ರೂಪಾಯಿ ಕುಸಿತದ ಬಗೆಗಿನ ಕಟ್ಟುಕತೆಗಳು
– ಚೇತನ್ ಜೀರಾಳ್.
ಬಾರತದ ಹಣಕಾಸಿನ ಮೇಲೆ ಜಾಗತಿಕವಾಗಿ ಆಗುತ್ತಿರುವ ಪರಿಣಾಮದಿಂದ ರೂಪಾಯಿ ಬೆಲೆ ದಿನೇ ದಿನೇ ಡಾಲರ್ ಎದುರು ಕುಸಿಯುತ್ತಿರುವುದನ್ನು ನಾವುಗಳು ಕಾಣುತ್ತಿದ್ದೇವೆ. ಹಾಗಿದ್ದಾಗ ಸಾಮಾನ್ಯವಾಗಿ ನಮಗೆ ಬಾರತದ ಹಣಕಾಸು ಏರ್ಪಾಡಿನ ಮುಂದಿನ ಗತಿಯೇನು ಅನ್ನುವುದರ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಇದರ ಜೊತೆಗೆ ನಾವು ನಮ್ಮದೇ ಆದ ಹಲವಾರು ತಪ್ಪು ನಂಬಿಕೆಗಳನ್ನ ಹೊಂದಿರುವ ಸಾದ್ಯತೆ ಇರುತ್ತದೆ. ಇಂತಹ ಕೆಲವು ಕಟ್ಟುಕತೆ (Myth) ಗಳು ಯಾವುದು ಅನ್ನುವುದನ್ನ ನಾವು ನೋಡೋಣ ಮತ್ತು ಅವುಗಳ ಹಿಂದಿನ ದಿಟವನ್ನು ಅರಿಯೋಣ.
ಕಟ್ಟುಕತೆ 1: ರೂಪಾಯಿಯ ಬೆಲೆ ಇಳಿದಾಕ್ಶಣ ಬಾರತದ ಶಕ್ತಿ ಕುಂದುತ್ತದೆ
ಒಂದು ಎತ್ತುಗೆ ನೋಡೋಣ. ಒಂದು ಕುವಯ್ತ್ ದಿನಾರ್ ನ ಬೆಲೆ ಇವತ್ತಿಗೆ 3.52 ಡಾಲರ್ ಇದೆ. ಹಾಗಂದ ಮಾತ್ರಕ್ಕೆ ಕುವಯ್ತ್ ಅಮೇರಿಕಾ ದೇಶಕ್ಕಿಂತ ಬಲಶಾಲಿಯೇ? ಇಲ್ಲಾ ಅಲ್ವಾ? ಹಾಗೆಯೇ ಮಾರುಕಟ್ಟೆಯಲ್ಲಾಗುವ ಕೊಡುಕೊಳ್ಳು (Exchanges) ದೇಶದ ಬಲವನ್ನು ಸೂಚಿಸುವುದಿಲ್ಲ. ಚೀನಾದ ಹಣಕಾಸು ಏರ್ಪಾಡನ್ನು ನೋಡೋಣ, ಕಡಿಮೆ ಬೆಲೆಯ ಕರೆನ್ಸಿ ಹೊಂದಿರುವ ಅಲ್ಲಿ ಸಾಮಾನುಗಳನ್ನು ಒಳತರಿಸುವುದಕ್ಕಿಂತ, ಹೆಚ್ಚಿನ ಮಟ್ಟಿಗೆ ಹೊರಕಳಿಸುತ್ತಾರೆ, ಇದರ ಮೂಲಕ ಒಂದು ದೊಡ್ಡ ಹಣಕಾಸಿನ ಏರ್ಪಾಡನ್ನೇ ಚೀನಾ ದೇಶ ಕಟ್ಟಿಕೊಂಡಿದೆ. ಹೆಚ್ಚಿನ ಕೊಡುಕೊಳ್ಳು ಬೆಲೆ ಇದ್ದಾಗ ಜನರು ಸ್ತಳೀಯವಾಗಿ ತಯಾರಾಗುವ ಸಾಮಾನುಗಳನ್ನು ಕೊಳ್ಳಲು ಮುಂದಾಗುತ್ತಾರೆ ಕಾರಣ ಒಳತರಿಸಿಕೊಂಡ (imported) ಸಾಮಾನಿನೆ ಬೆಲೆ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಕಡಿಮೆ ದುಡ್ಡಿನಲ್ಲಿ ಹೆರನಾಡುಗಳಿಗೆ ಇಲ್ಲಿ ತಯಾರಾದ ಸಾಮಾನುಗಳನ್ನು ಕಳಿಸಬಹುದು. ಇವುಗಳು ಬಲ ಕುಂದಿರುವ ಲಕ್ಶಣಗಳಲ್ಲ
ಕಟ್ಟುಕತೆ 2: ಬಾರತದ ಕತೆ ಮುಗೀತು. ಮತ್ತೆ ನಾವು 1991 ಕ್ಕೆ ಹೋಗುತ್ತೇವೆ
ಸದ್ಯಕ್ಕೆ ನಾವು ತೊಂದರೆಯಲ್ಲಿದ್ದರೂ, ಇದು 1991 ರಂತಿಲ್ಲ ಅನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಇವತ್ತಿಗೆ ನಾವು ದೊಡ್ಡ ಹಣಕಾಸು ಏರ್ಪಾಡನ್ನು ಹೊಂದಿರುವ ದೇಶ ಮತ್ತು ಇವತ್ತು ನಾವು ಹೆರನಾಡುಗಳ ಹೂಡಿಕೆಗೆ ಮಾರುಕಟ್ಟೆಯನ್ನ ತೆರೆದಿದ್ದೇವೆ. ಸದ್ಯ ಹೆರನಾಡುಗಳ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂತೆಗೆಯುತ್ತಿದ್ದಾರೆ. ಆದರೆ 1991 ರಲ್ಲಿ ಹೆರನಾಡುಗಳ ಹೂಡಿಕೆದಾರರೇ ಇರಲಿಲ್ಲ. ಈಗಿರುವ ಸಣ್ಣ ತೊಂದರೆಯನ್ನು ನಾವು ಹೇಗೆ ಬಗೆಹರಿಸುತ್ತೇವೆ ಅನ್ನುವುದರ ಮೇಲೆ ನಾವು 1991 ರ ಮುಂಚಿನ ಸ್ತಿತಿಗೆ ಮರಳುತ್ತೀವೋ ಇಲ್ಲವೋ ಅನ್ನುವುದು ಗೊತ್ತಾಗುತ್ತದೆ. ಯಾಕಂದರೆ ಈ ಹಿಂದೆ ಬಾರತಕ್ಕೆ ಬರುವ ಹಾಗೂ ಹೊರಹೋಗುವ ಡಾಲರ್ ನ ಮೇಲೆ ಹಿಡಿತವಿತ್ತು ಯಾಕೆಂದರೆ ಆಗ ಬಾರತ “ಹಿಡಿತವಿರುವ ಹಣಕಾಸಿನ ಏರ್ಪಾಡನ್ನು” (controlled economy) ಹೊಂದಿತ್ತು. ಈಗಲೂ ನಾವು ಹಾಗೆ ಮಾಡಲು ಹೊರಟರೆ, ಹೆರನಾಡುಗಳ ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ಮೇಲೆ ಇನ್ನೊಬ್ಬರ ಹಿಡಿತ ಸರಿಯೆನ್ನಿಸುವುದಿಲ್ಲ ಆಗ ಅವರು ತಮ್ಮ ಹೂಡಿಕೆಯನ್ನು ಹಿಂದೆಗೆಯಲು ಯೋಚಿಸಬಹುದು.
ಕಟ್ಟುಕತೆ 3: ನಮಗೆ ಸಾಮಾನುಗಳನ್ನು ಒಳತರಿಸಿಕೊಳ್ಳಲು ಆರು ತಿಂಗಳಿಗೆ ಬೇಕಾಗಿರುವಶ್ಟು ಹಣ ಇರಬೇಕು
ನಿಮ್ಮ ಕೆಲಸ ಹೋಗಿದೆಯಂದಿಟ್ಟುಕೊಳ್ಳಿ, ನಿಮ್ಮ ಹತ್ತಿರ ಆರು ತಿಂಗಳಿಗಾಗುವಶ್ಟು ಆಪತ್ಕಾಲದ ಹಣವಿದೆ. ಹಾಗಂತ ನೀವು ಸುಮ್ಮನೆ ಕೂಡದೆ ಹೊಸ ಕೆಲಸ ಹುಡುಕಲು ಯತ್ನಿಸುತ್ತೀರಿ ಅತವಾ ನಿಮ್ಮ ಹತ್ತಿರ ಹಣ ಕಾಲಿಯಾಗುವ ಮುಂಚೆ ಕಡಿಮೆ ಸಂಬಳದ ಕೆಲಸವನ್ನಾದರೂ ಹುಡುಕಿಕೊಳ್ಳುತ್ತೀರಿ. ಇದೇ ರೀತಿ ದೇಶಗಳು ಸಹ ಕೆಲಸ ಮಾಡುತ್ತವೆ. ಬಾರತ ಕೂಡಿಟ್ಟಿರುವ ದುಡ್ಡಿನಿಂದ ಒಳಬರುವ ಸಾಮಾನುಗಳನ್ನು ಕೊಳ್ಳಲಾಗುವುದಿಲ್ಲ. ಬದಲಿಗೆ ಹರಿದಾಡುವ ಹಣದಿಂದ ಕೊಳ್ಳಲು ಸಾದ್ಯ. ಯಾರೋ ಹಣ ಹೂಡಿಕೆ ಮಾಡುತ್ತಾರೆ ಅತವಾ ಹಿಂತೆಗೆದುಕೊಳ್ಳುತ್ತಾರೆ. ಈ ದುಡ್ಡಿನಿಂದಲೇ ನಾವು ಒಳತರಿಸಿಕೊಳ್ಳುವ ಸಾಮಾನುಗಳನ್ನು ಕೊಳ್ಳಲಾಗುತ್ತದೆ. ಯಾವಾಗ ಒಳಹರಿವು ನಿದಾನವಾಗುತ್ತದೋ, ರೂಪಾಯಿಯ ಬೆಲೆ ಇಳಿಯುತ್ತದೆ. ಯಾವಾಗ ರೂಪಾಯಿಯ ಬೆಲೆ ಇಳಿಯುತ್ತದೋ ಆಗ ಜನ ಹೆರನಾಡುಗಳಿಂದ ಸಾಮಾನು ತರಿಸುವುದನ್ನ ಕಡಿಮೆ ಮಾಡುತ್ತಾರೆ, ಹೆಚ್ಚಿನ ಸಾಮಾನುಗಳನ್ನು ಹೊರಕಳಿಸುತ್ತಾರೆ ಆಗ ಒಳತರಿಸಿಕೊಳ್ಳಲು ಬೇಕಿರುವ ಹಣ ಹೆಚ್ಚಾಗುತ್ತದೆ. ಇವತ್ತು ಹೆರನಾಡುಗಳಿಂದ ಒಳತರಿಸಿಕೊಳ್ಳಲು ಕೂಡಿಟ್ಟ ಹಣ ಬೇಕಾಗಿದೆ, ಆದರೆ ಅದು ಹಾಗಿರಬಾರದು. ನಾವು ಎಲ್.ಪಿ.ಜಿ ಮತ್ತು ಡೀಸೆಲ್ ಬೆಲೆಯನ್ನು ಜನರೇ ನೇರವಾಗಿ ಕಟ್ಟುವಂತೆ ಮಾಡಿದರೆ, ರೂಪಾಯಿಯನ್ನು ಬದಲಾಯಿಸಿಕೊಳ್ಳುವಂತೆ ಮಾಡಿದರೆ ನಮಗೆ ಸಾಮಾನುಗಳನ್ನು ಒಳತರಿಸಿಕೊಳ್ಳಲೆಂದೇ ಹಣ ಕೂಡಿಡುವ ಅವಶ್ಯಕತೆ ಬರುವುದಿಲ್ಲ. ಬಾರತದ ಹತ್ತಿರ ಪ್ರಾನ್ಸ್, ಇಟಲಿ, ಜರ್ಮನಿ ನಾಡುಗಳಿಗಿಂತ ಹೆಚ್ಚಿನ ಕೂಡಿಟ್ಟ ಹಣವಿದೆ. ಪ್ರಪಂಚದಲ್ಲಿ ಹೆಚ್ಚು ಕೂಡಿಟ್ಟ ಹಣ ಹೊಂದಿರುವ ನಾಡುಗಳಲ್ಲಿ ಬಾರತ 10 ನೇ ಜಾಗದಲ್ಲಿದೆ. ಮೊದಲಿನ 9 ನಾಡುಗಳು ತಾವು ತಯಾರಿಸುವ ಸಾಮಾನುಗಳನ್ನು ಹೆಚ್ಚಾಗಿ ಹೊರಕಳಿಸಿದರೆ, ಬಾರತ ಮಾತ್ರ ಹೆಚ್ಚಾಗಿ ಸಾಮಾನುಗಳನ್ನು ಒಳತರಿಸಿಕೊಳ್ಳುತ್ತದೆ.
ಕಟ್ಟುಕತೆ 4: ಸದ್ಯಕ್ಕೆ ಇರುವ ಕರೆಂಟ್ ಅಕವ್ಂಟ್ ಡೆಪಿಸಿಟ್, ನಾವು ಬಂಗಾರವನ್ನು ಹೆಚ್ಚು ಕೊಳ್ಳುತ್ತಿರುವುದರಿಂದ ಆಗಿದೆ
ಬಂಗಾರವನ್ನು ಕೊಳ್ಳುತ್ತಿರುವುದಕ್ಕಿಂತ ದೊಡ್ಡ ಸಮಸ್ಯೆ ಕಚ್ಚಾ ಎಣ್ಣೆಯನ್ನು ಒಳತರಿಸಿಕೊಳ್ಳುತ್ತಿರುವುದು. ನಾವು ಹೋದ ವರ್ಶ 60 ಬಿಲಿಯನ್ ಡಾಲರ್ ನಶ್ಟು ಬಂಗಾರ ತರಿಸಿಕೊಂಡಿದ್ದರೆ, 170 ಬಿಲಿಯನ್ ಡಾಲರ್ ನಶ್ಟು ಕಚ್ಚಾ ಎಣ್ಣೆಯನ್ನ ತರಿಸಿಕೊಂಡಿದ್ದೇವೆ! ಇವತ್ತು ಎಲ್.ಪಿ.ಜಿ, ಡೀಸಲ್, ಪೆಟ್ರೋಲ್ ವಸ್ತುಗಳಿಗೆ ಬೀಳುತ್ತಿರುವ ಎಲ್ಲಾ ಬೆಲೆಯನ್ನು ಗ್ರಾಹಕನ ಮೇಲೆ ಸರ್ಕಾರ ಹಾಕುತ್ತಿಲ್ಲ. ಹಾಗಾಗಿ ಜನರು ಬೇಕಾಬಿಟ್ಟಿಯಾಗಿ ಇವುಗಳನ್ನು ಬಳಸುತ್ತಿದ್ದಾರೆ. ಈ ಕಚ್ಚಾ ಎಣ್ಣೆಯ ಎಲ್ಲಾ ಹಣವನ್ನು ಜನರಿಗೆ ನೇರವಾಗಿ ಹಾಕಿದ್ದೇ ಆದಲ್ಲಿ ಅವರು ಇವುಗಳನ್ನು ನೋಡಿಕೊಂಡು ಉಪಯೋಗಿಸುತ್ತಾರೆ, ಇದರ ಮೂಲಕ ಕಚ್ಚಾ ಎಣ್ಣೆಯನ್ನು ಒಳತರಿಸಿಕೊಳ್ಳುತ್ತಿರುವ ಪ್ರಮಾಣವನ್ನು ತಗ್ಗಿಸಬಹುದು. ಇನ್ನು ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಈ ಸಂದರ್ಬದಲ್ಲಿ ಬಂಗಾರ ಕೊಂಡರೆ ಆಪತ್ಕಾಲಕ್ಕೆ ಆಗುತ್ತದೆ ಅನ್ನುವ ಕಾರಣಕ್ಕೆ ಜನರು ಮುಗಿಬಿದ್ದು ಕೊಳ್ಳುತ್ತಿದ್ದಾರೆ.
ಕಟ್ಟುಕತೆ 5: ರೂಪಾಯಿ ಬೀಳಲು ಹೆರನಾಡುಗಳ ಕಯ್ಗಳ ಕಯ್ವಾಡ ಕಾರಣ ಅತವಾ ಹೆರನಾಡುಗಳಲ್ಲಿ ಇಟ್ಟಿರುವ ಕಪ್ಪುಹಣದ ಬೆಲೆಯನ್ನು ಹೆಚ್ಚಿಸಲು ರಾಜಕೀಯ ಪಕ್ಶಗಳು ಮಾಡುತ್ತಿರುವ ಕರಾಮತ್ತು
ಈ ಆರೋಪಕ್ಕೆ ತಾಳಮೇಳವೇ ಇಲ್ಲ. ಯಾಕಂದ್ರೆ ರೂಪಾಯಿಯ ಬೆಲೆ ಇಳಿದರೆ ಹೆರನಾಡುಗಳಿಂದ ಸಾಮಾನುಗಳನ್ನು ಒಳತರಿಸಿಕೊಳ್ಳುವುದು ಕಡಿಮೆ ಆಗುವುದರಿಂದ ಅವರಿಗೆ ಹೇಗೆ ಲಾಬವಾಗಲು ಸಾದ್ಯ? ಈ ಹಿಂದೆ ಹೊರಗಿನವರ ಕಯ್ವಾಡ ಎಂದು ಆರ್.ಬಿ.ಅಯ್ ನವರು ಮುಂಚೆ ಆರೋಪಗಳನ್ನು ಮಾಡುತ್ತಿದ್ದರು. ಈ ಹೆರನಾಡುಗಳವರು ತಾವು ಬಾರತದಲ್ಲಿ ಹೂಡಿಕೆ ಮಾಡಿರುವ ಹಣ ವಾಪಸ್ ಬಂದರೆ ಸಾಕು ಎಂದು ಕಾಯುತ್ತಿರಬಹುದು. ಇನ್ನು ಈ ರಾಜಕೀಯ ಪಕ್ಶಗಳು ನೀಡುವ ಕಾರಣಗಳು ಹೆಚ್ಚಾಗಿ ತಮ್ಮ ಚುನಾವಣೆಗೆ ಉಪಯೋಗವಾಗುಂತವೇ ಇರುತ್ತವೆ. ಈ ಮೇಲಿನ ಹೇಳಿಕೆಯನ್ನೇ ನೋಡಿದರೆ, ಚುನಾವಣೆಗಿಂತ ಮುಂಚೆ ಡಾಲರ್ ಬೆಲೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದ್ದಾರೆ, ಆದರೆ ಅದೇ ಚುನಾವಣೆಗಳನ್ನು ನಡೆಸಲು ಅವರು ಈ ದುಡ್ಡನ್ನು ವಾಪಸ್ ಬಾರತಕ್ಕೆ ತಂದರೆ ಯಾಕೆ ಡಾಲರ್ ಬೆಲೆ ಇಳಿಯುವುದಿಲ್ಲ ಎಂದು ನಿಮ್ಮ ಮನಸ್ಸಿನಲ್ಲಿ ಕೇಳ್ವಿ ಏಳಬಹುದು.
ನಿಜಕ್ಕೂ ರುಪಾಯಿಯ ಬೆಲೆ ಬೀಳಲು ಕಾರಣ ನಾವು ತಯಾರು ಮಾಡುತ್ತಿರುವ ಮತ್ತು ಹೊರಕಳುಹಿಸುತ್ತಿರುವ ಸಾಮಾನುಗಳನ್ನು ಕೊಳ್ಳಲು ಹೆಚ್ಚಿನ ಜನರಿಲ್ಲಾ ಅನ್ನುವುದೇ. ಆದರೆ ಈ ಉತ್ತರ ಮೇಲಿನ ಆರೋಪಗಳಂತೆ ಸೊಗಸಾಗಿಲ್ಲ ಅಲ್ಲವೇ?
(ಮಾಹಿತಿ ಸೆಲೆ: ಅವ್ಟ್ ಲುಕ್)
(ಚಿತ್ರ: ಇಂಡಿಯನ್ ಎಕ್ಸ್ಪ್ರೆಸ್)
ಈ ಲೇಖನ ತುಂಬಾ ಚೆನ್ನಾಗಿದೆ.
ವಿಷಯ ಹಾಗೂ ಶೈಲಿ ಎರಡೂ ಕೂಡ