ತೆಲಂಗಾಣ: ಕೇಂದ್ರದ ಹಟಕ್ಕೆ ಗೆಲುವು, ತೆಲುಗರ ಸೋಲು

ಚೇತನ್ ಜೀರಾಳ್.

TState-gr8telanganadotcom

ಸರಿಯಾದುದು ಏನೇ ಇರಲಿ, ಜನರಿಗೆ ಒಳಿತಾದುದು ಏನೇ ಇರಲಿ, ಕೊನೆಗೂ ಕೇಂದ್ರ ಸರಕಾರ ತಾನು ಅಂದುಕೊಂಡಿದ್ದನ್ನು ಮಾಡಿ ತೋರಿಸಿದೆ. ಒಂದಾಗಿದ್ದ ಆಂದ್ರ ಪ್ರದೇಶ ರಾಜ್ಯವನ್ನು ಒಡೆದು, ಸೀಮಾಂದ್ರ ಮತ್ತು ತೆಲಂಗಾಣ ರಾಜ್ಯಗಳನ್ನಾಗಿ ಮಾಡಿ ಮುಗಿಸಿದೆ. ಮುಂದಿನ ಹತ್ತು ವರ್‍ಶಗಳ ತನಕ ಹಯ್ದರಾಬಾದ್ ಊರು ಎರಡೂ ರಾಜ್ಯಗಳ ರಾಜದಾನಿಯಾಗಿ ಇರಲಿದೆ ಎಂದು ಕೇಂದ್ರ ಸರ್‍ಕಾರ ಹೇಳಿದೆ. ಒಂದೇ ನುಡಿಯಾಡುವ ಒಂದೇ ರಾಜ್ಯಕ್ಕೆ ಸೇರಿದ ಜನರು ಈಗ ಎದುರುಬದುರಾಗಿ ಹೊಡೆದಾಡುತ್ತಿದ್ದಾರೆ. ಕೇಂದ್ರ ಸರ್‍ಕಾರದ ಈ ನಿರ್‍ದಾರವನ್ನು ತೆಲಂಗಾಣ ರಾಜ್ಯ ಬೇಕು ಎಂದು ಹೋರಾಟ ಮಾಡುತ್ತಿದ್ದ ತೆಲಂಗಾಣ ರಾಶ್ಟ್ರ ಸಮಿತಿ ಪಕ್ಶ ಬರಮಾಡಿಕೊಂಡರೆ, ಆಂದ್ರದ ಇತರೇ ಪಕ್ಶಗಳು ಇದರಿಂದ ಬೇಸರವಾಗಿದೆ ಎಂದು ಹೇಳಿರುವುದು ಸುದ್ದಿ ಮಾದ್ಯಮಗಳಲ್ಲಿ ವರದಿಯಾಗಿದೆ.

“ಸಣ್ಣ ರಾಜ್ಯಗಳು = ಹೆಚ್ಚಿನ ಏಳಿಗೆ” ಅನ್ನುವುದು ಸುಳ್ಳು

ಮೊದಲನೆಯದಾಗಿ ತೆಲಂಗಾಣ ರಾಜ್ಯವನ್ನು ಮಾಡಿದ್ದರ ಕಾರಣ ನೋಡಿದರೆ, ಇದು ರಾಜಕೀಯ ಪ್ರೇರಿತವಾಗಿಯೇ ಆಗಿದೆ ಅನ್ನುವುದು ತುಂಬಾ ತಿಳಿಯಾಗಿ ಕಾಣಿಸುತ್ತಿದೆ. ತೆಲಂಗಾಣ ರಾಜ್ಯವನ್ನು ಕಡೆಗಣಿಸಲಾಗಿದೆ, ಇದು ಏಳಿಗೆ ಕಾಣಬೇಕಾದರೆ ಬೇರೆ ರಾಜ್ಯವೇ ಆಗಬೇಕು ಎಂದು ತೆಲಂಗಾಣ ಬಾಗದ ನಾಯಕರು ದನಿ ಎತ್ತಿದ್ದರು. ಗಮನಿಸಬೇಕಾಗಿರುವ ಅಂಶವೆಂದರೆ ಈ ಮೊದಲೂ ಸಹ ಈ ಮಂದಿಯೇ ಅಲ್ಲಿಯ ಜನಪ್ರತಿನಿದಿಗಳಾಗಿದ್ದರು. ಇವರು ಆಡಳಿತದಲ್ಲಿ ಇದ್ದಾಗಲೇ ಆಗದ ಏಳಿಗೆ, ಬೇರೆ ರಾಜ್ಯವಾದ ಕೂಡಲೇ ಹೇಗಾಗುತ್ತದೆ? ಹಿಂದೆ ಆಳಿದವರು ಇವರೇ, ಮುಂದೆ ಆಳುವವರು ಇವರೇ ಎಂದು ಗೊತ್ತಿದ್ದರೂ ರಾಜ್ಯದ ಏಳಿಗೆ ಹೇಗಾಗುತ್ತದೆ ಅನ್ನುವುದು ಕೇಳ್ವಿ.

ಇನ್ನು ಸಣ್ಣ ರಾಜ್ಯಗಳು ಇದ್ದರೆ ಏಳಿಗೆ ಸುಲಬ ಅಂತ ವಾದಿಸುವ ಜನರಿದ್ದಾರೆ. ಆದರೆ ಇದು ನಿಜವೇ ಎಂದು ನೋಡಲು ಹೊರಟರೆ ಬಾರತದ ಸಣ್ಣ ರಾಜ್ಯಗಳಾಗಿರುವ ಸಿಕ್ಕಿಂ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ಮೇಗಾಲಯ, ಜಾರ‍್ಕಂಡ್ ಮುಂತಾದ ರಾಜ್ಯಗಳು ಇಂದು ಬಾರತದಲ್ಲಿ ಸಾದಿಸಿರುವ ಏಳಿಗೆಯ ಬಗ್ಗೆ ನೋಡಿದರೆ ನಮಗೆ ಕಾದಿರುವುದು ನಿರಾಸೆಯೇ! ಜೊತೆಗೆ ಕೇಂದ್ರದಿಂದ ಈ ರಾಜ್ಯಗಳಿಗೆ ಸಿಗುತ್ತಿರುವ ಅನುದಾನ, ಪ್ರಾತಿನಿದ್ಯ ಕವಡೆಯಶ್ಟು ಮಾತ್ರ. ಈ ಪಟ್ಟಿಗೆ ತೆಲಂಗಾಣ ರಾಜ್ಯ ಮತ್ತೊಂದು ಸೇರ್‍ಪಡೆಯಾಗುವ ಸಾದ್ಯತೆಯೇ ಹೆಚ್ಚು.

ಸಣ್ಣ ರಾಜ್ಯಗಳು = ಬಲಿಶ್ಟ ಕೇಂದ್ರ

ಹೀಗೆ ಇರುವ ರಾಜ್ಯಗಳನ್ನು ಒಡೆಯುವ ಕೇಂದ್ರದ ನಿರ್‍ದಾರ ರಾಜ್ಯಗಳ ಮೇಲಿರುವ ತನ್ನ ಹಿಡಿತವನ್ನು ಮತ್ತಶ್ಟು ಗಟ್ಟಿ ಮಾಡಿಕೊಳ್ಳಲು ಕಾರಣವಾಗಿದೆ. ಇಂದಿರುವ ಚುನಾವಣೆ ಏರ‍್ಪಾಡಿನಲ್ಲಿ ಲೋಕಸಬೆಯಲ್ಲಿ ಹೆಚ್ಚಿನ ಸೀಟು ಹೊಂದಿರುವ ಪಕ್ಶ ತನ್ನ ರಾಜ್ಯಕ್ಕೆ ಬೇಕಿರುವ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾದ್ಯ. ಈಗ ಇದೇ ಸೀಟುಗಳನ್ನು ಒಡೆದರೆ, ಯಾವೊಂದು ಪಕ್ಶಕ್ಕೂ ತನ್ನ ಹಿಡಿತವನ್ನು ಕೇಂದ್ರದಲ್ಲಿ ಗಟ್ಟಿಗೊಳಿಸಲು ಸಾದ್ಯವಾಗುವುದಿಲ್ಲ. ಬದಲಾಗಿ ಕೇಂದ್ರದ ಹಿಡಿತಕ್ಕೆ ಬರಬೇಕಾಗುತ್ತದೆ. ಎತ್ತುಗೆಗೆ, ಇಂದಿನ ಆಂದ್ರಪ್ರದೇಶದಲ್ಲಿ 42 ಲೋಕಸಬೆ ಸೀಟುಗಳಿವೆ. ಒಂದು ವೇಳೆ ತೆಲುಗು ದೇಶಂ ಮತ್ತು ಇತರೇ ಪಕ್ಶಗಳು ಹೆಚ್ಚಿನ ಸೀಟು ಗೆದ್ದರೆ ಕೇಂದ್ರದಲ್ಲಿ ಯಾವ ಪಕ್ಶವಾದರೂ ಸರ್‍ಕಾರ ಮಾಡುವಾಗ ಇವರ ಬೆಂಬೆಲ ಬೇಡುತ್ತದೆ. ಆಗ ಆಂದ್ರಪ್ರದೇಶಕ್ಕೆ ಬೇಕಿರುವ ಯೋಜನೆಗಳ ಬಗ್ಗೆ ಈ ಪಕ್ಶಗಳು ದ್ವನಿ ಎತ್ತುತ್ತವೆ, ಇವರ ಒತ್ತಡಕ್ಕೆ ಮಣಿವ ಕೇಂದ್ರ ಒಪ್ಪಿಗೆ ನೀಡುತ್ತದೆ. ಈಗ ಆಂದ್ರಪ್ರದೇಶವನ್ನ ಒಡೆದರೆ ಈ 42 ಸೀಟುಗಳು ಎರಡು ರಾಜ್ಯಗಳ ನಡುವೆ ಹಂಚಿಹೋಗುತ್ತವೆ. ಆಗ ಕೇಂದ್ರದ ಮೇಲೆ ಈ ಪಕ್ಶಗಳಿಗೆ ಇರುವ ಹಿಡಿತ ಕಡಿಮೆಯಾಗಿ ಕೇಂದ್ರ ಹೇಳಿದ್ದೇ ಕೊನೆ ಎಂಬಂತಾಗಿ ಹೋಗುತ್ತದೆ. ಹೀಗೆ ಸಣ್ಣ ರಾಜ್ಯಗಳು ಹೆಚ್ಚಾದಲ್ಲಿ ಕೇಂದ್ರ ಬಲಿಶ್ಟವಾಗಿ ಹೋಗುತ್ತದೆ ಮತ್ತು ಒಕ್ಕೂಟ ಏರ‍್ಪಾಡಿಗೆ (federal system) ಎದುರಾಗಿ ಕೇಂದ್ರೀಕ್ರುತ ಏರ‍್ಪಾಡು (centralized system) ಬರುತ್ತದೆ.

ರಾಜ್ಯಗಳಿಗೆ ಬೇಕು ಹೆಚ್ಚಿನ ಹಣಕಾಸು ಅದಿಕಾರ

ಮೊದಲನೆಯದಾಗಿ ನುಡಿಯ ಆದಾರದ ಮೇಲೆ ಆಗಿರುವ ರಾಜ್ಯವನ್ನು ಒಡೆದಿರುವುದು ಸರಿಯಲ್ಲ. ಇಂದು ರಾಜ್ಯಗಳು ಏಳಿಗೆ ಹೊಂದಲು ಬೇಕಾಗಿರುವುದು ಕೇಂದ್ರದ ಅನುದಾನ, ಅನುಮತಿಗಳಲ್ಲ ಬದಲಿಗೆ ಹೆಚ್ಚಿನ ಅದಿಕಾರ. ಹಣಕಾಸಿನ ಅದಿಕಾರ ಮತ್ತು ಶಾಸಕಾಂಗ ಅದಿಕಾರ. ಹಿಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರದ ನಡುವೆ ಆಗಿರುವ ಶಾಸಕಾಂಗ ಅದಿಕಾರದ ಹಂಚಿಕೆ ಹೇಗೆ ಒಕ್ಕೂಟ ಏರ‍್ಪಾಡಿಗೆ ಮಾರಕವಾಗಿದೆ ಅನ್ನುವುದರ ಬಗ್ಗೆ ಹೇಳಿದ್ದೇನೆ. ಇಲ್ಲಿ ಹಣಕಾಸಿನ ಅದಿಕಾರದ ಬಗ್ಗೆ ನೋಡೋಣ.

ಇಂದು ರಾಜ್ಯದಿಂದ ಬರುವ ಹೆಚ್ಚಿನ ತೆರಿಗೆ ಹಣವು ಕೇಂದ್ರಕ್ಕೆ ಹೋಗುತ್ತದೆ. ಹೀಗೆ ಎಲ್ಲಾ ರಾಜ್ಯಗಳಿಂದ ಹೋಗುವ ತೆರಿಗೆ ಹಣವನ್ನು ಕೂಡಿಸುವ ಕೇಂದ್ರ ಅದರಲ್ಲಿ ಒಂದು ಪಾಲನ್ನು ಎಲ್ಲಾ ರಾಜ್ಯಗಳಿಗೂ ಸಮನಾಗಿ ಹಂಚುವ ಕೆಲಸ ಮಾಡುತ್ತದೆ. ಮತ್ತು ರಾಜ್ಯಗಳು ಮಾಡುವ ಯೋಜನೆಗೆ ತನಗೆ ಸರಿಯೆನ್ನಿಸಿದರೆ ಮಾತ್ರ ಹೆಚ್ಚಿನ ಹಣ ನೀಡುತ್ತದೆ. ಮತ್ತು ಕೆಲವು ಸಾರಿ ತಾನು ಹೇಳಿದ ಯೋಜನೆ ಮಾಡಿದರೆ ಮಾತ್ರ ಹಣ ನೀಡುವುದಾಗಿ ಹೇಳುತ್ತದೆ.

ಹೀಗೆ ರಾಜ್ಯ ತನ್ನ ಒಳಿತಿಗೆ ಬೇಕಿರುವ ಯೋಜನೆಗಳನ್ನು ಮಾಡಬೇಕಾದರೂ ಕೇಂದ್ರದ ಮುಂದೆ ಕಯ್ಕಟ್ಟಿ ನಿಲ್ಲಬೇಕಾದ ಪರಿಸ್ತಿತಿ ಇದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಶವು ಕೇಂದ್ರದಲ್ಲಿ ತನ್ನ ತೋಳ್ಬಲ ಪ್ರಯೋಗಿಸಿದರೆ ಮಾತ್ರ ಕೆಲಸ ನಡೆಯುವಂತಹ ಪರಿಸ್ತಿತಿ ಇವತ್ತಿದೆ. ಇದು ಸರಿಯಾಗಬೇಕೆಂದರೆ ಮೊದಲನೆಯದಾಗಿ, ರಾಜ್ಯಗಳಿಂದ ಹುಟ್ಟುವ ತೆರಿಗೆ ಹಣದ ಹೆಚ್ಚಿನ ಮೊತ್ತ ಆಯಾ ರಾಜ್ಯಗಳಿಗೆ ಸಿಗುವಂತಾಗಬೇಕು. ತನ್ನಲ್ಲಿರುವ ಹಣದಿಂದ ತನ್ನ ರಾಜ್ಯಕ್ಕೆ ಯಾವ ಯೋಜನೆಗಳನ್ನು ಮಾಡಬೇಕು, ಮಾಡಬಾರದು ಎನ್ನುವುದರ ಬಗ್ಗೆ ರಾಜ್ಯ ಸರ್‍ಕಾರಗಳು ತೀರ್‍ಮಾನಗಳನ್ನು ಕಯ್ಗೊಳ್ಳಲು ಸುಲಬವಾಗುತ್ತದೆ. ಹಿಂದುಳಿದಿರುವ ಪ್ರದೇಶಗಳ ಏಳಿಗೆಗೆ ಯಾವ ಯೋಜನೆಗಳನ್ನು ಮಾಡಬೇಕು, ಅಲ್ಲಿಯ ಜನರಿಗೆ ಯಾವ ಸವಲತ್ತುಗಳನ್ನು ನೀಡಬೇಕು ಎನ್ನುವುದರ ಬಗ್ಗೆ ದೆಹಲಿಗಿಂತ ಹೆಚ್ಚಿನ ಸರಿಯಾದ ನಿರ್‍ದಾರಗಳನ್ನು ತಗೆದುಕೊಳ್ಳಲು ರಾಜ್ಯ ಸರ‍್ಕಾರಗಳಿಗೆ ಸಾದ್ಯ.

ಕೇಂದ್ರ ಸರ್‍ಕಾರ ಬಾರತದಲ್ಲಿರುವ ರಾಜ್ಯಗಳನ್ನು ಏಳಿಗೆ ಹೊಂದುವಂತೆ ಮಾಡಲು ಸಣ್ಣ ಸಣ್ಣ ರಾಜ್ಯಗಳನ್ನು ಮಾಡಬೇಕಾಗಿಲ್ಲ. ಬದಲಿಗೆ ಒಕ್ಕೂಟ ಏರ‍್ಪಾಡಿನ ನಿಯಮದಂತೆ ರಾಜ್ಯಗಳಿಗೆ ಹೆಚ್ಚಿನ ಅದಿಕಾರ, ಹಣಕಾಸಿನ ತನ್ಬಲ (self sustenance) ನೀಡಬೇಕು. ತನ್ನ ರಾಜ್ಯದ ಒಳಿತು ಕೆಡಕಿನ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೆ ನೀಡಿ ತಾನು ಕೇವಲ ನೆರವುಗಾರನ ಕೆಲಸ ಮಾಡಿದರೆ ಸಾಕು.

(ಚಿತ್ರ: www.gr8telangana.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: