ಅಜ್ಜಿ-ತಾತಂದಿರನ್ನು ನೋಡಿಕೊಳ್ಳುವ ರೋಬೋಟ್!
ನಮ್ಮ ಸುತ್ತಮುತ್ತಲೂ ಹಲವು ಕಡೆ ಕಾವಲುಗಾರರು ಕಣ್ಣಿಗೆ ಬೀಳುವುದು ಸಹಜ. ಕಾವಲುಗಾರರ ಕೆಲಸವೂ ಹಗಲಿರುಳ ಕೆಲಸ ಅಂತಾನೂ ನಮಗೆ ಗೊತ್ತು. ’ಯಾವ ಹೊತ್ತಿನಲ್ಲಿ ಏನು ಆಗುತ್ತದೋ? ಏನು ತೊಂದರೆ ಉಂಟಾಗುತ್ತದೋ?’ ಅಂತ ಕಾವಲುಗಾರರ ತಲೆಯಲ್ಲಿ ಯಾವಾಗಲು ಯೋಚನೆಗಳು ಇದ್ದೇ ಇರುತ್ತವೆ. ಕಾವಲುಗಾರರು ಹಗಲಿರುಳು ಕಣ್ಣು ಮಿಟಕದೆ ಈ ಕೆಲಸ ಮಾಡಬೇಕು ಯಾಕೆಂದರೆ ಅವರು ಕಾವಲು ಕಾಯುತ್ತಿರುವೆಡೆಯಲ್ಲಿ ತೊಂದರೆ ಯಾವಾಗ ಬೇಕಾದರೂ ಎದುರಾಗಬಹುದು.
ಇದು ಒಂದು ಕಡೆಯಾದರೆ ಕಾವಲುಗಾರರು ಕೆಲವು ಕಡೆ ಮಾಂಜುಮನೆಗಳಲ್ಲಿ(hospitals) ಇಳಿಹರೆಯರದವರನ್ನು(aged people) ನೋಡಿಕೊಳ್ಳುವ ಇನ್ನೂ ಸವಾಲಿನ ಕೆಲಸವನ್ನು ಮಾಡುತ್ತಾರೆ. ಇಳಿಹರೆಯದವರು ಹಲವು ಬೇನೆಗಳಿಂದ ಬಳಲುತ್ತಿರುವಾಗ ಅವರ ಹದುಳತನದ(health) ತೊಂದರೆಯಿಂದ ನಡವಳಿಕೆಯಲ್ಲಿ ಏನಾದರೂ ಬೇರ‍್ಮೆ ಕಂಡರೆ ತಟ್ಟನೆ ಸರಿಯಾದ ಆರಯ್ಕೆ ನೀಡಲೇ ಬೇಕು. ಇವುಗಳನ್ನೆಲ್ಲ ಗಮನಿಸಿದ ಯುರೋಪ್ ನಾಡಿನ ಹಲವು ಮಂದಿ ಇಂತ ಆರಯ್ಕೆಯ ಕೆಲಸಗಳಿಗೆ ಉಕ್ಕಾಳುಗಳ(robots) ಮೊರೆಹೋಗುತ್ತಿದ್ದಾರೆ.
ಈ ಕುರಿತು ಅರಕೆ ಮಾಡುತ್ತಿರುವ ಉಕ್ಕಾಳುಗಳ ನುರಿತರು ಹೊಸದೊಂದು ಹಮ್ಮುಗೆ ಕಯ್ಗೊಂಡಿದ್ದು ಇದಕ್ಕೆ “ಸ್ಟ್ರಾಂಡ್” ಅಂತಾ ಹೆಸರಿಟ್ಟಿದ್ದಾರೆ. ಇಳಿಹರೆಯದವರನ್ನು ನೋಡಿಕೊಳ್ಳುವ ಹೊಸ ಬಗೆಯ ಉಕ್ಕಾಳುಗಳಿಗೆ “ಲಿಂಡಾಸ್” ಅಂತ ಹೆಸರಿಟ್ಟಿದ್ದಾರೆ. ಈ ಉಕ್ಕಾಳುಗಳು ಮಂದಿಯ ಹಾಗೂ ಸರಕುಗಳ ನಡುವೆ ಕೆಲಸ ಮಾಡಬೇಕು ಅಂತ ಅರಕೆಗಾರರಿಗೆ ಅರಿವಿರುವುದರಿಂದ, ಕೆಲಸ ಮಾಡುವ ಕಡೆ ಸರಕುಗಳನ್ನು ಬೀಳಿಸದ ಹಾಗೆ ಹಾಗೂ ಮಂದಿಗೆ ಹೋಗಿ ಗುದ್ದದೆ ಕೆಲಸ ಮಾಡಬೇಕು ಅಂತ ಗಮನದಲ್ಲಿ ಇಟ್ಟುಕೊಂಡು ಈ ಉಕ್ಕಾಳುಗಳನ್ನು ಮಾಡಿದ್ದಾರೆ.
ಮೊದಲಿಗೆ ಇವುಗಳನ್ನು ಮಾಂಜುಮನೆಗಳಲ್ಲಿ ಒರೆಗೆ(test) ಹಚ್ಚುವ ಯೋಜನೆ ಹಾಕಿಕೊಂಡಿದ್ದಾರೆ. ಮೊದಲ ಹಂತವಾಗಿ 120 ದಿನಗಳ ಪಳಗಿಕೆಯ ಯೋಜನೆಯಲ್ಲಿ ಉಕ್ಕಾಳುಗಳು ಪಾಲ್ಗೊಳ್ಳಲ್ಲಿದ್ದು, ಅಲ್ಲಿ ಗೆಲುವು ಕಂಡರೆ ಯುರೋಪಿನ ಹಲವೆಡೆ ಅಜ್ಜಿ-ತಾತಂದಿರನ್ನು ನೋಡಿಕೊಳ್ಳಲು ’ಲಿಂಡಾಸ್’ ಅಣಿಯಾಗಲಿವೆ.
(ಒಸಗೆ ಹಾಗೂ ತಿಟ್ಟದ ಸೆಲೆ:popsci)
ನಮ್ಮಲ್ಲೂ ಕೃಷಿ ಕ್ಷೇತ್ರಕ್ಕೆ ಕೂಲಿಗಳ ಬದಲು ಉಕ್ಕಾಳುಗಳು ಬರಬಹುದು