟುಗಳ ಒಂದು ಬಾಗ ನೇರವಾಗಿ ಶೇರು ಪೇಟೆಗೆ ಹರಿದು ಬರುತ್ತದೆ. ಇತ್ತೀಚಿನ ಅಂಕಿ ಅಂಶಗಳನ್ನು ಗಮನಿಸಿದ್ದಲ್ಲಿ ಶೇರುಗಳು ಅನೇಕ ದೇಶಗಳ ಹಣಕಾಸಿನ ಸ್ವತ್ತಿನ ದೊಡ್ಡ ಪ್ರಮಾಣವಾಗಿ ಆವರಿಸಿವೆ. ಈಗಿನ ದಿನಗಳಲ್ಲಿ ಏಳಿಗೆ ಹೊಂದಿದ ದೇಶಗಳು ಎಂದಿನ ಬಗೆಯ ಉಳಿತಾಯದಿಂದ ದೂರ ಸರಿದು ಅತಿ ಹೆಚ್ಚು ಅಪಾಯಕಾರಿ ಎಂದೆನೆಸುವ ಶೇರು ಮಾರುಕಟ್ಟೆಯಲ್ಲಿ ಒಂದು ಇಲ್ಲವೇ ಇನ್ನೊಂದು ರೀತಿಯಲ್ಲಿ ಹಣವನ್ನು ತೊಡಗಿಸುತ್ತ ಬಂದಿವೆ.

ಹೀಗೆ, ದೇಶದ ಹಣಕಾಸಿನಲ್ಲಿ ಶೇರು ಮಾರುಕಟ್ಟೆಯ ’ಪಾಲು’ ತುಂಬಾ ಹಿರಿದು.

(ಚಿತ್ರ: www.indian-nse-bse-sharemarkettips.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Mahesh Bhat says:

    ಶೇರು ಮಾರುಕಟ್ಟೆಯೆಂಬುದು ಶ್ರೀಮಂತರ ಜೂಜು ಎಂದು ಹಲವು ಬಾರಿ ಅನಿಸಿದರೂ ಕಂಪನಿಗಳ ಕೊಡುಕೊಳ್ಳುವಿಕೆಯಲ್ಲಿ ಮತ್ತು ಕಂಪನಿಗಳಿಗೆ ಹಣಕಾಸಿನ ಮೂಲವಾಗಿ ಮಹತ್ವದ ಪಾತ್ರ ವಹಿಸಿರುವುದಂತೂ ಸತ್ಯ. ಉಳಿದೆಲ್ಲ ವ್ಯಾಪಾರದಂತೆ ಇದೂ ಒಂದು ವ್ಯಾಪಾರ.

ಅನಿಸಿಕೆ ಬರೆಯಿರಿ: