ರಸಾಯಣ
ಲೇ ಇವಳೇ ಚಡ್ಡೀವರೆಗೂ ಪೂರಾ ನೆಂದಿದೀನಿ ಕಣೆ, ಸ್ನಾನಕ್ಕೆ ಹೋಗ್ಲಾ ಅಂತ ಕಿರಿಚಿದ್ರು ನಮ್ಮ ಶ್ಯಾನಬೋಗ್ರು. ಅದ್ಯಾಕ್ರಿ ಅಶ್ಟು ಆತುರ ನಿಮಗೆ, ಸ್ವಲ್ಪ ಎಣ್ಣೆ ಮಯ್ಗೆ ಇಳಿಯೊವರೆಗೂ ಕಾಯೋಕೆ ಆಗಲ್ವಾ ಅಂತ ಒಳಗಿಂದಲೇ ಉತ್ತರಿಸಿದ್ರು ಅವರ ಮುದ್ದು ಮಡದಿ ಸಾವಿತ್ರಿ. ಹಿಂದಿನ ದಿನ ಸ್ವಲ್ಪ ಮಯ್ ಕಯ್ ನೋವಿದೆ ಅಂತ ಶ್ಯಾನುಬೋಗ್ರು ಹೇಳಿದ್ದಕ್ಕೆ ಬೆಳಿಗ್ಗೇನೇ ಎದ್ದು ಅವರ ಮಯ್ಗೆ ಎಣ್ಣೆ ಹಚ್ಚಿ ಅಂಗಳದಲ್ಲಿ ಬಿಸಿಲು ಕಾಯಿಸೋಕೆ ಕೂರ್‍ಸಿದ್ರು ಸಾವಿತ್ರಮ್ಮ. ಇವರಿಗೆ ವಯಸ್ಸು ಕಮ್ಮಿ ಏನು ಆಗಿರ್‍ಲಿಲ್ಲ. ವಯಸ್ಸು 60 ದಾಟಿದ್ರೂನೂ ಗಟ್ಟಿ ಮುಟ್ಟಾಗಿ ಒಡ್ಯಾಡ್ಕೊಂಡು ಇದ್ರು ನಮ್ಮ ಶ್ಯಾನುಬೋಗ್ರು. ಸಾವಿತ್ರಮ್ಮ ಇವರ ಎರಡನೇ ಹೆಂಡತಿ. 16 ವರ್‍ಶಕ್ಕೇನೆ ಮೊದಲ ಮದುವೆ ಆದ ಶ್ಯಾನುಬೋಗ್ರಿಗೆ ಮೊದಲನೇ ಹೆಂಡತಿಯಿಂದ 4 ಜನ ಮಕ್ಳು, 5 ನೇ ಮಗು ಹೆರಿಗೆ ಸಮಯದಲ್ಲಿ ಹೆಂಡತಿ ಮತ್ತು ಮಗು ಇಬ್ರೂ ಕಾಲವಾದ ಮೇಲೆ ಎರಡನೇ ಮದುವೆ ಆದ್ರು ನಮ್ಮ ಶ್ಯಾನುಬೋಗ್ರು. ಸಾವಿತ್ರಮ್ಮನಿಗೂ 4 ಮಕ್ಳು. ಎಲ್ಲರೂ ಸಿಟೀನಲ್ಲಿ ಸೆಟ್ಲ್ ಆಗಿದಾರೆ. ಗಂಡ ಹೆಂಡತಿ ಮಾತ್ರ ಇಲ್ಲಿ ಇರೋದು. ದೇವರು ಕೊಟ್ಟಿರುವ ಆಸ್ತಿ ಚೆನ್ನಾಗಿರೋದ್ರಿಂದ ಆಳುಕಾಳುಗಳಿಗೆ ಏನು ಕಮ್ಮಿ ಇಲ್ಲ. ಆದರೂ ನಮ್ಮ ಶ್ಯಾನುಬೋಗ್ರು ಕೆಲವು ವಿಶಯಗಳಲ್ಲಿ ಸ್ವಲ್ಪ ಕಂಜೂಸ. ಸುಮ್ನೆ ದುಡ್ಡು ದಂಡ ಅಂತ ಗೊಣಗ್ತಾನೇ ಇರ್‍ತಾರೆ.
ಲೇ ನೋಡೆ ಊರ ಹೆಣ್ಣುಮಕ್ಳು ಎಲ್ಲ ನನ್ನ ಎಣ್ಣೆ ಹಚ್ಚಿರೋ ದೇಹ ನೋಡೋಕೆ ಮನೆ ಹತ್ರಾನೇ ಬಂದುಬಿಟ್ಟಿದಾರೆ ಅಂತ ಶ್ಯಾನುಬೋಗ್ರು ಹೇಳ್ದಾಗ ಒಳಗಡೆ ಯಾವುದೋ ಕೆಲಸದಲ್ಲಿ ಮಯ್ ಮರೆತಿದ್ದ ಸಾವಿತ್ರಮ್ಮ ಹಾಗೆ ಕಿಟಕಿಯಿಂದ ಆಚೆ ಇಣುಕಿದರು. ಎಲ್ಲ ಮನೆಯ ಹೆಣ್ಣಾಳುಗಳು ಕೆಲಸಕ್ಕೆ ಬಂದಿದ್ರು. ಹೊವ್ದು ಅವರು ನಿಮ್ಮ ಈ 60 ವರ್‍ಶದ ಮುಪ್ಪಿನ ದೇಹನ ನೋಡೋಕೆ ತಮ್ಮ ಗಂಡಂದಿರನ್ನ ಬಿಟ್ಟು ಇಲ್ಲಿಗೆ ಬಂದಿದಾರೆ , ಸುಮ್ನೆ ಬಿಸಿಲು ಕಾಯಿಸಿಕೊಳ್ಳಿ ಅಂತ ಗೊಣಗಿ ಬಂದವರಿಗೆ ಕಾಪೀ ಎಲೆ ಅಡಿಕೆ ರೆಡೀ ಮಾಡೋಕೆ ಶುರು ಮಾಡಿದ್ರು ಸಾವಿತ್ರಮ್ಮ. ಶ್ಯಾನುಬೋಗ್ರಿಗೆ ಹೆಂಗಸರ ಕಾಲು ಎಳಿಯೋಕೆ ತುಂಬಾ ಕುಶಿ. ಒಮ್ಮೊಮ್ಮೆ ಹೆಣ್ಣಾಳುಗಳಿಗೆ ಏನಮ್ಮ ಮುಕ ಒಂತರಾ ಇದೆ ರಾತ್ರಿ ನಿದ್ದೆ ಮಾಡಿಲ್ವಾ ಗಂಡ ಹೆಂಡತಿ ಅಂತ ಕೀಟಲೆಗೆ ಕೇಳಿ ಅವರ ಕೆಂಪಾದ ಮುಕ ನೋಡಿ ತಮ್ಮ ಮೀಸೆ ಆಡಿಯಲ್ಲೇ ನಗ್ತಾ ಇದ್ರು . ಶ್ಯಾನುಬೋಗ್ರು ರಸಿಕರು ಈಗ್ಲೂ ಸಾವಿತ್ರಮ್ಮಂಗೆ ಕಾಟ ಕೊಡ್ತಾರೆ ಅನ್ಸುತ್ತೆ ಅಂತ ಹೆಣ್ಣಾಳುಗಳು ಮಾತಾಡಿಕೊಳ್ಳೋರು.
ಲೇ ಶಂಕ್ರ ಎಲ್ಲೇ ಎಂದಾಗ ಇಲ್ಲೆ ಎಲ್ಲೋ ಹಸುಗೆ ಹುಲ್ಲು ತರೋಕೆ ಹೋಗಿದಾನೆ ಅಂದ್ರು ಸಾವಿತ್ರಮ್ಮ. ಶಂಕ್ರ ಇವರ ಪಟ್ಟ ಶಿಶ್ಯ . ಬೆಪ್ಪ ಶಂಕ್ರ ಅಂತಾನೆ ಹೆಸರುವಾಸಿ ಆಗಿರೋ ಇವನನ್ನ ಮಗನಿಗಿಂತಲೂ ಚೆನ್ನಾಗಿ ನೋಡ್ಕೊಂಡಿದಾರೆ ಶ್ಯಾನುಬೋಗ್ರು . ಒಮ್ಮೆ ಅಬ್ಯಂಜನ ಮಾಡ್ಬೇಕು ಒಲೆಗೆ ಬೆಂಕಿ ಹಾಕು ಅಂದಾಗ ಕಾಲಿ ಹಂಡೆಗೆ ಬೆಂಕಿ ಹಾಕಿ, ಅದು ತಳ ಸುಟ್ಟು ಮನೆ ಎಲ್ಲಾ ವಾಸನೆ ಆದ ಮೇಲೆ ಶ್ಯಾನುಬೋಗ್ರ ಕಯ್ಯಲ್ಲಿ ಚೆನ್ನಾಗಿ ಬಯ್ಸಿಕೊಂಡಿದ್ದ. ಹೀಗೆ ದಿನ ಏನಾದ್ರೂ ಒಂದು ಬೆಪ್ಪು ಕೆಲಸ ಮಾಡ್ತ ಇದ್ದ ಇವನು ಬೆಪ್ಪ ಶಂಕ್ರ ಅಂತಾನೆ ಹೆಸರುವಾಸಿ. ಒಮ್ಮೆ ಹಸು ಹೀಟ್ ಗೆ ಬಂದಿದೆ ಹೋರಿ ಕರ್‍ಕೊಂಡ್ ಬಾ ಅಂತ ಕಳಿಸಿದ್ರೆ ಕೋಣನ ಕರ್‍ಕೊಂಡು ಬಂದಂತ ಬೂಪ. ಅದನ್ನ ನೋಡಿ ತಲೆ ಚೆಚ್ಚಿಕೊಂಡ ಶ್ಯಾನುಬೋಗ್ರು ನೀನೇನು ಹೊಸ ಪ್ರಾಣಿ ಸ್ರುಶ್ಟಿಸೋಕೆ ಹೊರ್‍ಟಿದಿಯಾ? ಎಲ್ಲಾ ಬೀಗಾನೂ ಒಂದೇ ಕೀ ನಲ್ಲಿ ತೆಗೆಯೋಕೆ ಆಗಲ್ಲ!! ಅದಕ್ಕೆ ಅಂತಾನೆ ಬೇರೆ ಕೀ ಇರುತ್ತೆ, ನಿನಗೆ ಇದನ್ನ ಅರ್‍ತ ಮಾಡಿಸೋ ಅಶ್ಟರಲ್ಲಿ ನನ್ನ ಜೀವನ ಮುಗಿದಿರುತ್ತೆ ಅಂತ ಗುಡುಗಿದ್ರು. ಆದರೂ ಅವ್ನನ್ನ ಕಂಡ್ರೆ ಏನೋ ಪ್ರೀತಿ ಶ್ಯಾನುಬೋಗ್ರಿಗೆ.
ಏನೇ ಅಂದ್ರು ನಮ್ಮ ಶ್ಯಾನಬೋಗ್ರು ಒಮ್ಮೆ ಮಾಡಿದ ಕೆಲಸದಿಂದ ಇಡೀ ಊರಿನಲ್ಲೇ ಪಂಚೆ ಶ್ಯಾನಬೋಗ್ರು ಅಂತ ಪೇಮಸ್ ಆಗೋದ್ರು. 5 ವರ್‍ಶದ ಹಳೇ ಕತೆ. ಶ್ಯಾನಬೋಗ್ರಿಗೆ ಸರಿ ಸುಮಾರು 55 ವರ್‍ಶ. ಅದೊಂದು ಬಾನುವಾರ, ಮಳೆ ಬೇರೆ ಚಿಕ್ಕದಾಗಿ ಸುರಿತ ಇತ್ತು. ನಮ್ಮ ಶ್ಯಾನಬೋಗ್ರಿಗೆ ನೀರ್ ದೋಸೆ ಜೊತೆ ಮಾವಿನ ಹಣ್ಣಿನ ರಸಾಯಣ ತಿನ್ಬೇಕು ಅನ್ನೋ ಆಸೇ. ಲೇ ಇವಳೇ ಇವತ್ತು ನೀರ್ ದೋಸೆ ರಸಾಯಣ ಮಾಡ್ಟ್ಯೇನೆ? ಮಾವಿನ ಹಣ್ಣು ತಗೊಂಡ್ ಬರ್‍ತೀನಿ ಅಂತ ಕೇಳ್ದಾಗ, ಸಾವಿತ್ರಮ್ಮ ವಯಸ್ಸು 50 ಆದ್ರೂ ನಿಮಗೆ ಇನ್ನೂ ಬಾಯಿ ಚಪಲ ಹೋಗಿಲ್ಲ, ಮಾವಿನ ಹಣ್ಣು ತಗೊಂಡು ಬನ್ನಿ ಮಾಡಿಕೊಡ್ತೀನಿ ಅಂತ ಹೇಳಿದ್ರು. ಪೇಟೆಗೆ ಹೋಗಿ ಬರೋಣ ಅಂದ್ರೆ ಮಳೆ ಬಂದು ಮರ ಬಿದ್ದಿರೋದ್ರಿಂದ ಇದ್ದ ಒಂದು ಬಸ್ ಕೂಡ ಇವತ್ತು ಬರೋದಿಲ್ಲ, ಬೇರೆ ಗಾಡಿ ಮಾಡ್ಕೊಂಡು ಹೋಗಿ ಮಾವಿನ ಹಣ್ಣು ತರೋಕೆ ಏನಿಲ್ಲ ಅಂದ್ರು 200 ರೂಪಾಯೀ ಕರ್‍ಚಾಗುತ್ತಲ್ಲ. ಮಾವಿನ ಹಣ್ಣು ಬೇರೆ ಕೆಜಿಗೆ 50 ರೂಪಾಯೀ ಹೇಳ್ತಾರೆ ಅಶ್ಟು ದುಡ್ಡು ಕರ್‍ಚು ಮಾಡಿ ರಸಾಯಣ ತಿನ್ಬೇಕಾ ಅನ್ನೋ ಜಿಪುಣತನದ ಆಲೋಚನೆಯೊಂದು ಶ್ಯಾನಬೋಗ್ರ ತಲೆಯಲ್ಲಿ ಸುಳಿದಾಡಿತ್ತು. ಲೇ ಇವಳೇ, ಇವತ್ತು ಪೇಟೆ ಮಾವಿನಹಣ್ಣು ಬೇಡ, ನಾನು ಶಂಕ್ರ ಇಲ್ಲೇ ಕಾಡಿಗೆ ಹೋಗಿ ಕಾಡು ಮಾವಿನ ಹಣ್ಣು ತಗೊಂಡು ಬರ್‍ತೀವಿ. ಕಾಡು ಮಾವಿನ ಹಣ್ಣಿನ ರುಚೀನೇ ಬೇರೆ ಬಿಡು ಏನ್ ಅಂತೀಯಾ ಅಂದಾಗ ನಿಮ್ಮ ಜಿಪುಣತನದ ಬುದ್ದಿ ನನಗೆ ಗೊತ್ತಿಲ್ವಾ, ಹೋಗಿ ಹೋಗಿ ಆದ್ರೆ ಹುಶಾರು, ಮಳೆ ಬೇರೆ ತುಂಬಾ ಜಾರುತ್ತೆ, ಜಿಗಣೆ ಕಾಟ ಬೇರೆ. ಲೇ ಶಂಕ್ರ ಹುಶಾರಾಗಿ ಕರ್‍ಕೊಂಡು ಹೋಗು ಅಂತ ಹೇಳಿ ಸುಮ್ನಾದ್ರು ಸಾವಿತ್ರಮ್ಮ. ಏನ್ ನಾನು ನೋಡ್ದೆ ಇರೋ ಕಾಡೆನೆ? 50 ವರ್‍ಶದಿಂದ ಓಡಾಡಿದೀನಿ ಗೊತ್ತಾ, ಲೇ ಶಂಕ್ರ ಬಾರೋ ಅಂತ ತಮ್ಮ ಶಿಶ್ಯನ್ನ ಕರ್‍ಕೊಂಡು ಹೊರಟೇ ಬಿಟ್ರು ಶ್ಯಾನಬೋಗ್ರು.
ಕಯ್ಯಲ್ಲಿ ಒಂದು ಕೋಲು ಹಿಡಿದು ಹುಶಾರಾಗಿ ಹೆಜ್ಜೆ ಹಾಕ್ತಿದ್ದ್ರು ಶ್ಯಾನಬೋಗ್ರು . ಕುರಿ ಹಿಂದೆ ಮರಿ ಹೋಗುವ ಹಾಗೆ ಅವರನ್ನೇ ನಿದಾನವಾಗಿ ಹಿಂಬಾಲಿಸುತ್ತಿದ್ದ ನಮ್ಮ ಬೆಪ್ಪ ಶಂಕರ. ಹಾಗೆ ನೆಡಿತಾ ನೆಡಿತಾ ತೋಟದ ಕೊನೆಗೆ ಬಂದು ತಲುಪಿದ್ರು ಶ್ಯಾನಬೋಗ್ರು. ತೋಟ ದಾಟಿ 2 ಕಿ ಮೀ ಕಾಡೊಳಗೆ ಹೋದರೆ ಮಾವಿನ ಮರ ಸಿಗುತ್ತೆ. ತೋಟದ ಕೊನೆಯಲ್ಲಿ ಬಗ್ಗಿ ನಿಂತು ಕೆಲಸ ಮಾಡ್ತಿದ್ದ ಹೆಣ್ಣಾಳುಗಳನ್ನ ನೋಡಿ ಕೀಟಲೆಯಿಂದ ಹುಶಾರು ಕಣ್ಣ್ರಮ್ಮಾ ಹಗಲೆಲ್ಲಾ ಬಗ್ಗಿ ಕೆಲಸ ಮಾಡಿ ಸೊಂಟ ನೋಯಿಸಿಕೊಂಡ್ರೆ ರಾತ್ರಿಗೆ ಕಶ್ಟ ಆಗುತ್ತೆ ಅಂದ್ರು ಶ್ಯಾನಬೋಗ್ರು. ಅಯ್ಯೋ ಶ್ಯಾನಬೋಗ್ರೇ ನಾವು ಹೇಗೋ ಸುದಾರಿಸಿಕೊಳ್ತೀವಿ ನೀವು ಹುಶಾರಾಗಿ ಹೋಗಿ , ಬಿದ್ದು ಸೊಂಟ ಮುರ್‍ಕೊಂಡ್ರೆ ಪಾಪ ಸಾವಿತ್ರಮ್ಮಂಗೆ ಕಶ್ಟ ಅಂದ್ಲು ಹೆಣ್ಣು ಮಗಳು ಒಬ್ಳು. ಎಂಟು ಮಕ್ಲಾದಾಗ ಮುರಿದೆ ಇರೋ ಸೊಂಟ ಈಗ ಮುರಿಯುತ್ತಾ ಎಂದು ನಗುತ್ತಾ ಹೇಳಿದ ಶ್ಯಾನುಬೋಗ್ರು ಬೇಲಿ ಕಡೆ ಹೆಜ್ಜೆ ಹಾಕಿದ್ರು. ಬೇಲಿ ದಾಟುವುದಕ್ಕೆ ಇದ್ದ ಚಿಕ್ಕ ಜಾಗದಲ್ಲಿ ಇದ್ದ ಮರದ ಮೇಲೆ ಕಾಲಿಟ್ಟು ಆಚೆ ಇನ್ನೊಂದು ಕಾಲಿಟ್ರು ಶ್ಯಾನಬೋಗ್ರು . ಹೆಣ್ಣು ಮಕ್ಕಳನ್ನ ಕಾಡಿಸೋ ಉತ್ಸಾಹದಲ್ಲಿದ್ದ ಶ್ಯಾನುಬೋಗ್ರಿಗೆ ಮುಳ್ಳಿಗೆ ಸಿಕ್ಕಿ ಹಾಕಿಕೊಂಡ ಅವರ ಪಂಚೆಯ ಅರಿವಿರಲಿಲ್ಲ. ತಮ್ಮ ಇನ್ನೊಂದು ಕಾಲನ್ನ ಆಚೆ ಇಟ್ಟು ಜಿಗಿದಾಗಲೇ ಗೊತ್ತಾಗಿದ್ದು ಅವರು ಮಾತ್ರ ಬೇಲಿ ಆಚೆ ಇದ್ರು ಅವರ ಪಂಚೆ ಬೇಲಿಗೆ ಸಿಕ್ಕಿಕೊಂಡು ನೇತಾಡುತ್ತಾ ಇತ್ತು. ಬರೇ ಲಂಗೋಟಿಯಲ್ಲಿ ನಿಂತಿದ್ದ ಅವರನ್ನ ನೋಡಿ ಹೆಣ್ಣಾಳುಗಳೆಲ್ಲಾ ನಗೋಕೆ ಶುರು ಮಾಡಿದ್ರು. ಅಯ್ಯೋ ಶ್ಯಾನಬೋಗ್ರೇ ಇದೇನ್ ಮಾಡ್ಕೊಂಡ್ರಿ ಅಂತ ಕೇಳಿದ್ದ ಹುಡುಗಿಗೆ ಏನು ಹೇಳೋದು ಅಂತ ಗೊತ್ತಾಗ್ದೇ ಇದ್ರೂನೂ, ತಮ್ಮ ಹಾಸ್ಯ ಪ್ರಜ್ನೆ ಮರಿದೆ ಯಾಕಮ್ಮ ಎಲ್ಲಾ ಹಾಗೆ ನೋಡಿ ಕಿಸಿತಾ ಇದೀರಾ? ನಿಮ್ಮ ಗಂಡಂಗೆ ಇಲ್ದೆ ಇರೋದೇನು ನನ್ನ ಹತ್ರ ಇಲ್ಲಾ ಸುಮ್ನೆ ಕೆಲ್ಸ ನೋಡಿ, ಲೇ ಶಂಕರ ಆ ಪಂಚೆ ತಗೊಂಬಾ ಹುಶಾರು ಹರಿದುಬಿಟ್ಟಾತು ಅಂದ್ರು. ನಮ್ಮ ಬೆಪ್ಪ ಶಂಕ್ರ ಅದನ್ನ ಮುಳ್ಳಿಂದ ಬಿಡಿಸ್ದೇ ಹಾಗೆ ಎಳೆದಾಗ ಅರ್‍ದ ಹರಿದು ಕಯ್ಗೆ ಬಂದಿತ್ತು ಪಂಚೆ.
ಆ ಹರಿದ ಪಂಚೆನ ಸೂತ್ಕೊಂಡು , ಏನೂ ಆಗಿಲ್ಡೆ ಇರೋ ತರ ಕಾಡಿನ ಕಡೆ ಹೆಜ್ಜೆ ಹಾಕಿದ್ರು ಶ್ಯಾನಬೋಗ್ರು. ಹಾಗೂ ಹೀಗೂ ಮಾವಿನ ಮರದ ಹತ್ರ ಹೋಗಿ ಒಂದು ಬ್ಯಾಗ್ ತುಂಬಾ ಮಾವಿನ ಹಣ್ಣು ತುಂಬಿಸಿಕೊಂಡು , ವಾಪಸ್ ಮನೆ ಕಡೆ ಹೆಜ್ಜೆ ಹಾಕೋಕೆ ಶುರು ಮಾಡಿದ್ರು ಶ್ಯಾನಬೋಗ್ರು. ಮಳೆ ಬೇರೆ ಜೋರಾಗಿ ಕೊಡೆ ಇದ್ರೂನೂ ಮಯ್ ಎಲ್ಲಾ ಒದ್ದೆ ಆಗ್ತಿತ್ತು. ಕಯ್ಯಲ್ಲಿ ಹಿಡಿದ ಕೋಲಿನ ಸಹಾಯದಿಂದ ಬೆಟ್ಟದ ತರ ಇದ್ದ ಜಾಗದಿಂದ ಹುಶಾರಾಗಿ ಇಳಿತ ಇದ್ರು ಶ್ಯಾನಬೋಗ್ರು. ಹೀಗೆ ಯಾವುದೋ ಯೋಚನೆಯಲ್ಲಿ ಇಟ್ಟ ಹೆಜ್ಜೆ ಬಸ್ಸ್ ಎಂದು ಜಾರಿದಾಗ ಎದೆ ದಸ್ಸಕ್ ಅಂದಿತ್ತು ಶ್ಯಾನಬೋಗ್ರಿಗೆ. ಒಂದಿಂಚು ಜಾರಿದ ಕಾಲು, ನಿಲ್ಲೋಕೆ ಆಗ್ದೇ ಹಾಗೆ ಜಾರಿ ಬಿದ್ರು ಶ್ಯಾನಬೋಗ್ರು. ಬಿದ್ದ ರಬಸಕ್ಕೆ ಪಂಚೆ ಕಲ್ಲಿಗೆ ಸಿಕ್ಕಿಕೊಂಡು ಮುಕ್ಕಾಲು ಹರಿದುಹೋಗಿ ಬರೆ ಒಂದು ಟವಲ್ ನಶ್ಟು ಮಾತ್ರ ಉಳ್ಡಿತ್ತು. ಸೊಂಟ ಬೇರೆ ಸ್ವಲ್ಪ ನೋಯ್ತಾ ಇತ್ತು. ಇವತ್ತು ಬೆಳಿಗ್ಗೇನೇ ನಿನ್ನ ಮುಕಾ ನೋಡ್ದೆ ಅನ್ಸುತ್ತೆ. ಎಲ್ಲ ಎಡವಟ್ಟಾಗ್ತಾ ಇದೆ ಎಂದು ಶಂಕ್ರಂಗೆ ಬಯ್ದು, ಪಂಚೆನ ಟವಲ್ ತರ ಉಟ್ಕೊಂಡು, ಆಗ್ತಾ ಇದ್ದ ನೋವನ್ನ ಸಹಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕಿದ್ರು. ದಾರಿಯಲ್ಲಿ ಸಿಗುವವರೆಲ್ಲಾ ಮುಸಿ ಮುಸಿ ನಗುತ್ತಾ ಏನ್ ಶ್ಯಾನಬೋಗ್ರೇ? ಮಾವಿನ ಹಣ್ಣಾ ? ರಸಾಯಣ ಜೋರಾ? ಏನಾಯ್ತು ಪಂಚೆಗೆ ಅಂತಾ ಕೇಳ್ತಾ ಇದ್ರೆ ಶ್ಯಾನಬೋಗ್ರಿಗೆ ಏನು ಹೇಳ್ಬೇಕು ಅಂತಾ ಗೊತ್ತಾಗದೆ ಏನು ಮಾಡೋದಪ್ಪಾ ವಯಸ್ಸಾಯ್ತು ಅಂತ ಹೇಳಿ ಮನೆ ಕಡೆ ಹೆಜ್ಜೆ ಹಾಕಿದ್ರು.
ವಯ್ದ್ಯರಿಗೆ 300 ರೂಪಾಯೀ, ಪಂಚೆಗೆ 200 ರೂಪಾಯೀ ಮತ್ತು ಹೋದ ಮರ್‍ಯಾದೆಗೆ ದುಡ್ಡು ಎಣಿಸೋಕೆ ಆಗಲ್ಲ ಅಂತ ಮನಸ್ಸಿನಲ್ಲೇ ಕೊರಗುತ್ತ ರಸಾಯಣ ತಿಂದ ಶ್ಯಾನಬೋಗ್ರು ಅಂದಿನಿಂದ ಪಂಚೆ ಶ್ಯಾನಬೋಗ್ರು ಅಂತ ಪೇಮಸ್ ಅಗೋದ್ರು
ಇತ್ತೀಚಿನ ಅನಿಸಿಕೆಗಳು