ಕರ‍್ನಾಟಕದ ಏಕೀಕರಣಕ್ಕೆ ಹೋರಾಡಿದ ಹೆಣ್ಣುಮಕ್ಕಳು
– ರಗುನಂದನ್.
ಕರ‍್ನಾಟಕದ ಕಳೆದ 300 ವರುಶಗಳ ಚರಿತ್ರೆಯಲ್ಲಿ ಬಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಹೆಂಗಸರ ಪಾತ್ರವು ಮುಕ್ಯವಾಗಿತ್ತು ಎಂಬುದನ್ನು ಕಾಣಬಹುದು. ಯೂರೋಪಿಯನ್ನರ ಎದುರು ಹೋರಾಡಿದವರಲ್ಲಿ ಕಿತ್ತೂರು ಚೆನ್ನಮ್ಮ, ಅಬ್ಬಕ್ಕ ಮುಂತಾದವರು ನೆನಪಿಗೆ ಬರುತ್ತಾರೆ. ಇದೇ ರೀತಿಯಲ್ಲಿ ಕರ‍್ನಾಟಕದ ಒಗ್ಗೂಡಿಕೆಗೂ ಹೆಣ್ಣುಮಕ್ಕಳ ಪಾತ್ರ ಹಿರಿದಾಗಿಯೇ ಇದೆ. ಕನ್ನಡ ರಾಜ್ಯೋತ್ಸವದ ಈ ಹೊತ್ತಿನಲ್ಲಿ ಅವರ ಹೆಸರುಗಳನ್ನು ನೆನಪಿಸಿಕೊಳ್ಳೋಣ.
ಜಯದೇವಿತಾಯಿ ಲಿಗಾಡೆ
ಇವರು ಹುಟ್ಟಿದ್ದು 1912 ರಲ್ಲಿ. ನಾಲ್ಕನೇ ತರಗತಿಯ ವರೆಗೆ ಕಲಿತಿದ್ದರು. ಕನ್ನಡ ಮತ್ತು ಮರಾಟಿ ಎರಡೂ ನುಡಿಗಳಲ್ಲಿ ಇವರು ಬರೆಯುತ್ತಿದ್ದರು. ಹೆಣ್ಣುಮಕ್ಕಳ ಕಲಿಕೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಇಂದಿನ ಮುಂಬಯಿ-ಕರ‍್ನಾಟಕ ಮತ್ತು ಹಯ್ದರಾಬಾದ-ಕರ‍್ನಾಟಕದಲ್ಲಿ ಕನ್ನಡದ ಕಿಚ್ಚನ್ನು ಹರಡುವಲ್ಲಿ ಇವರ ಪಾತ್ರ ಹಿರಿದಾಗಿತ್ತು. ಇವರು ಸೊಲ್ಲಾಪುರ, ಬೀದರ್, ಬೆಳಗಾವಿ, ಸಾಂಗ್ಲಿ ಮುಂತಾದ ಕಡೆಗಳಲ್ಲಿ ಕನ್ನಡ ಶಾಲೆಗಳನ್ನು ಆರಂಬಿಸಿದ್ದರು. ಕನ್ನಡ ಕಲಿಸುಗರು ದೊರಕುತ್ತಿಲ್ಲ ಎಂದಾದಾಗ ತಮ್ಮ ಸ್ವಂತ ಹಣದಲ್ಲಿಯೇ ಶಿಕ್ಶಕರನ್ನು ನೇಮಿಸಿದ್ದರು.
ಬಳ್ಳಾರಿ ಸಿದ್ದಮ್ಮ
ಉತ್ತರ ಕರ‍್ನಾಟಕದಲ್ಲಿ ಏಕೀಕರಣದ ಕಾವು ಹೆಚ್ಚಾಗಿದ್ದರೂ ಮಯ್ಸೂರು ಪ್ರಾಂತ್ಯದ ಮಂದಿ ಹೆಚ್ಚಾಗಿ ಒಲವು ತೋರಿರಲಿಲ್ಲ. ಮಯ್ಸೂರು ಪ್ರದೇಶ ಕಾಂಗ್ರೆಸ್ ಉಪಸಮಿತಿಯು ಕಾರ‍್ಯಕಾರೀ ಸಮಿತಿಗೆ ರಾಜಕೀಯ ಪರಿಸ್ತಿತಿ ತಿಳಿಯಾದ ಮೇಲೆ ಏಕೀಕರಣದ ಬಗ್ಗೆ ಚಿಂತಿಸೋಣ ಎಂದು ಕಯ್ಬಿಟ್ಟಿತ್ತು. ಆದರೆ ಈ ವರದಿಯನ್ನು ಅರಸೀಕೆರೆಯಲ್ಲಿ ನಡೆದ ಎಲ್ಲಾ ಪಕ್ಶಗಳ ಸಬೆ ತಿರಸ್ಕರಿಸಿತ್ತು. ಇದರ ಅದ್ಯಕ್ಶತೆಯನ್ನು ಹೊತ್ತಿದ್ದವರೇ ಬಳ್ಳಾರಿಯ ಸಿದ್ದಮ್ಮನವರು. ರಾಜ್ಯ ಪುನರ‍್ವಿಂಗಡಣಾ ಆಯೋಗದ ಕರಡು ವರದಿಯ ಪ್ರಕಾರ ಬಳ್ಳಾರಿ ಜಿಲ್ಲೆಯು ಆಂದ್ರಕ್ಕೆ ಸೇರುವುದಿತ್ತು. ಇದನ್ನು ವಿರೋದಿಸಿದವರಲ್ಲಿ ಹೆಚ್ಚಾಗಿ ಹೆಂಗಸರೇ ಇದ್ದದ್ದು ವಿಶೇಶವಾಗಿದೆ. ಚಿತ್ರದುರ‍್ಗಕ್ಕೆ ಬಂದಿದ್ದ ರಾಶ್ಟ್ರೀಯ ಸಮಿತಿಯ ಮೇಲುಗರನ್ನು ಸುಮಾರ 40ಕ್ಕೂ ಹೆಚ್ಚು ಹೆಂಗಸರು ಬೇಟಿಯಾಗಿ ಬಳ್ಳಾರಿಯು ಕರ‍್ನಾಟಕಕ್ಕೇ ಸೇರಬೇಕೆಂದು ಒತ್ತಾಯಿಸಿದ್ದರು.
ಬೇರೆ ಬೇರೆ ಊರುಗಳಲ್ಲಿ ಹೋರಾಡಿದ ಹೆಂಗಸರು
ಗುಲಬರ‍್ಗ: ವಿಮಾಲಾಬಾಯಿ ಮೇಲ್ಕೋಟೆ, ಮಲ್ಲವ್ವ
ಬಳ್ಳಾರಿ: ಲಿಂಗಮ್ಮವ್ವ, ಸುಮಂಗಳಮ್ಮ, ತೊಗರಿ ಸರ‍್ವಮಂಗಳಮ್ಮ, ಗೊರ‍್ಲೆ ರುದ್ರಮ್ಮ
ಕಾಸರಗೋಡು: ಸರಸ್ವತಿಬಾಯಿ, ಸುಹಾಸಿನಿ ಬಂಡಾರಿ, ಕಮಲಾ ಶೆಟ್ಟಿ, ರಾದಾ ಕಾಮತ್
ಬೆಳಗಾವಿ: ಆಶಾತಾಯಿ, ಡಾ. ಮಂದಾಕಿನೀ ಪಟ್ಟಣ
ಇನ್ನೂ ಹಲವರು: ಸಾವಿತ್ರಿದೇವಿ ಹಳ್ಳಿಕೇರಿ, ವೀರಮ್ಮ ಪಾಟೀಲ, ಬಾಗೀರತಿ ಪಾಟೀಲ, ಶಾಂತಾದೇವಿ ಜತ್ತಿ, ಬಸಮ್ಮ ಉಪ್ಪಿನ, ಚಂಪಾತಾಯಿ ಬೋಗಲೆ, ಡಾ. ಶಾಂತಾದೇವಿ ಮಾಳವಾಡ, ನಾಗಮ್ಮ ವೀರನಗವ್ಡ ಪಾಟೀಲ, ಲೀಲಾವತಿ ಮಾಗಡಿ, ಗಂಗಮ್ಮ ಗುದ್ಲೆಪ್ಪ ಹಳ್ಳಿಕೇರಿ, ಶಕುಂತಲಾ ಕುರ‍್ತುಕೋಟಿ, ಪ್ರಮೀಳಾತಾಯಿ ಕಾಮತ್, ಸರೋಜಿನಿ ಶಿಂತ್ರಿ, ಸರಸ್ವತೀ ಗವ್ಡರ, ದೇವಕ್ಕ ರಮಾನಂದ ಮನ್ನಂಗಿ, ಸಂಗಮ್ಮ, ಪದ್ಮಾವತಿ ದೇಸಾಯಿ, ಚಂದ್ರಾಬಾಯಿ ಚೆನ್ನಪ್ಪ ವಾಲಿ, ಚೆನ್ನಮ್ಮ ವೇದಮೂರ‍್ತಿ ಇಟಗಿ, ಗವ್ರವ್ವ ಸಾವಳಗಿ, ಶಾಂತಬಾಯಿ ವೆಂಕಟೇಶ ಮಟದ, ಪಾರ‍್ವತಿಬಾಯಿ ದೇಶಪಾಂಡೆ, ಅಂಬಕ್ಕ ಬಳಿಗಾರ, ಲಕ್ಶ್ಮಿದೇವಿ ಪಾಟೀಲ, ಉಮಾದೇವಿ ಟೋಪಣ್ಣವರ, ಉಮಾದೇವಿ ಕುಂದಾಪುರ, ಕಾಡಮ್ಮ, ಗದಿಗೆವ್ವ ಕುರುಹಟ್ಟಿ, ಕ್ರಿಶ್ಣಾಬಾಯಿ ಪಣಜೀಕರ, ಗವ್ರವ್ವ ವಾರದ, ಪಂಚವ್ವಬಾಯಿ ವಾರದ, ಬಸವ್ವಬಾಯಿ ವಾರದ, ಬಸಲಿಂಗಮ್ಮ ಬಾಳೆಕುಂದ್ರಿ ಮತ್ತು ಬಳ್ಳಾರಿ ಯಶೋದರಮ್ಮ.
(ಮಾಹಿತಿ ಸೆಲೆ: ಕರ‍್ನಾಟಕ ಏಕೀಕರಣ ಇತಿಹಾಸ, ಡಾ. ಎಚ್. ಎಸ್. ಗೋಪಾಲ್ ರಾವ್, ಅಯ್ದನೇ ಅಚ್ಚು, 2012, ನವಕರ‍್ನಾಟಕ ಪ್ರಕಾಶನ, ಬೆಂಗಳೂರು)
(ಚಿತ್ರ ಸೆಲೆ: The Hindu)
Sir we want the information about ಕರ್ನಾಟಕದ ಏಕೀಕರಣಕ್ಕೆ ಉತ್ತರ ಕನ್ನಡಿಗರ ಪಾತ್ರ..
So can you please give some information about that above mentioned topic.