ಬಬಲ್ಗಮ್ ಅಲ್ಲೆ, ಕ್ಯಾಲಿಪೋರ‍್ನಿಯಾ

– .

ಅದೊಂದು ಕೇವಲ ಎಪ್ಪತ್ತು ಅಡಿ ಉದ್ದದ ಸಣ್ಣ ಓಣಿ. ಇಕ್ಕೆಲಗಳಲ್ಲಿ ಹದಿನೈದು ಅಡಿ ಎತ್ತರದ ಗೋಡೆಗಳು. ಇಶ್ಟು ಸಣ್ಣ ಓಣಿ ಜಗದ್ವಿಕ್ಯಾತವಾಗಿ, ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವುದು ರೋಚಕ ಕತೆ. ಇದಕ್ಕೆ ಕಾರಣ ಇಕ್ಕೆಲಗಳ ಗೋಡೆಯ ಮೇಲೆ ಅಲಂಕ್ರುತವಾಗಿರುವ ಬಬಲ್ಗಮ್. ಅದೂ ಬಳಸಿ, ಉಗುಳಬೇಕಾದ ಬಬಲ್ಗಮ್. ಈ ಓಣಿಯಲ್ಲಿ ನಡೆದಾಡುವ ದಾರಿಹೋಕರು ತಾವು ತಿಂದು ಉಗಿಯಬೇಕಿರುವ ಬಬಲ್ಗಮ್ ಅನ್ನು ಇಲ್ಲಿನ ಗೋಡೆಗಳ ಮೇಲೆ ಅಲಂಕಾರವಾಗಿ, ಚಿತ್ತಾರವಾಗಿ ಅಂಟಿಸಿ ಹೋಗುತ್ತಾರೆ. ಇಡೀ ಗೋಡೆಯಲ್ಲಿ ಕೊಂಚವೂ ಸ್ತಳ ಕಾಲಿ ಇಲ್ಲದಂತೆ, ತಮ್ಮ ತಮ್ಮ ಮನಸ್ಸಿನಲ್ಲಿ ಮೂಡಿದ ಚಿತ್ರವನ್ನು ಬಿಡಿಸಿದ್ದಾರೆ.

ಹಿನ್ನೆಲೆ

ಸ್ತಳೀಯ ಸಂಸ್ತೆಯೊಂದರಂತೆ ಇದರ ಹುಟ್ಟಿನ ಬಗ್ಗೆ ಬೇರೆ ಅಬಿಪ್ರಾಯಗಳಿವೆ. ಕೆಲವು ಇತಿಹಾಸಕಾರರು, ಗೋಡೆಯ ಮೇಲೆ ತಿಂದು ಉಳಿದ ಬಬಲ್ಗಮ್ ಅಂಟಿಸುವ ‘ಸಂಪ್ರದಾಯ’ ಎರಡನೇ ಮಹಾಯುದ್ದದ ತರುವಾಯ ಪ್ರಾರಂಬವಾಯಿತು ಎನ್ನುತ್ತಾರೆ. ಮತ್ತೆ ಕೆಲವರು 1950ರ ದಶಕದ ಉತ್ತರಾರ‍್ದದಲ್ಲಿ ಕ್ಯಾಲಿಪೋರ‍್ನಿಯಾ ಪಾಲಿಟೆಕ್ನಿಕ್ ಸ್ಟೇಟ್ ಯೂನಿವರ‍್ಸಿಟಿಯ ವಿದ್ಯಾರ‍್ತಿಗಳು ಮತ್ತು ಸ್ಯಾನ್ ಲೂಯೀಸ್ ಒಬಿಸ್ಸಪೊ ಪ್ರೌಡಶಾಲ ವಿದ್ಯಾರ‍್ತಿಗಳ ನಡುವಣ ಸ್ಪರ‍್ದೆಯಿಂದಾಗಿ ಇದು ಹುಟ್ಟುಕೊಂಡಿತು ಎನ್ನುತ್ತಾರೆ. ಯಾವುದನ್ನೂ ನಿಕರಗೊಳಿಸಲು ಸೂಕ್ತ ದಾಕಲಾತಿಗಳು ಸಿಕ್ಕಿಲ್ಲ.

ಈ ಓಣಿಯ ಸುತ್ತ ಮುತ್ತಲಿನ ಪ್ರದೇಶದವರು ಈ ಸ್ತಳವು ಅತ್ಯಂತ ಅಸಹ್ಯಕರ ಹಾಗೂ ಅನಾರೋಗ್ಯಕರ ತಾಣವಾಗಿದೆ ಎಂದು ದೂರಿದ ಹಿನ್ನೆಲೆಯಲ್ಲಿ, ಗೋಡೆಯ ಮೇಲೆ ಬಬಲ್ಗಮ್ಮಿನಿಂದ ರಚಿತವಾದ ಚಿತ್ತಾರಗಳನ್ನು 1970ರ ದಶಕದಲ್ಲಿ ಎರಡು ಬಾರಿ ಸಂಪೂರ‍್ಣವಾಗಿ ಸ್ವಚ್ಚಗೊಳಿಸಲಾಯಿತು. ಅದಾದ ಸ್ವಲ್ಪ ದಿನಗಳಲ್ಲೇ ಮತ್ತೆ ತಲೆಯೆತ್ತಿತ್ತು. 1996ರಲ್ಲಿ ಮತ್ತೆ ಪ್ರಯತ್ನಿಸಲಾಗಿ, ಅದೂ ಸಹ ವಿಪಲವಾಯಿತು. ಎಶ್ಟೇ ಬಾರಿ ಸ್ವಚ್ಚತೆಗೆ ಕೈ ಹಾಕಿದರೂ, ಅದು ‘ಪೀನಿಕ್ಸ್’ನಂತೆ ಮತ್ತೆ ಮತ್ತೆ ಮರುಹುಟ್ಟು ಕಂಡಿತು.

ಇದು ಬರೀ ಬಬಲ್ಗಮ್ ಸಂಗ್ರಹವಲ್ಲ

ಇಲ್ಲಿನ ಗೋಡೆಗಳು ಬಬಲ್ಗಮ್ಮಿನ ಯಾದ್ರುಚ್ಚಿಕ (Random) ಸಂಗ್ರಹವಲ್ಲ. ಗೋಡೆಯನ್ನು ಗಮನಿಸುತ್ತಾ ಹೋದಲ್ಲಿ, ಅದರಲ್ಲಿ ವಿವಿದ ವಿನ್ಯಾಸದ ಚಿತ್ರಗಳು, ಹೂವುಗಳು, ಪದಗಳು, ನಾಣ್ಯಗಳು ಹಾಗೂ ಕಾಂಡೋಮ್ಗಳನ್ನು ಸೇರಿಸಿ ಚೂಯಿಂಗ್ ಗಮ್ಮಿನೊಂದಿಗೆ ಅಂಟಿಸಲಾಗಿದೆ. ಇಲ್ಲಿನ ಕಲೆಯನ್ನು ಗಮನಿಸುತ್ತಾ ಹೋದಂತೆ ಕೆಲವೊಂದು ಸಂಮೋಹನಗೊಳಿಸುವ ಕಲೆಯಂತೆ ಕಂಡುಬರುತ್ತದೆ. ವಿವಿದ ಬಣ್ಣಗಳ ಮಿಲನ, ಕಣ್ಣಿಗೆ ಹಿತವಾಗುತ್ತದೆ ಮತ್ತು ಅದ್ಬುತವಾಗಿದೆ ಎನ್ನುತ್ತಾರೆ. ಕೆಲವರಂತೂ ಬಾನಿನಲ್ಲಿ ಮಿನುಗುವ ಲಕ್ಶಾಂತರ ನಕ್ಶತ್ರಗಳಿಗಿಂತಾ ಹೆಚ್ಚಾಗಿ, ಇಲ್ಲಿ ಬಳಸಿದ ವಿವಿದ ಬಣ್ಣದ ಬಬಲ್ಗಮ್ಮಿನಿಂದ ರಚಿತವಾದ ಚಿತ್ತಾರಗಳು ಕಂಗೊಳಿಸುತ್ತವೆ ಎಂದಿದ್ದಾರೆ. ಮಿಲಿಯನ್ ಗಟ್ಟಲೆ ಬಬಲ್ಗಮ್ ಗಳಿಂದ ಗೋಡೆಗಳನ್ನು ಅಲಂಕರಿಸಿರುವುದು ಕೆಲವರಿಗೆ ಅಸಹ್ಯವೆನಿಸಿದರೂ ಅಲ್ಲಿ ಕೆಟ್ಟ ವಾಸನೆಯಿಲ್ಲ. ಇದೊಂದು ಕಲೆಯ ಪ್ರಕಾರ ಎಂದು ಪರಿಗಣಿಸಿದವರೂ ಸಹ ಇದ್ದಾರೆ.

ಅತ್ಯಂತ ವಿಲಕ್ಶಣ, ಅನದಿಕ್ರುತ ಪ್ರವಾಸಿ ಆಕರ‍್ಶಣೆಯಾದ ಈ ಓಣಿಯನ್ನು, ಸಮಾಜಗಾತುಕ ಶಕ್ತಿಗಳು ಮಾದಕ ದ್ರವ್ಯಗಳ ಸೇವನೆಗೆ ಉಪಯೋಗ ಮಾಡಿಕೊಳ್ಳುವುದರೊಂದಿಗೆ, ಯಾರು ಇತ್ತ ಸುಳಿಯದಿರಲಿ ಎಂದು ಆ ಗೋಡೆಗಳ ಮೇಲೆ ಕಕ್ಕುತ್ತಾರೆ. ಬಹುಶಹ ಇದನ್ನೆಲ್ಲಾ ಅವರುಗಳು ಮಾಡುವುದರ ಹಿಂದಿನ ಉದ್ದೇಶ, ಪ್ರವಾಸಿಗಳನ್ನು ಹೆದರಿಸಲು ಮತ್ತು ಇಲ್ಲಿನ ಚಿತ್ತಾರಗಳ ಪೋಟೋ ತೆಗೆಯುವುದನ್ನು ತಪ್ಪಿಸಲು ಇರಬಹುದು. ಏನೆಲ್ಲಾ ಪ್ರಯತ್ನ ಪಟ್ಟರೂ ಹಲವಾರು ಪ್ರಸಿದ್ದ ಟಿವಿ ಕಾರ‍್ಯಕ್ರಮಗಳಲ್ಲಿ, ವ್ರುತ್ತಪತ್ರಿಕೆಗಳಲ್ಲಿ ಮತ್ತು ಅನೇಕ ಲೇಕನಗಳಲ್ಲಿ ಈ ಓಣಿಯ ಬಗ್ಗೆ ಪ್ರಚಾರವಾದ ಹಿನ್ನೆಲೆಯಲ್ಲಿ ಇದು ವಿಶ್ವದಲ್ಲೇ ವಿಕ್ಯಾತವಾಯಿತು. ಹೆಚ್ಚೆಚ್ಚು ಪ್ರವಾಸಿಗರ ದಂಡು ಬರಲು ಶುರುವಾಯಿತು.

ಈ ಓಣಿಯಲ್ಲಿ ಕಂಡು ಬಂದಿರುವ ಚಿತ್ತಾರಗಳಿಂದ, ಸಾಕಶ್ಟು ವ್ರುತ್ತಿಪರ ಕಲಾವಿದರು ಸ್ಪೂರ‍್ತಿ ಪಡೆದಿದ್ದಾರೆ. ಅವರಲ್ಲಿ ಅತ್ಯಂತ ಪ್ರಸಿದ್ದರಾದವರು ಮ್ಯಾತ್ಯೂ ಹಾಪ್ಮನ್. ಈ ಓಣಿಯ ಪೂರ‍್ವ ತುದಿಯಲ್ಲಿ ಮ್ಯಾತ್ಯೂ ಹಾಪ್ಮನ್‍ರ ದೊಡ್ಡ ಬಾವಚಿತ್ರವನ್ನು ಕಾಣಬಹುದು. ಇದಕ್ಕೆ ದಿ ಪ್ರಾಜೆಕ್ಟ್ ಬಬಲ್ಗಮ್ ಎಂದು ಹೆಸರಿಸಲಾಗಿದೆ. ಈ ಚಿತ್ರನ್ನು ರಚಿಸಲು ಸಾಕಶ್ಟು ಬಬಲ್ಗಮ್ ಗಳನ್ನು ಬಳಸಲಾಗಿದೆ.

ಈ ಪ್ರಸಿದ್ದ ಓಣಿಯನ್ನು ಕುರಿತಾಗಿ ಏಪ್ರಿಲ್ 30, 1986ರಂದು ಕ್ಯಾತ ಕವಿ ಅರೊಯೊ ಗ್ರಾಂಡೆ ಆನ್ ಓಡ್ ಟು ಗಮ್ ಅಲ್ಲೆ ಎಂಬ ಕವನವನ್ನು ಹೊರತಂದಿದ್ದರು. ಈ ಸ್ತಳದ ಬಗ್ಗೆ ಬಿನ್ನ ಅಬಿಪ್ರಾಯಗಳು ಪದೇ ಪದೇ ಕೇಳಿಬರುತ್ತಲೇ ಇವೆ. ಕೆಲವರು ಇದನ್ನು ಅದ್ಬುತ ಆಕರ‍್ಶಕ ಪ್ರವಾಸಿ ತಾಣವೆಂದು ಪರಿಗಣಿಸಿದರೆ, ಮತ್ತೆ ಕೆಲವರು ‘ಕಣ್ಣಿನ ನೋಟಕ್ಕೆ ಕಿರಿಕಿರಿ ಮಾಡುವಂತಿದ್ದು, ಅಸಹ್ಯಕರ ಓಣಿ’ ಎಂದು ಹೀಯಾಳಿಸುತ್ತಾರೆ. ಇಲ್ಲಿಗೆ ಬೇಟಿ ನೀಡುವ ಪ್ರವಾಸಿಗರು ಪಾಲಿಸಬೇಕಾದ್ದು ಎರಡೇ ನಿಯಮ. ಒಂದು ಗೋಡೆಯ ಮೇಲಿನ ಚಿತ್ತಾರವನ್ನು ಮುಟ್ಟದಿರುವುದು ಮತ್ತು ಮತ್ತೊಂದು ಅದನ್ನು ಬಾಯಿಗೆ ಹಾಕಿಕೊಳ್ಳದಿರುವುದು.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.com, mindblowing-facts.org, magnusmundi.com, atlasobscura.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: