ಎಲ್ಲೆಲ್ಲೂ ಹಬ್ಬಿರುವ ಅಳಿಗುಳಿಮಣೆಯನ್ನು ನೀವು ಮರೆತಿಲ್ಲ ತಾನೇ?

ಶ್ರೀಕಿಶನ್ ಬಿ. ಎಂ.

1

ಕೆಲ ದಿನಗಳ ಹಿಂದೆ ಸುದ್ದಿಹಾಳೆಯ ಓಲೆಯೊಂದರಲ್ಲಿ ಓದಿದ್ದು. ಹಳೆಯ ಮನೆಯಾಟಗಳ, ಮಣೆಯಾಟಗಳ ಮರುಪರಿಚಯ ಹಾಗೂ ಮಾರಾಟ ಮಾಡುವ, ಆ ನಿಟ್ಟಿನಲ್ಲಿ ಈ ಆಟಗಳನ್ನು ಇಂದಿನ ಟಚ್ ಸ್ಕ್ರೀನ್ ಯುಗದಲ್ಲಿ ಹೆಸರುವಾಸಿ ಮಾಡುವ ಹಮ್ಮುಗೆಯಿರುವ ಸಂಸ್ತೆಯ ಬಗ್ಗೆ ಓದಿದೆ. ಇಂತಹದನ್ನು ಕಂಡಾಗಲೋ ಕೇಳಿದಾಗಲೋ ಕೊಂಚ ಹಿಗ್ಗುವ ‘ವಾಡಿಕೆ’ ನಮ್ಮಲ್ಲಿ ಹಲವರಿಗುಂಟು. ಅಲ್ಲದೆ ಆ ಆಟಗಳಲ್ಲಿ ಚಿಕ್ಕಂದಿನಲ್ಲಿ ಆಡಿದ ಹಳೆಯ ಮಣೆಯಾಟಗಳಾದ ಅಳಿಗುಳಿಮಣೆ, ಪಗಡೆ, ಕವಡೆ ಇವೆಲ್ಲವುಗಳ ಚಿತ್ರಗಳು ಇದ್ದವು, ಹಳೆ ನೆನಪುಗಳು ಹೊರಬಂದು ನಿಂತವು.

ಅಂದು ಹೀಗೆ ಓದುತ್ತಿದ್ದಂತೆಯೇ ಮನಸ್ಸು ಬೇರ್‍ಪಟ್ಟು ಎರಡು ದಾರಿ ಹಿಡಿಯಿತು. ಒಂದು, ನಮ್ಮ ಎಳೆತನದಲ್ಲಿ ನಮ್ಮೊಂದಿಗೆ ಹೆಣೆಯಲ್ಪಟ್ಟ  ನಲಿವಿನನುಬವಗಳಿಗೆ ಒಂದು ಊರುಗೋಲನ್ನು ಇಡುವಂತಹ ಹುಟ್ಟೊಲವು ಇಲ್ಲವೇ ಸಹಜಗುಣ. ಎಂದರೆ, ಹಿಂದಿನದನ್ನು ಅತವಾ ಹಳೆಯದನ್ನು ಒಲವರಿಸುವ (romanticize) ಹುಟ್ಟುಸ್ವಬಾವ. ಮತ್ತೊಂದು ದಾರಿ, ವಿಚಾರದ ಬೆನ್ನೆಲುಬನ್ನು ಮೆರೆಯಿಸುವ ಸಹಜಗುಣ, ಓರಬಲ್ಲುವಿಕೆ (rationalization). ಹಳೆಯದೆಂದ ಮಾತ್ರಕ್ಕೆ ಅದನ್ನು ಉಳಿಸಬೇಕು, ಮುಂದೆ ತರಬೇಕು ಅನ್ನುವ ನಿಲುವನ್ನು ತೆಗಳುವ ಎಣಿಕೆಯ ಮನ. (‘ಅದೊಂದು ಸಣ್ಣ ಅಡಗುಲಜ್ಜಿ ಆಟ, ಅದಕ್ಕೆ ಇಶ್ಟೊಂದು ಸೀರಿಯಸ್ಸಾ ..?) ಹಳೆಯನುಬವದ ಕಿರುಗಳಿಗೆಯೊಂದನ್ನು ಈಪೊಳ್ತಿಗೆ (ವರ್‍ತಮಾನಕ್ಕೆ) ತಂದುಕೊಂಡು ಈಹೊತ್ತನು ಮರೆತು ಬಿಸಾಡುವ ಚಾಳಿಯಾಗುವುದು,  ‘ನಾಳೆ’ಯ ಕಟ್ಟುವಿಕೆಗಲ್ಲದೆ ಸವೆಯುವಿಕೆಗೆ ದಾರಿ ಮಾಡಿಕೊಡುವುದು, ಎನ್ನುವ ಆರಯ್ಯುವ ವಯಿಚಾರಿಕತೆ. ಅಂತೂ ಸಣ್ಣದಾಗಿ ಅರಳಿದ ಒಂದು ನೆನಹು ಒಂದು ವಿಚಾರವಾಗಿ ಮಾರ್‍ಪಾಡಾಗಿ, ಬೇರೆ ಬೇರೆ ಮೂಲೆಗಳಿಂದ ನೋಡ ಹತ್ತಿದೆ. ಅಂತೂ ಬಾವನೆಗೂ ವಿಚಾರಕ್ಕೂ ಸರಿತೂಕ ಹೊಂದಿಸುವಲ್ಲಿ ಮುಗಿತಾಯ ಕಾಣಬೇಕು.

ನನ್ನ ಎಳೆತನದಲ್ಲಿ ಆಡಿದ ಮಣೆಯಾಟಗಳೆಂದರೆ ಮೊದಲು ಹೊಳೆಯುವುದು ಅಳಿಗುಳಿಮಣೆ, ಚದುರಂಗ, ಚವ್ಕಾ ಬಾರಾ ಹಾಗು ಪಗಡೆಯಾಟ. ಇವುಗಳಲ್ಲಿ ಚದುರಂಗವೇನೋ ನಾಡುನಡುವಿನ ಮಟ್ಟದಲಿ ತಕ್ಕಮೆ ಗಳಿಸಿಕೊಂಡಿದೆ, ದಕ್ಕಬೇಕಾದುದೇ. ಆದರೆ ಅಳಿಗುಳಿಮಣೆ, ಚವ್ಕಾ ಬಾರಾ, ಪಗಡೆ ಇವೆಲ್ಲ ಅಶ್ಟಕ್ಕಶ್ಟೆ. ಮನೆಯೊಳಗೆ ಕುಕ್ಕರಿಸಿ, ಒರಗಿ ಮಲಗಿ ಆಡುವ ಆಟಗಳು. ಮನೆಯಾಟಗಳಿವು, ಮನೆಯಾಚೆಗೆ ಬಾರದ ಕೊರಗಾಟಗಳಾವೆ ಎಂಬ ಮೂದಲಿಕೆ ಅಂಟಿದೆ ಪಾಪ. ಆದರೆ, ಮತ್ತೊಮ್ಮೆ ಮಗದೊಮ್ಮೆ ನೋಡಿದಾಗ, ಈ ಆಟಗಳೂ ಒಂದು ನೋಟದಲ್ಲಿ ಹೆಚ್ಚುಗಾರಿಕೆ ಹೆಚ್ಚಿಸಿಕೊಳ್ಳುವುದು ಕಾಣುತ್ತೇವೆ. ಈ ಪರಿಯಾಗಿ ಒಂದು ಸಣ್ಣ ಹಳೆಯಾಟವೊಂದನ್ನು ನಡುಬೇದಿಗೆ ಬಿಡಲೊಲ್ಲದೆ, ಹೆದ್ದಾರಿಗೆ ಒಯ್ಯುವ ದೋರಣೆ – ಅದು ಜಾಣ್ಮೆಯೋ, ಹುಟ್ಟೊಲವೋ, ಅಂತೂ ಅದಕ್ಕೆ ಪೂರಕವಾದ ವಿಚಾರದ ಹಿನ್ನೆಲೆ ಕೊಡಬಹುದೆಂದು ಅನ್ನಿಸಿತು. ಹಳತನ್ನು ಹೊಸತನ್ನು ಬೆಸೆಯುವ ಹಿನ್ನೆಲೆ ಕೊಡುವುದು ಕಶ್ಟವಲ್ಲ.

ಅಳಿಗುಳಿಮಣೆ ಎನ್ನುವುದನ್ನು ‘ಗುಳಿಗಳ ಮರದ ಮಣೆ’ ಎಂದು ಹುರುಳಿಸಬಹುದು. ಈ ಆಟದ ಬಗ್ಗೆ ತಿಳಿದವರು ಸಾಕಶ್ಟು ಮಂದಿ ಇದ್ದರೂ, ಸಾಕಶ್ಟು ಮಂದಿ ಹೆಚ್ಚು ಬಾರಿ ಆಡಿರಲಾರರು. ಈ ಆಟವು ತೆಂಕಣ ಬಾರತದಲ್ಲೇ ಹುಟ್ಟಿದ್ದು ಎಂಬುದು ಹಲವೆಡೆ ಒಪ್ಪಲ್ಪಟ್ಟ ಮಾತು. ಕನ್ನಡಿಗರು, ತಮಿಳರು, ಕೇರಳದವರು ಈ ಒಬ್ಬೊಬ್ಬರೂ ಈ ಆಟವು ತಮ್ಮ ನಾಡಿನದ್ದೇ ಎಂದು ಸಾರುವುದನ್ನು ಕಂಡಿದ್ದೇನೆ. ತಮಿಳಿನಲ್ಲಿ ‘ಪಲ್ಲಾಂಕುಳಿ’ ಎಂದೂ ಬಡಗುನಾಡುಗಳಲ್ಲಿ, ಹೊರನಾಡುಗಳಲ್ಲೂ ‘ಮನ್ಕಲ’ ಎಂದೂ ಕರೆಯಲ್ಪಡುತ್ತದೆ. ಸಾಮಾನ್ಯವಾಗಿ ಏಳೇಳು ಗುಳಿಗಳ ಎರಡು ಸಾಲಿನ ಮಣೆಯೊಂದಿಗೆ ಆಡಲ್ಪಡುವ ಆಟ, ಒಳಗೆ ಗುಳಿಗಳಲ್ಲಿ ಹಂಚುವ ‘ಪಾಲು ಕಾಳು’ಗಳಾಗಿ ಕವಡೆಯನ್ನೋ ಹುಣಸೆ, ಗುಲಗಂಜಿ ಬೀಜಗಳನ್ನೋ ಕಪ್ಪೆಚಿಪ್ಪುಗಳನ್ನೋ ಸಣ್ಣಕಲ್ಲುಗಳನ್ನೋ ಬಳಸುವುದುಂಟು.

3

ಈ ಆಟವು, ಬಾರತೀಯರು ಎಲ್ಲೆಲ್ಲಿ ವ್ಯಾಪಾರ ವಹಿವಾಟಿಗೆ ಹೋದರೋ ಅಲ್ಲಲ್ಲಿ ಕೆಲ ಸಣ್ಣ ಮಾರ್‍ಪಾಡುಗಳೊಂದಿಗೆ ಹರಡಿಕೊಂಡಿರುವುದು ಕಾಣುತ್ತೇವೆ. ಇಂಡೊನೆಶಿಯಾ, ಜಾವಾ ನಡುಗಡ್ಡೆಗಳು, ಆಪ್ರಿಕಾ ಅಲ್ಲದೇ ದೂರದ ವೆಸ್ಟ್ ಇಂಡೀಸ್ನಲ್ಲೂ  ಕಾಣಬಹುದು.

ಈ ಆಟದ ಗುಳಿಗಳು ಈಜಿಪ್ಶಿಯನ್ನರ ಪಿರಮಿಡ್ಡುಗಳಲ್ಲಿ ಕಂಡಿವೆ. ಈಜಿಪ್ಶಿಯನ್ನರ ಪಿರಮಿಡ್ಡುಗಳ ಕಟ್ಟುವಿಕೆಯಲ್ಲಿ ಹಲವಾರು ಬಾರತೀಯರು ಪಾಲ್ಗೊಂಡಿದ್ದು ಅವರ ಮೂಲಕ ಈ ಆಟದ ನಡೆಪಾಡು ಅಲ್ಲಿಗೆ ಆಯಿತು ಎಂದು ಹೇಳಲಾಗಿದೆ. ಇದರ ಒಂದು ಮಾರ್‍ಪು ‘ಇಪ್ಪತ್ತು ನಾಲ್ಕಳ್ಳೆಯ’ (20-squares) ಮಣೆ ಆಟ ಎಂದು ಹೆಸರು ಹೊಂದಿತ್ತಂತೆ, ರಾಜ ಮನೆತನದಲ್ಲಿ ಎಂದಿನಾಟವಾಗಿತ್ತಂತೆ.

ಪಡುವಣದಾಪ್ರಿಕಾದ ಯೋರುಬಾ ಮಂದಿಗುಂಪಿನಲ್ಲಿ ಕನ್ಡುಬರುವ ಈ ಆಟದ ಒಂದು ಮಾರ್‍ಪು ಹೀಗಿದೆ. ಅಲ್ಲಿ ಈ ಆಟವು ‘ಆಯೋ’, ‘ವಾರ್‍ರಿ’ ಮೊದಲಾದ ಹೆಸರುಗಳಿಂದ ಕೇಳಿ ಬರುವುದು ಸಾಮಾನ್ಯ.

4

ಇನ್ನು ಈ ಮಣೆಯಾಟಕ್ಕೆ ಒಂಚೂರು ಕಳೆ ಮರಳಿಸೋಣವಾಗಲಿ, ತಕ್ಕಮೆ ತರೋಣವಾಗಲಿ. ಒಂದು ಆಟವು ಸುಮ್ಮನೆ ತನ್ನಳವಿಲ್ಲದೆ (self-worth) ಅಶ್ಟೊಂದು ನಾಡುಗಳಿಗೆ ಪಸರಿಸುವುದಿಲ್ಲ, ಜನಮನ ಮುಟ್ಟುವುದಿಲ್ಲ. ಗುಳಿಮಣೆಯಾಟವನ್ನು ಅಡ್ಡಾದಿಡ್ಡಿಯಂತೆ ಸುಮ್ಮನೆ ಹೊತ್ತುಕಳೆಯುವುದಕ್ಕೆ ಆಡಿರುವವರೇ ಹೆಚ್ಚು. ಅದನ್ನು ಸರಿಯಾದ ರೀತಿಯಲ್ಲಿ ಆಡುವುದೆಂದರೆ ನೆನಪಿನ ಶಕ್ತಿ, ಎಣಿಕೆಯ ಶಕ್ತಿಯನ್ನು ಜಾಲಾಡಿಸಿದಂತೆಯೇ. ಒಂದೊಂದು ಗುಳಿಗೆ ಬೀಳುವ ಕಾಳನ್ನು (ಆಗಾಗ್ಗೆ ಬರಿದಾಗುವ ಗುಳಿಯನ್ನೂ ಸೇರಿಸಿ) ಎಣಿಕೆ ಮಾಡಿ ನೆನೆಯುವುದು ‘ಬುದ್ದಿವಂತರಿಗೆ ಮಾತ್ರ’. ಹೀಗಿರಬೆಕಾದರೆ, ಈ ಆಟವನ್ನು ನನ್ನ ಬಾಲ್ಯದಲ್ಲಿ ಆಡುವಾಗ, ನನ್ನ ಅಕ್ಕಂದಿರು ಒಂದು ಹಾಳು ನಿಯಮವನ್ನು ತಾವು ತಾವೇ ಕಟ್ಟಿ ಹೂಡಿದ್ದರು: “ಎಣ್ಣಿಸದೆಯೇ ಆಡಬೇಕು, ಎಣ್ಣಿಸುವುದು ಮೋಸ … ಆಡುವುದಕ್ಕೆ  ಜಾಸ್ತಿ ಹೊತ್ತು ತಗೊಳೋ ಹಾಗಿಲ್ಲ..”, ಅಂತ!! ಇದು ಟಯ್ಮ್ ಪಾಸು ಅಡಗ್ಲಜ್ಜಿ ಆಟ ಆಗಿಬಿಡದೆ ಮತ್ತೇನಾಗಲು ಸಾದ್ಯ! ಹಿಂದೊಮ್ಮೆ ಮಿಂದಾಣಾದ ಬರಹವೊಂದರಲ್ಲಿ ನಾನೊಮ್ಮೆ ಓದಿದಂತೆ, ಪಡುವಣ ದೇಶಗಳ ಕೋವಿದರು, ತಿಳಿವಿಗರು ಈ ಆಟದ ಬಗ್ಗೆ, ಇದರ ಹಲವು ಕೂಟಗೆಯ, ಮಂದಿಯರಿಮೆಯ ತೋರ್‍ಕೆಗಳ ಬಗ್ಗೆ ಅರಕೆ ನಡಿಸಿದ್ದಾರೆ. ಆಟವೊಂದು ಸಂಸ್ಕ್ರುತಿಯ, ಕೂಟಗೆಯ ರೀತಿಯಲ್ಲೂ ಇಶ್ಟೊಂದು ನಾಡುಗಳ ಹರಹನ್ನು ಪಡೆದಿರುವುದು ಇವರ ಕುತೂಹಲಕ್ಕೆ ಕಾರಣವಂತೆ. ಇಶ್ಟೇ ಅಲ್ಲದೆ, ಕಲಿಕೆಯ ಬಯಲಿನಲ್ಲಿ ಬೇರೆ ಬೇರೆ ಸ್ತರದ ವಿದ್ಯಾರ್‍ತಿಗಳ ಮಟ್ಟಕಾಣುವಿಕೆಗೆ ಈ ಆಟವನ್ನು ಶಾಲೆಗಳಲ್ಲಿ ಹೂಡಿದ್ದಾರೆ. ಕೆಲವು ಶಾಲೆಗಳು ಮಕ್ಕಳಿಗೆ ಗಣಿತ ಮತ್ತು ಇನ್ನಿತರ ಕಯ್ಮೆ – ಜಾಣ್ಮೆಗಳ ಬೆಳೆಸುವಿಕೆಗೆ ಈ ಆಟವನ್ನು ತೆಗೆದುಕೊಂಡಿವೆಯಂತೆ.

ಮತ್ತೊಂದು ನೋಟದಿಂದ ಈ ಮಣೆಯಾಟಗಳನ್ನು ಕಾಣುವುದು ಮುಕ್ಯವೆನಿಸುತ್ತದೆ. ಆಟವಾಗಲೀ ಮತ್ತೊಂದಾಗಲೀ, ಅದರ ಸಾಮಾಜಿಕ ಮುಕದ ನೋಟವಿಲ್ಲದೇ ಒಂದರ ತಕ್ಕಮೆಯನ್ನು ಬಗೆಯುವುದು ಅರಿದಾಗುತ್ತದೆ. ‘ಆಟ’ ಎಂದೊಡನೆ ಮಯ್ ಚಟುವಟಿಕೆಯಾಗಲೀ ಮಿದುಳಿಗೆ ಪೋಟಿಕರೆಯುವ ಆಟಗಳಾಗಲೀ ಪಡೆದಿರುವ ಹೆಚ್ಚುಗಾರಿಕೆ ಈ ಗುಳಿಮಣೆಯಾಟಕ್ಕೆ ಸಿಕ್ಕಿಲ್ಲದೆ ಇರಬಹುದು. ಆದರೆ ಅರಮನೆಯಿಂದ ನೆಲಮನೆಯಗುಂಟ ಜನಮನದಲ್ಲಿ ಹರಡಿದ ಸಂತಸದ ನಲಿವಿನಾಟ ಎಂದರೆ ತಪ್ಪಾಗಲಾರದು. ಇದರ ಉಲ್ಲೇಕ ರಾಮಾಯಣ ಕಾವ್ಯವೊಂದರಲ್ಲೂ ಇದೆಯಂತೆ, ಒಂದೆರಡು ತಲೆಮಾರ ಹಿಂದೆಯಶ್ಟೆ ವಯ್ಕುಂಟ ಏಕಾದಶಿಯಿಂದ ರಮ್ಜಾನ್ ವರೆಗೂ ಆಡಲ್ಪಡುತ್ತಿತ್ತಂತೆ. ಗುಳಿಮಣೆ, ಕಯ್ಮೇಲೆ ಕಾಶಿ (ಕವಡೆಯಾಟ), ಚವ್ಕಾಬಾರ ಇನ್ನಿತರ ಆಟಗಳು ಒಂದು ತಲೆಮಾರಿನ ಹಿಂದಿನವರೆಗೂ ಸಣ್ಣ ಹೊಳಲು (city), ಹಳ್ಳಿಗಳಲ್ಲಿ ಹೊತ್ತುಸಾಗಿಸುವ ಆಟಗಳಾಗಿದ್ದವು (ಈಗಲೂ ಇವೆ, ಕಡಿಮೆ ಮಟ್ಟಿಗೆ). ಟಿ.ವಿ.ಯಂತಹ ನೋಟದೊಯ್ಯುಗೆಯು (ದ್ರುಶ್ಟಿ ಮಾದ್ಯಮ) ಈಗಿನ ಅಚ್ಚುಮೆಚ್ಚಿನ ಹೊತ್ತುಕಳೆಯುಕಗಳಾಗಿ ಎರಗಿರುವುದರಿಂದ ಆ ಹಳೆಯ ಆಟಗಳು ಹಳೆಯ ಕಳೆಯನ್ನು ಕಳೆದು ಕುಳಿತಿವೆ. ಅರಳೀಕಟ್ಟೆಯೋ ಮನೆಯ ಜಗುಲಿಕಟ್ಟೆಯೋ, ಎಲ್ಲೋ ಒಂದು ಊರಲು ಎಡೆಯಿದ್ದರೆ ಆಯಿತು, ಆಡುವವರೀರ್‍ವರು, ನೋಡುವವರಯ್ವರು, ಕುತೂಹಲಕ್ಕಾಗಿಯೇ ಗಂಟೆ ಗಟ್ಟಲೆ ನಿಲ್ಲುವುದು.

ತಲೆಮಾರು ಕಂದರದ (generation gap) ಕುರಿತಾಗಿ ಈ ತಲೆಮಾರಿನವರೆಲ್ಲ ತಿಳಿದಿರುವಂತಹದ್ದೇ. ಇಂತಹ ವಿಚಾರ ಬಹಳ ಹಿಂದಿನಿಂದ ತಿಳಿದಿದ್ದರೂ ಈ ಪದದ ಹುಟ್ಟು ನಮ್ಮ ದೇಶದಲ್ಲಲ್ಲ. ಹೊಸ ತಲೆಮಾರಿನ ಅರೆವಯಸ್ಕರು, ಮಕ್ಕಳು ಹಾಗೂ ಹಿಂದಿನ ತಲೆಮಾರಿನ ತಂದೆತಾಯಂದಿರ, ಹಿರಿಯರ ನಡುವೆ ಏರ್‍ಪಡುವ ಬಿಡುಕಿಗೆ ಹೀಗೆ ಕರೆಯುತ್ತೇವೆ. ನೆನಹುಗಳ, ವಿಚಾರಗಳ, ಅನುಬವಗಳ ಹಂಚಿಕೆಯ ಕೊರತೆಯಿಂದ, ಹರಡಿಕೆಯ ಕೊರತೆಯಿಂದ ಉಂಟಾಗುವ ಜಾರುವಿಕೆಯಂತಹ ಕಂದರ. ಈಗಿನ ಪೀಳಿಗೆಯ ಅರಿಮೆಯ, ಈ ಕಾಲದ ಚಳಕಗಳ ಮುನ್ನಡೆಯ ನಾಟುವಿಕೆಯೂ ಒಂದು ಕಾರಣ. ಇಂತಹ ಹಿನ್ನೆಲೆಯಲ್ಲಿ ಪರಸ್ಪರ ನೆನಹು – ಹೊಳಹುಗಳ, ಅನುಬವ-ಮನೋಬವಗಳ ಕೊಡುಕೊಳೆಗೆ ತಕ್ಕುದಾದ ಯಾವುದೇ ಬೂಮಿಕೆಯಿದ್ದರೂ ಕಡೆಗಣಿಸುವುದು ಸಲ್ಲದು. ಇದನ್ನು ಒದಗಿಸುತ್ತಲೇ ಬಂದಿರುವ, ಮುಂದೆಯೂ ನೀಡಬಲ್ಲ  ನಮ್ಮ ಇಂತಹ ಹಳೆಯಾಟಗಳಿಗೆ ಅವುಗಳದ್ದೇ ಮಹತ್ವ ಇದೆಯಂಬ ನಿಲುವು ನಮ್ಮಲ್ಲಿ ನಿಂತರೆ ಚೆನ್ನ. ಕಾಲನ ತುಳಿತಕ್ಕೆ ಬಂಡೆ ಕಲ್ಲುಗಳೂ ಗುಳಿ ಬೀಳಿಸಿಕೊಂಡವಾದರೂ ಗುಳಿಯಿಂದಲೇ ಕೂಡಿದ ಗುಳಿಮಣೆಯ ಪ್ರಸ್ತುತತೆಗೆ ಗುಳಿ ಬಿದ್ದಿಲ್ಲ.

(ಚಿತ್ರ: www.plymouth.gov.ukgamesandplay.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications