ಮಯ್ಸೂರು ದಸರಾ ಮತ್ತೆ ಕಳೆಗಟ್ಟುವುದೇ?

ಸಂದೀಪ್ ಕಂಬಿ.

Mysore_Palace

ನಾಡ ಹಬ್ಬವೆನಿಸಿಕೊಂಡ ಮಯ್ಸೂರು ದಸರೆಯ ಮಾಸುತ್ತಿರುವ ಮಿರುಗು ಮತ್ತು ಕುಂದುತ್ತಿರುವ ಅದರ ಸೆಳೆತ, ಆಸಕ್ತಿಗಳನ್ನು ಹೆಚ್ಚಿಸಲು, ಈ ಸಲ ಹೊರದೇಶಗಳಲ್ಲಿ ಹೆಚ್ಚಿನ ಪ್ರಚಾರ ಕೊಡುವುದಾಗಿ ನಮ್ಮ ರಾಜ್ಯ ಸರಕಾರ ತೀರ್‍ಮಾನಿಸಿದ್ದು, ಇದರ ಸಲುವಾಗಿ ಪಟ್ಟಣದಲ್ಲಿರುವ ಕಾನ್ಸಲ್ ಜೆನರಲ್ ಗೆಯ್ಮನೆಗಳನ್ನು (Consul General Offices) ಬಳಸಿಕೊಳ್ಳಲಿದೆ ಎಂಬ ಸುದ್ದಿ ಇತ್ತೀಚಿಗೆ ಬಂದಿದೆ. ಈ ಕಾನ್ಸಲ್ ಜೆನರಲ್ ಗೆಯ್ಮನೆಗಳು ತಮ್ಮ ನಡುಬಲೆಯ ತಾಣಗಳಲ್ಲಿ ಹಬ್ಬದ ಬಗ್ಗೆ ಪ್ರಚಾರ ಕೊಡುವುದಕ್ಕೆ ಒಪ್ಪಿಕೊಂಡಿವೆಯಂತೆ. ಈ ಬಗೆಯಲ್ಲಿ, ಇರುವ ತೆರಹು, ಅವಕಾಶಗಳನ್ನು ಹೆಕ್ಕಿ, ಅವುಗಳನ್ನು ಬಳಸಿಕೊಂಡು, ನಮ್ಮ ನಾಡ ಹಬ್ಬದ ಬಗ್ಗೆ ಪ್ರಚಾರ ಕೊಡಲು ಹೊರಟಿರುವ ನಮ್ಮ ರಾಜ್ಯ ಸರಕಾರದ ನಡೆ, ತೀರಾ ಜಾಣತನದಿಂದ ಕೂಡಿದ್ದು, ಮೆಚ್ಚುಗೆಗೆ ತಕ್ಕುದಾಗಿದೆ. ಇದರಿಂದ ನಮ್ಮ ನಾಡಿನ ನಡವಳಿಯನ್ನು ಹೊರಪ್ರಪಂಚಕ್ಕೆ ತೋರಿಸುವ ಮತ್ತು ತಿಳಿಸಿಕೊಡುವ ಒಂದು ಅವಕಾಶ ಒದಗುವುದಲ್ಲದೇ, ನಮ್ಮ ರಾಜ್ಯದ ಸುತ್ತಾಟದ ಉದ್ಯಮವನ್ನು ಬೆಳೆಸುವ ಇನ್ನೊಂದು ತೆರಹೂ ಒದಗುತ್ತದೆ. ಇದರ ಜೊತೆಯಲ್ಲೇ ರಾಜ್ಯದ ಇತರೆ ವಾಣಿಜ್ಯ ವಲಯಗಳಲ್ಲಿ ಇರುವ ಅಳವನ್ನು ತೋರಿಸಿ ರಾಜ್ಯಕ್ಕೆ ಹೂಡಿಕೆಯನ್ನೂ ಸೆಳೆಯುವ ಅವಕಾಶಗಳು ಉಂಟಾಗುತ್ತವೆ. ಒಟ್ಟಿನಲ್ಲಿ ಈ ತೆರಹನ್ನು ಸರಿಯಾಗಿ ಬಳಸಿಕೊಂಡರೆ ನಮ್ಮ ರಾಜ್ಯಕ್ಕೆ ವ್ಯಾಪಾರದ ನೆಲೆಯಲ್ಲಿ ಮತ್ತು ನಡವಳಿಯ ನೆಲೆಯಲ್ಲಿ ಒಳ್ಳೆಯ ಲಾಬವಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ನಡವಳಿಯ ನೋಟದಿಂದ ನೋಡಿದರೆ, ಈ ಹಬ್ಬದಲ್ಲಿ, ಮಯ್ಸೂರು ಪಟ್ಟಣ, ಮಯ್ಸೂರು ಅರಸುಗಳ ಆಳ್ವಿಕೆ, ಮತ್ತು ಮಯ್ಸೂರು ದಸರೆಯ ಹಿನ್ನೆಲೆಗಳನ್ನು ತಿಳಿಸಿಡುವುದಲ್ಲದೇ, ಇಡೀ ಕರ್‍ನಾಟಕದ ಹಿನ್ನೆಲೆಯ, ಕಲೆಗಳ, ಊಟದ ಪದ್ದತಿಗಳ, ಉಡುಗೆ-ತೊಡುಗೆಗಳ, ಮತ್ತು ನಡವಳಿಯ ಇತರೆ ಅಂಶಗಳ ರಸದವ್ತಣವನ್ನೇ ಉಣ ಬಡಿಸಬಹುದು. ಇದರಿಂದ ನಮ್ಮ ನಾಡಿನ ಕಲಾವಿದರಿಗೂ ತಮ್ಮ ಕಲೆಯನ್ನು ತೋರಿಸಲು ಒಂದು ವೇದಿಕೆ ಒದಗಿಸಿಕೊಟ್ಟಂತಾಗುತ್ತದೆ ಮತ್ತು ಅವರಿಗೆ ಹಲನಾಡುತನದ ಅನುಬವವೂ ಕೊಡಿಸಿದಂತಾಗುತ್ತದೆ. ಜೊತೆಯಲ್ಲಿ, ಈ ಹಬ್ಬದ ನಡುಬಲೆಯ ತಾಣದಿಂದ ಹಿಡಿದು, ಬೀದಿಯಲ್ಲಿ ಹಾಕುವ ಬಯಲರಿಕೆಯ ಪೋಸ್ಟರ್‍ರುಗಳ ವರೆಗೂ ಕನ್ನಡ ಬರಹ ಎದ್ದು ಕಾಣುವಂತಿರಬೇಕು. ಕನ್ನಡ ಮಾತು ಎಲ್ಲೆಡೆ ಕೇಳುವಂತಿರಬೇಕು. ಇದರಿಂದ ನಮ್ಮ ಕನ್ನಡದ ಮಂದಿಗೆ ನಮ್ಮ ನಾಡಹಬ್ಬದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವುದಲ್ಲದೇ, ಇತರರಿಗೆ ನಮ್ಮ ಬೇರ್‍ಮೆಯನ್ನು, ನಮ್ಮ ನುಡಿಯ ಮೇಲಿನ ಹೆಮ್ಮೆಯನ್ನು, ನಮ್ಮ ನುಡಿಯ ಅಳವಲ್ಲಿ ನಮಗಿರುವ ನಂಬಿಕೆಯನ್ನು, ಮತ್ತು ಅದರಿಂದ ನಮಗೇ ನಮ್ಮ ಮೇಲಿರುವ ನಂಬಿಕೆಯನ್ನು ತೋರಿಸಿ ಕೊಟ್ಟು, ಮನದಟ್ಟು ಮಾಡಿದಂತಾಗುತ್ತದೆ.

ಆದರೆ ಕಳೆದ ಕೆಲವು ವರುಶಗಳಲ್ಲಿ, ದಸರಾ ಆಚರಣೆಯಲ್ಲಿ, ಹೆರ ನಾಡುಗಳ ನಡವಳಿಗಳ ಅಂಶಗಳನ್ನು ತುರುಕುತ್ತ, ಯುವ ದಸರಾ ಹೆಸರಿನಲ್ಲಿ ಬಾಲಿವುಡ್ಡಿನ ಸಂಸ್ಕ್ರುತಿಯನ್ನು ಹೇರುತ್ತ, ಕನ್ನಡ ನುಡಿಯನ್ನು ಮಾಯವಾಗಿಸುತ್ತ, ಕನ್ನಡ ಸಂಸ್ಕ್ರುತಿಯ ರಸದವ್ತಣವಾಗಿದ್ದ ಮಯ್ಸೂರು ದಸರಾ, ತನ್ನತನವನ್ನು ಕಳೆದುಕೊಳ್ಳುವಂತೆ ಮಾಡಿ, ಅದನ್ನು ಕಲಬೆರಕೆಯ ಕವಳದ ಕೂಳಂತೆ ಮಾಡಲಾಗಿದೆಯೇನೋ ಎನ್ನಿಸಲು ಶುರುವಾಗಿದೆ. ಇದು ಬೇರೆ ನಾಡಿನ ಕಲೆಗಳನ್ನು ಹೀಯಾಳಿಸಿ, ಅವುಗಳು ಕೀಳೆಂದು ಬಗೆದು ಹೇಳುತ್ತಿರುವ ಮಾತುಗಳಲ್ಲ. ಇಲ್ಲವೇ ಕನ್ನಡ ಮಣ್ಣಿನ ಸಂಸ್ಕ್ರುತಿಯೇ ಎಲ್ಲಕ್ಕೂ ಮಿಗಿಲೆಂಬ ಅಹಂಕಾರವೂ ಇದರಲ್ಲಿಲ್ಲ. ಬದಲಾಗಿ ಈ ನಮ್ಮ ನಾಡ ಹಬ್ಬದ ತನ್ನತನವನ್ನು ಉಳಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸಲು ಹೇಳಿದ ಮಾತುಗಳಿವು. ಊಟಕ್ಕೆ ಉಪ್ಪಿನಕಾಯಂತೆ ಹೆರನಾಡಿನ ಕಲೆಗಳನ್ನು ಸೇರಿಸಿಕೊಳ್ಳುವುದು, ಇಲ್ಲವೇ ಹೊರನಾಡಿನ ಪ್ರವಾಸಿಗರಿಗೆ ಅನುಕೂಲವಾಗುವಂತೆ, ಕನ್ನಡದ ನಂತರ ಇಂಗ್ಲೀಶಿನಂತಹ ನುಡಿಗಳಲ್ಲಿ ಮಾಹಿತಿ ಒದಗಿಸಿಕೊಡುವುದು ತಪ್ಪೇನಲ್ಲ. ಆದರೆ ಇಂತಹವುಗಳೇ ಮುಕ್ಯವಾದರೆ ದಸರೆಯು ಕಳೆಗುಂದುತ್ತದೆ. ಈಚಿನ ದಿನಗಳಲ್ಲಿ ಮಯ್ಸೂರು ದಸರಾ, ಮೊದಲಿದ್ದ ಆಸಕ್ತಿ ಸೆಳೆತಗಳನ್ನು ಕಳೆದುಕೊಳ್ಳುತ್ತಿರುವುದು ಇದೇ ಕಾರಣಕ್ಕಿರಬಹುದು.

ಬಾಲಿವುಡ್ಡಿನ ನಟರನ್ನು/ ಹಾಡುಗಾರರನ್ನು ನೋಡುವುದಾದರೆ ಮುಂಬಯಿಗೋ, ಇಲ್ಲವೇ ಬಾರತದ ಯಾವುದೇ ಪಟ್ಟಣದಲ್ಲಿ ಆಗಿಂದಾಗ ನಡೆಯುವ ‘ಬಾಲಿವುಡ್ ಶೋ’ಗಳಿಗೋ ಹೋಗಬಹುದು. ರಾಜಾಸ್ತಾನಿ ಊಟವೋ, ಪಂಜಾಬಿನ ಕುಣಿತವೋ ಬೇಕಿದ್ದಲ್ಲಿ ಆಯಾ ನಾಡುಗಳಲ್ಲೇ ಇನ್ನೂ ಚೆನ್ನಾಗಿ ಸವಿಯಲು/ ನೋಡಲು ಸಿಗುತ್ತವೆ. ಅದಕ್ಕೆ ಮಯ್ಸೂರಿಗೆ ಬಂದು ಮಯ್ಸೂರಿನ ದಸರಾದಲ್ಲಿ ಪಾಲ್ಗೊಳ್ಳುವ ಅಗತ್ಯವೇ ಇಲ್ಲದಂತಾಗುತ್ತದೆ. ಈ ಬಗೆಯಲ್ಲಿ ದಸರಾ ತನ್ನತನವನ್ನು, ಬೇರ್‍ಮೆಯನ್ನು ಕಳೆದುಕೊಂಡರೆ, ಮಯ್ಸೂರು ದಸರಾ ಎಂಬ ಒಂದು ಗಟ್ಟಿಯಾದ ‘ಬ್ರಾಂಡ್’ಅನ್ನು ಕಟ್ಟಲಾಗುವುದಿಲ್ಲ. ಇದರಿಂದ ದಸರಾ ತನ್ನ ಮಿರುಗನ್ನೂ, ಸೆಳೆತವನ್ನೂ ಕಳೆದುಕೊಳ್ಳುತ್ತದೆ. ಜೊತೆಯಲ್ಲಿ, ಸುತ್ತಾಟ ಮತ್ತು ವಾಣಿಜ್ಯದ ವಲಯಗಳಲ್ಲಿ ‘ಬ್ರ್ಯಾಂಡ್ ಕರ್‍ನಾಟಕ’ವನ್ನು ಮಾರಬಲ್ಲ ಅವಕಾಶವನ್ನೂ ಕಳೆದುಕೊಂಡಂತೆ. ಇಂದು, ಬಾರತ ಎಂದ ಕೂಡಲೆ ಹೊರದೇಶಗಳಲ್ಲಿ, ತಾಜ ಮಹಲು, ರಾಜಾಸ್ತಾನದ ಬಣ್ಣ ಬಣ್ಣದ ಉಡುಗೆ ತೊಡುಗೆಗಳು, ಗೋವಾದ ಕಡಲ ತೀರಗಳು, ನೆನಪಿಗೆ ಬರುತ್ತವೆ. ಆದರೆ ಹಂಪೆ, ಮಯ್ಸೂರು ಪೇಟ, ಕನ್ನಡ ನಾಡಿನ ಕರಾವಳಿ, ಜೋಳದ ರೊಟ್ಟಿ ಇಂತಹವು ನೆನಪಿಗೆ ಬರುವ ಹಾಗೆ ನಾವು ಮಾಡಬೇಕು. ಕರ್‍ನಾಟಕವು ಸಿರಿವಂತ ನಡವಳಿಯ ನೆಲೆವೀಡೆಂಬುದನ್ನು ಪಸರಿಸಬೇಕು. ಜೊತೆಯಲ್ಲೇ ಹೂಡಿಕೆಯನ್ನೂ ಸೆಳೆಯಬೇಕು. ಇದಕ್ಕೆ, ನಮ್ಮ ಬೇರ್‍ಮೆಯನ್ನು ಬಿಂಬಿಸುವ, ನಮ್ಮ ದಸರಾ ಆಚರಣೆ ಚಿನ್ನದಂತಹ ಅವಕಾಶ. ಇದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ. ಬದಲಾಗಿ, ಕಳೆದ ಕೆಲವು ವರುಶಗಳಲ್ಲಿ ಮಾಡಿದಂತೆ ಈ ಸಲವೂ ಬಾಲಿವುಡ್ಡಿಗೆ ಮಣೆ ಹಾಕಿದರೆ, ಅದು ನಮ್ಮ ದಡ್ಡತನ ಮಾತ್ರವಲ್ಲ, ನಮ್ಮ ಮೇಲೆ ನಮಗೇ ಇರಬೇಕಾದ ನಂಬಿಕೆಯ ಕೊರತೆ, ಮತ್ತು ಮಾಡುಗತನದ ಇಲ್ಲದಿಕೆಗಳನ್ನು ತೋರಿಸುತ್ತದೆ. ಹಾಗಾಗಿ, ದಸರಾ ಹಬ್ಬದ ಪ್ರಚಾರದಲ್ಲಿ ಜಾಣ್ಮೆಯನ್ನು ತೋರಿಸಿರುವ ನಮ್ಮ ರಾಜ್ಯ ಸರಕಾರ, ಹಬ್ಬದ ಆಚರಣೆಯಲ್ಲಿ ನಮ್ಮತನವನ್ನು ಬೆಳಗಿಸಿ, ಅದೇ ತೆರನಾದ ಜಾಣ್ಮೆಯನ್ನು ಮೆರೆಯಲಿ.

(ಚಿತ್ರ: ಟ್ರಾವಲ್ ವಿತ್ ಸ್ಮಯ್ಲ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: