ಪಯಿರು ಸತ್ತೋಗಿರ‍್ತವೆ
ಕಾಲೇಜಿನ ಕೆಲಸವನ್ನು ಮುಗಿಸಿಕೊಂಡು ಕಾಳಮುದ್ದನದೊಡ್ಡಿಯಿಂದ ಮಂಡ್ಯಕ್ಕೆ ಒಂದು ದಿನ ಸಾಯಂಕಾಲ ಬಸ್ಸಿನಲ್ಲಿ ಹಿಂತಿರುಗುತ್ತಿದ್ದಾಗ ನಡೆದ ಪ್ರಸಂಗವಿದು. ನನಗೆ ಚೆನ್ನಾಗಿ ಪರಿಚಿತರಾಗಿದ್ದ ಬೇಸಾಯಗಾರರೊಬ್ಬರು ನನ್ನ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ, ನನ್ನನ್ನು ಕಂಡು ಬಹಳ ಅಚ್ಚರಿಯಿಂದ-
“ಓಹೋ… ಇದೇನ್ ಸ್ವಾಮಿ… ದೊಡ್ಡಿಗೆ ಬಂದ್ಬುಟ್ಟಿದ್ದೀರಿ… ಈಗ ಕಾಲೇಜು ನಡೀತಾ ಇದ್ದದೋ?” ಎಂದು ಕೇಳಿದರು. ಅವರ ಮಾತಿನ ದಾಟಿಯಿಂದ ನಾನು ತುಸು ಕಸವಿಸಿಗೊಂಡೆ. ಆದರೆ ವಯಸ್ಸಿನಲ್ಲಿ ನನಗಿಂತ ಹಿರಿಯರಾಗಿದ್ದ ಅವರ ಮುಂದೆ ನನ್ನ ಬೇಸರವನ್ನು ತೋರಿಸಿಕೊಳ್ಳದೆ-
“ಹೂ ಕಣ್ ಬನ್ನಿ… ಇವತ್ತಿನಿಂದ ಮತ್ತೆ ಕಾಲೇಜು ಶುರುವಾಗಿದೆ.“ ಎಂದು ಉತ್ತರಿಸಿದೆ. ಬಸ್ಸು ಮುಂದೆ ಮುಂದೆ ಸಾಗಿದಂತೆಲ್ಲಾ… ನನ್ನೊಡನೆ ಅವರು ಮಾತನ್ನು ಮುಂದುವರಿಸಿದರು.
“ಕಾಲೇಜಿಗೆ ನೀವು ಮೇಸ್ಟ್ರುಗಳು ಒಬ್ಬರೂ ಬತ್ತನೆ ಇರಲಿಲ್ಲವಂತೆ. ಕಾಲೇಜು ನಡೆದು… ಹತ್ತತ್ರ ಒಂದು ತಿಂಗಳೇ ಆಗೋಯ್ತಂತಲ್ಲ ಸ್ವಾಮಿ.” ಎಂದು ನುಡಿದು, ನಮ್ಮ ಸಮಸ್ಯೆಯು ಏನೆಂಬುದನ್ನು ತಿಳಿಯುವ ಕುತೂಹಲದಿಂದ ನನ್ನತ್ತ ನೋಡತೊಡಗಿದರು.
ಯು.ಜಿ.ಸಿ. ವೇತನ ಶ್ರೇಣಿಯನ್ನು ಕೂಡಲೇ ಜಾರಿಗೆ ತರುವಂತೆ ಕೇಂದ್ರ ಹಾಗೂ ರಾಜ್ಯ ಸರ‍್ಕಾರಗಳನ್ನು ಒತ್ತಾಯಪಡಿಸಲೆಂದು ಇಂಡಿಯಾ ದೇಶದ ಕಾಲೇಜುಗಳ ಮಹಾಒಕ್ಕೂಟದ ಕರೆಯ ಮೇರೆಗೆ, ಇಡೀ ದೇಶದ ಉದ್ದಗಲದಲ್ಲಿ ಕಾಲೇಜು ಉಪನ್ಯಾಸಕರೆಲ್ಲರೂ ಇಪ್ಪತ್ತಾರು ದಿನಗಳ ಕಾಲ ತರಗತಿಗಳನ್ನು ಸಂಪೂರ‍್ಣವಾಗಿ ತೊರೆದಿದ್ದೆವು. ಅದರ ಬಗ್ಗೆ ಅವರೊಡನೆ ವಿವರವಾಗಿ ಮಾತನಾಡಲು ಬಯಸದೆ-
“ಪತ್ರಿಕೆಗಳಲ್ಲಿ ಕಾಲೇಜು ಉಪನ್ಯಾಸಕರ ಸಮಸ್ಯೆ ಬಗ್ಗೆ ನೀವೇ ಓದಿ ತಿಳ್ಕೊಂಡಿರಬೇಕಲ್ಲ?“ ಎಂದೆ.
“ಚೆನ್ನಾಗಿ ಹೇಳುದ್ರಿ ಸ್ವಾಮಿ… ನಾವು ಸಣ್ಣ ಹಯ್ಕಳಾಗಿದ್ದಾಗ ನಮಗ್ಯಾರು ನಾಕು ಅಕ್ಸರ ಕಲಿಸ್ತೀವಿ ಅಂತ ಮುಂದೆ ಬಂದಿದ್ದರು?“ ಎಂದು ಹೇಳುತ್ತ ನಿಟ್ಟುಸಿರನ್ನು ಬಿಟ್ಟರು.
“ಮತ್ತೆ… ನಿಮಗೆ ಹೇಗೆ ಗೊತ್ತಾಯ್ತು… ಒಂದು ತಿಂಗಳಿಂದ ಕಾಲೇಜು ನಡೀತಾಯಿಲ್ಲ ಅಂತ?“
“ಒಬ್ಬ ಮೊಮ್ಮಗನ್ನ ನಿಮ್ ಕಾಲೇಜ್ನಲ್ಲಿ ಈ ಸತಿ ಪಿ.ಯು.ಸಿ. ಗೆ ಸೇರಿಸಿದ್ದೀನಿ. ಮೊದಮೊದಲು ಎರಡು ದಿನ ನಗನಗ್ತಾ ಕಾಲೇಜಿಗೆ ಹೋಗ್ ಬತ್ತಿದ್ದೋನು… ಆಮ್ಯಾಲೆ ಮಂಕು ಹಿಡಿದಂಗೆ ಆಗೋದ. ಆಗ ನಾನು… ಯಾಕಪ್ಪ ಹಿಂಗೆ ಅಂತ ಕೇಳ್ದೆ… ಅದಕ್ಕೆ ಅವನು… ಸಂಬಳ ಹೆಚ್ಚು ಮಾಡೋ ತನಕ ನಮ್ಮ ಲಕ್ಚರರ್‍ಗಳು ಕಾಲೇಜಿಗೆ ಬರಲ್ಲರಂತೆ ಅಂದ. ಈಗೇನ್ ಸ್ವಾಮಿ, ಸರ‍್ಕಾರದೋರು ಸಂಬಳ ಹೆಚ್ಚು ಮಾಡುದ್ರೆ?”
“ಇನ್ನೂ ಮಾಡಲಿಲ್ಲ… ಮುಂದಕ್ಕೆ ಮಾಡ್ತೀವಿ ಅಂತ ವಾಗ್ದಾನ ಕೊಟ್ಟವ್ರೆ… ಅದನ್ನ ನಂಬ್ಕೊಂಡು ಈಗ ನಮ್ ಹೋರಾಟ ನಿಲ್ಲಿಸಿದ್ದೀವಿ… ಕಾಲೇಜು ಇವತ್ತಿನಿಂದ ಮತ್ತೆ ನಡೀತಾಯಿದೆ.”
“ಹಂಗಾದ್ರೆ ಎಲ್ರೂಗು ಒಳ್ಳೆದಾಯ್ತು ಬುಡಿ ಸ್ವಾಮಿ. ಇವತ್ತೆಲ್ಲೊ ನನ್ ಮೊಮ್ಮಗ ಸಿಗಲಿಲ್ಲ… ಸಿಕ್ಕಿದ್ರೆ ಹೇಳೀರೂನು.“ ಎಂದು ಒಂದು ಬಗೆಯ ನೆಮ್ಮದಿಯಿಂದ ನುಡಿದರು.
“ಒಂದು ತಿಂಗಳಿಂದ ತರಗತಿಗಳು ನಡೀದೆ ಹೋದವಲ್ಲ ಅಂತ ನೀವೇನೂ ಯೋಚನೆ ಮಾಡ್ಬೇಡಿ… ಮೇಸ್ಟ್ರುಗಳು ನಾವೆಲ್ಲಾ ಸ್ಪೆಶಲ್ ಕ್ಲಾಸ್ ತಕೊಂಡು, ಎಕ್ಸಾಮ್ ನಡೆಯೊ ಹೊತ್ತಿಗೆ ಸರಿಯಾಗಿ ಎಲ್ಲಾ ಪಾಟಗಳನ್ನು ಮಾಡಿ ಮುಗಿಸಿ ಕೊಡ್ತೀವಿ.“ ಎಂದು ನುಡಿದಾಗ, ಅವರೊಮ್ಮೆ ಮುಗುಳ್ ನಕ್ಕು, ಅನಂತರ ಮಂಡ್ಯ ತಲುಪುವ ತನಕ ಬೇರೆ ಬೇರೆ ಸಂಗತಿಗಳನ್ನು ಕುರಿತು ನನ್ನೊಡನೆ ಮಾತುಕತೆಯನ್ನು ಮುಂದುವರಿಸಿದರು.
ಮಂಡ್ಯ ನಗರದ ಬಸ್ಸು ನಿಲ್ದಾಣ ಹತ್ತಿರವಾಗುತ್ತಿದ್ದಂತೆಯೇ ಎಡಬದಿಯಲ್ಲಿರುವ ಲೋಕೋಪಯೋಗಿ ಇಲಾಕೆಯ ಕಚೇರಿ ಆವರಣದಲ್ಲಿ ಹಾಕಿದ್ದ ದೊಡ್ಡ ಪೆಂಡಾಲಿನಲ್ಲಿ ನೂರಾರು ಮಂದಿ ಇಂಜಿನಿಯರುಗಳು ಬಡ್ತಿ ನಿಯಮಾವಳಿಗಳ ಬದಲಾವಣೆಗಾಗಿ ರಾಜ್ಯ ಸರ‍್ಕಾರದ ಮೇಲೆ ಒತ್ತಡ ಹೇರಲು ಪಟ್ಟುಹಿಡಿದು ಕುಳಿತಿರುವುದು ಬಸ್ಸಿನಿಂದ ಇಳಿಯುತ್ತಿದ್ದ ಪ್ರಯಾಣಿಕರೆಲ್ಲರ ಕಣ್ಣಿಗೆ ಎದ್ದು ಕಾಣುತ್ತಿತ್ತು. ನನ್ನೊಡನೆ ಇಳಿದ ಅವರು… ಪುಟ್‍ಪಾತಿನ ಒಂದು ಬದಿಯಲ್ಲಿ ನಿಂತು-
“ಇದೇನ್ ಸ್ವಾಮಿ… ಇಂಜಿನಿಯರುಗಳು ತಮಗೆ ಬರು ಸಂಬಳ ಹೆಚ್ಚಿಗೆ ಮಾಡ್ಲಿ ಅಂತ… ನಿಮ್ಮಂಗೆ ಕೇಳ್ತಾ ಇದ್ದರೆ?“ ಎಂದು ಕೇಳಿದರು.
“ಸಂಬಳ ಹೆಚ್ಚು ಮಾಡಿ ಅಂತಲ್ಲ… ಬಡ್ತಿ ನಿಯಮಗಳನ್ನು ತಿದ್ದುಪಡಿ ಮಾಡಿ, ಎಲ್ಲರಿಗೂ ನ್ಯಾಯ ದೊರಕಿಸಿಕೊಡಿ ಅಂತ ಕೇಳ್ತಾವ್ರೆ… ಅದಕ್ಕಾಗಿ ತಮ್ಮ ಕೆಲಸ ನಿಲ್ಲಿಸಿ… ಹಿಂಗೆ ಕುಂತ್ಕೊಂಡು ಒಂದು ತಿಂಗಳು ಮೇಲಾಯ್ತು.“ ಎಂದು ವಿವರಿಸಿದೆ.
“ಬೇಸಾಯ ಮಾಡೋರಿಗೆ ಇಪ್ಪತ್ತೆಂಟ್ ತರ ತೊಂದರೆ ಅನ್ಕೊಂಡಿದ್ದೆ… ಈಗ ಇವರದು… ನಿಮ್ಮದನ್ನೆಲ್ಲಾ ನೋಡ್ತಿದ್ರೆ ಸರ‍್ಕಾರಿ ಸಂಬಳದಾರರಿಗೂ ನೂರೆಂಟ್ ತರ ನೋವು ಇರ‍್ತಾವೆ ಅನ್ನೂದು ತಿಳಿತಾದೆ. ಏನ್ ಮಾಡೀರಿ… ಆನೆ ಸಂಕಟ ಆನೆಗೆ ದೊಡ್ಡದು… ಇರುವೆ ಸಂಕಟ ಇರುವೆಗೆ ದೊಡ್ಡದು… ಸ್ವಾಮಿ, ಒಸಿ ಪ್ಯಾಟೆಗೆ ಹೋಗ್ಬೇಕಾಗಿದೆ… ನಾನಿನ್ನು ಬತ್ತೀನಿ.“ ಎಂದು ಹೇಳಿ, ತಮ್ಮ ನೆಂಟರೊಬ್ಬರೊಡನೆ ಪೇಟೆ ಬೀದಿಯತ್ತ ನಡೆದರು.
ಇತ್ತ ಮನೆಯ ಕಡೆಗೆ ಹೊರಟಿದ್ದ ನಾನು… ಮರುಗಳಿಗೆಯಲ್ಲೇ ಒಂದೆರಡು ಸಾಮಾನುಗಳನ್ನು ತರಬೇಕಾಗಿರುವುದನ್ನು ನೆನಪಿಸಿಕೊಂಡು… ನಾನು ಕೂಡ ಪೇಟೆಯ ಕಡೆಗೆ ಹೊರಟೆ. ಬಸ್ಸಿನಲ್ಲಿ ನನ್ನೊಡನೆಯೇ ಬಂದಿದ್ದ ಅವರಿಬ್ಬರೂ… ನನ್ನ ಮುಂದೆಯೇ ಮಾತನಾಡುತ್ತಾ ಸಾಗುತ್ತಿದ್ದರು. ಅವರ ಮಾತುಗಳನ್ನು ಆಲಿಸುತ್ತಾ ಹಿಂಬಾಲಿಸಿದೆ.
ಬೇಸಾಯಗಾರರ ಜತೆಯಲ್ಲಿದ್ದ ವ್ಯಕ್ತಿಯು-
“ಅಣ್ಣೋ… ಒಂದು ಮಾತು.“ ಎಂದ.
“ಏನಪ್ಪ ಅದು?“
“ಅಲ್ಲಾ… ಆ ಮೇಸ್ಟ್ರುಗಳು… ಈ ಇಂಜಿನಿಯರುಗಳು ತಾವು ಮಾಡಬೇಕಾಗಿರುವ ಗೇಮೆನೆಲ್ಲಾ ಬುಟ್ಬುಟ್ಟು… ಒಂದೊಂದು ತಿಂಗಳು ಸುಮ್ನೆ ಹಿಂಗೆ ಕುಂತ್ಬುಟ್ಟವ್ರಲ್ಲ… ಇವರಂಗೆಯೆ ಹೊಲಗದ್ದೆ ತೋಟದಲ್ಲಿ ದುಡಿಮೆ ಮಾಡೋ ಜನ… ಬಿತ್ತನೆ ಕಾಲದಲ್ಲೋ… ಇಲ್ಲ… ಕುಯ್ಲು ಸಮಯದಲ್ಲೋ… ಒಂದು ತಿಂಗಳು ಹೊಲಗದ್ದೆ ತಕೆ ಹೋಗ್ದೆ… ಅಟ್ಟಿ ತಾವೇ ಕುಂತ್ಬುಟ್ರೆ ಹೆಂಗೆ?“
“ದೇಶ ಉಳದದೇನಪ್ಪ… ತಿನ್ನು ಅನ್ನವೆಲ್ಲಾ ಚಿನ್ನ ಆಗೋಯ್ತದೆ!“
“ಅಲ್ಲ ಕನಣ್ಣ… ಆ ವಯ್ಯ… ಬಸ್ನಲ್ಲಿ ನಿನ್ ಜತೇಲಿ ಮಾತಾಡ್ಕೊಂಡು ಬಂದ್ನಲ್ಲ ಮೇಸ್ಟ್ರು… ಅವನು ಒಂದು ತಿಂಗಳಲ್ಲಿ ಮಾಡ್ದೇ… ಉಳ್ಕೊಂಡಿರೂ ಪಾಟನೆಲ್ಲಾ… ಪೆಸಲ್ಲಾಗಿ ಮಾಡಿ ಮುಗಿಸ್ತೀವಿ ಅಂತನಲ್ಲ… ನಾವು ಹಂಗೆಯೇ… ನಮ್ ತಿಟ್ಟಲ್ಲಿರೂ ಕಲ್ ಗದ್ದೇಲಿ ಬತ್ತದ ಪಯಿರು ನಾಟಿ ಮಾಡ್ಬುಟ್ಟು ಬಂದು… ಒಂದು ತಿಂಗಳಾದ ಮೇಲೆ… ಗದ್ದೆ ತಕೆ ಹೋಗಿ… ಒಂದೇ ದಪ ದಡಸಾಗಿ ನೀರ್ ಹಾಯ್ಸಿಬುಟ್ರೆ… ಪಯಿರು ಕತೆ ಏನಣ್ಣ?“
“ನಾವು ಬೇಸಾಯಗಾರರು… ಇವರಂಗೆ ಆಡೂಕಾದದೇನಪ್ಪ?… ತಿಂಗಳು ಬುಟ್ಕೊಂಡು ಗದ್ದೆ ತಕೆ ಹೋದ್ರೆ… ಅಲ್ಲೇನಿದ್ದದು… ಪಯಿರೆಲ್ಲಾ ಸತ್ತೋಗಿರ‍್ತವೆ!“
(ಚಿತ್ರ: ವಿಕಿಪೀಡಿಯಾ)
slang ಸಕ್ಕತಾಗಿ ಬಂದಿದೆ …