ಇಂದು ಯುರೋಪಿಯನ್ ನುಡಿಗಳ ದಿನ – ನಮಗೆ ಕಲಿಯಲು ಬಹಳವಿದೆ!

ರತೀಶ ರತ್ನಾಕರ.

EDL-banner-COE2012-EN

ನುಡಿಯ ಹಲತನದಿಂದ ಕೂಡಿರುವ ಬಾರತ ಒಕ್ಕೂಟಕ್ಕೆ ಒಂದೊಳ್ಳೆಯ ನುಡಿ-ನೀತಿಯನ್ನು ತರುವ ನಿಟ್ಟಿನಲ್ಲಿ ಚಿಂತನೆ ನಡೆಯಬೇಕೆಂದು ಈ ಮೊದಲು ಒಂದು ಬರಹದಲ್ಲಿ ತಿಳಿಸಲಾಗಿತ್ತು. ಆ ಬರಹದಲ್ಲಿ, ಯುರೋಪಿಯನ್ ಒಕ್ಕೂಟ ಅಳವಡಿಸಿಕೊಂಡಿರುವ ನುಡಿ-ನೀತಿಯ ಕುರಿತು ಹೇಳುತ್ತ, ಯುರೋಪಿಯನ್ ಒಕ್ಕೂಟದ ಹಾಗೆಯೇ ನುಡಿಯ ಹಲತನವಿರುವ ಇಂಡಿಯಾದಲ್ಲಿ ಒಕ್ಕೂಟ ಸರಕಾರವು ಹಿಂದಿಗೆ ಮಾತ್ರ ಮನ್ನಣೆ ನೀಡುತ್ತಿರುವುದರ ಕುರಿತೂ ಹೇಳಲಾಗಿತ್ತು. ಯುರೋಪಿಯನ್ ಒಕ್ಕೂಟದ ನುಡಿ-ನೀತಿಯ ಕುರಿತು ಮತ್ತೊಂದಶ್ಟು ತಿಳಿಯುತ್ತ ಹೋದರೆ ‘ಯುರೋಪಿಯನ್ ನುಡಿಗಳ ದಿನ’ ಒಂದು ಗಮನ ಸೆಳೆಯುವ ಆಚರಣೆಯಾಗಿದೆ.

ಯುರೋಪಿಯನ್ ಒಕ್ಕೂಟವು ಸೆಪ್ಟೆಂಬರ್ 26 ರಂದು ‘ಯುರೋಪಿಯನ್ ನುಡಿಗಳ ದಿನ’ವೆಂದು ಆಚರಿಸುತ್ತದೆ. 47 ಸದಸ್ಯ ನಾಡುಗಳಿಂದ 80 ಕೋಟಿ ಮಂದಿಯೆಣಿಕೆ ಇರುವ ಯುರೋಪಿಯನ್ ಒಕ್ಕೂಟದಲ್ಲಿ, ಅಲ್ಲಿನ ಮಂದಿಯು ಒಂದಕ್ಕಿಂತ ಹೆಚ್ಚು ನುಡಿಯನ್ನು ಕಲಿತುಕೊಳ್ಳುವಂತೆ ಹುರಿದುಂಬಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ನುಡಿಯ ಹಲತನವು ಯುರೋಪಿನ ಪರಂಪರೆ ಹಾಗು ತಮ್ಮತನದ ಸಿರಿತನದ ಗುರುತು ಎಂದು ‘ಕವ್‍ನ್ಸಿಲ್ ಆಪ್ ಯುರೋಪ್’ ಅರಿತಿದೆ. ಒಂದು ನುಡಿಯಾಡುಗರು ಬೇರೊಂದು ನುಡಿಯಾಡುಗರ ನಡೆ-ನುಡಿಯನ್ನು ತಿಳಿದು ಆ ಮೂಲಕ ಯುರೋಪಿನ ನುಡಿಗಳ ಹಲತನದ ಕುರಿತು ತಿಳುವಳಿಕೆಯನ್ನು ಹೊಂದಬೇಕೆನ್ನುವ ಸಲುವಾಗಿ 2001 ರಿಂದ ಈ ದಿನದ ಆಚರಣೆಯನ್ನು ಮಾಡಲಾಗುತ್ತಿದೆ.

ಈ ದಿನದಂದು ಯುರೋಪಿನ ತುಂಬೆಲ್ಲಾ ಹಲವು ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳಿಗಾಗಿ ಬೇರೆ ಬೇರೆ ನುಡಿಯಾಡುಗರ ‘ತಮ್ಮತನ’ದ ಕುರಿತು ಹಲವು ಕಾರ್‍ಯಕ್ರಮಗಳಿರುತ್ತವೆ. ಮಕ್ಕಳಿಂದಲೂ ಕೂಡ ಹಲವು ಕಾರ್‍ಯಕ್ರಮಗಳನ್ನು ಏರ‍್ಪಡಿಸಲಾಗುತ್ತದೆ. ಟಿವಿ ಹಾಗು ಬಾನುಲಿಗಳು ಅಂದು ಯುರೋಪಿನ ನುಡಿಯ ಹಲತನವನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತವೆ. ಇದಲ್ಲದೇ, ತಮಗೆ ಇಶ್ಟ ಬಂದ ನುಡಿಯನ್ನು ಕಲಿಯಲು, ನುಡಿ-ಕಲಿಕೆಯ ಏರ್‍ಪಾಡನ್ನು ಆ ದಿನದಂದು ಮಾಡಲಾಗುತ್ತದೆ. ದೊಡ್ಡ ಸಮ್ಮೇಳನಗಳನ್ನು ಏರ್‍ಪಡಿಸಿ, ಬೇರೆ ಬೇರೆ ನುಡಿಯ ಹೆಚ್ಚುಗಾರಿಕೆಯನ್ನು ತಿಳಿಸಲಾಗುತ್ತದೆ. ಒಟ್ಟಿನಲ್ಲಿ, ಯುರೋಪಿನ ಮಂದಿಯು ಒಂದಕ್ಕಿಂತ ಹೆಚ್ಚು ನುಡಿಗಳನ್ನು ಕಲಿಯಬೇಕು ಎಂದು ಅಲ್ಲಿನ ಒಕ್ಕೂಟದ ಆಳ್ವಿಕೆಯು ಬಯಸುತ್ತದೆ. ಅದಕ್ಕಾಗಿ, ಆಳ್ವಿಕೆಯೇ ‘ಯುರೋಪಿಯನ್ ನುಡಿಗಳ ದಿನ’ದ ಆಚರಣೆಯ ಹೊಣೆಯನ್ನು ಹೊರುತ್ತಿದೆ.

ನುಡಿಯ ಹಲತನವನ್ನು ಕಾಪಾಡುವ ನಿಟ್ಟಿನಲ್ಲಿ ಇಂಡಿಯಾದ ಒಕ್ಕೂಟ ಸರಕಾರ ಏನು ಮಾಡುತ್ತಿದೆ ಎಂದು ಇಣುಕಿ ನೋಡಿದರೆ ದೊಡ್ಡದಾದ ಸೊನ್ನೆ ಎದ್ದುಕಾಣುತ್ತದೆ. ‘ಇಂಡಿಯಾದ ನುಡಿಗಳ ದಿನ’ದ ಬದಲಾಗಿ ಇಲ್ಲಿ ‘ಹಿಂದಿ ದಿವಸ’ ಇದೆ! ಹಿಂದೆಯೇತರರ ಮೇಲೆ ಹಿಂದಿಯನ್ನು ಹೇರುವ ಸಲುವಾಗಿ ಹುಟ್ಟಿಕೊಂಡ ದಿನ ಇದಾಗಿದೆ. ಒಕ್ಕೂಟದ ಸರಕಾರಿ ಕಚೇರಿಗಳಲ್ಲಿ ಹಾಗು ಕಲಿಕೆಮನೆಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಹಿಂದಿಯನ್ನು ಕಲಿತರೆ ಮಾತ್ರ ನೀನೊಬ್ಬ ದೇಶಪ್ರೇಮಿ ಎಂದು ಮಂಕುಬೂದಿ ಎರಚುವ ಪ್ರಯತ್ನ ಮಾಡಲಾಗುತ್ತದೆ. ಹೀಗೆ, ಇಲ್ಲಿನ ಪ್ರತಿ ಮಂದಿಯು ಹಿಂದಿ ಕಲಿಯಬೇಕೆಂಬ ಒತ್ತಾಯವಿದೆ ಹಾಗು ಆಮಿಶವಿದೆ. ಹಿಂದಿಯೇತರ ಮಕ್ಕಳಿಗೆ ಹಿಂದಿ ಕಲಿಸುವ ಸಲುವಾಗಿ ಅವರ ಕಲಿಕೆಯಲ್ಲಿ ಹಿಂದಿಯನ್ನು ತೂರಿಸಲಾಗಿದೆ. ನುಡಿಯ ಹಲತನವಿರುವ ದೇಶದಲ್ಲಿ ಹಿಂದಿಗೆ ಮನ್ನಣೆ ನೀಡಿ, ಒಕ್ಕೂಟ ಸರಕಾರವು ಉಳಿದ ನುಡಿಗಳ ನಾಶಕ್ಕೆ ಮುನ್ನುಡಿಯನ್ನು ಬರೆಯುವ ಹವಣಿಕೆಯಲ್ಲಿದೆ.

ಯಾವುದೇ ಒಂದು ನುಡಿಯನ್ನು ಮಾತ್ರ ಮಂದಿಯ ಮೇಲೆ ಹೇರದೆ, ಯುರೋಪಿನ ಎಲ್ಲಾ ನುಡಿಗಳನ್ನು ಅಲ್ಲಿನ ಮಂದಿಯು ಕಲಿಯುವಂತೆ ಹುರಿದುಂಬಿಸಿ, ನುಡಿಯ ವಿಚಾರದಲ್ಲಿ ಯಾವುದೇ ತಾರತಮ್ಯ ಎಸಗುವಂತಹ ಕಾರ್‍ಯಕ್ರಮಗಳನ್ನು ಕಯ್ಗೆತ್ತಿಕೊಳ್ಳದೆ, ನುಡಿಯ ಹಲತನವನ್ನು ಕಾಪಾಡಿ ಬೆಳೆಸುತ್ತಿರುವ ಅಲ್ಲಿನ ನುಡಿ-ನೀತಿಯು ಒಂದು ಮಾದರಿ ನುಡಿ-ನೀತಿಯಾಗಿದೆ. ಹಾಗೆಯೇ, ಹಿಂದಿಯನ್ನು ಮಾತ್ರ ತಲೆಮೇಲೆ ಹೊತ್ತು ಮೆರವಣಿಗೆ ಮಾಡದೆ, ನುಡಿಗಳ ನಡುವೆ ತಾರತಮ್ಯ ಎಸಗದೆ, ಎಲ್ಲಾ ನುಡಿಗಳಿಗೆ ಒಂದೇ ರೀತಿಯ ಸ್ತಾನಮಾನ ನೀಡುವಂತಹ ಕಾರ್‍ಯಕ್ರಮಗಳನ್ನು ಬಾರತದ  ಒಕ್ಕೂಟ ಸರಕಾರ ಹಮ್ಮಿಕೊಳ್ಳಬೇಕಿದೆ.

(ಮಾಹಿತಿ ಸೆಲೆ: www.educaionsoctland.gov.uk

(ಚಿತ್ರ ಸೆಲೆ: www.coe.int)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.