ಕೇರಳದಲ್ಲಿ ಹರಿಯುತ್ತಿದೆ ಹಣದ ಹೊಳೆ!

ಚೇತನ್ ಜೀರಾಳ್.

kerala remittances

ಇತ್ತೀಚಿಗೆ ಪಸ್ಟ್ ಪೋಸ್ಟ್ ಮಿಂಬಲೆಯಲ್ಲಿ ಸುದ್ದಿಯೊಂದು ಬಂದಿದೆ. ಈ ಸುದ್ದಿಯ ಪ್ರಕಾರ ಕೇರಳದ ಸುಮಾರು 20 ಲಕ್ಶ ಮಳೆಯಾಳಿಗಳು ಹೆರನಾಡುಗಳಲ್ಲಿ ನೆಲೆಸಿದ್ದಾರೆ. ಇವರ ಹಾಗೆ ಕನ್ನಡಿಗರು, ತಮಿಳರು, ಉತ್ತರದವರು ನೆಲೆಸಿದ್ದಾರೆ, ಇದರಲ್ಲೇನು ದೊಡ್ಡ ವಿಶಯ ಅನ್ನುತ್ತಿದ್ದೀರಾ? ಇಲ್ಲಿದೆ ಕೇಳಿ, ರೂಪಾಯಿ ಬೆಲೆ ಕುಸಿಯುತ್ತಿರುವ ಈ ಸಮಯದಲ್ಲಿ ಹೆರನಾಡುಗಳಲ್ಲಿ ನೆಲೆಸಿರುವ ಈ ಮಳೆಯಾಳಿಗಳು ತಮ್ಮ ನಾಡಿಗೆ ಕಳಿಸುತ್ತಿರುವ ದುಡ್ಡಿನ ಮೊತ್ತ ಸುಮಾರು 75,000 ಕೋಟಿ ರುಪಾಯಿಗಳು!! ಹವ್ದು ವರ್‍ಶವೊಂದಕ್ಕೆ ಇಶ್ಟು ದೊಡ್ಡ ಮೊತ್ತವನ್ನ ಹೆರನಾಡಿನಲ್ಲಿರುವವರು ತಮ್ಮವರಿಗೆ ಕಳುಹಿಸುತ್ತಿದ್ದಾರೆ. ಇದು ಕೇರಳ ರಾಜ್ಯದ ಜಿಡಿಪಿಯ ಶೇ 35 ರಶ್ಟಾಗುತ್ತದೆಯಂತೆ.

ಈಗ ಕೇರಳಕ್ಕೆ ಬರುತ್ತಿರುವ ಹಣ ರಾಜ್ಯ ಸರಕಾರ ಗಳಿಸುತ್ತಿರುವ ಒಟ್ಟು ಗಳಿಕೆಗಿಂತ 1.6 ಪಟ್ಟು ಹೆಚ್ಚಿದೆಯಂತೆ. ಕೇಂದ್ರ ಸರಕಾರ ರಾಜ್ಯಕ್ಕೆ ಕೊಡುವ ಹಣಕ್ಕಿಂತ 6.2 ಪಟ್ಟು ಹೆಚ್ಚಿದೆ. ಅಂದರೆ ಹೊರನಾಡಿನಲ್ಲಿ ನೆಲೆಸಿರುವ ಈ ಜನರು ಗಳಿಸುತ್ತಿರುವ ದುಡ್ಡು, ಕೇರಳ ರಾಜ್ಯದ ಏಳಿಗೆಗೆ ಕಾರಣವಾಗುತ್ತಿದೆ.

ಇದು ಸಾದ್ಯವಾಗಿದ್ದು ಹೇಗೆ?
ಕೇರಳ ರಾಜ್ಯ ಈ ಮಟ್ಟದ ಏಳಿಗೆಗೆ ಕಾರಣವಾಗಿರುವುದು ಅಲ್ಲಿರುವ ಕಲಿಕೆಯೇರ‍್ಪಾಡು ಮತ್ತು ಆರೋಗ್ಯ ಸೇವೆಗಳು. ಕೆಲಿಕೆಯಲ್ಲಿ ಕೇರಳ ಬಾರತದಲ್ಲೇ ಮೊದಲು ಸ್ತಾನದಲ್ಲಿದೆ. ಕಲಿಕೆಯಲ್ಲಿ ಮುಂದಿರುವುದಕ್ಕೆ ಅಯ್ತಿಹಾಸಿಕವಾಗಿ ಅಲ್ಲಿನ ಟ್ರಾವನ್ಕೋರ್‍ ಅರಸು ಮನೆತನದವರು ಕೆಲಿಕೆಗೆ ಹೆಚ್ಚಿನ ಒತ್ತು ಕೊಟ್ಟಿದ್ದರು, ಗಂಡು, ಹೆಣ್ಣು ಅನ್ನೋ ಬೇದವಿಲ್ಲದೆ ಎಲ್ಲರಿಗೂ ಕಲಿಕೆ ಸಿಗಲೇಬೇಕು ಅನ್ನೋದು ಅವರ ನಿಲುವಾಗಿತ್ತು. ಇದರ ಜೊತೆಗೆ ಅಲ್ಲಿದ್ದ ಬ್ರಿಟಿಶ್ ಸರಕಾರ, ಕ್ಯಾತೋಲಿಕ ಮತ್ತು ಕ್ರಿಶ್ಚಿಯನ್ ಮಿಶನರಿಗಳು ಸಹ ಕೇರಳದಲ್ಲ ಕಲಿಕೆ ಏರ್‍ಪಾಡನ್ನು ಕಟ್ಟಲು ಶ್ರಮಿಸಿವೆ. ಇದರ ಪರಿಣಾಮವಾಗಿಯೇ ಈ ರಾಜ್ಯ ಕಲಿಕೆಯಲ್ಲಿ ಮುಂದೊರೆಯಲು ಸಾದ್ಯವಾಯಿತು.

ಇದರ ಜೊತೆಗೆ ಆರೋಗ್ಯ ಕ್ಶೇತ್ರದಲ್ಲಿ ಅಲ್ಲಿನ ಸರಕಾರ ಹೆಚ್ಚಿನ ಕಾಳಜಿ ವಹಿಸಿದೆ. ಸಾಮಾಜಿಕ ಅರಿವಿನಿಂದಾಗಿ ಕೇರಳದಲ್ಲಿರುವ ಸರಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿವೆ ಹಾಗೂ ಅಲ್ಲಿಗೆ ಬರುವ ರೋಗಿಗಳ ಕಾಳಜಿ ವಹಿಸುತ್ತವೆ ಎಂದು ವರದಿಗಳು ತಿಳಿಸುತ್ತವೆ. ಕೇರಳದಲ್ಲಿ ಸುಮಾರು 2,700 ಸರಕಾರಿ ಆರೋಗ್ಯ ಕೇಂದ್ರಗಳಿವೆ. 10,000 ಜನಸಂಕ್ಯೆಗೆ 330 ಹಾಸಿಗೆಗಳಿವೆ. ಇದು ದೇಶದಲ್ಲೇ ಮೊದಲನೇ ಜಾಗದಲ್ಲಿದೆ. ಇದರ ಜೊತೆಗೆ ಹೆರಿಗೆ ಸಮಯದಲ್ಲಿ 1000 ಕ್ಕೆ 1.3 ಮಕ್ಕಳು/ತಾಯಿ ಸಾಯುತ್ತಾರೆ.

ಇಂತಹ ಒಳ್ಳೆಯ ಕಲಿಕೆ ಹಾಗೂ ಆರೋಗ್ಯ ವ್ಯವಸ್ತೆಯನ್ನು ಕಟ್ಟಿಕೊಂಡಿರುವ ಈ ನಾಡು ಒಳ್ಳೆಯ ಪ್ರತಿಬೆಗಳನ್ನು ಬೆಳಸಲು ಸಾದ್ಯವಾಗಿದೆ. ಇಲ್ಲಿ ಓದಿಕೊಳ್ಳುವ ಜನರು ನಂತರ ಕೆಲಸ ಅರಸಿ ಹೊರ ನಾಡುಗಳಿಗೆ ಮತ್ತು ದೇಶಗಳಿಗೆ ಹೊರಡುತ್ತಾರೆ. ಇಂತಹ ಹಲವಾರು ಜನರು ದೊಡ್ಡ ಉದ್ದಿಮೆಗಳನ್ನು ಕಟ್ಟಿರುವ ಎತ್ತುಗೆಗಳು ಹಲವು ಇವೆ.

ಸರಕಾರದ ನೀತಿಗಳು ಬದಲಾಗಬೇಕಿದೆ
ಹೆರನಾಡುಗಳಲ್ಲಿ ಅಚ್ಚರಿ ಮೂಡಿಸುವಂತಹ ಕಯ್ಗಾರಿಕಗಳನ್ನು, ಉದ್ದಿಮೆಗಳನ್ನು ಸ್ತಾಪಿಸಿರುವ ಈ ಜನರಿಗೆ ತಮ್ಮದೇ ನಾಡಿನಲ್ಲಿ ಇದೇಕೆ ಮಾಡಲು ಸಾದ್ಯವಾಗಲಿಲ್ಲ ಅನ್ನೋ ಕೇಳ್ವಿ ನಮ್ಮನ್ನೂ ಕಾಡಬಹುದು? ಇದಕ್ಕೆ ಉತ್ತರ ಸರಕಾರದ ನೀತಿಗಳು. ಮೊದಲಿನಿಂದಲೂ ಕಮ್ಯೂನಿಸ್ಟ್ ಸಿದ್ದಾಂತದ ಕಡೆಗೆ ಒಲವು ಹೊಂದಿದ್ದ ನಾಡಾಗಿದ್ದ ಕೇರಳದಲ್ಲಿ ಇತ್ತೀಚಿಗೆ ಮಾತ್ರ ಜಾಗತೀಕ ಸುದಾರಣೆಗಳಿಗೆ ತೆರೆದುಕೊಳ್ಳುತ್ತಿದೆ. 70-80 ರ ದಶಕದಲ್ಲಿದ್ದ ಕಾರ್‍ಮಿಕ ಸಂಗಟನೆಗಳ ಚಳುವಳಿ, ಮುಶ್ಕರ ಮುಂತಾದವುಗಳು ಇನ್ನೂ ಕೇರಳ ರಾಜ್ಯದಲ್ಲಿವೆ. ಹಾಗಾಗಿ ಉದ್ಯಮಿಗಳಿಗೆ ಇದರ ಬಿಸಿ ತಟ್ಟುವುದರಿಂದ ಕೇರಳದಲ್ಲಿ ಉದ್ದಿಮೆಗಳನ್ನು ಸ್ತಾಪಿಸಲು ಹಿಂಜರಿಯುತ್ತಿದ್ದಾರೆ. ಒಂದು ನಾಡಿನ ಏಳಿಗೆಯಲ್ಲಿ ಮಾನವ ಸಂಪನ್ಮೂಲ ಯಾವತ್ತಿಗೂ ತುಂಬಾ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕೇರಳ ರಾಜ್ಯ ಈ ವಿಶಯದಲ್ಲಿ ಬೇರೆ ರಾಜ್ಯಗಳಿಗಿಂತ ಮುಂದಿದೆ. ತನ್ನದೇ ಜನರು ಹೊರದೇಶದಲ್ಲಿ ಹೋಗಿ ಸಾದನೆ ಮಾಡುವುದಕ್ಕಿಂತ ತನ್ನ ನೆಲದಲ್ಲೇ ಮಾಡಲು ಬೇಕಿರುವ ಹಣಕಾಸು, ಕಯ್ಗಾರಿಕಾ, ಮಾನವ ಸಂಪನ್ಮೂಲ ಸುದಾರಣೆಗಳನ್ನು ಮಾಡಿಕೊಂಡಿದ್ದೇ ಆದಲ್ಲಿ ಈಗಿರುವುದಕ್ಕಿಂತ ಹೆಚ್ಚಿನ ಏಳಿಗೆ ಕಾಣಬಹುದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.