ಕನ್ನಡ ಕಲಿಯಲು ನೂಕು-ನುಗ್ಗಲು!

ರತೀಶ ರತ್ನಾಕರ

learn kannada

ಬೆಂಗಳೂರಿನ ಇತ್ತೀಚಿನ ಟ್ರೆಂಡ್ ಏನು ಗೊತ್ತ? ಕನ್ನಡ ಗೊತ್ತಿಲ್ಲದವರು ಕನ್ನಡವನ್ನು ಕಲಿಯುವುದು! ಹವ್ದು, ಸಿಟಿಜನ್ ಮ್ಯಾಟರ‍್ಸ್ ಎಂಬ ಮಿಂಬಲೆಯ ವರದಿಯ ಪ್ರಕಾರ ಬೆಂಗಳೂರಿನ ಕನ್ನಡೇತರರು ಕನ್ನಡ ಕಲಿಯುವತ್ತ ಒಲವನ್ನು ತೋರಿಸುತ್ತಿದ್ದಾರೆ. ಹಲವು ದಿನಗಳಿಂದ ‘ಕನ್ನಡ ಬರೋಲ್ಲ’ ಎಂದು ಹೇಳಿಕೊಂಡು ಬೆಂಗಳೂರು ತಿರುಗುತ್ತಿದ್ದವರು ಈಗ ಕನ್ನಡ ಕಲಿಯುವತ್ತ ಒಲವನ್ನು ತೋರಿಸಿದ್ದಾರೆ. ಇನ್ನೇನು ‘ಕನ್ನಡ ಬರುತ್ತೆ’ ಎಂದು ಹೇಳಿಕೊಳ್ಳುವ ದಿನಗಳು ದೂರವಿಲ್ಲ ಎನಿಸುತ್ತದೆ. ಕನ್ನಡವನ್ನು ಕಲಿಯದೆ ಕನ್ನಡಿಗರಿಂದ ದೂರವಿದ್ದ ವಲಸಿಗರು ಕನ್ನಡ ಕಲಿತು ಬೆಂಗಳೂರಿನ ಮುಕ್ಯ ವಾಹಿನಿಗೆ ಬರಲು ಅಣಿಯಾಗುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಗೊತ್ತಿರಲೇಬೇಕಾದ ಅನಿವಾರ‍್ಯತೆ ಮೂಡುತ್ತಿದೆ, ಹಾಗು ಕೆಲವು ನಡೆ-ನುಡಿಯ ಕಾರಣಗಳಿಂದಾಗಿಯೂ ಕನ್ನಡ ಕಲಿಕೆಯು ಬೇಕಾಗಿದೆ ಎಂದು ವರದಿ ಹೇಳುತ್ತದೆ. ಅವುಗಳು ಈ ಕೆಳಗಿನಂತಿವೆ:

 • ತರಕಾರಿ-ದಿನಸಿ ಅಂಗಡಿಗಳಲ್ಲಿ, ಬಸ್ಸು- ಆಟೋ ರಿಕ್ಶಾದಲ್ಲಿ, ಮನೆಗೆಲಸದವರ ಹತ್ತಿರ ಸುಲಬವಾಗಿ ಹಾಗು ಪರಿಣಾಮಕಾರಿಯಾಗಿ ಮಾತನಾಡಲು ಅನುಕೂಲವಾಗಲು.
 • ಮಕ್ಕಳ ಕಲಿಕೆಯಲ್ಲಿ ನೆರವಾಗಲು.
 • ಕನ್ನಡ – ಕನ್ನಡಿಗ ಎಂಬ ಬಾವನೆ ಹೆಚ್ಚುತ್ತಿರುವುದರಿಂದ.
 • ಬೆಂಗಳೂರಿಗರ ಜೊತೆ ಬೆರೆಯಲು.
 • ಬೆಂಗಳೂರಿನ ಹಬ್ಬಗಳಾದ ಕರಗ, ಪರಿಶೆ, ಇನ್ನಿತರ ಸಾಂಸ್ಕ್ರುತಿಕ ಕಾರ‍್ಯಕ್ರಮಗಳನ್ನು ಸವಿಯಲು.

ಹೀಗೆ ಹತ್ತು ಹಲವು ಕಾರಣಗಳಿಂದ ಕನ್ನಡ ಕಲಿಯುವತ್ತ ಒಲವನ್ನು ತೋರುತ್ತಿದ್ದಾರೆ.

ಕನ್ನಡ ಕಲಿಯುವ ಬೇಡಿಕೆಯನ್ನು ಪೂರಯ್ಸಲು ಬೆಂಗಳೂರಿನಲ್ಲಿ ಹಲವು ಆಯ್ಕೆಗಳು ಕೂಡ ದಿನೆ ದಿನೆ ಹೆಚ್ಚುತ್ತಿವೆ. ಕನ್ನಡ ಕಲಿಯಲು ಬೇಕಾದ ಹೊತ್ತಗೆಗಳು, ಕನ್ನಡ ಮಾತನಾಡಲು ವರ‍್ಕ್ ಶಾಪ್, ವಾರದ ಕೊನೆಯ ಕನ್ನಡ ಕ್ಲಾಸಸ್, ಕಾಪಿ ಡೇಯಲ್ಲಿ ಕನ್ನಡ ಕ್ಲಾಸ್ ಮತ್ತು ಕನ್ನಡ ಲರ‍್ನಿಂಗ್ ಸ್ಕೂಲ್‍ ಎಂಬ ಕಲಿಕೆಮನೆಗಳು ಕಲಿಕೆಯ ಬೇಡಿಕೆಯನ್ನು ಪೂರಯ್ಸುತ್ತಿವೆ. ಕಲಿಯುವ ಮಂದಿಗೆ ಕನ್ನಡ ಕಲಿಕೆಗೆ ಬೇಕಾದ ನೆರವನ್ನು ನೀಡುತ್ತಿವೆ. ಇದಲ್ಲದೇ ಹಲವು ಮಿಂಬಲೆಗಳು ಕೂಡ ( ಎತ್ತುಗೆಗೆ: kannadabaruthe.com, mathadi.com/learn-kannada ) ಕನ್ನಡ ಕಲಿಕೆಯನ್ನು ಬಿಟ್ಟಿಯಾಗಿ ನಡೆಸುತ್ತಿವೆ.

ಇನ್ನು ಕೆಲವು ಮಂದಿ ಕನ್ನಡ ಮಾತನಾಡುವುದರ ಜೊತೆಗೆ ಓದವುದನ್ನು ಮತ್ತು ಬರೆಯುವುದನ್ನು ಕಲಿಯಲು ಮುಂದಾಗಿದ್ದಾರೆ, ನಗರದ ಬಸ್ಸುಗಳು ಹೋಗುವ ಜಾಗದ ಹೆಸರನ್ನು ತಿಳಿಯಲು, ಸುದ್ದಿಹಾಳೆಯ ಮಾಹಿತಿಯನ್ನು ಓದಲು ಹೀಗೆ ಮುಂತಾದ ಕಾರಣಗಳಿಗೆ ಕನ್ನಡ ಬರವಣಿಗೆಯನ್ನು ಕಲಿಯುತ್ತಿದ್ದಾರೆ. ಬೆಂಗಳೂರಿನಲ್ಲಿ ಬಂದು ನೆಲಸಿ, ಇಲ್ಲಿನವರ ಜೊತೆ ಬಾಳಿ ಬದುಕಲು ಕನ್ನಡ ಬೇಕೆ ಬೇಕು ಎಂಬ ಅರಿವು ಈಗಲಾದರು ಕನ್ನಡೇತರರಿಗೆ ಬಂದಿರುವುದು ನಲಿವಿನ ಸುದ್ದಿ.

ಕನ್ನಡ ಕಲಿಯಲು ಬಹಳ ಸುಲಬದ ದಾರಿ ಎಂದರೆ ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತನಾಡುವ ಪ್ರಯತ್ನ ಮಾಡುವುದು. ಆದರೆ ಹಲವು ಕನ್ನಡಿಗರು ಕನ್ನಡದಲ್ಲಿ ಮಾತನಾಡುವ ಒಲವನ್ನು ತೋರುತ್ತಿಲ್ಲ ಎಂಬ ಸಣ್ಣ ಬೇಜಾರು ಕನ್ನಡೇತರರ ಬಳಿ ಇದೆ. ಕನ್ನಡದಲ್ಲಿ ಮಾತುಕತೆಯನ್ನು ಮುಂದುವರಿಸಲು ಕನ್ನಡಿಗರು ಹಿಂಜರಿಯುತ್ತಿದ್ದಾರೆ ಎಂಬ ದೂರು ಇದೆ. ಆದರೆ ಈಗ ಕನ್ನಡಿಗರ ಮನಸ್ತಿತಿ ಕೂಡ ಬದಲಾಗಿ ಕನ್ನಡ ಮಾತನಾಡಲು ಮುಂದಾಗುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕನ್ನಡಿಗರ ಹೆಚ್ಚು ಹೆಚ್ಚು ಕನ್ನಡದಲ್ಲಿ ವ್ಯವಹರಿಸಿದರೆ ಮತ್ತು ಮಾತನಾಡಿದರೆ ಕನ್ನಡೇತರರಿಗೆ ಕನ್ನಡ ಕಲಿಕೆಯ ಅನಿವಾರ‍್ಯತೆಯ ಅರಿವಾಗುತ್ತದೆ, ಹಾಗು ಕನ್ನಡ ಕಲಿಯಲು ಅವರಿಗೆ ನೆರವಾಗುತ್ತದೆ. ನಮ್ಮ ಕನ್ನಡೇತರ ಗೆಳೆಯರು ಮತ್ತು ಸಹುದ್ಯೋಗಿಗಳ ಬಳಿ ದಿನನಿತ್ಯದ ಮಾತುಕತೆಗಳನ್ನು ಕನ್ನಡದಲ್ಲೆ ನಡೆಸಿ ಕನ್ನಡ ಕಲಿಯುವಂತೆ ಹುರಿದುಂಬಿಸಬಹುದು. ಅವರ ಕನ್ನಡ ನುಡಿಯ ತಪ್ಪುಗಳನ್ನು ತಿದ್ದಿ ಯಾವ ಹಿಂಜರಿಕೆಯಿಲ್ಲದೆ ಕನ್ನಡ ಮಾತನಾಡುವಂತೆ ಮಾಡಬಹುದು. ಹಾಗಾಗಿ, ಕನ್ನಡಿಗರಾದ ನಾವು ಈ ನಿಟ್ಟಿನಲ್ಲಿ ಯೋಚಿಸಿ ಕನ್ನಡೇತರರು ಕನ್ನಡ ಕಲಿಯುವಲ್ಲಿ ನೆರವಾಗಬೇಕಿದೆ.

(ಚಿತ್ರ: ಸಿಟಿಜನ್ ಮ್ಯಾಟರ‍್ಸ್ )

ಇವುಗಳನ್ನೂ ನೋಡಿ

2 ಅನಿಸಿಕೆಗಳು

 1. ಕಣ್ಣಿಗೆ ಕಾಡಿಗೆ ಬೇಕು
  ಕಾಡಿಗೆ ಮರ-ಗಿಡ-ಬಳ್ಳಿ, ಪ್ರಾಣಿ-ಪಕ್ಷಿ ಬೇಕು
  ಮರ-ಗಿಡ-ಬಳ್ಳಿ, ಪ್ರಾನಿ-ಪಕ್ಷಿಗಳಿಗೆ ನೀರು-ಗಾಳಿ-ಬೆಳಕು ಬೇಕು
  ನೀರು-ಗಾಳಿ-ಕಾಡು-ನೆಲದ ರಕ್ಷಣೆಗೆ ಮಾನವನ ಪರಿಸರಾತ್ಮಕ ಬದುಕು ಬೇಕು
  ನಮ್ಮ ಅಬಿವ್ಯಕ್ತಿ-ಸಾಂಸ್ಕೃತಿಕ-ಆಡಳಿತ-ಸಾಹಿತ್ಯ-ತಾಂತ್ರಿಕ-ಜ್ಞಾನ ಹೀಗೆ ಮುಂತಾದ
  ‘ಆತ್ಮಕ’ ವುಗಳಿಗೆ ಏನು ಬೇಕು?
  ‘ಕನ್ನಡ ನಾಡ ನುಡಿ’ ಎಂಬ ಆತ್ಮ ಬೇಕು.

ಅನಿಸಿಕೆ ಬರೆಯಿರಿ: