ಪ್ರೀತಿಯೋ, ಸ್ವಾರ‍್ತವೋ?

-ಬವ್ಯ ಎಮ್.ಎಸ್.

kuri

ಕೆಲವೊಮ್ಮೆ ಅನಿಸುವುದು ಕಾಯುವ ಹೊತ್ತು ನಮಗೆ ನಮ್ಮೊಂದಿಗಿರಲು ದೊರೆಯುವ ಅವಕಾಶವೆಂದು; ಆ ಅವಕಾಶ ಅನುಬವಕ್ಕೂ ಕಾರಣವಾಗಬಹುದು. ಅಂದೊಮ್ಮೆ, ರಸ್ತೆಯಂಚಲ್ಲಿ ಕೂತು, ನನ್ನ ಹೊತ್ತೊಯ್ಯುವ ಗಾಡಿಗಾಗಿ ಕಾಯುತ್ತಿದ್ದೆ. ಕಾಯುವುದು ಕಾದ ಕಬ್ಬಿಣದ ಮೇಲೆ ಕೂತಂತೆ ಅನಿಸುವ ನನ್ನಂತವಳಿಗೆ ಅಂದೇಕೋ ಹಾಗನಿಸಲಿಲ್ಲ. ಕಾಯುವುದು ಕುಶಿ ಎನಿಸುತ್ತಿತ್ತು. ಮುದ ನೀಡುತ್ತಿತ್ತು. ಕಾರಣವಿಶ್ಟೇ, ನಾ ಕೂತ ರಸ್ತೆಯಂಚಲ್ಲಿದ್ದ, ಹೂ ಮಾರುವವಳ ಮುದ್ದು ಕುರಿಮರಿಯ ಕರಾಮತ್ತು. ಅದರೊಡತಿಗೋ ಅದರೊಂದಿಗಿನ ಮಾತು ಕತೆಯೇ ಜೀವನವೇನೋ ಎನಿಸುವಶ್ಟು, ಅದರ ಮೇಲೆ ಮುದ್ದು, ಮತ್ತೊಂದಿಶ್ಟು ಹುಸಿ ಮುನಿಸು. ಒಮ್ಮೆ ಪ್ರೀತಿಯಿಂದ ತುತ್ತಿಡುವಳು, ಇನ್ನೊಮ್ಮೆ “ಇನ್ನೇನು ತಿನ್ಬೇಡ, ಬರೀ ತಿಂಡಿ ತಿಂದ್ಕೊಂಡೆ ಬದ್ಕು” ಎಂದು ಬಯ್ಯುವಳು. ಒಟ್ಟಿನೊಳಗೆ ಆ ನೋಟ ಕಣ್ಣಿಗೆ ಹಬ್ಬ ಎನಿಸುವಶ್ಟು ಕುಶಿ ತಂದಿತ್ತು. ಅವಳೆದೆಯ ಪ್ರೀತಿಯನ್ನು ನನ್ನ ಮನ ಒಳಗೊಳಗೆ ಅಬಿಮಾನದಿಂದ ನೋಡಿ ನಲಿದಿತ್ತು. ಸುತ್ತಲಿನ ಪರಿವಿಲ್ಲದಂತೆ, ಅವಳಾಡುತ್ತಿದ್ದ ಮಾತಿಗೆ ನಕ್ಕು ಸುಮ್ಮನಿರುತ್ತಿತ್ತು.

ಅಡಿಕೆ ಮರದಾಕ್ರುತಿಯ ದೇಹವೊಂದು ಬೀಡಿಯ ಹೊಗೆಯನ್ನು, ಬೀದಿಗೆ ಬಿಡುತ್ತಾ, ಗುಡಿಸಲೊಳಗಿಂದ  ಪ್ರತ್ಯಕ್ಶವಾಯಿತು. ಆಕೆಯ ಗಂಡನಿರಬಹುದೋ ಎಂದು ಊಹಿಸಿ, ಕುಳಿತೆ. ಕುರಿಮರಿ ಇದ್ಯಾವ ಪರಿವಿರದೆ “ಪರದೆಯಿರದ” ತನ್ನ ದೇಹವನ್ನು ಆಚೀಚೆ ಒಯ್ಯುತ್ತ, ಕಟ್ಟಿದ್ದ ಗೂಟಕ್ಕೆ ತನ್ನ “ಪರಿದಿ”ಯೊಳಗೆ ಪ್ರದಕ್ಶಿಣೆ ಹಾಕುತ್ತಿತ್ತು. ಹೊರ ಬಂದ ಯಜಮಾನ, ಬೀಡಿಯ ತುಂಡನ್ನು ಎಸೆಯಲು ಮನಸ್ಸಿಲ್ಲದೆ, ತನ್ನ ಕಿವಿಯ ಸಂದಿಯಲ್ಲಿ ತುರುಕಿಸಿಟ್ಟ. ಒಂದು ಕಯ್ಯಲ್ಲಿ ಮಾಸಿದ ಲುಂಗಿಯ ತುದಿ, ಇನ್ನೊಂದು ಕಯ್ಯಲ್ಲಿ ಕುರಿಮರಿಯ ಕುಣಿಕೆಯನ್ನು ಹಿಡಿದು, ನಡೆಯುತ್ತ ಹೊರಟ. ಆ ದ್ರುಶ್ಯ ಕಂಡು, ಸಿರಿವಂತರ “ವಾಕಿಂಗ್” ಎಂಬ ಪದ ನೆನಪಿಗೆ ಬಂದು, ಒಳಗೊಳಗೆ ನಕ್ಕೆ. ಬಡವರ ಪ್ರೀತಿ ನನ್ನ ಮನ ತಣಿಸಿತ್ತು. ಗವ್ರವ ಬಾವ ಇನ್ನಶ್ಟು ಬಲಿಯಿತು. ಆತ್ಮೀಯತೆಯಿಂದ ಮನೆ ಒಡತಿಯನ್ನು ಮಾತಾಡಿಸುವ ಮನಸ್ಸಾಗಿ, ಏನೊಂದೂ ತೋಚದೆ ಮೊದಲ ಮಾತಿಗೆ ಪ್ರಶ್ನೆಯನ್ನೆಸೆಯುತ್ತ ಕೇಳಿದೆ. “ಅಮ್ಮ ಒಂದೇ ಒಂದು ಕುರಿಮರಿಯನ್ನೇಕೆ ಸಾಕಿದ್ದೀರಿ?” ದ್ವನಿಯ ತುಂಬಾ ಆತ್ಮೀಯತೆಯ ನಗುವಿತ್ತು.

ಉತ್ತರ ನನ್ನ ಕಲ್ಪನಾ ಲೋಕಕ್ಕೆ ಬೆಂಕಿ ಹಚ್ಚಿತ್ತು. “ಬರೋ ಜಾತ್ರೆಗೆ ಬಲಿ ಕೊಡೋಕೆ” ಎಂದಳಾಕೆ. ಮುಕದಲ್ಲಿನಿತು ನಗುವಿಲ್ಲದೆ, ಮತ್ತೊಮ್ಮೆ ಕಟುಕನ ಪ್ರೀತಿ ಕ್ರವ್ರ‍್ಯದಲ್ಲಿ ಕೊನೆಯಾದುದನ್ನು ಕಂಡು ಮನ ಬಾವವಿಲ್ಲದೆ ಬೆತ್ತಲಾಯಿತು. ಸುತ್ತೆಲ್ಲ ಕತ್ತಲಾಯಿತು…

(ಚಿತ್ರ: www.1stdibs.com)

2 ಅನಿಸಿಕೆಗಳು

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: