ಮುದ್ದೆಗಂಟು

– ಸಿ. ಪಿ. ನಾಗರಾಜ.

mudde_Gantu

ಸುಮಾರು   ನಲವತ್ತು   ವರುಶಗಳ   ಹಿಂದೆ   ನಡೆದ   ಪ್ರಸಂಗವಿದು. ಮಳೆ-ಬೆಳೆ   ಹೋಗಿ   ಬರಗಾಲ   ಬಂದಿತ್ತು. ಮಳೆರಾಯನನ್ನೇ   ನಂಬಿದ್ದ   ಚನ್ನಪಟ್ಟಣದ   ಆಸುಪಾಸಿನ   ಹಳ್ಳಿಗಳ   ಬವಣೆಯಂತೂ   ಹೇಳತೀರದಾಗಿತ್ತು. ಬೆಳೆಯಿಲ್ಲದ  ಬೇಸಾಯಗಾರರ    ಮತ್ತು   ಮೇವಿಲ್ಲದ   ದನಕರುಗಳ   ಗೋಳು   ಮುಗಿಲನ್ನು   ಮುಟ್ಟುವಂತಿತ್ತು. ಕೂಲಿ-ನಾಲಿ   ಮಾಡಿ   ಹೊಟ್ಟೆಹೊರೆದುಕೊಳ್ಳುವ   ಬಡವರ  ಒಡಲಿನ  ಸಂಕಟ, ನೊಂದವರಿಗೆ  ಮಾತ್ರ  ತಿಳಿಯುತ್ತಿತ್ತು.

ಇಂತಹ   ದಿನಗಳಲ್ಲಿ  ಸರ್‍ಕಾರವು  ಸಣ್ಣ ಪುಟ್ಟ   ಕಾಮಗಾರಿ   ಕೆಲಸವನ್ನು   ಮಂಜೂರು   ಮಾಡಿ, ದುಡಿಯುವ   ಬಡವರ   ಪಾಲಿಗೆ  ಅಂಬಲಿ   ದೊರೆಯುವಂತೆ   ಮಾಡಿತ್ತು.  ಕಾಮಗಾರಿ   ನಡೆಯುತ್ತಿದ್ದ   ಒಂದು  ಜಾಗದಲ್ಲಿ   ಒಬ್ಬ  ಮೇಸ್ತ್ರಿ  ಇದ್ದನು. ಕೆರೆಯ   ಹೂಳನ್ನೆತ್ತುವ   ಕೆಲಸಕ್ಕೆ   ಬರುವ  ಪ್ರತಿಯೊಬ್ಬ   ಕೂಲಿಯು   ನಡು ಮದ್ದೀನದಲ್ಲಿ   ಉಣ್ಣುವುದಕ್ಕೆ   ಬುತ್ತಿಯನ್ನು  ಕಡ್ಡಾಯವಾಗಿ   ತರಬೇಕಿತ್ತು. ಕೂಲಿಯಾಳುಗಳ  ಬುತ್ತಿಯೆಂದರೆ.. ಇನ್ನೇನು ‘ರಾಗಿಮುದ್ದೆ‘.

ಮುದ್ದೆಗಂಟನ್ನು  ಜತೆಯಲ್ಲಿ   ತಂದರೆ   ಮಾತ್ರ, ಆತನಲ್ಲಿ   ಕೆಲಸ   ದೊರೆಯುತ್ತಿತ್ತು.  ತರಲಿಲ್ಲವೆಂದರೆ   ಯಾವ   ಮುಲಾಜನ್ನೂ   ತೋರಿಸದೆ, ಹಿಂದಕ್ಕೆ  ಅಟ್ಟುತ್ತಿದ್ದ.  ಬೆಳಗಿನ  ಎಂಟು  ಗಂಟೆಯಿಂದ   ಸಂಜೆ  ಅಯ್ದು   ಗಂಟೆಯ   ತನಕ   ದುಡಿಯುವ   ಆಳುಗಳು   ಹಸಿದುಕೊಂಡು    ಇರಬಾರದೆಂಬ   ಕರುಣೆಯೋ   ಇಲ್ಲವೇ   ಹೊಟ್ಟೆಗೇನೂ   ಇಲ್ಲದಿದ್ದರೆ, ನಡು ಹಗಲಿನ  ನಂತರದ    ಕೆಲಸವನ್ನು  ಸರಿಯಾಗಿ  ಮಾಡಲಾರರೆಂಬ   ಉದ್ದೇಶದಿಂದಲೋ.. ಅಂತು   ಈ  ಬಗೆಯ   ತನ್ನದೇ    ಆದ   ಕಾನೂನನ್ನು   ಬಹಳ   ಕಟ್ಟುನಿಟ್ಟಾಗಿ   ಮೇಸ್ತ್ರಿಯು   ಜಾರಿಗೆ  ತಂದಿದ್ದ.

ಇವನ   ಬಳಿ   ಕೆಲಸಕ್ಕೆ   ಬರುತ್ತಿದ್ದ   ನೂರಾರು   ಹೆಣ್ಣಾಳುಗಳಲ್ಲಿ    ಹೊಂಬಾಳೆಯು   ಒಬ್ಬಳು.  ಸುಮಾರು  ಮೂವತ್ತರ  ಹರೆಯದ   ಈಕೆಯು  ಯಾರೊಬ್ಬರ   ಜತೆಯಲ್ಲೂ   ಬೆರೆಯುತ್ತಿರಲಿಲ್ಲ   ಮತ್ತು  ಹೆಚ್ಚು   ಮಾತನಾಡುತ್ತಿರಲಿಲ್ಲ. ಇತರ   ಕೂಲಿಯಾಳುಗಳಂತೆ   ತನ್ನ   ಕಯ್ಯಲ್ಲಿರುವ   ಮುದ್ದೆಗಂಟನ್ನು  ಮೇಸ್ತ್ರಿಗೆ   ತೋರಿಸಿ,  ಬೇಲಿಯ   ಬುಡದಲ್ಲಿ   ಗಂಟನ್ನಿಟ್ಟು   ಕೆಲಸದಲ್ಲಿ  ತೊಡಗುತ್ತಿದ್ದಳು. ಉಣ್ಣುವುದಕ್ಕೆ   ಬಿಡುವು   ಕೊಟ್ಟಾಗ, ತನ್ನ  ಮುದ್ದೆಗಂಟನ್ನು   ಎತ್ತಿಕೊಂಡು,  ಎಲ್ಲರಿಂದ   ದೂರ  ಹೋಗಿ,  ಬೇಲಿಯೊಂದರ  ಮರೆಯಲ್ಲಿ   ಕುಳಿತು  ಉಂಡು  ಬಂದು, ಮಡಕೆಗಳಲ್ಲಿ    ತುಂಬಿಟ್ಟಿದ್ದ   ನೀರನ್ನು   ಕುಡಿದು,  ಮತ್ತೆ   ಸಂಜೆಯವರೆಗೂ  ದುಡಿಯುತ್ತಿದ್ದಳು.  ಹೊಂಬಾಳೆಯನ್ನು   ಮೊದಮೊದಲು   ಯಾರೂ   ಗಮನಿಸುತ್ತಿರಲಿಲ್ಲ.  ಹತ್ತಿಪ್ಪತ್ತು   ದಿನಗಳ   ನಂತರ    ಕೆಲವು   ಹೆಂಗಸರು –

“ಇದ್ಯಾಕೆ  ಇವಳೊಬ್ಬಳೇ   ಹಿಂಗೆ   ಬೇಲಿ   ಮರೆಗೆ   ಹೊಯ್ತಳಲ್ಲ!  ಅದೇನ್   ತಿಂದಳೊ   ಕಾಣೆ!   ನಮ್  ಜತೇಲಿ   ಕುಂತ್ಕೊಂಡು   ಉಂಡ್ರೆ ಇವಳ್ಗೆ   ಹೊಟ್ಟೆನೋವು   ಬಂದದೆ?“ ಎಂದು   ತಮ್ಮತಮ್ಮಲ್ಲಿಯೇ   ಆಡಿಕೊಳ್ಳತೊಡಗಿದರು.  ಇವರಲ್ಲಿ   ಒಬ್ಬಳು   ಕುತೂಹಲವನ್ನು   ಹತ್ತಿಕ್ಕಲಾರದೆ,  ಒಂದು   ದಿನ   ಉಣ್ಣುವ   ಹೊತ್ತಿನಲ್ಲಿ   ಹೊಂಬಾಳೆಗೆ   ಕಾಣದಂತೆ, ಬೇಲಿಯ   ಮರೆಯಲ್ಲಿ   ಅಡಗಿಕೊಂಡು   ಕುಳಿತಳು.

ಹೊಂಬಾಳೆ   ಬಂದವಳೇ, ಬೇಲಿಯ   ಬುಡದಲ್ಲಿ   ಕುಳಿತುಕೊಂಡು ಅತ್ತಗೆ.. ಇತ್ತಗೆ..    ನಾಲ್ಕಾರು  ಸಾರಿ  ತಿರುತಿರುಗಿ   ನೋಡಿದಳು. ಅನಂತರ   ಗಂಟನ್ನು   ಬಿಚ್ಚಿ,  ಮುದ್ದೆಯನ್ನು  ಸಣ್ಣಸಣ್ಣದಾಗಿ   ಮುರಿಮುರಿದು    ಆ  ಕಡೆ.. ಈ   ಕಡೆ   ಎಸೆದಳು. ಕೊಂಚ  ಹೊತ್ತು  ಸುಮ್ಮನೆ   ಕುಳಿತಿದ್ದಳು.  ಆಮೇಲೆ   ಗಂಟು  ಬಿಚ್ಚಿದ   ಬಟ್ಟೆಯನ್ನು   ಹಿಡಿದುಕೊಂಡು, ಕುಡಿಯುವ   ನೀರಿನ   ಮಡಕೆಯ   ಬಳಿಗೆ   ಬಂದು,  ಹೊಟ್ಟೆ   ತುಂಬ   ನೀರನ್ನು   ಕುಡಿದಳು.  ಇದುವರೆಗೆ   ಇದೆಲ್ಲವನ್ನೂ   ಕದ್ದು   ನೋಡುತ್ತಿದ್ದವಳು   ಎದ್ದು   ಹೋಗಿ,  ಹೊಂಬಾಳೆಯು   ಎಸೆದಿದ್ದ   ಉಂಡೆಗಳನ್ನು   ನೋಡಿದರೆ.. ಅವು   ಹಿಟ್ಟಿನ  ಉಂಡೆಗಳಲ್ಲ.. ಮಣ್ಣಿನ   ಉಂಡೆಗಳು!  ಸೀದಾ   ಬಂದವಳೆ, ಮೇಸ್ತ್ರಿಯನ್ನು    ಕರೆದುಕೊಂಡು   ಹೋಗಿ, ಅವನ್ನು  ತೋರಿಸಿದಳು.  ಅಲ್ಲಿ  ಬಿದ್ದಿದ್ದ  ನಾಲ್ಕಾರು   ಮಣ್ಣಿನ  ಉಂಡೆಗಳನ್ನು   ಎತ್ತಿಕೊಂಡ   ಮೇಸ್ತ್ರಿಯು   ನೇರವಾಗಿ   ಹೊಂಬಾಳೆಯ   ಹತ್ತಿರಕ್ಕೆ   ಬಂದು, ಅವುಗಳನ್ನು   ಅವಳ   ಮುಸುಡಿಯತ್ತ   ಹಿಡಿದು-

“ಇವೇನಮ್ಮಿ.. ದಿವಸ   ನೀನ್   ತಿಂತಾಯಿದ್ದುದ್ದು.. ಈ   ಮುದ್ದೇನಾ! ವಾರಕ್ಕೆ   ಒಂದು  ದಪ   ಕೊಡು   ಕೂಲಿ  ದುಡ್ಡ   ಏನ್   ಮಾಡೀಯಮ್ಮಿ?”  ಎಂದು   ಅಬ್ಬರಿಸಿದ. ತನ್ನ  ಗುಟ್ಟು  ರಟ್ಟಾಗಿ  ಉಂಟಾದ   ಇಕ್ಕಟ್ಟಿಗಿಂತಲೂ,  ಕೂಲಿಯು   ಎಲ್ಲಿ   ಕಯ್  ತಪ್ಪಿ   ಹೋಗುವುದೋ   ಎಂಬ  ಹೆದರಿಕೆಯಿಂದ    ಕಂಗಾಲಾದ   ಹೊಂಬಾಳೆಯು-

“ಅಪ್ಪೋ.. ನೀನು  ತೆಪ್ಪು   ತಿಳಿಬ್ಯಾಡ   ಕನಪ್ಪ.  ನನ್  ಗಂಡ  ಕಾಯ್ಲೆ   ಮನ್ಸ.  ಅವನ  ಕಯ್ಯಲ್ಲಿ  ದುಡ್ಕೊಂಡು   ತಿನ್ನೋಕೆ   ಆಗೂದಿಲ್ಲ. ಇನ್ನೇನು  ಸಾಯುವಂಗೆ  ಆಗ್ಬುಟ್ಟವ್ನೆ.  ನಮಗೆ  ಎರಡು  ಚಿಕ್ಕ  ಹಯ್ಕಳು  ಅವೆ  ಕನಪ್ಪ. ನೀನ್  ವಾರಕ್ಕೆ  ಒಂದ್ಸತಿ   ಕೊಟ್ಟ  ದುಡ್ಡಲಿ  ರಾಗಿ  ತಂದ್ಕೊಂಡು, ಇಳ್ಳೊತ್ತನಲ್ಲಿ   ಒಂದು  ದಪ  ಒಲೆ  ಹತ್ತಿಸಿ,  ಮುದ್ದೆ   ಮಾಡ್ಕೊಂಡು  ಮನೆಜನವೆಲ್ಲಾ   ಉಣ್ತೀವಿ   ಕನಪ್ಪ. ಉಳಿದ  ತಂಗಳ  ಹೊತಾರೆ  ಉಣ್ಕೊಂಡು,  ಮಿಕ್ಕೊಕ್ಕುದ್ದ   ನನ್  ಗಂಡ  ಮಕ್ಕಳಿಗೆ  ಬುಟ್  ಬತ್ತೀನಿ   ಕನಪ್ಪ. ಅದನ್ನ   ನಾನು  ತಂದ್ಬುಟ್ರೆ ಅವರ್‍ಗೆ   ಏನೂ  ಇಲ್ದೆ  ಹೊಯ್ತದೆ. ನೀನು  ಇನ್ನೆಲ್ಲಿ   ಕೂಲಿಗೆ  ಕರಕೊಳ್ಳದೆ  ಹೋದೀಯೊ   ಅಂತ ನಿಂಗೆ   ತೋರ್‍ಸುಕೆ   ಮಣ್ಣಿನ  ಮುದ್ದೆ  ಕಟ್ಕೊಂಡು  ತತ್ತಿದ್ದೆ   ಕನಪ್ಪ.  ಈಗ  ಹೆಂಗೊ  ಒಂದೊತ್ತು  ಒಲೆ  ಉರೀತಾದೆ ನಿನ್  ದಮ್ಮಯ್ಯ   ಅಂತೀನಿ   ಕನಪ್ಪ ಅದ  ತಪ್ಪಿಸ್ಬೇಡ“  ಎಂದು  ಬಿಕ್ಕಳಿಸುತ್ತಾ, ಮೇಸ್ತ್ರಿಯ   ಮುಂದೆ  ಕುಸಿದಳು.

(ಚಿತ್ರ: ವಿಕಿಮೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: