ಬ್ಯಾಂಕುಗಳಲ್ಲಿ ಮಂದಿಯ ನುಡಿ ಬಳಕೆಯಾಗಲಿ

ಮೂಲ ಸುದ್ದಿ: ಲಯ್ವ್ ಮಿಂಟ್ 

ಎಲ್ಲರಕನ್ನಡಕ್ಕೆ: ರತೀಶ ರತ್ನಾಕರ

financial Inclusion

ಬೇರೆ ಬೇರೆ ರಾಜ್ಯಗಳಲ್ಲಿ ಇರುವ ಸದ್ಯದ ಹಣಕಾಸು ಒಳಗೊಳ್ಳುವಿಕೆಯ (Financial Inclusion) ಬಡಸ್ತಿತಿಯನ್ನು ನೋಡಿ ಕೇಂದ್ರ ಸರಕಾರದ ಹಣಕಾಸು ಮಂತ್ರಿಯಾದ ಪಿ. ಚಿದಂಬರಂ ರವರು ‘ದೇಶದಲ್ಲಿ ಹಣಮನೆ (ಬ್ಯಾಂಕಿಂಗ್) ಏ‌ರ್ಪಾಡಿನ ಬಳಕೆಯನ್ನು ಹೆಚ್ಚಿಸಲು ಪ್ರತಿ ಜಿಲ್ಲೆಗೂ ಒಬ್ಬೊಬ್ಬ ಹಣಕಾಸು ಮಂತ್ರಿ ಬೇಕಾಗಿದ್ದಾರೆ’ ಎಂದು ನುಡಿದಿದ್ದಾರೆ. ಹಣಕಾಸು ಒಳಗೊಳ್ಳುವಿಕೆ ಎಂದರೆ ಹಣಮನೆ (ಬ್ಯಾಂಕ್), ವಿಮೆ ಇನ್ನಿತರ ಹಣಕಾಸು ವ್ಯವಹಾರದ ಬಳಕೆಯನ್ನು ಎಲ್ಲಾ ಮಂದಿಗೆ ತಲುಪಿಸುವುದು ಮತ್ತು ಅವರು ಅದನ್ನು ಬಳಸುವಂತೆ ಮಾಡುವುದು. ಈ ಮೂಲಕ ಹೆಚ್ಚು ಹೆಚ್ಚು ಮಂದಿ ಹಣಮನೆಯ ಸೇವೆಗಳನ್ನು ಬಳಸಿಕೊಂಡು ಹಣಕಾಸಿನ ಗಳಿಕೆಯಲ್ಲಿ ಏಳಿಗೆ ಹೊಂದುವಂತೆ ಮಾಡುವುದು.

ಕೇಂದ್ರ ಸರಕಾರವು ಹಣಕಾಸು ವ್ಯವಹಾರಗಳ ಸೇವೆಗಳನ್ನು ಮಂದಿಗೆ ತಲುಪಿಸಿ ಹಣಕಾಸು ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಹಲವು ಯೋಜನೆಗಳನ್ನು ಹಾಕಿಕೊಂಡು ಬಂದಿದೆ, ಹಳ್ಳಿ ಹಳ್ಳಿಗಳಲ್ಲಿ ಹಣಮನೆಯ ಕವಲುಗಳನ್ನು (Branch) ತೆರೆಯುವಂತೆ ಮಾಡಿ ಮಂದಿಯನ್ನು ಹಣಮನೆಯತ್ತ ಸೆಳೆಯಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಹಣಕಾಸು ಒಳಗೊಳ್ಳುವಿಕೆಯ ಮುನ್ನಡೆಯನ್ನು ಅಳೆಯಲು ಇರುವ CRISIL Inclusix ಎಂಬ ಸೂಚಕದ ಪ್ರಕಾರ ಇಂಡಿಯಾದ ಹಳ್ಳಿಗಳಲ್ಲಿ ನೆಲೆಸಿರುವ 83 ಲಕ್ಶ ಮಂದಿಯಲ್ಲಿ ಕೇವಲ 21 ಲಕ್ಶ ಮಂದಿ ಬ್ಯಾಂಕಿನಲ್ಲಿ ಉಳಿತಾಯ ಕಾತೆ ಹೊಂದಿದ್ದಾರೆ! ಸರಕಾರದ ಪ್ರಯತ್ನದ ಬಳಿಕವು ಹಣಮನೆ ಸೇವೆಗಳ ಬಳಕೆಯಲ್ಲಿ ಒಳ್ಳೆಯ ಏರಿಕೆ ಕಾಣುತ್ತಿಲ್ಲ!

ಕರ‍್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಹಣಮನೆಗಳಿವೆ, ಆದರೆ ಅಲ್ಲಿನ ಸೇವೆಗಳು ಕನ್ನಡದಲ್ಲಿ ಸಿಗದಿದ್ದಾಗ ಮಂದಿಯು ಅದರ ಬಳಕೆಯಿಂದ ದೂರ ಉಳಿಯುತ್ತಾರೆ. ಹಣಕಟ್ಟುವ ಚಲನ್, ಕಾಸೋಲೆ (Cheque), ಅ‍ರ್ಜಿ ಪತ್ರಗಳು, ಬಯಲರಿಕೆಗಳು, ಸಾಲದ ಪತ್ರಗಳು ಹೀಗೆ ಹಣಮನೆಯಲ್ಲಿ ಬಳಸುವ ಎಲ್ಲಾ ಸೇವೆಗಳಲ್ಲಿ ಮಂದಿಯ ನುಡಿಯನ್ನು ಬಳಸಬೇಕಾಗಿದೆ. ಹೆಚ್ಚಿನ ಕಡೆಗಳಲ್ಲಿ ಈ ಸೇವೆಗಳು ಕೇವಲ ಇಂಗ್ಲೀಶ್ ಹಾಗು ಹಿಂದಿಯಲ್ಲಿ ಮಾತ್ರ ಇದೆ. ಕರ‍್ನಾಟಕದಲ್ಲಿರುವ ಹಣಮನೆಗಳಲ್ಲಿ ಈ ಎಲ್ಲಾ ಸೇವೆಗಳು ಕನ್ನಡದಲ್ಲಿ ಇದ್ದಾಗ ಹಣಮನೆ ಸೇವೆಗಳ ಇರುವಿಕೆಯು ಮಂದಿಯನ್ನು ತಲುಪುತ್ತದೆ. ಆಗ ಯಾವುದೆ ಅಂಜಿಕೆ, ಹಿಂಜರಿಕೆಗಳಿಲ್ಲದೆ ಮಂದಿಯು ಸೇವೆಗಳನ್ನು ಬಳಸತೊಡಗುತ್ತಾರೆ, ಇದು ಹಣಕಾಸು ವ್ಯವಹಾರದ ಸೇವೆಗಳ ಬಳಕೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಆ ಮೂಲಕ ಒಟ್ಟು ಹಣಕಾಸು ಒಳಗೊಳ್ಳುವಿಕೆಯ ಸ್ತಿತಿಯನ್ನು ಮೇಲೆತ್ತಬಹುದು.

ಕೇಂದ್ರ ಸರಕಾರವು RBI ಜೊತೆಗೂಡಿ ಹಲವಾರು ಯೋಜನೆಗಳನ್ನೇನೊ ಮಾಡುತ್ತಿದೆ ಆದರೆ ಎಲ್ಲಾ ಹಣಮನೆಯ ಸೇವೆಗಳಲ್ಲಿ ನುಡಿಯ ಹೆಚ್ಚುಗಾರಿಕೆಯನ್ನು ಅರಿತು ಮಂದಿಯ ನುಡಿಯಲ್ಲಿ ಎಲ್ಲಾ ಸೇವೆಗಳು ಸಿಗುವಂತೆ ಮಾಡುವ ಕೆಲಸಕ್ಕೆ ಒತ್ತು ನೀಡುತ್ತಿಲ್ಲ ಎನಿಸುತ್ತದೆ, ಬದಲಾಗಿ ಹಿಂದಿ ಬಳಕೆಯನ್ನು ಹುರಿದುಂಬಿಸುತ್ತಿದೆ. ಹಿಂದಿ ದಿವಸವನ್ನು ಹಣಮನೆಗಳಲ್ಲಿ ಆಚರಿಸುವಂತೆ ಮಾಡುತ್ತ, ಹಿಂದಿಯಲ್ಲಿ ಸೇವೆ ನೀಡಿದ ಹಣಮನೆಗಳಿಗೆ ಬಹುಮಾನಗಳನ್ನು ನೀಡುತ್ತ, ಹಣಮನೆಯ ಕೆಲಸಗಾರರು ಹಿಂದಿಯಲ್ಲಿ ಸಹಿ ಮಾಡುವಂತೆ ಹುರಿದುಂಬಿಸುತ್ತ ಮಂದಿಗೆ ತಮ್ಮದಲ್ಲದ ನುಡಿಯಲ್ಲಿ ಸೇವೆಯನ್ನು ಪಡೆಯುವಂತೆ ಮಾಡುತ್ತಿದೆ. ಸರಕಾರವು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಹಣಕಾಸು ಸೇವೆಗಳ ಯೋಜನೆಯಲ್ಲಿ ಕೇವಲ ಇಂಗ್ಲೀಶ್ ಹಾಗು ಹಿಂದಿಯ ಬಳಕೆ ಮಾತ್ರ ಕಯ್ ಬಿಟ್ಟು ಮಂದಿಯ ನುಡಿಯಲ್ಲಿ ಸೇವೆ ಸಿಗುವಂತೆ ಮಾಡಬೇಕಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: