ಕನ್ನಡಿಗರ ನುಡಿ-ಮಡಿವಂತಿಕೆ ಮತ್ತು ಕೀಳರಿಮೆ

ವಿನಾಯಕ ಕವಾಸಿ

inferiority complex

ಆಂಗ್ಲರಿಗೆ ಬೆಂಗಳೂರು ಬ್ಯಾಂಗಳೂರಾದರೆ, ಮಂಗಳೂರು ಮ್ಯಾಂಗಳೂರಾದರೆ, ದಾರವಾಡ ದಾರವಾರವಾದರೆ, ದೆಹಲಿ ಡೆಲ್ಲಿಯಾದರೆ, ಕರ‍್ನಾಟಕ ಕರ‍್ನಾಟಿಕ್ ಆದರೆ ಎಲ್ಲವು ಸರಿ. ಏಕೆಂದರೆ ಅದು ಅವರ ನುಡಿಯಲ್ಲಿ ಉಲಿಯಲು ಕಟಿಣವಾಗುವುದು; ಅದಕ್ಕೆ ಅದು ಸರಿ. ಬಾರತದ ಬೇರೆ ನುಡಿಗರಿಗೂ, ಅಂದರೆ, ಸಂಸ್ಕ್ರುತದವರಿಗೆ ತಮಿಳು ದ್ರಾವಿಡವಾದರೂ ಸರಿ, ಕನ್ನಡ ಕರ್‍ನಾಟವಾದರೂ ಸರಿ, ಅದೇ ಸರಿ… ಅದು ಅವರ ನುಡಿಯುಲಿಯಲ್ಲಿ ಹಾಗೆ ನುಡಿದರೇನೆ ನಮಗೆ ಗವ್ರವ ಮಾನ ಮರ್‍ಯಾದೆ ಕೊಟ್ಟಂತೆ, ಹಿಂದಿಗರಿಗೆ ಕನ್ನಡ ಕನ್ನಡ್ ಆದರೂ ಸರಿ. ಮರಾಟಿಗರಿಗೆ ಕಾನಡಿಯಾದರೂ ಸರಿ, ಏಕೆಂದರೆ ಅದು ಕೂಡ ಅವರವರ ನುಡಿಯಲ್ಲಿ ಅವರು ನಮಗೆ ತೋರುವ ಉದಾರತನ.

ಆದರೆ ಕನ್ನಡಿಗರಿಗೆ ಮಾತ್ರ ಸಕ್ಕದ ಸಂಸ್ಕೃತ ಆಗಬೇಕು, ಮರಾಟಿ ಮರಾಠಿಯೇ ಆಗಬೇಕು, ವರ‍್ಶ ವರ್ಷವೇ ಆಗಬೇಕು, ತೊದಲು ನಾಲಿಗೆಯ ಮಗುವಿನ ಬಾಯಿಯಲ್ಲೂ ಅದರ ಉಚ್ಚಾರಣೆ ಹಾಗಾಗಿಯೇ ಇರಬೇಕು. ಅಕ್ಕರ ತಿಳಿಯದ ಹಳ್ಳಿ ಹಯ್ದನಿಗೂ ಹಾಗೆಯೇ ನುಡಿಯಬೇಕು ಇಲ್ಲದಿದ್ದರೆ ಅವನು ಕೂಪಮಂಡೂಕನೆಂದು ಅಣುಕಾಡಿ ಜರಿವರು. ಅಲ್ಲಿಯೇ ಕೀಳರಿಮೆಯನ್ನು ಹೇರಿ ತಲೆತಗ್ಗುವಂತೆ ಮಾಡುವರು. ಆಂಗ್ಲ ಇಂಗ್ಲಿಷೇ ಆಗ ಬೇಕು (ಆಂಗ್ಲ ನುಡಿಗೆ ಶ್ ಆದರೇನು ಷ್ ಆದರೇನು ಆದರೆ ಷಕಾರವೇ ಬೇಕೆಂದು ಅದನ್ನು ಕಂಡುಕೊಂಡವರಾರೋ ಮಹಾ ಪುಣ್ಯಾತ್ಮರು ಮಹಾನುಬಾವರು)!

ಹಾಗಂತ ಬೇರೆಯ ನುಡಿಯ ಪದಗಳು ಆಯಾ ನುಡಿಯಲ್ಲಿದ್ದಂತೆಯೇ ನುಡಿದು ತೋರಬೇಕು, ಬರೆದು ಸರಿಮಾಡಬೇಕು. ಆಗದಿದ್ದರೆ ಅದಕ್ಕಾಗಿಯೇ ಕೆಲವು ಬರಿಗೆಗಳನ್ನೂ ಕನ್ನಡ ಅಕ್ಕರಮಾಲೆಯಲ್ಲಿ ಸ್ಪೆಶಲ್ಲಾಗಿ ತುರುಕಲೇಬೇಕು. ಏಕೆಂದರೆ ಕನ್ನಡಿಗರು ಎಲ್ಲದರಲ್ಲೂ ಬೇರೆಯವರಿಗೆ ಬಾಗಲೇಬೇಕು. ಬಾಗದಿದ್ದರೆ ನಮ್ಮವರಿಗೆ ಕಾಡುವ ಕೀಳರಿಮೆ ಸಾವಿನಾಚೆಯೂ ಕಾಡುವುದೇನೋ. ತನ್ನಾತ್ಮನಿಗೆ ಮರುಜನ್ಮದ ಬಾಗ್ಯವೂ ದೊರೆಯದೆ ಅಂತರ ಪಿಶಾಚಿಯಾಗಿ ಮುಕುತಿ ಮರುಕನಾಗುವುದೆಂಬ ಬಾವ ಸಿಕ್ಕಾಪಟ್ಟೆ ಬೇರೂರಿದೆ.

ಬೇರೆಯ ನುಡಿಯ ಪದಗಳೇ ನಮ್ಮವಗಳಿಂತ ಮೇಲು, ನಮ್ಮವೇನಿದ್ದರೂ ಕೀಳರಿಮೆಯ ಜಾಡು ತುಂಬಿದ ಪದಗಳು. ನಮ್ಮವೇ ಪದಗಳನ್ನು ಬಳುಸುವುದು ಕಸದ ಸಮಾನ, ಅವುಗಳು ಮಾನಗೇಡಿತನವನ್ನು ತಳಕುಹಾಕಿಕೊಂಡ ಒರೆಗಳು. ಅವುಗಳನ್ನು ಬಳಸಿ ಹೊಸ ಒರೆಗಳ ಟಂಕಣಿಸುವುದಂತೂ ತಿಕ್ಕಲುತನದ ಪರಮಾವದಿ. ಇದು ನಮ್ಮ ಬುದ್ದಿಜೀವಿಗಳೆನಿಸಿಕೊಂಡವರು ವಿಚಾರ ಮಾಡುವ ಪರಿ. ಅದರಂತೆಯೇ ಎಲ್ಲರನ್ನೂ ತೆಗಳಿ ನುಡಿಯನ್ನು ತೆವಕಲು ಮಾಡುವುದು ಅದೆಶ್ಟು ಸರಿ?

ಇದಕ್ಕಾಗಿ ಕನ್ನಡಿಗರಿಗಿಲ್ಲದ ಪ್ರಾಣ ಬಿನ್ನತೆಯನ್ನು ಹೇರಿ “ಅಲ್ಪ”, “ಮಹಾ”, ಎಂದು ಬಗೆದು ಅಲ್ಪವೂ ಮಹಾಪ್ರಾಣವೂ ಸರಿಯಾಗಿ ನುಡಿಯದಿರ್‍ದರೆ ನುಡಿಯರಿಯದ ಗಾವಿಲರೆಂದು ಜರಿಯುವುದು ಅದೆಶ್ಟು ಸರಿ? ಇದು ಬರಿ ಸಕ್ಕದಕ್ಕಶ್ಟೆ ಸೀಮಿತವಾಗಿಲ್ಲ ಬೇರೆ ನುಡಿಯ ಪದಗಳಿಗೂ ಅದರಲ್ಲಿ ಉಲಿದಂತೆಯೇ ಉಲಿದು ಬರೆದು ತೋರಿಸಬೇಕೆನ್ನುವ ಇರಾದೆ ವರಸೆ ಅದು ಏಕೋ ಗೊತ್ತಿಲ್ಲ. ಬೇರೆ ನುಡಿಯ ಪದಗಳು ಕನ್ನಡದಲ್ಲಿ ಬರಬಾರದಂತೇನಿಲ್ಲ. ಆದರೆ ಅವು ನಮ್ಮ ನಾಲಿಗೆಯಲ್ಲಿ ಉಲಿದಂತೆ ನಮ್ಮ ನುಡಿಗೊಗ್ಗುವಂತೆ ಬರೆದು ಆಡಬೇಕೆನ್ನುವುದರಲ್ಲಿ ಮಡಿವಂತಿಕೆ ಏಕೆ?

ಅದರಲ್ಲು ಬೇರೆ ನುಡಿಗಳಿಂದ ಕನ್ನಡಕ್ಕೆ ಸೇರಿಕೊಂಡಿದ್ದು ಯಾವಾಗಲು ಸಹಜವಾದುದು, ಆದರೆ ಇಲ್ಲಿಂದ ಬೇರೆ ನುಡಿಗಳಿಗೆ ಹೋಗಿದ್ದು ಮಾತ್ರ ಅಸಹಜ ಹಾಗೂ ಜೊಳ್ಳೆನ್ನುವುದು ಇನ್ನೊಂದು ಹಿಂಜರಿತನ. ಇದರಲ್ಲಿ ಕನ್ನಡಿಗರ ಮನೋಬಾವನೆಯಲ್ಲಿ ಕೀಳರಿಮೆಯನ್ನು ನಮ್ಮ ಹಿರಿಯರು ಹಿಂದಿನಿಂದಲೂ ಬಿತ್ತಿ ಕಾಯ್ದುಕೊಂಡು ಬಂದ ಪರಿಣಾಮವಶ್ಟೆ. ಅದನ್ನು ತಿದ್ದಿಕೊಳ್ಳುವದರಲ್ಲಿ ತೋರುವ ಉದಾರತೆಯನ್ನು ಕನ್ನಡಿಗರು ಅರಿತರೆ ನುಡಿಯ ಮುನ್ನಡೆಗೂ, ಅದರ ಬೆಳವಣಿಗೆಗೂ ಒಳಿತಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಬಹಳ ಸೊಗಸಾಗಿದೆ ಈ ಬರಹ. ನನ್ನ ಹಲವು ವಾದಗಳಲ್ಲಿ ಈ ಆಯಾಮವನ್ನು ತಂದೇ ಇರಲಿಲ್ಲ 🙂 ಇಂತಾ ಒಳ್ಳೆಯ ಬರವಣಿಗೆ ಮುಂದುವರೆಸಿ. ನನ್ನಿ -ಹರಿ

  2. ಬರಹ ಓದಿದ್ದಕ್ಕೆ ನಿಮ್ಮ ಮನಸ್ಸಿಗೆ ಮುದನೀಡಿದ್ದಕ್ಕೆ ನನ್ನನು ಹುರಿದುಂಬಿಸಿದ್ದಕ್ಕೆ ನನ್ನಿ…

ವಿನಾಯಕ ಕವಾಸಿ ಗೆ ಅನಿಸಿಕೆ ನೀಡಿ Cancel reply