ಕೂಡಣ ಹಾಗು ಹಣಕಾಸಿನ ಲೆಕ್ಕಾಚಾರದಲ್ಲಿ ಕಿರುದಾನ್ಯಗಳು

ಸುನಿತಾ ಹಿರೇಮಟ.

MILLETS_2054052gಬಾರತದ ಬೆನ್ನೆಲುಬು ಬೇಸಾಯ ಎಂದು ಹೇಳಲಾಗುತ್ತದೆ. ಅರ‍್ದದಶ್ಟು ಮಂದಿ ಬೇಸಾಯ ಹಾಗು ಅದರ ಅವಲಂಬಿತ ಕೆಲಸಗಳನ್ನು ನಂಬಿ ಬದುಕುತ್ತಿದ್ದಾರೆ. ಆದರೂ ಬಾರತದ ಜಿಡಿಪಿ ಗೆ ಬೇಸಾಯದ ಕೊಡುಗೆ ಕೇವಲ 13.7% ಎನ್ನುವುದು ಕಹಿ ಸಂಗತಿ. ಬಾರತದ ಒಟ್ಟಾರೆ ವಿದೇಶಿ ವಹಿವಾಟಿನಲ್ಲಿ ಇದರ ಪಾಲು ಕೇವಲ 3% , ಇತರೆ ಕ್ಶೇತ್ರಗಳೊಂದಿಗೆ ಹೋಲಿಸಿದಾಗ ಈ ಪ್ರಮಾಣ ತೀರಾ ಕಡಿಮೆ. ನಮ್ಮ ಕ್ರುಶಿ ಉತ್ಪನ್ನಗಳ ಪ್ರಮಾಣ ತೀರ ಹಿಂದುಳಿದಿದೆ.

ಸುಮಾರು 75 ಮಿಲಿಯನ್ ಹೆಕ್ಟೇರ್ ನಶ್ಟು ನೀರಾವರಿ ಬೂಮಿ ಇರುವುದು ಹೆಮ್ಮೆಯ ವಿಶಯ, ವಿಶ್ವದಲ್ಲೆ ಈ ಪ್ರಮಾಣದ ನೀರಾವರಿ ಬೂಮಿ ಬೇರೆ ಯಾವ ದೇಶದಲ್ಲೂ ಇಲ್ಲ. ನೈಸರ‍್ಗಿಕವಾಗಿ ಇಶ್ಟೆಲ್ಲ ಸವಲತ್ತುಗಳು ಹೊಂದಿದ್ದರು ಸಹ, ಕಳೆದ ಐವತ್ತು ವರುಶಗಳ ಅಂಕಿ ಅಂಶಗಳನ್ನು ಇತರೆ ದೇಶಗಳೊಂದಿಗೆ ಹೋಲಿಸಿಕೊಂಡು ನೋಡಿದಲ್ಲಿ, ನಮ್ಮ ಸರಕಾರಗಳು ಕ್ರುಶಿಯನ್ನು ಒಂದು ಉದ್ಯಮವನ್ನಾಗಿ ಪರಿಗಣಿಸಿವೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.
Kiruಈಗಿನ ಸರಕಾರಗಳ ಕ್ರುಶಿ ನೀತಿಯಲ್ಲಿ ಈ ಸಿರಿದಾನ್ಯಗಳ ಬಗ್ಗೆ ಯಾವುದೇ ಮುಕ್ಯ ಪ್ರಸ್ತಾಪಗಳಿಲ್ಲ. ಒಂದು ಅಂದಾಜಿನ ಪ್ರಕಾರ ರಾಶ್ಟ್ರದಲ್ಲಿ 1966–2006ರ ಅವದಿಯಲ್ಲಿ ಶೇ 44 ರಶ್ಟು ಸಿರಿದಾನ್ಯ ಪ್ರದೇಶಗಳು ಇತರ ಬೆಳೆಗಳ ಪಾಲಾಗಿವೆ. ಸುಮಾರು 4 ದಶಲಕ್ಶ ಹೆಕ್ಟೇರ್ ಪ್ರದೇಶದಲ್ಲಿ 3.6 ದಶಲಕ್ಶ ಟನ್ ಸಿರಿದಾನ್ಯ ಉತ್ಪಾದಿಸಲಾಗುತ್ತಿದೆ. ಕರ‍್ನಾಟಕದಲ್ಲಿ 1.3 ದಶಲಕ್ಶ ಹೆಕ್ಟೇರ್ ಪ್ರದೇಶದಿಂದ 1.6 ದಶಲಕ್ಶ ಟನ್ ಬೆಳೆಯಲಾಗುತ್ತದೆ. ದೇಶದ ಶೇ. 60 ರಶ್ಟು ರಾಗಿಯನ್ನು ಕರ‍್ನಾಟಕ ಒಂದೇ ಪೂರೈಸುತ್ತದೆ.

ಬತ್ತ, ಗೋದಿ ಹಾಗು ಇನ್ನಿತರ ಬೆಳೆಗಳಿಗೆ ಬೇಕಾಗುವ ಪಲವತ್ತಾದ ಬೂಮಿ, ಹೆಚ್ಚಿನ ನೀರಿನ ಅವಶ್ಯಕತೆ, ರಾಸಾಯನಿಕ ಗೊಬ್ಬರ ಇನ್ನಿತರ ಯಾವುದೆ ಬೆಂಬಲ ಈ ಬೆಳೆಗಳಿಗೆ ಬೇಕಾಗಿಲ್ಲ. ಬಹಳಶ್ಟು ಬೆಂಬಲ ಪಡೆದ ಈ ಬೆಳೆಗಳು ಮುಂದೆ ಬರಬಹುದಾದ ಕೀಟಬಾದೆ ಮತ್ತು ಇತರೆ ತಳಿರೋಗಗಳನ್ನೆದುರಿಸಿ ಉತ್ತಮ ಇಳುವರಿ ಕೊಡುತ್ತವೆ ಎನ್ನುವ ಬರವಸೆ ಇಡಬೇಕಶ್ಟೆ.
ದಾನ್ಯಗಳ ಗುಂಪಿನಲ್ಲಿಯೆ ಅತೀ ವಿಶಿಶ್ಟ ಗುಣ ಹೊಂದಿರುವ ಈ ಸಿರಿದಾನ್ಯಗಳ ಬಗ್ಗೆ ನಿರ‍್ಲಕ್ಶ್ಯವೆ ಎದ್ದು ಕಾಣುತ್ತದೆ. ವಾಣಿಜ್ಯ ಹಾಗು ಇತರ ಅಹಾರ ಬೆಳೆಗಳ ಬಗ್ಗೆ ಇರುವ ಗಮನ ಈ ಕಿರುದಾನ್ಯಗಳಿಗೆ ಇಲ್ಲ. ಕಿರುದಾನ್ಯಗಳ ಬಗೆಗಿನ ವಾಣಿಜ್ಯ ವಿವರ, ಇವುಗಳ ಒಕ್ಕಲಿನ ವಿಶಯಗಳ ಬಗ್ಗೆ ಬೆಳಕು ಚೆಲ್ಲುವ ಸರಿಯಾದ ಅಂಕಿ-ಅಂಶ ಮತ್ತು ಇತರೆ ಮಾಹಿತಿಗಳ ಕೊರತೆ ಇದೆ. ಅದ್ಯಯನಗಳಂತೂ ಕಾಣುವುದೆ ಇಲ್ಲ

ಈ ಕಿರುದಾನ್ಯಗಳು, ಬರ ಎದುರಿಸುವ ಪ್ರದೇಶಗಳಲ್ಲಿ, ಸಾರವಿಲ್ಲದ ಬೂಮಿಗಳಲ್ಲಿ ಹಾಗು ಯಾವುದೇ ರಾಸಾಯನಿಕ ಗೊಬ್ಬರಗಳ ಅಗತ್ಯವಿಲ್ಲದೆ ಸುಲಬವಾಗಿ ಬೆಳೆಯಬಲ್ಲವು. ಯಾವುದೆ ಕೀಟಬಾದೆ ಮತ್ತು ತಳಿಗೆ ಬರಬಹುದಾದ ಇತರ ರೋಗಗಳನ್ನು ಸುಲಬವಾಗಿ ಎದುರಿಸಿ ಉತ್ತಮ ಪಸಲು ಕೊಡುವ ಮಾಂತ್ರಿಕ ಶಕ್ತಿ ಇದೆ ಈ ಕಿರುದಾನ್ಯಗಳಲ್ಲಿ. ದುಡ್ಡು ಕಾಸಿನ ಮಾತಿನಲ್ಲಿ ಹಿಂದುಳಿದ ಹಾಗು ಅತೀ ಹಿಂದುಳಿದ ಪ್ರದೇಶಗಳಗಲ್ಲಿ ಮಾನವನ ಅಹಾರವಾಗಿ ಹಾಗು ಜಾನುವಾರುಗಳ ಮೇವಾಗಿ ಹೆಚ್ಚಿನ ಹಣಕಾಸು ನೆರವಿಲ್ಲದೆ ಬೆಳೆಯುವ ಬೆಳೆಗಳಿವು. ಬಿತ್ತಿದ 90 ರಿಂದ 100 ದಿನಗಳೊಳಗೆ ಕಟಾವಿಗೆ ಬರುವ ಈ ಬೆಳೆಗಳು ಅತೀ ಕಡಿಮೆ ಪಲವತ್ತತೆ ಇರುವ ಮಳೆಯಾಶ್ರಿತ ಒಣ ಬೂಮಿಗೆ ಇವು ಸರಿಯಾದುವು. ಕಟಾವಿನ ನಂತರ ಸರಿಯಾದ ರೀತಿಯಲ್ಲಿ ಜೋಪಾನವಾಗಿ ಕೂಡಿಟ್ಟರೆ 2-3 ವರ‍್ಶಗಳವರೆಗೆ ಬಳಸಬಹುದು. ಎಲ್ಲ ಬಗೆಯ ಗಾಳಿಪಾಡಿನ ಏರುಪೇರಿಗೆ ಹೊಂದಿಕೊಂಡು ಬೆಳೆಯುವ, ಹೆಚ್ಚು ಪೌಶ್ಟಿಕಾಂಶಗಳನ್ನು ಒಡಲಲ್ಲಿಟ್ಟು ಕೊಂಡಿರುವ, ನಿಸರ‍್ಗಕ್ಕೆ ಹಾನಿ ಮಾಡದಂತೆ ಬೆಳೆಯುವ ಇವು ಮುಂದೆ ನಾವು ಎದುರಿಸಬಹುದಾದ ಗಾಳಿಪಾಡಿನ ಏರುಪೇರಿಗೆ ಹೇಳಿ ಮಾಡಿಸಿದ ಬೆಳೆಗಳು.

ಸಾವಿರಾರು ವರ‍್ಶಗಳ ಇತಿಹಾಸವಿರುವ ಈ ಸಣ್ಣ ಬಿರುಸುದಾನ್ಯಗಳು (ಬಿರುಸುದಾನ್ಯ – ಹೊರ ಕವಚ ಅತವಾ ಪದರುಗಳು ಬಹಳ ಗಟ್ಟಿಯಾಗಿರುತ್ತವೆ) ಜನಜೀವನದ ಬಾಗವಾಗಿ ಬೆರೆತುಹೋಗಿವೆ. ಆದರೆ ಈ ಜಾಗತೀಕರಣದ ಬೂತ ಇದನ್ನು ಹಂತಹಂತವಾಗಿ ನಾಶ ಮಾಡಿದೆ. ಸಾರ‍್ವಜನಿಕ ವಲಯ ಹಾಗು ಸರಕಾರಗಳಿಂದ ಅತೀ ಕಡಿಮೆ ಪ್ರಮಾಣದ ಪ್ರೊತ್ಸಾಹವಿದ್ದರು ಸರಕಾರ ಮತ್ತು ಸಂಗ ಸಂಸ್ತೆಗಳಿಗೆ ಪರಿಚಯವೇ ಇಲ್ಲದ ಹಲವಾರು ಸಿರಿದಾನ್ಯಗಳು ಈಗಲೂ ನಮ್ಮ ರೈತರ ನಡುವೆ ಹರಿದಾಡುತ್ತಿವೆ. ಜಾಗತೀಕರಣದ ನೆಪದಲ್ಲಿ ಬೀಜ ಬ್ಯಾಂಕ್ ಗಳು ಹಂಚುತ್ತಿರುವ ಬೀಜಗಳು, ರಾಸಾಯನಿಕ ಗೊಬ್ಬರ, ಬೀಜ ತಳಿಗಳ ನಾಶ, ಹೀಗೆ ಒಂದಲ್ಲ ಒಂದು ಕಾರಣದಿಂದ ಒಂದು ಕಾಲದ ಸಿರಿಸಂಸ್ಕ್ರುತಿ ಎಂದೆ ಕರೆಸಿಕೊಳ್ಳುತ್ತಿದ್ದ ಈ ಕಿರುದಾನ್ಯಗಳ ಕೊಂಡಿ ಕಳಚುತ್ತಿದೆ.

  • ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಿರುದಾನ್ಯಗಳನ್ನು ಸಣ್ಣ ಪ್ರಮಾಣದಲ್ಲಿ ಸ್ತಳೀಯ ಅವಶ್ಯಕತೆಗನುಗುಣವಾಗಿ ಅಹಾರಕ್ಕಾಗಿ ಮತ್ತು ಜಾನುವಾರುಗಳ ಮೇವಿಗಾಗಿ ಬೆಳೆಯಲಾಗಿತ್ತಿದೆ
  • ಹೆಚ್ಚಿನ ಪ್ರಮಾಣದ ಬೆಳೆ ಬೆಳೆಯುವಲ್ಲಿ ಮನಸ್ಸಿದ್ದರು, ಸರಿಯಾದ ಮಾರುಕಟ್ಟೆ ವ್ಯವಸ್ತೆ ಇಲ್ಲದೆ ರೈತರು ಇವನ್ನು ಬೆಳೆಯುವಲ್ಲಿ ಹಿಂದೇಟು ಹಾಕುತ್ತಾರೆ
  • ಇಂದಿನ ಪರಿಸರಕ್ಕೆ ಹೊಂದಿಕೊಳ್ಳಬಲ್ಲ ಮುಂದುವರೆದ ಯಾವುದೆ ತಾಂತ್ರಿಕ ಸಹಾಯ ಪದ್ದತಿಗಳ ಕೊರತೆ ಇದೆ
  • ಕಟಾವಿನ ನಂತರದ ಚಟುವಟಿಕೆಗಳಿಗೆ ಆದುನಿಕ ಸೌಲಬ್ಯಗಳ ಕೊರತೆ ಎದ್ದು ಕಾಣುತ್ತದೆ
  • ಬೀಜ ಸಂರಕ್ಶಿಸುವ ಯಾವುದೆ ನೆರವಿನ ಚಳಕಗಳಿಲ್ಲ
  • ಈ ಬೆಳೆಗಳಿಗೆ ಪ್ರೋತ್ಸಾಹ ನೀಡುವ ಗಟ್ಟಿಯಾದ ಒಕ್ಕೂಟ ವ್ಯವಸ್ತೆಯ ಅಬಾವವಿದೆ
  • ಬೇಸಾಯದಲ್ಲಿನ ಮಿಶ್ರ ತಳಿ ಬೆಳೆಗಳ ಬದಲಾವಣೆ ಈ ಬೆಳೆಗಳ ಇಳಿತಕ್ಕೆ ಕಾರಣ
  • ಸಾರ‍್ವಜನಿಕ ಅಹಾರ ವಿತರಣೆಯಲ್ಲಿ ಇವುಗಳನ್ನು ಲೆಕ್ಕಕ್ಕೇ ತೆಗೆದಿಕೊಂಡಿಲ್ಲ

ಜೋಳ, ಸಜ್ಜೆ, ರಾಗಿ, ನವಣೆ, ಸಾಮೆ, ಹಾರಕ, ಬರಗು, ಊದಲು ಮತ್ತು ಕೊರಲೆ ಇವು ಸಿರಿದಾನ್ಯಗಳು. ಮೊದಲೆಲ್ಲ ಮನೆ ಮನೆಯಲ್ಲೂ ಇವುಗಳಿಂದ ಅಡುಗೆ ಮಾಡುತ್ತಿದ್ದರು, ಅವುಗಳನ್ನು ತಿಂದು ಜನರು ಆರೋಗ್ಯಕರವಾಗಿರುತ್ತಿದ್ದರು ಎಂದು ಹಿರಿಯರನ್ನು ಮಾತಿಗೆಳೆದರೆ ತಿಳಿಯುತ್ತದೆ. ಜನಸಾಮಾನ್ಯರಲ್ಲಿ ಸಿರಿದಾನ್ಯಗಳತ್ತ ಒಲವು ಬೆಳೆದು, ಈ ದಾನ್ಯಗಳನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ಪೋಶಕಾಂಶಗಳು ಸುಲಬ ರೀತಿಯಲ್ಲಿ ಸಿಗುತ್ತವೆ. ರೈತರಿಗೂ ಇವುಗಳನ್ನು ಬೆಳೆಯುವಲ್ಲಿ ಪ್ರೋತ್ಸಾಹ ಸಿಗಬಹುದು.

(ಮಾಹಿತಿ ಸೆಲೆ: wikipedia)
(ಚಿತ್ರ ಸೆಲೆ: thehindu, Millet Map From Gandhi Krishi Vigyan Kendra Bangalore)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: