ತಮಿಳರ ದಾರಿ ಮತ್ತು ನಮ್ಮ ದಾರಿ

-ಡಿ.ಎನ್.ಶಂಕರ ಬಟ್

ನುಡಿಯರಿಮೆಯ ಇಣುಕುನೋಟ – 7

nudi_inukuಎಲ್ಲರೂ ಬಳಸಬೇಕಿರುವ ಕನ್ನಡ ಬರಹದಲ್ಲಿ ಮಹಾಪ್ರಾಣ, ಋಕಾರ, ಷಕಾರ ಮೊದಲಾದ ಕೆಲವು ಕನ್ನಡಕ್ಕೆ ಬೇಡದ ಬರಿಗೆಗಳನ್ನು ಬಿಟ್ಟುಕೊಡುವುದು ಒಳ್ಳೆಯದು ಎಂಬುದಾಗಿ, ಇಲ್ಲವೇ ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಒಂದು ಮಿತಿಯಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು ಎಂಬುದಾಗಿ ಹೇಳಿದಾಗ, ಇದು ತಮಿಳಿನ ದ್ರಾವಿಡ ಕಳಗಂ ಹಿಡಿದ ದಾರಿ ಎಂಬ ಮರುನುಡಿ ಕೇಳಿಬರುತ್ತದೆ.

ಆದರೆ, ಈ ಮರುನುಡಿ ಸರಿಯಲ್ಲ. ನಾವು ತಮಿಳರಿಂದ ಕಲಿಯಬಹುದಾದ ವಿಶಯಗಳೂ ಕೆಲವಿವೆ; ಆದರೆ ಹಾಗೆಂದು, ಎಲ್ಲಾ ವಿಶಯಗಳಲ್ಲೂ ಅವರನ್ನು ಕಣ್ಣುಮುಚ್ಚಿ ಹಿಂಬಾಲಿಸಬೇಕೆಂದೇನಿಲ್ಲ. ನಮಗೆ ಸರಿಯೆಂದು ಕಂಡುದನ್ನು ಅವರಿಂದ ಕಲಿಯೋಣ, ಮತ್ತು ಬೇರೆ ವಿಶಯಗಳಲ್ಲಿ ನಮ್ಮದೇ ಆದ ದಾರಿಯನ್ನೂ ಕಂಡುಕೊಳ್ಳೋಣ.

ತಮ್ಮ ನುಡಿಯ ಕುರಿತಾಗಿ ತಮಿಳರಿಗೆ ಎಲ್ಲೆಯಿಲ್ಲದ ಹೆಮ್ಮೆ ಮತ್ತು ಒಲುಮೆಗಳಿವೆ; ಆದರೆ, ಕನ್ನಡದ ತಿಳಿವಿಗರಿಗೆ ತಮ್ಮ ನುಡಿಯ ಕುರಿತು ಕೀಳರಿಮೆಯಿದೆ. ಎಂತಹ ಹೊಸ ಪದವನ್ನು ಬೇಕಿದ್ದರೂ ತಮ್ಮ ನುಡಿಯಲ್ಲಿ ಉಂಟುಮಾಡಲು ಬರುತ್ತದೆ ಎಂಬುದನ್ನು ತಮಿಳರು ಕಂಡುಕೊಂಡಿದ್ದಾರೆ, ಮತ್ತು ಅದನ್ನು ಬಳಕೆಗೂ ತಂದಿದ್ದಾರೆ; ಆದರೆ, ಕನ್ನಡದ ತಿಳಿವಿಗರು ಹೊಸ ಪದಗಳನ್ನುಂಟುಮಾಡಲು ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬುದಾಗಿ ಕಯ್ಚೆಲ್ಲಿ ಕುಳಿತಿದ್ದಾರೆ.

ತಮಿಳಿನ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ತೊಂಬತ್ತಯ್ದರಶ್ಟು ತಮಿಳು ಪದಗಳಿವೆ; ಆದರೆ, ಕನ್ನಡದ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ಹತ್ತರಶ್ಟೂ ಕನ್ನಡದ ಪದಗಳಿಲ್ಲ! ಇಂತಹ ಕೆಲವು ವಿಶಯಗಳಲ್ಲಿ ನಾವು ತಮಿಳರನ್ನು ಹಿಂಬಾಲಿಸಿದಲ್ಲಿ, ಅದು ನಮ್ಮ ನುಡಿಯ ಮತ್ತು ಸಮಾಜದ ಏಳಿಗೆಗೆ ನೆರವಾಗಬಲ್ಲುದು.

ಆದರೆ, ಬೇರೆ ಕೆಲವು ವಿಶಯಗಳಲ್ಲಿ ಅವರು ಹಿಡಿದ ದಾರಿ ನಮಗೆ ಬೇಕಿಲ್ಲ. ದ್ರಾವಿಡ ಕಳಗಗಳು ನಡೆಸಿದ ಚಳವಳಿಯಿಂದಾಗಿ, ತಮಿಳು ಬರಹದಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳು ತುಂಬಾ ಕಡಿಮೆಯಾದುವೇನೋ ನಿಜ; ಆದರೆ, ಇದರಿಂದ ಬರಹದ ತಮಿಳಿಗೂ ತಮಿಳಿನ ಆಡುನುಡಿಗಳಿಗೂ ನಡುವಿದ್ದ ಅಂತರ ಕಡಿಮೆಯಾಗುವ ಬದಲು ಹೆಚ್ಚಾಗಿದೆ.

ಯಾಕೆಂದರೆ, ಬರಹದಿಂದ ತೆಗೆದು ಹಾಕಿದ ಸಂಸ್ಕ್ರುತ ಪದಗಳಿಗೆ ಬದಲಾಗಿ ಇವರು ಹಳೆತಮಿಳಿನ ಪದಗಳನ್ನೇ ಬಳಕೆಗೆ ತಂದಿದ್ದಾರೆ; ಇವು ಹೊಸತಮಿಳಿನ ಪದಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆ. ಇದಲ್ಲದೆ, ಹೆಚ್ಚುಕಡಿಮೆ ಹದಿಮೂರನೇ ಶತಮಾನದ ತಮಿಳನ್ನೇ ಬರಹಗಳಲ್ಲಿ ಬಳಸಲು ತೊಡಗಿದ್ದಾರೆ. ಇದು ಕನ್ನಡ ಬರಹಗಳಲ್ಲಿ ಇವತ್ತು ಹೊಸಗನ್ನಡದ ಬದಲು ಹಳೆಗನ್ನಡವನ್ನು ಬಳಸಲು ಹೊರಡುವ ಹಾಗೆ ಎನ್ನಬಹುದು.

ಇಂತಹ ತಮಿಳರ ದಾರಿ ನಮಗೆ ಬೇಕಾಗಿಲ್ಲ. ಕನ್ನಡ ಬರಹದಲ್ಲಿ ಯಾವ ಮಾರ‍್ಪಾಡನ್ನು ಮಾಡುವುದಿದ್ದರೂ ಅದಕ್ಕೆ ಕನ್ನಡ ಬರಹಕ್ಕೂ ಕನ್ನಡದ ಆಡುನುಡಿಗಳಿಗೂ ನಡುವಿರುವ ವ್ಯತ್ಯಾಸವನ್ನು ಕಡಿಮೆಮಾಡುವುದೇ ಮುಕ್ಯ ಗುರಿಯಾಗಿರಬೇಕು. ಕನ್ನಡಕ್ಕೆ ಬೇಕಿಲ್ಲದ ಮಹಾಪ್ರಾಣ, ಋಕಾರ, ಷಕಾರಗಳನ್ನು ಬರಹದಲ್ಲಿ ಬಳಸದಿರುವುದು, ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವುದು ಎಂಬ ಈ ಎರಡು ಮಾರ‍್ಪಾಡುಗಳಿಗೂ ಇದೇ ಮುಕ್ಯ ಗುರಿಯಾಗಿದೆ.

ಇನ್ನು ತಮಿಳು ಬರಹದಲ್ಲಿ ಮಹಾಪ್ರಾಣ, ಋಕಾರ, ಗಜಡದಬ ಮೊದಲಾದ ಕೆಲವು ಬರಿಗೆಗಳು ಬಳಕೆಯಾಗದಿರುವುದಕ್ಕೆ ದ್ರಾವಿಡ ಕಳಗಗಳು ಕಾರಣವಲ್ಲ. ಇತ್ತೀಚೆಗೆ ನಡೆಸಿದ ಯಾವ ಮಾರ‍್ಪಾಡೂ ಅದಕ್ಕೆ ಕಾರಣವಲ್ಲ. ಬ್ರಾಹ್ಮೀಲಿಪಿಯನ್ನು ತಮಿಳಿಗೆ ಅಳವಡಿಸುವ ಸಮಯದಲ್ಲೇನೇ, ಎಂದರೆ ಸುಮಾರು ಎರಡು ಸಾವಿರ ವರ‍್ಶಗಳಶ್ಟು ಹಿಂದೆಯೇ ತಮಿಳು ಬರಹದಲ್ಲಿ ಈ ಬರಿಗೆಗಳನ್ನು ಬಳಸದಿರಲು ತೀರ‍್ಮಾನಿಸಲಾಗಿತ್ತು.

ಆವತ್ತಿನ ತಮಿಳು ಓದಿಗೆ ಈ ಬರವಣಿಗೆ ಸರಿಯಾಗಿಯೂ ಇದ್ದಿರಬೇಕು; ಆದರೆ, ಆಮೇಲೆ ತಮಿಳು ನುಡಿಯಲ್ಲಿ ಹಲವಾರು ಮಾರ‍್ಪಾಡುಗಳು ನಡೆದಿದ್ದು, ಇದರಿಂದಾಗಿ ಇವತ್ತಿನ ಓದಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದಿವೆ. ಈ ವ್ಯತ್ಯಾಸಗಳನ್ನನುಸರಿಸಿ ತಮಿಳು ಬರಹದಲ್ಲಿ ಹೆಚ್ಚಿನ ಮಾರ‍್ಪಾಡನ್ನೇನೂ ನಡೆಸಿಲ್ಲವಾದ ಕಾರಣ, ಅದರ ಬಳಕೆಯಲ್ಲಿ ಇವತ್ತು ಕೆಲವು ತೊಡಕುಗಳು ಕಾಣಿಸಿಕೊಳ್ಳುತ್ತಿವೆ.

ಸಂಸ್ಕ್ರುತ ಕಾವ್ಯಗಳನ್ನು ಇಲ್ಲವೇ ಬೇರೆ ಸಂಸ್ಕ್ರುತ ಬರಹಗಳನ್ನು ಬರೆಯಲು ಬೇಕಾಗುವ ಹಲವು ಹೆಚ್ಚಿನ ಬರಿಗೆಗಳನ್ನು ತಮಿಳು ಬರಹದಲ್ಲೇನೇ ಉಳಿಸಿಕೊಳ್ಳುವ ಬದಲು, ಅವರು ಗ್ರಂತ ಲಿಪಿಯೆಂಬ ಬೇರೆಯೇ ಒಂದು ಬಗೆಯ ಬರಹವನ್ನು ಬಳಕೆಗೆ ತಂದಿದ್ದರು. ಹಾಗಾಗಿ, ಈ ಬರಿಗೆಗಳ ತೊಡಕು ಅವರ ಬರಹವನ್ನು ತಟ್ಟಿಲ್ಲ.

ಕನ್ನಡ ಬರಹ ಉತ್ತರದಿಂದ ವಲಸೆಬಂದ ಬ್ರಾಹ್ಮಣರ ಕೊಡುಗೆಯಾಗಿದೆ; ಈ ಬ್ರಾಹ್ಮಣರು ಆರ‍್ಯರಾಗಿದ್ದು, ಸಂಸ್ಕ್ರುತದ ಮೇಲೆ ಅವರಿಗೆ ಹೆಚ್ಚಿನ ಮಮತೆ ಮತ್ತು ಪೂಜ್ಯಬಾವವಿತ್ತು. ಹಾಗಾಗಿ, ಅವರು ಕನ್ನಡದ ಬರಹದಲ್ಲಿ ಸಂಸ್ಕ್ರುತ ಬರಹಕ್ಕೆ ಬೇಕಾಗುವ ಎಲ್ಲಾ ಬರಿಗೆಗಳನ್ನೂ, ಅವು ಕನ್ನಡಕ್ಕೆ ಬೇಡವಾಗಿದ್ದರೂ, ಉಳಿಸಿಕೊಂಡಿದ್ದರು, ಮತ್ತು ಕನ್ನಡಕ್ಕೆ ಬೇಕಾಗುವ ಎ, ಒ, ಱ, ೞದಂತಹ ಕೆಲವು ಹೆಚ್ಚಿನ ಬರಿಗೆಗಳನ್ನೂ ಹೊಸದಾಗಿ ಸೇರಿಸಿಕೊಂಡಿದ್ದರು.

ಮೊನ್ನೆ ಮೊನ್ನೆವರೆಗೂ ಕನ್ನಡ ಬರಹ ಮುಕ್ಯವಾಗಿ ಬ್ರಾಹ್ಮಣರ ಬಳಕೆಯಲ್ಲೇ ಉಳಿದುಕೊಂಡಿತ್ತು; ಕೆಳವರ‍್ಗದ ಜನರು ಅದರಿಂದ ದೂರವೇ ಉಳಿದಿದ್ದರು. ತುಂಬಾ ಸಂಸ್ಕ್ರುತ ಪದಗಳನ್ನು ಬಳಸುವ, ಮತ್ತು ಕನ್ನಡಕ್ಕೆ ಬೇಕಿಲ್ಲದ ಹಲವು ಬರಿಗೆಗಳನ್ನು ಬಳಸುವ ಈ ಬರಹವೂ ಅವರು ಈ ರೀತಿ ಅದರಿಂದ ದೂರ ಉಳಿಯಲು ಒಂದು ಕಾರಣವಾಗಿತ್ತು.

ಆದರೆ, ಇವತ್ತು ಬರಹಕ್ಕೆ ಕಳೆದ ಎರಡು ಸಾವಿರ ವರ‍್ಶಗಳಲ್ಲೂ ಇಲ್ಲದಿದ್ದಂತಹ ಮೇಲ್ಮೆ ದೊರೆತಿದೆ; ಇವತ್ತಿನ ಸಮಾಜದಲ್ಲಿ ಬರಹದ ಅರಿವಿಲ್ಲದವರು ಯಾರೂ ಮುಂದೆ ಬರಲು ಸಾದ್ಯವೇ ಇಲ್ಲ ಎಂಬಂತಹ ಪರಿಸ್ತಿತಿಯುಂಟಾಗಿದೆ; ಇದಲ್ಲದೆ, ಎಲ್ಲಾ ಜನರೂ ಬರಹಬಲ್ಲವರಾಗದೆ ಇವತ್ತು ಯಾವ ಸಮಾಜವೂ ಏಳಿಗೆಹೊಂದಲಾರದು. ಹಾಗಾಗಿ, ಕನ್ನಡಿಗರ, ಅವರ ಸಮಾಜದ, ಮತ್ತು ಅವರ ಬರಹದ ಏಳಿಗೆಗಾಗಿ, ಇವತ್ತು ಕನ್ನಡ ಬರಹ ಎಲ್ಲರನ್ನೂ ತಲಪುವಂತೆ ಮಾಡಬೇಕಾಗಿದೆ, ಮತ್ತು ಇದಕ್ಕಾಗಿ ಕನ್ನಡಕ್ಕೆ ಬೇಕಿಲ್ಲದ ಹಲವು ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡಬೇಕಾಗಿದೆ.

ಇಲ್ಲಿ ಇನ್ನೊಂದು ವಿಶಯವನ್ನೂ ಗಮನಿಸಬೇಕಾಗಿದೆ: ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಕಡಿಮೆಮಾಡಬೇಕು ಎಂದು ಹೇಳಿದರೆ, ದ್ರಾವಿಡ ಕಳಗಂನವರು ಹೇಳುತ್ತಿದ್ದ ಹಾಗೆ, ಸಂಸ್ಕ್ರುತ ಪದಗಳನ್ನು ಬರಹಗಳಲ್ಲಿ ಬಳಸಲೇ ಕೂಡದು ಎಂದು ಹೇಳಿದ ಹಾಗಾಗುವುದಿಲ್ಲ. ನಿಜಕ್ಕೂ ಹಾಗೆ ಹೇಳಲಾಗಿದೆಯಾದರೆ, ಸಂಸ್ಕ್ರುತ ಎರವಲುಗಳನ್ನು ಕನ್ನಡದಲ್ಲಿ ಬರೆಯುವಾಗ ಮಹಾಪ್ರಾಣ, ಋಕಾರ ಮೊದಲಾದವುಗಳನ್ನು ಬಳಸಬೇಕಾಗಿಲ್ಲ ಎಂಬ ಇನ್ನೊಂದು ಹೇಳಿಕೆ ಬೇಕಾಗುವುದೇ ಇಲ್ಲ!

ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳ ಎಣಿಕೆ ಹೆಚ್ಚಾದಾಗಲೆಲ್ಲ, ಅದನ್ನು ಕಡಿಮೆ ಮಾಡಬೇಕೆಂಬುದಾಗಿ ಹಿಂದಿನಿಂದಲೂ ಕನ್ನಡದ ಬರಹಗಾರರು ಹೇಳುತ್ತಾ ಬಂದಿದ್ದಾರೆ. ಕವಿರಾಜಮಾರ‍್ಗಕಾರನಿಂದ ಹಿಡಿದು ಬಿಎಂಶ್ರೀಯವರ ವರೆಗೂ ಹಲವು ಮಂದಿ ಈ ವಿಶಯದಲ್ಲಿ ತಮ್ಮ ಬೇಸರವನ್ನು ಹೊರಗೆಡಹಿದ್ದಾರೆ.

ಇವತ್ತು ಅರಿಮೆಯ (ವಿಜ್ನಾನದ) ಬರಹಗಳಿಗೆ ಬೇಕಾಗುವ ಹೊಸ ಪದಗಳನ್ನೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸದಾಗಿ ಉಂಟುಮಾಡಿಕೊಳ್ಳಲಾಗುತ್ತಿದೆ; ಕನ್ನಡದ ಪದ ಮತ್ತು ಒಟ್ಟುಗಳನ್ನು ತುಂಬಾ ಅಪರೂಪವಾಗಿ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ, ಅರಿಮೆಯ ಪದನೆರಕೆಗಳಲ್ಲಿ ಕನ್ನಡದವೇ ಆದ ಪದಗಳಿರುವುದು ತೀರಾ ಕಡಿಮೆ.

ಇಂತಹ ಪದನೆರಕೆಗಳನ್ನು ‘ಕನ್ನಡ’ದವೆಂದು ಹೇಳುವುದೇ ವಿಚಿತ್ರವಾಗಿ ಕಾಣಿಸುತ್ತದೆ. ನಿಜಕ್ಕೂ ಈ ರೀತಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಬದಲು, ಇಂಗ್ಲಿಶ್ ಪದಗಳನ್ನು ಹಾಗೆಯೇ ಎರವಲು ಪಡೆಯುವುದೇ ಕನ್ನಡಿಗರ ಮಟ್ಟಿಗೆ ಹೆಚ್ಚು ನೆರವಾಗಬಲ್ಲುದು; ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಲು ಅವರು ಇಂಗ್ಲಿಶ್ ಬರಹಗಳನ್ನು ಓದಬೇಕಾಗುತ್ತದೆಯಲ್ಲದೆ, ಸಂಸ್ಕ್ರುತದಲ್ಲಿ ಅವರಿಗೆ ಇವತ್ತಿನ ಅರಿಮೆಗಳ ಕುರಿತಾಗಿ ಎಂತಹ ಓದೂ ದೊರಕಲಾರದು.

ಆದರೆ, ಈ ವಿಶಯಗಳ ಕುರಿತಾಗಿ ಮಕ್ಕಳಿಗೆ ಅಡಿಕಲಿಕೆ ದೊರೆಯುವಂತೆ ಮಾಡಲು, ಮತ್ತು ಆಳವಾದ ತಿಳಿವು ದೊರೆಯುವಂತೆ ಮಾಡಲು, ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸುವ ಬದಲು ನಮ್ಮವೇ ಆದ ಕನ್ನಡ ಪದಗಳನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

 << ನುಡಿಯರಿಮೆಯ ಇಣುಕುನೋಟ – 6

ನಿಮಗೆ ಹಿಡಿಸಬಹುದಾದ ಬರಹಗಳು

3 Responses

 1. ಅಡ್ಡಬಿದ್ದೆ ಶಂಕರ ಬಟ್ಟರಿಗೆ ,

  ತಡವಾಗಿ ನನ್ನ ಅನಿಸಿಕೆ ಹಂಚಿಕೊಡಿದಕ್ಕೆ ಮನ್ನಿಸಬೇಕು …

  ಮೊದಲಿಗೆ ಇದು ಒಂದು ಒಳ್ಳೆಯ ಅಂಕಣ …

  ಆದರೆ ನನಗೆ ಇಲ್ಲಿ ಕೆಲವು ಕೇಳ್ವಿಗಳು ಇದೆ ………..”ಕನ್ನಡ ಬರಹ ಉತ್ತರದಿಂದ ವಲಸೆಬಂದ ಬ್ರಾಹ್ಮಣರ ಕೊಡುಗೆಯಾಗಿದೆ”…. ಎಂಬ ಕುರಳು ಮತ್ತು ಅದರ ನಂತರ ಕುರಳು “ಮೊನ್ನೆ ಮೊನ್ನೆವರೆಗೂ ಕನ್ನಡ ಬರಹ ಮುಕ್ಯವಾಗಿ ಬ್ರಾಹ್ಮಣರ ಬಳಕೆಯಲ್ಲೇ ಉಳಿದುಕೊಂಡಿತ್ತು”….

  ಈ ಎರಡು ಕುರಳುಗಳನ್ನು ನೀವು ಯಾವ ಬುಡದ ಮೇಲೆ ಬರೆದಿದ್ದೀರಾ????

  “ಕನ್ನಡಕ್ಕೆ ಬೇಕಾಗುವ ಎ, ಒ, ಱ, ಱದಂತಹ ಕೆಲವು ಹೆಚ್ಚಿನ ಬರಿಗೆಗಳನ್ನೂ ಹೊಸದಾಗಿ ಸೇರಿಸಿಕೊಂಡಿದ್ದರು”… … ಈ ಬರಿಗೆಗಳನ್ನು ಹಾರುವರು ತಂದರಾ ?? .. ಇದು ಹೇಗೆ ?.

  ನನಗೆ ಗೊತ್ತಿರುವ ಹಾಗೆ ನಮ್ಮ ಅಜ್ಜಿ ಹೇಳಿದ್ದು … ಹಾರುವರು ಮತ್ತು ಬಡಗದವರಿಗೆ ೞ ಮತ್ತುಱ ಉಲಿಸಲು ಕಷ್ಟ ಪಡುವರು ಎಂದು .. ಒಂದು ಎತ್ತುಗೆ ನಮ್ಮಲ್ಲಿ(ಹಳೆ ಮೈಸೂರು )” ನಿನಗೆ ಅಱವಿಲ್ಲವ” .. ಮತ್ತು “ಮಸಾಲೆ ಅರಿಯೋ” ಅಂತ ಬೇರೆ ಬೇರೆ ಯಾಗಿ ಹೇಳುತ್ತೇವೆ … ಆದರೆ ಬಡಗದವರು ಮತ್ತು ಹಾರುವರು “ಬುದ್ದಿ ಇಲ್ಲವ” ಅಂತ ಹೇಳುವರು .. ನಮ್ಮ ಹಳ್ಳಿಗಳಿಗೆ ಹೋದರೆ ಱ ಮತ್ತು ರ ಸರಿಯಾಗಿ ಹೇಳುವರು !!!!

  ನನ್ನ ಅಜ್ಜಿ ಮತ್ತು ಸುತ್ತ ಇರುವ ಮಂದಿ ಮಾತಾಡುವುದನ್ನು ಕೇಳಿ ನೋಡಿ ಹೇಳುವುದು ಏನಂದರೆ … ಕನ್ನಡದಲ್ಲಿನ ಈ ಬರಿಗೆಗಳು ಹಾರುವರು ತಂದದ್ದು ಅಲ್ಲ… ಬದಲಿಗೆ ಇಲ್ಲೇ ಇದ್ದ ಮಂದಿ ಹಾರುವರು ಬರುವ ಮೊದಲೇ ಬಳಿಸುತ್ತಿದರು ಅಂತ ..

  ನನ್ನ ಈ ಗೊಂದಲವನ್ನು ತಿಳಿಗೊಳಿಸಲು ನಿಮ್ಮ ಹೆಳ್ವಿಗೆ ಕಾಯುತ್ತಿರುವೆ …….

  ಇಂತಿ,
  ಹರ್ಷ

  • ’ಕನ್ನಡಕ್ಕೆ ಬೇಕಾಗುವ ಎ, ಒ, ಱ, ೞದಂತಹ ಕೆಲವು ಹೆಚ್ಚಿನ ಬರಿಗೆಗಳನ್ನೂ ಹೊಸದಾಗಿ ಸೇರಿಸಿಕೊಂಡಿದ್ದರು’ ಎನ್ನುವುದನ್ನು ಸರಿಯಾಗಿ ಹುರುಳಿಸಿಕೊಳ್ಳಬೇಕಿದೆ. ಈ ಬರಿಗೆಗಳನ್ನು ಹಾರುವರು ’ಕನ್ನಡಕ್ಕೆ’ ’ತಂದರು’ ಎಂದು ನೀವು ತಿಳಿದಿರುವಂತೆ ಇದರ ಹುರುಳಲ್ಲ; ಬಟ್ಟರು ಹೇಳುತ್ತಿರುವುದೇನೆಂದರೆ, ಈ ಬರಿಗೆಗಳನ್ನು ಕನ್ನಡದ ಬರಿಗೆಮಣೆಗೆ (ಎಂದರೆ ಅಕ್ಶರಮಾಲೆಗೆ) ಅವರು ಸೇರಿಸಿಕೊಂಡರು ಎಂದು – ’ಕನ್ನಡಕ್ಕೆ’ ಇಲ್ಲವೇ ’ಉಲಿಕೆಗೆ’ ಅಲ್ಲ. ನೀವು ಹೇಳಿದಂತೆ, ಮತ್ತು ನಿಮ್ಮ ಅಜ್ಜಿಯವರ ಅನಿಸಿಕೆಯಂತೆ, ಇವುಗಳನ್ನು ಹಾರುವರು ಮತ್ತು ಬಡಗರಿಗೆ ಉಲಿಯಲು ಕಶ್ಟವಾಗಿರಲು ಸಾದ್ಯ; ಆದರೂ ಇವುಗಳನ್ನು ಗುರುತಿಸುವ ಬರಿಗೆಗಳನ್ನು ಕನ್ನಡದ ಬರಿಗೆಮಣೆಗೆ ಸೇರಿಸಿಕೊಂಡಿದ್ದಾರೆ ಎನ್ನುವುದು ಬಟ್ಟರ ಮಾತು. ಅಂದಹಾಗೆ, ಈ ಕಶ್ಟ ಈಗ ಕನ್ನಡ ಮಾತನಾಡುವ ಹಾರುವರಿಗೆ ಅಶ್ಟೇನು ಇಲ್ಲವೆನ್ನಬಹುದು (ಱ ಮತ್ತು ೞ ಗಳನ್ನು ಸದ್ಯಕ್ಕೆ ಬದಿಗಿಡಿ).

 1. 18/09/2013

  […]  << ನುಡಿಯರಿಮೆಯ ಇಣುಕುನೋಟ – 7 […]

ಅನಿಸಿಕೆ ಬರೆಯಿರಿ: