ನರೇಂದ್ರ ‘ಮೋಡಿ’ ಮತ್ತು ಹೊಸ ಪೀಳಿಗೆಯ ಕನ್ನಡಿಗರು

ಕಿರಣ್ ಬಾಟ್ನಿ.

narendra_modi_campaign_new

ಯಾರು ಏನೇ ಹೇಳಲಿ, ನರೇಂದ್ರ ಮೋದಿಯನ್ನು ನಮ್ಮ ರಾಜಕೀಯ ನಾಯಕನಾಗಿ ಒಪ್ಪಿಕೊಳ್ಳಿ ಎಂದು ಆತನ ಹೆಸರು, ಪೋಟೋ, ವೀಡಿಯೋ ಮುಂತಾದವನ್ನೆಲ್ಲ ಕನ್ನಡಿಗರ ಮುಂದೆ ತಂದು ನಿಲ್ಲಿಸುವ ಕೆಲಸವನ್ನು ರಾಶ್ಟ್ರೀಯ ಸ್ವಯಂಸೇವಕ ಸಂಗದವರು ಮತ್ತು ಬಿಜೆಪಿಯವರು ಚೆನ್ನಾಗಿಯೇ ಮಾಡಿದ್ದಾರೆ ಎನ್ನಬಹುದು. ಆದರೆ ಈ ಕೆಲಸದ ನಿಜವಾದ ರೂಪವಾದರೂ ಎಂತದ್ದು?

ಇಂತದ್ದು: ನಮ್ಮ ನಾಡಿನವನಲ್ಲದ, ನಮ್ಮ ನುಡಿಯನ್ನು ಆಡದ, ಬರೆಯದ; ನಮ್ಮ ನುಡಿಯ ಬದಲು ಹಿಂದಿಯನ್ನು ಒಂದು ಕಡೆಯಿಂದ, ಸಂಸ್ಕ್ರುತವನ್ನು ಇನ್ನೊಂದು ಕಡೆಯಿಂದ ತಂದು ನಮ್ಮ ಕಯ್-ಬಾಯಿಗಳಿಗೆ ತುರುಕಲು ತುದಿಗಾಲಲ್ಲಿ ನಿಂತಿರುವ; ಮೆಲ್ಲನೆ ನಮಗೆ ಮಕ್ಕಳಾಗದಂತೆ ನೋಡಿಕೊಂಡು ಹಾಡಹಗಲಲ್ಲೇ ನಮ್ಮ ನಾಡನ್ನು ಬಡಗಣದವರು ಕಬಳಿಸಲು ಬೇಕಾದುದೆಲ್ಲವನ್ನೂ ಮಾಡುವ ರಾಜಕೀಯ ಮತ್ತು ಆರ‍್ತಿಕ ಸಿದ್ದಾಂತಗಳನ್ನು ಪ್ರತಿನಿದಿಸುವ ’ನಗೆಮೋರೆಯ ಪುಲಿ’ ಯನ್ನು ನಮ್ಮ ನಾಯಕನಾಗಿ ಒಪ್ಪಿಕೊಳ್ಳುವಂತೆ ಮಾಡುವ ಕೆಲಸ.

ಕನ್ನಡಿಗರ ಸಾವೇ ತಾನಾದ ಈ ಪುಲಿಯನ್ನು ನಾವು ನಾಯಕನಾಗಿ ಏತಕ್ಕೆ ಆಯ್ದುಕೊಳ್ಳಬೇಕಂತೆ ಗೊತ್ತೇ? ಏಕೆಂದರೆ ಅಂತದ್ದೇ ಮತ್ತೊಂದು ಪುಲಿಯಿದೆಯಲ್ಲ- ರಾಹುಲ್ ಗಾಂದಿ ಎಂಬ ಹೆಸರಿನದು – ಅದು ಇದರಶ್ಟು ಅಚ್ಚುಕಟ್ಟಾಗಿ ತನ್ನ ಕೆಲಸವನ್ನು ಮಾಡುವುದಿಲ್ಲವಾದುದರಿಂದಂತೆ; ಮತ್ತು ಆ ಪುಲಿಯ ವಂಶದವರಾದ ಹಿಂದಿನವರು ಕೆಲವರು ಕನ್ನಡಿಗರನ್ನು ಅಳಿಸಿಹಾಕುವ ಈ ಕೆಲಸವನ್ನು ಮೊದಲಿನಿಂದ ಚೆನ್ನಾಗಿ ಮಾಡಿಲ್ಲವಂತೆ, ಅದಕ್ಕಂತೆ!

ಆದರೆ ನಿಜಕ್ಕೂ ಬಿಜೆಪಿಯಾಗಲಿ ಕಾಂಗ್ರೆಸ್ಸಾಗಲಿ ಕನ್ನಡಿಗರ ಮಟ್ಟಿಗೆ ಬೇರೆಯಲ್ಲ; ಒಂದಕ್ಕಿಂತ ಇನ್ನೊಂದು ತನ್ನ ಕೆಲಸವನ್ನು ಚೆನ್ನಾಗಿ ಮಾಡಬಹುದು, ಆದರೆ ಕನ್ನಡಿಗರ ಮಟ್ಟಿಗೆ ಅವುಗಳು ಹಾಗೆ ಚೆನ್ನಾಗಿ ಮಾಡುವುದೇ ಕೆಟ್ಟದಾಗಿ ಮಾಡುವುದಕ್ಕಿಂತ ಕೆಟ್ಟದು! ಇವೆರಡರಲ್ಲಿ ಯಾವುದು ಕೇಂದ್ರ ಸರ‍್ಕಾರದ ಚುಕ್ಕಾಣಿಯನ್ನು ಹಿಡಿದರೂ ಅದು ಕನ್ನಡಿಗರ ಸೋಲೇ. ಎರಡು ಬದಿಗಳೂ ಕನ್ನಡಿಗರು ರಾಜಕೀಯವಾಗಿ ಮತ್ತು ಆರ‍್ತಿಕವಾಗಿ ಹಿಂಡುಹಿಂಡಾಗಿ ಸಾಯುತ್ತಿರುವಾಗ ಚಟ್ಟದ ಬೆಂಕಿಯಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವವೇ. ಕನ್ನಡಿಗರ ಅಳಿವನ್ನು ಬಾರತದ ಏಳಿಗೆಯಲ್ಲಿ ಒಂದು ಮಯ್ಲಿಗಲ್ಲೆಂದು ಒಳಗೊಳಗೇ ಲೆಕ್ಕ ಹಾಕಿಕೊಳ್ಳುವ ಕೇಡಿಗಳ ಗುಂಪುಗಳೇ ಎರಡೂ.

ತೊಂದರೆಯೇನೆಂದರೆ, ತಮ್ಮ ಮೇಲೆ ಇವೆರಡು ಆಳ್ಮೆಬದಿಗಳಿಂದ ಆಗಿರುವ, ಆಗುತ್ತಿರುವ ಮತ್ತು ಆಗಲಿರುವ ಕೇಡಿನ ಬಗ್ಗೆ ಹೆಚ್ಚಿನ ಕನ್ನಡಿಗರು ಗಮನ ಹರಿಸುತ್ತಿಲ್ಲ. ಬದಲಾಗಿ, ಬಾರತವೆಂಬ ಏರ‍್ಪಾಡಿನಲ್ಲಿ ತಮ್ಮ ಮಾಡುಗತನವನ್ನು ಎಂದೋ ಕಳೆದುಕೊಂಡು; ಒಂದು ಕಡೆ ಈ ಬದಿಯವರು, ಇನ್ನೊಂದು ಕಡೆ ಆ ಬದಿಯವರು ಹೇಳುವುದನ್ನೆಲ್ಲ ಕೇಳಿಸಿಕೊಂಡು; ಎರಡು ಪುಲಿಗಳ ಹಿಡಿತದಿಂದಲೂ ಬಿಡಿಸಿಕೊಂಡು ಹೋಗುವುದೇ ಸರಿಯೆಂಬುದನ್ನು ಕಾಣದೆ; ತಮ್ಮ ಜೀವನಕ್ಕೆ ಸಂಬಂದವೇ ಇಲ್ಲವೆಂದು ತೋರಲಾರಂಬಿಸಿರುವ ಚುನಾವಣೆಯೆಂಬ ಯಾಂತ್ರಿಕ ಪ್ರಕ್ರಿಯೆಯೊಂದರಲ್ಲಿ ಪಾಲ್ಗೊಂಡು; ಒಂದಲ್ಲ ಒಂದು ಪುಲಿಯ ಬಾಲವನ್ನು ಹಿಡಿದುಕೊಳ್ಳುವುದು ’ಪ್ರಜಾಪ್ರಬುತ್ವ’ದಲ್ಲಿ ತಮ್ಮ ಕರ‍್ತವ್ಯವೆಂದು ಇಲ್ಲಿಯವರೆಗೆ ಬಡಗಣದವರು ನಂಬಿಸಿರುವುದನ್ನೇ ನಂಬಿಕೊಂಡಿರುವ ಕನ್ನಡಿಗರೇ ಹೆಚ್ಚು!

ಈಗ ನರೇಂದ್ರ ಮೋದಿಯು ಪ್ರದಾನಮಂತ್ರಿಯಾಗಬೇಕೆಂದು ಬಿಜೆಪಿ ಮತ್ತು ಆರೆಸ್ಸೆಸ್ಸಿನವರು ಮಾಡಿರುವ ಪ್ರಚಾರದಲ್ಲಂತೂ ಯಾವ ಆಳ್ಮೆಯ ವಿಶಯಗಳ ಬಗ್ಗೆಯೂ ಕನ್ನಡಿಗರು ಗಮನ ಹರಿಸದೆ, ಯಾವ ಸಿದ್ದಾಂತದ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ಬಡಗಣದಿಂದ ಬಂದು ನೆಲಕ್ಕಿಳಿದ ’ಇಂದ್ರ’ನೊಬ್ಬನಿಗೆ ಕಣ್ಮುಚ್ಚಿಕೊಂಡು ಕನ್ನಡಿಗರು ವೋಟು ಹಾಕಬೇಕು ಎನ್ನುವುದೊಂದೇ ಸಂದೇಶ! ಆ ನರೇಂದ್ರನು ಬಂದು ಕರ‍್ನಾಟಕವನ್ನು – ಅಲ್ಲ, ಅದೆಲ್ಲಿ ನೆನಪಾಗಬೇಕು ಅವರಿಗೆ, ಬಾರತವನ್ನು – ಸ್ವರ‍್ಗ ಮಾಡಿಬಿಡುತ್ತಾನೆಂದು ಕಣ್ಮುಚ್ಚಿಕೊಂಡು ನಂಬಬೇಕೆಂಬ ಒಂದೇ ಒತ್ತಾಯ! ಆ ಬಾರತವೆಂಬ ಸ್ವರ‍್ಗದಲ್ಲಿ ಪಾಲ್ಗೊಳ್ಳಲು ವೋಟು ಹಾಕಿದ ಕನ್ನಡಿಗರು ಉಳಿಯದೆ ಹೋದರೂ ಸರಿಯೇ! ಅಬ್ಬಾ! ಎಂತಹ ನರೇಂದ್ರ ’ಮೋಡಿ’!

ಇವೆಲ್ಲದರ ನಡುವೆ ಕನ್ನಡದ ತಾಯಿಯ ನರಳಾಟವನ್ನು ಕೇಳಿಸಿಕೊಂಡು, ಕನ್ನಡತನವೊಂದನ್ನೇ ತಮ್ಮ ಸಿದ್ದಾಂತವಾಗಿಟ್ಟುಕೊಂಡು, ತಮ್ಮ ಬದುಕನ್ನೇ ಕನ್ನಡ-ಕನ್ನಡಿಗ-ಕರ‍್ನಾಟಕಗಳ ಏಳಿಗೆಗೆ ತಳುಕು ಹಾಕಿಕೊಂಡಿರುವ ಪೀಳಿಗೆಯೊಂದು ತಲೆಯೆತ್ತುತ್ತಿದೆ. ಈ ಪೀಳಿಗೆಯ ಕನ್ನಡದ ಚಳುವಳಿಯ ಗುರಿಯೇ ಕನ್ನಡಿಗರು ತಾವು ಯಾರೆಂದು ಚೆನ್ನಾಗಿ ತಿಳಿದುಕೊಂಡು ರಾಜಕೀಯವಾಗಿ ಮತ್ತು ಆರ‍್ತಿಕವಾಗಿ ಏಳಿಗೆ ಹೊಂದುವುದು! ಈ ಪೀಳಿಗೆ ’ನರೇಂದ್ರ ಮೋಡಿ’ಗಾಗಲಿ ’ರಾಜೀವ ಗುಂಡಿ’ಗಾಗಲಿ ಎಂದಿಗೂ ತುತ್ತಾಗುವುದಿಲ್ಲ! ಏಳಿಗೆಯ ದಿಟ್ಟ ಗುರಿಯನ್ನು ಮುಟ್ಟುವ ಹಾದಿಯಲ್ಲಿ ಕನ್ನಡಿಗರ ಅಳಿವನ್ನು ಬಾರತದ ಮುನ್ನಡೆಯೆಂದು ಬಗೆಯುವ ಎಲ್ಲ ಶಕ್ತಿಗಳನ್ನು ಕನ್ನಡನಾಡಿನಿಂದ ಈ ಪೀಳಿಗೆ ಹೊಡೆದೋಡಿಸುವುದು ಕಂಡಿತ! ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!

ನಿಮಗೆ ಹಿಡಿಸಬಹುದಾದ ಬರಹಗಳು

11 Responses

  1. First things first!! U r messed up!!

    Understand, The identity of kannada and karnataka is because of the multi-lingual, multi-cultural democratic fabric of this great country!! And its never ever the other way round!!! ಕುವೆಂಪು ಅವ್ರು ನಾಡ ಗೀತೆಲಿ ಹೇಳಿರೋದು ಇದೇ!!!

    ಜಯ ಹೇ ಕರ್ನಾಟಕ ಮಾತೆ! ಯಾಕೆ ಗೊತ್ತಾ,
    ಜಯ ಭಾರತ ಜನನಿಯ ತನುಜಾತೆ!!!!
    i need nt have to explain u the meaning!!

    ನಮ್ಮ ನಾಡಿನವನಲ್ಲದ, ನಮ್ಮ ನುಡಿಯನ್ನು ಆಡದ, ಬರೆಯದ; ANDRE!!! ? urs is one among the 29 states of india. And the prime ministerial candidate of a national party represent this country! He doesnt need the qualification u r seeking for!!
    Btw,tell me one face from Karnataka,whom u can proudly say can represent us in the center !!! Have u ever tried creating one such leader!!? The simple reason is, ಜಾತಿ, ಮಠ, ಮತ್ತೆ regional politics ಮಾಡಿ ಗೊತ್ತೇ ನಮಗೆ ವಿನಹ state-Inclusive politics ಅಲ್ಲ. Learn from bordering TN!!

    Dont mess up things!! Elections r fought on ideologies! Don’t narrow it down. Criticize the principles, manifestos; not the language in which they are presented!! Language is just a tool!!

    ಇವೆಲ್ಲದರ ನಡುವೆ ಕನ್ನಡದ ತಾಯಿಯ ನರಳಾಟವನ್ನು ಕೇಳಿಸಿಕೊಂಡು, ಕನ್ನಡತನವೊಂದನ್ನೇ ತಮ್ಮ ಸಿದ್ದಾಂತವಾಗಿಟ್ಟುಕೊಂಡು, ತಮ್ಮ ಬದುಕನ್ನೇ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ತಳುಕು ಹಾಕಿಕೊಂಡಿರುವ ಪೀಳಿಗೆಯೊಂದು ತಲೆಯೆತ್ತುತ್ತಿದೆ!!!!!!!! ROFL!!!

    ಎಲ್ಲೋ ಮಾರಾಯ !!!! i cant smell it!!

    • //Understand, The identity of kannada and karnataka is because of the multi-lingual, multi-cultural democratic fabric of this great country!!//
      ಕನ್ನಡ/ಕರ್ನಾಟಕಗಳು ನಮ್ಮ ಗುರುತು ಏಕೆಂದರೆ ನಾವು ಕನ್ನಡ ಮಾತಾಡುತ್ತೇವೆ. ಇನ್ಯಾವುದಕ್ಕೂ ಅಲ್ಲ.

      //Btw,tell me one face from Karnataka,whom u can proudly say can represent us in the center !!!//
      ನೀವೇ!! ಚುನಾವಣೆಗೆ ನಿಲ್ಲಿರಿ. ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆಗೆ ದುಡಿಯುವೆ ಅನ್ನಿರಿ. ನನ್ನ ವೋಟು ನಿಮ್ಮದೇ. ಕನ್ನಡ ಮಾತನಾಡುವ ಅಯ್ದು ಕೋಟಿ ಮುಕಗಳಲ್ಲಿ ಯಾವುದೇ ಆದರೂ ಸರಿಯೇ ಅದು ನಮ್ಮನ್ನು ಪ್ರದಿನಿದಿಸಬಲ್ಲದು. ಮೋದಿಯ ಮುಕಕ್ಕೆ ಹಸುವಿನ ಮುಕವನ್ನು ಹೊದಿಸಿದರೂ ಆತ ನಮ್ಮನ್ನು ಪ್ರತಿನಿದಿಸಲಾರ.

      //National Party//
      ಬಾರತವು ಒಂದು nation(ನಾಡು) ಅಲ್ಲ. ಬಾರತವು ಒಂದು ಒಕ್ಕೂಟ(union).

      //Learn from bordering Tamilnadu//
      ಅಂಕಣವೂ ಒಂದು ಬಗೆಯಲ್ಲಿ ಅದನ್ನೇ ಹೇಳುತ್ತಿದೆ. ಅದಕ್ಕಿಂತಲೂ ಇನ್ನೂ ಹೆಚ್ಚಿನದನ್ನು ಹೇಳುತ್ತಿದೆ. ತಮಿಳರು ಮೋದಿವಿಗಳಲ್ಲ. ತಮ್ಮ ನುಡಿಯವರನ್ನು ಆರಿಸುತ್ತಾರೆ, ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ.

      //ROFL//
      ಸಯ್ರಿಸಿಕೊಳ್ಳಿರಿ!! ಎದೆಬಡಿತ ನಿಂತುಹೋಗಿ ಮೋದಿಗೊಬ್ಬ ಹಿಂಬಾಲಕ ಕಡಿಮೆಯಾದಾನು!

      //ಎಲ್ಲೂ ಮಾರಾಯ//
      ಇಲ್ಲೇ!! ಹೊನಲಿನಲ್ಲಿ ಕೊಂಚ ಓಡಾಡಿರಿ. ಪಕ್ಕದಲ್ಲಿರುವ ಪಪಕಪ ತಿಟ್ಟದ ಮೇಲೆ ಒತ್ತಿರಿ. ಕನ್ನಡದಲ್ಲಿ ಹೊಸಹೊಸ ತಿಳುವಳಿಕೆಗಳನ್ನು ಹೇಳಲು ಸಾದ್ಯವಾಗಲಿ ಎಂದು ಕನ್ನಡದಲ್ಲಿಲ್ಲದ ಹೊಸ ಪದಗಳನ್ನು ಕನ್ನಡದಲ್ಲಿ ಕಟ್ಟುತ್ತಿದ್ದಾರೆ. ಕಲಿಕೆಯನ್ನು ಕನ್ನಡದಲ್ಲಿ ಕಟ್ಟಲು ಇವರು ದುಡಿಯುತ್ತಿರುವುದರ ಬಗ್ಗೆ ತಿಳಿದುಕೊಳ್ಳಲು kalikeyu ಎಂದು ಗೂಗಲಿಸಿ. ಹಿಂದಿ ಹೇರಿಕೆ, ಡಬ್ಬಿಂಗ್ ವಿರೋದ, ನುಡಿಯರಿಮೆ ಅರಕೆಗಳ ಬಗ್ಗೆ ತಿಳಿದುಕೊಳ್ಳಲು ಯುಟ್ಯೂಬಿನಲ್ಲಿ banavasibalaga ಎಂದು ಹುಡುಕಿರಿ. ಇವರುಗಳನ್ನು ಸಂಪರ್ಕಿಸಿ ಮಾತನಾಡಿರಿ. ನಿಮಗೇ ತಿಳಿಯುವುದು.

  2. ’ಹೊನಲಿ’ನಲ್ಲಿನ ಕೆಲವು ಲೇಖನಗಳು ನನ್ನ ಮನ ಸೆಳೆದಿದ್ದವು . ನಿಮ್ಮ ಕನ್ನಡ ಅಭಿಮಾನಕ್ಕೆ ನಾನು ಕೂಡ ತಲೆ ಬಾಗುವೆ . ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪ – ಸಂಖ್ಯಾತರಾಗುತ್ತಿರುವುದು ದುಃಖಕರ ಸಂಗತಿ. ಆ ವಿಷಯವಾಗಿ ಚರ್ಚಿಸಬೇಕಾದ ಅಗತ್ಯವಿದೆ. ಆದರೆ ಈ ಲೇಖನದಲ್ಲಿನ ಕೆಲವು ವಿಷಯಗಳು ಅಪ್ರಸ್ತುತವಾಗಿವೆ. ನಿಮ್ಮ ದೃಷ್ಟಿಯಲ್ಲಿ ಕನ್ನಡಿಗರು ಅನ್ಯ ಭಾಷಿಗರನ್ನು ಅದರಲ್ಲೂ ಮೋದಿ ಹಾಗು ರಾಹುಲ್ ಗಾಂಧಿ ಇಬ್ಬರನ್ನು ಪ್ರಧಾನಿಯಾಗಲು ಬೆಂಬಲಿಸಬಾರದು. ಸರಿ….. ಕನ್ನಡಿಗರೊಬ್ಬರು ಪ್ರಧಾನಿಯಾದರೆ ಮಾತ್ರ ಕನ್ನಡಿಗರಿಗೆ ಅನ್ಯಾಯವಾಗುವುದನ್ನು ತಪ್ಪಿಸಬಹುದು. ಸರಿ……. ನೀವೇ ಹೇಳಿ ನಾವು ಯಾವ ಕನ್ನಡಿಗ ಅಭ್ಯರ್ಥಿಯನ್ನು ಬೆಂಬಲಿಸೋಣ.? ಈ ಮೊದಲು ಕನ್ನಡಿಗರೊಬ್ಬರು ಪ್ರಧಾನಿಯಾಗಿದ್ದರೂ ರಾಜ್ಯದ ಅಭಿವೃದ್ಧಿ ಏಕೆ ಸಾಧ್ಯವಾಗಲಿಲ್ಲ? ನಮ್ಮ ರಾಜಕಾರಣಿಗಳಿಗೆ ಇಚ್ಚಾಶಕ್ತಿಯ ಕೊರತೆಯ ಕಾರಣ ‘ಕನ್ನಡ ‘ ಮಾತ್ರುಭಾಷೆಯಲ್ಲ ಬರೀ ಭಾಷೆಯಾಗಿಯಷ್ಟೇ ಉಳಿದಿದೆ ಅಂತೆಯೇ ಕನ್ನಡಿಗರು ಕೇವಲ ವೋಟು ಬ್ಯಾಂಕ್ ಆಗಿದ್ದಾರೆ. ಕರ್ನಾಟಕವನ್ನು ಅಭಿವೃದ್ಧಿ ಮಾಡಲು ಕನ್ನಡಿಗರೇ ದೇಶದ ಪ್ರಧಾನಿಯಾಗಬೇಕಂತಿಲ್ಲ… ನಮ್ಮನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರು ಸಾಕು. ನಾವೇ ಚುನಾಯಿಸುವ ಜನ ಪ್ರತಿನಿಧಿಗಳು ನಮ್ಮ ರಾಜ್ಯವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಾರೆ. ಅದಷ್ಟೇ ಅಲ್ಲ ಅವರ ಕಾರ್ಯ. ಅವರವರ ಕ್ಷೇತ್ರಗಳ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಹಲವು ಯೋಜನೆಗಳ ಕಾರ್ಯರೂಪಕ್ಕೆ ತಂದು ಕ್ರಮೇಣ ಅಭಿವೃದ್ಧಿಗೊಳಿಸುವುದು ಸಹ ಅವರ ಕರ್ತವ್ಯ. ನಮ್ಮನ್ನು ಪ್ರತಿನಿಧಿಸೋ ಲೋಕಸಭಾ ಸದಸ್ಯರೆ ತಮ್ಮ ಕರ್ತವ್ಯ ಮರೆತರೆ ಯಾರೇ ಪ್ರಧಾನಿಯಾದರೂ ಏನು ಲಾಭ? ದೇಶದ ಪ್ರಧಾನಿ ಇಡೀ ದೇಶವನ್ನೇ ಪ್ರತಿನಿಧಿಸುತ್ತಾನೆ, ಯಾವುದೇ ಒಂದು ಭಾಷೆ, ಸಂಸ್ಕೃತಿ , ಪ್ರದೇಶವನ್ನಲ್ಲ. ಪ್ರಧಾನಿ ಅಭ್ಯರ್ಥಿ ನಮ್ಮೆಲ್ಲರ ಐಕ್ಯತೆಯ ಪ್ರತೀಕ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಕ್ಷೇತ್ರ ಪ್ರತಿನಿಧಿಸುವ ರಾಜಕಾರಣಿಯೊಬ್ಬ ಸರಿಯಿದ್ದರೆ ಆ ಕ್ಷೇತ್ರವು ಅಭಿವೃದ್ಧಿಯಾಗುವುದು. ಹೀಗೆ ರಾಜ್ಯದ ಎಲ್ಲ ರಾಜಕಾರಣಿಗಳು ಸರಿ ಇದ್ದಾರೆ ರಾಜ್ಯವು ಅಭಿವೃದ್ಧಿಯಾಗುತ್ತದೆ. ರಾಜ್ಯಗಳು ಅಭಿವೃದ್ಧಿಯಾದರೆ ದೇಶವು ಸೌಹಾರ್ದತೆಗೆ ವಿಶ್ವದಲ್ಲಿಯೇ ಮಾದರಿಯಾಗುವುದು. ಈಗ ವರ್ತಮಾನಕ್ಕೆ ಬರೋಣ. ದೇಶದ ಮುಂದಿನ ಪ್ರಧಾನಿಯಾಗಲು ಪೈಪೋಟಿಯಲ್ಲಿ ಇರುವವರು ಇಬ್ಬರೇ. ನರೇಂದ್ರ ಮೋದಿ ಹಾಗು ರಾಹುಲ್ ಗಾಂಧಿ. ನಿಮ್ಮ ಆಯ್ಕೆ ಬೇರೆ ಇನ್ಯಾರೇ ಆಗಿದ್ದರೂ ಮೋದಿ ಅಥವಾ ರಾಹುಲ್ ಇಬ್ಬರಲ್ಲಿ ಒಬ್ಬರು ಪ್ರಧಾನಿಯಾಗುವುದು ಖಚಿತ. ಭಾಷೆ, ಸಂಸ್ಕೃತಿಗಳು ಇಲ್ಲಿ ಗಣನೆಗೆ ಬರುವುದಿಲ್ಲ. ಇವರೀರ್ವರಲ್ಲಿ ನಾವು ಉತ್ತಮರನ್ನು ಆರಿಸುವತ್ತ ಗಮನ ಹರಿಸುವುದು ಒಳಿತು. ಇಬ್ಬರನ್ನು ತಿರಸ್ಕರಿಸಿದರೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವುದು. ಮುಂದಿನದು ನಿಮಗೆ ಬಿಟ್ಟದ್ದು.

    • ಅಂಕಣವನ್ನು ಇನ್ನೊಮ್ಮೆ ಓದಿ ನೋಡಿರಿ. ಅಂಕಣವು ಕನ್ನಡಿಗರ ಒಳಿತು-ಕೆಡುಕುಗಳ ಬಗ್ಗೆ ಮಾತ್ರ ಹೇಳುತ್ತದೆ. ಮೋದಿ ಇಲ್ಲಾ ಗಾಂದಿಯ ಹಿಂಬಾಲಕರು ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆಯ ಸಲುವಾಗಿ ಅವರನ್ನು ಬೆಂಬಲಿಸುತ್ತಿಲ್ಲ. ತಮಗೆ ಮಂಕು ಕವಿದಿರುವುದರಿಂದಾಗಿ ಬೆಂಬಲಿಸುತ್ತಿದ್ದಾರೆ. ಕನ್ನಡಿಗರ ಬೆಂಬಲವು ನಮ್ಮಗಳ ಏಳಿಗೆಯನ್ನೇ ಗುರಿಯಾಗಿಸಿಕೊಂಡವರ ಪರವಾಗಿರಬೇಕು. ಎತ್ತುಗೆಗೆ, ಕಾಂಗ್ರೆಸ್, ಬೀಜೇಪಿ, ಬೀಎಸ್ಪಿಗಳ ಬದಲು ದಳ, ಕೇಜೇಪಿ (ಅದಿದ್ದರೆ), ಬಿಎಸ್ಸಾರ್ಗಳ ಪರವಾಗಿರಬೇಕು. ಇವ್ಯಾವೂ ಇಶ್ಟವಿಲ್ಲವೆಂದರೆ ನೀವೇ ಒಂದು ಆಳ್ಮೆಬದಿ ಕಟ್ಟಬೇಕು. ಕಾಂಗ್ರೆಸ್/ಬೀಜೇಪಿಗಳ ಸಹವಾಸ ಮಾಡಿಯೂ ತಾವು ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಕುಂದು ತರುತ್ತಿಲ್ಲ ಅಂದುಕೊಳ್ಳುವುದು ದಡ್ಡತನ. ಅಂದಹಾಗೆ ಬಾರತದ ಚುನಾವಣೆಯು ಅದ್ಯಕ್ಶ ಮಾದರಿಯದಲ್ಲ. ಅದು ಲೋಕಸಬೆ ಮಾದರಿಯದು. ಇರುವುದೇನೆಂದರೆ, ಚುನಾವಣೆ ಗೆದ್ದ ಎಂಪಿಗಳು ಒಟ್ಟುಗೂಡಿ ತಮ್ಮ ಶಾಸಕಾಂಗ ಸಬೆಯ ನಾಯಕನನ್ನು ಆಯ್ಕೆ ಮಾಡಬೇಕು. ಅವನೇ ಪ್ರದಾನಿ. ಮೊದಲೇ ಆಯ್ಕೆ ಮಾಡುವುದು ಅರ್ತವಿಲ್ಲದ ನಡೆ. ಮಿಗಿಲಾಗಿ, ಕಾಂಗ್ರೆಸ್, ಬೀಜೇಪಿಗಳು ಒಟ್ಟಾಗಿಯೂ 272 ದಾಟಲಾರವು. ಮೋದಿಯಾಗಲೀ, ರಾಹುಲ್ ಆಗಲೀ ಪ್ರದಾನಿಯಾಗುವ ಸಾದ್ಯತೆ ನಿತೀಶ್ ಕುಮಾರ್ ಪ್ರದಾನಿಯಾಗುವಶ್ಟೆ ಇದೆ.

      • //ಕನ್ನಡಿಗರ ಬೆಂಬಲವು ನಮ್ಮಗಳ ಏಳಿಗೆಯನ್ನೇ ಗುರಿಯಾಗಿಸಿಕೊಂಡವರ ಪರವಾಗಿರಬೇಕು.//
        ಅಂಥ ನಿಸ್ವಾರ್ಥ ರಾಜಕಾರಣಿಗಳ ಪಟ್ಟಿಯನ್ನು ಸಿದ್ಧಪಡಿಸಿ. ಕನ್ನಡಿಗರಿಗೆ ಅವರ ಪರಿಚಯ ಮಾಡಿಸಿ. ಅವರಿಂದೇನಾದರು ಕರ್ನಾಟಕಕ್ಕೆ ಒಳ್ಳೆಯದಾಗುವುದಾದರೆ ನಾನು ನಿಮ್ಮೊಡನೆ ಅವರ ಗೆಲುವಿಗೆ ಆಶಿಸುತ್ತೇನೆ. ಆದರೆ ಒಂದಂತು ಸತ್ಯ, ಬಹುತೇಕ ರಾಜಕಾರಣಿಗಳು ತಮ್ತಮ್ಮ ಏಳಿಗೆಯನ್ನಷ್ಟೇ ಗುರಿಯಾಗಿಸಿಕೊಂಡಿದ್ದಾರೆ.

        //ಎತ್ತುಗೆಗೆ, ಕಾಂಗ್ರೆಸ್, ಬೀಜೇಪಿ, ಬೀಎಸ್ಪಿಗಳ ಬದಲು ದಳ, ಕೇಜೇಪಿ (ಅದಿದ್ದರೆ), ಬಿಎಸ್ಸಾರ್ಗಳ ಪರವಾಗಿರಬೇಕು//
        ನೀವು ಪ್ರಸ್ತಾಪಿಸುರುವ ಪಕ್ಷಗಳ ಬಗ್ಗೆ ಒಮ್ಮೆ ಕಣ್ಣಾಯಿಸೋಣ. ಬಿಜೆಪಿ ಯನ್ನು ವಿರೋಧಿಸುವ ನೀವು ಕೆಜೆಪಿ ಹಾಗು ಬಿಎಸ್ಆರ್ ಪಕ್ಷಗಳ ಬೇರು ಯಾವುದೆಂದು ತಿಳಿದಿರುವಿರೆಂದು ಭಾವಿಸುತ್ತೇನೆ. ಅದರಲ್ಲಿ ಬಿಎಸ್ಆರ್ ತನ್ನ ನಿಲುವುಗಳಲ್ಲಿ ಸ್ಪಷ್ಟತೆಯನ್ನೇ ಹೊಂದಿಲ್ಲ. ಸಾಲದೆಂಬಂತೆ ಆ ಪಕ್ಷದ ಕೆಲ ನಾಯಕರು ಕನ್ನಡಾಂಬೆಯ ನೆಲದ ನೈಸರ್ಗಿಕ ಸಂಪತ್ತನ್ನೇ ಅಕ್ರಮವಾಗಿ ಕೊಳ್ಳೆ ಹೊಡೆದು ಬರಡು ನೆಲವನ್ನಾಗಿ ಪರಿವರ್ತಿಸಿದ್ದಾರೆ. ಹೋಗಲಿ ಬಿಡಿ, ಕನ್ನಡಿಗರೇ ತಾನೇ ಎಂದು ಕ್ಷಮಿಸಿಬಿಡೋಣ. ನಮ್ಮ ಕನ್ನಡ ತಾಯಿಯ ವೇದನೆ ಆ ವೇಳೆ ಯಾರಿಗು ಕೇಳಿಸಲಿಲ್ಲವಾದ್ದರಿಂದ ಮರೆತು ಬಿಡೋಣ ಅಲ್ಲವೇ ? ಇನ್ನು ಕೆಜೆಪಿ. ಕರ್ನಾಟಕದ ಇತಿಹಾಸದಲ್ಲೇ ಮುಖ್ಯಮಂತ್ರಿಯಾದವರು ಅಧಿಕಾರ ಹಸ್ತಾಂತರಿಸಿ ಜೈಲುವಾಸ ಅನುಭವಿಸಿದರು. ಕರ್ನಾಟಕದ ಮಟ್ಟಿಗೆ ಅದು ದಾಖಲೆಯೋ ಅಥವಾ ರಾಷ್ಟ್ರಮಟ್ಟದಲ್ಲಿ ಕಪ್ಪುಚುಕ್ಕಿಯೋ, ಅದು ಅವರವರ ಭಾವಕ್ಕೆ ತಕ್ಕಂತೆ. ನ್ಯಾಯದೇವತೆ ಹಾಗು ಅವರ ಪ್ರಾಮಾಣಿಕತೆ ಅವರ ಕೈ ಹಿಡಿಯಲಿಲ್ಲವೆಂದು ಭಾವಿಸೋಣ. ಆ ಪಕ್ಷ ಮುಂದಿನ ಲೋಕಸಭಾ ಚುನಾವಣೆಗೆ ನೀವು ಹೆಸರಿಸಿದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ಪರ್ಧಿಸಿದರೆ ಆ ಬಗ್ಗೆ ಯೋಚಿಸೋಣ. ಇನ್ನು ಜನತಾದಳ. ಈ ಪಕ್ಷ ಒಂದು ಕುಟುಂಬಕ್ಕೆ ಅಥವಾ ಒಂದು ಜಾತಿಯ ಪ್ರಭಾವಕ್ಕೆ ಒಳಗಾದಂತೆ ಕಂಡರೂ ಹಲವಾರು ಭ್ರಷ್ಟಾಚಾರಗಳ ಬಯಲಿಗೆಳೆದಿದೆ ಎಂಬುದು ಶ್ಲಾಘಿಸಬೇಕಾದ ಅಂಶ. ಬಿಜೆಪಿಯನ್ನು ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ತಂದ ಹಾಗು ಆ ಪಕ್ಷ ಹಲವು ದಾಖಲೆಗಳನ್ನುನಿರ್ಮಿಸಲು ಅನುವು ಮಾಡಿಕೊಟ್ಟ ಕೀರ್ತಿಯು ಈ ಪಕ್ಷಕ್ಕೆ ಸಲ್ಲುತ್ತದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಅಥವಾ ಬಿಜೆಪಿ ಅಥವಾ ಯಾವುದೇ ಪಕ್ಷದೊಂದಿಗೂ ಮೈತ್ರಿಗೆ ಸಿದ್ಧ. ಜ್ಯಾತ್ಯಾತೀತ ನಿಲುವುಗಳು ಲಾಭಕ್ಕೆ ತಕ್ಕಂತೆ ಬದಲಾಗುತ್ತವೆ. ಈ ಪಕ್ಷ ಈ ಮೊದಲು ಅನೇಕ ಬಾರಿ ರಾಜ್ಯದ ಚುಕ್ಕಾಣಿ ಹಿಡಿದಿದ್ದರೂ ರಾಜ್ಯ ಸರ್ವತೋಮುಖ ಅಭಿವೃದ್ಧಿ ಕಾಣಲಿಲ್ಲ.
        ಇವರೆಲ್ಲ ಕನ್ನಡಿಗರೇ ಅಲ್ಲವೇ? ಆದರೂ ರಾಜ್ಯ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಏಕೆಂದು ತಿಳಿಸಿ ಹಾಗು ನಿಮ್ಮ ದೃಷ್ಟಿಯಲ್ಲಿ ಬೇರೆ ಏನಾದರೂ ಪರಿಹಾರ ಉಂಟೇ ?

        //ಮೋದಿಯಾಗಲೀ, ರಾಹುಲ್ ಆಗಲೀ ಪ್ರದಾನಿಯಾಗುವ ಸಾದ್ಯತೆ ನಿತೀಶ್ ಕುಮಾರ್ ಪ್ರದಾನಿಯಾಗುವಶ್ಟೆ ಇದೆ.//

        //ನಮ್ಮ ನಾಡಿನವನಲ್ಲದ, ನಮ್ಮ ನುಡಿಯನ್ನು ಆಡದ, ಬರೆಯದ//

        ನಿತೀಶ್ ಕುಮಾರ್ ಕೂಡ ನಮ್ಮ ನಾಡಿನವರಲ್ಲ ಹಾಗು ಕನ್ನಡ ಬಲ್ಲವರಲ್ಲ. ಕನ್ನಡಿಗರಿಗೆ ನ್ಯಾಯ ದೊರಕಿಸಬಲ್ಲರೆಂದರೆ ಅವರನ್ನೇ ಬೆಂಬಲಿಸಬಹುದು, ನನ್ನದೇನೂ ಅಭ್ಯಂತರವಿಲ್ಲ.

        • Priyank KS says:

          ಮಾನ್ಯ ಚಂದ್ರಕಾಂತ ರಾಮಣ್ಣ ಅವರೇ,
          ಕಾವೇರಿ ವಿಶಯದಲ್ಲಿ ಕಾಂಗ್ರೆಸ್ಸು ಕನ್ನಡಿಗರಿಗೆ ಕೇಡು ಬಗೆಯಿತು. ಅದೇ ಹೊತ್ತಿನಲ್ಲಿ 19 ಸಂಸದರನ್ನು ಹೊಂದಿದ್ದ (ಈಗಲೂ ಹೊಂದಿರುವ) ಬಿಜೆಪಿಯು ಹೆಚ್ಚೇನೂ ದನಿಯೆತ್ತಲಿಲ್ಲ. 2014ರ ಚುನಾವಣೆಯಲ್ಲಿ ಜಯಲಲಿತ ಅವರ ಬೆಂಬಲ ಗಳಿಸಿಕೊಳ್ಳುವ ಗುರಿಯ ಮುಂದೆ ಕನ್ನಡಿಗರಿಗೆ ಕಾವೇರಿ ವಿಶಯದಲ್ಲಾದ ಅನ್ಯಾಯ ಚಿಕ್ಕದಾಗಿ ಕಂಡಿದುದಕ್ಕೋ ಏನೋ ದನಿಯೆತ್ತುವ ಮನಸ್ಸನ್ನು ಬಿಜೆಪಿ ಮಾಡಲಿಲ್ಲ ಎಂದನಿಸುತ್ತದೆ.
          ಈ ಎರಡೂ ಬದಿಗಳು (ಪಕ್ಶಗಳು) ಕನ್ನಡಿಗರೊಂದಿಗೆ ಹೀಗೆ ನಡೆದುಕೊಳ್ಳುತ್ತಿರುವಾಗ, ಅವರನ್ನು ಕಣ್ಣು ಮುಚ್ಚಿಕೊಂಡು ಬೆಂಬಲಿಸುವುದು ಏಕೆ? ಲೋಕಸಬೆ ಚುನಾವಣೆ ಎಂಬ ಜಾತ್ರೆಯಲ್ಲಿ ಕನ್ನಡಿಗರು ಕಳೆದು ಹೋಗದೇ, ತಮ್ಮನ್ನು ಮತ್ತು ತಮ್ಮ ಬೇಡಿಕೆಗಳನ್ನು ಗಟ್ಟಿಯಾಗಿ ಮಂಡಿಸಬೇಕು. ಕನ್ನಡಿಗರನ್ನು ಚೆನ್ನಾಗಿ ನೋಡಿಕೊಳ್ಳುವ ಬದಿಯೊಂದರ ಅಗತ್ಯ ಎಂದಿಗಿಂತಾ ಹೆಚ್ಚು ಇಂದು ಕಾಣುತ್ತಿದೆ.

          • ನಿಮ್ಮ ದೃಷ್ಟಿಯಲ್ಲಿ ಕರ್ನಾಟಕಕ್ಕೆ ನ್ಯಾಯ ಒದಗಿಸಬಲ್ಲಂತ ಕೆಲವೇ ಅಭ್ಯರ್ಥಿಗಳನ್ನಾದರೂ ಅಥವಾ ಪಕ್ಷವನ್ನಾದರೂ ಹೆಸರಿಸಿ…

          • ದೇಶದ ಆರ್ಥಿಕತೆಯು ಪ್ರತಿಯೊಬ್ಬರ ಮೇಲೆಯೂ ಪರಿಣಾಮ ಬೀರುತ್ತದೆ. ಇದೇ ರೀತಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ, ಮುಂದೊಮ್ಮೆ ದೇಶವೇ ದಿವಾಳಿಯಾದರೆ, ಸಾಲದ ಸುಳಿಯಲ್ಲಿ ಸಿಕ್ಕು ನರಳಿದರೆ, ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ ನಮ್ಮ ದೇಶದ ಮೇಲೆ ದಾಳಿ ಮಾಡಿದರೆ, ರೂಪಾಯಿಯ ಮೌಲ್ಯ ಡಾಲರ್ ಎದುರು ಸೊರಗುತ್ತ ಹೋದರೆ, ರೈತರ ಭೂಮಿಗಳು ಕ್ಷೀಣಿಸುತ್ತಾ ಹೋದರೆ, ಆಹಾರದ ಅಭಾವ ಉಂಟಾದರೆ, ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ? ಆಗ ಇವೆಲ್ಲ ಕೇವಲ ದೇಶದ ಸಮಸ್ಯೆಯಾಗಿ ಉಳಿಯುವುದಿಲ್ಲ ಬದಲಾಗಿ ಪ್ರತಿಯೊಬ್ಬರ ಸಮಸ್ಯೆಗಳಾಗಿ ಕಾಡುವುದು. ನಾವು ನಾವೇ ಬಡಿದಾದಬೇಕಾದ ಸಂದರ್ಭ ಎದುರಾಗಬಹುದು. ಆಗ ಅರ್ಹರಷ್ಟೇ ಬದುಕಿ ಉಳಿಯಬಲ್ಲರು(survival of the fittest). ಹಾಗಾಗಿ ಈ ಎಲ್ಲಾ ದೃಷ್ಟಿಯಲ್ಲೂ ಗಮನ ಹರಿಸಿ ದೇಶದ ಹಾಗು ರಾಜ್ಯದ ಉನ್ನತಿಗೆ ಕಾರಣವಾಗುವಂತವ ನಿರ್ಧಾರಗಳ ಕೈಗೊಳ್ಳುವ ಅವಕಾಶ ನಮ್ಮ ಕೈಯಲ್ಲಿದೆ. ರಾಜ್ಯಕ್ಕೆ ನ್ಯಾಯ ಸಿಗಬೇಕಾದರೆ ಪಕ್ಷಬೇಧ ಮರೆತು ಎಲ್ಲ ಲೋಕಸಭಾ ಸದಸ್ಯರು ಸಾಮೂಹಿಕ ರಾಜಿನಾಮೆ ನೀಡುವಂತೆ ನೋಡಿಕೊಳ್ಳಬೇಕು, ಇಲ್ಲವೇ ನ್ಯಾಯ ಸಿಗದಿದ್ದಲ್ಲಿ ಅವರಿಗೆ ಅಧಿಕಾರದಲ್ಲಿ ಉಳಿಗಾಲವಿಲ್ಲ ಎಂಬ ಸಂದೇಶ ರವಾನೆ ಮಾಡಬೇಕು. ಕೇಂದ್ರದಲ್ಲಿ ನಮ್ಮವರೇ ಮಂತ್ರಿಗಳಾದರೂ ನ್ಯಾಯ ಅಷ್ಟು ಸುಲಭವಾಗಿ ದೊರಕುವುದಿಲ್ಲ ಏಕೆಂದರೆ ಅದಕ್ಕೆ ತಕ್ಕಂತೆ ವಾದ ಮಂಡಿಸುವವರ ಅಗತ್ಯ ಇದೆ. ನ್ಯಾಯಾಂಗದಲ್ಲಿ ನಂಬಿಕೆ ಇಡುವುದೊಂದೇ ಅಲ್ಲ ಬದಲಿ ಮಾರ್ಗೋಪಾಯಗಳನ್ನು ಸಹ ಕಂಡುಕೊಳ್ಳಬೇಕು. ಇನ್ನಷ್ಟು ಅಣೆಕಟ್ಟುಗಳನ್ನು ನಿರ್ಮಿಸಿ ಹೆಚ್ಚೆಚ್ಚು ನೀರನ್ನು ಶೇಖರಿಸಬೇಕು ಹಾಗು ಮಳೆ ನೀರು ಕೊಯ್ಲು ಪದ್ದತಿಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು . ಕನ್ನಡಿಗರಿಗೆ ಅದರ ಮಹತ್ವದ ಅರಿವು ಮೂಡಿಸುವುದು. ಈ ಬಗ್ಗೆ ನಾವು ಒಟ್ಟಾಗಿ ಚರ್ಚಿಸಿದರೆ ಪರಿಹಾರ ದೊರಕಿದರೂ ದೊರಕಬಹುದು. ಆದರೆ ರಾಜ್ಯದ ಹಾಗು ರಾಷ್ಟ್ರದ ಅಷ್ಟು ಸಮಸ್ಯೆಗಳನ್ನು ವಿಂಗಡಿಸಿ ನೋಡ ಹೋದರೆ ಅಥವಾ ಎಲ್ಲವನ್ನೂ ಅಸ್ತವ್ಯಸ್ತ ಮಾಡಿ ನೋಡಿದರೂ ಸಮಸ್ಯೆ ಇನ್ನು ಜಟಿಲವಾಗುವುದು. ರಾಷ್ಟ್ರ ನಾಯಕತ್ವ ಹಾಗು ರಾಜ್ಯ ಸಮಸ್ಯೆಗಳು ಒಂದೊಕ್ಕೊಂದು ಸಂಬಂದಿತವೇ ಆದರೂ ವಾಸ್ತವಿಕತೆ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಾಸ್ತವಿಕತೆಯ ಅರ್ಥ ಮಾಡಿಕೊಂಡು ಸೂಕ್ತ ನಿರ್ಧಾರಗಳನ್ನು ಚರ್ಚಿಸಿ ತೆಗೆದುಕೊಳ್ಳುವುದು ಎಲ್ಲ ರೀತಿಯಲ್ಲೂ ಯೋಗ್ಯ. ಮುಕ್ತ ಚರ್ಚೆ, ನಮ್ಮ ಮಿತಿಯಲ್ಲಿನ ಸದಾವಕಾಶಗಳು ಹಾಗು ವೈಯುಕ್ತಿಕ ಸಲಹೆಗಳು ಪರಿಹಾರಕ್ಕೆ ದಾರಿಯಾಗಬಲ್ಲವು. ನನ್ನ ವಾದ ಸಮಂಜಸವೆನಿಸದಿದ್ದಲ್ಲಿ ನಾನು ನನ್ನ ಪಾಲಿನ ಚರ್ಚೆಯನ್ನು ಇಲ್ಲಿಗೆ ಕೊನೆಗೊಳಿಸ ಬಯಸುತ್ತೇನೆ.

  3. ಮೋದಿ ಇಲ್ಲವೇ ಗಾಂದಿ ಪ್ರದಾನಿಯಾಗುವುದನ್ನು ಕನ್ನಡಿಗರು ಹೇಗೆ ಹುರುಳಿಸಿಕೊಳ್ಳಬೇಕು ಎಂದು ನಾನು ಬರೆದಿರುವುದನ್ನು ’ಕನ್ನಡಿಗನೊಬ್ಬನು ಆಗಬೇಕು’ ಎಂದು ಇಲ್ಲಿ ಕೆಲವರು ಓದಿಕೊಂಡಿರುವುದು, ಇರುವ ಚವ್ಕಟ್ಟಿನೊಳಗೆ ಮಾತ್ರ ಹರಿದಾಡಬಲ್ಲ ಅವರವರ ಸೀಮಿತ ರಾಜಕೀಯ ಚಿಂತನೆಯನ್ನು ಎತ್ತಿ ತೋರಿಸುತ್ತದೆ. ನಾನು ಹೇಳಿರುವುದನ್ನು ಸರಿಯಾಗಿ ಹುರುಳಿಸಿಕೊಂಡರೆ, ಬಾರತದ ಪ್ರದಾನಮಂತ್ರಿಯ ಹುದ್ದೆಗೆ, ಅಶ್ಟೇ ಏಕೆ, ಕೇಂದ್ರ ಸರ‍್ಕಾರವೆಂಬುದಕ್ಕೆ, ಇಂದು ಕೊಡಲಾಗುತ್ತಿರುವ ಗವ್ರವವನ್ನು, ಪೂಜ್ಯಸ್ತಾನವನ್ನು, ಮತ್ತದರೊಡನೆ ಅದಿಕಾರವನ್ನು, ಉಳಿಸಿಕೊಳ್ಳುವುದರಲ್ಲೇ ಅರ‍್ತವಿಲ್ಲವೆಂದು ನನ್ನ ಅನಿಸಿಕೆಯೆಂದು ತಿಳಿದುಬಂದೀತು. ಈ ಮಾತನ್ನು ಇತರೆಡೆಗಳಲ್ಲಿ ನಾನು ನೇರವಾಗಿ ಹೇಳಿರುವುದುಂಟು.

  4. malleshbg says:

    ನಾಡಿನ ಒಳಿತನ್ನು ಬಯಸುವ ಪ್ರಾದೇಶಿಕ ಪಕ್ಶವೊಂದು ನಾಡಿನ ಅದಿಕಾರದ ಚುಕ್ಕಾಣಿ ಹಿಡಿಯುವವರೆಗೂ, ರಾಶ್ಟ್ರೀಯ ಪಕ್ಶಗಳ ಆಳ್ವಿಕೆಯಿಂದ ನಾಡು ಹೊರಬರುವವರೆಗೂ ಈಗಿನ ಒಕ್ಕೂಟ ವ್ಯವಸ್ಥೆಯಲ್ಲಿ ನಾಡಿಗೆ ಎಂದಿಗೂ ನ್ಯಾಯ ಸಿಗದು ಎಂಬರ್ತದಲ್ಲಿರುವ ಈ ಸೊಗಸಾದ ಬರಹ ಇಲ್ಲಿಯವರೆಗೆ ಈ ರಾಶ್ಟ್ರೀಯ ಪಕ್ಶಗಳು ಮತ್ತದರ “ವರಿಶ್ಟರು”ಗಳು, ಹಾಗೂ ರಾಜ್ಯದ ಈ ರಾಶ್ಟ್ರೀಯ ಪಕ್ಶಗಳು ಮತ್ತದರ “ವರಿಶ್ಟರು”ಗಳ ಹಿಂಬಾಲಕರು ನಾಡು-ನುಡಿ-ನಾಡಿಗರಿಗೆ ಮಾಡಿರುವ ಸಾಲು-ಸಾಲು ಅನ್ಯಾಯಗಳು ಏನೆಂದು ಬಲ್ಲವರಿಗೆ ಸುಲಬವಾಗಿ ಅರ್ತವಾಗುತ್ತದೆ. ದೂರದ ಊರಿನ ಮೋದಿಯೋ ರಾಹುಲ್ ಗಾಂಧಿಯೋ ಪ್ರದಾನಿಯಾದರೆ, ಮತ್ತೊಂದು ಮಗದೊಂದಾದರೆ ಅಶ್ಟು ಮಾತ್ರಕ್ಕೆ ಸಂಬ್ರಮಿಸುವ ರಾಜ್ಯದ ಕೆಲ ಮಂದಿಗೆ ಇದರಿಂದ ನಾಡಿಗೆ ಯಾವ ರೀತಿಯ ಒಳಿತಾಗುತ್ತದೆ ಎಂಬುದರ ಕುರಿತು ಕನಿಶ್ಟ ತಿಳುವಳಿಕೆಯೂ ಇಲ್ಲದಿರುವುದು, ಅದರ ಬಗ್ಗೆ ಯೋಚಿಸದೆ ಕುರುಡು ಸಂಬ್ರಮ ಸಂಬ್ರಮಿಸುತ್ತಿರುವುದು ಕಾಣುತ್ತಿದೆ. ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಒಳ್ಳೆಯ ಬಾಂದವ್ಯವನ್ನೇ ಹೊಂದಿರುವ ತಮಿಳುನಾಡಿನ ಮುಕ್ಯಮಂತ್ರಿ ಜಯಲಲಿತಾ ಅವರಿಗೆ ಮೋದಿ ಮುಂದೊಮ್ಮೆ ಪ್ರದಾನಿಯಾದರೆ ಕಾವೇರಿ, ಹೋಗನೆಕಲ್ ವಿಚಾರವಾಗಿ ತಮಿಳುನಾಡಿಗೆ ಬುದ್ಧಿ ಹೇಳಿ ನಮ್ಮ ನಾಡಿಗೆ ನ್ಯಾಯ ದೊರಕಿಸಿಕೊಡುವರೇ ? ಹಾಗೂ ಮೋದಿಯವರನ್ನು ಬೆಂಬಲಿಸುವುದಾಗಿ ಹೇಳಿರುವ, ಬೆಳಗಾವಿಯ ಗಡಿ ವಿಶಯದಲ್ಲಿ ಬೇಕೆಂದೇ ಕ್ಯಾತೆ ತೆಗೆಯುವ ಎಮ್ ಇ ಎಸ್ ಪುಂಡರಿಗೆ ಕುಮ್ಮಕ್ಕು ಕೊಡುವ ಮಹಾರಾಶ್ಟ್ರದ ಶಿವಸೇನೆಗೆ ಬೆಳಗಾವಿ ತಂಟೆಗೆ ಬಾರದಂತೆ ತಾಕೀತು ಮಾಡಲು ಸಾದ್ಯವೇ ? ಇದೇ ರೀತಿಯಾಗಿ ರಾಹುಲ್ ಗಾಂದಿ ಪ್ರದಾನಿಯಾದರೂ ಅಶ್ಟೇ ಇಂತಹ ಸಮಸ್ಯೆಗಳಿಗೆ ನಾಡಿಗೆ ಸಿಗಬೇಕಾದ ನ್ಯಾಯವನ್ನು ಇವರು ಕೊಡಿಸಬಲ್ಲರೇ ? ಎಂದಿಗೂ ಇಲ್ಲ. ಸುಕಾಸುಮ್ಮನೆ ಪಕ್ಶಗಳ ಹಾಗೂ ಕೆಲ ಮುಕಂಡರರ ಬಗ್ಗೆ ಕುರುಡು ನಿಶ್ಟೆ ಮೆರೆಯುವ, ಸಂಬ್ರಮಿಸುವ ನಾಡಿನ ಕೆಲ ಮಂದಿ ಈ ವಾಸ್ತವಗಳನ್ನರಿಯಬೇಕಿದೆ.

  5. ಅಲ್ಲ ಸ್ವಾಮಿ,ಭಾರತದಂತಹ ದೊಡ್ಡ ಮನೆಯಲ್ಲಿದ್ದು ಕರ್ನಾಟಕವೆಂಬ ಒಂದು ಕೊಡದಿಗೋಸ್ಕರ ವಿಶೇಷವಾಗಿ ಕೆಲಸ ಮಾಡುವಂತಹ ಮುಖ್ಯಸ್ಥ ಬೇಕೆಂದರೆ ಹೇಗೆ ಆಗುತ್ತದೆ ?
    ನಮಗೇನು ಬೇಕೋ ಅದನ್ನು ನಾವೇ ಪಡೆಯಬೇಕು.. ಆ ಬಯಕೆ ಮನೆಯ ಸಮಗ್ರತೆಗೆ ದಕ್ಕೆ ತರುವತೇ ಇರಬಾರದು

ಅನಿಸಿಕೆ ಬರೆಯಿರಿ:

Enable Notifications